ಏನಿದು ‘ಮಹಿಳಾ ಮೀಸಲಾತಿ ಮಸೂದೆ’? ಈ ಮಸೂದೆ ಜಾರಿಯಿಂದ ಬದಲಾಗೋದೇನು?
ಲೋಕಸಭೆಯಲ್ಲಿ ಮೊದಲು ಮಂಡಿಸಿದ್ದು 1996ರಲ್ಲಿ, ಎಚ್ ಡಿ ದೇವೇಗೌಡ ಸರ್ಕಾರ

Photo: PTI
‘ನಾರಿ ಶಕ್ತಿ ವಂದನಾ ಅಧಿನಿಯಮ’ ಎಂಬ ಹೆಸರಿನಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದೆ.
ಈ ಕಾಯ್ದೆ ಜಾರಿಯಾದ ನಂತರ ಲೋಕಸಭೆಯಲ್ಲಿ ಮಹಿಳಾ ಸ್ಥಾನಗಳ ಸಂಖ್ಯೆ 181ಕ್ಕೆ ಏರಲಿದೆ. ಈಗಿನ ಲೋಕಸಭೆಯಲ್ಲಿ ಮಹಿಳಾ ಸಂಸದರ ಸಂಖ್ಯೆ 82 ಇದೆ.
ಮಸೂದೆಯ ಕರಡು ಪ್ರಕಾರ, ಸಂಸತ್ತಿನಲ್ಲಿ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡಲಾಗುವುದು. ಎಸ್ಸಿ-ಎಸ್ಟಿ ವರ್ಗಕ್ಕೆ ಕೋಟಾದೊಳಗೆ ಕೋಟಾ ಜಾರಿಯಾಗಲಿದೆ. ಅಂದರೆ ಶೇ.33ರ ಮೀಸಲಾತಿಯೊಳಗೆ ಎಸ್ಸಿ-ಎಸ್ಟಿಗೆ ಸೇರಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸುವುದು ಈ ಮಸೂದೆಯ ಉದ್ದೇಶ.
ದಶಕಗಳ ಹಿಂದಿನಿಂದಲೇ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯ ಬೇಡಿಕೆಯಿದೆ. ಸ್ವಾತಂತ್ರ್ಯದ ನಂತರ ಈ ಕುರಿತು ಹಲವು ಚರ್ಚೆಗಳು ನಡೆದಿವೆ. ಮಹಿಳಾ ಮೀಸಲಾತಿಯ ಬೇಡಿಕೆಯ ಸಂಕ್ಷಿಪ್ತ ಇತಿಹಾಸ ಇಲ್ಲಿದೆ.
1935ರ ಭಾರತ ಸರ್ಕಾರದ ಕಾಯಿದೆ
ಈ ಕಾಯಿದೆಯು ಪ್ರಾಂತೀಯ ಶಾಸಕಾಂಗಗಳಲ್ಲಿ 41 ಮೀಸಲು ಸ್ಥಾನಗಳನ್ನು ಮತ್ತು ಕೇಂದ್ರ ಶಾಸನಸಭೆಗಳಲ್ಲಿ ಸೀಮಿತ ಮೀಸಲಾತಿಗಳನ್ನು ಒದಗಿಸಿತ್ತು.
ಲಾರಾ ಡಡ್ಲಿ ಜೆಂಕಿನ್ಸ್ ಅವರು 'ಸ್ಪರ್ಧೆಯ ಅಸಮಾನತೆಗಳು: ಭಾರತದಲ್ಲಿ ಮಹಿಳೆಯರಿಗೆ ಮೀಸಲಾದ ಶಾಸಕಾಂಗ ಸ್ಥಾನಗಳ ಹೋರಾಟ' ಎಂಬ ಲೇಖನದಲ್ಲಿ, " ವಸಾಹತುಶಾಹಿ ಆಡಳಿತದ ಕೊನೆಯ ದಶಕದಲ್ಲಿ ಬ್ರಿಟನ್ ಭಾರತೀಯರಿಗೆ ಶಾಸಕಾಂಗ ಸಂಸ್ಥೆಗಳಲ್ಲಿ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸಲು ಸೀಮಿತ ಹಕ್ಕುಗಳನ್ನು ನೀಡಿತು. ರಾಷ್ಟ್ರೀಯವಾದಿಗಳನ್ನು ತಟಸ್ಥಗೊಳಿಸುವ ಮತ್ತು ಸರಕಾರಕ್ಕೆ ಮಾಹಿತಿ ನೀಡುವ ಸಹಕಾರ ವಲಯವನ್ನು ವಿಸ್ತರಿಸುವ ಪ್ರಯತ್ನದ ಭಾಗವಾಗಿ ಈ ಕೆಲಸ ನಡೆಯಿತು. ಈ ಪ್ರತಿನಿಧಿಗಳಿಗೆ ವಿಶೇಷ ಚುನಾವಣಾ ಹಕ್ಕುಗಳನ್ನು ನೀಡಲಾಯಿತು. ಇದು ‘ಒಡೆದು ಆಳುವ’ ತಂತ್ರದ ಭಾಗದಂತೆ ಕಾರ್ಯ ನಿರ್ವಹಿಸಿತು”ಎಂದು ಹೇಳಿದ್ದಾರೆ.
“ಈ ಅವಧಿಯಲ್ಲಿ ಮಹಿಳಾ ಸಂಘಗಳನ್ನು ರಚಿಸುವ ಮೊದಲ ಪ್ರಯತ್ನಗಳು ನಡೆದವು. 1917 ರಲ್ಲಿ ವಿಮೆನ್ಸ್ ಇಂಡಿಯಾ ಅಸೋಸಿಯೇಷನ್ (WIA) ಜನ್ಮ ತಾಳಿತು. ಅಖಿಲ ಭಾರತ ಮಹಿಳಾ ಸಮ್ಮೇಳನ (AIWC) ನಡೆಯಿತು. ಭಾರತೀಯ ರಾಷ್ಟ್ರೀಯ ಮಹಿಳಾ ಮಂಡಳಿ (NCWI)ಯೂ ಪ್ರಾರಂಭವಾಯಿತು” ಎಂದು ಅವರು ವಿವರಿಸಿದ್ದಾರೆ.
ಜೆಂಕಿನ್ಸ್ ಪ್ರಕಾರ, ಪ್ರಮುಖ ಮಹಿಳಾ ಸಂಘಗಳು ನಿರ್ಣಯಗಳನ್ನು ಅಂಗೀಕರಿಸುವ ಮೂಲಕ ಹೊಸ ನೀತಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದವು. ಸಮ್ಮೇಳನಗಳಿಗೆ ಪ್ರತಿನಿಧಿಗಳನ್ನು ಕಳುಹಿಸುವುದು, ಮನವಿ ಪತ್ರಗಳನ್ನು ಬರೆಯುವುದು ಮತ್ತು ಸಲ್ಲಿಸುವ ಮೂಲಕ ಕಾನೂನು ರೂಪಿಸುವವರೊಡನೆ ಪ್ರಭಾವ ಬೀರುವ ಕೆಲಸ ಮಾಡಿದವು.
“ಭಾರತೀಯ ಮಹಿಳೆಯರಿಗೆ ಮತ ಚಲಾವಣೆಯ ಹಕ್ಕು ಪಡೆಯುವುದು ಅವರ ಮೊದಲ ಆದ್ಯತೆಯಾಗಿತ್ತು. ಆದರೆ ಅವರು ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿಯ ವಿಚಾರವನ್ನು ತಮ್ಮ ಕಾರ್ಯಸೂಚಿಯಾಗಿ ಮಾಡಿಕೊಂಡರು. 1935ರಲ್ಲಿ ಅವರಿಗೆ ಮಹಿಳಾ ಮೀಸಲಾತಿ ಸಿಕ್ಕಿತು” ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಸಂವಿಧಾನ ಸಭೆಯಲ್ಲಿ ಮೀಸಲಾತಿ ಚರ್ಚೆ
ಮಹಿಳಾ ಮೀಸಲಾತಿಯ ವಿಚಾರವನ್ನು ದೇಶದ ಸಂವಿಧಾನ ಸಭೆಯ ಚರ್ಚೆಗಳಲ್ಲಿಯೂ ತರಲಾಯಿತು. ಆದರೆ, ಇದು ಅನಗತ್ಯ ಎಂದು ತಿರಸ್ಕರಿಸಲಾಗಿತ್ತು. ಪ್ರಜಾಸತಾತ್ಮಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರಿಗೆ ಮೀಸಲಾತಿ ನೀಡುವ ಕುರಿತು ವಾದ ಮಂಡಿಸಲಾಗಿತ್ತು.
ರೇಣುಕಾ ರೇ ಅವರು ಸಂವಿಧಾನ ಸಭೆಯಲ್ಲಿ ಮಾತನಾಡುತ್ತಾ, “ನಾನು 19ನೇ ವಿಧಿ ಮತ್ತು ಸೆಕ್ಷನ್ (2)ರಲ್ಲಿ ಹೇಳಿರುವಂತೆ ನಿರ್ದಿಷ್ಟವಾಗಿ ಸೀಟುಗಳ ಮೀಸಲಾತಿ ಇಲ್ಲದೆ ಪ್ರಾದೇಶಿಕ ಪ್ರಾತಿನಿಧ್ಯವನ್ನು ಒದಗಿಸುವುದನ್ನು ಬೆಂಬಲಿಸುತ್ತೇನೆ. ಈ ದೇಶದಲ್ಲಿ ಮಹಿಳಾ ಆಂದೋಲನ ಪ್ರಾರಂಭವಾದಾಗಿನಿಂದ, ಮಹಿಳೆಯರು ಮೂಲಭೂತವಾಗಿ ವಿಶೇಷ ಸವಲತ್ತು ಮತ್ತು ಮೀಸಲಾತಿಗಳನ್ನು ವಿರೋಧಿಸುತ್ತಿದ್ದಾರೆ” ಎಂದು ಹೇಳಿದ್ದರು.
“ಕಾನೂನಿನಲ್ಲಿ ಮತ್ತು ಸಮಾಜದಲ್ಲಿ ತನ್ನ ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳುವವರೆಗೂ ಮಹಿಳೆಯ ಸ್ಥಾನವೂ ಕುಸಿದಿದೆ. ಈ ದೇಶದಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ, ಸ್ಥಾನಮಾನದ ಸಮಾನತೆಗಾಗಿ ಶ್ರಮಿಸಿದ್ದಾರೆ. ಅವರಿಗೆ ಪ್ರಾತಿನಿಧ್ಯ ನೀಡಿದರೆ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ”ಎಂದು ಅವರು ಉಲ್ಲೇಖಿಸಿದ್ದಾರೆ.
ಸಂವಿಧಾನ ಸಭೆಯ ಇನ್ನೊಬ್ಬ ಸದಸ್ಯೆ ಪೂರ್ಣಿಮಾ ಬ್ಯಾನರ್ಜಿ ಅವರು ಈ ಕುರಿತು ಮಾತನಾಡುತ್ತಾ, "ಮಹಿಳೆಯರು ತಮಗಾಗಿ ಯಾವುದೇ ಮೀಸಲಾತಿ ಸ್ಥಾನಗಳನ್ನು ಬಯಸುವುದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ" ಎಂದು ಹೇಳಿದ್ದರು.
ಮಹಿಳಾ ಸಂಘಟನೆಗಳು ಮೀಸಲಾತಿ ತಿರಸ್ಕರಿಸಿದ್ದವು!
ಸರೋಜಿನಿ ನಾಯ್ಡು ಅವರಂತಹ ಪ್ರಮುಖ ನಾಯಕರು ಮಹಿಳೆಯರಿಗೆ ಮೀಸಲಾತಿಯನ್ನು ತಿರಸ್ಕರಿಸಿದ್ದರು. ಅಖಿಲ ಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಸರೋಜಿನಿ ನಾಯ್ಡು, “ನಾವು ದುರ್ಬಲ, ಅಂಜುಬುರುಕ ಸ್ವಭಾದ ಮಹಿಳೆಯರಲ್ಲ. ನಾವು ಧೈರ್ಯಶಾಲಿ ಸಾವಿತ್ರಿಯನ್ನು ನಮ್ಮ ಆದರ್ಶಗಳಾಗಿ ಪರಿಗಣಿಸುತ್ತೇವೆ. ಸೀತೆ ತನ್ನ ಪರಿಶುದ್ಧತೆಯನ್ನು ಕಾಪಾಡುವ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದವರನ್ನು ಹೇಗೆ ಧಿಕ್ಕರಿಸಿದಳು ಎಂದು ನಮಗೆ ತಿಳಿದಿದೆ. ನಾನು ಸ್ತ್ರೀವಾದಿ ಅಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಸ್ತ್ರೀವಾದಿಯಾಗುವುದು ಎಂದರೆ ಒಬ್ಬರ ಜೀವನವನ್ನು ದಮನ ಮಾಡಲಾಗಿದೆ ಎಂದು ಒಪ್ಪಿಕೊಳ್ಳುವುದು. ಮಹಿಳೆಯರಿಗೆ ಪ್ರಾಶಸ್ತ್ಯ ನೀಡಬೇಕೆಂಬ ಬೇಡಿಕೆಯು ಆಕೆಯ ಕೀಳರಿಮೆಯನ್ನು ಒಪ್ಪಿಕೊಳ್ಳುತ್ತದೆ. ಭಾರತದಲ್ಲಿ ಅದರ ಅಗತ್ಯವಿಲ್ಲ "ಎಂದು ಹೇಳಿದ್ದರು.
ಸ್ವತಂತ್ರ ಭಾರತದಲ್ಲಿ ರಾಷ್ಟ್ರೀಯ ದೃಷ್ಟಿಕೋನ ಯೋಜನೆ
1987 ರಲ್ಲಿ ಮಹಿಳೆ, ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವರಾಗಿದ್ದ ಮಾರ್ಗರೆಟ್ ಆಳ್ವ ನೇತೃತ್ವದಲ್ಲಿ ಭಾರತೀಯ ಮಹಿಳೆಯರನ್ನು ಸಾಮಾಜಿಕ ದಬ್ಬಾಳಿಕೆಯ ಹಿಡಿತದಿಂದ ಮುಕ್ತಗೊಳಿಸಲು 14 ಸದಸ್ಯರ ಸಮಿತಿಯನ್ನು ರಚಿಸಲಾಯಿತು.
ಈ ಸಮಿತಿಯು ಅಧ್ಯಯನ ನಡೆಸಿ 'ಮಹಿಳೆಯರ ರಾಷ್ಟ್ರೀಯ ದೃಷ್ಟಿಕೋನ ಯೋಜನೆ 1988-2000 (NPP)' ಎಂಬ ವರದಿಯನ್ನು ಪ್ರಧಾನ ಮಂತ್ರಿಗೆ ಸಲ್ಲಿಸಿತು. ಏಕರೂಪ ನಾಗರಿಕ ಸಂಹಿತೆ, ಮಹಿಳೆಯರಿಗೆ ಆಸ್ತಿ ಹಕ್ಕುಗಳು, ಚುನಾಯಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸೇರಿದಂತೆ 353 ಮಹಿಳಾ ಕಲ್ಯಾಣಕ್ಕೆ ಬೇಕಾದ ಶಿಫಾರಸುಗಳನ್ನು ಸಮಿತಿಯು ಮಾಡಿತ್ತು. ಲಿಂಗ-ನಿರ್ಣಯ ಪರೀಕ್ಷೆಗಳನ್ನು ನಿಷೇಧಿಸುವುದು ಮತ್ತು ವಿಚ್ಛೇದನ ಪಡೆಯಲು ವರದಕ್ಷಿಣೆ ಕಿರುಕುಳ ನೀಡುತ್ತಿರುವ ಕುರಿತು ವರದಿ ಉಲ್ಲೇಖಿಸಿತ್ತು.
73ನೇ ಮತ್ತು 74ನೇ ತಿದ್ದುಪಡಿ ಕಾಯಿದೆಗಳು
ಈ ಎರಡು ಸಾಂವಿಧಾನಿಕ ತಿದ್ದುಪಡಿಗಳು ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಾತಿ ಒದಗಿಸಿತು.
1996ರಲ್ಲಿ ಮೊದಲ ಬಾರಿಗೆ ದೇವೇಗೌಡ ಸರ್ಕಾರದಿಂದ ಮಂಡನೆ :
ಮಹಿಳಾ ಮೀಸಲಾತಿ ಮಸೂದೆಯನ್ನು ಮೊದಲ ಬಾರಿಗೆ 1996 ರಲ್ಲಿ ಎಚ್ ಡಿ ದೇವೇಗೌಡ ನೇತೃತ್ವದ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತು. ಮಾಜಿ ಸಂಸದೀಯ ಕಾರ್ಯದರ್ಶಿ ಟಿಎಸ್ಆರ್ ಸುಬ್ರಮಣಿಯನ್ ಅವರು ತಮ್ಮ ‘ಇಂಡಿಯಾ ಅಟ್ ಟರ್ನಿಂಗ್ ಪಾಯಿಂಟ್ಸ್’ಪುಸ್ತಕದಲ್ಲಿ ಈ ಕುರಿತು ಉಲ್ಲೇಖಿಸಿದ್ದಾರೆ. “ಮಹಿಳಾ ಮೀಸಲಾತಿ ಮಸೂದೆಯನ್ನು ಮೊದಲು ಲೋಕಸಭೆಯಲ್ಲಿ ಮಂಡಿಸಿದ್ದು ದೇವೇಗೌಡರ ಸರ್ಕಾರ. ಈ ಮಸೂದೆಯನ್ನು 28 ಆಗಸ್ಟ್ 1996 ರಂದು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಲಾಯಿತು. ಬಳಿಕ ಲೋಕಸಭೆಯಲ್ಲಿ 81 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯಾಗಿ 9 ಸೆಪ್ಟೆಂಬರ್ 1996 ರಂದು ಮಂಡಿಸಲಾಯಿತು" ಎಂದು ಅವರು ಐತಿಹಾಸಿಕ ಘಟನೆಯನ್ನು ದಾಖಲಿಸಿದ್ದಾರೆ.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ದೇವೇಗೌಡ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿತು. ದೇವೇಗೌಡರ ಉತ್ತರಾಧಿಕಾರಿಯಾದ ಮಾಜಿ ಪ್ರಧಾನಿ ಐಕೆ ಗುಜ್ರಾಲ್ ಅವರು ಮಸೂದೆಯನ್ನು ಅಂಗೀಕರಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಮಸೂದೆಗೆ ಅಂಗೀಕಾರ ಪಡೆಯಲು ಅವರಿಂದಲೂ ಸಾಧ್ಯವಾಗಲಿಲ್ಲ.
2010 ರಲ್ಲಿ ಮನ ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ, ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಸಂವಿಧಾನ ದ108 ನೇ ತಿದ್ದುಪಡಿ ಮಸೂದೆಯಾಗಿ ಅಂಗೀಕರಿಸಿತು. ಆದರೆ, ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಲು ಸಾಧ್ಯವಾಗಲಿಲ್ಲ.
ಬಿಜೆಪಿ ಪ್ರಣಾಳಿಕೆ :
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿತ್ತು.
ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸಂಸದೀಯ ಮತ್ತು ರಾಜ್ಯ ವಿಧಾನಸಭೆಗಳಲ್ಲಿ 33% ಮೀಸಲಾತಿಗೆ ಬಿಜೆಪಿ ಬದ್ಧವಾಗಿದೆ ಎಂದು ಪ್ರಣಾಳಿಕೆಯಲ್ಲಿ ಹೇಳಿತ್ತು. ಮೊದಲ ಅವಧಿಯಲ್ಲಿ ಅದು ಸಾಧ್ಯವಾಗದ್ದರಿಂದ ಬಿಜೆಪಿ 2019 ರ ಪ್ರಣಾಳಿಕೆಯಲ್ಲೂ ಅದೇ ಭರವಸೆ ಪುನರಾವರ್ತಿಸಿತ್ತು