ಮೆಸ್ಸಿ ಕುರಿತ ಪ್ರಶ್ನೆಗೆ ರೊನಾಲ್ಡೊ ಪ್ರತಿಕ್ರಿಯೆ ಏನು?

ಕ್ರಿಸ್ಟಿಯಾನೊ ರೊನಾಲ್ಡೊ | Screengrab: X
ಉಜ್ಬೇಕಿಸ್ತಾನ ವಿರುದ್ಧ ಭರ್ಜರಿ ಜಯದ ನಂತರ ಪೋರ್ಚುಗಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅರ್ಜೆಂಟೀನಾ ಆಟಗಾರ ಲಿಯೊನೆಲ್ ಮೆಸ್ಸಿ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ.
ಮಂಗಳವಾರ ನಡೆದ ಗ್ರೂಪ್ ‘ಕೆ’ ಯ ಉಜ್ಬೆಕಿಸ್ತಾನದ ವಿರುದ್ಧದ ಎರಡನೇ ಪಂದ್ಯದಲ್ಲಿ ಪೋರ್ಚುಗಲ್ 5-0 ಅಂತರದ ಭರ್ಜರಿ ಜಯ ಸಾಧಿಸಿದ ಸಂದರ್ಭದಲ್ಲಿ ಡಬಲ್ ಗೋಲುಗಳನ್ನು ಬಾರಿಸಿದ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಪಂದ್ಯದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ರೊನಾಲ್ಡೊ ಕಳೆದ ವಾರವನ್ನು ಕಾರ್ಗತ್ತಲಿನಲ್ಲಿ ಕಳೆದುದಾಗಿ ತಿಳಿಸಿದರು. “ಫುಟ್ಬಾಲ್ ನಿಂದ ನಿವೃತ್ತಿ ಹೊಂದಿದಂತೆ ಭಾಸವಾಯಿತು” ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮೆಸ್ಸಿ ಜೊತೆಗಿನ ತಮ್ಮ ಹೋಲಿಕೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸಿದರು. ಪ್ರಶ್ನೆಗಳನ್ನು ಕೇಳಿದ ವರದಿಗಾರರಿಗೆ ಉತ್ತರಿಸದೆ ಬೇರೆ ಪ್ರಶ್ನೆಗಳಿಗೆ ಉತ್ತರಿಸಿದರು.
ರೊನಾಲ್ಡೊ ಮತ್ತು ಮೆಸ್ಸಿ ತಮ್ಮ ವೃತ್ತಿಜೀವನದ ಅಂತ್ಯದ ಅವಧಿಯಲ್ಲೂ ಜಾಗತಿಕವಾಗಿ ಸುದ್ದಿಯಲ್ಲಿದ್ದಾರೆ. 2026ರ ಫಿಫಾ ವಿಶ್ವಕಪ್ ನಲ್ಲಿ ಈವರೆಗೆ ಮೆಸ್ಸಿ ಎರಡು ಪಂದ್ಯಗಳಲ್ಲಿ ಐದು ಗೋಲುಗಳ ಮೂಲಕ ಪ್ರಾಬಲ್ಯ ಸಾಧಿಸಿದ್ದಾರೆ. ಪೋರ್ಚುಗಲ್ ನ ಆರಂಭಿಕ ಪಂದ್ಯದಲ್ಲಿ ಶೂನ್ಯ ಗೋಲು ಗಳಿಸಿದ ನಂತರ ರೊನಾಲ್ಡೊ ತಮ್ಮ ಎರಡನೇ ಪಂದ್ಯದಲ್ಲಿ ಎರಡು ಗೋಲುಗಳನ್ನು ಗಳಿಸಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಲು ಆಗಮಿಸಿದಾಗ ಮೆಸ್ಸಿ ಬಗ್ಗೆ ಪ್ರಶ್ನೆ ಕೇಳಲು ಪ್ರಯತ್ನಿಸಿದ ಪತ್ರಕರ್ತನನ್ನು ರೊನಾಲ್ಡೊ ನಿರ್ಲಕ್ಷಿಸಿರುವುದು ಕಂಡುಬಂದಿದೆ. ಈ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
“ನಿನ್ನೆ ಲಿಯನೊಲ್ ಮೆಸ್ಸಿ ಎರಡು ಗೋಲುಗಳನ್ನು ಗಳಿಸಿದ್ದಾರೆ. ಎಂಬಾಪೆ…” ಎಂದು ಪತ್ರಕರ್ತ ಪ್ರಶ್ನಿಸುತ್ತಿದ್ದಾಗ ಗಮನ ಬೇರೆಡೆಗೆ ಹರಿಸಿದ ರೊನಾಲ್ಡೊ ಮತ್ತೊಬ್ಬ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ್ದಾರೆ.
ಮತ್ತೊಬ್ಬ ವರದಿಗಾರ ರೊನಾಲ್ಡೊ ಅವರನ್ನು ಪ್ರಶ್ನೆಯನ್ನು ಕೇಳಬಹುದೇ ಎಂದು ಕೇಳಿದಾಗ, ತಮಾಷೆಯಲ್ಲಿ, “ಅದು ಪ್ರಶ್ನೆಯನ್ನು ಅವಲಂಬಿಸಿರುತ್ತದೆ. ಇಲ್ಲದಿದ್ದರೆ ನಾನು ನಿಮಗೆ ಉತ್ತರಿಸುವುದಿಲ್ಲ” ಎಂದು ತಮಾಷೆಯಾಗಿ ಹೇಳಿದರು.
ನಂತರದ ಹಂತದಲ್ಲಿ ಅರ್ಜೆಂಟೀನಾ ವಿರುದ್ಧ ಆಡುವ ಅವಕಾಶ ದೊರೆತರೆ ಎನ್ನುವ ಪ್ರಶ್ನೆಗೆ ಅವರು, “ನನಗೆ ಹೇಗೆ ಉತ್ತರಿಸಬೇಕೆಂದು ತಿಳಿಯುತ್ತಿಲ್ಲ. ಇದು ಹೆಚ್ಚು ಅರ್ಥವಿಲ್ಲದ ಪ್ರಶ್ನೆ. ಆದರೆ ಅದು ಅತ್ಯುತ್ತಮವಾಗಿರುತ್ತದೆ” ಎಂದು ಉತ್ತರಿಸಿದರು.
ಅವರು ಸ್ಥಳದಿಂದ ನಿರ್ಗಮಿಸುತ್ತಿದ್ದಾಗ ಮತ್ತೊಬ್ಬ ವರದಿಗಾರ ಮೆಸ್ಸಿಯ ಬಗ್ಗೆ ಪ್ರಶ್ನಿಸಿದಾಗ ಅವರು ಮುನಿಸಿಕೊಂಡಂತೆ ವರ್ತಿಸಿದರು.
ಅರ್ಜೆಂಟೀನಾ ತಂಡ ಈಗಾಗಲೇ ಫಿಫಾ ವಿಶ್ವಕಪ್ ನ 32ನೇ ಹಂತಕ್ಕೆ ತಲುಪಿದೆ. ಆದರೆ ಪೋರ್ಚುಗಲ್ ಇನ್ನೂ ತನ್ನ ಮುನ್ನಡೆ ಖಚಿತಪಡಿಸಿಕೊಂಡಿಲ್ಲ. 4 ಅಂಕಗಳನ್ನು ಮಾತ್ರ ಗಳಿಸಿದೆ.






