ಎಲ್ಲರಂತೆ ಆಗುವುದು ಬೇಕಿಲ್ಲ; Gen Z ವೃತ್ತಿಯ ಹೊಸ ಟ್ರೆಂಡ್ ಏನು?

ದಶಕಗಳಿಂದ ಭಾರತೀಯ ಹೆತ್ತವರು ತಮ್ಮ ಮಕ್ಕಳು ವೈದ್ಯರು, ಇಂಜಿನಿಯರ್‌ಗಳು, ಐಎಎಸ್, ಕೆಎಎಸ್, ಅಧ್ಯಾಪಕರು ಮೊದಲಾದ ಉದ್ಯೋಗ ಭದ್ರತೆಯ ವೃತ್ತಿಗಳನ್ನು ಆಯ್ಕೆ ಮಾಡಬೇಕು ಎಂದು ಬಯಸುತ್ತಿದ್ದರು. ಆದರೆ ಇತ್ತೀಚೆಗೆ ಕಾಲ ಬದಲಾಗಿದೆ. ಒಂದು ಸ್ಥಿರ ಉದ್ಯೋಗದಲ್ಲೇ ಪ್ರಗತಿ ಹೊಂದಿ ಮೇಲೇರಲು ಪ್ರಯತ್ನಿಸುವ ಬದಲಾಗಿ ಪರ್ಯಾಯ ಆದಾಯ ಅವಕಾಶಗಳನ್ನು ಹುಡುಕುವ ಪ್ರವೃತ್ತಿ ಹೆಚ್ಚಾಗಿದೆ. ಹೆಚ್ಚು ಕೌಶಲ್ಯ ಆಧಾರಿತ ಉದ್ಯೋಗಗಳತ್ತ ಯುವಜನರು ಗಮನಹರಿಸುತ್ತಿದ್ದಾರೆ.
ಇತ್ತೀಚಿನ ಅಧ್ಯಯನವೊಂದರಲ್ಲಿ ಜೆನ್ ಝೀ ಅಂದರೆ 20ರಿಂದ 30ರ ವಯಸ್ಸಿನವರನ್ನು ಸಮೀಕ್ಷೆ ಮಾಡಲಾಗಿದೆ. 2025ರಲ್ಲಿ ಡಿಲೋಯಿಟ್ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ 16ರಷ್ಟು ಜೆನ್ ಝೀ ಮಾತ್ರ ಸಾಂಪ್ರದಾಯಿಕವೆನಿಸಿದ ಒಂದೇ ಪೂರ್ಣಾವಧಿಯ ಉದ್ಯೋಗ ಮಾಡಲು ಬಯಸಿದ್ದಾರೆ. ಶೇ 43ರಷ್ಟು ಜೆನ್ ಝೀ ಪೂರ್ಣಾವಧಿಯ ಉದ್ಯೋಗದ ಪ್ರಗತಿಯತ್ತ ಹೆಚ್ಚು ಗಮನಹರಿಸದೆ ಪರ್ಯಾಯ ಆದಾಯ ಗಳಿಸುವತ್ತ ಗಮನಹರಿಸಿದ್ದಾರೆ.
►ಎಲ್ಲರಂತೆ ಆಗುವುದು ಬೇಕಿಲ್ಲ
ಉದಾಹರಣೆಗೆ ತುಮಕೂರಿನ ನಿವಾಸಿ 28 ವರ್ಷದ ಬಿ.ಕೆ. ಸುಶ್ಮಾ ಅವರನ್ನು ತೆಗೆದುಕೊಳ್ಳಿ. ಅವರು ಪತ್ರಿಕೋದ್ಯಮ ಮತ್ತು ಕಲಾ ವಿಷಯದಲ್ಲಿ ಪದವಿ ಮುಗಿಸಿದ್ದರು. ಆದರೆ ಲೇಖಕಿಯಾಗುವುದು ಅವರಿಗೆ ಇಷ್ಟವಾಗಲಿಲ್ಲ. ನಂತರ ನಾಲ್ಕು ವರ್ಷ ಚಿತ್ರಕಲಾ ಪರಿಷತ್ತಿನಲ್ಲಿ ವೃತ್ತಿಪರವಾಗಿ ಕಲೆ ಕಲಿತರು. ಸಿನಿಮಾಗಳಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವೂ ಅವರಿಗಿದೆ. ಇದೀಗ ಅವರು ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ‘ಸು ಫ್ರಂ ಸೊ’ ಮತ್ತು ‘ಆಹಾ ನನ್ನ ಮದ್ವೆ ಅಂತೆ’ ಸಿನಿಮಾಗಳಲ್ಲಿ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಸಮಂತಾ ಅಭಿನಯದ ‘ಮಾ ಇಂತಿ ಬಂಗಾರಂ’ ಸಿನಿಮಾದಲ್ಲಿ ಸಹಾಯಕ ಪ್ರೊಡಕ್ಷನ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವೃತ್ತಿಯಿಂದ ಅವರಿಗೆ ಆಸಕ್ತಿಯ ಜೊತೆಗೆ ಹಣಕಾಸು ಸ್ವಾತಂತ್ರ್ಯವೂ ದೊರೆತಿದೆ.
“ನನ್ನದೇ ಆದ ಸೃಷ್ಟಿಯ ಬಗ್ಗೆ ನನಗೆ ಮೊದಲಿನಿಂದಲೇ ಪ್ರೀತಿ. ಕಲೆ ನನ್ನ ಬಹುದೊಡ್ಡ ಸಾಮರ್ಥ್ಯ. ಬಹಳ ಸಣ್ಣ ವಯಸ್ಸಿನಲ್ಲಿಯೇ ಈ ಬಗ್ಗೆ ಅರಿವಾಗಿರುವುದು ಖುಷಿ ನೀಡಿದೆ. ನಾನು ಯಾವಾಗಲೂ ಸುರಕ್ಷಿತ ಅಥವಾ ನಿರೀಕ್ಷಿತ ಎನಿಸಿದ ಹಾದಿಯ ಬದಲಾಗಿ ನನಗೆ ಉತ್ಸಾಹ ನೀಡುವ ದಾರಿಯನ್ನು ಹುಡುಕಲು ಬಯಸಿದ್ದೆ. ಸ್ನೇಹಿತರು ಮತ್ತು ಕುಟುಂಬದವರು ರೆಗ್ಯುಲರ್ ಹಾಗೂ ನಿರೀಕ್ಷಿತ ಉದ್ಯೋಗಗಳನ್ನು ಮಾಡುವುದನ್ನು ನೋಡಿದ್ದೇನೆ. ಹೀಗೆ ಊಹಿಸಬಹುದಾದ ಸಾಮಾನ್ಯ ಜೀವನ ನಡೆಸುವುದು ನನಗೆ ಬೇಕಿರಲಿಲ್ಲ. ಎಲ್ಲರಂತೆ ಆಗುವುದು ನನಗೆ ಬೇಡ. ನನ್ನತನವನ್ನು ಕಂಡುಕೊಂಡು ನನ್ನದೇ ದಾರಿಯಲ್ಲಿ ಸಾಗಲು ಬಯಸಿದ್ದೆ” ಎಂದು ಸುಶ್ಮಾ ಹೇಳುತ್ತಾರೆ.
►ಏನಾದರೂ ಹೊಸದನ್ನು ಮಾಡುವ ತವಕ
ವಿಟ್ಲದ ನಿವಾಸಿ 24 ವರ್ಷದ ಆಕಾಶ್ ಪಿ.ಪಿ. ಎಂಬಿಎ ಮುಗಿಸಿದ್ದಾರೆ. ಆದರೆ ಎಂಬಿಎ ಸಂಬಂಧಿತ ವೃತ್ತಿಗೆ ಹೋಗುವುದು ಅವರಿಗೆ ಇಷ್ಟವಿಲ್ಲ. ತಂದೆಗೆ ಹೋಟೆಲ್ ಉದ್ಯಮದಲ್ಲಿ ನೆರವಾಗುತ್ತಿದ್ದಾರೆ. ಈ ಉದ್ಯಮವನ್ನು ಮತ್ತೊಂದು ಘಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವುದು ಅವರ ಬಯಕೆ. ಅದಕ್ಕಾಗಿ ಈಗ ಐಸ್‌ಕ್ರೀಂ ತಯಾರಿಕೆ ಬಗ್ಗೆ ಕಲಿಕೆಗೆ ತೊಡಗಿದ್ದಾರೆ. ಆನ್‌ಲೈನ್‌ನಲ್ಲಿ ವಿವಿಧ ಕೋರ್ಸ್ ಗಳನ್ನು ತೆಗೆದುಕೊಂಡಿದ್ದಾರೆ.
“ಸ್ವಲ್ಪ ಸಮಯ ಸ್ವಂತ ಉದ್ಯಮಕ್ಕೆ ಪ್ರಯತ್ನಿಸಿ ನೋಡೋಣ ಎಂದುಕೊಂಡಿದ್ದೇನೆ. ಒಂದೆರಡು ವರ್ಷ ವ್ಯವಹಾರದಲ್ಲಿ ಪ್ರಯತ್ನಿಸುತ್ತೇನೆ. ಆಮೇಲೆ ಕೈಗೂಡದಿದ್ದರೆ ಬೇಕಾದರೆ ರೆಗ್ಯುಲರ್ ಕೆಲಸಕ್ಕೆ ಹೋಗೋಣ ಎಂಬ ನಿರ್ಧಾರವಿದೆ” ಎನ್ನುತ್ತಾರೆ ಆಕಾಶ್.
►ಅನುಕೂಲದ ಟ್ರೆಂಡ್ ಅಲ್ಲ!
ಈ ಟ್ರೆಂಡ್ ಕೇವಲ ತಾತ್ಕಾಲಿಕವಲ್ಲ. ಡಿಲೋಯಿಟ್ ಸಮೀಕ್ಷೆಯ ಪ್ರಕಾರ ಶೇ 94ರಷ್ಟು ಯುವ ಭಾರತೀಯರು ತಮ್ಮ ಹುದ್ದೆಯಲ್ಲೇ ಮೇಲೇರುವ ಬದಲಾಗಿ ಪ್ರಸ್ತುತ ಅಗತ್ಯವಿರುವ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ತಮ್ಮ ಅವಕಾಶಗಳನ್ನು ವಿಸ್ತರಿಸಿಕೊಳ್ಳಲು ಬಯಸುತ್ತಾರೆ. ಅದೇ ಸಮೀಕ್ಷೆಯಲ್ಲಿ ಶೇ 11ರಷ್ಟು ಜೆನ್ ಝೀ ಭಾರತೀಯ ಪ್ರತಿಸ್ಪಂದಿಗಳು ತಾವು ಸಾಮಾನ್ಯ ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ತೊರೆದಿರುವುದಾಗಿ ತಿಳಿಸಿದ್ದಾರೆ. ಪಾರಂಪರಿಕ ಶಿಕ್ಷಣ ಪದ್ಧತಿ ಹೆಚ್ಚು ಪ್ರಯೋಜನಕಾರಿಯಾಗಿಲ್ಲ ಎಂಬ ಕಾರಣದಿಂದ ಪದವಿ ಮುಗಿದ ತಕ್ಷಣ ಉದ್ಯೋಗಕ್ಕೆ ಸೇರ್ಪಡೆಗೊಂಡು ನಂತರ ಅಗತ್ಯ ಪ್ರಮಾಣಪತ್ರಗಳನ್ನು ಪಡೆಯುವ ಪ್ರವೃತ್ತಿ ಹೆಚ್ಚಾಗಿದೆ.
►ಪದವಿಯಿಂದ ಅಗತ್ಯ ಕೌಶಲ್ಯವಿಲ್ಲ
ಶೇ 78ರಷ್ಟು ಜೆನ್ ಝೀ ಅಭಿಪ್ರಾಯಪಟ್ಟಂತೆ, ಪಡೆದ ಪದವಿಯಿಂದ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳು ದೊರಕುತ್ತಿಲ್ಲ. ಶೇ 60ರಷ್ಟು ಜೆನ್ ಝೀ ಪ್ರಕಾರ 9ರಿಂದ 5ರವರೆಗೆ ಕೆಲಸ ಮಾಡದೇಯೂ ಹಣಕಾಸು ಸ್ವಾತಂತ್ರ್ಯ ಪಡೆಯಬಹುದು.
ಕೊಪ್ಪದ ನಿವಾಸಿ ವಿಘ್ನೇಶ್ ಅವರ ಉದಾಹರಣೆ ಇದಕ್ಕೆ ಸಾಕ್ಷಿ. ಪದವಿ ನಂತರ ವಿವಿಧ ಉದ್ಯೋಗಗಳಿಗೆ ಪ್ರಯತ್ನಿಸಿದವರು, ಡ್ರೈವಿಂಗ್ ಮತ್ತು ವ್ಯವಹಾರಕ್ಕೂ ಕೈ ಹಾಕಿದ್ದಾರೆ. ಕೊನೆಗೆ ಅವರಿಗೆ ವೃತ್ತಿ ಬದುಕು ನೀಡಿದ್ದು ಜ್ಯೋತಿಷ್ಯ. ಹದಿಹರೆಯದಲ್ಲಿಯೇ ಆಧ್ಯಾತ್ಮದತ್ತ ಮನ ಹರಿಸಿದ ಅವರು ಮಠದಲ್ಲಿ ಗುರುಗಳಿಂದ ವಿಧಿವತ್ತಾಗಿ ವಿದ್ಯೆ ಹಾಗೂ ಆಚರಣೆಗಳನ್ನು ಕಲಿತಿದ್ದಾರೆ. ಇದೀಗ ಸ್ವತಂತ್ರವಾಗಿ ವೃತ್ತಿಯಲ್ಲಿ ಮುಂದುವರಿಯುತ್ತಿದ್ದಾರೆ.
►ಮಕ್ಕಳು ಜೊತೆಗಿದ್ದು ಖುಷಿಯಾಗಿರುವ ಆಶಯ
ಹೆತ್ತವರೂ ಕೂಡ ಮಕ್ಕಳನ್ನು ದೂರ ಕಳುಹಿಸಲು ಇಚ್ಛಿಸುವುದಿಲ್ಲ. ಜೊತೆಗಿದ್ದು ಸಂತೋಷವಾಗಿರಬೇಕು ಎನ್ನುವುದು ಅವರ ಆಶಯ. ಅಳಿಕೆಯ ನಿವಾಸಿ ರಾಹುಲ್ ಬಿಕಾಂ ನಂತರ ಸಿಎ ಓದುತ್ತಿದ್ದಾರೆ. ಜೊತೆಗೆ ಎಲ್‌ಎಲ್‌ಬಿಯನ್ನೂ ಮಾಡುತ್ತಿದ್ದಾರೆ. ಸಿಎ ವೃತ್ತಿಗೆ ಕಾನೂನು ಶಿಕ್ಷಣ ಸಹಾಯಕವಾಗುತ್ತದೆ ಎಂಬುದು ಅವರ ನಂಬಿಕೆ.
ರಾಹುಲ್ ತಂದೆ ವಿಶ್ವನಾಥ ಅಳಿಕೆ ಹೇಳುವಂತೆ, “ನಮಗೆ ಒಬ್ಬನೇ ಮಗ. ಇಂಜಿನಿಯರ್ ಅಥವಾ ವೈದ್ಯನಾಗಿ ಊರು ಬಿಟ್ಟು ಹೋಗುವುದು ನಮಗೆ ಬೇಕಿರಲಿಲ್ಲ. ಮಗನಿಗೂ ಅದೇ ಅಭಿಪ್ರಾಯ. ಯಾವುದೇ ಓದಿನಲ್ಲಿ ಉತ್ತಮ ಅಂಕ ಪಡೆಯುವ ಸಾಮರ್ಥ್ಯ ಮಗನಿಗಿದೆ. ಆದರೆ ವೈದ್ಯರಾದವರು ದಿನವಿಡೀ ದುಡಿದು ರಾತ್ರಿ 12ಕ್ಕೆ ಮನೆಗೆ ಬರುವುದು, ಇಂಜಿನಿಯರ್ ಆದವರು ದೂರದ ಊರುಗಳಲ್ಲಿ ಕೆಲಸ ಮಾಡುವುದು ನೋಡಿದ್ದೇವೆ. ನಮ್ಮ ಮಗ ಚೆನ್ನಾಗಿರಲಿ, ನಮ್ಮ ಜೊತೆಗೇ ಇರಲಿ”, ಎನ್ನುತ್ತಾರೆ ಅವರು.







