WhatsApp ಮೆಸೇಜ್ ಶೆಡ್ಯೂಲ್ ಫೀಚರ್ ಪರಿಚಯ; ಶೆಡ್ಯೂಲ್ ಮಾಡುವುದು ಹೇಗೆ?

ಸಾಂದರ್ಭಿಕ ಚಿತ್ರ | Photo Credit : magnific
ಇಮೇಲ್ ಕಳುಹಿಸುವವರು ಸಾಮಾನ್ಯವಾಗಿ ಮೆಸೇಜ್ ಶೆಡ್ಯೂಲಿಂಗ್ ಸೌಲಭ್ಯವನ್ನು ವಿವಿಧ ಕಾರಣಗಳಿಗಾಗಿ ಬಳಸುತ್ತಾರೆ. ಇದೀಗ ಅಂತಹ ವ್ಯವಸ್ಥೆ WhatsApp ನಲ್ಲೂ ಬಂದಿದೆ.
WhatsApp ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ಅದೇ ಮೆಸೇಜ್ ಶೆಡ್ಯೂಲಿಂಗ್! ಮೆಸೇಜ್ ಶೆಡ್ಯೂಲಿಂಗ್ನಲ್ಲಿ ನೀವು ಅವುಗಳನ್ನು ಕಳುಹಿಸಬೇಕಾದ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲು ಸಾಧ್ಯವಾಗುತ್ತದೆ. ಇದನ್ನು ಬಳಕೆದಾರರು ಅತಿ ಹೆಚ್ಚು ಬೇಡಿಕೆ ಇಟ್ಟಿರುವ ಫೀಚರ್ ಎಂದು WhatsApp ಹೇಳಿದೆ.
ಏನಿದು ಶೆಡ್ಯೂಲಿಂಗ್ ಫೀಚರ್?
ಇಮೇಲ್ ಕಳುಹಿಸುವವರು ಇಂತಹ ಮೆಸೇಜ್ ಶೆಡ್ಯೂಲಿಂಗ್ ಸೌಲಭ್ಯವನ್ನು ವಿವಿಧ ಕಾರಣಗಳಿಗಾಗಿ ಬಳಸುತ್ತಾರೆ. ಉದಾಹರಣೆಗೆ, ಬೇರೆ ಬೇರೆ ಸಮಯ ವಲಯದಲ್ಲಿ ಕೆಲಸ ಮಾಡುವಾಗ, ಇಮೇಲ್ ಓದುವವರು ಹೆಚ್ಚಾಗಿ ಅಥವಾ ಕಡಿಮೆ ಸಕ್ರಿಯವಾಗಿರುವ ಸಮಯವನ್ನು ಗಮನದಲ್ಲಿರಿಸಿ ಕಳುಹಿಸಲು ಅಥವಾ ದಿನದ 24 ಗಂಟೆಯೂ ಕೆಲಸ ನಡೆಯುತ್ತಿದೆ ಎಂಬ ಭಾವನೆ ಮೂಡಿಸಲು ಇದನ್ನು ಬಳಸಲಾಗುತ್ತದೆ.
ಆದರೆ WhatsApp ನಲ್ಲಿ ಅನೇಕ ರೀತಿಯಲ್ಲಿ ಇದನ್ನು ಬಳಸಿಕೊಳ್ಳಬಹುದು. ಏನಾದರೂ ಕಾರ್ಯಕ್ರಮವಿದ್ದರೆ, ಕಾರ್ಯಕ್ರಮವಿದ್ದ ದಿನದಂದು ನೆನಪಿಸಿ ಎಂದು ಯಾರಾದರೂ ಹೇಳಬಹುದು. ಅಂತಹ ಸಮಯಕ್ಕಾಗಿ ಈ ಮೆಸೇಜ್ ಶೆಡ್ಯೂಲಿಂಗ್ ಅನ್ನು ಬಳಸಬಹುದು.
‘ದಿ ಹಿಂದೂ’ ವರದಿ ಮಾಡಿರುವ ಪ್ರಕಾರ, 10 ನಿಮಿಷದಿಂದ 14 ದಿನಗಳವರೆಗೆ ಮೆಸೇಜ್ಗಳನ್ನು ಶೆಡ್ಯೂಲ್ ಮಾಡಿ ಇಡಬಹುದು. ಜನ್ಮದಿನದ ಶುಭಾಶಯಗಳು, ಕೆಲಸಕ್ಕೆ ಸಂಬಂಧಿಸಿದ ಸಂದೇಶಗಳು, ಅಪಾಯಿಂಟ್ಮೆಂಟ್ ಸಂದೇಶಗಳು ಸೇರಿದಂತೆ, ಫೋಟೋಗಳು, ವೀಡಿಯೋಗಳನ್ನೂ ಶೆಡ್ಯೂಲ್ ಮಾಡಿ ಇಡಬಹುದು. ಮೊಬೈಲ್ ಸ್ವಿಚ್ ಆಫ್ ಆದರೂ ಅಥವಾ ಚಾರ್ಜ್ ಕಡಿಮೆ ಇದ್ದರೂ ಶೆಡ್ಯೂಲ್ ಮಾಡಿರುವ ಸಂದೇಶಗಳು ರವಾನೆಯಾಗುತ್ತವೆ.
ಈ ಮೆಸೇಜ್ ಶೆಡ್ಯೂಲಿಂಗ್ ಕೇವಲ WhatsApp ಸಂದೇಶಗಳಿಗೆ ಮಾತ್ರ ಅನ್ವಯಿಸುತ್ತದೆ. WhatsApp ಚಾನೆಲ್ನಲ್ಲಿ ಲಭ್ಯವಿರುವುದಿಲ್ಲ.
ಮೆಸೇಜ್ ಶೆಡ್ಯೂಲ್ ಮಾಡುವುದು ಹೇಗೆ?
• WhatsApp ಅಪ್ಲಿಕೇಶನ್ ಅಪ್ಡೇಟ್ ಆವೃತ್ತಿಯಲ್ಲಿ ಇದೆಯೇ ಎಂದು ಪರಿಶೀಲಿಸಿ.
• ಯಾರಿಗೆ ಸಂದೇಶ ಕಳುಹಿಸಬೇಕೋ ಅವರಿಗೆ ಸಂದೇಶ ಟೈಪ್ ಮಾಡಿ.
• ಸಂದೇಶ ಕಳುಹಿಸಲು ಬಳಸುವ ಆಯ್ಕೆ ಒತ್ತಿ ಒಂದೆರಡು ಸೆಕೆಂಡ್ ಹಿಡಿದುಕೊಳ್ಳಿ. ಆಗ ವಾರ, ದಿನಾಂಕ ಮತ್ತು ತಿಂಗಳು ಹಾಗು ಸಮಯದ ಆಯ್ಕೆ ತೋರಿಸುತ್ತದೆ. ಯಾವಾಗ ಸಂದೇಶ ಕಳುಹಿಸಬೇಕೋ ಆ ದಿನಾಂಕ, ಸಮಯ ಆಯ್ಕೆ ಮಾಡಿ. ಶೆಡ್ಯೂಲ್ ಆಗುತ್ತದೆ.
• ಚಾಟ್ ಬಾಕ್ಸ್ನಲ್ಲಿ ಶೆಡ್ಯೂಲ್ ಮಾಡಿದ ಸಂದೇಶವನ್ನೂ ನೋಡಬಹುದು ಮತ್ತು ಡಿಲೀಟ್ ಕೂಡ್ ಮಾಡಬಹುದು.






