ಲಕ್ಷಾಂತರ ಜನರ ಖಾತೆಗಳನ್ನು 24 ಗಂಟೆಗಳ ಕಾಲ ‘ಪರಿಶೀಲನೆ’ಯಲ್ಲಿಟ್ಟ WhatsApp !

ಸಂದೇಶ ಅಪ್ಲಿಕೇಶನ್ ಆಗಿರುವ ವಾಟ್ಸ್ಆಪ್ ಸೋಮವಾರ ಭಾರತೀಯರ ಖಾತೆಗಳು ಸೇರಿದಂತೆ ಬಹು ಖಾತೆಗಳನ್ನು 24 ಗಂಟೆಗಳ ಕಾಲ “ಪರಿಶೀಲನೆಯಲ್ಲಿದೆ” (under review) ಎಂದು ಹೇಳಿದೆ. ಅಪ್ಲಿಕೇಶನ್ ಗೆ ಸಂಬಂಧಿಸಿದ ಎಲ್ಲಾ ಫೀಚರ್ ಗಳನ್ನು ನಿರ್ಬಂಧಿಸಿದೆ ಮತ್ತು ಅನೇಕ ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ.
“ನಮ್ಮ ಸೇವೆಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುವವರಿಗಿಂತ ಸದಾ ಮುಂದೆ ಇರಲು ಮತ್ತು ಇತರ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಖಾತೆಗಳನ್ನು ನಿಷೇಧಿಸಲು ನಾವು ಯಾವಾಗಲೂ ಕೆಲಸ ಮಾಡುತ್ತಿರುತ್ತೇವೆ. ಕೆಲವೊಮ್ಮೆ ತಪ್ಪಾದರೆ ತಕ್ಷಣ ಸರಿಪಡಿಸಲು ಪ್ರಯತ್ನಿಸುತ್ತೇವೆ” ಎಂದು ವಾಟ್ಸ್ಆಪ್ ವಕ್ತಾರರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಮೆಟಾದಿಂದ ಪೂರ್ವಸೂಚನೆಯಿಲ್ಲದೆ ಖಾತೆ ಬ್ಲಾಕ್ ಆಗಿರುವ ಬಗ್ಗೆ ಬಳಕೆದಾರರು ಸೋಮವಾರ ರಾತ್ರಿ 8 ಗಂಟೆಯಿಂದ ವರದಿ ಮಾಡಲು ಆರಂಭಿಸಿದ್ದರು.
ಅಪ್ಲಿಕೇಶನ್ ತೆರೆಯುವಾಗ ಪರದೆಯ ಮೇಲೆ “ಖಾತೆ ಪರಿಶೀಲನೆಯಲ್ಲಿದೆ. ವಿನಂತಿಸಲಾದ ದಿನಾಂಕ: 3 ಆಗಸ್ಟ್ 2026. ನಿಮ್ಮ ಖಾತೆ ಚಟುವಟಿಕೆ ಮತ್ತು ಸಾಧನದ ಮಾಹಿತಿಯು ನಮ್ಮ ಸೇವಾ ನಿಯಮಗಳನ್ನು ಅನುಸರಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಪರಿಶೀಲಿಸಲಾಗುತ್ತಿದೆ. ಫಲಿತಾಂಶವನ್ನು ಸಾಮಾನ್ಯವಾಗಿ 24 ಗಂಟೆಗಳ ಒಳಗೆ ನಾವು ನಿಮಗೆ ತಿಳಿಸುತ್ತೇವೆ” ಎನ್ನುವ ಸಂದೇಶ ಬರುತ್ತಿದೆ ಎಂದು ಬಳಕೆದಾರರು ತಿಳಿಸಿದ್ದಾರೆ.
ಈ ಟಿಪ್ಪಣಿಗಳ ಕೆಳಗೆ ಖಾತೆ ಸಮಸ್ಯೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅಪ್ಲಿಕೇಶನ್ ಒಂದು ಆಯ್ಕೆಯನ್ನು ಒದಗಿಸುತ್ತದೆ. ಅದರಲ್ಲಿ, “ವಾಟ್ಸ್ಆಪ್ ಅನ್ನು ಜವಾಬ್ದಾರಿಯುತವಾಗಿ ಹೇಗೆ ಬಳಸುವುದು. ಮಾರ್ಗದರ್ಶನ ನೋಡಿ” ಎನ್ನುವ ಆಯ್ಕೆಯಡಿ “ಕದ್ದ ಫೋನ್ ಮತ್ತು ಖಾತೆಗಳ ಬಗ್ಗೆ” ಎನ್ನುವ ಆಯ್ಕೆಯೂ ಸೇರಿವೆ.
ಬಳಕೆದಾರರು ಅಪ್ಲಿಕೇಶನ್ ಹೇಳಿದ ಎಲ್ಲಾ ಸಮಸ್ಯೆಗಳ ವಿವಿಧ ಸ್ಕ್ರೀನ್ ಶಾಟ್ಗಳನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವರು ತಮ್ಮ ವಾಟ್ಸ್ಆಪ್ ಖಾತೆಯನ್ನು ಯಾವುದೇ ವಿವರಣೆ ಇಲ್ಲದೆ ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. “ಈ ಬಗ್ಗೆ ಮೇಲ್ಮನವಿ ಸಲ್ಲಿಸಿದ್ದೇನೆ. ಆದರೆ ಪುಟವು “24 ಗಂಟೆಗಳ ಒಳಗೆ ಪರಿಶೀಲಿಸಲಾಗುವುದು” ಎನ್ನುವ ಸಂದೇಶ ಮಾತ್ರ ಪ್ರದರ್ಶಿಸುತ್ತಿದೆ. ತುರ್ತಾಗಿ ಸಹಾಯ ಮಾಡಿ” ಮೊದಲಾಗಿ ಸಂದೇಶಗಳನ್ನು ಹಾಕಿದ್ದಾರೆ.
WHATSAPP USERS REPORT SUDDEN ACCOUNT LOCKOUTS
— Nabila Jamal (@nabilajamal_) August 3, 2026
Several WhatsApp users, including in India, say their accounts were placed "under review" for 24 hours, temporarily blocking access to all app features
WhatsApp says it actively bans accounts to prevent abuse but acknowledged it can… pic.twitter.com/hoeI3pb0E3






