ಸೈಬರ್ ಕಿರುಕುಳ ಮನೆಯವರೆಗೂ ತಲುಪಿದಾಗ ಪೋಷಕರು ಹೇಗೆ ನಿಭಾಯಿಸಬಹುದು?

ಸಾಂದರ್ಭಿಕ ಚಿತ್ರ
ಪೋಷಕರಿಗೆ ಇರುವ ದೊಡ್ಡ ಸವಾಲೆಂದರೆ ಸೈಬರ್ ಬೆದರಿಕೆ ಅಥವಾ ಕಿರುಕುಳವನ್ನು ಗುರುತಿಸುವುದು.
ಸ್ಮಾರ್ಟ್ಫೋನ್ ಗಳು, ಸಾಮಾಜಿಕ ಜಾಲತಾಣಗಳು ಮತ್ತು ಆನ್ಲೈನ್ ಆಟಗಳ ಜೊತೆಗೆ ಬೆಳೆಯುತ್ತಿರುವ ಮಕ್ಕಳಿಗೆ ಮನೆಗೆ ಮರಳಿದ ನಂತರವೂ ವಾಟ್ಸ್ಆಪ್ ಗುಂಪುಗಳಲ್ಲಿ ತರಗತಿ ಮುಂದುವರಿಯಬಹುದು. ಶಾಲೆಯಲ್ಲಿ ಮಾಡಿದ ತಮಾಷೆಯು ಸಹಪಾಠಿಗಳ ನಡುವೆ ಹಂಚಿಕೊಳ್ಳುವ ‘ಮೀಮ್’ ಆಗಬಹುದು. ಮಗುವನ್ನು ಉದ್ದೇಶಪೂರ್ವಕವಾಗಿ ಆನ್ಲೈನ್ ಗುಂಪಿನಿಂದ ಹೊರಗಿಡಬಹುದು ಅಥವಾ ಆಟವಾಡುವಾಗ ಗುರಿಯಾಗಿಸಬಹುದು. ಅವರ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆ ಸೃಷ್ಟಿಯಾಗಬಹುದು. ಇಂತಹ ಅನಂತ ಸಾಧ್ಯತೆಗಳು ಇವೆ.
2022ರಲ್ಲಿ ಮ್ಯಾಕ್ಅಫೀ ನಡೆಸಿದ ವರದಿಯ ಪ್ರಕಾರ, ಸಮೀಕ್ಷೆಗೆ ಒಳಪಟ್ಟ ಭಾರತೀಯ ಮಕ್ಕಳಲ್ಲಿ ಶೇ 85ರಷ್ಟು ಮಂದಿ ಸೈಬರ್ ಬೆದರಿಸುವಿಕೆ ಎದುರಿಸಿದ್ದಾರೆ. ಅಧ್ಯಯನಕ್ಕೊಳಪಟ್ಟ ದೇಶಗಳ ಪೈಕಿ ಇದು ಅತ್ಯಧಿಕ ಪ್ರಮಾಣವಾಗಿದೆ. ಶೇ 45ರಷ್ಟು ಮಕ್ಕಳು ಅಪರಿಚಿತರಿಂದ ಮತ್ತು ಶೇ 48ರಷ್ಟು ಮಕ್ಕಳು ತಮಗೆ ಪರಿಚಯವಿರುವವರಿಂದ ಕಿರುಕುಳಕ್ಕೆ ಒಳಗಾಗಿದ್ದಾರೆ. ಟ್ರೋಲಿಂಗ್, ವೈಯಕ್ತಿಕ ನಿಂದನೆ, ಲೈಂಗಿಕ ಕಿರುಕುಳ ಮತ್ತು ವ್ಯಕ್ತಿಯ ಖಾಸಗಿ ಮಾಹಿತಿ ಸಾರ್ವಜನಿಕಗೊಳಿಸುವಂತಹ (ಡಾಕ್ಸಿಂಗ್) ರೀತಿಯ ಕಿರುಕುಳಗಳು ಇತ್ತೀಚೆಗೆ ಸಾಮಾನ್ಯವಾಗಿವೆ.
ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ಸೈಬರ್ ಶಿಕ್ಷಣ ನೀಡಿರುವ ಫೈರ್ ಕಂಪಾಸ್ ಸಂಸ್ಥಾಪಕ ಬಿಕಾಶ್ ಬರೈ ಅವರ ಪ್ರಕಾರ, “ಕಿರುಕುಳ ಇನ್ನು ಮುಂದೆ ಶಾಲೆಯ ಆವರಣಕ್ಕೆ ಸೀಮಿತವಾಗಿರುವುದಿಲ್ಲ.”
ಮುಖ್ಯವಾಗಿ, ವಯಸ್ಕರಂತೆ ಮಕ್ಕಳು ಆನ್ಲೈನ್ ಮತ್ತು ಆಫ್ಲೈನ್ ಜಗತ್ತುಗಳನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಅವರ ಸ್ನೇಹಿತರು, ಆಟಗಳು ಮತ್ತು ಸಂಭಾಷಣೆಗಳು ಎರಡೂ ಕಡೆ ನಡೆಯುತ್ತವೆ.
“ಕೃತಕ ಬುದ್ಧಿಮತ್ತೆ (AI) ಮತ್ತೊಂದು ಸಮಸ್ಯೆ ತಂದೊಡ್ಡಿದೆ. ನಕಲಿ ಖಾತೆ ಸೃಷ್ಟಿಸುವುದು ಮೊದಲೇ ಸರಳವಾಗಿತ್ತು. ಇದೀಗ ನಕಲಿ ಫೋಟೋ, ಧ್ವನಿ ಅಥವಾ ವೀಡಿಯೋ ಸೃಷ್ಟಿಸುವುದೂ ಸುಲಭವಾಗುತ್ತಿದೆ. ಇದಕ್ಕೆ ಹೆಚ್ಚಿನ ತಾಂತ್ರಿಕ ಜ್ಞಾನದ ಅಗತ್ಯವಿಲ್ಲ” ಎನ್ನುತ್ತಾರೆ ಬಿಕಾಶ್ ಬರೈ.
►ಸೈಬರ್ ಬೆದರಿಕೆ ಗುರುತಿಸುವುದು ಹೇಗೆ?
ಪೋಷಕರಿಗೆ ಇರುವ ದೊಡ್ಡ ಸವಾಲೆಂದರೆ ಸೈಬರ್ ಬೆದರಿಕೆ ಅಥವಾ ಕಿರುಕುಳವನ್ನು ಗುರುತಿಸುವುದು. ಮಗುವನ್ನು ಪದೇಪದೇ ವಾಟ್ಸ್ಆಪ್ ಗುಂಪಿನಿಂದ ತೆಗೆದುಹಾಕಬಹುದು. ಅಪಹಾಸ್ಯಕ್ಕಾಗಿ ಪ್ರತ್ಯೇಕ ಗುಂಪು ರಚಿಸಬಹುದು. ಖಾಸಗಿ ಸಂಭಾಷಣೆಯನ್ನು ಇತರರಿಗೆ ಹಂಚಬಹುದು. ನಕಲಿ ಸಾಮಾಜಿಕ ಜಾಲತಾಣ ಖಾತೆ ತೆರೆಯಬಹುದು. ಆನ್ಲೈನ್ ಗೇಮಿಂಗ್ ಸಂದರ್ಭದಲ್ಲಿ ಪದೇಪದೇ ಗುರಿ ಮಾಡಬಹುದು.
“ಮೀಮ್ ಕೂಡ ಕಿರುಕುಳವಾಗಬಹುದು. ಯಾರಾದರೂ ಮಗುವಿನ ಫೋಟೋ ತೆಗೆದು ಅದನ್ನು ಎಡಿಟ್ ಮಾಡಬಹುದು. ಅದು ತರಗತಿಯಲ್ಲಿ ಹರಡಲು ಪ್ರಾರಂಭಿಸುತ್ತದೆ. ಇತರರಿಗೆ ತಮಾಷೆಯಾಗಿ ಕಾಣಿಸಬಹುದು. ಆದರೆ ಗುರಿಯಾದ ಮಗುವಿಗೆ ತಮಾಷೆಯಾಗಿರಲಾರದು” ಎನ್ನುತ್ತಾರೆ ಬರೈ.
ಕ್ವಿಕ್ ಹೀಲ್ ಟೆಕ್ನಾಲಜೀಸ್ ಸಿಇಒ ಹರೀಶ್ ಕುಮಾರ್ ಅವರ ಪ್ರಕಾರ, “ಪೋಷಕರು ಪದೇಪದೇ ನಡೆಯುವ ಟ್ರೋಲಿಂಗ್, ವದಂತಿ, ಸಾರ್ವಜನಿಕ ಅವಹೇಳನ, ಬೇರೆಯವರಂತೆ ನಟಿಸುವುದು (impersonation), ಅನುಮತಿ ಇಲ್ಲದೆ ಫೋಟೋ ಅಥವಾ ಸ್ಕ್ರೀನ್ಶಾಟ್ ಹಂಚುವ ಬಗ್ಗೆಯೂ ಜಾಗರೂಕತೆ ವಹಿಸಬೇಕು.”
►ಆನ್ಲೈನ್ ಕಿರುಕುಳದಿಂದ ತಪ್ಪಿಸಿಕೊಳ್ಳುವುದು ಏಕೆ ಕಷ್ಟ?
ಸಾಂಪ್ರದಾಯಿಕ ಕಿರುಕುಳ ಶಾಲಾ ಆವರಣಕ್ಕೆ ಸೀಮಿತವಾಗಬಹುದು. ಸೈಬರ್ ಕಿರುಕುಳ ಮನೆಗೂ ತಲುಪಬಹುದು. ಮಗುವಿಗೆ ರಾತ್ರಿ ವೇಳೆಯೂ ಸಂದೇಶ ಬರಬಹುದು. ಒಮ್ಮೆ ವಿಷಯವನ್ನು ನಕಲಿಸಿ ಫಾರ್ವರ್ಡ್ ಮಾಡಿದರೆ ಎಲ್ಲಿಗೆ ತಲುಪುತ್ತದೆ ಎಂಬುದು ಮಗುವಿನ ನಿಯಂತ್ರಣದಲ್ಲಿ ಕಡಿಮೆ ಇರುತ್ತದೆ.
“ಫೋಟೋಗಳನ್ನು ಫಾರ್ವರ್ಡ್ ಮಾಡಬಹುದು. ಪೋಸ್ಟ್ ನ ಸ್ಕ್ರೀನ್ಶಾಟ್ ಹಂಚಿಕೊಳ್ಳಬಹುದು. ಹೀಗಾಗಿ 20–30 ಜನರಿಗೆ ವಿಷಯ ನೋಡಬಹುದು. ಅಲ್ಲಿಂದ ನೂರಾರು ಮಂದಿಗೆ ತಲುಪಬಹುದು” ಎನ್ನುತ್ತಾರೆ ಬರೈ.
“ಪದೇಪದೇ ನಡೆಯುವ ಆನ್ಲೈನ್ ಕಿರುಕುಳ ಭಾವನಾತ್ಮಕ ಸಂಕಟ, ಆತಂಕ, ಸಾಮಾಜಿಕವಾಗಿ ಹಿಂದೆ ಸರಿಯುವಿಕೆ ಮತ್ತು ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕೇವಲ ನಿರ್ದಿಷ್ಟ ಲಕ್ಷಣಗಳ ಪಟ್ಟಿಗಾಗಿ ಹುಡುಕಬೇಡಿ, ಬದಲಾಗಿ ನಡವಳಿಕೆ ಗಮನಿಸಿ. ಮಗು ಸೈಬರ್ ಕಿರುಕುಳಕ್ಕೆ ಒಳಗಾಗುತ್ತಿದೆ ಎಂಬುದನ್ನು ಸಾಬೀತುಪಡಿಸುವ ಬದಲಾವಣೆ ಗಮನಿಸಿ. ಪೋಷಕರು ಮಗುವಿನ ಸಾಮಾನ್ಯ ನಡವಳಿಕೆಯಲ್ಲಿ ಕಂಡುಬರುವ ಬದಲಾವಣೆಗಳತ್ತ ಗಮನ ಹರಿಸಬೇಕು” ಎನ್ನುತ್ತಾರೆ ಹರೀಶ್ ಕುಮಾರ್.
ಮಗು ನಿರ್ದಿಷ್ಟ ಆನ್ಲೈನ್ ಗುಂಪಿನಲ್ಲಿ ಸಕ್ರಿಯವಾಗಿದ್ದು, ಅದನ್ನು ತೆರೆಯಲು ಹಿಂಜರಿಯಬಹುದು. ಮುಖ್ಯವಾಗಿ, ನಿದ್ರೆ, ಮನಸ್ಥಿತಿ, ಶಾಲಾ ಹಾಜರಾತಿ, ಸ್ನೇಹ, ಏಕಾಗ್ರತೆ ಅಥವಾ ಚಟುವಟಿಕೆಗಳಲ್ಲಿನ ಆಸಕ್ತಿಯಲ್ಲಿನ ಬದಲಾವಣೆಗಳು ಎಚ್ಚರಿಕೆಯ ಸಂಕೇತಗಳಾಗಿರಬಹುದು. ಸಾಧನಗಳ ಸುತ್ತಲೂ ಹೆಚ್ಚಿನ ಗೌಪ್ಯತೆ ಮತ್ತೊಂದು ಸಂಭಾವ್ಯ ಸೂಚಕವಾಗಿದೆ.
ಈ ಯಾವುದೇ ಚಿಹ್ನೆಗಳು ಸೈಬರ್ ಕಿರುಕುಳ ಸಂಭವಿಸಿದೆ ಎಂದು ತಿಳಿಸುತ್ತದೆ. ಮಗುವಿನ ಫೋನ್ ಬಳಕೆಯಲ್ಲಿ ಹಠಾತ್ ಬದಲಾವಣೆಯಾದರೆ, ಆತಂಕ, ಕಳಪೆ ನಿದ್ರೆ, ಸಾಧನಗಳ ಸುತ್ತಲಿನ ಗೌಪ್ಯತೆ ಮತ್ತು ಒಮ್ಮೆ ಆನಂದಿಸಿದ ಅಪ್ಲಿಕೇಶನ್ ಗಳು ಮತ್ತು ಆಟಗಳಲ್ಲಿ ಇದ್ದಕ್ಕಿದ್ದಂತೆ ಆಸಕ್ತಿ ಕಳೆದುಕೊಳ್ಳುವುದು ಕಂಡುಬಂದಲ್ಲಿ ಹಿರಿಯರು ಗಮನ ಹರಿಸುವುದು ಅತ್ಯಗತ್ಯವಾಗಿದೆ.
►ಆರಂಭಿಕ ಪ್ರತಿಕ್ರಿಯೆ ಅತಿ ಮುಖ್ಯ
ಮಕ್ಕಳು ಸೈಬರ್ ಬೆದರಿಕೆ ಬಗ್ಗೆ ವರದಿ ಮಾಡಲು ಹಿಂಜರಿಯುವ ಪ್ರಮುಖ ಕಾರಣವೆಂದರೆ ಪೋಷಕರು ಫೋನ್ ಕಸಿಯಬಹುದು, ಇಂಟರ್ನೆಟ್ ಬಳಕೆ ನಿರ್ಬಂಧಿಸಬಹುದು ಅಥವಾ ಸಂಬಂಧಿತರನ್ನು ಪ್ರಶ್ನಿಸಬಹುದು ಎನ್ನುವ ಆತಂಕವಾಗಿರಬಹುದು. ಆನ್ ಲೈನ್ ನಲ್ಲಿ ಹಂಚಿಕೊಂಡ ವಿಷಯ ಮುಜುಗರವಾಗಬಹುದು ಅಥವಾ ಮಾತನಾಡಬಾರದ ವ್ಯಕ್ತಿಯ ಜೊತೆ ಮಾತನಾಡಿದ್ದಕ್ಕಾಗಿ ದೂಷಿಸಬಹುದು ಎಂಬ ಭಯವೂ ಇರಬಹುದು.
ಹೀಗಾಗಿ, ಮಗುವಿನ ಜೊತೆಗಿನ ಆರಂಭಿಕ ಪ್ರತಿಕ್ರಿಯೆ ಎಲ್ಲವನ್ನೂ ನಿರ್ಧರಿಸುತ್ತದೆ.
“ವಿಷಯ ಆಲಿಸಬೇಕು. ಮಗುವನ್ನು ದೂಷಿಸಬಾರದು. ತಕ್ಷಣ ಸಾಧನ ವಶಪಡಿಸಿಕೊಳ್ಳುವ ಪ್ರವೃತ್ತಿ ನಿಯಂತ್ರಿಸಬೇಕು. ವಿಷಯ ಹೊರಹಾಕುವುದರಿಂದ ಸಮಸ್ಯೆ ಬಗೆಹರಿಯಬಹುದು ಎನ್ನುವ ಭರವಸೆ ಮಗುವಿಗೆ ಸಿಗಬೇಕಾಗುತ್ತದೆ.
ವಿಷಯ ಬಹಿರಂಗಪಡಿಸುವುದರಿಂದ ಸಾರ್ವಜನಿಕ ಮುಜುಗರ, ದೂಷಣೆಗೆ ಒಳಗಾಗಬೇಕಾಗುತ್ತದೆ ಎಂಬ ಭಾವನೆ ಮಗುವಿಗೆ ಬರಬಾರದು. ಆನ್ ಲೈನ್ ನಲ್ಲಿ ಏನಾದರೂ ಸಮಸ್ಯೆ ಉಂಟಾದಾಗ ಮಗು ತಮ್ಮ ಪೋಷಕರು, ಶಿಕ್ಷಕರು ಅಥವಾ ವಿಶ್ವಾಸಾರ್ಹ ವ್ಯಕ್ತಿಗಳನ್ನು ಸಂಪರ್ಕಿಸಬೇಕೇ ವಿನಾ ವಿಷಯ ಮುಚ್ಚಿಡಬಾರದು ಎಂಬ ಮಟ್ಟದ ನಂಬಿಕೆ ಬೆಳೆಸುವುದು ಗುರಿಯಾಗಿರಬೇಕು.”
►ಮಗುವಿನ ಆನ್ ಲೈನ್ ಸುರಕ್ಷತೆ ಎಲ್ಲರ ಹೊಣೆಗಾರಿಕೆ
ಆನ್ ಲೈನ್ ನಲ್ಲಿ ಮಕ್ಕಳ ಸುರಕ್ಷತೆಯ ಸಂಪೂರ್ಣ ಹೊಣೆಯನ್ನು ಪೋಷಕರೇ ಹೊರಲು ಸಾಧ್ಯವಿಲ್ಲ. ಸುರಕ್ಷಿತ ಡಿಜಿಟಲ್ ಪರಿಸರ ಸೃಷ್ಟಿಸುವಲ್ಲಿ ಶಾಲೆಗಳು, ತಂತ್ರಜ್ಞಾನ ಕಂಪೆನಿಗಳು, ಗೇಮಿಂಗ್ ವೇದಿಕೆಗಳು ಮತ್ತು ನೀತಿ ನಿರೂಪಕರಿಗೂ ಪಾತ್ರವಿದೆ ಎನ್ನುತ್ತಾರೆ mFilterIt ಸಹ-ಸಂಸ್ಥಾಪಕ ಮತ್ತು ಸಿಇಒ ಅಮಿತ್ ರೆಲಾನ್.
ಡಿಜಿಟಲ್ ಸುರಕ್ಷತೆಯು ಕೇವಲ ಒಂದು ಬಾರಿಯ ಜಾಗೃತಿ ಕಾರ್ಯಕ್ರಮವಾಗಿರದೆ ಮಕ್ಕಳ ಶಿಕ್ಷಣದ ನಿರಂತರ ಭಾಗವಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಗತ್ತು ಬದಲಾಗುತ್ತಿದ್ದಂತೆ ಡಿಜಿಟಲ್ ಕ್ಷೇತ್ರವೂ ಬದಲಾಗುತ್ತಿದೆ. ಇದು ಹೊಸ ಅವಕಾಶಗಳ ಜೊತೆಗೆ ಹೊಸ ಅಪಾಯಗಳನ್ನೂ ತರುತ್ತಿದೆ. ವಂಚಕರು ಹೆಚ್ಚು ಚುರುಕಾಗುತ್ತಿದ್ದಾರೆ ಮತ್ತು ವ್ಯವಸ್ಥೆಯ ದೋಷಗಳನ್ನು ತಮ್ಮ ಲಾಭಕ್ಕಾಗಿ ಬಳಸುತ್ತಿದ್ದಾರೆ. ಹೀಗಿರುವಾಗ ಪೋಷಕರು ತಮ್ಮ ಮಗುವಿನ ಸುರಕ್ಷತೆ ಬಗ್ಗೆ ಜಾಗರೂಕರಾಗಿರಬೇಕು.
ಸೌಜನ್ಯ: indianexpress.com






