ಸರಕಾರವನ್ನು ಪ್ರಶ್ನಿಸಲು ಸೂಕ್ತ ಸಮಯ ಯಾವುದು?

ಪಹಲ್ಗಾಮ್ ದಾಳಿ ನಡೆದು ತಿಂಗಳು ಕಳೆದ ನಂತರವೂ, ಈಗಲೂ ಪ್ರಶ್ನೆಗಳನ್ನು ಎತ್ತಲು ಇದು ಸೂಕ್ತ ಸಮಯವಲ್ಲ ಎನ್ನಲಾಗುತ್ತಿದೆ.
ಹಾಗಾದರೆ ಸೂಕ್ತ ಸಮಯ ಯಾವಾಗ ಬರುತ್ತದೆ? ಸರಕಾರದ ಲೋಪದ ಬಗ್ಗೆ ಕೇಳಲು ದೊಡ್ಡ ದುರಂತ ಆಗಿ ಎಷ್ಟು ದಿನಗಳವರೆಗೆ ಕಾಯಬೇಕು? ಒಂದು ರಾಷ್ಟ್ರೀಯ ದುರಂತ ನಡೆದಾಗ, ಅದರಲ್ಲಿ ಭದ್ರತಾ ವೈಫಲ್ಯದಂಥ ಗಂಭೀರ ಲೋಪ ಕಂಡಾಗ ಅದರ ಬಗ್ಗೆ ಪ್ರಶ್ನಿಸುವುದಕ್ಕೂ ಮುಹೂರ್ತಕ್ಕಾಗಿ ಕಾಯಬೇಕೆ? ಅದು ಆ ಕ್ಷಣದ ಜರೂರತ್ತಲ್ಲವೆ? ಸರಕಾರವನ್ನು ಪ್ರಶ್ನಿಸಲು ಇಷ್ಟು ಸಮಯ ಕಾಯಬೇಕು ಎಂದು ಬಯಸುವ ಮನಸ್ಥಿತಿ ಯಾವುದು ಮತ್ತು ಎಂಥದ್ದು?
ಪಹಲ್ಗಾಮ್‌ಗೂ ಮೊದಲು ಪಠಾಣ್ ಕೋಟ್ ದಾಳಿ 2016 ರ ಜನವರಿ 2ರಂದು ನಡೆಯಿತು. ಜೂನ್‌ನಲ್ಲಿ ಪ್ಯಾಂಪೋರ್ ಭಯೋತ್ಪಾದಕ ದಾಳಿ ನಡೆಯಿತು. ಅದೇ ಸೆಪ್ಟಂಬರ್ 18 ರಂದು ಉರಿ ದಾಳಿ ನಡೆಯಿತು. 2016ರ ಅಕ್ಟೋಬರ್‌ನಲ್ಲಿ ಬಾರಾಮುಲ್ಲಾ ಮತ್ತು ಹಂದ್ವಾರ ದಾಳಿ ನಡೆಯಿತು. ಆನಂತರ ನವೆಂಬರ್ ನಲ್ಲಿ ನಗ್ರೋಟಾದಲ್ಲಿ ದಾಳಿಯಾಯಿತು.
2017 ರ ಜುಲೈನಲ್ಲಿ ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಯಿತು. 2019ರ ಫೆಬ್ರವರಿಯಲ್ಲಿ ಭಯಾನಕ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆಯಿತು. 2023ರ ಎಪ್ರಿಲ್‌ನಲ್ಲಿ ಪೂಂಚ್, ರಾಜೌರಿಯಲ್ಲಿ ದಾಳಿಯಾಯಿತು. 2024ರ ಜೂನ್‌ನಲ್ಲಿ ರಿಯಾಸಿಯಲ್ಲಿ ದಾಳಿ ನಡೆಯಿತು. ಈ ವರ್ಷದ ಮಾರ್ಚ್‌ನಲ್ಲಿ ಕಥುವಾದಲ್ಲಿ ಭಯೋತ್ಪಾದಕ ದಾಳಿಯಾಯಿತು. ಇಂತಹ ದಾಳಿಯ ನಂತರ ಸರಕಾರವನ್ನು ಪ್ರಶ್ನಿಸಹೊರಟಾಗ, ಇದು ಸೂಕ್ತ ಸಮಯವಲ್ಲ ಎಂದುಬಿಡಲಾಗುತ್ತದೆ ಮತ್ತು ಸಮಯ ಅಲ್ಲಿಗೇ ನಿಂತುಬಿಡುತ್ತದೆ.
ಇದು ಭಯೋತ್ಪಾದನೆ ವಿಷಯಕ್ಕೆ ಮಾತ್ರ ಸೀಮಿತವಾಗಿಲ್ಲ. ಯಾವುದೇ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳುವುದೇ ನಿಷಿದ್ಧ ಎನ್ನುವಂತಾಗಿದೆ.
ಕೋವಿಡ್ ಕಾಲದಲ್ಲಿ ಏನಾಯಿತೆಂಬುದು ಗೊತ್ತೇ ಇದೆ.
ಹದಗೆಟ್ಟ ಆರೋಗ್ಯ ರಕ್ಷಣಾ ವ್ಯವಸ್ಥೆ, ಆಮ್ಲಜನಕದ ಕೊರತೆ, ಮರೆಮಾಚಲಾದ ಅಧಿಕೃತ ಸಾವಿನ ಸಂಖ್ಯೆ ಹೀಗೆ ತಕರಾರೆತ್ತಲು ನೂರೆಂಟು ಕಟು ವಾಸ್ತವಗಳಿದ್ದವು. ಅದಕ್ಕೂ ಇದು ಪ್ರಶ್ನೆ ಕೇಳುವ ಸಮಯವೇ ಎಂದು ಬಿಡಲಾಯಿತು.
ಪ್ರಶ್ನಿಸುವುದನ್ನು ರಾಷ್ಟ್ರವಿರೋಧಿ ಎಂದು ಪರಿಗಣಿಸಲಾಗಿದೆ.
ರಾಷ್ಟ್ರ ಬಿಕ್ಕಟ್ಟಿನ ಹೊತ್ತಲ್ಲಿ ಇರುವಾಗ, ಎಲ್ಲರೂ ಒಟ್ಟಾಗಿ ನಿಲ್ಲಬೇಕು ಎನ್ನುವ ಮೂಲಕ ಪ್ರಶ್ನೆಗಳನ್ನು ತಪ್ಪಿಸಲಾಗುತ್ತದೆ.
ಎಷ್ಟು ಸಮಯದವರೆಗೆ ಕಾಯಬೇಕು?
ಭಯೋತ್ಪಾದಕ ದಾಳಿ ನಡೆದು, ಬಲಿಯಾದವರ ನೆನಪುಗಳು ಮಾಸುವವರೆಗೆ ಸರಕಾರವನ್ನು ಪ್ರಶ್ನಿಸಲು ಕಾಯಬೇಕೆ? ಏಕೆಂದರೆ ದಾಳಿ ಸಮಯವನ್ನು ಬಿಕ್ಕಟ್ಟಿನ ಕಾಲ ಎಂದು ಬಿಡಲಾಗುತ್ತದೆ. ಬಿಕ್ಕಟ್ಟಿನ ಕಾಲದಲ್ಲಿ ಸರಕಾರವನ್ನು ಪ್ರಶ್ನಿಸುವುದು ದೇಶಭಕ್ತಿಯಿಲ್ಲದವರ ಕೆಲಸ, ಅದು ಒಡೆಯುವ ಕೆಲಸ ಎನ್ನಲಾಗುತ್ತದೆ.
ಸತ್ಯಗಳನ್ನು ಹೇಳುತ್ತಿದ್ದರೆ ಅದು ಸರಕಾರಕ್ಕೆ ಅಪಥ್ಯವಾಗಿ, ಅಹಿತಕಾರಿಯಾಗಿ ಕಾಣಿಸತೊಡಗುತ್ತದೆ. ಸರಕಾರ ದೇಶಭಕ್ತಿ ಎಂಬ ರಕ್ಷಾ ಕವಚವನ್ನು ಮುಂದೆ ಮಾಡಿ, ಪ್ರಶ್ನಿಸುವವರನ್ನು ಮೌನವಾಗಿಸಿಬಿಡುತ್ತದೆ. ಪ್ರಶ್ನಿಸುವವರನ್ನು ಸರಕಾರವೂ ಅದರ ಭಕ್ತಪಡೆಯೂ ಸೇರಿಕೊಂಡು ದೇಶದ್ರೋಹಿಗಳು ಎನ್ನುತ್ತವೆ.
ಪ್ರಶ್ನಿಸುವವರನ್ನು ಇದು ಸೂಕ್ತ ಸಮಯ ಅಲ್ಲ ಎಂದು ತಡೆಯಲಾಗುತ್ತದೆ. ನಿಜವೇನೆಂದರೆ, ಆ ಸೂಕ್ತ ಸಮಯ ಎಂದಿಗೂ ಬರುವುದೇ ಇಲ್ಲ.
ಭಯೋತ್ಪಾದಕರು ತಪ್ಪಿಸಿಕೊಳ್ಳಲು ಅವಕಾಶ ನೀಡುವ ವೈಫಲ್ಯಗಳ ಬಗ್ಗೆ ಉತ್ತರ ಕೊಡಲಾಗುವುದಿಲ್ಲ. ನಡೆದ ತಪ್ಪುಗಳಿಂದ ಯಾವುದೇ ಪಾಠ ಕಲಿಯಲಾಗುವುದಿಲ್ಲ.
ಪಠಾಣ್‌ಕೋಟ್ ದಾಳಿಗೆ ಈಗ ಒಂಭತ್ತು ವರ್ಷ. ಉರಿ ದಾಳಿ ಕೂಡ ಅಷ್ಟೇ ಹಳೆಯದು. ಪುಲ್ವಾಮಾ ಘಟನೆಗೆ ಆರು ವರ್ಷಗಳು ಆದವು. ಹಾಗಾದರೆ, ವ್ಯವಸ್ಥಿತ ವೈಫಲ್ಯಗಳು, ಗುಪ್ತಚರ ವೈಫಲ್ಯಗಳು, ತಪ್ಪು ಪ್ರತಿಕ್ರಿಯೆಗಳ ಬಗ್ಗೆ ಪ್ರಶ್ನೆಗಳನ್ನು ಈಗ ಕೇಳಬಹುದೇ?
2016ರ ಜನವರಿಯಲ್ಲಿ ಪಠಾಣ್‌ಕೋಟ್‌ನಲ್ಲಿ ಜೈಶೆ ಮುಹಮ್ಮದ್ ಭಯೋತ್ಪಾದಕರು ಪಂಜಾಬ್‌ನ ಉನ್ನತ ಭದ್ರತಾ ವಾಯುನೆಲೆಗೆ ನುಸುಳಿದರು. ಆರು ಸೈನಿಕರು ಸಾವನ್ನಪ್ಪಿದರು, ಏಳು ಮಂದಿ ಗಾಯಗೊಂಡರು. ರಾಷ್ಟ್ರೀಯ ತನಿಖಾ ಸಂಸ್ಥೆ ವರದಿ ಸಲ್ಲಿಸಿತು. ಆದರೆ ಯಾವುದೂ ಸ್ಪಷ್ಟವಿರಲಿಲ್ಲ.
ಜಂಟಿ ತನಿಖೆಗಾಗಿ ನಾವು ಪಾಕಿಸ್ತಾನದ ಐಎಸ್‌ಐ ಅನ್ನು ಉದಾರವಾಗಿ ನಮ್ಮ ವಾಯುನೆಲೆಗೆ ಆಹ್ವಾನಿಸಿದ್ದೆವು. ಪ್ರೋಟೋಕಾಲ್‌ಗಳನ್ನು ಬಲಪಡಿಸುವ ಹೇಳಿಕೆಗಳಷ್ಟೇ ಬಂದವು.
ಎಚ್ಚರಿಕೆ ನೀಡಿದ ಬಿಎಸ್‌ಎಫ್ ಅಧಿಕಾರಿಯನ್ನು ವರ್ಗಾಯಿಸಲಾಗಿದೆಯೆ? ದಾಳಿಗೂ ಮೊದಲು ಬಂದ ಗುಪ್ತಚರ ಮಾಹಿತಿಯನ್ನು ನಿರ್ಲಕ್ಷಿಸಲಾಗಿದೆಯೇ ಅಥವಾ ತಪ್ಪಾಗಿ ನಿರ್ವಹಿಸಲಾಗಿದೆಯೇ? ನಾವು ಇನ್ನೂ ಉತ್ತರಗಳಿಗಾಗಿ ಕಾಯುತ್ತಿದ್ದೇವೆ.
ನಂತರ ಉರಿ ದಾಳಿ 2016ರ ಸೆಪ್ಟಂಬರ್‌ನಲ್ಲಿ ನಡೆಯಿತು.
ಮತ್ತೆ ಜೈಶ್ ಸಂಘಟನೆಯ ನಾಲ್ವರು ಭಯೋತ್ಪಾದಕರು ನಿಯಂತ್ರಣ ರೇಖೆಯ ಬಳಿಯ ಸೇನಾ ಶಿಬಿರಕ್ಕೆ ನುಗ್ಗಿ, ನಿದ್ರೆಯಲ್ಲಿದ್ದ 19 ಸೈನಿಕರನ್ನು ಕೊಂದರು.
ದಾಳಿಗೆ ಕೆಲ ದಿನಗಳ ಮೊದಲು ಒಳನುಸುಳುವವರ ಬಗ್ಗೆ ಗುಪ್ತಚರ ಮಾಹಿತಿಯಿತ್ತು. ಅದರ ನಂತರವೂ ಲೋಪ ನಡೆದೇ ಹೋಯಿತು. ಯಾರನ್ನೂ ಹೊಣೆಗಾರರನ್ನಾಗಿ ಮಾಡಲಾಗಿಲ್ಲ.
ಸರಕಾರ ಎಲ್‌ಒಸಿಯಾದ್ಯಂತ ಸರ್ಜಿಕಲ್ ಸ್ಟ್ರೈಕ್ ಎಂದು ಅಬ್ಬರಿಸುತ್ತ ಸಮಯ ಕಳೆಯಲಾಯಿತು. ಭಯೋತ್ಪಾದಕರು ಹಾದುಹೋಗಲು ಅವಕಾಶ ನೀಡಿದ ವೈಫಲ್ಯಗಳ ಬಗ್ಗೆ ಉತ್ತರ ಸಿಗಲಿಲ್ಲ. ವಿಚಾರಣೆ ಪಾರದರ್ಶಕವಾಗಿರಲಿಲ್ಲ. ಒಂಭತ್ತು ವರ್ಷಗಳ ನಂತರವೂ ಉತ್ತರಕ್ಕಾಗಿ ಕಾಯುತ್ತಿದ್ದೇವೆ.
2019ರ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ಆತ್ಮಹತ್ಯಾ ಬಾಂಬರ್ ಸ್ಫೋಟಕ ತುಂಬಿದ ಕಾರನ್ನು ಸಿಆರ್‌ಪಿಎಫ್ ಬೆಂಗಾವಲು ಪಡೆಯ ವಾಹನಕ್ಕೆ ಢಿಕ್ಕಿ ಹೊಡೆಸಿದ ಪರಿಣಾಮ ನಮ್ಮ 40 ಯೋಧರು ಬಲಿಯಾದರು. ಗುಪ್ತಚರ ವೈಫಲ್ಯ ಸ್ಪಷ್ಟವಾಗಿತ್ತು. ಅಂಥ ದಾಳಿಯ ಬಗ್ಗೆ ಏಜೆನ್ಸಿಗಳಿಗೆ ನಿರ್ದಿಷ್ಟ ಮಾಹಿತಿ ಇತ್ತು. ಯೋಧರು ಸಾಗಿದ್ದ ಮಾರ್ಗ ಅಸುರಕ್ಷಿತವಾಗಿತ್ತು. ಅಲ್ಲಿ ಕಡಿಮೆ ರಕ್ಷಣೆಯಿತ್ತು. ಯಾವುದೇ ವೈಮಾನಿಕ ಕಣ್ಗಾವಲು ಇರಲಿಲ್ಲ. ಸಿಆರ್‌ಪಿಎಫ್ ರಸ್ತೆಯ ಮೂಲಕ ಹೋಗುವ ಬದಲು ವಿಮಾನದ ಮೂಲಕ ಕರೆದೊಯ್ಯಲು ಕೇಳಿತ್ತು. ಆದರೆ ಆ ಮನವಿಯನ್ನು ನಿರಾಕರಿಸಲಾಗಿತ್ತು. ನಂತರ ಆದದ್ದೇನು?
ಬಾಲಾಕೋಟ್ ಮೇಲೆ ವಾಯುದಾಳಿಯಾಯಿತು. ರಾಷ್ಟ್ರೀಯ ಕೋಪದ ಅಲೆಯನ್ನು ಬಳಸಿ ಬಿಜೆಪಿ ಚುನಾವಣೆ ಗೆದ್ದಿತು.
ಪುಲ್ವಾಮಾದಲ್ಲಿ ಬೆಂಗಾವಲು ಪಡೆಯ ಮಾರ್ಗ ಏಕೆ ಬದಲಾಯಿಸಲಿಲ್ಲ? ಗುಪ್ತಚರ ಮಾಹಿತಿ ಇದ್ದರೂ ಅದರ ಆಧಾರದಲ್ಲಿ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂಬ ಎಲ್ಲ ಪ್ರಶ್ನೆಗಳು ಗದ್ದಲದಲ್ಲಿ ಹೂತುಹೋಗಿದ್ದವು.
ಆಗಿನ ಜಮ್ಮು-ಕಾಶ್ಮೀರ ಗವರ್ನರ್ ಸತ್ಯಪಾಲ್ ಮಲಿಕ್, ಪುಲ್ವಾಮಾ ಘಟನೆ ಒಂದು ದೊಡ್ಡ ಗುಪ್ತಚರ ವೈಫಲ್ಯ ಮತ್ತು ಮೋದಿ ಮತ್ತು ಅಜಿತ್ ದೋವಲ್ ಅದರ ಬಗ್ಗೆ ಮಾತನಾಡಬೇಡಿ ಎಂದು ಹೇಳಿದ್ದರೆಂದು ಆನಂತರ ಹೇಳಿದ್ದರು. ಸರಕಾರದ ಯಾರೂ ಅವರ ಹೇಳಿಕೆಯನ್ನು ನಿರಾಕರಿಸಿಲ್ಲ. ಆದರೂ ಮಲಿಕ್ ಮನೆಯ ಮೇಲೆ ದಾಳಿ ಮಾಡಲು ಸಿಬಿಐಯನ್ನು ಅದೇ ಜನ ಕಳಿಸಿದ್ದರು.
ಪುಲ್ವಾಮಾ ದಾಳಿಯಾಗಿ ಆರು ವರ್ಷಗಳೇ ಆಗಿವೆ. ಈ ದೇಶದ 40 ಕುಟುಂಬಗಳು ತಮ್ಮ ಮಕ್ಕಳನ್ನು ಏಕೆ ಕಳೆದುಕೊಂಡರು ಎಂದು ಕೇಳಲು ಸೂಕ್ತ ಸಮಯ ಇನ್ನೂ ಬಂದಂತಿಲ್ಲ.
ಭಯೋತ್ಪಾದಕ ದಾಳಿ ನಡೆಯುತ್ತದೆ. ಸರಕಾರ ದೇಶದ ಆಕ್ರೋಶವನ್ನೇ ರಕ್ಷಾಕವಚದಂತೆ ಧರಿಸುತ್ತದೆ. ತ್ವರಿತ ಕ್ರಮದ ಭರವಸೆ ನೀಡುತ್ತದೆ ಮತ್ತು ಒಗ್ಗಟ್ಟಿನ ಬಗ್ಗೆ ಒತ್ತಾಯಿಸುತ್ತದೆ.
ಪ್ರಶ್ನಿಸುವವರನ್ನು ವಿಶ್ವಾಸದ್ರೋಹ ಎಂದು ಬ್ರಾಂಡ್ ಮಾಡಲಾಗುತ್ತದೆ. ಸೂಕ್ತ ಸಮಯ ಬಂದಾಗ ಎಲ್ಲವನ್ನು ಹೇಳಲಾಗುವುದು ಎನ್ನಲಾಗುತ್ತದೆ.
ಮತ್ತು ಆ ಸೂಕ್ತ ಸಮಯ ಎಂದಿಗೂ ಬರುವುದೇ ಇಲ್ಲ.
ಸಮಯ ಸರಿದಂತೆ ಜನರು ಎಲ್ಲವನ್ನೂ ಮರೆಯುತ್ತಾರೆ ಎಂಬುದರ ಬಗ್ಗೆ ಈ ಸರಕಾರಕ್ಕೆ ಅಪಾರ ನಂಬಿಕೆಯಿದೆ.
‘Thewire’ನಲ್ಲಿ ಪ್ರಕಟಿತ ಪ್ರೇಮ್ ಪಣಿಕ್ಕರ್ ಅವರ ಲೇಖನ ಆಧಾರಿತ







