ದ್ವೇಷ ರಾಜಕೀಯದ ಈ ಮಾದರಿ ದೇಶವನ್ನು ಎಲ್ಲಿಗೆ ತಲುಪಿಸಲಿದೆ?

2016ರ ಎಪ್ರಿಲ್ 19ರಂದು ಜಮ್ಮುವಿನ ಶ್ರೀ ಮಾತಾ ವೈಷ್ಣೋದೇವಿ ನಾರಾಯಣ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಆಸ್ಪತ್ರೆಯಲ್ಲಿನ ಉತ್ತಮ ಸೌಲಭ್ಯಗಳ ಬಗ್ಗೆ ಹೊಗಳಿದ್ದರು.
ಆದರೆ ಈಗ ಅದೇ ಆಸ್ಪತ್ರೆಯ ಮಾನ್ಯತೆ ರದ್ದುಗೊಳಿಸಿ, ಎಂಬಿಬಿಎಸ್ ಕೋರ್ಸ್ ನೀಡಲು ಅನುಮತಿ ನಿರಾಕರಿಸಲಾಗಿದೆ. ಮೂಲಸೌಕರ್ಯವಿಲ್ಲ ಎಂಬ ಆರೋಪ ಮುಂದೆ ಮಾಡಲಾಗಿದೆ.
ಹಾಗಾದರೆ, ಅವತ್ತು ಪ್ರಧಾನಿ ಹೇಳಿರುವುದು ಸುಳ್ಳೇ ಅಥವಾ ಈಗ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಸುಳ್ಳು ಹೇಳುತ್ತಿದೆಯೆ?
ಇಷ್ಟಾದ ಮೇಲೆಯೂ ಇದರ ಬಗ್ಗೆ ಪ್ರಧಾನಿ ಒಂದೇ ಒಂದು ಮಾತಾಡಿಲ್ಲ. ಏಕೆಂದರೆ ಕೋರ್ಸ್ ಅನ್ನು ನಿಲ್ಲಿಸಲು ಒತ್ತಾಯಿಸಿ ಯಶಸ್ವಿಯಾದ ಜನರು ಅವರದೇ ಪರಿವಾರದವರು.
ಕೋರ್ಸ್ ರದ್ದಾದಾಗ, ಕಾಲೇಜು ದ್ವಾರದಲ್ಲಿ ನೃತ್ಯ ನಡೆಸಿ ಸಂಭ್ರಮಿಸ ಲಾಯಿತು. ಸಿಹಿ ಹಂಚಲಾಯಿತು. ಏನನ್ನೊ ಸಾಧಿಸಿಬಿಟ್ಟಿದ್ದೇವೆ ಎಂಬಂತೆ ಅವರು ಕುಣಿದಾಡುತ್ತಿದ್ದರು.
‘‘ಅವರನ್ನು ನೋಡುತ್ತಿದ್ದರೆ, ಭಾರತದ ಎಲ್ಲಾ ವೈದ್ಯಕೀಯ ಕಾಲೇಜುಗಳನ್ನು ಮುಚ್ಚಿ ಗೇಟ್‌ನಲ್ಲಿ ನೃತ್ಯ ಮಾಡಲು ತಯಾರಾದವರಂತೆ ಕಾಣುತ್ತಾರೆ’’ ಎಂದು ರವೀಶ್ ಕುಮಾರ್ ವ್ಯಂಗ್ಯವಾಗಿ ಹೇಳುತ್ತಾರೆ.
ಮುಸ್ಲಿಮ್ ವಿದ್ಯಾರ್ಥಿಗಳು ಅಲ್ಲಿ ಓದುತ್ತಿದ್ದಾರೆ ಎಂಬ ಕಾರಣಕ್ಕಾಗಿ ಅವರು ಕಾಲೇಜುಗಳನ್ನು ಮುಚ್ಚಿಸುತ್ತಾರೆ. ಆದರೆ ಗೋವಿನ ಸಗಣಿಯ ಮೇಲಿನ ಸಂಶೋಧನೆ ಏನಾಯಿತು ಎಂಬುದರ ಬಗ್ಗೆ ಇವರಾರೂ ಮಾತಾಡುವುದಿಲ್ಲ.
2011ರಲ್ಲಿ ಮಧ್ಯಪ್ರದೇಶ ಸರಕಾರ ಪಂಚಗವ್ಯ ಎಂಬ ಯೋಜನೆ ಪ್ರಾರಂಭಿಸಿತು.
ನಾನಾಜಿ ದೇಶಮುಖ್ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾನ್ಸರ್ ಮತ್ತು ಕ್ಷಯದಂಥ ರೋಗಗಳ ಕುರಿತು ಹಸುವಿನ ಸೆಗಣಿ, ಮೂತ್ರ ಮತ್ತು ಹಾಲು ಬಳಸಿ ಸಂಶೋಧನೆ ಮಾಡುವ ಹೆಸರಿನಲ್ಲಿ ಸರಕಾರದಿಂದ 8 ಕೋಟಿ ರೂ. ಕೇಳಿತು. ಆದರೆ, ರೂ. 3.5 ಕೋಟಿಗೆ ಅನುಮೋದನೆ ನೀಡಲಾಯಿತು.
ರೂ. 3.5 ಕೋಟಿಯಲ್ಲಿ 1.9 ಕೋಟಿಯನ್ನು ಸೆಗಣಿ, ಮೂತ್ರ, ಪಾತ್ರೆಗಳು ಮತ್ತು ಇತರ ಸಣ್ಣ ವಸ್ತುಗಳನ್ನು ಖರೀದಿಸಲು ಖರ್ಚು ಮಾಡಲಾಗಿದೆ ಎನ್ನಲಾಯಿತು. ಆದರೆ ತನಿಖೆ ನಡೆದಾಗ ಏನೂ ಇರಲಿಲ್ಲ. ಹಾಗಾದರೆ ಸಂಶೋಧನೆಯ ಹೆಸರಿನಲ್ಲಿ ಆದದ್ದೇನು?
ಶ್ರೀ ಮಾತಾ ವೈಷ್ಣೋ ದೇವಿ ಕಾಲೇಜಿನ ಮಾನ್ಯತೆ ರದ್ದುಗೊಳಿಸಿದ ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ನಿರ್ಧಾರವನ್ನು ಸನಾತನ ಧರ್ಮದ ಗೆಲುವು ಎಂದು ಹೇಳಿಕೊಳ್ಳಲಾಗುತ್ತಿದೆ.
ಎಂಬಿಬಿಎಸ್ ಕೋರ್ಸ್ ಅನ್ನು ರದ್ದುಗೊಳಿಸ ಲಾಯಿತು ಎಂಬುದು ಸನಾತನ ಧರ್ಮದ ವಿಜಯವೇ?
ಮುಸ್ಲಿಮ್ ವಿದ್ಯಾರ್ಥಿಗಳಿಗೆ ಪ್ರವೇಶ ಸಿಕ್ಕಿದೆ ಎಂಬ ಕಾರಣದಿಂದಾಗಿ ಪ್ರತಿಭಟನೆಗಳು ಎಷ್ಟು ಜೋರಾದವೆಂದರೆ, ಅದೇ ಕಾಲೇಜಿನಲ್ಲಿ ಹಿಂದೂ ಮತ್ತು ಸಿಖ್ ವಿದ್ಯಾರ್ಥಿಗಳು ಸಹ ಪ್ರವೇಶ ಪಡೆದಿದ್ದಾರೆ ಎಂಬುದನ್ನು ಮರೆತೇಬಿಡಲಾಯಿತು.
ಇಷ್ಟೊಂದು ಮುಸ್ಲಿಮ್ ವಿದ್ಯಾರ್ಥಿಗಳಿಗೆ ಹೇಗೆ ಪ್ರವೇಶ ಸಿಕ್ಕಿತು ಎಂಬುದು ಬಿಜೆಪಿಯ ಆಕ್ಷೇಪವಾಗಿತ್ತು. ಹೆಚ್ಚು ಮುಸ್ಲಿಮ್ ವಿದ್ಯಾರ್ಥಿಗಳ ಪ್ರವೇಶದಿಂದ ಇತರ ವಿದ್ಯಾರ್ಥಿಗಳ ಬಗ್ಗೆ ತಾರತಮ್ಯವಾಗುತ್ತದೆ. ಆದ್ದರಿಂದ ಹಿಂದೂ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಬೇಕು ಎನ್ನಲಾಯಿತು.
ಈ ಕಾಲೇಜು ಮುಸ್ಲಿಮ್ ಬಹುಸಂಖ್ಯಾತ ಸರಕಾರದಿಂದ ಹಣ ಪಡೆಯುವುದಿಲ್ಲ ಎಂದು ಸಹ ಹೇಳಲಾಯಿತೆಂಬ ವರದಿಗಳಿವೆ.
ಜಮ್ಮು-ಕಾಶ್ಮೀರ ಸರಕಾರ ಈ ಕಾಲೇಜಿಗೆ 121 ಕೋಟಿ ರೂ. ನೀಡಿದೆ. ಆ ಸರಕಾರವನ್ನು ಮುಸ್ಲಿಮ್ ಸರಕಾರ ಎಂದು ಹೇಳಲಾಯಿತು.
ರಾಜ್ಯ ಸರಕಾರ ಹಲವು ವರ್ಷಗಳಿಂದ ಕಾಲೇಜಿಗೆ ಅನುದಾನ ನೀಡುತ್ತಿತ್ತು. ಆಗ, ಅದು ಮುಸ್ಲಿಮ್ ಸರಕಾರ ಎನ್ನಿಸಲಿಲ್ಲ. ಆದರೆ ಮುಸ್ಲಿಮ್ ವಿದ್ಯಾರ್ಥಿಗಳು ನೀಟ್ ಮೂಲಕ ಪ್ರವೇಶ ಪಡೆದ ತಕ್ಷಣ, ಗದ್ದಲ ಎದ್ದಿತು.
ಇದು ದ್ವೇಷ ರಾಜಕೀಯ ಹಿಡಿದಿರುವ ಹಾದಿ ಎಂಥದು ಎಂಬುದನ್ನು ತೋರಿಸುತ್ತದೆ.
ವೈದ್ಯರಿಲ್ಲದ, ಸಾಕಷ್ಟು ಯೋಗ್ಯ ಸರಕಾರಿ ವೈದ್ಯಕೀಯ ಕಾಲೇಜುಗಳಿಲ್ಲದ ಮತ್ತು ಆಸ್ಪತ್ರೆಗಳಿಲ್ಲದ ದೇಶದಲ್ಲಿ, 50 ವಿದ್ಯಾರ್ಥಿಗಳಲ್ಲಿ 44 ಜನರು ಮುಸ್ಲಿಮರಾಗಿದ್ದರಿಂದ ಕಾಲೇಜಿನ ಮೊದಲ ಬ್ಯಾಚ್ ಅನ್ನು ರದ್ದುಗೊಳಿಸಲಾಯಿತು.
ಆ 44 ಮುಸ್ಲಿಮ್ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಸೀಟು ಗಳಿಸಿದ್ದರು. ಆದರೆ ಅದು ದ್ವೇಷಕೋರರಿಗೆ ಕಾಣಲಿಲ್ಲ. ಅವರಿಗೆ ವೈಷ್ಣೋದೇವಿ ವೈದ್ಯಕೀಯ ಕಾಲೇಜಿನಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಹೇಗೆ ಕಲಿಯುತ್ತಾರೆ ಎಂಬ ಅಸಹನೆ ಕಾಡಿತು.
ಈ ದ್ವೇಷ ರಾಜಕೀಯ ದೇಶವನ್ನು ಯಾವ ಹಂತಕ್ಕೆ ತಂದು ನಿಲ್ಲಿಸಿದೆ? ಇನ್ನೂ ಎಲ್ಲಿಗೆ ಇದು ದೇಶವನ್ನು ತಲುಪಿಸಲಿದೆ?
ನವೆಂಬರ್‌ನಲ್ಲಿ ಕಾಲೇಜಿನ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಾಗ, ಜಮ್ಮು- ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ‘‘ನೀವು ಧರ್ಮದ ಆಧಾರದ ಮೇಲೆ ಪ್ರವೇಶ ನೀಡಲು ಬಯಸಿದರೆ, ಸಂವಿಧಾನದಿಂದ ಜಾತ್ಯತೀತ ಪದ ತೆಗೆದುಹಾಕಿ’’ ಎಂದು ಹೇಳಿದ್ದರು.
ಕಾಲೇಜಿಗೆ ಪ್ರವೇಶ ನೀಟ್ ಮತ್ತಿತರ ಪರೀಕ್ಷೆಗಳನ್ನು ಆಧರಿಸಿತ್ತೇ ಹೊರತು ಧರ್ಮವನ್ನು ಆಧರಿಸಿಲ್ಲ. ಹಾಗಿದ್ದಲ್ಲಿ, ಕಾಲೇಜು ಸ್ಥಾಪನೆಯಾದಾಗ ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕಿತ್ತು ಎಂಬುದು ಉಮರ್ ಅಬ್ದುಲ್ಲಾ ಅವರ ವಾದವಾಗಿತ್ತು.
ಕಡೆಗೆ ಸಂಘಪರಿವಾರದ ಪ್ರತಿಭಟನೆಗೆ ಸರಕಾರ ಮಣಿಯಿತು. ಕೋರ್ಸ್ ರದ್ದಾಯಿತು.
ಹಿಂದೂ ರಾಷ್ಟ್ರ ರಾಜಕೀಯಕ್ಕೆ ಇದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ.
ಎಲ್ಲಾ ವೈದ್ಯಕೀಯ ಕಾಲೇಜುಗಳು ಮುಚ್ಚಲ್ಪಟ್ಟರೆ, ಯಾರೂ ವೈದ್ಯನಾಗಲು ಸಾಧ್ಯವಾಗುವುದಿಲ್ಲ. ದ್ವೇಷ ಚಿಂತನೆ ಎಲ್ಲಿಗೆ ಬೇಕಾದರೂ ಕರೆದೊಯ್ಯಬಹುದು.
ರಾಷ್ಟ್ರೀಯ ವೈದ್ಯಕೀಯ ಆಯೋಗ ಮಂಡಿಸಿದ ವಾದವೇ ದೋಷಪೂರಿತವಾಗಿದೆ.
ಕೋರ್ಸ್ ಅನ್ನು ನಿಲ್ಲಿಸಿದ ತಪಾಸಣೆ ಒಂದು ಪ್ರಹಸನ ಎಂದು ಕಾಲೇಜು ಅಧ್ಯಾಪಕರು ಹೇಳಿದ್ದಾರೆ.
ಕಾಲೇಜಿಗೆ ತಯಾರಿ ಮಾಡಲು ಕೇವಲ 15 ನಿಮಿಷಗಳ ಕಾಲಾವಕಾಶ ನೀಡಲಾಯಿತು. ತಪಾಸಣೆ ಪೂರ್ವ ಯೋಜಿತ ವ್ಯವಹಾರದಂತೆ ತೋರುತ್ತಿತ್ತು. ತಪಾಸಣೆಯ ನಾಲ್ಕು ದಿನಗಳ ನಂತರ, ಕೋರ್ಸ್ ಅನುಮತಿ ರದ್ದುಪಡಿಸಲಾಯಿತು.
ಕಳಪೆ ಮೂಲಸೌಕರ್ಯ, ಅಧ್ಯಾಪಕರು ಮತ್ತು ಕ್ಲಿನಿಕಲ್ ಉಪಕರಣಗಳ ಕೊರತೆ ಕಾರಣಗಳನ್ನು ಉಲ್ಲೇಖಿಸಲಾಗಿದೆ.
ಶೇ. 39 ಅಧ್ಯಾಪಕರು ಇಲ್ಲ ಎಂಬುದು ವಾದ. ಆದರೆ ಈ ಆಧಾರದ ಮೇಲೆ ದೇಶದ ಅನೇಕ ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ.
ಈ ವರ್ಷ ದೇಶಾದ್ಯಂತ 11 AIIMS ಗಳಲ್ಲಿ ಶೇ. 40 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸರಕಾರ ಹೇಳಿದೆ.
10ರಲ್ಲಿ ನಾಲ್ಕು ಹುದ್ದೆಗಳು ಖಾಲಿ ಇವೆ.
ದಿಲ್ಲಿಯ AIIMSನಲ್ಲಿ ಶೇ. 35 ಹುದ್ದೆಗಳು ಖಾಲಿ ಇವೆ ಎಂದು ಆರ್‌ಟಿಐ ಬಹಿರಂಗಪಡಿಸಿದೆ.
ಮಧ್ಯಪ್ರದೇಶದಲ್ಲಿ 19 ಸರಕಾರಿ ವೈದ್ಯಕೀಯ ಕಾಲೇಜುಗಳಿವೆ, ಆದರೆ ಕೇವಲ 7ರಲ್ಲಿ ಸಾಕಷ್ಟು ಬೋಧಕರಿದ್ದಾರೆ. 12 ಕಾಲೇಜುಗಳು ಬೋಧಕರ ತೀವ್ರ ಕೊರತೆ ಎದುರಿಸುತ್ತಿವೆ.
ಸಾಗರ್ ಮತ್ತು ಛಿಂದ್ವಾರಾ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 50 ಹುದ್ದೆಗಳು ಖಾಲಿ ಇವೆ.
ಶಿವಪುರ ಮತ್ತು ಸಿಂಗೋಲಿಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಆದರೆ ಅಲ್ಲಿನ ಶೇ. 90 ಹುದ್ದೆಗಳು ಖಾಲಿ ಇವೆ.
ಆದರೆ ವೈಷ್ಣೋದೇವಿ ಕಾಲೇಜಿನ ವಿಷಯದಲ್ಲಿ ಮಾತ್ರ ಬೋಧಕರ ಕೊರತೆ ದೊಡ್ಡ ಲೋಪವಾಗಿ ಕಾಣುತ್ತದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳುವ ಪ್ರಕಾರ, ತನಿಖೆಯನ್ನು ತರಾತುರಿಯಲ್ಲಿ ನಡೆಸಲಾಗಿದೆ. ಕಾಲೇಜಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿಲ್ಲ.
ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಆರೋಗ್ಯ ಸಚಿವಾಲಯದ ಮುಂದೆ ಎರಡು ಮೇಲ್ಮನವಿಗಳನ್ನು ಸಲ್ಲಿಸಲು ಅವಕಾಶವಿದೆ.
ಹೀಗೆ ಮಾನ್ಯತೆ ರದ್ದುಗೊಳಿಸಿ ಸಂಭ್ರಮಿಸುವಾಗ, ಎಲ್ಲರಂತೆ ತಯಾರಿ ನಡೆಸಿದ್ದ 44 ಮುಸ್ಲಿಮ್ ವಿದ್ಯಾರ್ಥಿಗಳ ಬಗ್ಗೆಯೂ ಯೋಚಿಸಬೇಕಲ್ಲವೆ?
ಅವರು ಒಂದು ವರ್ಷ ಅಧ್ಯಯನ ಮಾಡಿರಬೇಕು. ಅವರು ಕಷ್ಟಕರವಾದ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಆಗ ಮಾತ್ರ ಅವರಿಗೆ ಪ್ರವೇಶ ಸಿಕ್ಕಿತು.
ಆದರೆ ಕಾಲೇಜು ಗೇಟ್‌ನಲ್ಲಿ ನೃತ್ಯ ಮಾಡುವವರ ಮನಸ್ಸು ಧಾರ್ಮಿಕ ರಾಜಕೀಯದಿಂದ ಭ್ರಷ್ಟಗೊಂಡಿತ್ತು.
ಜಮ್ಮು ಕಾಲೇಜಿನ ವಿಷಯವಾಗಿ ಏನಾಯಿತು ಎಂಬುದು ಖಂಡಿತವಾಗಿಯೂ ನಾಚಿಕೆಗೇಡಿನ ಸಂಗತಿ. ಇದನ್ನು ಅರ್ಥಮಾಡಿಕೊಳ್ಳದಿದ್ದರೆ, ಅದು ಅತ್ಯಂತ ವಿಷಾದಕರ.







