ಕನ್ನಾಟ್ ಪ್ಲೇಸ್ನಲ್ಲಿ ಪ್ರತಿಭಟನಾಕಾರರನ್ನು ಬೆದರಿಸಿ ಪುಂಡಾಟಿಕೆ ನಡೆಸುತ್ತಿದ್ದ ವ್ಯಕ್ತಿಗಳು ಯಾರು?
ಪ್ರತೀಕ್ ಗೋಯಲ್, ಅವಧೇಶ್ ಕುಮಾರ್, ಬಸಂತ್ ಕುಮಾರ್ - newslaundry. com ವರದಿ

Photo Credit : newslaundry.com
ಅಕ್ಟೋಬರ್ 11ರ ಸಂಜೆ, ಕನ್ನಾಟ್ ಪ್ಲೇಸ್ ಮೆಟ್ರೊ ನಿಲ್ದಾಣದ 7ನೇ ಗೇಟ್ ಬಳಿ 'UP14-HA-4945' ನೋಂದಣಿ ಸಂಖ್ಯೆಯ ಬಿಳಿ ಬಣ್ಣದ Maruti Suzuki Fronx ಕಾರು ಸುಮಾರು ಎರಡು ಗಂಟೆಗಳ ಕಾಲ ನಿಂತಿತ್ತು. ಅದರೊಳಗೆ ನಾಲ್ವರು ವ್ಯಕ್ತಿಗಳಿದ್ದರು. ಕಾರಿನೊಳಗೆ ಲಾಠಿಗಳಿರುವುದನ್ನು 'ನ್ಯೂಸ್ಲಾಂಡ್ರಿ' ವರದಿಗಾರರು ಗಮನಿಸಿದ್ದರು.
ವರದಿಗಾರರು ಸ್ಥಳದಲ್ಲಿದ್ದ ಪೊಲೀಸರಿಗೆ ಈ ಬಗ್ಗೆ ಎಚ್ಚರಿಕೆ ನೀಡಿ, ಕಾರನ್ನು ಪರಿಶೀಲಿಸುವಂತೆ ಪದೇ ಪದೇ ಮನವಿ ಮಾಡಿದರು. ಆದರೆ ಪೊಲೀಸರು ಅದನ್ನು ಪರಿಶೀಲಿಸಲಿಲ್ಲ. ಬದಲಾಗಿ, ಕಾರಿಗೆ ರಕ್ಷಣೆ ನೀಡಿ, ಅದು ಅಲ್ಲಿಂದ ತೆರಳಲು ಸಹಾಯ ಮಾಡಿದರು.
ಆದರೆ, ಕಾರನ್ನು ಪರಿಶೀಲಿಸಲಾಗಿದೆ, "ಸಂಬಂಧಪಟ್ಟ ವ್ಯಕ್ತಿಯ ಹಿನ್ನೆಲೆಯನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ" ಮತ್ತು ಆತನಿಗೆ "ಯಾವುದೇ ಅಪರಾಧ ದಾಖಲೆಗಳಿಲ್ಲ" ಎಂದು ದಿಲ್ಲಿ ಪೊಲೀಸ್ ಇಲಾಖೆ ನಂತರ ಹೇಳಿಕೆ ನೀಡಿದೆ. ಮತ್ತೊಂದೆಡೆ, ಅದೇ ದಿನ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ವಾಹನದಿಂದ ಮರದ ಲಾಠಿಗಳನ್ನು ಹೊರತೆಗೆಯುತ್ತಿರುವುದನ್ನು ತೋರಿಸುವ ವಿಡಿಯೊವೊಂದನ್ನು 'ನ್ಯೂಸ್ಲಾಂಡ್ರಿ' ಪರಿಶೀಲಿಸಿದೆ.
ವಾಸ್ತವವಾಗಿ, ಕಳೆದ ಎರಡು ದಿನಗಳಲ್ಲಿ 'ನ್ಯೂಸ್ಲಾಂಡ್ರಿ' ವಿಡಿಯೊಗಳು, ಫೋಟೊಗಳು ಮತ್ತು ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳನ್ನು ವಿಶ್ಲೇಷಿಸಿದೆ. ಕಾರಿನ ಸುತ್ತಮುತ್ತಲಿದ್ದ ಪುಂಡರು ಒಂದು ಗುಂಪಿಗೆ ಸೇರಿದವರಾಗಿದ್ದಾರೆ. ಈ ಹಿಂದೆ ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗಕ್ಕೆ ಬಹಿರಂಗವಾಗಿ ಕರೆ ನೀಡಿದ್ದ ಮತ್ತು ಕೆಲ ಸಂದರ್ಭಗಳಲ್ಲಿ ಹಿಂಸಾಚಾರದಲ್ಲೂ ತೊಡಗಿಸಿಕೊಂಡಿದ್ದ ಗುಂಪು ಇದಾಗಿದೆ. ಅಚ್ಚರಿಯ ಸಂಗತಿಯೆಂದರೆ, ವಾರಾಂತ್ಯದಲ್ಲಿ ಪೊಲೀಸರು ಪ್ರತಿಭಟನಾಕಾರರು ಮತ್ತು ಪತ್ರಕರ್ತರ ಮೇಲೆ ತೀವ್ರ ನಿಗಾ ಇರಿಸಿ, ಅವರನ್ನು ವಶಕ್ಕೆ ಪಡೆಯುತ್ತಿದ್ದರೂ, ಈ ಗುಂಪಿನ ಸದಸ್ಯರು ಅಂತಹ ಕ್ರಮಕ್ಕೆ ಒಳಗಾಗಿರಲಿಲ್ಲ.
ಕಾರಿನ ಮಾಲೀಕ ಗೌರವ್ ಪಾಂಡೆ ಗಾಝಿಯಾಬಾದ್ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದಾರೆ. ಪ್ರತಿಭಟನಾಕಾರರನ್ನು ಪದೇ ಪದೇ ಬೆದರಿಸಿದ ಕನ್ನಾಟ್ ಪ್ಲೇಸ್ ನ ಅದೇ ರಸ್ತೆಯಲ್ಲಿ ಅವರ ಕಚೇರಿಯ ವಿಳಾಸವಿದೆ.
ಈಗ ಕಾರಿನಲ್ಲಿದ್ದ ನಾಲ್ವರಲ್ಲಿ ಇಬ್ಬರು ಏನು ಮಾಡಿದರು ಎಂಬುದನ್ನು ನೋಡೋಣ. ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಬಿಳಿ ಅಂಗಿ ಧರಿಸಿದ ವ್ಯಕ್ತಿಯೊಬ್ಬರು, ನಂತರ ಕಾರನ್ನು ಹೋಗಲು ಬಿಟ್ಟ ಪೊಲೀಸರೊಂದಿಗೆ ಮಾತನಾಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಹಾಗೆಯೇ, ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಕಂದು ಬಣ್ಣದ ಟಿ-ಶರ್ಟ್ ಧರಿಸಿದ ಯುವಕನೊಬ್ಬ ಕಾರಿನಿಂದ ಲಾಠಿಗಳನ್ನು ಹೊರತೆಗೆದು, ಅವುಗಳಿಂದ ಪ್ರತಿಭಟನಾಕಾರರಿಗೆ ಬೆದರಿಕೆ ಹಾಕುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಕಾರಿನ ಮಾಲೀಕ ಗೌರವ್ ಪಾಂಡೆ ಜೊತೆಗೆ ಈ ವ್ಯಕ್ತಿಯೂ ಕೆಲವು ದಿನಗಳ ಹಿಂದೆ ಅದೇ ಸ್ಥಳದಲ್ಲಿದ್ದ ಮತ್ತೊಂದು ಗುಂಪಿನಲ್ಲಿದ್ದನು.
ಕಳೆದ ವಾರ ಆ ಗುಂಪಿನ ನೇತೃತ್ವವನ್ನು ಬಿಜೆಪಿ ಕಿಸಾನ್ ಮೋರ್ಚಾದ ಪದಾಧಿಕಾರಿಗಳಾದ ಇಂದ್ರೇಶ್ ದ್ವಿವೇದಿ ಮತ್ತು ಸಂದೀಪ್ ದೇಧಾ ವಹಿಸಿದ್ದರು. ಪೊಲೀಸರೇ ಪ್ರತಿಭಟನಾಕಾರರನ್ನು ಥಳಿಸಬೇಕೆಂದು ಅವರೂ ಸೇರಿದಂತೆ ಎಲ್ಲರೂ ಘೋಷಣೆ ಕೂಗಿದ್ದರು.
ಕಾರಿನ ಮಾಲೀಕರು ಏನು ವ್ಯವಹಾರ ಮಾಡುತ್ತಾರೆ?
ಈ ಕಾರು ಗೌರವ್ ಪಾಂಡೆ ಹೆಸರಿನಲ್ಲಿ ನೋಂದಣಿಯಾಗಿದೆ. ಅವರು ತಮ್ಮ ಕಿರಿಯ ಸಹೋದರ ಜೈ ಕಿಶನ್ ಪಾಂಡೆ ಜೊತೆಗೂಡಿ 'ಪಾಂಡೆ ರಿಯಲ್ ಎಸ್ಟೇಟ್ ಏಜೆನ್ಸಿ' ನಡೆಸುತ್ತಿದ್ದಾರೆ. ಅವರ ವಿಸಿಟಿಂಗ್ ಕಾರ್ಡ್ನಲ್ಲಿ ಕನ್ನಾಟ್ ಪ್ಲೇಸ್ನ ಮಿಡಲ್ ಸರ್ಕಲ್ನಲ್ಲಿರುವ M-61 ವಿಳಾಸವನ್ನು ನಮೂದಿಸಲಾಗಿದೆ. ಇದು ಫ್ಯಾಬ್ಇಂಡಿಯಾ ಮತ್ತು ಸ್ಟಾರ್ಬಕ್ಸ್ಗಳ ಸಮೀಪದಲ್ಲಿದೆ.
ಮಂಗಳವಾರ 'ನ್ಯೂಸ್ಲಾಂಡ್ರಿ' M-61 ವಿಳಾಸಕ್ಕೆ ಭೇಟಿ ನೀಡಿದಾಗ, ಅಲ್ಲಿ ರಿಯಲ್ ಎಸ್ಟೇಟ್ ಕಚೇರಿಯ ಬದಲಿಗೆ ಬಟ್ಟೆ ಅಂಗಡಿಯೊಂದು ಕಂಡುಬಂತು. ಆ ಅಂಗಡಿಯ ಮಾಲೀಕರು ತಾವು ದಶಕಗಳಿಂದ ಅದೇ ವಿಳಾಸದಲ್ಲಿ ಅಂಗಡಿ ನಡೆಸುತ್ತಿದ್ದು, ಪಾಂಡೆ ಎಂಬುವವರು ಯಾರೆಂದು ತಮಗೆ ತಿಳಿದಿಲ್ಲ ಎಂದು ಹೇಳಿದರು.
ಪ್ರತಿಭಟನೆಗೂ ಮುನ್ನ ಪೊಲೀಸರ ಪರವಾಗಿ ಘೋಷಣೆಗಳನ್ನು ಕೂಗಲಾಗಿದ್ದು, ಅಕ್ಟೋಬರ್ 10 ಮತ್ತು 11ರಂದು ಹೆಚ್ಚಿನ ಬೆದರಿಕೆಗಳು ನಡೆದಿದ್ದೂ ಕನ್ನಾಟ್ ಪ್ಲೇಸ್ ನ ಇದೇ ನಿರ್ದಿಷ್ಟ ಪ್ರದೇಶದಲ್ಲಿ.
ಅಕ್ಟೋಬರ್ 11ರ ಸಂಜೆ, ಬಿಳಿ ಬಣ್ಣದ ಫ್ರಾಂಕ್ಸ್ ಕಾರಿನ ಹಿಂಬದಿಯ ಎಡಬಾಗಿಲಿಗೆ ಗೌರವ್ ಪಾಂಡೆ ಬಡಿಯುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಮತ್ತೊಂದು ವಿಡಿಯೊದಲ್ಲಿ ಅವರು ಇತರ ಕೆಲವರೊಂದಿಗೆ ಸೇರಿ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.
ತಮ್ಮ ಕಾರಿನಲ್ಲಿ ಲಾಠಿಗಳು ಪತ್ತೆಯಾದ ವಿಚಾರವಾಗಿ 'ನ್ಯೂಸ್ಲಾಂಡ್ರಿ' ಗೌರವ್ ಪಾಂಡೆ ಅವರನ್ನು ಸಂಪರ್ಕಿಸಿತು. ತಾವು ಕಾರ್ಯನಿರತವಾಗಿರುವುದಾಗಿ ಮತ್ತು ಮರಳಿ ಕರೆ ಮಾಡುವುದಾಗಿ ಅವರು ತಿಳಿಸಿದರು. ಆದರೆ, ವರದಿ ಪ್ರಕಟವಾಗುವಷ್ಟರಲ್ಲಿ ಅವರು ಮರಳಿ ಕರೆ ಮಾಡಿರಲಿಲ್ಲ.
*ಲಾಠಿಗಳೊಂದಿಗೆ ಇದ್ದ ವ್ಯಕ್ತಿ
ಕಾರಿಗೂ ಲಾಠಿಗಳಿಗೂ ಇರುವ ಅತ್ಯಂತ ಸ್ಪಷ್ಟ ನಂಟು ಎಂದರೆ, ಎದೆಯ ಎಡಭಾಗದಲ್ಲಿ ಸಣ್ಣ ಬಿಳಿ ಬ್ರ್ಯಾಂಡ್ ಲೋಗೊ ಇರುವ, ಪೂರ್ಣ ತೋಳಿನ ಕಂದು ಬಣ್ಣದ ಟಿ-ಶರ್ಟ್ ಧರಿಸಿದ್ದ ಯುವಕ. ರವಿವಾರ ವರದಿಗಾರರು ಪೊಲೀಸರಿಗೆ ಕಾರನ್ನು ಪರಿಶೀಲಿಸುವಂತೆ ಹೇಳಿದಾಗ, ಆತ ಪಾಂಡೆ ಅವರ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದನು.
ಅಕ್ಟೋಬರ್ 11ರಂದು ಮಧ್ಯಾಹ್ನ 3.56ಕ್ಕೆ ಸೆರೆಹಿಡಿಯಲಾದ ವಿಡಿಯೊದಲ್ಲಿ, ಈ ವ್ಯಕ್ತಿ ಬಿಳಿ ಬಣ್ಣದ ಫ್ರಾಂಕ್ಸ್ ಕಾರಿನ ಬಾಗಿಲು ತೆರೆದು ಎರಡು ಲಾಠಿಗಳನ್ನು ಹೊರತೆಗೆಯುವುದು ಕಂಡುಬಂದಿದೆ. ಆತನ ಗುಂಪಿನಲ್ಲಿದ್ದ ಯಾರೋ ಒಬ್ಬರು ಆತನನ್ನು ತಡೆಯುತ್ತಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಪ್ರತಿಭಟನಾಕಾರರು ರಸ್ತೆ ದಾಟುತ್ತಿದ್ದಂತೆ ಆತ ಅವರ ಕಡೆಗೆ ಲಾಠಿಗಳನ್ನು ಬೀಸುತ್ತಿರುವುದು ಗೋಚರಿಸುತ್ತದೆ.
*ಕಾರಿನಲ್ಲಿದ್ದವರು
ರಸ್ತೆಯ ಫ್ಯಾಬ್ಇಂಡಿಯಾ ಮತ್ತು ಸ್ಟಾರ್ಬಕ್ಸ್ಗಳ ಬದಿಯಲ್ಲಿ ನಿಂತು ಪ್ರತಿಭಟನಾಕಾರರನ್ನು ಕರೆಯುತ್ತಿದ್ದ ಪುಂಡರ ಗುಂಪಿನಲ್ಲಿ ಹಳದಿ ಮತ್ತು ನೀಲಿ ಬಣ್ಣದ ಟಿ-ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ರವಿವಾರದ ಅದೇ ದೃಶ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದಾನೆ. ಶಿವಮ್ ಪ್ರತಾಪ್ ಸಿಂಗ್ ಎಂದು ಗುರುತಿಸಲಾದ ಈ ವ್ಯಕ್ತಿಯೂ ಕಾರು ಅಲ್ಲಿಂದ ತೆರಳಿದಾಗ ಅದರೊಳಗಿದ್ದನು.
ಜೂನ್ ನಲ್ಲಿ ಜಂತರ್ ಮಂತರ್ನಲ್ಲಿ ನಡೆದ CJP ಪ್ರತಿಭಟನೆಯ ಸಂದರ್ಭದಲ್ಲಿ ಸಿಂಗ್, ಪತ್ರಕರ್ತ ಶ್ಯಾಮ್ ಮೀರಾ ಸಿಂಗ್ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದನು. ಆದರೆ, ಸ್ಥಳದಲ್ಲಿದ್ದವರು ಆತನನ್ನು ತಡೆದರು. ಅಲ್ಲಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದರಾದರೂ, ತಕ್ಷಣವೇ ಬಿಡುಗಡೆ ಮಾಡಿದರು.
ಜಂತರ್ ಮಂತರ್ ನಲ್ಲಿ ಜೂನ್ನಲ್ಲಿ ನಡೆದ ಪ್ರತಿಭಟನೆಯ ವೇಳೆ CJP ಕಾರ್ಯಕರ್ತೆ ನಿಶು ಆಕಾಶ್ ಅವರ ತಂದೆ ಸಂಜಯ್ ಆಕಾಶ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸೆಪ್ಟೆಂಬರ್ ನಲ್ಲಿ ಬಂಧನಕ್ಕೊಳಗಾಗಿದ್ದ ಸ್ವಯಂಘೋಷಿತ ಹಿಂದುತ್ವ ಕಾರ್ಯಕರ್ತ ಸ್ವತಂತ್ರ ಭಾರದ್ವಾಜ್ ಗೆ ಸಿಂಗ್ ಆಪ್ತನಂತೆ ಕಾಣುತ್ತಾನೆ. 2026ರ ಜುಲೈನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿ, ಕಿರುಕುಳ ನೀಡುತ್ತಿದ್ದ ಗುಂಪಿನ ಭಾಗವಾಗಿಯೂ ಈತ ಇದ್ದನು.
ಸಿಂಗ್ 2026ರ ಆಗಸ್ಟ್ ನಲ್ಲಿ ಜಂತರ್ ಮಂತರ್ನಲ್ಲಿ ನಡೆದ 'ಆರ್ಥಿಕ ಮೀಸಲಾತಿ ಮೋರ್ಚಾ' (Arthik Arakshan Morcha) ಪ್ರತಿಭಟನೆಯಲ್ಲೂ ಭಾಗವಹಿಸಿದ್ದನು. ಅಲ್ಲದೆ, ಅಕ್ಟೋಬರ್ 6 ಮತ್ತು 7ರ ರಾತ್ರಿ ಪ್ರತಿಭಟನಾಕಾರರನ್ನು ಥಳಿಸಬೇಕೆಂದು ಕರೆ ನೀಡಿದ್ದನು.
'ಭಾರತ್ ಏಕ್ ನಯಿ ಸೋಚ್' ಡಿಜಿಟಲ್ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುವ ಜಿತೇಶ್ ಸಿಂಗ್ ಚೌಹಾಣ್ ಎಂಬ ಪತ್ರಕರ್ತನಿಗೆ ರವಿವಾರ ಶಿವಮ್ ಸಿಂಗ್ ಹಾಗೂ ಕಂದು ಬಣ್ಣದ ಟಿ-ಶರ್ಟ್ ಧರಿಸಿದ್ದ ವ್ಯಕ್ತಿ ಬೆದರಿಕೆ ಹಾಕಿ, ಕ್ಯಾಮೆರಾವನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಚೌಹಾಣ್, "ನಾನು ಪತ್ರಕರ್ತನಾಗಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಮತ್ತು ನಾವು ರೆಕಾರ್ಡಿಂಗ್ ನಿಲ್ಲಿಸುವುದಿಲ್ಲ ಎಂದು ಕಂದು ಬಣ್ಣದ ಟಿ-ಶರ್ಟ್ ಧರಿಸಿದ್ದ ವ್ಯಕ್ತಿಗೆ ಹೇಳಿದೆ. 'ನೀನು ಯಾರು?' ಎಂದು ನಾನು ಕೇಳಿದಾಗ, ಆತ ಅಹಂಕಾರದಿಂದ ಮತ್ತು ಬೆದರಿಕೆಯ ಧ್ವನಿಯಲ್ಲಿ, 'ನಾನು ಡಿಸಿಪಿ ಮಗ. ಈಗ ನೀನು ಏನು ಮಾಡುತ್ತೀಯಾ ನೋಡು...' ಎಂದನು. ಬಳಿಕ ಅವರು ನಮ್ಮ ಕ್ಯಾಮೆರಾಪರ್ಸನ್ ಬಳಿಯಿದ್ದ ಕ್ಯಾಮೆರಾವನ್ನು ಕಸಿದುಕೊಳ್ಳಲು ಯತ್ನಿಸಿ, ಅದಕ್ಕೆ ಜೋಡಿಸಿದ್ದ ವೈರ್ ಮುರಿದರು. ನಮ್ಮನ್ನು ಬೆನ್ನಟ್ಟಲು ಆರಂಭಿಸಿದರು" ಎಂದು ಹೇಳಿದ್ದಾರೆ.
"ತಾವೇ ಮಾಧ್ಯಮದವರು ಎಂದು ಬಿಂಬಿಸಿಕೊಳ್ಳುತ್ತಿದ್ದ ಜನರ ಬಳಿಗೆ ನಾನು ಓಡಿ ಹೋದೆ. ಆದರೆ, ಅವರು ವಾಸ್ತವವಾಗಿ ಅದೇ ಗುಂಪಿಗೆ ಸೇರಿದವರಾಗಿದ್ದರು. ನಾನು ಮೊಬೈಲ್ ಫೋನ್ ಕದ್ದು ಓಡಿಹೋಗುತ್ತಿದ್ದೇನೆ ಎಂದು ಅವರು ಹೇಳಲಾರಂಭಿಸಿದರು. ಬಳಿಕ ನನ್ನಲ್ಲಿ ಪ್ರೆಸ್ ಕಾರ್ಡ್ ತೋರಿಸುವಂತೆ ಒತ್ತಾಯಿಸಿದರು. ನಾನು ಪ್ರೆಸ್ ಕಾರ್ಡ್ ತೋರಿಸಿದಾಗ, ಇಂತಹ ಕಾರ್ಡ್ ಗಳನ್ನು ಕೇವಲ 500 ರೂಪಾಯಿಗೆ ಮಾಡಿಸಬಹುದು ಎಂದರು.
"ಅದೃಷ್ಟವಶಾತ್, ನಾನು ಹೇಗೋ ಪೊಲೀಸರಿಗೆ ಕರೆ ಮಾಡುವಲ್ಲಿ ಯಶಸ್ವಿಯಾದೆ. ಅವರು ಬಂದು ನನ್ನನ್ನು ಒಂದು ಕಡೆಗೆ ಕರೆದೊಯ್ದರು. ಆ ಬಳಿಕ ಯಾರೂ ನನ್ನ ಬಳಿ ಬರಲಿಲ್ಲ. ನಂತರ ಮೂವರು ಪೊಲೀಸ್ ಅಧಿಕಾರಿಗಳು ನನ್ನ ಬಳಿ ಬಂದು, 'ಈಗ ನಿನ್ನನ್ನು ರಕ್ಷಿಸಲಾಗಿದೆ. ನೀನು ಇಲ್ಲಿಂದ ಹೊರಟುಹೋಗುವುದು ಒಳ್ಳೆಯದು' ಎಂದರು.
"ಪ್ರತಿಭಟನಾಕಾರರು ಮತ್ತು ಪತ್ರಕರ್ತರನ್ನು ವಶಕ್ಕೆ ಪಡೆಯುತ್ತಿದ್ದ ಪೊಲೀಸರು ಈ ವ್ಯಕ್ತಿಗಳ ವಿರುದ್ಧ ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವುದು ನನಗೆ ಆಘಾತ ತಂದಿತು" ಎಂದು ಚೌಹಾಣ್ ಹೇಳಿದ್ದಾರೆ.
'ಭಾರತ್ ಏಕ್ ನಯಿ ಸೋಚ್' ಸಂಪಾದಕಿ ಪಲ್ಲವಿ ರಾಯ್ ಮಾತನಾಡಿ, "ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಪೊಲೀಸರು ಶಾಂತಿಯುತ ಪ್ರತಿಭಟನಾಕಾರರನ್ನು ಹಾಗೂ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಪತ್ರಕರ್ತರನ್ನು ಆಕ್ರಮಣಕಾರಿಯಾಗಿ ವಶಕ್ಕೆ ಪಡೆಯುತ್ತಿದ್ದಾರೆ. ಆದರೆ, ಈ ಜನರಿಗೆ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಲು ಸಂಪೂರ್ಣ ಮುಕ್ತ ಅವಕಾಶ ನೀಡಿದ್ದಾರೆ" ಎಂದು ಹೇಳಿದರು.
*ಮೂರನೇ ಪ್ರಯಾಣಿಕ
ಪಾಂಡೆ ಅವರ ಕಾರಿನ ಮುಂಭಾಗದ ಸೀಟಿನಲ್ಲಿ ಬಿಳಿ ಅಂಗಿ ಧರಿಸಿದ ವ್ಯಕ್ತಿ ಕುಳಿತಿದ್ದನು. ಕಾರು ಅಲ್ಲಿಂದ ಹೊರಡುವ ಸ್ವಲ್ಪ ಮೊದಲು ಆತ ಹೆಡ್ ಕಾನ್ಸ್ಟೆಬಲ್ ಚಂದ್ರವೀರ್ ಅತ್ರಿ ಅವರೊಂದಿಗೆ ಮಾತನಾಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ವರದಿಗಾರರು ಕಾರಿನ ಬಗ್ಗೆ ಎಚ್ಚರಿಸಿದ್ದರೂ, ನಂತರ ಕಾರು ಸುಲಭವಾಗಿ ತೆರಳಲು ಸಹಾಯ ಮಾಡಿದಂತೆ ಕಂಡುಬಂದ ಅಧಿಕಾರಿ ಅತ್ರಿ ಅವರೇ ಆಗಿದ್ದಾರೆ.
*ನಾಲ್ಕನೇ ಪ್ರಯಾಣಿಕ?
ಕಾರಿನಲ್ಲಿದ್ದ ನಾಲ್ಕನೇ ಪ್ರಯಾಣಿಕನನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗಿಲ್ಲ.
ಅಕ್ಟೋಬರ್ 11ರಂದು ಸ್ಟಾರ್ಬಕ್ಸ್ ಬಳಿ ಈ ವ್ಯಕ್ತಿಗಳೊಂದಿಗೆ ನಿಂತುಕೊಂಡು, ಕೈಯಲ್ಲಿ ಲಾಠಿ ಹಿಡಿದಿದ್ದ ಗಡ್ಡಧಾರಿ ವ್ಯಕ್ತಿಯನ್ನು 'ನ್ಯೂಸ್ಲಾಂಡ್ರಿ' ದೀಪಕ್ ಸಿಸೋಡಿಯಾ ಎಂದು ಗುರುತಿಸಿದೆ. ಫರಿದಾಬಾದ್ ನಿವಾಸಿಯಾಗಿರುವ ಸಿಸೋಡಿಯಾ, ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಭೂಪೇಂದ್ರ ತೋಮರ್ ಅಲಿಯಾಸ್ ಪಿಂಕಿ ಚೌಧರಿ ನಡೆಸುತ್ತಿರುವ 'ಹಿಂದೂ ರಕ್ಷಾ ದಳ' ಸಂಘಟನೆಯ ಪದಾಧಿಕಾರಿಯಾಗಿದ್ದಾರೆ.
ಸಿಸೋಡಿಯಾ ಈ ಹಿಂದೆ ಯುವ ಪ್ರತಿಭಟನಾಕಾರರಿಗೆ ಬೆದರಿಕೆ ಹಾಕುವುದು ಮತ್ತು ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ಗಳನ್ನು ಮಾಡುವುದು ವಿಡಿಯೊಗಳಲ್ಲಿ ಕಂಡುಬಂದಿತ್ತು. ಅಲ್ಲದೆ, ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸುವ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು.
*ಅಲ್ಲಿ ಕೂಗಿದ ಘೋಷಣೆಗಳು
ಕಾರಿನ ಸುತ್ತಮುತ್ತಲಿದ್ದ ಗುಂಪು ತನ್ನ ಉದ್ದೇಶಗಳನ್ನು ದಿನಗಳ ಹಿಂದೆಯೇ ಬಹಿರಂಗಪಡಿಸಿತ್ತು. ಅಕ್ಟೋಬರ್ 6 ಮತ್ತು 7ರ ರಾತ್ರಿ ಕನ್ನಾಟ್ ಪ್ಲೇಸ್ ನ ಅದೇ ಸ್ಥಳದಲ್ಲಿ ಜನಸ್ತೋಮ ಸೇರಿ, ಅಕ್ಟೋಬರ್ 10ರಂದು ಪ್ರತಿಭಟಿಸಲು ಯೋಜಿಸುತ್ತಿದ್ದವರ ವಿರುದ್ಧ ಬಲಪ್ರಯೋಗ ಮಾಡುವಂತೆ ದಿಲ್ಲಿ ಪೊಲೀಸರನ್ನು ಒತ್ತಾಯಿಸಿತ್ತು.
"ದಿಲ್ಲಿ ಪೊಲೀಸ್, ತುಮ್ ಲಾಥ್ ಬಜಾವೋ, ಹಮ್ ತುಮ್ಹಾರೇ ಸಾತ್ ಹೈ" (ದಿಲ್ಲಿ ಪೊಲೀಸರೇ, ನೀವು ಲಾಠಿ ಬೀಸಿ, ನಾವು ನಿಮ್ಮ ಜೊತೆಯಲ್ಲಿದ್ದೇವೆ) ಎಂದು ಅವರು ಘೋಷಣೆ ಕೂಗಿದರು. ಈ ಘೋಷಣೆಗಳು "ಗೋಲಿ ಮಾರೋ ಗದ್ದಾರೋ ಕೋ" (ದೇಶದ್ರೋಹಿಗಳಿಗೆ ಗುಂಡಿಕ್ಕಿ) ಮತ್ತು "ಉಮರ್ ಖಾಲಿದ್ ಮುರ್ದಾಬಾದ್" ಎಂಬ ಮಟ್ಟಕ್ಕೆ ಏರಿಕೆಯಾದವು. ಇದರ ಜೊತೆಗೆ "ಜೈ ಶ್ರೀ ರಾಮ್" ಘೋಷಣೆಗಳೂ ಮೊಳಗಿದವು.
ಮುಂಚೂಣಿಯಲ್ಲಿ ಈಶಾನ್ಯ ದಿಲ್ಲಿ ಬಿಜೆಪಿ ಕಿಸಾನ್ ಮೋರ್ಚಾದ ಮಾಧ್ಯಮ ಪ್ರತಿನಿಧಿ ಇಂದ್ರೇಶ್ ದ್ವಿವೇದಿ ಇದ್ದರು. ಅವರೊಂದಿಗೆ ದಿಲ್ಲಿ ಬಿಜೆಪಿ ಕಿಸಾನ್ ಮೋರ್ಚಾದ ಉಪಾಧ್ಯಕ್ಷ ಸಂದೀಪ್ ದೇಧಾ ಇದ್ದರು. ಗೌರವ್ ಪಾಂಡೆ ಮತ್ತು ಅವರ ಸಹೋದರ ಜೈ ಕಿಶನ್ ಪಾಂಡೆ ಕೂಡ ಈ ಗುಂಪಿನಲ್ಲಿದ್ದರು. ಜೈ ಕಿಶನ್ ಅವರು ದ್ವಿವೇದಿ ಅವರ ಪಕ್ಕದಲ್ಲಿ ನಿಂತಿರುವುದು ಫೋಟೊದಲ್ಲಿ ಸೆರೆಯಾಗಿದೆ. ದ್ವಿವೇದಿ ಅವರ ಬಲಭಾಗದ ಹಿಂಬದಿಯಲ್ಲಿ ಗೌರವ್ ಅವರನ್ನು ಕಾಣಬಹುದು.
ಈ ಸಹೋದರರು ಇಬ್ಬರೂ ಈ ಪದಾಧಿಕಾರಿಗಳೊಂದಿಗೆ ನಿಕಟವಾಗಿರುವಂತೆ ಕಾಣುತ್ತಾರೆ. ವಿಡಿಯೊದಲ್ಲಿ ಸೆರೆಯಾದ ಹುಟ್ಟುಹಬ್ಬದ ಆಚರಣೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಜೈ ಕಿಶನ್, ಗಾಂಧಿಯ ಹಂತಕ ನಾಥೂರಾಮ್ ಗೋಡ್ಸೆಯನ್ನು ಹೊಗಳಿ ಪೋಸ್ಟ್ ಮಾಡಿದ್ದನು.
ಕಂದು ಬಣ್ಣದ ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯೂ ಅಲ್ಲಿ ಉಪಸ್ಥಿತನಿದ್ದನು. ಈ ಬಾರಿ ಆತ ಅಡ್ಡಪಟ್ಟಿಗಳಿರುವ ಬೂದು ಬಣ್ಣದ ಟಿ-ಶರ್ಟ್ ಧರಿಸಿದ್ದನು.
ದ್ವಿವೇದಿ ಅವರು ಸಂದರ್ಶನ ನೀಡುತ್ತಿದ್ದಾಗ, ಹಿನ್ನೆಲೆಯಲ್ಲಿ ಅದೇ ವ್ಯಕ್ತಿ ಅಡ್ಡಪಟ್ಟಿಗಳಿರುವ ಬೂದು ಬಣ್ಣದ ಟಿ-ಶರ್ಟ್ ಧರಿಸಿರುವುದನ್ನು ಕಾಣಬಹುದು.
ಪ್ರತಿಭಟನಾಕಾರರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿ ಘೋಷಣೆಗಳನ್ನು ಕೂಗಿದ್ದ, ಕಳೆದ ವಾರದ ಪ್ರತಿಭಟನೆಯಲ್ಲಿ ಕಂಡುಬಂದಿದ್ದ ಇತರ ಕೆಲವು ವ್ಯಕ್ತಿಗಳು ವಾರಾಂತ್ಯದಲ್ಲೂ ಹಿಂಸಾಚಾರದಲ್ಲಿ ತೊಡಗಿರುವುದು ಕಂಡುಬಂದಿದೆ.
*ಅವರ ಸುತ್ತಲಿನ ಗುಂಪು
ಕಿಸಾನ್ ಮೋರ್ಚಾ ಸೇರುವ ಮೊದಲು ದೇಧಾ ಅವರು ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾದ ದಿಲ್ಲಿ ಘಟಕದ ಉಪಾಧ್ಯಕ್ಷರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇರುವ ಅವರ ಫೋಟೊಗಳೂ ಇವೆ.
ದ್ವಿವೇದಿ ಅವರು ಸ್ಮೃತಿ ಇರಾನಿ, ಅನುರಾಗ್ ಠಾಕೂರ್ ಮತ್ತು ಕಪಿಲ್ ಮಿಶ್ರಾ ಅವರೊಂದಿಗೆ ಫೋಟೊಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂತಹ ಫೋಟೊಗಳು ಪಕ್ಷದ ಕಾರ್ಯಕರ್ತರ ನಡುವೆ ಸಾಮಾನ್ಯವಾಗಿದ್ದು, ಅವು ಸ್ವತಃ ನಿಕಟ ಸಂಬಂಧವನ್ನು ಸೂಚಿಸುವುದಿಲ್ಲ.
ಅಕ್ಟೋಬರ್ 10ರಂದು ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ನಡೆಸುವಂತೆ ಒತ್ತಾಯಿಸಲು ಈ ಇಬ್ಬರೂ ವ್ಯಕ್ತಿಗಳು ಬಲಪಂಥೀಯ ಬೆಂಬಲಿಗರನ್ನು ಒಗ್ಗೂಡಿಸುತ್ತಿದ್ದರು.
ಗೌರವ್ ಪಾಂಡೆ ಅವರಿಗೆ ಈ ಗುಂಪಿನೊಂದಿಗಿನ ನಂಟು ಅಕ್ಟೋಬರ್ ಗಿಂತ ಹಿಂದಿನದು. ಜೂನ್ನಲ್ಲಿ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯ ವೇಳೆ ಸಂಜಯ್ ಆಕಾಶ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 4ರಂದು ದಿಲ್ಲಿ ಪೊಲೀಸರು ಸ್ವತಂತ್ರ ಭಾರದ್ವಾಜ್ ಅವರನ್ನು ಬಂಧಿಸಿದ್ದರು. ಇದರ ನಂತರ ನಡೆದ ಪ್ರತಿಭಟನೆಗಳಲ್ಲಿ ಪಾಂಡೆ, ದ್ವಿವೇದಿ ಮತ್ತು ಗೌರಬ್ ಕುಮಾರ್ ಅಲಿಯಾಸ್ ಗೌರಬ್ ಹಿಂದೂ ಪಾಲ್ಗೊಂಡಿದ್ದರು.
ಭಾರದ್ವಾಜ್ ಅವರನ್ನು ಬೆಂಬಲಿಸಿ ಮತ್ತು ಆಕಾಶ್ ಅವರ ಬಂಧನಕ್ಕೆ ಒತ್ತಾಯಿಸಿ ದ್ವಿವೇದಿ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಮನವಿ ಪತ್ರವನ್ನೂ ಸಲ್ಲಿಸಿದ್ದರು.
ಆಗಸ್ಟ್ನಲ್ಲಿ ಮೀಸಲಾತಿ ವಿರೋಧಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ 'ಆರ್ಥಿಕ ಮೀಸಲಾತಿ ಮೋರ್ಚಾ' ಮೂಲಕವೂ ಇವರಲ್ಲಿ ಹಲವರು ಸಂಪರ್ಕ ಹೊಂದಿದ್ದಾರೆ.
ಈ ಗುಂಪಿಗೆ ಸೇರಿದ ಗೌರಬ್ ಕುಮಾರ್, ಭಾರದ್ವಾಜ್, ಅಭಿಷೇಕ್ ಸಿಂಗ್, ದಕ್ಷ್ ಚೌಧರಿ ಮತ್ತು ಅಕ್ಕು ಪಂಡಿತ್ ಸೇರಿದಂತೆ ಹಲವು ಉಗ್ರಗಾಮಿ ವ್ಯಕ್ತಿಗಳೊಂದಿಗೆ ದ್ವಿವೇದಿ ಇರುವ ಫೋಟೊಗಳು ಲಭ್ಯವಿವೆ. ಇವರಲ್ಲಿ ಕೆಲವರು ಹಿಂದಿನ ಹಿಂಸಾಚಾರಗಳೊಂದಿಗೆ ನಂಟು ಹೊಂದಿದ್ದಾರೆ.
ಅಕ್ಟೋಬರ್ 8ರಂದು ಅಭಿಷೇಕ್ ಸಿಂಗ್ ಅದೇ ಸ್ಟಾರ್ ಬಕ್ಸ್ ನ ಹೊರಗಿನ ಕಾರಿಡಾರ್ನಿಂದ ಇನ್ಸ್ಟಾಗ್ರಾಂ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ಅಕ್ಟೋಬರ್ 10ರಂದು ಬರುವ ಪ್ರತಿಭಟನಾಕಾರರನ್ನು ಥಳಿಸುವುದಾಗಿ ಬೆದರಿಕೆ ಹಾಕಿದ್ದರು. ಅಕ್ಟೋಬರ್ 11ರಂದು ಗೌರಬ್ ಕುಮಾರ್ ಅವರು ಕನ್ನಾಟ್ ಪ್ಲೇಸ್ನಲ್ಲಿ ದಿಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಪಾದಕ್ಕೆ ನಮಸ್ಕರಿಸುತ್ತಿರುವುದು ಕಂಡುಬಂದಿದೆ.
*ಅಂದು ರಸ್ತೆಯಲ್ಲಿ ನಡೆದದ್ದೇನು?
ರವಿವಾರ ಸ್ಥಳದಲ್ಲಿದ್ದ ಕೆಲ ಹಿಂದುತ್ವಪರ ವ್ಯಕ್ತಿಗಳು ಪ್ರತಿಭಟನಾಕಾರರನ್ನು ಪೊಲೀಸರಿಗೆ ಒಪ್ಪಿಸುವ ಮುನ್ನ ತಾವೇ ಅವರನ್ನು ಥಳಿಸಲು ಆರಂಭಿಸಿದರು.
ನೋಯ್ಡಾದ ನಿತೇಶ್ ಮಿಶ್ರಾ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬರು, ಪ್ರತಿಭಟನಾಕಾರರೊಬ್ಬರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುವುದಾಗಿ ಮಾತನಾಡಿದ್ದರು ಎಂದು ಆರೋಪಿಸಿದರು.
ಮತ್ತೊಂದು ಘಟನೆಯಲ್ಲಿ, 'ಪೀಯಿಂಗ್ ಹ್ಯೂಮನ್' (Peeing Human) ಖಾತೆಯನ್ನು ನಿರ್ವಹಿಸುವ ರಮಿತ್ ವರ್ಮಾ ಅವರನ್ನು ಒಂದು ಗಲ್ಲಿಯಲ್ಲಿ ಗುಂಪೊಂದು ಸುತ್ತುವರಿದು ಹಲ್ಲೆ ನಡೆಸಲು ಯತ್ನಿಸಿತು. ಆ ಸಂದರ್ಭದಲ್ಲಿ ಅವರೊಂದಿಗೆ ಇದ್ದ ಮಹಿಳೆಯೊಬ್ಬರು ಅವರನ್ನು ರಕ್ಷಿಸಲು ಮುಂದಾದರು.
ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದಾಗ, ವರ್ಮಾ ಅವರು ಅಂಗಡಿಗೆ ಬೆಂಕಿ ಹಚ್ಚುವುದಾಗಿ ಮಾತನಾಡಿದ್ದಾರೆ ಎಂದು ಆ ಗುಂಪು ಆರೋಪಿಸಿತು. ಅವರನ್ನು ಹೊರಗೆಳೆದು, ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದನು.
ಅಕ್ಟೋಬರ್ 10ರಂದೂ ವರದಿಗಾರರು ಇಂಥದ್ದೇ ದೃಶ್ಯಗಳನ್ನು ಗಮನಿಸಿದ್ದರು.
*ಅವರು ಹೇಳಿದ್ದೇನು?
ತಮಗಾಗಲಿ, ತಮ್ಮ ಸಹೋದರನಿಗಾಗಲಿ ಅಥವಾ ತಮ್ಮ ಕಾರಿಗಾಗಲಿ ಹಿಂಸಾಚಾರದಲ್ಲಿ ಯಾವುದೇ ಸಂಬಂಧವಿಲ್ಲ ಎಂದು ಜೈ ಕಿಶನ್ ಪಾಂಡೆ ಸ್ಪಷ್ಟಪಡಿಸಿದರು. ಪ್ರತಿಭಟನಾಕಾರರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಅಥವಾ ಪೊಲೀಸರು ಬಲಪ್ರಯೋಗ ಮಾಡುವಂತೆ ಘೋಷಣೆ ಕೂಗಿದ ಯಾವುದೇ ಗುಂಪಿನ ಭಾಗವಾಗಿ ತಾನು ಇರಲಿಲ್ಲ ಎಂದು ಅವರು ಆರೋಪಗಳನ್ನು ನಿರಾಕರಿಸಿದರು.
ಹಿಂಸಾಚಾರದಲ್ಲಿ ಭಾಗಿಯಾದವರೊಂದಿಗೆ ತಾವಿರುವ ದೃಶ್ಯಗಳ ಕುರಿತು ಕೇಳಿದಾಗ, ಕಳೆದ ವಾರ ನಡೆದ ಪ್ರತಿಭಟನೆಯಲ್ಲಿ ತಾನು ಇದ್ದೆ ಎಂದು ಸಂದೀಪ್ ದೇಧಾ ಮೊದಲು ಒಪ್ಪಿಕೊಂಡರಾದರೂ, ತನಗೆ ಯಾರೂ ಪರಿಚಯವಿಲ್ಲ ಎಂದು ಹೇಳಿಕೊಂಡರು. "ನನಗೆ ನೀನು ಯಾರು ಎಂದು ಗೊತ್ತಿಲ್ಲ. ನೀನು ಯಾಕೆ ಇಷ್ಟೊಂದು ವಿವರಗಳನ್ನು ಕೇಳುತ್ತಿದ್ದೀಯ?" ಎಂದು ಹೇಳಿ ಅವರು ಕರೆ ಕಟ್ ಮಾಡಿದರು.
"ನಮ್ಮ ಕಾರಿನಿಂದ ಯಾವುದೇ ಲಾಠಿಗಳನ್ನು ಹೊರತೆಗೆದಿಲ್ಲ. ಕೆಲವರು ವಿಡಿಯೊ ಮಾಡಿ ಕಾರಿನೊಳಗೆ ಲಾಠಿಗಳನ್ನು ಇಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಅದು ಸುಳ್ಳು. ನನ್ನ ವಾಹನವನ್ನು ಪೊಲೀಸ್ ಠಾಣೆಯಲ್ಲೂ ಪರಿಶೀಲಿಸಲಾಗಿದೆ. ನೀವು ಅಲ್ಲಿಗೆ ಹೋಗಿ ಕೇಳಬಹುದು" ಎಂದು ಜೈ ಕಿಶನ್ ಪಾಂಡೆ ಹೇಳಿದ್ದಾರೆ.
ಹಿಂಸಾಚಾರದಲ್ಲಿ ಭಾಗಿಯಾದವರು ತಮ್ಮ ಕಾರಿನಲ್ಲಿ ಪರಾರಿಯಾಗುತ್ತಿರುವುದು ಕಂಡುಬಂದಿದೆ ಎಂಬ ಪ್ರಶ್ನೆಗೆ, "ಯಾರೂ ನಮ್ಮ ಕಾರಿನಲ್ಲಿ ಕುಳಿತುಕೊಳ್ಳಲಿಲ್ಲ. ನನಗೆ ಯಾರೂ ಪರಿಚಯವಿಲ್ಲ" ಎಂದರು.
ಸಂದೀಪ್ ದೇಧಾ ಮತ್ತು ಇಂದ್ರೇಶ್ ದ್ವಿವೇದಿ ಪರಿಚಯವಿದೆಯೇ ಎಂದು ಕೇಳಿದಾಗ, "ನಾನು ಈ ಹೆಸರುಗಳನ್ನು ಮೊದಲ ಬಾರಿಗೆ ಕೇಳುತ್ತಿದ್ದೇನೆ. ಅವರು ಯಾರು? ನಾನು ಒಬ್ಬ ಅಂಗಡಿ ಮಾಲೀಕ. ಮಾರುಕಟ್ಟೆಯಲ್ಲಿ ಕುಳಿತುಕೊಳ್ಳುತ್ತೇನೆ ಮತ್ತು ಯಾರೊಂದಿಗೂ ಯಾವುದೇ ಸಂಬಂಧವಿಲ್ಲ. ಆದರೆ, ಈ ಕಮ್ಯೂನಿಸ್ಟ್ಗಳು ಮತ್ತು ಕಾಕ್ರೋಚ್ಗಳು ಮಾರುಕಟ್ಟೆಯನ್ನು ಸುಡಲು ಬಯಸಿದ್ದರು ಎಂದು ನಾನು ಕೇಳಿದ್ದೇನೆ" ಎಂದರು.
ಪ್ರತಿಭಟನಾಕಾರರನ್ನು ಥಳಿಸಬೇಕೆಂದು ಘೋಷಣೆ ಕೂಗಿದ ಅಕ್ಟೋಬರ್ 7ರಂದು ನೀವು ಅಲ್ಲಿ ಉಪಸ್ಥಿತರಿದ್ದೀರಾ ಎಂದು ಕೇಳಿದಾಗ, "ನನಗೆ ಗೊತ್ತಿಲ್ಲ. ನಾನು ಮಾರುಕಟ್ಟೆಯಲ್ಲಿ ಕುಳಿತುಕೊಳ್ಳುತ್ತೇನೆ. ಅಲ್ಲಿ ಏನೋ ನಡೆದಿರಬಹುದು. ನಾನು ಬಹುಶಃ ಕಾಕತಾಳೀಯವಾಗಿ ನೋಡಿರಬಹುದು" ಎಂದರು.
ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ, ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಚಂದ್ರವೀರ್ ಅತ್ರಿ ಮಾತನಾಡಿ, "ನಾವು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಲ್ಲಿ ಇದ್ದೆವು. ಅಲ್ಲಿ ಜನಸಂದಣಿ ಸೇರಿದ್ದರಿಂದ ನಾವು ಕಾರನ್ನು ಹೋಗಲು ಬಿಟ್ಟೆವು. ಆದರೆ, ನಂತರ ಅದನ್ನು ಪೊಲೀಸ್ ಠಾಣೆಯಲ್ಲಿ ಪರಿಶೀಲಿಸಿದೆವು. ನಮ್ಮ ಎಸ್ಎಚ್ಒ (SHO) ಅವರೇ ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ" ಎಂದರು.
ಪ್ರತಿಭಟನಾಕಾರರು ಮತ್ತು ಪತ್ರಕರ್ತರ ಮೇಲೆ ಪೊಲೀಸ್ ಕ್ರಮ ಕೈಗೊಳ್ಳಲಾಗುತ್ತಿದ್ದರೂ, ಲಾಠಿಗಳನ್ನು ಹಿಡಿದು ಹಿಂಸಾಚಾರದಲ್ಲಿ ತೊಡಗಿರುವವರನ್ನು ಯಾಕೆ ವಶಕ್ಕೆ ಪಡೆಯುತ್ತಿಲ್ಲ ಎಂದು ಕೇಳಿದಾಗ, "ಅದರ ಬಗ್ಗೆ ನನಗೆ ಯಾವುದೇ ಪ್ರತಿಕ್ರಿಯೆ ಇಲ್ಲ" ಎಂದರು.
'ನ್ಯೂಸ್ಲಾಂಡ್ರಿ' ಸಂಸ್ಥೆಯು ಇಂದ್ರೇಶ್ ದ್ವಿವೇದಿ ಮತ್ತು ಹೊಸದಿಲ್ಲಿ ಡಿಸಿಪಿ ಸಚಿನ್ ಶರ್ಮಾ ಅವರಿಗೆ ಪ್ರಶ್ನೆಗಳನ್ನು ಕಳುಹಿಸಿದೆ. ವರದಿ ಪ್ರಕಟವಾಗುವವರೆಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಸೌಜನ್ಯ: newslaundry.com






