ಅತಿ ಶ್ರೀಮಂತ, ಮಹಾ ಉದಾರಿ ಅಝೀಮ್ ಪ್ರೇಮ್ ಜಿ ಧಾರಾಳತನಕ್ಕೆ ಸಾಟಿ ಯಾರು ?
ಸರಕಾರಿ ಶಾಲಾ ಮಕ್ಕಳಿಗೆ ನಾಲ್ಕು ದಿನ ಮೊಟ್ಟೆ ಕೊಡಲು ನೆರವಾಗುತ್ತಿರುವ ಉದ್ಯಮಿ

ಅಝೀಮ್ ಪ್ರೇಮ್ ಜಿ. ದೇಶದ ಅತಿ ಶ್ರೀಮಂತ ಉದ್ಯಮಿಗಳಲ್ಲೊಬ್ಬರು. ಇವರಿಗೆ ಜಿಪುಣ ಬಿಲಿಯನೇರ್ ಎಂಬ ಅಡ್ಡ ಹೆಸರೂ ಇದೆ. ಅವರ ಕಂಪೆನಿಯಲ್ಲಿ ಉದ್ಯೋಗಿಗಳು ಫೋಟೋ ಕಾಪಿ ಮಾಡಬೇಕಿದ್ದರೆ ಒಂದು ಪೇಜಿನ ಎರಡೂ ಬದಿ ಬಳಸಿಕೊಳ್ಳುವುದು ಕಡ್ಡಾಯ ಎಂದು ವರದಿಯಾಗಿತ್ತು.
ಕಂಪೆನಿಯಲ್ಲಿ ಮೀಟಿಂಗ್ ವೇಳೆ ಉದ್ಯೋಗಿಗಳು ಕಾಫಿ ಮುಗಿಸಿಲ್ಲ ಎಂಬ ಕಾರಣಕ್ಕೆ ಕಾಫಿ ಕಪ್ ಸೈಝನ್ನೇ ಕಡಿಮೆ ಮಾಡಿ ಬಿಟ್ಟಿದ್ದರಂತೆ ಈ ಅಝೀಮ್ ಪ್ರೇಮ್ ಜಿ. ತನ್ನ ಕಂಪೆನಿಯಲ್ಲಿ ಬಳಸಲಾಗುವ ಟಾಯ್ಲೆಟ್ ಪೇಪರ್ ನ ವೆಚ್ಚ ಕೂಡ ತಿಳಿದಿರುವ ಉದ್ಯಮಿ ಇವರು ಅಂತ ಇವರ ಬಗ್ಗೆ ಹೇಳಲಾಗುತ್ತದೆ.
ಈಗ ಬ್ಲೂಮ್ ಬರ್ಗ್ ಬಿಲಿಯನೇರ್ ಗಳ ಪಟ್ಟಿಯಲ್ಲಿರುವ ಅಝೀಮ್ ಪ್ರೇಮ್ ಜಿ ಅವರ ಆಸ್ತಿ ಮೌಲ್ಯ ಕಳೆದ ಮೇ ತಿಂಗಳಲ್ಲಿ ವರದಿಯಾದಂತೆ ಒಂದು ಲಕ್ಷ ತೊಂಬತ್ತೊಂಬತ್ತು ಸಾವಿರ ಕೋಟಿ ರೂಪಾಯಿ. ಹಾಗಿದ್ದೂ ಶ್ರೀಮಂತನಾಗಿರುವುದು ತನಗೆ ರೋಮಾಂಚನ ತಂದಿಲ್ಲ ಎಂದೂ ಹೇಳಿರುವವರು ಇದೇ ಅಝೀಮ್ ಪ್ರೇಮ್ ಜಿ.
ಆದರೆ ಈ ವಿಭಿನ್ನ ಬಿಲಿಯನೇರ್ ಅಝೀಮ್ ಪ್ರೇಮ್ ಜಿ ಎಲ್ಲಿ ಜಿಪುಣ, ಎಲ್ಲಿ ಧಾರಾಳಿ ಅಂತ ನಾವು ತಿಳಿದಿರಬೇಕಾದ್ದು ಬಹಳ ಮುಖ್ಯ.ವ್ಯರ್ಥ, ವಿಲಾಸ, ವೈಭವಕ್ಕೆ ಖರ್ಚು ಮಾಡುವುದರಲ್ಲಿ ಇವರೆಷ್ಟು ಜಿಪುಣರೋ ಪರೋಪಕಾರದಲ್ಲಿ ಅಷ್ಟೇ ಹೃದಯ ವೈಶಾಲ್ಯ ತೋರಿಸಿದವರು ಈ ಅಝೀಮ್ ಪ್ರೇಮ್ ಜಿ. ತಮ್ಮ ದಾನಗಳ ಮೂಲಕ ಸಾವಿರಾರು ಕುಟುಂಬಗಳ ಜೀವನ ರೂಪಿಸುವಲ್ಲಿ ಅಝೀಮ್ ಪ್ರೇಮ್ ಜಿ ಪಾತ್ರ ದೊಡ್ಡದು.
ದೇಶದಲ್ಲಿ ಅತ್ಯಂತ ಶ್ರೀಮಂತ ಉದ್ಯಮಿಗಳು ತಮ್ಮ ಐಶಾರಾಮೀ ಜೀವನಕ್ಕಾಗಿ, ತಮ್ಮ ವಿಲಾಸಿ ಕಾರುಗಳು, ಖಾಸಗಿ ವಿಮಾನಗಳಿಗಾಗಿ, ತಮ್ಮ ಅರಮನೆಗಳಿಗಾಗಿ, ಅದರಲ್ಲಿರುವ ಆಳುಕಾಳುಗಳಿಗಾಗಿ, ತಮ್ಮ ಸಾವಿರಾರು ಕೋಟಿ ಖರ್ಚಿನ ಮದುವೆಗಳಿಗಾಗಿ ಚರ್ಚೆಯಲ್ಲಿರುವಾಗ ಅಝೀಂ ಪ್ರೇಮ್ ಜಿ ಬೇರೊಂದು ವಿಷಯದಿಂದಾಗಿ ಈಗ ಚರ್ಚೆಯಲ್ಲಿದ್ದಾರೆ.
ರಾಜ್ಯದಲ್ಲಿ ಅಝೀಂ ಪ್ರೇಮ್ ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಪೂರಕ ಪೌಷ್ಠಿಕ ಆಹಾರ ನೀಡುವ ಕಾರ್ಯಕ್ರಮವನ್ನು ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಮಾನಸಿಕ ಆರೋಗ್ಯ ಮತ್ತು ಉತ್ತಮ ಶಿಕ್ಷಣಕ್ಕೆ ಗುಣಮಟ್ಟದ ಆಹಾರ ಮುಖ್ಯ. ಉಪಹಾರ ಇಲ್ಲದೆ ಶಾಲೆಗೆ ಬಂದು, ಊಟ ಇಲ್ಲದೆ ಮಧ್ಯಾಹ್ನದವರೆಗೂ ಶಾಲೆಯಲ್ಲಿರುವ ಮಕ್ಕಳನ್ನು ನಾನು ನೋಡಿದ್ದೇನೆ. ಹೀಗಾಗಿ ವಾರದಲ್ಲಿ ಎರಡು ದಿನ ಊಟ ಮತ್ತು ಮೊಟ್ಟೆ ಕೊಡಲು ಮುಂದಾದೆವು. ಈಗ ಅಝೀಂ ಪ್ರೇಮ್ ಜಿ ಫೌಂಡೇಷನ್ ಅವರು ವಾರದಲ್ಲಿ ನಾಲ್ಕು ದಿನ ಮಕ್ಕಳಿಗೆ ಮೊಟ್ಟೆ ನೀಡಲು ಮತ್ತು ಪೂರಕ ಪೌಷ್ಠಿಕ ಆಹಾರ ಒದಗಿಸುವ ಪುಣ್ಯದ ಕಾರ್ಯಕ್ಕೆ ಸರ್ಕಾರದ ಜೊತೆಗೆ ಕೈಜೋಡಿಸಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.
ಯಾವ ವಿಷಯಗಳಿಗಾಗಿ ಚರ್ಚೆಯಲ್ಲಿರಬೇಕು ಎಂದು ಪ್ರತಿದಿನ ಅಥವಾ ಪ್ರತಿಗಂಟೆಗೆ ಕೋಟಿ ಕೋಟಿಗಳಿಸುವ, ಹಾಗೇ ಅದನ್ನು ಖರ್ಚು ಮಾಡುವ ಉದ್ಯಮಿಗಳು ಅಝೀಂ ಪ್ರೇಮ್ ಜಿ ಯಿಂದ ಕಲಿತುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಪ್ರತಿಕ್ರಿಯಿಸಿದ್ದಾರೆ.
ಅಝೀಮ್ ಪ್ರೇಮ್ ಜಿ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಕರ್ನಾಟಕದಲ್ಲಿ ಅಝೀಂ ಪ್ರೇಮ್ ಜಿ ಫೌಂಡೇಶನ್ ಒಂದು ವಿಶ್ವವಿದ್ಯಾಲಯ ತೆರೆದಿರುವುದಲ್ಲದೆ ದೇಶಾದ್ಯಂತ ನೂರಾರು ವಿದ್ಯಾಸಂಸ್ಥೆಗಳನ್ನು ಪೋಷಿಸುತ್ತಾ ಬಂದಿದೆ. ವಿಶೇಷವಾಗಿ ರಾಜ್ಯದ ಹಾಗು ದೇಶದ ವಿವಿಧೆಡೆಗಳ ತೀರಾ ಹಿಂದುಳಿದ ಪ್ರದೇಶಗಳಲ್ಲಿ ಅಝೀಂ ಪ್ರೇಮ್ ಜಿ ಫೌಂಡೇಷನ್ ಶಿಕ್ಷಣ, ಅರೋಗ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತದೆ.
2013 ರಲ್ಲಿ, ಗಿವಿಂಗ್ ಪ್ಲೆಡ್ಜ್ ಗೆ ಸಹಿ ಹಾಕುವ ಮೂಲಕ ತಮ್ಮ ಸಂಪತ್ತಿನ ಅರ್ಧದಷ್ಟು ಭಾಗವನ್ನು ದಾನ ಮಾಡಲು ನಿರ್ಧರಿಸಿದರು ಅಝೀಮ್ ಪ್ರೇಮ್ ಜಿ. ಭಾರತದಲ್ಲಿ ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸಿದ ಅಝೀಂ ಪ್ರೇಮ್ ಜಿ ಫೌಂಡೇಶನ್‌ಗೆ 220 ಕೋಟಿ ಯು ಎಸ್ ಡಾಲರ್ ಅಂದ್ರೆ ಆವತ್ತಿನ ಹದಿನೈದು ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ದೇಣಿಗೆಯೊಂದಿಗೆ ಪ್ರೇಮ್ ಜಿ ಈ ದೇಣಿಗೆ ಅಭಿಯಾನವನ್ನು ಪ್ರಾರಂಭಿಸಿದರು.
2019 ರಲ್ಲಿ, ಅವರು ದಾನದಲ್ಲಿ ದೊಡ್ಡ ಮೊತ್ತವನ್ನು ನೀಡಿದ ನಂತರ ಫೋರ್ಬ್ಸ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ 2 ನೇ ಸ್ಥಾನದಿಂದ 17 ನೇ ಸ್ಥಾನಕ್ಕೆ ಇಳಿದಿದ್ದರು. ಆದರೆ ಹೃದಯ ಶ್ರೀಮಂತಿಕೆಯಲ್ಲಿ ಭಾರತದಲ್ಲೇ ಅತೀ ಶ್ರೇಷ್ಠರ ಪಟ್ಟಿಯಲ್ಲಿ ಪ್ರೇಮ್ ಜಿ ಅಗ್ರಗಣ್ಯರು.
ಭಾರತ ಸರಕಾರದ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮ ವಿಭೂಷಣಕ್ಕೆ ಪಾತ್ರರಾಗಿರುವ ಪ್ರೇಮ್ ಜಿ ವಿಶ್ವದ ಅತ್ಯಂತ ಉದಾರಿಗಳು, ದಾನಿಗಳು ಹಾಗು ಲೋಕೋಪಕಾರಿಗಳ ಹಲವು ಪಟ್ಟಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಅಝೀಂ ಪ್ರೇಮ್ ಜಿ ದಾನಗಳ ಪಟ್ಟಿ ಮುಗಿಯದಷ್ಟಿದೆ. ಕೋವಿಡ್ ಸಮಯದಲ್ಲೂ ಇವರು ಅತಿ ಹೆಚ್ಚು ಚರ್ಚೆಯಲ್ಲಿದ್ದರು.
ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ, ಪ್ರೇಮ್ ಜಿಯವರ ವಿಪ್ರೋ ದೇಶದಲ್ಲಿ ಆರೋಗ್ಯ ಮತ್ತು ಮಾನವೀಯ ಬಿಕ್ಕಟ್ಟನ್ನು ನಿಭಾಯಿಸಲು 1,125 ಕೋಟಿ ರೂ. ದೇಣಿಗೆ ನೀಡಿತ್ತು. ಆರ್ಥಿಕ ವರ್ಷ 2020 ಮತ್ತು ಆರ್ಥಿಕ ವರ್ಷ 2021 ರಲ್ಲಿ, ಪ್ರೇಮ್ ಜಿ, ಹುರುನ್ ಇಂಡಿಯಾ ಉದಾರ ದಾನಿಗಳ ಪಟ್ಟಿಯಲ್ಲಿ ಅತ್ಯಂತ ಉದಾರ ಭಾರತೀಯರಾಗಿ ಹೊರಹೊಮ್ಮಿದರು. ಉದಾರ ದಾನಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. 2022 ರಲ್ಲಿ ಮತ್ತು 2023 ರಲ್ಲಿ ಎರಡನೇ ಸ್ಥಾನದಲ್ಲಿದ್ದರು. ಆ ಎರಡೂ ವರ್ಷ ಎಚ್ ಸಿ ಎಲ್ ನ ಅಧ್ಯಕ್ಷ ಶಿವ್ ನಾಡಾರ್ ಅವರು ಆಗ್ರ ಸ್ಥಾನದಲ್ಲಿದ್ದರು.
ಆರ್ಥಿಕ ವರ್ಷ 2020 ರಲ್ಲಿ ಅವರು ದಿನಕ್ಕೆ 22 ಕೋಟಿ ರೂಪಾಯಿ ಅಂದ್ರೆ ವರ್ಷಕ್ಕೆ 7,904 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದರು. ಆರ್ಥಿಕ ವರ್ಷ 2021 ರಲ್ಲಿ, ಪ್ರೇಮ್ ಜಿ ದಿನಕ್ಕೆ 27 ಕೋಟಿ ರೂ. ಅಂದ್ರೆ ವರ್ಷಕ್ಕೆ 9,713 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದರು. 2022 ರಲ್ಲಿ 484 ಕೋಟಿ ರೂಪಾಯಿ ದಾನ ಮಾಡಿದ್ದರು. 2023 ರಲ್ಲಿ 1,774 ಕೋಟಿ ರೂಪಾಯಿ ದಾನ ಮಾಡಿದ್ದರು.
2010 ರಲ್ಲಿ, ಅವರು ಏಷ್ಯಾವೀಕ್ ನ ವಿಶ್ವದ 20 ಅತ್ಯಂತ ಪ್ರಭಾವೀ ಪುರುಷರ ಪಟ್ಟಿ ಸೇರಿದರು. 2004 ರಲ್ಲಿ ಮತ್ತು 2011 ರಲ್ಲಿ ಟೈಮ್ ಮ್ಯಾಗಝಿನ್‌ನಿಂದ 100 ಅತ್ಯಂತ ಪ್ರಭಾವೀ ವ್ಯಕ್ತಿಗಳಲ್ಲಿ ಅವರನ್ನು ಪಟ್ಟಿ ಮಾಡಲಾಗಿದೆ. ವರ್ಷಗಳಿಂದ, ಅವರು ನಿರಂತರವಾಗಿ ವಿಶ್ವದ 500 ಅತ್ಯಂತ ಪ್ರಭಾವಿ ಮುಸ್ಲಿಮರ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ.
ದೇಶ ವಿಭಜನೆಯ ವೇಳೆ ಮುಹಮ್ಮದ್ ಅಲಿ ಜಿನ್ನಾ ಅವರೇ ಸ್ವತಃ ಪಾಕಿಸ್ತಾನಕ್ಕೆ ಬರಲು ಆಹ್ವಾನಿಸಿದರೂ ಅಝೀಮ್ ಪ್ರೇಮ್ ಜಿ ಅವರ ಕುಟುಂಬ ತಮ್ಮ ಎಲ್ಲಾ ಸಂಪತ್ತಿನ ಜೊತೆ ಭಾರತದಲ್ಲೇ ಉಳಿದುಕೊಳ್ಳಲು ತೀರ್ಮಾನಿಸಿತ್ತು. ಈಗ ಅಝೀಮ್ ಪ್ರೇಮ್ ಜಿ ಉದ್ಯಮ ಕ್ಷೇತ್ರದಲ್ಲಿ ಮಾಡಿರುವ ಅಸಾಧಾರಣ ಸಾಧನೆಗಳದ್ದೇ ಒಂದು ಕತೆಯಾದರೆ, ಅವರು ಹಾಗು ಅವರ ಪತ್ನಿ ಯಾಸ್ಮೀನ್ ಪ್ರೇಮ್ ಜಿ ಅವರ ಸೇವಾ ಚಟುವಟಿಕೆಗಳು ಎಲ್ಲರಿಗೂ ಪ್ರೇರಣಾದಾಯಕ.
ಅಝೀಮ್ ಪ್ರೇಮ್ ಜಿ ಕೈ ಜೋಡಿಸಿದ್ದರಿಂದ ಈಗ ಪೂರ್ವ ಪ್ರಾಥಮಿಕ ಹಂತದಿಂದ ಹತ್ತನೇ ತರಗತಿವರೆಗಿನ ಸರಕಾರಿ ಶಾಲಾ ಮಕ್ಕಳಿಗೆ ಎರಡು ದಿನಗಳ ಬದಲಿಗೆ ವಾರದ ಆರೂ ದಿನ ಬಿಸಿಯೂಟದ ಜೊತೆ ಮೊಟ್ಟೆ ಸಿಗಲಿದೆ. ಇದಕ್ಕಾಗಿ ಮುಂದಿನ ಮೂರು ವರ್ಷಗಳಿಗೆ ಅಝೀಮ್ ಪ್ರೇಮ್ ಜಿ ಫೌಂಡೇಶನ್ ಒಂದೂವರೆ ಸಾವಿರ ಕೋಟಿ ರೂಪಾಯಿ ಕೊಡಲಿದೆ.







