CBSE ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ಬಯಲಿಗೆಳೆದಿದ್ದು ಹೇಗೆ?

ಸಾರ್ಥಕ್ ಸಿದ್ಧಾಂತ್ (Photo credit: X/ANI)
ಜನರು ನನ್ನನ್ನು ಜಾಣ ಎಂದುಕೊಳ್ಳುತ್ತಾರೆ, ಆದರೆ ನಾನು ಕೇವಲ ಒಬ್ಬ ಸಾಮಾನ್ಯ ಯುವಕ. ನಾನು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ ಅಷ್ಟೇ ಅಂತಾರೆ ಇತ್ತೀಚೆಗಷ್ಟೇ ಶಾಲಾ ಶಿಕ್ಷಣ ಮುಗಿಸಿರುವ 18 ವರ್ಷದ ಸಾರ್ಥಕ್ ಸಿದ್ಧಾಂತ್. ಕೋಡಿಂಗ್, ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ನಲ್ಲಿ ಆಸಕ್ತಿ ಹೊಂದಿರುವ ಸಾರ್ಥಕ್, ಸಿಬಿಎಸ್ಇ ಟೆಂಡರ್ ಪ್ರಕ್ರಿಯೆಯಲ್ಲಿನ ಸಾಲು ಸಾಲು ಅಕ್ರಮಗಳ ಕುರಿತು ಬರೆದ ಬ್ಲಾಗ್ ಪೋಸ್ಟ್ ದೇಶದಾದ್ಯಂತ ತಲ್ಲಣ ಸೃಷ್ಟಿಸಿದ ಬೆನ್ನಲ್ಲೇ, ಅನಿರೀಕ್ಷಿತವಾಗಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಒಂದು ರೀತಿಯಲ್ಲಿ, ಇವರು ನಡೆಸಿದ ಈ ತನಿಖಾ ಶೋಧವು ವೃತ್ತಿಪರ ಪತ್ರಕರ್ತರು ಮಾಡುವ ಕೆಲಸವನ್ನು ಹೋಲುವಂತಿತ್ತು.
ಒಬ್ಬ ಸಮರ್ಥ ಪತ್ರಕರ್ತನಂತೆ, ಈ ವರ್ಷ ಜಾರಿಗೆ ತರಲಾದ 'ಆನ್ಸ್ಕ್ರೀನ್ ಮಾರ್ಕಿಂಗ್' (OSM) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಲೋಪದೋಷಗಳು ಜಗಜ್ಜಾಹೀರಾಗುತ್ತಿದ್ದಂತೆ, ಮೇ 22ರಂದು ಸಾರ್ಥಕ್ ತನ್ನ ಗಮನವನ್ನು ಸಿಬಿಎಸ್ಇ ಟೆಂಡರ್ ಪ್ರಕ್ರಿಯೆಯತ್ತ ಹರಿಸಿದರು. ಟೆಂಡರ್ ಪಡೆದ ಕಂಪನಿಯ ಆಯ್ಕೆ ಪ್ರಕ್ರಿಯೆಯನ್ನು ಆಳವಾಗಿ ಪರಿಶೀಲಿಸಲು ಅವರು ಬಯಸಿದ್ದರು. ಈ ಶೋಧ ಸಿಬಿಎಸ್ಇ ಮಂಡಳಿಯನ್ನು ಮಂಡಿಯೂರುವಂತೆ ಮಾಡಿದೆ. ಅಷ್ಟೇ ಅಲ್ಲದೆ, ಪ್ರಮುಖ ಅಕ್ರಮಗಳನ್ನು ಬಯಲಿಗೆಳೆದ ಸಾರ್ಥಕ್ ಮತ್ತು ಆತನ ತಂಡಕ್ಕೆ ಸರ್ಕಾರ ಅಧಿಕೃತವಾಗಿ ಧನ್ಯವಾದಗಳನ್ನು ಅರ್ಪಿಸಿದೆ.
ವಿದ್ಯಾರ್ಥಿ ಸಾರ್ಥಕ್ ಸುದ್ದಿಯಾಗಿದ್ದು ಹೇಗೆ?
ಸಾರ್ಥಕ್ ಮೂಲತಃ ಜಾರ್ಖಂಡ್ನ ಬೊಕಾರೊದರು. ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರರಾಗಿರುವ ಈತನ ಪೋಷಕರು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ, ಈ ಕುಟುಂಬ ರಾಂಚಿಯಲ್ಲಿ ಬಂದು ನೆಲೆಸಿತು. ತಂತ್ರಜ್ಞಾನ ಬಗ್ಗೆ ಸಾರ್ಥಕ್ ಗೆ ಬಾಲ್ಯದಲ್ಲೇ ಆಸಕ್ತಿ ಇತ್ತು. ಕೇವಲ 3ನೇ ವಯಸ್ಸಿನಲ್ಲೇ ಕಂಪ್ಯೂಟರ್ ಬಳಸುವ ಅವಕಾಶ ಪಡೆದಿದ್ದ ಸಾರ್ಥಕ್, ಅವುಗಳು ಹೇಗೆ ಕೆಲಸ ಮಾಡುತ್ತವೆ ಎಂಬ ತಾಂತ್ರಿಕ ಜ್ಞಾನವನ್ನು ಸಹಜವಾಗಿಯೇ ಮೈಗೂಡಿಸಿಕೊಂಡಿದ್ದರು. ಸಾರ್ಥಕ್ ನ ತಂದೆ ನಿಧನರಾಗಿದ್ದಾರೆ. ತನ್ನ ಈ ಸಾಧನೆಯ ಪ್ರೇರಣೆಗೆ ತನ್ನ ತಂದೆಯೇ ಕಾರಣ ಎನ್ನುತ್ತಾರೆ ಸಾರ್ಥಕ್.
"ನಾನು 6ನೇ ತರಗತಿಯಲ್ಲಿದ್ದಾಗ, ಇಂಟರ್ನೆಟ್ ಮೂಲಕ ನಾನೇ ಸ್ವತಃ ಕೋಡಿಂಗ್ ಕಲಿಯಬಹುದು ಎಂಬುದು ಗೊತ್ತಾಯಿತು, ಯಾವುದೇ ಔಪಚಾರಿಕ ತರಬೇತಿಯಿಲ್ಲದೆ ಆನ್ಲೈನ್ ಸಂಪನ್ಮೂಲಗಳ ಮೂಲಕ ನಾನು ಪ್ರೋಗ್ರಾಮಿಂಗ್ ಕಲಿಯಲು ಪ್ರಾರಂಭಿಸಿದೆ. ಗಂಟೆಗಟ್ಟಲೆ ಹೊಸ ಪ್ರಯೋಗಗಳನ್ನು ಮಾಡುತ್ತಾ, ಸ್ವಂತ ಪ್ರಾಜೆಕ್ಟ್ಗಳನ್ನು ರೂಪಿಸತೊಡಗಿದೆ. ತನ್ನ ಬ್ಲಾಗ್ಗೆ ಇಷ್ಟೊಂದು ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದ್ದರೂ, ತಾನು ಸಾಮಾಜಿಕ ಜಾಲತಾಣಗಳಲ್ಲಿ ಎಂದಿಗೂ ಅಷ್ಟೊಂದು ಸಕ್ರಿಯನಾಗಿರಲಿಲ್ಲ . ಆದರೆ, ಸಂಶೋಧನೆಯ ಪೋಸ್ಟ್ ವೈರಲ್ ಆದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈಗ ನಾನು ಸತತವಾಗಿ ಕರೆಗಳಿಗೆ ಉತ್ತರಿಸುತ್ತಿದ್ದೇನೆ, ಕಾಮೆಂಟ್ಗಳಿಗೆ ರಿಪ್ಲೈ ಮಾಡುತ್ತಿದ್ದೇನೆ. ಮಾಧ್ಯಮ ಸಂಸ್ಥೆಗಳೊಂದಿಗೆ ಮಾತನಾಡುತ್ತಿದ್ದೇನೆ. ಇದು ನಿಜಕ್ಕೂ ಆಯಾಸ ತರುತ್ತಿದೆ . ಈ ಹೊತ್ತಲ್ಲಿ ಲಭಿಸುತ್ತಿರುವ ಪ್ರಚಾರ ಕುಟುಂಬದ ಮೇಲೂ ಪರಿಣಾಮ ಬೀರಿದೆ. ಇದು ನನ್ನ ತಾಯಿಗೂ ತಡೆದುಕೊಳ್ಳಲು ಸಾಧ್ಯವಾಗದಷ್ಟು ದಿಢೀರ್ ಬೆಳವಣಿಗೆಯಾಗಿತ್ತು ಅಂತಾರೆ ಅವರು.
ಈ ಹೊಸ ಜನಪ್ರಿಯತೆಯನ್ನು ಹೇಗೆ ನಿಭಾಯಿಸುತ್ತಿದ್ದೀರಿ ಎಂದು ಕೇಳಿದಾಗ, ಕಳೆದ ಕೆಲವು ದಿನಗಳಿಂದ ಈ ಗಮನವು ತನ್ನ ದಿನಚರಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಕಳೆದ ಎರಡು ದಿನಗಳು ಅತ್ಯಂತ ಬ್ಯುಸಿ ದಿನಗಳಾಗಿತ್ತು.
ಶಾಲೆಯಲ್ಲಿ ಆತನ ಈ ಯಶಸ್ಸಿನ ಬಗ್ಗೆ ಗೆಳೆಯರ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಿದಾಗ ನನ್ನ ಸ್ನೇಹಿತರು ತುಂಬಾ ಸಂತೋಷವಾಗಿದ್ದಾರೆ. ಅವರು ನನಗೆ ಬೆಂಬಲವಾಗಿ ನಿಂತಿದ್ದಾರೆ. ಇದೆಲ್ಲವೂ ಇಷ್ಟೊಂದು ದಿಢೀರನೆ ಹೇಗೆ ಹೊರಬಂತು ಎಂದು ಅವರು ಆಶ್ಚರ್ಯ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ ಸಾರ್ಥಕ್.
ಮೇ 20ರವರೆಗೂ ಸಾರ್ಥಕ್ ಅಚ್ಚರಿ ಮೂಡಿಸುವಂತಹ ಕೆಲವು ಟೆಕ್ನಿಕಲ್ ಪ್ರಾಜೆಕ್ಟ್ಗಳಲ್ಲಿ ತೊಡಗಿಸಿಕೊಂಡಿದ್ದರು. 18 ವರ್ಷದ ಸಾಮಾನ್ಯ ಯುವಕನೊಬ್ಬ ಮಾಡುವಂತಹ ಕೆಲಸಗಳೇ ಅವುಗಳಾಗಿದ್ದವು.
"ಈ ಟೆಂಡರ್ ಅನ್ನು ಯಾರಿಗೆ ನೀಡಲಾಗಿದೆ, ಆ ಕಂಪನಿ ಯಾವುದು ಮತ್ತು ಅದರ ಹಿನ್ನೆಲೆ ಏನು ಎಂಬುದನ್ನು ತಿಳಿಯಲು ಮಾತ್ರ ನಾನು ಬಯಸಿದ್ದೆ. ಈ ಮಾಹಿತಿಯನ್ನು ಹೊರತೆಗೆಯುವ ಪ್ರಕ್ರಿಯೆಯು ಇತರ ಯಾವುದೇ ಸಾಮಾನ್ಯ ಸಂಶೋಧನಾ ಕಾರ್ಯಕ್ಕಿಂತ ಭಿನ್ನವಾಗಿರಲಿಲ್ಲ. ದಾಖಲೆಗಳನ್ನು ಪರಿಶೀಲಿಸುವುದು, ಮಾಹಿತಿಯ ಜಾಡು ಹಿಡಿಯುವುದು, ವಿವರಗಳನ್ನು ಪರಸ್ಪರ ಲಿಂಕ್ ಮಾಡುವುದು ಒಂದು ದಿನನಿತ್ಯದ ಕೆಲಸದಂತೆ ಅನಿಸಿತೇ ವಿನಾಃ ಅದರಲ್ಲಿ ಯಾವುದೇ ಭಯಂಕರ ಶ್ರಮವಿರಲಿಲ್ಲ. ಆದ್ದರಿಂದಲೇ ತನಗೆ ಸಿಗುತ್ತಿರುವ 'ಇನ್ವೆಸ್ಟಿಗೇಟಿವ್ ಜರ್ನಲಿಸಂ' ಎಂಬ ಹಣೆಪಟ್ಟಿಯನ್ನು ಒಪ್ಪಿಕೊಳ್ಳಲು ಸಾರ್ಥಕ್ ಸಿದ್ಧರಿಲ್ಲ. ತನ್ನನ್ನು ಕಾಡಿದ ಒಂದು ಪ್ರಶ್ನೆಗೆ ಉತ್ತರ ಹುಡುಕಲು ತಾನು ಪ್ರಯತ್ನಿಸಿದೆ. ಮಾಹಿತಿಯನ್ನು ಕಲೆಹಾಕಿ ಸಾರ್ವಜನಿಕ ವಲಯದಲ್ಲಿ ಇಡುವ ಒಂದು ಪ್ರಾಮಾಣಿಕ ಪ್ರಯತ್ನ ಇದಾಗಿತ್ತು . ಆನ್ಲೈನ್ನಲ್ಲಿ ನನಗೆ ಹಲವರು ಪತ್ರಕರ್ತ ಸ್ನೇಹಿತರಿದ್ದಾರೆ. ಅವರೊಂದಿಗೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಕುರಿತು ಆಗಾಗ್ಗೆ ಚರ್ಚಿಸುತ್ತಿರುತ್ತೇನೆ. ಈ ಇಡೀ ಕಾರ್ಯಾಚರಣೆಯಲ್ಲಿ ತನಗೆ ಸಾಥ್ ನೀಡಿದ್ದು ಸಹೋದ್ಯೋಗಿಗಳಾದ ನಿಸರ್ಗ, ಅವಿರಲ್, ತ್ರಿದೀಪ್, ಹರ್ಷವರ್ಧನ್ ಮತ್ತು ಸಂಜಯ್ ಮೌರ್ಯ ಎಂಬವರು. ಅವರಿಗೆ ನಾನು ಕೃತಜ್ಞನಾಗಿದ್ದೇನೆ ಎಂಬುದು ಸಾರ್ಥಕ್ ಮಾತು.
ಪತ್ರಿಕೋದ್ಯಮದಲ್ಲಿ ಸಾರ್ಥಕ್ ಗೆ ‘ಸ್ವಲ್ಪ ಮಟ್ಟಿನ’ ಆಸಕ್ತಿ ಇದೆಯಾದರೂ, ‘ಸಿವಿಕ್ ಟೆಕ್ನಾಲಜಿ’ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಮಹದಾಸೆ ಇದೆ. ಅಂದರೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸುವುದು ಆತನ ಆಶಯ.
ಪ್ರಸ್ತುತ ತಾನು "ಟೆಂಡರ್ ಅಗ್ರಿಗೇಟರ್ ಅಂಡ್ ಅಕೌಂಟೆಬಿಲಿಟಿ ಇಂಜಿನ್" ಎಂದು ಕರೆಯುವ ಹೊಸ ಪ್ರಾಜೆಕ್ಟ್ ಒಂದರ ಮೇಲೆ ಕೆಲಸ ಮಾಡುತ್ತಿದ್ದೇನೆ ಎಂದು ಸಾರ್ಥಕ್ ಹೇಳಿದ್ದಾರೆ .ಇದು ಬಳಕೆದಾರರು ಟೆಂಡರ್ಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ಪಡೆಯಲು ಮತ್ತು ವಿಶ್ಲೇಷಿಸಲು ನೆರವಾಗುವಂತಹ ಒಂದು ವೇದಿಕೆಯಾಗಿದೆ.
ಕೋಡಿಂಗ್ ಮತ್ತು ತಂತ್ರಜ್ಞಾನದ ಆಚೆಗೂ, ಸಾರ್ಥಕ್ಗೆ ಶಾಯರಿ ಮತ್ತು ಮುಶಾಯಿರಾ (ಕವಿಗೋಷ್ಠಿ) ಕೇಳುವುದೆಂದರೆ ಇಷ್ಟ. ಇದರೊಂದಿಗೆ, ಜನಪ್ರಿಯ ವಿಡಿಯೊ ಗೇಮ್ ಆದ 'ಮೈನ್ಕ್ರಾಫ್ಟ್' ಆಡುತ್ತಾರೆ . ಕಾವ್ಯದ ಮೇಲೆ ಆತನಿಗೆ ಅಪಾರ ಪ್ರೀತಿಯಿದೆ. ತಾನು "ಕೇವಲ ಸಾಮಾನ್ಯ ವ್ಯಕ್ತಿ" ಎಂದು ಪದೇ ಪದೇ ಹೇಳುವ ಯುವಕನ ಜಿಜ್ಞಾಸೆ ಮತ್ತು ಹಠಬಿಡದ ಪ್ರಯತ್ನಗಳು, ಇಂದು ಆತನನ್ನು ಇಡೀ ದೇಶವೇ ತಿರುಗಿ ನೋಡುವಂತಹ ಅಸಾಮಾನ್ಯ ಬೆಳಕಿನ ವಲಯದಲ್ಲಿ ತಂದು ನಿಲ್ಲಿಸಿವೆ.
ಸಾರ್ಥಕ್ ಪತ್ತೆ ಹಚ್ಚಿದ್ದು ಏನನ್ನು? ಯಾವ ರೀತಿ?
ಸಾರ್ಥಕ್ ಸಿದ್ಧಾಂತ್ 2025–26ರ ಬ್ಯಾಚ್ನ 12ನೇ ತರಗತಿಯ ವಿದ್ಯಾರ್ಥಿ. ದೇಶದ ಇತರೆ ಸುಮಾರು 17 ಲಕ್ಷ ವಿದ್ಯಾರ್ಥಿಗಳಂತೆ, ಸಾರ್ಥಕ್ ಅವರ ಉತ್ತರ ಪತ್ರಿಕೆಗಳನ್ನು ಕೂಡ ಸಿಬಿಎಸ್ಇಯ 'ಆನ್-ಸ್ಕ್ರೀನ್ ಮಾರ್ಕಿಂಗ್' ವ್ಯವಸ್ಥೆಯ ಮೂಲಕವೇ ಮೌಲ್ಯಮಾಪನ ಮಾಡಲಾಗಿತ್ತು. ಮೌಲ್ಯಮಾಪನಗೊಂಡ ತನ್ನ ಉತ್ತರ ಪತ್ರಿಕೆಗಳ ಬ್ಲರ್ ಮತ್ತು ಅಪೂರ್ಣ ಸ್ಕ್ಯಾನ್ ಪ್ರತಿಗಳನ್ನು ಪಡೆದ ನಂತರ, ಸಿಬಿಎಸ್ಇಯ ಖರೀದಿ ದಾಖಲೆಗಳು ಹಾಗೂ ಮೌಲ್ಯಮಾಪನದ ಟೆಂಡರ್ಗಳನ್ನು ದಿನಗಟ್ಟಲೆ ಕೂತು ವಿಶ್ಲೇಷಿಸಿರುವುದಾಗಿ ಸಾರ್ಥಕ್ ತಿಳಿಸಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಲಭ್ಯವಿದ್ದ "ಸಿಬಿಎಸ್ಇಯ ಎಲ್ಲಾ 576 ಟೆಂಡರ್ಗಳನ್ನು ತಾನು ಡೇಟಾ ಸಂಗ್ರಹ ಮಾಡಿ ಮರುಪರಿಶೀಲಿಸಿದ್ದೇನೆ" ಎಂದು ಸಾರ್ಥಕ್ ಹೇಳಿದ್ದಾರೆ. Central Public Procurement ಪೋರ್ಟಲ್ನಲ್ಲಿರುವ ಟೆಂಡರ್ ದಾಖಲೆಗಳ ಕುರಿತ ವಿಶ್ಲೇಷಣೆಯನ್ನು ಆತ ತನ್ನ ಬ್ಲಾಗ್ನಲ್ಲಿ (_sarthaksidhant.com/coemp_t) ಪ್ರಕಟಿಸಿದ ಬೆನ್ನಲ್ಲೇ, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿ ಸುದ್ದಿಯಾಯಿತು.
'Coempt EduTeck ಕಂಪನಿಗೆ ಅನುಕೂಲ ಮಾಡಿಕೊಡಲು ಸಿಬಿಎಸ್ಇ ತನ್ನದೇ ನಿಯಮಾವಳಿಗಳನ್ನು ಹೇಗೆ ತಿದ್ದಿ ಬರೆಯಿತು' ಎಂಬ ಶೀರ್ಷಿಕೆಯ ತನ್ನ ಬ್ಲಾಗ್ನಲ್ಲಿ ಸಾರ್ಥಕ್ , "ಇದು ಒಂದು ಬೃಹತ್ ಸಾರ್ವಜನಿಕ ಸಂಸ್ಥೆಯು ತನ್ನದೇ ಆದ ನಿಯಮ ಪುಸ್ತಕವನ್ನು ಮರುಬರೆಯುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಉದ್ದೇಶಪೂರ್ವಕವಾಗಿ ಹೇಗೆ ಆಟವಾಡಿತು ಎಂಬುದರ ಕಥೆ" ಎಂದು ಬರೆದಿದ್ದಾರೆ.
ಮೂರು ಸುತ್ತಿನ ಟೆಂಡರ್ ಪ್ರಕ್ರಿಯೆಗಳಲ್ಲಿ ಮಂಡಳಿಯು ಅರ್ಹತೆ ಮತ್ತು ತಾಂತ್ರಿಕ ಅಗತ್ಯತೆಗಳ ನಿಯಮಗಳನ್ನು ಮಾರ್ಪಡಿಸಿತ್ತು, ಈ ಬದಲಾವಣೆಗಳು ನೇರವಾಗಿ 'ಕೋಯಂಪ್ಟ್ ಎಡುಟೆಕ್' ಕಂಪನಿಗೆ ಲಾಭದಾಯಕವಾಗಿದ್ದವು ಎಂದು ಸಾರ್ಥಕ್ ತನ್ನ ಬ್ಲಾಗ್ನಲ್ಲಿ ಆರೋಪಿಸಿದ್ದಾರೆ.
'ಇಂಡಿಯಾ ಟುಡೇ' ವರದಿಯ ಪ್ರಕಾರ, ಕೋಯಂಪ್ಟ್ ಎಡುಟೆಕ್ ಕಂಪನಿಯನ್ನು ಈ ಹಿಂದೆ 'ಗ್ಲೋಬರೆನಾ ಟೆಕ್ನಾಲಜೀಸ್' ಎಂದು ಕರೆಯಲಾಗುತ್ತಿತ್ತು. ಇದು 2019 ರಲ್ಲಿ ತೆಲಂಗಾಣದ ಇಂಟರ್ಮಿಡಿಯೆಟ್ ಪರೀಕ್ಷಾ ವಿವಾದದೊಂದಿಗೆ ನಂಟು ಹೊಂದಿದ್ದ ಸಂಸ್ಥೆಯಾಗಿದೆ.
ಹಳೆಯ ವಿವಾದವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ 'ಎಎನ್ಐ' ಜೊತೆ ಮಾತನಾಡಿದ ಸಾರ್ಥಕ್ , "ನನ್ನ ಬ್ಲಾಗ್ ಪ್ರಕಾರ ಅಲ್ಲಿ ಕನಿಷ್ಠ 15 ಲೋಪದೋಷಗಳಿದ್ದವು. ಅವುಗಳಲ್ಲಿ ನಾನು ಮೂರು ಅಥವಾ ನಾಲ್ಕನ್ನು ಪ್ರಮುಖವಾಗಿ ಹೈಲೈಟ್ ಮಾಡಲು ಬಯಸುತ್ತೇನೆ. ಮೊದಲು ಕೋಯಂಪ್ಟ್ ಹಿನ್ನೆಲೆಯ ಬಗ್ಗೆ ಹೇಳುತ್ತೇನೆ. ಇದನ್ನು ಈ ಹಿಂದೆ ಗ್ಲೋಬರೆನಾ ಎಂದು ಕರೆಯಲಾಗುತ್ತಿತ್ತು. ಅವರ ಇತಿಹಾಸವೇ ಅತ್ಯಂತ ಕಳಂಕಿತವಾಗಿದೆ. ಇದೇ ಕೋಯಂಪ್ಟ್ ಸಂಸ್ಥೆಯ ಕಳಪೆ ಮೌಲ್ಯಮಾಪನ ವ್ಯವಸ್ಥೆಯಿಂದಾಗಿ ಹಿಂದೆ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದಿದ್ದಾರೆ.
ತನ್ನ ಈ ಸಂಶೋಧನೆಯ ಸಮಯದಲ್ಲಿ ತಾನು ಎಥಿಕಲ್ ಹ್ಯಾಕರ್ ನಿಸರ್ಗ್ ಅಧಿಕಾರಿಯವರೊಂದಿಗೆ ಜಂಟಿಯಾಗಿ ಕೆಲಸ ಮಾಡಿರುವುದಾಗಿ ಸಾರ್ಥಕ್ ಹೇಳಿರುವುದನ್ನು 'ನ್ಯೂಸ್18' ಉಲ್ಲೇಖಿಸಿದೆ. ಕಳಪೆ ಕಾರ್ಯಕ್ಷಮತೆ, ಬ್ಲಾಕ್ಲಿಸ್ಟ್ ಗೆ ಸೇರಿಸುವುದು , ಆರ್ಥಿಕ ಅರ್ಹತೆಯ ಮಿತಿಗಳು, ಸಿಎಮ್ಎಮ್ಐ ಮಟ್ಟಗಳು ಮತ್ತು ಪ್ರಾಜೆಕ್ಟ್ ಅರ್ಹತಾ ಮಾನದಂಡಗಳಿಗೆ ಸಂಬಂಧಿಸಿದ ನಿಯಮಾವಳಿಗಳು ಸೇರಿದಂತೆ ಟೆಂಡರ್ ನಿಯಮಗಳನ್ನು ಬದಲಾಯಿಸಿದ ರೀತಿಯಲ್ಲಿದ್ದ ಹಲವು ಗಂಭೀರ ಲೋಪಗಳನ್ನು ಸಾರ್ಥಕ್ ಎತ್ತಿ ತೋರಿಸಿದ್ದಾರೆ.
"ಮೊದಲ ಲೋಪವೇನೆಂದರೆ, ಹಳೆಯ ಟೆಂಡರ್ನಲ್ಲಿ ಕಳಪೆ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಮೂರು ನಿರ್ದಿಷ್ಟ ನಿಯಮಗಳಿದ್ದವು. ಅಂದರೆ ಸೇವಾ ಪೂರೈಕೆದಾರ ಸಂಸ್ಥೆಯ ಕಾರ್ಯಕ್ಷಮತೆ ಕಳಪೆಯಾಗಿದ್ದರೆ ಅದನ್ನು ಅನರ್ಹಗೊಳಿಸಲಾಗುತ್ತಿತ್ತು. ಆದರೆ, ಹೊಸ ಆರ್ಎಫ್ಪಿ (RFP - ಟೆಂಡರ್ ಪ್ರಸ್ತಾವನೆ) ಯಲ್ಲಿ ಆ ನಿಯಮಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿತ್ತು" ಎಂದು ಸಾರ್ಥಕ್ ಆರೋಪಿಸಿದ್ದಾರೆ.
ತಾನು ವೈಯಕ್ತಿಕವಾಗಿ 'ಆನ್ಸ್ಕ್ರೀನ್ ಮಾರ್ಕಿಂಗ್' ವ್ಯವಸ್ಥೆಯ ವಿರುದ್ಧವಾಗಿಲ್ಲ. ನನ್ನ ಪ್ರಕಾರ ಒಎಸ್ಎಂ ಒಂದು ಒಳ್ಳೆಯ ಬದಲಾವಣೆ, ಆದರೆ ಅದನ್ನು ಜಾರಿಗೆ ತರುವ ಮುನ್ನ ವ್ಯಾಪಕ ಶ್ರೇಣಿಯ ಪರೀಕ್ಷೆಗಳು ಮತ್ತು ಉತ್ತಮ ಪ್ರಾಯೋಗಿಕ ಯೋಜನೆಗಳನ್ನು ಹಮ್ಮಿಕೊಳ್ಳಬೇಕಿತ್ತು ಎಂದಿದ್ದಾರೆ ಸಾರ್ಥಕ್.
ಸಂಸದೀಯ ಸಮಿತಿಯ ಮುಂದೆ ಸಾರ್ಥಕ್ ಹಾಜರಾಗಿದ್ದು ಏಕೆ?
ಸಿಬಿಎಸ್ಇ ಟೆಂಡರ್ ದಾಖಲೆಗಳ ಕುರಿತ ಸಾರ್ಥಕ್ ಅವರ ವಿಶ್ಲೇಷಣೆಯು ಅಂತರ್ಜಾಲದಲ್ಲಿ ಅತ್ಯಂತ ವೇಗವಾಗಿ ವೈರಲ್ ಆಗಿದ್ದಲ್ಲದೆ, ಮಂಡಳಿಯು ಈ ಗುತ್ತಿಗೆಯನ್ನು ನೀಡಿದ ಪ್ರಕ್ರಿಯೆಯ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತು.
ಈ ಹಿನ್ನೆಲೆಯಲ್ಲಿ ಸಾರ್ಥಕ್ ಸಂಸತ್ ಭವನದಲ್ಲಿ 'ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಜನರು ಮತ್ತು ಕ್ರೀಡೆಗಳ ಮೇಲಿನ ಸಂಸದೀಯ ಸ್ಥಾಯಿ ಸಮಿತಿ'ಯ ಮುಂದೆ ಪ್ರೆಸೆಂಟೇಶನ್ ನೀಡಿದ್ದಾರೆ. 'ಹಿಂದೂಸ್ತಾನ್ ಟೈಮ್ಸ್' ವರದಿಯ ಪ್ರಕಾರ, ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್ ಅವರ ಅಧ್ಯಕ್ಷತೆಯ ಈ ಸಮಿತಿಯು ಲೋಕಸಭೆಯ 21 ಮತ್ತು ರಾಜ್ಯಸಭೆಯ 10 ಸಂಸದರನ್ನು ಒಳಗೊಂಡಿದೆ. ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ, ದಾಖಲೆಗಳನ್ನು ಕೋರುವ ಮತ್ತು ನೀತಿ ಅನುಷ್ಠಾನವನ್ನು ಮರುಪರಿಶೀಲಿಸುವ ಅಧಿಕಾರ ಈ ಸಮಿತಿಗಿದೆ.
ಸಮಿತಿಯು ಪ್ರಸ್ತುತ ಸಿಬಿಎಸ್ಇ ಬಳಸಿದ ಒಎಸ್ಎಂ ವ್ಯವಸ್ಥೆಯ ತನಿಖೆ ನಡೆಸುತ್ತಿದೆ. "ಸಿಬಿಎಸ್ಇಯ ಆನ್ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯಿಂದ ಬಾಧಿತನಾದ ವಿದ್ಯಾರ್ಥಿಗಳಲ್ಲಿ ಒಬ್ಬನಾದ ಸಾರ್ಥಕ್ ಸಿದ್ದಾಂತ್ ತನ್ನ ಪ್ರೆಸೆಂಟೇಶನ್ ನೀಡಿದ್ದಾನೆ. (ಇದಕ್ಕೆ ಸಿಬಿಎಸ್ಇ ನೀಡಿರುವ ಉತ್ತರಗಳ ಕುರಿತು) ಸಮಿತಿಯು ಮುಂದಿನ ತೀರ್ಮಾನ ಕೈಗೊಳ್ಳಲಿದೆ" ಎಂದು ಸಿಂಗ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿರುವಂತೆ, ಸಮಿತಿಯು ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮತ್ತು ಸಿಬಿಎಸ್ಇ ಅಧ್ಯಕ್ಷರು ಸೇರಿದಂತೆ ಹಿರಿಯ ಅಧಿಕಾರಿಗಳ ಹೇಳಿಕೆಗಳನ್ನು ಸಹ ಆಲಿಸಿದೆ. ಇದರೊಂದಿಗೆ, ಸಮಿತಿಯು 9 ಮತ್ತು 10ನೇ ತರಗತಿಗಳಲ್ಲಿ ತ್ರಿಭಾಷಾ ಸೂತ್ರದ ಅನುಷ್ಠಾನದ ಕುರಿತೂ ಪರಿಶೀಲನೆ ನಡೆಸುತ್ತಿದೆ.
'ಇಂಡಿಯಾ ಟುಡೇ' ವರದಿಯ ಪ್ರಕಾರ, ಎಥಿಕಲ್ ಹ್ಯಾಕರ್ ನಿಸರ್ಗ್ ಈ ಹಿಂದೆ ಒಎಸ್ಎಂ ಪ್ಲಾಟ್ಫಾರ್ಮ್ನಲ್ಲಿ ಇರಬಹುದಾದ ಸುರಕ್ಷತಾ ಲೋಪಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಇದು ಏಕೆ ಮುಖ್ಯವಾಗುತ್ತದೆ?
ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಈ ಬೆಳವಣಿಗೆ ಅತ್ಯಂತ ಮುಖ್ಯವಾದುದಾಗಿದೆ, ಏಕೆಂದರೆ ಸಂಸದೀಯ ಸಮಿತಿಯು ಹೊಣೆಗಾರಿಕೆಯನ್ನು ಜಾರಿಗೊಳಿಸುವ ಶಕ್ತಿ ಹೊಂದಿದೆ. ಇದು ಉನ್ನತ ಮಟ್ಟದ ಅಧಿಕಾರಿಗಳನ್ನು ಸಮನ್ಸ್ ನೀಡಿ ಕರೆಸಿ, ಸಾಕ್ಷ್ಯ ನುಡಿಯುವಂತೆ ಮಾಡಬಹುದು ಮತ್ತು ಸಿಬಿಎಸ್ಇಯ ಆಂತರಿಕ ದಾಖಲೆಗಳು ಹಾಗೂ ಫೈಲ್ಗಳನ್ನು ಹಾಜರುಪಡಿಸುವಂತೆ ಆದೇಶಿಸಬಹುದು.
ಸಾರ್ಥಕ್ ಸಿದ್ಧಾಂತ್ನ ಬ್ಲಾಗ್ ಅನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳು ಕೈಗೆತ್ತಿಕೊಂಡಿದ್ದು, ಈ ವಿಷಯವನ್ನು ರಾಷ್ಟ್ರ ಮಟ್ಟದಲ್ಲಿ ಮತ್ತಷ್ಟು ಪ್ರತಿಧ್ವನಿಸುವಂತೆ ಮಾಡಿದೆ. "ನಿಯಮಗಳನ್ನು ತಮಗನುಕೂಲವಾಗುವಂತೆ ಮಾಡಿದ ನಂತರವಷ್ಟೇ ಅರ್ಹತೆ ಪಡೆದ ಕಂಪನಿಯೊಂದಕ್ಕೆ 18.5 ಲಕ್ಷ ಮಕ್ಕಳ ಭವಿಷ್ಯವನ್ನು ಹಸ್ತಾಂತರಿಸಲಾಗಿದೆ. ಭಾರತದ 'ಜೆನ್ ಝೀ' ಪೀಳಿಗೆಯು ಅತ್ಯಂತ ಪ್ರತಿಭಾವಂತ ಮತ್ತು ನಿರ್ಭೀತವಾಗಿದೆ. ತಡವಾಗಿಯಾದರೂ ಅವರು ಸಂಪೂರ್ಣ ಸತ್ಯವನ್ನು ಕಂಡುಕೊಳ್ಳಲಿದ್ದಾರೆ" ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಮತ್ತೊಂದೆಡೆ, ಸಿಬಿಎಸ್ಇ ಮಂಡಳಿಯು ಯಾವುದೇ ಅಕ್ರಮ ನಡೆದಿರುವುದನ್ನು ನಿರಾಕರಿಸಿದ್ದು, ಸಾರ್ಥಕ್ ಅವರ ಕೆಲವು ಆರೋಪಗಳು "ತಪ್ಪು", ಇನ್ನು ಕೆಲವು ದಾರಿತಪ್ಪಿಸುವಂತಿವೆ ಎಂದು ಹೇಳಿದೆ. ಕೋಯಂಪ್ಟ್ ಎಡುಟೆಕ್ ಕಂಪನಿಗೆ ಗುತ್ತಿಗೆ ನೀಡುವಲ್ಲಿ ಸೂಕ್ತ ಪ್ರಕ್ರಿಯೆಯನ್ನು ಪಾಲಿಸಲಾಗಿದೆ ಎಂದು ಅದು ಪ್ರತಿಪಾದಿಸಿದೆ.
ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ್ದು, "ಟೆಂಡರ್ ನಿಯಮಗಳ ಮಾರ್ಪಾಡನ್ನು ಅವಸರದ ನಿರ್ಧಾರ ಎಂದು ನೋಡಬಾರದು. ಬದಲಿಗೆ ಉತ್ತಮ ಫಲಿತಾಂಶಗಳನ್ನು ಪಡೆಯಲು ಹಿಂದಿನ ಸುತ್ತುಗಳಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸುವ ಪ್ರಕ್ರಿಯೆ ಇದಾಗಿತ್ತು" ಎಂದಿದ್ದಾರೆ. ಮತ್ತೊಬ್ಬ ಅಧಿಕಾರಿ ಮಾತನಾಡಿ, "ಈ ಸಂಸ್ಥೆಯನ್ನು ಯಾವುದೇ ಸರ್ಕಾರಿ ಸಂಸ್ಥೆಯೂ ಕಪ್ಪುಪಟ್ಟಿಗೆ ಸೇರಿಸಿಲ್ಲ . ಇದರ ಬಗ್ಗೆ ಯಾರೂ ಯಾವುದೇ ಕಳವಳ ವ್ಯಕ್ತಪಡಿಸಿಲ್ಲ" ಎಂದು ಸಮರ್ಥಿಸಿಕೊಂಡಿದ್ದಾರೆ.
ಕೋಯಂಪ್ಟ್ ಎಡುಟೆಕ್ ಸಂಸ್ಥೆಯು ಸಹ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದೆ. ಹಿಂದೂಸ್ತಾನ್ ಟೈಮ್ಸ್ ವರದಿಯು ಕೋಯಂಪ್ಟ್ ಎಡುಟೆಕ್ ಸಿಇಒ ವಿ.ಎಸ್.ಎನ್. ರಾಜು ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದು, "ನಾವು ನಮ್ಮ ಹೆಸರನ್ನು ಬದಲಾಯಿಸಿದ್ದೇವೆ, ಇದು ನಮ್ಮ ಎಲ್ಲಾ ಗ್ರಾಹಕರಿಗೂ ತಿಳಿದಿದೆ . ನಾನೇ ಇಂದಿಗೂ ಸಿಇಒ ಆಗಿ ಮುಂದುವರಿದಿದ್ದೇನೆ. ನಾವೇನನ್ನೂ ಮುಚ್ಚಿಡುತ್ತಿಲ್ಲ" ಎಂದಿದ್ದಾರೆ. ಒಎಸ್ಎಂ ವ್ಯವಸ್ಥೆಯಲ್ಲಿ ವ್ಯಾಪಕ ದೋಷಗಳಿವೆ ಎಂದು ಹೇಳುವುದು "ಸಂಪೂರ್ಣ ತಪ್ಪು" ಎಂದಿರುವ ರಾಜು, ಯಾವುದೇ ದೂರುಗಳಿದ್ದರೂ ಅವು ಕೇವಲ "ಅಪರೂಪದ ವೈಯಕ್ತಿಕ ಪ್ರಕರಣಗಳಾಗಿರಬಹುದು" ಎಂದು ಹೇಳಿದ್ದಾರೆ.






