Rajasthan | 11 ವರ್ಷಗಳ ಬಳಿಕ ಡಂಗಾವಾಸ್ ದಲಿತ ಹತ್ಯಾಕಾಂಡ ಪ್ರಕರಣದ ಎಲ್ಲ 40 ಆರೋಪಿಗಳ ಖುಲಾಸೆ; 1,500 ರೂ. ಸಾಲದ ಭೂ ವಿವಾದಕ್ಕೆ ಬಲಿಯಾಗಿತ್ತು 6 ಜೀವ

Photo Credit : thewire.in
ಜೈಪುರ: ರಾಜಸ್ಥಾನದ ನಾಗೌರ್ ಜಿಲ್ಲೆಯ ಡಂಗಾವಾಸ್ ಗ್ರಾಮದಲ್ಲಿ 2015ರಲ್ಲಿ ನಡೆದ ಬಹುಚರ್ಚಿತ ದಲಿತ ಹತ್ಯಾಕಾಂಡ ಪ್ರಕರಣದಲ್ಲಿ 11 ವರ್ಷಗಳ ಬಳಿಕ ಮೆರ್ಟಾದ SC/ST(ದೌರ್ಜನ್ಯ ತಡೆ) ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯವು CBI ಆರೋಪಪಟ್ಟಿ ಸಲ್ಲಿಸಿದ್ದ ಎಲ್ಲ 40 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಅಪರಾಧ ನಡೆದಿರುವುದು ಸಾಬೀತಾಗಿದೆ. ಆದರೆ ಆರೋಪಿಗಳ ಪಾತ್ರವನ್ನು ಕಾನೂನುಬದ್ಧ ಪುರಾವೆಗಳ ಮೂಲಕ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ತೀರ್ಪಿನ ಬಳಿಕ ಮೃತ ರತ್ನಾರಾಮ್ ಮೇಘವಾಲ್ ಅವರ ಪುತ್ರ ಅರ್ಜುನ್ ರಾಮ್ ಮೇಘವಾಲ್, "ನನ್ನ ತಂದೆ ಮತ್ತು ಸಂಬಂಧಿಕರನ್ನು ಕೊಂದವರಿಗೆ ಶಿಕ್ಷೆಯಾಗುತ್ತದೆ ಎಂದು ನಂಬಿದ್ದೆ. ಆದರೆ ಎಲ್ಲ ಆರೋಪಿಗಳೂ ಖುಲಾಸೆಯಾಗಿದ್ದಾರೆ. ಹಾಗಾದರೆ ನನ್ನ ಕುಟುಂಬವನ್ನು ಕೊಂದವರು ಯಾರು? ಅವರು ತಾವಾಗಿಯೇ ಸತ್ತಿದ್ದಾರೆಯೇ?" ಎಂದು ಪ್ರಶ್ನಿಸಿದರು.
ಕಳೆದ 11 ವರ್ಷಗಳಿಂದ ತಮ್ಮ ಮನೆಯ ಎದುರು ಪೊಲೀಸ್ ರಕ್ಷಣೆಗೆ ಸ್ಥಾಪಿಸಲಾಗಿರುವ ಟೆಂಟ್ ಬಳಿ ಮಾತನಾಡಿದ ಅವರು, "ನನ್ನ ಕುಟುಂಬದವರನ್ನು ಕೊಲ್ಲುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ದಾಳಿಯಲ್ಲಿ ನಾನು ಕೂಡ ಗಾಯಗೊಂಡಿದ್ದೆ. ಆದರೆ ಇಂದು ಆರೋಪಿಗಳು ಸ್ವತಂತ್ರವಾಗಿ ಓಡಾಡುತ್ತಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು.
►ಡಂಗಾವಾಸ್ ದಲಿತ ಹತ್ಯಾಕಾಂಡ: 2015ರಲ್ಲಿ ಏನಾಗಿತ್ತು?
2015ರ ಮೇ 14ರಂದು ರಾಜಸ್ಥಾನದ ನಾಗೌರ್ ಜಿಲ್ಲೆಯ ಡಂಗಾವಾಸ್ ಗ್ರಾಮದಲ್ಲಿ ನಡೆದ ದಲಿತ ಹತ್ಯಾಕಾಂಡವು ಭೂ ವಿವಾದದಿಂದ ಆರಂಭವಾಗಿ ಐವರು ದಲಿತರ ಸಾವಿಗೆ ಕಾರಣವಾದ ಭೀಕರ ಸಾಮೂಹಿಕ ಹಿಂಸಾಚಾರವಾಗಿತ್ತು. ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ನಂತರ ಪ್ರಕರಣದ ತನಿಖೆಯನ್ನು CBIಗೆ ವಹಿಸಲಾಗಿತ್ತು.
►50 ವರ್ಷಗಳ ಹಿಂದಿನ ಭೂ ವಿವಾದ
ಘಟನೆಗೆ ಮೂಲ ಕಾರಣ ಸುಮಾರು 23 ಬಿಘಾ ಕೃಷಿ ಭೂಮಿಯ ಮಾಲೀಕತ್ವದ ವಿವಾದವಾಗಿತ್ತು. 1961ರಲ್ಲಿ ರಾಜಸ್ಥಾನ ಸರಕಾರವು ಈ ಭೂಮಿಯನ್ನು ದಲಿತ ಸಮುದಾಯದ ಬಸ್ತಾರಾಮ್ ಮೇಘವಾಲ್ ಅವರಿಗೆ ಮಂಜೂರು ಮಾಡಿತ್ತು.ಬಳಿಕ ಭೂಮಿಯ ಹಕ್ಕು ಅವರ ದತ್ತು ಪುತ್ರ ರತ್ನಾರಾಮ್ ಮೇಘವಾಲ್ ಅವರಿಗೆ ವರ್ಗಾವಣೆಯಾಗಿತ್ತು.
1964ರಲ್ಲಿ ಬಸ್ತಾರಾಮ್ ಅವರು 1,500 ರೂ. ಸಾಲಕ್ಕಾಗಿ ಈ ಭೂಮಿಯನ್ನು ಚಿಮ್ನಾರಾಮ್ ಜಾಟ್ ಅವರಿಗೆ ಅಡಮಾನ ಇಟ್ಟಿದ್ದರು. ಸಾಲದ ಮೇಲೆ ಬಡ್ಡಿ ಪಡೆಯುವುದಿಲ್ಲ ಹಾಗೂ ಕೃಷಿ ಉತ್ಪನ್ನದಲ್ಲಿ ಪಾಲು ಇರುವುದಿಲ್ಲ ಎಂಬ ಷರತ್ತಿನಡಿ ಈ ವ್ಯವಹಾರ ನಡೆದಿತ್ತು ಎಂದು CBI ತನಿಖೆಯಲ್ಲಿ ತಿಳಿದುಬಂದಿದೆ.
ನಂತರ ಸಾಲ ಮರುಪಾವತಿ, ಭೂಮಿಯ ಸ್ವಾಧೀನ ಹಾಗೂ ಕೃಷಿ ಹಕ್ಕಿನ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ವಿವಾದ ಮುಂದುವರಿದಿತ್ತು.
2015ರಲ್ಲಿ ರತ್ನಾರಾಮ್ ಮೇಘವಾಲ್ ಅವರು ವಿವಾದಿತ ಜಮೀನಿನಲ್ಲಿ ಗುಡಿಸಲು ಮತ್ತು ಒಂದು ಶಾಶ್ವತ ಕೊಠಡಿ ನಿರ್ಮಿಸಿ ಕುಟುಂಬದೊಂದಿಗೆ ವಾಸಿಸಲು ಆರಂಭಿಸಿದ್ದರು. ಇದರಿಂದ ಭೂಮಿಯ ಮೇಲಿನ ಹಕ್ಕಿನ ವಿವಾದ ಮತ್ತಷ್ಟು ತೀವ್ರಗೊಂಡಿತ್ತು.
ಮೇ 10, 2015ರಂದು ಗ್ರಾಮದಲ್ಲಿ ವಿವಾದ ಬಗೆಹರಿಸಲು ಪಂಚಾಯಿತಿ ಕರೆಯಲಾಗಿತ್ತು. ಆದರೆ ದೂರುದಾರರ ಪರದವರು ಸಭೆಗೆ ಹಾಜರಾಗಿರಲಿಲ್ಲ. ಮೇ 14ರಂದು ಮತ್ತೊಮ್ಮೆ ಪಂಚಾಯಿತಿ ನಡೆಸಲಾಯಿತು. ಆದರೆ ಮಾತುಕತೆ ಯಶಸ್ವಿಯಾಗದೆ ಉದ್ವಿಗ್ನತೆ ಹೆಚ್ಚಾಯಿತು.
►ಸುಮಾರು 200 ಮಂದಿಯ ಗುಂಪಿನ ದಾಳಿ
ಅದೇ ದಿನ ಮಧ್ಯಾಹ್ನದ ವೇಳೆಗೆ ಸುಮಾರು 200 ಮಂದಿ ಗ್ರಾಮಸ್ಥರು ಹರಿತ ಹಾಗೂ ಮೊಂಡಾದ ಆಯುಧಗಳೊಂದಿಗೆ ರತ್ನಾರಾಮ್ ಮೇಘವಾಲ್ ಅವರ ಕುಟುಂಬದ ಮೇಲೆ ದಾಳಿ ನಡೆಸಿದರು ಎಂದು FIR ನಲ್ಲಿ ಆರೋಪಿಸಲಾಗಿದೆ.
ದಾಳಿಕೋರರು ಮೊದಲು ಟ್ರ್ಯಾಕ್ಟರ್ ಗಳನ್ನು ಬಳಸಿ ದಲಿತ ಕುಟುಂಬ ನಿರ್ಮಿಸಿದ್ದ ಗುಡಿಸಲು, ಮನೆ ಹಾಗೂ ಇತರೆ ಕಟ್ಟಡಗಳನ್ನು ನೆಲಸಮ ಮಾಡಿದರು.
ನಂತರ ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಲಾಯಿತು. ಕೆಲವರನ್ನು ಲಾಠಿ, ಕಬ್ಬಿಣದ ರಾಡ್ ಹಾಗೂ ಇತರೆ ಆಯುಧಗಳಿಂದ ಥಳಿಸಲಾಯಿತು.
►ಟ್ರ್ಯಾಕ್ಟರ್ ಹರಿಸಿ ಕೊಲೆ ಆರೋಪ
ಪ್ರಕರಣದ ತನಿಖೆ ವೇಳೆ ದಾಳಿಕೋರರು ಕೆಲವರ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಆರೋಪವೇ ದೇಶಾದ್ಯಂತ ಪ್ರಕರಣದ ಕುರಿತು ಆಕ್ರೋಶ ಹೆಚ್ಚಲು ಪ್ರಮುಖ ಕಾರಣವಾಗಿತ್ತು.
ಆದರೆ ವಿಚಾರಣೆ ವೇಳೆ ಟ್ರ್ಯಾಕ್ಟರ್ ಗಳನ್ನು ವಶಪಡಿಸಿಕೊಳ್ಳದಿರುವುದು, ಅವುಗಳ ಗುರುತು ಪತ್ತೆ ಮಾಡದಿರುವುದು ಹಾಗೂ ವಿಧಿವಿಜ್ಞಾನ ಪರೀಕ್ಷೆ ನಡೆಸದಿರುವುದು ಪ್ರಾಸಿಕ್ಯೂಷನ್ ನ ಪ್ರಮುಖ ದೌರ್ಬಲ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
►ಐವರು ದಲಿತರು ಮೃತ್ಯು
ಈ ಹಿಂಸಾಚಾರದಲ್ಲಿ ಐವರು ದಲಿತರು ಮೃತಪಟ್ಟಿದ್ದರು. ಇದಲ್ಲದೆ, ಮಹಿಳೆಯರು ಸೇರಿದಂತೆ ಅನೇಕರು ಗಂಭೀರವಾಗಿ ಗಾಯಗೊಂಡಿದ್ದರು. ಘರ್ಷಣೆಯ ವೇಳೆ ರಾಂಪಾಲ್ ಗೋಸ್ವಾಮಿ ಎಂಬ ದಲಿತೇತರ ವ್ಯಕ್ತಿಯೂ ಗುಂಡೇಟಿನಿಂದ ಮೃತಪಟ್ಟಿದ್ದರು.
ಅವರ ಸಾವಿನ ಕುರಿತು ಪ್ರತ್ಯೇಕ FIR ದಾಖಲಾಗಿದ್ದು, ಕೆಲವು ದಲಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ.
►CBI ತನಿಖೆ
ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಆಗಿನ ಬಿಜೆಪಿ ನೇತೃತ್ವದ ರಾಜಸ್ಥಾನ ಸರಕಾರ ತನಿಖೆಯನ್ನುCBI ಗೆ ವಹಿಸಿತ್ತು.
CBI ಹಲವು ವರ್ಷಗಳ ತನಿಖೆಯ ಬಳಿಕ 40 ಮಂದಿಯ ವಿರುದ್ಧ ಕೊಲೆ, ಗಲಭೆ, ದೌರ್ಜನ್ಯ, ಮಹಿಳೆಯರ ಮೇಲೆ ಹಲ್ಲೆ, ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧ ಸೇರಿದಂತೆ ವಿವಿಧ ಆರೋಪಗಳಡಿ ಆರೋಪಪಟ್ಟಿ ಸಲ್ಲಿಸಿತ್ತು
► 'ಘೋರ ಹಿಂಸಾಚಾರ ನಡೆದಿರುವುದು ಸಾಬೀತು'
245 ಪುಟಗಳ ತೀರ್ಪು ನೀಡಿರುವ ವಿಶೇಷ ನ್ಯಾಯಾಧೀಶ ಆಶಿಶ್ ಬಿಜಾರ್ನಿಯಾ, "2015ರ ಮೇ 14ರಂದು ಡಂಗಾವಾಸ್ ನಲ್ಲಿ ನಡೆದದ್ದು ಐವರು ಮೃತಪಟ್ಟ ಹಾಗೂ ಹಲವರು ಗಂಭೀರವಾಗಿ ಗಾಯಗೊಂಡ ಘೋರ ಮತ್ತು ಹೃದಯವಿದ್ರಾವಕ ಸಾಮೂಹಿಕ ಹಿಂಸಾಚಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಹೇಳಿದ್ದಾರೆ.
"ಈ ನ್ಯಾಯಾಲಯವು ಘಟನೆ ನಡೆದಿರುವುದರ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಆದರೆ ಆರೋಪಪಟ್ಟಿಯಲ್ಲಿರುವ 40 ಮಂದಿಯಲ್ಲಿ ಯಾರಾದರೂ ನಿರ್ದಿಷ್ಟ ಆರೋಪಿಯು ಈ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾನೆ ಎಂಬುದನ್ನು ಕಾನೂನುಬದ್ಧ ಹಾಗೂ ಸ್ವೀಕಾರಾರ್ಹ ಪುರಾವೆಗಳ ಮೂಲಕ ಸಾಬೀತುಪಡಿಸಲಾಗಿಲ್ಲ" ಎಂದು ತೀರ್ಪಿನಲ್ಲಿ ಹೇಳಲಾಗಿದೆ.
"ಆರೋಪಿಗಳನ್ನು ಖುಲಾಸೆಗೊಳಿಸಿರುವುದರಿಂದ ಅಪರಾಧ ನಡೆದಿಲ್ಲ ಎನ್ನುವುದಿಲ್ಲ. ಅಪರಾಧ ನಡೆದಿದೆ. ಆದರೆ ಆರೋಪಿಗಳ ವಿರುದ್ಧ ಕಾನೂನುಬದ್ಧ ಪುರಾವೆ ಒದಗಿಸಲು ಸಾಧ್ಯವಾಗಿಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
"ಈ ವೈಫಲ್ಯವು ಪ್ರತಿವಾದಿಗಳ ಕೌಶಲ್ಯದಿಂದ ಉಂಟಾಗಿಲ್ಲ. ಪ್ರಾಸಿಕ್ಯೂಷನ್ ನ ಸ್ವಂತ ಸಾಕ್ಷ್ಯದಲ್ಲಿನ ಲೋಪಗಳಿಂದ ಉಂಟಾಗಿದೆ" ಎಂದು ನ್ಯಾಯಾಲಯ ಹೇಳಿದೆ.
►ತನಿಖೆಯಲ್ಲಿನ ಲೋಪಗಳು
ಪ್ರಾಸಿಕ್ಯೂಷನ್ ತನಿಖೆಯಲ್ಲಿ ಹಲವು ಗಂಭೀರ ಲೋಪಗಳಿರುವುದನ್ನು ನ್ಯಾಯಾಲಯ ಎತ್ತಿ ತೋರಿಸಿದೆ.
ದಲಿತ ಕುಟುಂಬದ ನಿರ್ಮಾಣಗಳನ್ನು ಕೆಡವಲು ಬಳಸಲಾಗಿದೆ ಎನ್ನಲಾದ ಟ್ರ್ಯಾಕ್ಟರ್ ಗಳನ್ನು ವಶಪಡಿಸಿಕೊಳ್ಳಲಾಗಿಲ್ಲ. ಅವುಗಳನ್ನು ಗುರುತಿಸಲಾಗಿಲ್ಲ ಹಾಗೂ ವಿಧಿವಿಜ್ಞಾನ ಪರೀಕ್ಷೆಯನ್ನೂ ನಡೆಸಲಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಯಾವುದೇ ಸಾಕ್ಷಿದಾರರು ಎಲ್ಲಾ 40 ಆರೋಪಿಗಳನ್ನು ಗುರುತಿಸಿಲ್ಲ. ಅನೇಕ ಸಾಕ್ಷಿದಾರರು ಗುಂಪಿನ ಕೆಲವರನ್ನು ಮಾತ್ರ ಗುರುತಿಸಬಲ್ಲೆವು ಎಂದು ಹೇಳಿದ್ದಾರೆ. ಗುರುತಿನ ಮೆರವಣಿಗೆ ನಡೆಸಲಾಗಿಲ್ಲ. ಮೂವರು ಸಾಕ್ಷಿದಾರರು ಕೆಲವು ಆರೋಪಿಗಳು ಘಟನಾ ಸ್ಥಳದಲ್ಲೇ ಇರಲಿಲ್ಲ ಅಥವಾ ತಪ್ಪಾಗಿ ಪ್ರಕರಣದಲ್ಲಿ ಸೇರಿಸಲಾಗಿದೆ ಎಂದು ಹೇಳಿರುವುದನ್ನೂ ನ್ಯಾಯಾಲಯ ಉಲ್ಲೇಖಿಸಿದೆ.
ಘಟನೆಗಳ ನಿಖರ ಅನುಕ್ರಮ ಹಾಗೂ ಪ್ರತಿಯೊಬ್ಬ ಆರೋಪಿಯ ವೈಯಕ್ತಿಕ ಪಾತ್ರವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
"ಅಪರಾಧದ ಪ್ರಮಾಣ ದೊಡ್ಡದಾಗಿದೆ ಎನ್ನುವುದಷ್ಟೇ ಶಿಕ್ಷೆಗೆ ಸಾಕಾಗುವುದಿಲ್ಲ. ಪ್ರತಿಯೊಬ್ಬ ಆರೋಪಿಯ ವೈಯಕ್ತಿಕ ಭಾಗವಹಿಸುವಿಕೆಯನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಬೇಕು" ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
►ಸಂತ್ರಸ್ತ ಕುಟುಂಬಗಳಿಗೆ ಪರಿಹಾರ
1995ರ SC/ST(ದೌರ್ಜನ್ಯ ತಡೆ) ನಿಯಮಗಳಡಿ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಐದು ಕುಟುಂಬಗಳು ತಮ್ಮ ಆತ್ಮೀಯರನ್ನು ಕಳೆದುಕೊಂಡಿವೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣವು ಸಮಾಜದಲ್ಲಿ ವ್ಯಾಪಕ ಕಳವಳ ಮೂಡಿಸಿದೆ ಎಂಬುದನ್ನೂ ನ್ಯಾಯಾಲಯ ದಾಖಲಿಸಿದೆ.
ಅದೇ ವೇಳೆ, ತಪ್ಪಿತಸ್ಥರನ್ನು ಖುಲಾಸೆಗೊಳಿಸುವುದು ಹೇಗೆ ಅನ್ಯಾಯವೋ, ನಿರಪರಾಧಿಗಳಿಗೆ ಶಿಕ್ಷೆ ವಿಧಿಸುವುದೂ ಅಷ್ಟೇ ಅನ್ಯಾಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
►ದಲಿತ ಸಂಘಟನೆಗಳ ಆಕ್ರೋಶ
ದಲಿತ ಹಕ್ಕುಗಳ ಹೋರಾಟಗಾರ ಭನ್ವರ್ ಮೇಘವಂಶಿ, "CBI ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರೂ ಪ್ರಾಸಿಕ್ಯೂಷನ್ ನ ಲೋಪಗಳಿಂದ ಸಂತ್ರಸ್ತಗಳಿಗೆ ನ್ಯಾಯ ದೊರೆಯಲಿಲ್ಲ. ಇದು ದಲಿತರಿಗೆ ನ್ಯಾಯ ದೊರೆಯುವುದು ಎಷ್ಟು ಕಷ್ಟ ಎಂಬುದನ್ನು ತೋರಿಸುತ್ತದೆ" ಎಂದು ಹೇಳಿದರು.
"ಹತ್ಯೆಯಾದವರು ತಾವಾಗಿಯೇ ಸತ್ತರೆಂಬ ಸಂದೇಶ ಸಮಾಜಕ್ಕೆ ಹೋಗುವಂತಾಗಿದೆ. ಜೈಲಿನಲ್ಲಿದ್ದ ಆರೋಪಿಗಳು ಈಗ ಬಿಡುಗಡೆಯಾಗುತ್ತಿದ್ದಾರೆ. ಇದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ವೈಫಲ್ಯವನ್ನು ಬಯಲಿಗೆಳೆಯುತ್ತದೆ" ಎಂದ ಅವರು, ರಾಜಸ್ಥಾನ ಹೈಕೋರ್ಟ್ ನಲ್ಲಿ ಈ ತೀರ್ಪನ್ನು ರಾಜ್ಯ ಸರಕಾರ ತಕ್ಷಣವೇ ಪ್ರಶ್ನಿಸಬೇಕು ಎಂದು ಆಗ್ರಹಿಸಿದರು.
►ಕಾಂಗ್ರೆಸ್ ಟೀಕೆ
ತೀರ್ಪಿನ ಕುರಿತು ಕಾಂಗ್ರೆಸ್ ಕೂಡ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, "2015ರಲ್ಲಿ ಐದು ದಲಿತರು ಸೇರಿದಂತೆ ಆರು ಜನರನ್ನು ಭೂ ವಿವಾದದ ಹಿನ್ನೆಲೆಯಲ್ಲಿ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಈಗ ಎಲ್ಲ 40 ಆರೋಪಿಗಳು ಖುಲಾಸೆಯಾಗಿದ್ದಾರೆ. ಹಾಗಾದರೆ ಆ ಆರು ಜನರನ್ನು ಕೊಂದವರು ಯಾರು ಎಂಬ ಪ್ರಶ್ನೆಗೆ ಉತ್ತರವೇನು?" ಎಂದು ಸಾಮಾಜಿಕ ಜಾಲತಾಣ Xನಲ್ಲಿ ಪ್ರಶ್ನಿಸಿದ್ದಾರೆ.
"11 ವರ್ಷಗಳ CBI ತನಿಖೆ, ವಿಚಾರಣೆ ಹಾಗೂ ಕಾನೂನು ಹೋರಾಟದ ಬಳಿಕವೂ ನ್ಯಾಯ ದೊರೆಯದಿರುವುದು ತನಿಖೆಯಲ್ಲಿನ ಗಂಭೀರ ದೋಷಗಳನ್ನು ತೋರಿಸುತ್ತದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಈ ಘಟನೆ ನಡೆದಿತ್ತು. ಈಗ ಅದೇ ಆಡಳಿತದ ಅವಧಿಯಲ್ಲಿ ಬಂದಿರುವ ಈ ತೀರ್ಪು ನ್ಯಾಯದ ಪರವಾಗಿಲ್ಲ ಎಂಬುದನ್ನು ತೋರಿಸುತ್ತದೆ. ದಲಿತ ಸಮುದಾಯದ ವಿರುದ್ಧ ನಡೆದ ಈ ಅನ್ಯಾಯಕ್ಕೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು" ಎಂದು ಅವರು ಹೇಳಿದ್ದಾರೆ.
ಸೌಜನ್ಯ: thewire.in






