ಯಾರಾಗ್ತಾರೆ ಮುಂಬೈ ಮೇಯರ್? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

PC | PTI
ಇತ್ತೀಚೆಗೆ ನಡೆದ 227 ಸದಸ್ಯ ಬಲದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಚುನಾವಣೆಯಲ್ಲಿ ಬಿಜೆಪಿ 89 ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ 29 ಸೀಟುಗಳನ್ನು ಗೆದ್ದಿದ್ದು, ಮಹಾಯುತಿ ಮೈತ್ರಿಕೂಟ ಸ್ಪಷ್ಟ ಬಹುಮತವನ್ನು ಗಳಿಸಿದೆ. ಶಿವಸೇನಾ (UBT) 65 ಸ್ಥಾನಗಳನ್ನು ಗೆದ್ದಿದ್ದು, ಅದರ ಮಿತ್ರ ಪಕ್ಷ ಎಂಎನ್ಎಸ್ ಆರು ಸ್ಥಾನಗಳಲ್ಲಿ ಜಯಗಳಿಸಿದೆ.
ಚುನಾವಣೆ ಮುಗಿದ ಬೆನ್ನಲ್ಲೇ ಮುಂಬೈನ ಹೊಸ ಮೇಯರ್ ಯಾರಾಗಬೇಕು ಎಂಬ ವಿಚಾರದಲ್ಲಿ ಮಹಾಯುತಿಯೊಳಗೇ ಹಗ್ಗಜಗ್ಗಾಟ ಆರಂಭವಾಗಿದೆ. ಮಹಾಯುತಿ ಮೈತ್ರಿಕೂಟದಲ್ಲಿ ಮೇಯರ್ ಸ್ಥಾನಕ್ಕಾಗಿ ನಡೆಯುತ್ತಿರುವ ಗುದ್ದಾಟ ಇನ್ನೂ ಅಂತಿಮ ಹಂತ ತಲುಪದಿರುವುದರಿಂದ ಆಯ್ಕೆ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ. ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸಿದ ಬಳಿಕ ಜನವರಿ 24ರಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದಾವೋಸ್ನಿಂದ ಮರಳಿದ ನಂತರವೇ ಈ ವಿಷಯದ ಕುರಿತು ತೀರ್ಮಾನವಾಗುವ ಸಾಧ್ಯತೆ ಇದೆ.
ಮುಂಬೈ ಮೇಯರ್ ಆಯ್ಕೆ ಹೇಗೆ?
ಭಾರತದಲ್ಲಿನ ನಗರ ಸ್ಥಳೀಯ ಸಂಸ್ಥೆಗಳು ಪ್ರಾಥಮಿಕವಾಗಿ 1992ರ 74ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯಿಂದ ನಿಯಂತ್ರಿಸಲ್ಪಡುತ್ತವೆ. ಈ ತಿದ್ದುಪಡಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡುವುದರೊಂದಿಗೆ, ನಾಯಕತ್ವ ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸಿದೆ.
ಪ್ರತಿ ವಾರ್ಡ್ನ ಕಾರ್ಪೊರೇಟರ್ಗಳನ್ನು ಮತದಾರರು ನೇರವಾಗಿ ಆಯ್ಕೆ ಮಾಡುತ್ತಾರೆ. ಆದರೆ ಮೇಯರ್ ಅನ್ನು ಕಾರ್ಪೊರೇಟರ್ಗಳು ಆಯ್ಕೆ ಮಾಡುತ್ತಾರೆ. ಮೇಯರ್ ಹುದ್ದೆ ಸರದಿ ಮೂಲಕ ಮೀಸಲಾತಿಗೆ ಒಳಪಟ್ಟಿರುತ್ತದೆ. ಇದನ್ನು ಚೀಟಿ ಎತ್ತುವ ಮೂಲಕ ನಿರ್ಧರಿಸಲಾಗುತ್ತದೆ.
ಸರದಿ ಮೂಲಕ ಮೀಸಲಾತಿ ವ್ಯವಸ್ಥೆ ಎಂದರೇನು?
ಸರದಿ ಮೂಲಕ ಮೀಸಲಾತಿ ವ್ಯವಸ್ಥೆಯಡಿ ಅಂಚಿನಲ್ಲಿರುವ ಸಮುದಾಯಗಳ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಮೇಯರ್ ಹುದ್ದೆಯನ್ನು ವಿವಿಧ ವರ್ಗಗಳಿಗೆ ಸರದಿಯಂತೆ ನೀಡಲಾಗುತ್ತದೆ. ಈ ಮೀಸಲಾತಿಯನ್ನು ನಗರಾಭಿವೃದ್ಧಿ ಇಲಾಖೆ ಚೀಟಿ ಎತ್ತುವ ಮೂಲಕ ನಿರ್ಧರಿಸುತ್ತದೆ.
ಈ ಪ್ರಕ್ರಿಯೆ ಮುಗಿದು, ಯಾವ ವರ್ಗಕ್ಕೆ ಮೀಸಲಾತಿ ಎಂಬುದನ್ನು ಅಧಿಕೃತವಾಗಿ ಘೋಷಿಸಿದ ನಂತರವೇ ಮೇಯರ್ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. ಮಹಾರಾಷ್ಟ್ರದಲ್ಲಿ ಮೇಯರ್ ಹುದ್ದೆಯ ಮೀಸಲಾತಿ ವ್ಯವಸ್ಥೆಯನ್ನು ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಮೂಲಕ ಜಾರಿಗೆ ತರಲಾಗಿದ್ದು, ಇದು ಒಬಿಸಿ ವರ್ಗಕ್ಕೂ ಮೀಸಲಾತಿಯನ್ನು ವಿಸ್ತರಿಸುತ್ತದೆ.
ಈ ಪ್ರಕ್ರಿಯೆಗೆ ಸಮಯ ಬೇಕಾಗುವುದರಿಂದ ಈ ವಾರ ಮುಂಬೈಗೆ ಮೇಯರ್ ಸಿಗುವ ಸಾಧ್ಯತೆ ಕಡಿಮೆ. ರಾಜ್ಯದಲ್ಲಿನ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಜನಸಂಖ್ಯೆಯ ಅನುಪಾತದ ಆಧಾರದಲ್ಲಿ ಮೀಸಲಾತಿಯನ್ನು ನಿರ್ಧರಿಸಲಾಗುತ್ತದೆ. 2011ರ ಜನಗಣತಿಯನ್ನು ಮೀಸಲಾತಿ ನಿರ್ಧಾರಕ್ಕೆ ಬಳಸಲಾಗುತ್ತದೆ.
ಚೀಟಿ ಎತ್ತುವ ಪ್ರಕ್ರಿಯೆ ಹೇಗೆ ನಡೆಸಲಾಗುತ್ತದೆ?
ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸುವುದರೊಂದಿಗೆ ಚೀಟಿ ಎತ್ತುವ ಪ್ರಕ್ರಿಯೆ ಆರಂಭವಾಗುತ್ತದೆ. ಅಧಿಕಾರಿಗಳು ಹಿಂದಿನ ಅವಧಿಗಳ ಆಧಾರದ ಮೇಲೆ ಅರ್ಹ ವರ್ಗಗಳ ಸರದಿ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ. ಸಾರ್ವಜನಿಕವಾಗಿ ಚೀಟಿ ಎತ್ತಿ ಮೀಸಲಾತಿ ವರ್ಗವನ್ನು ಔಪಚಾರಿಕವಾಗಿ ಘೋಷಿಸಲಾಗುತ್ತದೆ.
ಇದರ ನಂತರ ಬಿಎಂಸಿ ಮೇಯರ್ ಆಯ್ಕೆಗಾಗಿ ಕಾರ್ಪೊರೇಟರ್ಗಳ ವಿಶೇಷ ಸಭೆಯನ್ನು ಕರೆಯುತ್ತದೆ. ಮೇಯರ್ ಅನ್ನು ಎರಡೂವರೆ ವರ್ಷಗಳ ಅವಧಿಗೆ ಸರಳ ಬಹುಮತದಿಂದ ಆಯ್ಕೆ ಮಾಡಲಾಗುತ್ತದೆ. ಅಂದರೆ, 227 ಸದಸ್ಯರ ಮುಂಬೈ ಸದನದಲ್ಲಿ 114ಕ್ಕಿಂತ ಹೆಚ್ಚು ಕಾರ್ಪೊರೇಟರ್ಗಳ ಬೆಂಬಲ ಅಗತ್ಯವಿರುತ್ತದೆ.
ಮುಂಬೈ ಮೇಯರ್ಗೆ ಯಾವ ಅಧಿಕಾರಗಳಿವೆ?
ಸಂವಿಧಾನ ಮತ್ತು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಪ್ರಕಾರ, ಮೇಯರ್ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ನ ವಿಧ್ಯುಕ್ತ ಮುಖ್ಯಸ್ಥರಾಗಿರುತ್ತಾರೆ. ಮೇಯರ್ ಅವರನ್ನು ಕಾರ್ಪೊರೇಟರ್ಗಳು ಎರಡೂವರೆ ವರ್ಷಗಳ ಅವಧಿಗೆ ಆಯ್ಕೆ ಮಾಡುತ್ತಾರೆ.
ಮೇಯರ್ ಪಾತ್ರವು ಮುಖ್ಯವಾಗಿ ಸಾಮಾನ್ಯ ಸಭೆಗಳ ಅಧ್ಯಕ್ಷತೆ ವಹಿಸುವುದು, ಚರ್ಚೆಗಳ ವೇಳೆ ಸುವ್ಯವಸ್ಥೆ ಕಾಪಾಡುವುದು ಹಾಗೂ ಸಮಬಲ ಉಂಟಾದಲ್ಲಿ ನಿರ್ಣಾಯಕ ಮತ ಚಲಾಯಿಸುವ ಹಕ್ಕನ್ನು ಬಳಸುವುದಕ್ಕೆ ಸೀಮಿತವಾಗಿರುತ್ತದೆ.
ಮೇಯರ್ ನಗರದ “ಮೊದಲ ಪ್ರಜೆ”ಯಾಗಿ ಅಧಿಕೃತ ಕಾರ್ಯಕ್ರಮಗಳಲ್ಲಿ ಮುಂಬೈಯನ್ನು ಪ್ರತಿನಿಧಿಸುತ್ತಾರೆ. ಆದರೆ ನಾಗರಿಕ ಇಲಾಖೆಗಳು ಅಥವಾ ಹಣಕಾಸಿನ ನೇರ ನಿಯಂತ್ರಣ ಇವರ ಬಳಿ ಇರುವುದಿಲ್ಲ. ಆ ಅಧಿಕಾರಗಳು ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟ ಐಎಎಸ್ ಅಧಿಕಾರಿ ಆಗಿರುವ ಮುನ್ಸಿಪಲ್ ಆಯುಕ್ತರ ಬಳಿ ಇರುತ್ತವೆ.
ಶಿವಸೇನೆಯ ಬೇಡಿಕೆಗಳೇನು?
ಜನವರಿ 23ರಂದು ಪಕ್ಷದ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಜನ್ಮ ಶತಮಾನೋತ್ಸವ. ಹೀಗಾಗಿ ಅಧಿಕಾರದ ಮೊದಲ ವರ್ಷ ಮೇಯರ್ ಸ್ಥಾನವನ್ನು ಶಿವಸೇನಾಗೆ ನೀಡಿದರೆ ಅದು ಬಾಳಾಸಾಹೇಬರಿಗೆ ನೀಡುವ ಗೌರವವಾಗುತ್ತದೆ ಎಂದು ಶಿವಸೇನಾ ವಾದಿಸಿದೆ.
ಇದಕ್ಕೂ ಮುನ್ನ ಶಿವಸೇನಾ ಮೇಯರ್ ಅಧಿಕಾರಾವಧಿಯನ್ನು ಸಮಾನವಾಗಿ ವಿಭಜಿಸಲು ಕೋರಿತ್ತು. ಐದು ವರ್ಷಗಳ ಅವಧಿಯನ್ನು ಬಿಜೆಪಿ ಮತ್ತು ಶಿವಸೇನಾ ನಡುವೆ ತಲಾ ಎರಡೂವರೆ ವರ್ಷಗಳಂತೆ ಹಂಚಿಕೊಳ್ಳುವ ಪ್ರಸ್ತಾವವನ್ನೂ ಮುಂದಿಟ್ಟಿತ್ತು. ಆದರೆ ಈ ಬೇಡಿಕೆ ಸ್ವೀಕೃತವಾಗುವ ಸಾಧ್ಯತೆ ಕಡಿಮೆ ಎಂದು ಅರಿತುಕೊಂಡ ನಂತರ, ಪಕ್ಷ ತನ್ನ ನಿಲುವನ್ನು ಪರಿಷ್ಕರಿಸಿ ಮೊದಲ ವರ್ಷ ಮಾತ್ರ ತಮ್ಮ ಪಾಲಾಗಬೇಕು ಎಂದು ಹೇಳಿದೆ.
ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ರಾಜಕೀಯವಾಗಿ ಸವಾಲಿನ ಸಂದರ್ಭದಲ್ಲಿ ಶಿವಸೇನಾ ನೀಡಿದ ಬೆಂಬಲವನ್ನು ಬಿಜೆಪಿ ನೆನಪಿಸಿಕೊಳ್ಳಬೇಕು ಎಂದು ಪಕ್ಷ ಒತ್ತಾಯಿಸಿದೆ. ಬಾಳಾ ಠಾಕ್ರೆ ಅವರ 100ನೇ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ, ಮೊದಲ ವರ್ಷ ಶಿವಸೇನೆಯ ಮೇಯರ್ ಅಧಿಕಾರದಲ್ಲಿರಬೇಕು, ನಂತರ ಉಳಿದ ನಾಲ್ಕು ವರ್ಷಗಳ ಕಾಲ ಬಿಜೆಪಿ ಆ ಹುದ್ದೆಯನ್ನು ನಿರ್ವಹಿಸಬಹುದು ಎಂದು ಶಿವಸೇನಾ ಹೇಳಿದೆ.
ಕಾರ್ಪೊರೇಟರ್ಗಳಿಗೆ ಬಿಜೆಪಿ ಆದೇಶ
ಈ ನಡುವೆ ಹೊಸದಾಗಿ ಆಯ್ಕೆಯಾದ ತಮ್ಮ ಕಾರ್ಪೊರೇಟರ್ಗಳಿಗೆ ಮುಂದಿನ 10 ದಿನಗಳ ಕಾಲ ನಗರವನ್ನು ಬಿಟ್ಟು ಹೋಗಬಾರದೆಂದು ಮುಂಬೈ ಬಿಜೆಪಿ ಸೂಚನೆ ನೀಡಿದೆ. ತುರ್ತು ಪ್ರಯಾಣ ಅಗತ್ಯವಿದ್ದರೆ ಪಕ್ಷದ ಹಿರಿಯ ನಾಯಕರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕೆಂದು ಕಾರ್ಪೊರೇಟರ್ಗಳಿಗೆ ನಿರ್ದೇಶನ ನೀಡಲಾಗಿದೆ.
ಮುಂಬರುವ ಮೇಯರ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಸೂಚನೆ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ಮೇಯರ್ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಎಲ್ಲ ಕಾರ್ಪೊರೇಟರ್ಗಳು ಮುಂಬೈಯಲ್ಲೇ ಇರುವಂತೆ ಖಚಿತಪಡಿಸಿಕೊಳ್ಳಲು ಬಿಜೆಪಿ ಬಯಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಲ್ಲಿ ಈವರೆಗೆ ಏನೇನಾಯ್ತು?
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ ಪಕ್ಷದ 29 ಕಾರ್ಪೊರೇಟರ್ಗಳನ್ನು ಹೋಟೆಲ್ಗೆ ಸ್ಥಳಾಂತರಿಸಿದ ಸಂದರ್ಭದಿಂದಲೇ ಎಲ್ಲ ಊಹಾಪೋಹಗಳು ಆರಂಭವಾಗಿದ್ದವು. ಮುಂಬೈಗೆ ಮಹಾಯುತಿ ಮೇಯರ್ ಇರುತ್ತಾರೆ ಎಂದು ಹೇಳುವ ಮೂಲಕ ಶಿಂಧೆ ಭಾನುವಾರ ಈ ಊಹಾಪೋಹಗಳಿಗೆ ಅಂತ್ಯ ಹಾಡಲು ಪ್ರಯತ್ನಿಸಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಪಕ್ಷ ನಾಗರಿಕ ಸಂಸ್ಥೆಯಲ್ಲಿ ಸ್ಪಷ್ಟ ಹಾಗೂ ಗೌರವಯುತ ಅಧಿಕಾರದ ಪಾಲನ್ನು ಬಯಸುತ್ತದೆ. ಶಿವಸೇನಾ ಎರಡು ಆಯ್ಕೆಗಳನ್ನು ಮುಂದಿಟ್ಟಿದೆ:
ಐದು ವರ್ಷಗಳ ಅವಧಿಯಲ್ಲಿ ಅರ್ಧ ಅವಧಿಗೆ ಮೇಯರ್ ಹುದ್ದೆ
ಹಣಕಾಸು ಹಾಗೂ ಪ್ರಮುಖ ಅನುಮೋದನೆಗಳನ್ನು ನಿಯಂತ್ರಿಸುವ ಕಾರಣ ಬಿಎಂಸಿಯಲ್ಲಿ ಅತ್ಯಂತ ಶಕ್ತಿಶಾಲಿ ಸಂಸ್ಥೆ ಎಂದು ಪರಿಗಣಿಸಲ್ಪಡುವ ಸ್ಥಾಯಿ ಸಮಿತಿಯ ನಿಯಂತ್ರಣ.
ಮುಂಬೈಗೆ ಮಹಾಯುತಿ ಮೇಯರ್ ಇರುತ್ತಾರೆ. ಕಲ್ಯಾಣ್–ಡೊಂಬಿವಲಿ ಸೇರಿದಂತೆ ನೆರೆಯ ನಗರಗಳಲ್ಲಿಯೂ ಮಹಾಯುತಿ ಮೇಯರ್ಗಳೇ ಅಧಿಕಾರದಲ್ಲಿರುತ್ತಾರೆ” ಎಂದು ಅವರು ಹೇಳಿದ್ದಾರೆ.
ಐಷಾರಾಮಿ ಹೋಟೆಲ್ನಲ್ಲಿ ಕಾರ್ಪೊರೇಟರ್ಗಳನ್ನು ನಿಗಾದಲ್ಲಿ ಇರಿಸಲಾಗಿದೆ ಎಂಬ ಆರೋಪಗಳನ್ನು ತಿರಸ್ಕರಿಸಿದ ಶಿಂಧೆ, “ಶಿವಸೇನಾ ನಿರ್ಭೀತವಾಗಿದೆ. ಹೊಸ ಕಾರ್ಪೊರೇಟರ್ಗಳಿಗೆ ಹೋಟೆಲ್ನಲ್ಲಿ ಸಂವಹನ ನಡೆಸಲು ಸಾಮಾನ್ಯ ವೇದಿಕೆ ಸಿಗುತ್ತದೆ. ಕೊಂಕಣ ವಿಭಾಗೀಯ ಆಯುಕ್ತರ ಬಳಿ 29 ಕಾರ್ಪೊರೇಟರ್ಗಳ ಗುಂಪನ್ನು ನೋಂದಾಯಿಸುತ್ತಿರುವುದರಿಂದ ಅವರನ್ನು ಭೇಟಿ ಮಾಡಲು ಬಯಸಿದ್ದೆ” ಎಂದರು.
ಬಿಜೆಪಿ ಮೇಯರ್ ಬೇಕಾಗಿಲ್ಲ: ರಾವತ್
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟವಾಗಿ ಕಣಕ್ಕಿಳಿದಿದೆ. ಪ್ರತಿಯೊಂದು ಪಕ್ಷವೂ ಪ್ರಮುಖ ಹುದ್ದೆಗಳನ್ನು ಬಯಸುವುದು ಸಹಜ. ಬಾಳ್ ಠಾಕ್ರೆ ಅವರ ಜನ್ಮ ಶತಮಾನೋತ್ಸವ ವರ್ಷವು ಈ ಬೇಡಿಕೆಗೆ ವಿಭಿನ್ನ ಆಯಾಮವನ್ನು ನೀಡುತ್ತದೆ ಎಂದು ಶಿವಸೇನಾ ನಾಯಕ ಹಾಗೂ ಸಚಿವ ಉದಯ್ ಸಮಂತ್ ಹೇಳಿದ್ದಾರೆ.
ಅದೇ ವೇಳೆ, ಹಲವು ಹೊಸ ಕಾರ್ಪೊರೇಟರ್ಗಳು ಮೂಲತಃ ಶಿವಸೈನಿಕರು (ಅವಿಭಜಿತ ಶಿವಸೇನೆಯವರು). ನಮಗೆ ತಿಳಿದಂತೆ ಬಿಜೆಪಿ ಮೇಯರ್ ಆಯ್ಕೆಯಾಗಬಾರದೆಂದು ಅವರು ಬಯಸುತ್ತಾರೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
“ಶಿಂಧೆ ಈಗಾಗಲೇ ತಮ್ಮ ಕಾರ್ಪೊರೇಟರ್ಗಳನ್ನು ಪಂಚತಾರಾ ಹೋಟೆಲ್ಗೆ ಸ್ಥಳಾಂತರಿಸಿದ್ದಾರೆ. ನನಗೆ ದೊರೆತ ಮಾಹಿತಿಯ ಪ್ರಕಾರ ಬಿಜೆಪಿ ತನ್ನ ಕಾರ್ಪೊರೇಟರ್ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಯೋಜಿಸುತ್ತಿದೆ. ಯಾರು ಯಾರಿಗೆ ಹೆದರುತ್ತಿದ್ದಾರೆ?” ಎಂದು ರಾವತ್ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಈಗ ತಮ್ಮ ರಾಜಕೀಯ ಅಸ್ತಿತ್ವವನ್ನು ರಕ್ಷಿಸಲು ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ತನ್ನದೇ ಮಿತ್ರಪಕ್ಷಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.







