ವಿಜ್ಞಾನಿಗಳು ಇಸ್ರೋ ತೊರೆಯುತ್ತಿರುವುದೇಕೆ? ಉತ್ತಮ ವೇತನ ಮಾತ್ರ ಕಾರಣವಲ್ಲ!

Photo Credit : @isro
14,600 ಉದ್ಯೋಗಿಗಳಿರುವ ಇಸ್ರೋದಿಂದ 100 ವಿಜ್ಞಾನಿಗಳು ಹೊರಹೋಗಿರುವುದು ಸಣ್ಣ ಭಾಗವನ್ನು ಪ್ರತಿನಿಧಿಸಿದರೂ, ಪರಿಣಾಮ ಅಸಾಮಾನ್ಯವಾಗಲಿದೆ.
ಭಾರತದ ಬಾಹ್ಯಾಕಾಶ ಯೋಜನೆಯಲ್ಲಿ ಹೊಸ ಸಮಸ್ಯೆ ಕಾಣಿಸಿಕೊಂಡಿದೆ. ಉಡಾವಣೆ ವಿಫಲವಾಗಿರುವುದು ಅಥವಾ ತಾಂತ್ರಿಕ ಹಿನ್ನಡೆಯಿಂದಲ್ಲ. ಬದಲಾಗಿ ಭಾರತೀಯ ಬಾಹ್ಯಾಕಾಶದ ಸಂಶೋಧನಾ ಸಂಸ್ಥೆಯಿಂದ (ಇಸ್ರೋ) ಅನುಭವಿ ವಿಜ್ಞಾನಿಗಳು ದೊಡ್ಡ ಸಂಖ್ಯೆಗಳಲ್ಲಿ ಹೊರ ಹೋಗುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ 100ಕ್ಕೂ ಹೆಚ್ಚು ವಿಜ್ಞಾನಿಗಳು ರಾಜೀನಾಮೆ ಸಲ್ಲಿಸಿದ್ದಾರೆ ಅಥವಾ ಸ್ವಯಂಪ್ರೇರಿತ ನಿವೃತ್ತಿ ಘೋಷಿಸಿದ್ದಾರೆ.
ಇದೀಗ ಇಂತಹ ನಿರ್ಗಮನ ತಡೆಯಲು ಬಾಹ್ಯಾಕಾಶ ಇಲಾಖೆ ಕ್ರಮ ಕೈಗೊಂಡು ಹೊಸ ನಿರ್ದೇಶನ ನೀಡಿದೆ. ಆದರೆ ಒಂದು ಪ್ರಶ್ನೆ ಮಾತ್ರ ಹಾಗೇ ಉಳಿದಿದೆ. ಹೀಗೆ ವ್ಯಾಪಕವಾಗಿ ವಿಜ್ಞಾನಿಗಳು ಇಸ್ರೋ ತೊರೆಯುತ್ತಿರುವುದೇಕೆ?
►ವಿಜ್ಞಾನಿಗಳು ಇಸ್ರೋ ತೊರೆಯುತ್ತಿರುವುದೇಕೆ?
ಪ್ರಮುಖ ರಾಷ್ಟ್ರೀಯ ಯೋಜನೆಗಳ ಸುತ್ತಲಿನ ಅನಿಶ್ಚಿತತೆ, ಸಾಂಸ್ಥಿಕ ಅಡಚಣೆಗಳು ಮತ್ತು ಖಾಸಗಿ ಕ್ಷೇತ್ರದ ಬೆಳವಣಿಗೆಗಳನ್ನು ಕಾರಣವಾಗಿ ನೀಡಲಾಗುತ್ತಿದೆ.
ಖಾಸಗಿ ಕ್ಷೇತ್ರದ ಉದಯ ಒಂದು ಕಾರಣ ಎನ್ನಬಹುದು. 2020ರಲ್ಲಿ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಭಾಗವಹಿಸುವಿಕೆ ಮುಕ್ತಗೊಳಿಸಿದಾಗಿನಿಂದ ಸ್ಕೈರೂಟ್ ಏರೋಸ್ಪೇಸ್, ಅಗ್ನಿಕುಲ್ ಕಾಸ್ಮೋಸ್, ಪಿಕ್ಸೆಲ್, ಬೆಲ್ಲಾಟ್ರಿಕ್ಸ್ ಏರೋಸ್ಪೇಸ್, ಧ್ರುವ ಸ್ಪೇಸ್, ದಿಗಂತರಾ ಮತ್ತು ಇತರ ಅನೇಕ ಸ್ಟಾರ್ಟಪ್ ಗಳು ಬಾಹ್ಯಾಕಾಶ ವಲಯವನ್ನು ಪ್ರವೇಶಿಸಿವೆ. ಕೆಲವೇ ವರ್ಷಗಳಲ್ಲಿ ಊಹಿಸಲಾಗದ ವೇಗದಲ್ಲಿ ಈ ಕಂಪನಿಗಳು ರಾಕೆಟ್ಗಳು, ಉಪಗ್ರಹಗಳು, ಪ್ರೊಪಲ್ಷನ್ ಸಿಸ್ಟಂಗಳು ಮತ್ತು ಬಾಹ್ಯಾಕಾಶ ಆಧರಿತ ಸೇವೆಗಳನ್ನು ಒದಗಿಸುತ್ತಿವೆ.
ಖಾಸಗಿ ಕಂಪನಿಗಳಲ್ಲಿ ಉತ್ತಮ ವೇತನ, ಷೇರು ಆಯ್ಕೆಗಳು, ಕೆಲಸದಲ್ಲಿ ಹೆಚ್ಚಿನ ಫ್ಲೆಕ್ಸಿಬಿಲಿಟಿ (ಹೊಂದಿಕೆಗೆ ಅವಕಾಶ) ಮತ್ತು ವೇಗವಾಗಿ ಚಲಿಸುವ ಪರಿಸರದಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತಿದೆ. ಇಲ್ಲಿ ಚಿಂತನೆಗಳು ಡ್ರಾಯಿಂಗ್ ರೂಂನಿಂದ ಹಾರ್ಡ್ವೇರ್ ಗೆ ತ್ವರಿತವಾಗಿ ಚಲಿಸುತ್ತವೆ.
ಸಾಂಪ್ರದಾಯಿಕ ಸರ್ಕಾರಿ ಸಂಸ್ಥೆಗಳಿಗಿಂತ ಭಿನ್ನವಾಗಿ ಸ್ಟಾರ್ಟಪ್ ಗಳು ವಿಜ್ಞಾನಿಗಳಿಗೆ ಬೇಗನೇ ನಾಯಕತ್ವದ ಪಾತ್ರಗಳನ್ನು ಒದಗಿಸುತ್ತವೆ. ಸಂಪೂರ್ಣ ಹೊಸ ತಂತ್ರಜ್ಞಾನ ನಿರ್ಮಿಸುವ ಅವಕಾಶ ನೀಡುತ್ತಿವೆ. ಮಾಜಿ ಇಸ್ರೋ ವಿಜ್ಞಾನಿಗಳು ಸ್ವತಃ ಈ ಬಗ್ಗೆ ತಿಳಿಸಿರುವುದಾಗಿ ವರದಿಯಾಗಿದೆ.
ಕಳೆದ ಕೆಲವು ವರ್ಷಗಳಿಂದ ಅನೇಕ ನಿವೃತ್ತ ಮತ್ತು ಮಾಜಿ ಇಸ್ರೋ ಅಧಿಕಾರಿಗಳು ಏರೋಸ್ಪೇಸ್ ಸ್ಟಾರ್ಟಪ್ ಸ್ಥಾಪಿಸಲು ಅಥವಾ ಮಾರ್ಗದರ್ಶನ ನೀಡಲು ಹೋಗಿದ್ದಾರೆ. ಹೀಗಾಗಿ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಿಂದ ಪ್ರತಿಭೆಗಳನ್ನು ಹೆಚ್ಚು ಆಕರ್ಷಿಸುತ್ತಿರುವ ಪರಿಸರವನ್ನು ಸೃಷ್ಟಿಸಿದೆ. ಖಾಸಗಿ ವಲಯದಿಂದಾಗಿ ಈ ಹಿಂದೆ ದೊರೆಯದ ವೃತ್ತಿ ಜೀವನದ ಮಾರ್ಗಗಳು ತೆರೆದುಕೊಂಡಿವೆ. ಆದರೆ ಇದು ನಾಣ್ಯದ ಒಂದು ಮುಖ ಮಾತ್ರ.
►ವಿಳಂಬಗಳು ಮತ್ತೊಂದು ಕಾರಣ
ಮಿಷನ್ ಅನುಷ್ಠಾನದಲ್ಲಿ ಇಸ್ರೋ ಅಸಾಮಾನ್ಯ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದೆ. ಹೀಗಾಗಿ ನಿರ್ಗಮನಗಳು ಹೆಚ್ಚಾಗಿವೆ. ಗಗನಯಾನ ಜಿ1 ಪರೀಕ್ಷಾ ಹಾರಾಟ SSLV-L1, GSLV-F17 ಮತ್ತು ಉದ್ಯಮ ನಿರ್ಮಿತ PSLV-N1 ಮೊದಲಾದ ಅನೇಕ ಉನ್ನತ ಯೋಜನೆಗಳು ಘೋಷಿತ ಅವಧಿಯನ್ನು ಮೀರಿವೆ.
ಈ ವರ್ಷ PSLV ಎರಡು ಹಿನ್ನಡೆಗಳನ್ನು ಕಂಡಿದ್ದು ಇನ್ನಷ್ಟು ವಿಳಂಬಕ್ಕೆ ಕಾರಣವಾಗಿದೆ. ಅಲ್ಲದೆ ವೈಫಲ್ಯದ ಮೌಲ್ಯಮಾಪನದ ವರದಿಯನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ. ಅಲ್ಲದೆ ನಿರ್ಧಾರ ಕೈಗೊಳ್ಳುವುದೂ ಸೆಂಟ್ರಲೈಸ್ಡ್ ಆಗುತ್ತಿದೆ ಎನ್ನುವ ಆರೋಪವೂ ಕೇಳಿಬಂದಿದೆ. ಅಂದರೆ, ಪ್ರಮುಖ ತಾಂತ್ರಿಕ ಮತ್ತು ಆಡಳಿತಾತ್ಮಕ ನಿರ್ಧಾರಗಳು ಅಧ್ಯಕ್ಷರ ಕಚೇರಿಗೆ ಕೇಂದ್ರೀಕೃತವಾಗಿರುವುದು ಅನುಮೋದನೆಗಳನ್ನು ನಿಧಾನಗೊಳಿಸುತ್ತಿದೆ ಮತ್ತು ಕಾರ್ಯಾಚರಣೆಯ ಫ್ಲೆಕ್ಸಿಬಿಲಿಟಿಯನ್ನು ಸೀಮಿತಗೊಳಿಸಿದೆ.
ಇಸ್ರೋದ ಹಿರಿಯ ಅಧಿಕಾರಿಗಳ ಪ್ರಕಾರ ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಗಳಂತಹ ಕೆಲಸದ ಶೈಲಿಯ ಅಗತ್ಯವಿದೆ. ಅವು ಯೋಜನೆ ಆಧಾರಿತವಾಗಿವೆ. ನಾಸಾದ ಕಾರ್ಯಪಡೆ ಶಾಶ್ವತ ಸರ್ಕಾರಿ ಉದ್ಯೋಗಿಗಳು, ಗುತ್ತಿಗೆದಾರರು ಮತ್ತು ಪ್ರೊಜೆಕ್ಟ್ ನಿರ್ದಿಷ್ಟ ನೇಮಕಾತಿಗಲಾಗಿರುತ್ತವೆ. ಹೀಗಾಗಿ ನಿರ್ಣಾಯಕ ಸಾಂಸ್ಥಿಕ ಪರಿಣತಿ ಉಳಿಸಿಕೊಂಡು ಕಾರ್ಯಾಚರಣೆಯಲ್ಲಿ ಫ್ಲೆಕ್ಸಿಬಿಲಿಟಿ ಒದಗಿಸುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
►ನಿರ್ಗಮನದಿಂದ ಅಸಾಮಾನ್ಯ ಪರಿಣಾಮ
14,600 ಉದ್ಯೋಗಿಗಳಿರುವ ಇಸ್ರೋದಿಂದ 100 ವಿಜ್ಞಾನಿಗಳು ಹೊರಹೋಗಿರುವುದು ಸಣ್ಣ ಭಾಗವನ್ನು ಪ್ರತಿನಿಧಿಸಿದರೂ, ಪರಿಣಾಮ ಅಸಾಮಾನ್ಯವಾಗಲಿದೆ. ಏಕೆಂದರೆ ನಿರ್ಗಮಿಸುತ್ತಿರುವ ಅನೇಕರು ಚಂದ್ರಯಾನ-3, ಸ್ಪಾಡೆಕ್ಸ್ ಮತ್ತು ಗಗನಯಾನ್ನಂತಹ ಮಿಷನ್ಗಳ ಮೂಲಕ ಗಳಿಸಿದ ವರ್ಷಗಳ ವಿಶೇಷ ಪರಿಣತಿ ಹೊಂದಿದ್ದಾರೆ. ಹೊಸ ಪದವೀಧರರನ್ನು ನೇಮಿಸಿಕೊಂಡಲ್ಲಿ ಅಂತಹ ಜ್ಞಾನ ತರಲಾಗುವುದಿಲ್ಲ.
ಈ ಪ್ರತಿಭಾ ಪಲಾಯನ ಒಂದು ವಿಶಾಲವಾದ ಪರಿವರ್ತನೆಯನ್ನೂ ಪ್ರತಿಬಿಂಬಿಸುತ್ತದೆ. ದಶಕಗಳವರೆಗೆ ಬಾಹ್ಯಾಕಾಶ ಎಂಜಿನಿಯರ್ಗಳಿಗೆ ಇಸ್ರೋ ಮಹತ್ವಾಕಾಂಕ್ಷೆಯ ಏಕೈಕ ತಾಣವಾಗಿತ್ತು. ಇಂದು ದೊಡ್ಡ ಪರಿಸರ ವ್ಯವಸ್ಥೆ ಬೆಳೆದಿದೆ. ಖಾಸಗಿ ಕಂಪನಿಗಳು ಸ್ಪರ್ಧಾತ್ಮಕ ವೇತನ, ವೇಗದ ಬೆಳವಣಿಗೆ ಮತ್ತು ಅವಕಾಶವನ್ನು ರೂಪಿಸುತ್ತಿವೆ. ಹೀಗಾಗಿ ದೇಶದ ಉತ್ತಮ ಪ್ರತಿಭೆಯನ್ನು ಆಕರ್ಷಿಸುವ ಜೊತೆಗೆ ಅವರನ್ನು ಉಳಿಸಿಕೊಳ್ಳುವುದೂ ಇಸ್ರೋಗೆ ದೊಡ್ಡ ಸವಾಲಾಗಿದೆ.
ಕೃಪೆ: India Today






