ಚೀನಾದ ಜಲವಿದ್ಯುತ್ ಯೋಜನೆಗೆ ಪ್ರತಿಯಾಗಿ ಭಾರತದಿಂದ ಮೆಗಾ ಡ್ಯಾಮ್: ಅರುಣಾಚಲದಲ್ಲಿ Gen Z ವಿರೋಧವೇಕೆ?

Photo Credit : firstpost.com
ಚೀನಾವು ಯಾರ್ಲುಂಗ್ ತ್ಸಾಂಗ್ಪೋ (Yarlung Tsangpo) ನದಿಯಲ್ಲಿ 60,000 ಮೆಗಾವಾಟ್ ಸಾಮರ್ಥ್ಯದ ಬೃಹತ್ ಜಲವಿದ್ಯುತ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ಪ್ರಸ್ತಾಪಿಸಿದೆ. ಈ ನದಿಯು ಭಾರತದ ಅರುಣಾಚಲ ಪ್ರದೇಶವನ್ನು ಪ್ರವೇಶಿಸಿದಾಗ 'ಸಿಯಾಂಗ್' (Siang) ಎಂದು ಕರೆಯಲ್ಪಡುತ್ತದೆ. ಚೀನಾದ ಈ ಯೋಜನೆಯು ಭಾರತಕ್ಕೆ ಭದ್ರತಾ ಕಾಳಜಿಯನ್ನು ಉಂಟುಮಾಡಿದೆ.
ಚೀನಾದ ಈ ಯೋಜನೆಯಿಂದಾಗಿ ನದಿಯ ಸುಮಾರು 40 ಬಿಲಿಯನ್ ಕ್ಯೂಬಿಕ್ ಮೀಟರ್ (BCM) ನೀರು ಬೇರೆಡೆಗೆ ತಿರುಗುವ ಸಾಧ್ಯತೆಯಿದೆ ಎಂದು ಭಾರತ ಸರ್ಕಾರ ಅಂದಾಜಿಸಿದೆ. ಈ ಸಮಸ್ಯೆಯನ್ನು ಎದುರಿಸಲು ಸಿಯಾಂಗ್ ನದಿಯ ಮೇಲೆ ಬೃಹತ್ ಜಲಾಶಯವನ್ನು ನಿರ್ಮಿಸುವುದರಿಂದ ನದಿಯ ನೀರಿನ ಹರಿವಿನಲ್ಲಿ ಉಂಟಾಗುವ ದಿಢೀರ್ ಬದಲಾವಣೆಗಳನ್ನು ನಿಯಂತ್ರಿಸಬಹುದು ಮತ್ತು ಸಂಭಾವ್ಯ ಅನಾಹುತಗಳನ್ನು ತಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇದಕ್ಕಾಗಿ ಸರ್ಕಾರಿ ಸ್ವಾಮ್ಯದ NHPC ಲಿಮಿಟೆಡ್ (NHPC) ಮೂಲಕ 'ಸಿಯಾಂಗ್ ಅಪ್ಪರ್ ಮಲ್ಟಿಪರ್ಪಸ್ ಪ್ರಾಜೆಕ್ಟ್' (SUMP) ಅನ್ನು ರೂಪಿಸಲಾಗಿದೆ.
ಆದರೆ, ಈ ನಿರ್ಧಾರವು ಅರುಣಾಚಲ ಪ್ರದೇಶದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಜೆನ್ ಝೀ ಈ ಅಣೆಕಟ್ಟು ನಿರ್ಮಾಣದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದೇಕೆ? ಚೀನಾವನ್ನು ತಡೆಯಲು ಬೇರೆ ಏನಾದರೂ ಪರ್ಯಾಯ ಮಾರ್ಗಗಳಿವೆಯೇ? ಇಲ್ಲಿದೆ ಸಂಪೂರ್ಣ ವಿವರ.
►ಸಿಯಾಂಗ್ ಅಣೆಕಟ್ಟು ವಿರುದ್ಧ ಭುಗಿಲೆದ್ದ ಪ್ರತಿಭಟನೆ
ಶುಕ್ರವಾರ (ಅಕ್ಟೋಬರ್ 23) ಪಾಸಿಘಾಟ್ ನಗರದಲ್ಲಿ ಯುವ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಸಶಸ್ತ್ರ ಪಡೆಗಳನ್ನು ಹಿಂಪಡೆಯಬೇಕು ಮತ್ತು ಈ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಈ ವೇಳೆ ಹಿಂಸಾಚಾರ, ಧ್ವಂಸ ಮತ್ತು ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ.
'ಆದಿ ಬಾನೆ ಕೆಬಾಂಗ್ ಯುನೈಟೆಡ್' (Adi Baane Kebang United) ಮತ್ತು ಇತರ ಸಂಘಟನೆಗಳು ಕರೆ ನೀಡಿದ್ದ 12 ಗಂಟೆಗಳ ಬಂದ್ ಸಂಜೆ 5 ಗಂಟೆಗೆ ಮುಕ್ತಾಯಗೊಂಡ ಬಳಿಕ ಹಿಂಸಾಚಾರ ಭುಗಿಲೆದ್ದಿತು. ಪ್ರತಿಭಟನಾಕಾರರು NHPC ಕಚೇರಿ ಮತ್ತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ ಹಾಗೂ ಇಬ್ಬರು ಶಾಸಕರು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರ ಮನೆಗಳ ಮೇಲೆ ದಾಳಿ ನಡೆಸಿ ಆಸ್ತಿ ಹಾನಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಗೆಕು ಎಂಬಲ್ಲಿ ಅಶ್ರುವಾಯು ಪ್ರಯೋಗಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು 'ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ಕಲ್ಲು ತೂರಾಟದಲ್ಲಿ 40ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನಾಕಾರರೊಬ್ಬರು ಅಶ್ರುವಾಯು ಶೆಲ್ ತಾಗಿ ಗಾಯಗೊಂಡಿದ್ದಾರೆ. ಕನಿಷ್ಠ ಒಂಬತ್ತು ಪೊಲೀಸ್ ವಾಹನಗಳು ಹಾನಿಗೊಳಗಾಗಿದ್ದು, ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಕರೆತರಲಾಗಿದ್ದ ಆಸ್ಪತ್ರೆಯ ಮೇಲೆಯೂ ಕಲ್ಲು ತೂರಾಟ ನಡೆಸಲಾಗಿದೆ.
ಘಟನೆಯ ಬೆನ್ನಲ್ಲೇ, ಜಿಲ್ಲಾಡಳಿತವು ಪಾಸಿಘಾಟ್, ಮೇಬೋ ಮತ್ತು ರುಕ್ಸಿನ್ ಪ್ರದೇಶಗಳಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ಸಾರ್ವಜನಿಕ ಸಭೆ-ಸಮಾರಂಭಗಳಿಗೆ ನಿರ್ಬಂಧ ಹೇರಿದೆ. ಮುಂದಿನ ಆದೇಶದವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರಲಿವೆ ಎಂದು ಜಿಲ್ಲಾಧಿಕಾರಿ ಜಯಂತಿ ಪರ್ಟಿನ್ ತಿಳಿಸಿದ್ದಾರೆ.
ಶನಿವಾರ (ಅಕ್ಟೋಬರ್ 24) ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮಾತುಕತೆಗೆ ಆಹ್ವಾನ ನೀಡಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ಸಿಯಾಂಗ್ ಅಪ್ಪರ್ ಮಲ್ಟಿಪರ್ಪಸ್ ಪ್ರಾಜೆಕ್ಟ್ ಸುತ್ತಲಿನ ತಪ್ಪುಕಲ್ಪನೆಗಳು ಮತ್ತು ತಪ್ಪು ಮಾಹಿತಿಗಳು ನಮ್ಮ ಜನರಲ್ಲಿ ಆತಂಕವನ್ನು ಸೃಷ್ಟಿಸುತ್ತಿವೆ. ಸತ್ಯಗಳು, ಪಾರದರ್ಶಕತೆ ಮತ್ತು ಮುಕ್ತ ಸಂವಾದದ ಮೂಲಕ ಈ ಮಾಹಿತಿಯ ಕೊರತೆಯನ್ನು ನೀಗಿಸುವುದು ಅಗತ್ಯವಾಗಿದೆ" ಎಂದು ಹೇಳಿದ್ದಾರೆ.
ಇದರ ನಡುವೆ, ಪ್ರತಿಭಟನೆಯ ದಿನದಂದು ಕಂಪೆನಿಗೆ ಭಾರೀ ಪ್ರಮಾಣದ ಹಾನಿಯಾಗಿದೆ ಎಂದು ಪಾಸಿಘಾಟ್ ನಲ್ಲಿರುವ NHPC ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಒಂದು ಕಚೇರಿ ಸಂಪೂರ್ಣವಾಗಿ ಭಸ್ಮವಾಗಿದ್ದರೆ, ಮತ್ತೊಂದು ಕಚೇರಿಗೆ ಭಾಗಶಃ ಹಾನಿಯಾಗಿದೆ. ಜನರೇಟರ್ ಕೂಡ ನಾಶವಾಗಿದೆ. ನಾವು ನಮ್ಮ ಆವರಣದಿಂದ ಹೊರಗೆ ಬಂದಿಲ್ಲ ಮತ್ತು ತಕ್ಷಣವೇ ಹಾನಿಯ ಅಂದಾಜು ಮಾಡುವ ಸ್ಥಿತಿಯಲ್ಲಿ ನಾವಿಲ್ಲ" ಎಂದು ಅವರು 'ಇಂಡಿಯನ್ ಎಕ್ಸ್ಪ್ರೆಸ್'ಗೆ ತಿಳಿಸಿದ್ದಾರೆ.
►ಸಿಯಾಂಗ್ ಅಪ್ಪರ್ ಮಲ್ಟಿಪರ್ಪಸ್ ಪ್ರಾಜೆಕ್ಟ್
ಸಿಯಾಂಗ್ ಅಪ್ಪರ್ ಮಲ್ಟಿಪರ್ಪಸ್ ಪ್ರಾಜೆಕ್ಟ್ (SUMP) ಎಂಬುದು ಅರುಣಾಚಲ ಪ್ರದೇಶದ ಸಿಯಾಂಗ್ ನದಿಯ ಮೇಲೆ ನಿರ್ಮಿಸಲು ಉದ್ದೇಶಿಸಲಾದ 11,200 ಮೆಗಾವಾಟ್ ಸಾಮರ್ಥ್ಯದ ಜಲವಿದ್ಯುತ್ ಮತ್ತು ನೀರು ಶೇಖರಣಾ ಯೋಜನೆಯಾಗಿದೆ. ಸರ್ಕಾರಿ ಸ್ವಾಮ್ಯದ NHPC ಲಿಮಿಟೆಡ್ ಇದನ್ನು ಅಭಿವೃದ್ಧಿಪಡಿಸುತ್ತಿದೆ. ಉದ್ದೇಶಿತ ಪ್ರಮಾಣದಲ್ಲಿ ಇದು ನಿರ್ಮಾಣಗೊಂಡರೆ, ಭಾರತದ ಅತಿ ದೊಡ್ಡ ಜಲವಿದ್ಯುತ್ ಯೋಜನೆಯಾಗಲಿದೆ.
ಈ ನದಿಯ ಮೇಲೆ ಅಣೆಕಟ್ಟು ನಿರ್ಮಿಸುವ ಯೋಜನೆಗಳು 1982ರಷ್ಟು ಹಳೆಯವು. ಕೇಂದ್ರ ಸರ್ಕಾರವು 2008ರಲ್ಲಿ ಅಪ್ಪರ್ ಸಿಯಾಂಗ್ ಯೋಜನೆಯನ್ನು 'ರಾಷ್ಟ್ರೀಯ ಯೋಜನೆ' ಎಂದು ಘೋಷಿಸಿತು. ಇದರ ಉದ್ದೇಶಿತ ವಿನ್ಯಾಸವು ವಿದ್ಯುತ್ ಉತ್ಪಾದನೆಯೊಂದಿಗೆ ಬೃಹತ್ ಪ್ರಮಾಣದ ನೀರು ಶೇಖರಣೆಯನ್ನು ಒಳಗೊಂಡಿದೆ. ಆದರೆ, ಅಂತಿಮ ವಿನ್ಯಾಸ, ಜಲಾಶಯದ ಗಾತ್ರ ಮತ್ತು ಸ್ಥಳೀಯ ಪರಿಣಾಮಗಳನ್ನು ತಾಂತ್ರಿಕ, ಭೂವೈಜ್ಞಾನಿಕ ಹಾಗೂ ಜಲವಿಜ್ಞಾನದ ಅಧ್ಯಯನಗಳ ಮೂಲಕ ಇನ್ನೂ ನಿರ್ಧರಿಸಬೇಕಾಗಿದೆ.
ಪೂರ್ವ ಅರುಣಾಚಲ ಪ್ರದೇಶದ ಈಸ್ಟ್ ಸಿಯಾಂಗ್ ಜಿಲ್ಲೆಯಲ್ಲಿ ಈ ಅಣೆಕಟ್ಟನ್ನು ನಿರ್ಮಿಸಲು ಯೋಜಿಸಲಾಗಿದೆ. ಟಿಬೆಟ್ ನಲ್ಲಿ ಉದ್ಭವಿಸುವ ಸಿಯಾಂಗ್ ನದಿಯು ಅರುಣಾಚಲ ಪ್ರದೇಶದ ಮೂಲಕ ಹರಿದು, ಇತರ ನದಿಗಳೊಂದಿಗೆ ಸೇರಿ ಬ್ರಹ್ಮಪುತ್ರ ನದಿಯಾಗಿ ರೂಪುಗೊಂಡು ಅಸ್ಸಾಂ ಪ್ರವೇಶಿಸುತ್ತದೆ ಹಾಗೂ ಬಾಂಗ್ಲಾದೇಶದ ಕಡೆಗೆ ಸಾಗುತ್ತದೆ.
ಈ ಯೋಜನೆಯು ಪ್ರಸ್ತುತ ಸಾಧ್ಯತೆ ಮತ್ತು ಪ್ರಾಥಮಿಕ ಮೌಲ್ಯಮಾಪನದ ಹಂತದಲ್ಲಿದೆ. ಸಾಧ್ಯತೆಯ ಪೂರ್ವ ಸಮೀಕ್ಷೆಗಳು ಮತ್ತು ತಾಂತ್ರಿಕ ಮೌಲ್ಯಮಾಪನಗಳನ್ನು ನಡೆಸುವ ಜವಾಬ್ದಾರಿಯನ್ನು NHPCಗೆ ವಹಿಸಲಾಗಿದೆ. ನಿರ್ಮಾಣದ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಪ್ರಸ್ತಾಪವು ಮುಂದುವರಿದರೆ ಹೆಚ್ಚಿನ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ, ಅನುಮತಿಗಳು ಮತ್ತು ಸಮಾಲೋಚನೆಗಳ ಅಗತ್ಯವಿರುತ್ತದೆ ಎಂದು ಸರ್ಕಾರ ತಿಳಿಸಿದೆ.
►ಬ್ರಹ್ಮಪುತ್ರ ನದಿ ನೀರಿನ ಭದ್ರತೆ ಬಗ್ಗೆ ಕಳವಳ ಮೂಡಿಸಿದ ಚೀನಾದ ಮೆಗಾ ಡ್ಯಾಮ್
ಟಿಬೆಟ್ ಸ್ವಾಯತ್ತ ಪ್ರದೇಶದ ಮೇಡೋಗ್ ಜಿಲ್ಲೆಯಲ್ಲಿ ಯಾರ್ಲುಂಗ್ ತ್ಸಾಂಗ್ಪೋ ನದಿಗೆ ಚೀನಾ ಬೃಹತ್ ಜಲವಿದ್ಯುತ್ ಯೋಜನೆಯ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದೆ. ಅಂದಾಜು 1.2 ಟ್ರಿಲಿಯನ್ ಯುವಾನ್ (17,13,120 ಕೋಟಿ ರೂ.) ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಯೋಜನೆಯು ಸುಮಾರು 60,000 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಪೂರ್ಣಗೊಂಡರೆ ವಿಶ್ವದ ಅತಿ ದೊಡ್ಡ ಜಲವಿದ್ಯುತ್ ಯೋಜನೆಯಾಗಲಿದೆ.
ಈ ಯೋಜನೆಯ ಸಾಮರ್ಥ್ಯವು ಭಾರತ ಪ್ರಸ್ತಾಪಿಸಿರುವ 11,200 ಮೆಗಾವಾಟ್ ನ ಸಿಯಾಂಗ್ ಯೋಜನೆಗಿಂತ ಸುಮಾರು 5.4 ಪಟ್ಟು ಹೆಚ್ಚಾಗಿದೆ. ನದಿಯ ಮೇಲ್ಭಾಗದಲ್ಲಿರುವ ದೇಶವು (ಚೀನಾ) ತನ್ನ ಜಲಾಶಯದ ಕಾರ್ಯಾಚರಣೆ, ನೀರಿನ ಹರಿವಿನ ವ್ಯತ್ಯಾಸ ಅಥವಾ ನೀರನ್ನು ಬೇರೆಡೆಗೆ ತಿರುಗಿಸುವ ಮೂಲಕ ಕೆಳಭಾಗದ ಪ್ರದೇಶಗಳಿಗೆ ಹರಿಯುವ ನೀರಿನ ಪ್ರಮಾಣ ಮತ್ತು ಸಮಯದ ಮೇಲೆ ಪ್ರಭಾವ ಬೀರಬಹುದು ಎಂಬುದು ಭಾರತದ ಮುಖ್ಯ ಕಾಳಜಿಯಾಗಿದೆ.
ಚೀನಾದ ಈ ಉದ್ದೇಶಿತ ಯೋಜನೆಯಿಂದಾಗಿ ಸುಮಾರು 40 ಬಿಲಿಯನ್ ಕ್ಯೂಬಿಕ್ ಮೀಟರ್ (BCM) ನೀರು ಬೇರೆಡೆಗೆ ತಿರುಗುವ ಸಾಧ್ಯತೆಯಿದೆ ಎಂದು ಭಾರತ ಸರ್ಕಾರ ಅಂದಾಜಿಸಿದೆ.
ಸಿಯಾಂಗ್ ನದಿಯ ಮೇಲೆ ಬೃಹತ್ ಜಲಾಶಯವನ್ನು ನಿರ್ಮಿಸುವುದರಿಂದ ನದಿಯ ನೀರಿನ ಹರಿವಿನಲ್ಲಿ ಉಂಟಾಗುವ ದಿಢೀರ್ ಬದಲಾವಣೆಗಳನ್ನು ನಿಯಂತ್ರಿಸಬಹುದು ಮತ್ತು ಕೆಳಭಾಗದ ಪ್ರದೇಶಗಳಲ್ಲಿ ಉಂಟಾಗಬಹುದಾದ ಪ್ರವಾಹವನ್ನು ತಡೆಯಬಹುದು ಎಂದು ಭಾರತ ಸರ್ಕಾರ ಹೇಳಿದೆ. ಚೀನಾದ ಮೇಡೋಗ್ ಯೋಜನೆಯ ಶೇಖರಣಾ ಸಾಮರ್ಥ್ಯ ಸುಮಾರು 5.5 ಬಿಲಿಯನ್ ಕ್ಯೂಬಿಕ್ ಮೀಟರ್ ಆಗಿದ್ದರೆ, ಭಾರತದ ಈ ಯೋಜನೆಗೆ ಸುಮಾರು 9.2 ಬಿಲಿಯನ್ ಕ್ಯೂಬಿಕ್ ಮೀಟರ್ ನೇರ ನೀರು ಶೇಖರಣಾ ಸಾಮರ್ಥ್ಯವನ್ನು ಅಂದಾಜಿಸಲಾಗಿದೆ ಎಂದು ಮುಖ್ಯಮಂತ್ರಿ ಖಂಡು ಉಲ್ಲೇಖಿಸಿದ್ದಾರೆ.
ಆದರೆ, ಜಲಾಶಯದ ಶೇಖರಣಾ ಸಾಮರ್ಥ್ಯ ಒಂದೇ ಚೀನಾದ ಯೋಜನೆಯಿಂದ ಉಂಟಾಗಬಹುದಾದ ಯಾವುದೇ ಪರಿಣಾಮವನ್ನು ಭಾರತ ಸಂಪೂರ್ಣವಾಗಿ ಸರಿದೂಗಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗುವುದಿಲ್ಲ. ಇಲ್ಲಿನ ಸಮಸ್ಯೆ ಇದಕ್ಕಿಂತಲೂ ಭಿನ್ನವಾಗಿದೆ.
'ಸೆಡಿಮೆಂಟರಿ ಜಿಯಾಲಜಿ ಆಂಡ್ ಟೆಥಿಯನ್ ಜಿಯಾಲಜಿ' ಸಂಸ್ಥೆ ಪ್ರಕಟಿಸಿದ ಅಧ್ಯಯನವನ್ನು ಆಧರಿಸಿ ಜುಲೈ ತಿಂಗಳಲ್ಲಿ 'ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ನೀಡಿದ ವರದಿಯು ಮೇಡೋಗ್ ಯೋಜನೆಯ ಪ್ರದೇಶದ ಕೆಳಗೆ ಸಕ್ರಿಯ 'ಪೈಝೆನ್ ಫಾಲ್ಟ್' (Paizhen Fault) ಇರುವುದನ್ನು ಗುರುತಿಸಿದ್ದು, ಈ ಪ್ರದೇಶದಲ್ಲಿ ಭೂಕಂಪನದ ಅಪಾಯಗಳ ಕುರಿತು ಪ್ರಶ್ನೆಗಳನ್ನು ಎತ್ತಿದೆ.
►ಅರುಣಾಚಲದ Gen Z ಅಣೆಕಟ್ಟು ನಿರ್ಮಾಣವನ್ನು ವಿರೋಧಿಸುತ್ತಿರುವುದೇಕೆ?
ರಾಜ್ಯದ ಯುವಜನರು ಸಿಯಾಂಗ್ ಅಣೆಕಟ್ಟು ನಿರ್ಮಾಣವನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ತಮ್ಮ ಪೂರ್ವಜರ ಭೂಮಿ, ಜೀವನೋಪಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಸ್ಥಳೀಯ ಆದಿ ಸಮುದಾಯಗಳು ನಡೆಸುತ್ತಿರುವ ಹೋರಾಟಕ್ಕೆ ಯುವಪಡೆಯೂ ಕೈಜೋಡಿಸಿದೆ. ಈ ಸಮುದಾಯಗಳಿಗೆ ಸಿಯಾಂಗ್ ನದಿಯು ಕೇವಲ ನೀರಿನ ಮೂಲ ಅಥವಾ ಜಲವಿದ್ಯುತ್ ಯೋಜನೆಯ ತಾಣವಲ್ಲ. ಅದು ಅವರ ಜೀವನಶೈಲಿ ಮತ್ತು ಸಾಂಸ್ಕೃತಿಕ ಗುರುತಿನೊಂದಿಗೆ ನಿಕಟವಾಗಿ ಬೆಸೆದುಕೊಂಡಿರುವ ನದಿಯಾಗಿದೆ.
ಉದ್ದೇಶಿತ 'ಸಿಯಾಂಗ್ ಅಪ್ಪರ್ ಮಲ್ಟಿಪರ್ಪಸ್ ಪ್ರಾಜೆಕ್ಟ್'ಗಾಗಿ ಪ್ರಾಥಮಿಕ ಸಾಧ್ಯತಾ ವರದಿ ಸಮೀಕ್ಷೆಯನ್ನು ನಡೆಸಲು ಯೋಜಿಸಲಾಗಿದೆ. ಈ ಸಮೀಕ್ಷೆಯು ನವೆಂಬರ್ 2026ರಿಂದ ಜನವರಿ 2027ರವರೆಗೆ ನಡೆಯುವ ನಿರೀಕ್ಷೆಯಿದೆ.
ಸಮೀಕ್ಷೆಗೆ ಅವಕಾಶ ನೀಡುವುದು ಅಂತಿಮ ಅನುಮತಿಯಲ್ಲ; ಕೇವಲ ಯೋಜನೆಯ ಅನುಷ್ಠಾನದ ಸಾಧ್ಯತೆಯನ್ನು ಮೌಲ್ಯಮಾಪನ ಮಾಡುವುದಷ್ಟೇ ಎಂದು ಸರ್ಕಾರ ಸ್ಪಷ್ಟಪಡಿಸುತ್ತಿದೆ. ಆದರೆ, ಪ್ರಸ್ತುತ ಸಮೀಕ್ಷೆಗೆ ಅವಕಾಶ ನೀಡಿದರೆ ಅದು ಭವಿಷ್ಯದಲ್ಲಿ ಯೋಜನೆಯ ಜಾರಿಗೆ ಬಲವಾದ ಅಡಿಪಾಯವಾಗಬಹುದು ಮತ್ತು ಬಳಿಕ ಅದನ್ನು ವಿರೋಧಿಸುವುದು ಕಷ್ಟಕರವಾಗಬಹುದು ಎಂದು 'ಸಿಯಾಂಗ್ ಇಂಡಿಜಿನಸ್ ಫಾರ್ಮರ್ಸ್ ಫೋರಂ' ವಾದಿಸಿದೆ.
ಇದಲ್ಲದೆ, ಸ್ಥಳೀಯರ ಪ್ರಮುಖ ಸಂಘಟನೆಯಾದ 'ಆದಿ ಬಾನೆ ಕೆಬಾಂಗ್', ಈ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಮತ್ತು ಅದರ ಪ್ರಾಥಮಿಕ ಸಾಧ್ಯತಾ ವರದಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದೆ. ಇತ್ತ 'ಆಲ್ ಆದಿ ಯೂತ್ ಅಸೋಸಿಯೇಷನ್' ಸಾಂಪ್ರದಾಯಿಕ 'ಕೆಬಾಂಗ್' (ಗ್ರಾಮ ಪಂಚಾಯಿತಿ/ಸಭೆ) ಮೂಲಕ ಸಂವಾದ ನಡೆಸುವಂತೆ ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.
►ವಿರೋಧಕ್ಕೆ ಪ್ರಮುಖ ಕಾರಣಗಳೇನು?
ಉದ್ದೇಶಿತ ಜಲಾಶಯದಿಂದಾಗಿ 27 ಹಳ್ಳಿಗಳು ಜಲಾವೃತಗೊಳ್ಳಲಿದ್ದು, 1 ಲಕ್ಷದಿಂದ 1.5 ಲಕ್ಷ ಸ್ಥಳೀಯ ನಿವಾಸಿಗಳು ನಿರ್ವಸಿತರಾಗಲಿದ್ದಾರೆ ಎಂದು 'ಸಿಯಾಂಗ್ ಇಂಡಿಜಿನಸ್ ಫಾರ್ಮರ್ಸ್ ಫೋರಂ' ಅಂದಾಜಿಸಿದೆ.
ಇದಲ್ಲದೆ, ಅರುಣಾಚಲ ಪ್ರದೇಶವು ಅತ್ಯಂತ ಅಪಾಯಕಾರಿ ಭೂಕಂಪನ ವಲಯವಾದ 'Seismic Zone V' ಅಡಿಯಲ್ಲಿ ಬರುತ್ತದೆ. ಭೂಕಂಪನದ ಅಪಾಯವಿರುವ ಸೂಕ್ಷ್ಮ ಹಿಮಾಲಯ ಪ್ರದೇಶದಲ್ಲಿ ಬೃಹತ್ ಜಲಾಶಯವನ್ನು ನಿರ್ಮಿಸುವ ಸಾಧ್ಯತೆಯು ಸ್ಥಳೀಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಯೋಜನೆಯನ್ನು ಸುರಕ್ಷಿತವಾಗಿ ನಿರ್ಮಿಸಬಹುದೇ ಮತ್ತು ಇಲ್ಲಿನ ಭೂವೈಜ್ಞಾನಿಕ ಪರಿಸ್ಥಿತಿಗಳು ಹೇಗಿವೆ ಎಂಬುದನ್ನು ಸಾಧ್ಯತಾ ಅಧ್ಯಯನವು ಪರಿಶೀಲಿಸಲಿದೆ ಎಂದು ಸರ್ಕಾರ ಹೇಳಿದೆ.
ಸ್ಥಳೀಯರ ಜಲಾವೃತ ಭೀತಿ, ಸ್ಥಳಾಂತರ, ಪರಿಸರ ಹಾನಿ ಮತ್ತು ಭೂಮಿ ಕಳೆದುಕೊಳ್ಳುವ ಕಳವಳಗಳು ಸೇರಿದಂತೆ ಯೋಜನೆಯ ಸುತ್ತ ಬೆಳೆಯುತ್ತಿರುವ ನಕಾರಾತ್ಮಕ ಚರ್ಚೆಗಳನ್ನು NHPCಯ ಸಾರ್ವಜನಿಕ ಸಂಪರ್ಕ ಟೆಂಡರ್ ದಾಖಲೆಯೇ ಒಪ್ಪಿಕೊಂಡಿದೆ.
NHPC ಜುಲೈ 2025ರಲ್ಲಿ ಮುಂಬೈ ಮೂಲದ 'ಕಾನ್ಸೆಪ್ಟ್ ಪಬ್ಲಿಕ್ ರಿಲೇಶನ್ಸ್' ಸಂಸ್ಥೆಗೆ 8.73 ಕೋಟಿ ರೂ. ಮೌಲ್ಯದ ಒಂದು ವರ್ಷದ ಒಪ್ಪಂದವನ್ನು ನೀಡಿದ್ದು, ಮುಂದಿನ ತಿಂಗಳಿಂದ ಈ ಸೇವೆಗಳು ಆರಂಭವಾಗಿದ್ದವು. ಈ ಒಪ್ಪಂದವನ್ನು 2026ರ ನವೆಂಬರ್ 6ರವರೆಗೆ ಮೂರು ತಿಂಗಳು ವಿಸ್ತರಿಸಲಾಗಿದ್ದು, ಒಟ್ಟು ಮೌಲ್ಯವು ಸುಮಾರು 10.91 ಕೋಟಿ ರೂ.ಗೆ ತಲುಪಿದೆ. ಇಷ್ಟೆಲ್ಲ ಸಾರ್ವಜನಿಕ ಸಂಪರ್ಕ ಪ್ರಯತ್ನಗಳ ನಡುವೆಯೂ ಯೋಜನೆಯ ವಿರುದ್ಧ ಪ್ರತಿಭಟನೆಗಳು ಮುಂದುವರಿದಿವೆ.
ಸೌಜನ್ಯ: firstpost.com






