ನಕಲಿ ORS ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದ ಖ್ಯಾತ ಮಕ್ಕಳ ತಜ್ಞೆ ಡಾ.ಶಿವರಂಜನಿ ಸಂತೋಷ್ IAP ತೊರೆದಿದ್ದೇಕೆ?

ಡಾ.ಶಿವರಂಜನಿ ಸಂತೋಷ್| Photo Credit :Instagram/@drsivaranjanionline
ದೇಶದಲ್ಲಿ ನಕಲಿ ಒಆರ್ಎಸ್ (ORS) ಮಾರಾಟ ಜಾಲದ ವಿರುದ್ಧ ಕಳೆದ ಎಂಟು ವರ್ಷಗಳಿಂದ ನಿರಂತರ ಜಾಗೃತಿ ಹೋರಾಟ ನಡೆಸುತ್ತಾ ಬಂದಿದ್ದ ಹೈದರಾಬಾದ್ನ ಖ್ಯಾತ ಮಕ್ಕಳ ತಜ್ಞೆ ಡಾ. ಶಿವರಂಜನಿ ಸಂತೋಷ್ ಅವರು ಮೊದಲ ಬಾರಿಗೆ ತೀವ್ರ ನಿರಾಶೆಗೊಂಡಿದ್ದಾರೆ. ಈ ಹೋರಾಟದ ಹಿನ್ನೆಲೆಯಲ್ಲಿ ‘ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್’ (IAP) ಮತ್ತು ಪ್ರಮುಖ ಫಾರ್ಮಾ ದೈತ್ಯ ಕಂಪನಿ ‘ಕೆನ್ವ್ಯೂ’ ನಡುವೆ ಉಂಟಾದ ಹಿತಾಸಕ್ತಿ ಸಂಘರ್ಷದಿಂದಾಗಿ, ಅವರು ಐಎಪಿ ಸಂಘಟನೆಗೆ ರಾಜೀನಾಮೆ ನೀಡಿದ್ದಾರೆ. ಈ ನಡುವೆ, ಐಎಪಿಯ ಕೆಲವು ಸದಸ್ಯರು ಡಾ. ಶಿವರಂಜನಿ ಅವರ ಈ ಹೋರಾಟವನ್ನು ‘ಪ್ರಚಾರದ ಗಿಮಿಕ್’ ಎಂದು ಆರೋಪಿಸಿರುವುದು ಸಂಘರ್ಷಕ್ಕೆ ಕಾರಣವಾಗಿದೆ.
ಸಹೋದ್ಯೋಗಿಗಳಿಂದ ಸೂಕ್ತ ಬೆಂಬಲ ಸಿಗದ ಕಾರಣ ತೀವ್ರ ಬೇಸರಗೊಂಡಿದ್ದ ಅವರು ಕೆಲ ದಿನಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದರು. ಆದರೆ, ಇತ್ತೀಚೆಗೆ ಅವರು ತಮ್ಮ ಖಾತೆಗಳನ್ನು ಪುನಃ ಸಕ್ರಿಯಗೊಳಿಸಿದ್ದಾರೆ.
ಮಕ್ಕಳ ವೈದ್ಯರ ಸಂಘದಿಂದ ಹೊರಬಂದ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅವರು, "ನಮ್ಮ ಮಕ್ಕಳ ಆರೋಗ್ಯಕ್ಕಿಂತ ಫಾರ್ಮಾ ಕಂಪನಿಗಳ ಹಣಕಾಸಿನ ನೆರವೇ ಮುಖ್ಯವಾಗಬಾರದು" ಎಂದು ಹೇಳಿದ್ದಾರೆ.
ನಕಲಿ ಒಆರ್ಎಸ್ ವಿರುದ್ಧದ ತಮ್ಮ ಹೋರಾಟಕ್ಕೆ ಐಎಪಿ ಮತ್ತು ಇತರ ವೈದ್ಯಕೀಯ ಸಂಘಟನೆಗಳ ನಾಯಕರು ಬೆಂಬಲ ನೀಡದಿದ್ದಕ್ಕೆ ವೈದ್ಯೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು 'ಡೆಕ್ಕನ್ ಹೆರಾಲ್ಡ್' ಪತ್ರಿಕೆಯೊಂದಿಗೆ ಮಾತನಾಡಿದ ಡಾ.ಶಿವರಂಜನಿ ಸಂತೋಷ್, "ಒಂಟಿಯಾಗಿ ಹೋರಾಡಿ ನನಗೆ ಸಾಕಾಗಿದೆ . ಈ ಪರಿಸ್ಥಿತಿಯಿಂದಾಗಿ ನನ್ನ ಕುಟುಂಬವೂ ತೀವ್ರ ಆತಂಕದಲ್ಲಿದೆ. ಈ ಹಂತದಲ್ಲಿ ಮುಂದೆ ಏನು ಮಾಡಬೇಕೆಂದು ನನಗೆ ನಿಜವಾಗಿಯೂ ತಿಳಿಯುತ್ತಿಲ್ಲ. ಇದು ಒಬ್ಬ ವ್ಯಕ್ತಿಯ ಹೋರಾಟವಾಗಿರಲಿಲ್ಲ, ಸರಿಯಾದ ವಿಷಯಕ್ಕಾಗಿ ಎಲ್ಲರೂ ಒಟ್ಟಾಗಿ ನಿಲ್ಲಬೇಕಾಗಿತ್ತು" ಎಂದು ಹೇಳಿದ್ದಾರೆ.
2026 ಮಾರ್ಚ್ ನಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಗ್ರಾಹಕ ಆರೋಗ್ಯ ವಿಭಾಗವಾದ ‘ಕೆನ್ವ್ಯೂ’ ಫಾರ್ಮಾ ಸಂಸ್ಥೆಯು, ಡಾ. ಶಿವರಂಜನಿ ಅವರು "ಅವೈಜ್ಞಾನಿಕ ಸಂಗತಿಗಳ" ಮೂಲಕ ತಮ್ಮ ಎನರ್ಜಿ ಡ್ರಿಂಕ್ನ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಕಾನೂನು ನೋಟಿಸ್ ಜಾರಿ ಮಾಡಿತ್ತು.
ಹಿನ್ನೆಲೆ ಏನು?
ಡಾ. ಶಿವರಂಜನಿ ಸಂತೋಷ್ ಅವರು ಸಾಮಾಜಿಕ ಜಾಲತಾಣಗಳು ಮತ್ತು ಕಾನೂನು ಮಾರ್ಗಗಳೆರಡನ್ನೂ ಬಳಸಿಕೊಂಡು, ಹಣ್ಣಿನ ಸುವಾಸನೆ ಹೊಂದಿರುವ ಎಲೆಕ್ಟ್ರೋಲೈಟ್ ಪಾನೀಯಗಳನ್ನು ‘ಒಆರ್ಎಸ್’ ಹೆಸರಿನಲ್ಲಿ ಮಾರಾಟ ಮಾಡುತ್ತಿರುವ ಬ್ರ್ಯಾಂಡ್ಗಳ ವಿರುದ್ಧ ದೊಡ್ಡ ಮಟ್ಟದ ಜಾಗೃತಿ ಅಭಿಯಾನವನ್ನು ಕೈಗೊಂಡಿದ್ದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ತೀವ್ರ ಭೇದಿ ಹಾಗೂ ವಾಂತಿ ಪ್ರಕರಣಗಳು ಶಿಶುಗಳು ಮತ್ತು ಸಣ್ಣ ಮಕ್ಕಳ ಸಾವಿಗೆ ಪ್ರಮುಖ ಕಾರಣಗಳಾಗಿವೆ. ಇದಕ್ಕೆ ಚಿಕಿತ್ಸೆ ನೀಡಲು ಪ್ರಮುಖ ಮಾರ್ಗವೆಂದರೆ ವೈಜ್ಞಾನಿಕವಾಗಿ ಸಿದ್ಧಪಡಿಸಿದ ಗ್ಲೂಕೋಸ್-ಎಲೆಕ್ಟ್ರೋಲೈಟ್ ದ್ರಾವಣವಾದ ‘ಓರಲ್ ರೀಹೈಡ್ರೇಶನ್ ಸಾಲ್ಟ್ಸ್’ ಅಥವಾ ‘ಒಆರ್ಎಸ್’ ಅನ್ನು ನೀಡುವುದು. ಈ ದ್ರಾವಣವು ಎಲೆಕ್ಟ್ರೋಲೈಟ್ಗಳು ಮತ್ತು ಗ್ಲೂಕೋಸ್ನ ನಿಖರವಾದ ಮಿಶ್ರಣವನ್ನು ಹೊಂದಿರುತ್ತದೆ.
ವಿವಿಧ ಅಧ್ಯಯನಗಳ ಪ್ರಕಾರ, ಒಬ್ಬ ವ್ಯಕ್ತಿಗೆ ಭೇದಿ ಭೀತಿಯಿದ್ದಾಗಲೂ ರಕ್ತಕ್ಕೆ ನೀರನ್ನು ಹೀರಿಕೊಳ್ಳಲು ಸಣ್ಣ ಕರುಳಿಗೆ ಗ್ಲೂಕೋಸ್ ಮತ್ತು ಸೋಡಿಯಂ ಅಗತ್ಯವಿರುತ್ತದೆ. ಈ ಮಿಶ್ರಣಕ್ಕೆ ಕೃತಕ ಸಿಹಿಕಾರಕ 'ಸುಕ್ರಲೋಸ್' ಅನ್ನು ಸೇರಿಸುವುದರಿಂದ ದ್ರಾವಣದ ಆಸ್ಮೋಲಾರಿಟಿ ಕಾರ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರದಿದ್ದರೂ, ಅದು ಮಿಶ್ರಣದಲ್ಲಿರುವ ಗ್ಲೂಕೋಸ್ ಅನ್ನು ಎಂದಿಗೂ ಬದಲಿಸಲು ಸಾಧ್ಯವಿಲ್ಲ.
ಡಾ. ಶಿವರಂಜನಿ ಅವರ ನಿರಂತರ ಅಭಿಯಾನದ ಫಲವಾಗಿ 2025 ಅಕ್ಟೋಬರ್ ತಿಂಗಳಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಒಂದು ಮಹತ್ವದ ಆದೇಶ ಹೊರಡಿಸಿತ್ತು. ಅದರಂತೆ, ವಿಶ್ವ ಆರೋಗ್ಯ ಸಂಸ್ಥೆಯ ಗುಣಮಟ್ಟದ ಸೂತ್ರವನ್ನು ಸಂಪೂರ್ಣವಾಗಿ ಪಾಲಿಸದ ಹೊರತು ಯಾವುದೇ ಎಲೆಕ್ಟ್ರೋಲೈಟ್ ಪಾನೀಯಗಳ ಮೇಲೆ ‘ORS’ ಎಂದು ಲೇಬಲ್ ಹಾಕುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಯಿತು.
ಈ ಆದೇಶದ ನಂತರ, ಈ ಹಿಂದೆ ತನ್ನ ಪಾನೀಯವನ್ನು ಒಆರ್ಎಸ್ ಎಂದು ಮಾರಾಟ ಮಾಡುತ್ತಿದ್ದ ಕೆನ್ವ್ಯೂ ಕಂಪನಿಯು ತನ್ನ ‘ORSL’ ಬ್ರ್ಯಾಂಡ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿ ಬಂತು.
ಇದರ ಬೆನ್ನಲ್ಲೇ ಈ ವರ್ಷ ಫಾರ್ಮಾ ದೈತ್ಯ ಕಂಪನಿಯು ‘ERZL’ ಹೆಸರಿನ ಹೊಸ ಎನರ್ಜಿ ಡ್ರಿಂಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತು. ಇದು ನವೀಕೃತ ಸೂತ್ರವನ್ನು ಹೊಂದಿದ್ದು, 1.4 ಪಟ್ಟು ಹೆಚ್ಚು ಎಲೆಕ್ಟ್ರೋಲೈಟ್ ಮತ್ತು 8 ಪಟ್ಟು ಕಡಿಮೆ ಸಕ್ಕರೆಯನ್ನು ಹೊಂದಿದೆ ಎಂದು ಹೇಳಿತು. ಜೊತೆಗೆ ಅದರ ಪ್ಯಾಕೇಜಿಂಗ್ ಮೇಲೆ ಒಆರ್ಎಸ್ ಬದಲಿಗೆ ‘ಎಲೆಕ್ಟ್ರೋಲೈಟ್ ಡ್ರಿಂಕ್’ ಎಂದು ಲೇಬಲ್ ಮಾಡಿತು.
ಪ್ರಸ್ತುತ ವಿವಾದ ಏನು?
ಎಫ್ಎಸ್ಎಸ್ಎಐನ ಹೊಸ ಒಆರ್ಎಸ್ ಮಾರ್ಗಸೂಚಿಗಳು ಜಾರಿಗೆ ಬಂದಿದ್ದರೂ, ಮಾರುಕಟ್ಟೆಯಲ್ಲಿರುವ ‘ORSL’ ಮತ್ತು ‘ERZL’ ಬ್ರ್ಯಾಂಡ್ಗಳ ಹೆಸರುಗಳು ಗ್ರಾಹಕರಲ್ಲಿ ತೀವ್ರ ಗೊಂದಲ ಮೂಡಿಸುತ್ತಿವೆ ಎಂದು ಡಾ. ಶಿವರಂಜನಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಎರಡೂ ಹೆಸರುಗಳ ಸಂಕ್ಷಿಪ್ತ ರೂಪಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿರುವುದನ್ನು ಅವರು ಎತ್ತಿ ತೋರಿಸಿದ್ದಾರೆ.
ಹಳೆಯ ಬ್ರ್ಯಾಂಡ್ ಮತ್ತು ಮರುರೂಪಿಸಲಾದ ಹೊಸ ಉತ್ಪನ್ನದ ನಡುವೆ ಹತ್ತಿರದ ಹೋಲಿಕೆಯಿರುವುದರಿಂದ ಗ್ರಾಹಕರು ಸುಲಭವಾಗಿ ಮೋಸಹೋಗಬಹುದು ಎಂದು ಅವರು ಹೇಳಿದ್ದಾರೆ.
"ಅದರ ಪ್ಯಾಕೆಟ್ ಮೇಲಿರುವ ‘E’ ಅಕ್ಷರವನ್ನು ಕೂಡ ‘O’ ನಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಇಷ್ಟೊಂದು ಒಂದೇ ರೀತಿಯ ಧ್ವನಿ ಮತ್ತು ರೂಪ ಹೊಂದಿರುವ ಎರಡು ಉತ್ಪನ್ನಗಳ ನಡುವಿನ ವ್ಯತ್ಯಾಸವನ್ನು ಸಾಮಾನ್ಯ ಗ್ರಾಹಕರು ಪತ್ತೆಹಚ್ಚಲು ಸಾಧ್ಯವೇ?" ಎಂದು ವೈದ್ಯೆ ಪ್ರಶ್ನಿಸಿದ್ದಾರೆ.
ಆದರೆ, ಈ ಆಕ್ಷೇಪಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕೆನ್ವ್ಯೂ ಕಂಪನಿಯು, ಡಾಕ್ಟರ್ ಮಾಡುತ್ತಿರುವ ಆರೋಪಗಳು "ಅವೈಜ್ಞಾನಿಕ ಮತ್ತು ದುರುದ್ದೇಶಪೂರಿತ" ಎಂದು ನೋಟಿಸ್ ನೀಡಿದೆ.
ವಿಶೇಷವಾಗಿ ಎರಡು ವರ್ಷದೊಳಗಿನ ಮಕ್ಕಳಿಗೆ ದೀರ್ಘಕಾಲದವರೆಗೆ ಸುಕ್ರಲೋಸ್ ಅಥವಾ ಇತರ ಪೌಷ್ಟಿಕಾಂಶ ರಹಿತ ಸಿಹಿ ನೀಡುವುದು ಹಾನಿಕಾರಕ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಯಾಗಿ ನೋಟಿಸ್ ನೀಡಿರುವ ಕಂಪನಿಯು, "ಭಾರತೀಯ ಮಾರುಕಟ್ಟೆಯಲ್ಲಿ ಸುಕ್ರಲೋಸ್ ಹೊಂದಿರುವ ಹಲವಾರು ಪಾನೀಯಗಳಿವೆ. ಹೀಗಿದ್ದರೂ ನಮ್ಮ ‘ERZL’ ಬ್ರ್ಯಾಂಡ್ ಅನ್ನು ಮಾತ್ರ ಗುರಿಯಾಗಿಸಿಕೊಂಡಿರುವುದು ನಿಮ್ಮ ದುರುದ್ದೇಶವನ್ನು ತೋರಿಸುತ್ತದೆ. ನೀವೇ ಸ್ವತಃ ಸುಕ್ರಲೋಸ್ ಬಳಕೆಯು ಒಂದು ಚರ್ಚಾಸ್ಪದ ವಿಷಯ ಎಂದು ಕರೆದಿರುವುದನ್ನು ಇಲ್ಲಿ ಗಮನಿಸಬೇಕಾಗಿದೆ" ಎಂದಿದೆ.
ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವ ಫಾರ್ಮಾ ಕಂಪನಿಯು, ತನ್ನ ಹೊಸ ‘ERZL’ ಉತ್ಪನ್ನವನ್ನು ಒಆರ್ಎಸ್ ಎಂದು ಎಲ್ಲೂ ಮಾರಾಟ ಮಾಡುತ್ತಿಲ್ಲ. ಅದರ ಪ್ಯಾಕೇಜಿಂಗ್ ಮೇಲೆ ಸ್ಪಷ್ಟವಾಗಿ ಎಲೆಕ್ಟ್ರೋಲೈಟ್ ಪಾನೀಯ ಎಂದು ಬರೆಯಲಾಗಿದೆ ಎಂದು ವಾದಿಸಿದೆ. ಅಲ್ಲದೆ, ಎರಡೂ ಉತ್ಪನ್ನಗಳು ಒಂದೇ ತರಹ ಕಾಣಿಸುತ್ತವೆ ಎಂಬ ಆರೋಪ ತರ್ಕಹೀನ ಮತ್ತು ಆಧಾರರಹಿತ ಎಂದು ಹೇಳಿದೆ.
ತಮ್ಮ ಉತ್ಪನ್ನವು ಎಫ್ಎಸ್ಎಸ್ಎಐ ಮಾರ್ಗಸೂಚಿಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆ . ತಮ್ಮದೇ ಆದ ಒಆರ್ಎಸ್ ಪಾನೀಯ ‘ORSL’ (WHO ಆಧಾರಿತ) ಹಾಗೂ ಎಲೆಕ್ಟ್ರೋಲೈಟ್ ಪಾನೀಯ ‘ERZL’ ನಡುವೆ ಸ್ಪಷ್ಟ ವ್ಯತ್ಯಾಸವಿದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಾ. ಶಿವರಂಜನಿ , ಕಂಪನಿಯು ಕಾನೂನಾತ್ಮಕವಾಗಿ ಬಲವಾದ ನಿಲುವು ಹೊಂದಿರಬಹುದು, ಆದರೆ ನನ್ನ ಹೋರಾಟ ಇರುವುದು ನೈತಿಕತೆಯ ಪರವಾಗಿ ಎಂದು ತಿಳಿಸಿದ್ದಾರೆ.
"ತಾರ್ಕಿಕವಾಗಿ ಎಲ್ಲವೂ ಸರಿಯಾಗಿರಬಹುದು, ಆದರೆ ವೈದ್ಯಕೀಯ ನೈತಿಕತೆಯ ವಿಷಯಕ್ಕೆ ಬಂದಾಗ, ಗ್ರಾಹಕರು ಅಥವಾ ಮಾರಾಟಗಾರರು ಇವುಗಳನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಸಣ್ಣ ತಪ್ಪು ನಿರ್ಧಾರ ತೆಗೆದುಕೊಳ್ಳಲು ಸಹ ನಾವು ಏಕೆ ಅವಕಾಶ ನೀಡಬೇಕು? ಮರು-ಬ್ರ್ಯಾಂಡ್ ಮಾಡಲಾದ ಉತ್ಪನ್ನದಲ್ಲಿ ಅತ್ಯಂತ ಕನಿಷ್ಠ ಬದಲಾವಣೆಗಳನ್ನು ಮಾಡಿರುವುದರಿಂದ, ಇದನ್ನು ತಿಳಿಯದೇ ಒಆರ್ಎಸ್ ಎಂದು ಮಾರಾಟ ಮಾಡುವವರಲ್ಲಿ ಮತ್ತು ಒಆರ್ಎಸ್ ಎಂದೇ ಭಾವಿಸಿ ಖರೀದಿಸುವ ಗ್ರಾಹಕರಲ್ಲಿ ಗೊಂದಲ ಮುಂದುವರಿಯುತ್ತದೆ" ಎಂದು ಡಾ. ಶಿವರಂಜನಿ ಸಂತೋಷ್ ಹೇಳಿದ್ದಾರೆ.
ಕೃಪೆ: deccanherald.com






