ತೃಣಮೂಲ ಕಾಂಗ್ರೆಸ್ ನ ಬಂಡಾಯ ಸಂಸದರು NCPI ಪಕ್ಷದೊಂದಿಗೆ ವಿಲೀನಗೊಂಡಿದ್ದು ಏಕೆ?

Photo Credit : PTI
ತೃಣಮೂಲ ಕಾಂಗ್ರೆಸ್ ನ (TMC) ಸಂಸದರು ತಾವು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಪಕ್ಷದೊಂದಿಗೆ ವಿಲೀನಗೊಂಡಿರುವುದಾಗಿ ಹೇಳಿ, ಸಂಸತ್ತಿನಲ್ಲಿ ತಮಗೆ ಪ್ರತ್ಯೇಕ ಗುಂಪಾಗಿ ಕೂರಲು ಅವಕಾಶ ನೀಡಬೇಕೆಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಇದರೊಂದಿಗೆ, 2023ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದ, ಅಷ್ಟಾಗಿ ಪರಿಚಿತವಲ್ಲದ ಪಕ್ಷವೊಂದರ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ.
ಸ್ಥಾಪಕಿ ಶಿಯುಲಿ ಕುಂಡು ನೇತೃತ್ವದ NCPI ಪಕ್ಷವು ಇತ್ತೀಚಿನ ವರ್ಷಗಳಲ್ಲಿ ಅಸ್ಸಾಂ ಮತ್ತು ತ್ರಿಪುರಾದಲ್ಲಿ ಸಕ್ರಿಯವಾಗಿದೆ. ಭಾರತೀಯ ಚುನಾವಣಾ ಆಯೋಗದ ವೆಬ್ಸೈಟ್ ಪ್ರಕಾರ, NCPI ಪಕ್ಷವು "ನೋಂದಾಯಿತ (ಮಾನ್ಯತೆ ಪಡೆಯದ)" ಪಕ್ಷಗಳ ಪಟ್ಟಿಯಲ್ಲಿದ್ದು, "ಏಳು ಕಿರಣಗಳನ್ನು ಹೊಂದಿರುವ ಪೆನ್ನಿನ ನಿಬ್" ಅನ್ನು ತನ್ನ ಚುನಾವಣಾ ಚಿಹ್ನೆಯನ್ನಾಗಿ ಹೊಂದಿದೆ.
ತ್ರಿಪುರಾ ಚುನಾವಣೆಯಲ್ಲಿ ಉನಕೋಟಿ ಜಿಲ್ಲೆಯ ಕೈಲಾಶಹರ್ ಕ್ಷೇತ್ರದಿಂದ ಜಹಾಂಗೀರ್ ಅಲಿ (54) ಮತ್ತು ಧಲಾಯ್ ಜಿಲ್ಲೆಯ ಚಾವ್ಮಾನು ಕ್ಷೇತ್ರದಿಂದ ಬರ್ಜೆಡಾ ತ್ರಿಪುರಾ (65) ಅವರು NCPI ಟಿಕೆಟ್ ನಲ್ಲಿ ಸ್ಪರ್ಧಿಸಿದ್ದರು. ಉಳಿದ ಇಬ್ಬರು ಅಭ್ಯರ್ಥಿಗಳ ವಿವರಗಳು ಸ್ಪಷ್ಟವಾಗಿಲ್ಲ. ಮೂಲಗಳ ಪ್ರಕಾರ, ಆ ಇಬ್ಬರು ಪಕ್ಷದ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳಾಗಿರುವ ಸಾಧ್ಯತೆಯಿದೆ.
ಚುನಾವಣಾ ಫಲಿತಾಂಶದ ವಿಷಯಕ್ಕೆ ಬಂದರೆ, ಪಕ್ಷವು ತನ್ನ ಸ್ವಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಈ ಎರಡು ಸೀಟುಗಳಲ್ಲಿ ಒಟ್ಟು ಸೇರಿ ಕೇವಲ 822 ಮತಗಳನ್ನು ಪಡೆಯಲಷ್ಟೇ ಶಕ್ತವಾಗಿತ್ತು. ಎಸ್ಟಿ ಮೀಸಲು ಕ್ಷೇತ್ರವಾದ ಚಾವ್ಮಾನುದಲ್ಲಿ 536 ಮತ್ತು ಕೈಲಾಶಹರ್ನಲ್ಲಿ 286 ಮತಗಳು ಪಕ್ಷಕ್ಕೆ ಲಭಿಸಿತ್ತು.
ಅದೇ ಚುನಾವಣೆಯಲ್ಲಿ ಕೈಲಾಶಹರ್ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ 696 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದು ನೋಟಾ (537 ಮತಗಳು) ಗಿಂತ ಸ್ವಲ್ಪವೇ ಹೆಚ್ಚಾಗಿತ್ತು. ಇನ್ನು ಚಾವ್ಮಾನು ಕ್ಷೇತ್ರದಲ್ಲಿ TMC 566 ಮತಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿತ್ತು. ಇದು ಕೂಡ ನೋಟಾ (500 ಮತಗಳು) ಗಿಂತ ಸ್ವಲ್ಪವೇ ಜಾಸ್ತಿ ಇತ್ತು.
ಬಂಡಾಯ TMC ಸಂಸದರು NCPI ಸೇರುವ ನಿರ್ಧಾರವು, 2016ರಲ್ಲಿ ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಂಡಾಗ ನಡೆದಿದ್ದ ಇಂತಹುದೇ ಒಂದು ಘಟನೆಯ ನೆನಪನ್ನು ಮರುಕಳಿಸುವಂತೆ ಮಾಡಿದೆ. ಆಗ ಮಾಜಿ ಮುಖ್ಯಮಂತ್ರಿ ನಬಾಮ್ ತುಕಿ ಅವರನ್ನು ಹೊರತುಪಡಿಸಿ, ಕಾಂಗ್ರೆಸ್ ನ ಇಡೀ ಶಾಸಕಾಂಗ ಪಕ್ಷವೇ ಬಿಜೆಪಿ ನೇತೃತ್ವದ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ (NEDA) ಭಾಗವಾಗಿದ್ದ 'ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ' (PPA) ಪಕ್ಷವನ್ನು ಸೇರಿತ್ತು.
ನಂತರ, 2016ರ ಡಿಸೆಂಬರ್ 31ರಂದು ಪೆಮಾ ಖಂಡು ಮತ್ತು PPA ಪಕ್ಷದ ಇತರ 32 ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದರು. ಇದು ಈಶಾನ್ಯ ಭಾರತದಲ್ಲಿ ಬಿಜೆಪಿ ತನ್ನ ಮೊದಲ ಪೂರ್ಣ ಪ್ರಮಾಣದ ಸರ್ಕಾರವನ್ನು ರಚಿಸಲು ದಾರಿ ಮಾಡಿಕೊಟ್ಟಿತು. ಈ ಬೆಳವಣಿಗೆಯ ನಂತರ, 60 ಸದಸ್ಯರ ಅಸೆಂಬ್ಲಿಯಲ್ಲಿ ಬಿಜೆಪಿಯ ಬಲ 45ಕ್ಕೆ ಏರಿತು. PPA ಶಾಸಕರ ಸಂಖ್ಯೆ 10ಕ್ಕೆ ಕುಸಿತ ಕಂಡರೆ, ಕಾಂಗ್ರೆಸ್ ನಲ್ಲಿ ಕೇವಲ ಮೂವರು ಸದಸ್ಯರು ಉಳಿದುಕೊಂಡರು. ಇದಾದ ಬಳಿಕ 2019ರಲ್ಲಿ ನಡೆದ ಮುಂದಿನ ಚುನಾವಣೆಯಲ್ಲಿ ಖಂಡು ಅವರು ಬಿಜೆಪಿಯಿಂದ ಸ್ಪರ್ಧಿಸಿ 60 ಸೀಟುಗಳ ಪೈಕಿ 41ರಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದರು.
TMC ಸಂಸದರ ಈ ನಿರ್ಧಾರದ ಹಿಂದಿನ ಕಾರಣವೇನು?
ಬಂಡಾಯ ಸಂಸದರು NCPI ಜೊತೆ ವಿಲೀನಗೊಳ್ಳಲು ನಿರ್ಧರಿಸಿರುವುದು ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಅನರ್ಹತೆಯಿಂದ ಪಾರಾಗಲು ಮತ್ತು ತಾವೇ "ನಿಜವಾದ TMC" ಎಂದು ಸಾಬೀತುಪಡಿಸಲು ಸಮಯಾವಕಾಶ ಪಡೆಯುವ ಒಂದು ತಂತ್ರದಂತೆ ಕಾಣುತ್ತಿದೆ.
ಸಂವಿಧಾನದ ಹತ್ತನೇ ಅನುಸೂಚಿಯ 4ನೇ ಪ್ಯಾರಾಗ್ರಾಫ್ ಪ್ರಕಾರ, ಎರಡು ಪಕ್ಷಗಳು ವಿಲೀನಗೊಂಡಾಗ ಪಕ್ಷಾಂತರದ ಆಧಾರದ ಮೇಲಿನ ಅನರ್ಹತೆ ಅನ್ವಯಿಸುವುದಿಲ್ಲ. ಆದರೆ, ಶಾಸಕಾಂಗ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು (2/3) ಸದಸ್ಯರು ಈ ವಿಲೀನಕ್ಕೆ ಒಪ್ಪಿಗೆ ಸೂಚಿಸಿದರೆ ಮಾತ್ರ ಮೂಲ ರಾಜಕೀಯ ಪಕ್ಷದ ವಿಲೀನ ಅಧಿಕೃತ ಎಂದು ಪರಿಗಣಿಸಲಾಗುತ್ತದೆ.
"ನಾವು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಜೊತೆ ವಿಲೀನಗೊಂಡಿದ್ದೇವೆ. ಅದು ರಾಜಕೀಯ ಪಕ್ಷವಾಗಿದ್ದು, ಮಾನ್ಯತೆ ಪಡೆದ ಪ್ರಾದೇಶಿಕ ಪಕ್ಷವಾಗಿದೆ. ನೀವು ಪಕ್ಷದ ಮೂರನೇ ಎರಡರಷ್ಟು ಬಹುಮತದೊಂದಿಗೆ ಹೊರಬಂದಾಗ, ಮೊದಲ ದಿನವೇ ಅದೇ ಪಕ್ಷದ ಹೆಸರನ್ನು ಕೇಳಲು ಸಾಧ್ಯವಿಲ್ಲ. ಜುಲೈನಲ್ಲಿ ಸಂಸತ್ ಅಧಿವೇಶನ ಪುನರಾರಂಭಗೊಂಡಾಗ, ನಮ್ಮ ಬಳಿ ಮೂರನೇ ಎರಡರಷ್ಟು ಬಹುಮತ ಇರುವುದರಿಂದ ತೃಣಮೂಲ ಕಾಂಗ್ರೆಸ್ ಹೆಸರು ನಮಗೇ ಸಿಗಬೇಕು ಎಂದು ನಾವು ಒತ್ತಾಯಿಸುತ್ತೇವೆ. ನಂತರ ಯಾವುದು ನಿಜವಾದ TMC ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ" ಎಂದು ಬಂಡಾಯ ಗುಂಪಿನ ಮುಖಂಡ ಹಾಗೂ ಹಿರಿಯ ಸಂಸದ ಸುದೀಪ್ ಬಂದೋಪಾಧ್ಯಾಯ ಅವರು ಸ್ಪೀಕರ್ ಬಿರ್ಲಾ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಆದರೆ, TMC ನಾಯಕತ್ವವು ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ ನೀಡಿದ್ದ 2023ರ ತೀರ್ಪನ್ನು ಉಲ್ಲೇಖಿಸಿದೆ. ಆ ತೀರ್ಪಿನ ಪ್ರಕಾರ, ರಾಜಕೀಯ ಪಕ್ಷ ಮತ್ತು ಶಾಸಕಾಂಗ ಪಕ್ಷ ಎಂಬುದು ಎರಡು ಬೇರೆ ಬೇರೆ ಸಂಸ್ಥೆಗಳಾಗಿವೆ. ಕಾಯ್ದೆಯ 4ನೇ ಪ್ಯಾರಾಗ್ರಾಫ್ ಅಡಿಯಲ್ಲಿ ರಕ್ಷಣೆ ಪಡೆಯಲು ಕೇವಲ ಶಾಸಕರು ಮಾತ್ರವಲ್ಲದೆ, ಮೂಲ ರಾಜಕೀಯ ಪಕ್ಷವೂ ಒಳಗೊಂಡಿರುವ ಕಾನೂನುಬದ್ಧ ವಿಲೀನ ಅತ್ಯಗತ್ಯವಾಗಿರುತ್ತದೆ. ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕರಾಗಿ ಗುರುತಿಸಿಕೊಂಡಿರುವ ರಿತಬ್ರತ ಬ್ಯಾನರ್ಜಿ ಅವರು ರವಿವಾರ 'ದಿ ಇಂಡಿಯನ್ ಎಕ್ಸ್ಪ್ರೆಸ್' ಜೊತೆ ಮಾತನಾಡಿದ್ದು, ಮೂಲ ರಾಜಕೀಯ ಪಕ್ಷದ ಮೇಲಿನ ನಿಯಂತ್ರಣ ಪಡೆಯುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಹೇಳಿದ್ದಾರೆ.
"91ನೇ ಸಾಂವಿಧಾನಿಕ ತಿದ್ದುಪಡಿಯ ನಂತರ, ಶಾಸಕರು ಕಾನೂನುಬದ್ಧವಾಗಿ ಮತ್ತೊಂದು ಗುಂಪಿನೊಂದಿಗೆ ಸೇರಲು ಹತ್ತನೇ ಅನುಸೂಚಿಯ 4ನೇ ಪ್ಯಾರಾಗ್ರಾಫ್ ಅಡಿಯಲ್ಲಿ ವಿಲೀನವೊಂದೇ ಏಕೈಕ ಮಾರ್ಗವಾಗಿದೆ. ಅದಕ್ಕೆ ಎರಡು ಷರತ್ತುಗಳು ಒಟ್ಟಿಗೆ ಪೂರೈಸಲ್ಪಡಬೇಕು. ಅವುಗಳೆಂದರೆ, ಮೊದಲನೆಯದಾಗಿ ಮೂಲ ರಾಜಕೀಯ ಪಕ್ಷವು ವಿಲೀನಗೊಳ್ಳಬೇಕು ಮತ್ತು ಎರಡನೆಯದಾಗಿ ಶಾಸಕಾಂಗ ಪಕ್ಷದ ಮೂರನೇ ಎರಡರಷ್ಟು ಸದಸ್ಯರು ಪಕ್ಷ ಬದಲಾಯಿಸಬೇಕು" ಎಂದು ಲೋಕಸಭೆಯ TMC ಸಂಸದೀಯ ಪಕ್ಷದ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಜೂನ್ 10ರಂದು ಸ್ಪೀಕರ್ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಬಂಡಾಯ ಸಂಸದರು ಸ್ಪೀಕರ್ ಅವರನ್ನು ಭೇಟಿಯಾಗುವ ಕೆಲವೇ ಕ್ಷಣಗಳ ಮುನ್ನ ಈ ಪತ್ರ ಬಿರ್ಲಾ ಅವರಿಗೆ ತಲುಪಿಸಲಾಗಿತ್ತು.
"ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಕೇವಲ ಒಂದು ಷರತ್ತು ಪೂರೈಸಿದರೆ ಸಾಕು ಎಂಬಂತೆ ಬಿಂಬಿಸುತ್ತಿವೆ, ಆದರೆ ಇದು ತಪ್ಪು. ಆದ್ದರಿಂದ, ಮೂರನೇ ಎರಡರಷ್ಟು ಶಾಸಕರು ಪಕ್ಷ ಬದಲಾಯಿಸಿದ್ದಾರೆ ಎಂಬುದನ್ನು ಒಪ್ಪಿಕೊಂಡರೂ ಸಹ, ಇಲ್ಲಿ ಯಾವುದೇ ಮೂಲ ರಾಜಕೀಯ ಪಕ್ಷದ ವಿಲೀನ ನಡೆದಿಲ್ಲ ಅಥವಾ AITC ಹೆಸರಿನ ಯಾವುದೇ ಹೊಸ ಪಕ್ಷ ರಚನೆಯಾಗಿಲ್ಲ" ಎಂದು ಅಭಿಷೇಕ್ ಬರೆದಿದ್ದಾರೆ.
ಡೈಮಂಡ್ ಹಾರ್ಬರ್ ಕ್ಷೇತ್ರದ ಸಂಸದರಾದ ಅಭಿಷೇಕ್, ಶಾಸಕಾಂಗ ಪಕ್ಷಕ್ಕಿಂತ ಮೂಲ ರಾಜಕೀಯ ಪಕ್ಷವೇ ಮೇಲು ಎಂದು ವಾದಿಸಿದ್ದಾರೆ. "ಸಂಸತ್ತಿನಲ್ಲಿ ಪಕ್ಷದ ನಾಯಕನನ್ನು ಮತ್ತು ಮುಖ್ಯ ಸಚೇತಕನನ್ನು ನೇಮಿಸುವುದು ರಾಜಕೀಯ ಪಕ್ಷವೇ ಹೊರತು ಶಾಸಕಾಂಗ ಪಕ್ಷವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹಾಗೆಯೇ, ಯಾವ ಪರವಾಗಿ ಮತ ಹಾಕಬೇಕು ಅಥವಾ ಗೈರಾಗಬೇಕು ಎಂಬ ನಿರ್ದೇಶನವನ್ನು ರಾಜಕೀಯ ಪಕ್ಷವೇ ನೀಡುತ್ತದೆ. ಆದ್ದರಿಂದ, ಮೂಲ ರಾಜಕೀಯ ಪಕ್ಷದ ಅಧಿಕಾರವನ್ನು ಮೀರಿ, ಬಂಡಾಯವೆದ್ದ ಯಾವುದೇ ಗುಂಪು ತನ್ನದೇ ಆದ ನಾಯಕ ಅಥವಾ ಮುಖ್ಯ ಸಚೇತಕನನ್ನು ನೇಮಿಸಿಕೊಳ್ಳಲು ಅಥವಾ ಪ್ರತ್ಯೇಕ ಗುಂಪಾಗಿ ಮಾನ್ಯತೆ ಪಡೆಯಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.
ಸ್ಪೀಕರ್ ಅವರು ರಾಜಕೀಯ ಪಕ್ಷವನ್ನು ಗುರುತಿಸುತ್ತಾರೆಯೇ ಹೊರತು ಬಂಡಾಯ ಬಣಗಳನ್ನಲ್ಲ ಎಂದು ವಾದಿಸಿದ ಅವರು, ಎರಡು ಬಣಗಳು ತಾವೇ ಅಸಲಿ ರಾಜಕೀಯ ಪಕ್ಷ ಎಂದು ಹಕ್ಕು ಮಂಡಿಸಿದಾಗ, ಪಕ್ಷಾಂತರ ನಿಷೇಧ ಅರ್ಜಿಗಳ ವಿಚಾರಣೆಯ ಉದ್ದೇಶಕ್ಕಾಗಿ ಯಾವುದು ನಿಜವಾದ ರಾಜಕೀಯ ಪಕ್ಷ ಎಂಬುದನ್ನು ಸ್ಪೀಕರ್ ಅವರೇ ಪ್ರಾಥಮಿಕವಾಗಿ ನಿರ್ಧರಿಸಬೇಕು ಎಂದು ಕೋರ್ಟ್ ಹೇಳಿದೆ. "ಈ ವ್ಯವಸ್ಥೆಯು ಕೇವಲ ಒಂದು ನಿಜವಾದ ರಾಜಕೀಯ ಪಕ್ಷವನ್ನು ಗುರುತಿಸುವುದನ್ನು ಬೆಂಬಲಿಸುತ್ತದೆಯೇ ಹೊರತು, ಬಂಡಾಯ ಬಣಕ್ಕೆ ಸ್ವತಂತ್ರ ಮಾನ್ಯತೆ ನೀಡುವುದನ್ನಲ್ಲ" ಎಂದಿದ್ದಾರೆ.
ಕೊನೆಯದಾಗಿ, "ಯಾವುದೇ ಸದಸ್ಯ ಅಥವಾ ಸದಸ್ಯರ ಗುಂಪು ತಮ್ಮನ್ನು ತಾವು ಪ್ರತ್ಯೇಕ ಬಣ ಎಂದು ಕರೆದುಕೊಂಡು, ಪಕ್ಷದ ನಾಯಕ ಮತ್ತು ಮುಖ್ಯ ಸಚೇತಕನ ಅಧಿಕಾರವನ್ನು ಉಲ್ಲಂಘಿಸಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೆ, ಅದನ್ನು ಸ್ವಯಂಪ್ರೇರಿತವಾಗಿ ಪಕ್ಷದ ಸದಸ್ಯತ್ವವನ್ನು ತ್ಯಜಿಸಿರುವುದಾಗಿ ಪರಿಗಣಿಸಲಾಗುತ್ತದೆ. ಇದು ಹತ್ತನೇ ಅನುಸೂಚಿಯ ಪ್ಯಾರಾಗ್ರಾಫ್ 2(1)(ಎ) ಅಡಿಯಲ್ಲಿ ಅನರ್ಹತೆಗೆ ಒಳಪಡುತ್ತದೆ. ಒಂದು ವೇಳೆ ಪಕ್ಷದ ವಿಪ್ಗೆ ವಿರುದ್ಧವಾಗಿ ಮತ ಚಲಾಯಿಸಿದರೆ ಅಥವಾ ಗೈರಾದರೆ ಪ್ಯಾರಾಗ್ರಾಫ್ 2(1)(ಬಿ) ಅಡಿಯಲ್ಲಿ ತಕ್ಷಣವೇ ಅನರ್ಹರಾಗುತ್ತಾರೆ" ಎಂದು ಅವರು ಎಚ್ಚರಿಸಿದ್ದಾರೆ.
ಅಭಿಷೇಕ್ ಅವರು ಸ್ಪೀಕರ್ ಅವರಿಗೆ, "AITC ಪಕ್ಷವನ್ನು ಸಂಸತ್ತಿನಲ್ಲಿ ಅದರ ಅಧಿಕೃತ ನಾಯಕ ಮತ್ತು ಮುಖ್ಯ ಸಚೇತಕನ ಮೂಲಕ ಪ್ರತಿನಿಧಿಸುವ ಒಂದೇ ಒಂದು ರಾಜಕೀಯ ಪಕ್ಷವೆಂದು ಪರಿಗಣಿಸಬೇಕು. ತೃಣಮೂಲ ಕಾಂಗ್ರೆಸ್ ನ ಯಾವುದೇ ಪ್ರತ್ಯೇಕ ಗುಂಪು ಅಥವಾ ಬಣಕ್ಕೆ ಯಾವುದೇ ರೀತಿಯ ಮಾನ್ಯತೆ, ಸ್ಥಾನಮಾನ ಅಥವಾ ಸೌಲಭ್ಯಗಳನ್ನು ನೀಡಲು ನಿರಾಕರಿಸಬೇಕು. ಜೊತೆಗೆ ಬಂಡಾಯ ಗುಂಪು ನೀಡಿರುವ ಯಾವುದೇ ಪತ್ರದ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮುನ್ನ AITC ಪಕ್ಷಕ್ಕೆ ತನ್ನ ವಾದವನ್ನು ಮಂಡಿಸಲು ಅವಕಾಶ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.
►ಲೋಕಸಭೆಯಲ್ಲಿ ಐದನೇ ಅತಿ ದೊಡ್ಡ ಪಕ್ಷ
ಜನವರಿ 2023ರಲ್ಲಿ ಭಾರತೀಯ ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿದ್ದ NCPI ಪಕ್ಷವು, ತೃಣಮೂಲ ಕಾಂಗ್ರೆಸ್ ನಲ್ಲಿ ನಡೆದಿರುವ ಈ ಬಂಡಾಯದ ಅತಿ ದೊಡ್ಡ ಫಲಾನುಭವಿಯಾಗಿ ಹೊರಹೊಮ್ಮುತ್ತಿದೆ. TMCಯ ಸುಮಾರು 20 ಸಂಸದರು NCPI ಜೊತೆ ವಿಲೀನಗೊಳ್ಳುವ ನಿರ್ಧಾರ ಪ್ರಕಟಿಸಿರುವುದರಿಂದ, ಈ ಪಕ್ಷವು ಲೋಕಸಭೆಯ ಐದನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.
ಒಂದು ವೇಳೆ ಈ ವಿಲೀನಕ್ಕೆ ಅನುಮೋದನೆ ಸಿಕ್ಕರೆ, ಲೋಕಸಭೆಯಲ್ಲಿ ಯಾವುದೇ ಸಂಸದರನ್ನು ಹೊಂದಿರದ NCPI ಸಂಸದರ ಸಂಖ್ಯೆ ದಿಢೀರನೆ 20ಕ್ಕೆ ಏರಲಿದೆ. ಇದರೊಂದಿಗೆ ಅದು ಬಿಜೆಪಿ (240 ಸಂಸದರು), ಕಾಂಗ್ರೆಸ್ (99 ಸಂಸದರು), ಸಮಾಜವಾದಿ ಪಕ್ಷ (37 ಸಂಸದರು) ಮತ್ತು DMK (22 ಸಂಸದರು) ಪಕ್ಷಗಳ ನಂತರ ಲೋಕಸಭೆಯ ಐದನೇ ಅತಿ ದೊಡ್ಡ ಪಕ್ಷವಾಗಲಿದೆ.
ಮತ್ತೊಂದೆಡೆ, 2024ರ ಲೋಕಸಭಾ ಚುನಾವಣೆಯ ಬಳಿಕ 28 ಸಂಸದರೊಂದಿಗೆ ದೇಶದ ನಾಲ್ಕನೇ ಅತಿ ದೊಡ್ಡ ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದ್ದ TMCಯ ಬಲವು ಕೇವಲ ಒಂಬತ್ತಕ್ಕೆ ಕುಸಿಯಲಿದೆ.
ಯಾವುದೇ ಬಲವಾದ ಚುನಾವಣಾ ನೆಲೆಯಿಲ್ಲದ ಪಕ್ಷವೊಂದು ಹಠಾತ್ತನೆ ಸಂಸತ್ತಿನಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ಭಾರತೀಯ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಅಚ್ಚರಿಯ ಬೆಳವಣಿಗಿಯಾಗಿದೆ. ಸಾಮಾನ್ಯವಾಗಿ ಒಂದು ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಅಪಾರ ಶ್ರಮ ಮತ್ತು ಶಕ್ತಿ ಬೇಕಾಗುತ್ತದೆ. ಅಂತಹದ್ದರಲ್ಲಿ ರಾತ್ರೋರಾತ್ರಿ 20 ಸಂಸದರನ್ನು ಹೊಂದಿದ ಪಕ್ಷವಾಗಿ ಹೊರಹೊಮ್ಮುವುದು ರಾಜಕೀಯ ಪವಾಡವೇ ಸರಿ. ಆದರೆ ಈ ಇಡೀ ರಾಜಕೀಯ ಚದುರಂಗದಾಟದಲ್ಲಿ ಈ ಪಕ್ಷದ ಪಾತ್ರ ಮಾತ್ರ ತೀರಾ ಕನಿಷ್ಠ ಮಟ್ಟದ್ದಾಗಿದೆ.






