ಚಳಿಗಾಲದಲ್ಲಿ ಮಾತ್ರವಲ್ಲ, ಬೇಸಗೆಯಲ್ಲೂ ನಗರಗಳಿಗೆ ವಾಯುಮಾಲಿನ್ಯದ ಬಿಸಿ!

Photo Credit: PTI
ಧೂಳಿನ ಬಿರುಗಾಳಿ ಮತ್ತು ವಾಹನಗಳಿಂದ ಹೊರಸೂಸುವ ಹೊಗೆಯಿಂದಾಗಿ ಬೇಸಗೆಯಲ್ಲೂ ಭಾರತದ ನಗರಗಳು ಕಲುಷಿತಗೊಳ್ಳುತ್ತಿವೆ.
ಮಾರ್ಚ್ ನಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಪಕ್ಕದ ಪ್ರದೇಶಗಳ ವಾಯುಗುಣಮಟ್ಟ ನಿರ್ವಹಣಾ ಆಯೋಗವು ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ (GRAP) ಅಡಿಯಲ್ಲಿ ಜಾರಿಯಲ್ಲಿದ್ದ ಎಲ್ಲ ನಿರ್ಬಂಧಗಳನ್ನು ಹಿಂತೆಗೆದುಕೊಂಡಿತು. ಇದರೊಂದಿಗೆ ದಿಲ್ಲಿಯಲ್ಲಿ ಚಳಿಗಾಲದ ವಾಯುಮಾಲಿನ್ಯದ ಅವಧಿ ಅಂತ್ಯಗೊಂಡಿತು.
ಆದರೆ ಒಂದು ತಿಂಗಳ ಬಳಿಕ ತಾಪಮಾನ ಏರಿಕೆಯಾಗುತ್ತಿದ್ದಂತೆ, ಬೇಸಗೆಯ ವಾಯುಮಾಲಿನ್ಯವನ್ನು ಎದುರಿಸಲು GRAPನ ಮೊದಲ ಹಂತವನ್ನು ಮತ್ತೆ ಜಾರಿಗೊಳಿಸಲಾಯಿತು. ನಂತರ ಅದನ್ನು ಸ್ವಲ್ಪ ಸಮಯದವರೆಗೆ ಹಿಂತೆಗೆದುಕೊಳ್ಳಲಾಯಿತಾದರೂ, ಮೇ ತಿಂಗಳಲ್ಲಿ ಉತ್ತರ ಭಾರತವು ಶಾಖದ ಅಲೆಯಿಂದ ತತ್ತರಿಸುತ್ತಿದ್ದಾಗ ಮತ್ತೊಮ್ಮೆ ಜಾರಿಗೊಳಿಸಲಾಯಿತು.
ಬೇಸಗೆಯಲ್ಲೂ ವಾಯುಮಾಲಿನ್ಯ ಏಕೆ?
ದಿಲ್ಲಿ ಮತ್ತು ಇಂಡೋ-ಗಂಗಾ ಬಯಲು ಪ್ರದೇಶವು ಚಳಿಗಾಲದ ಮಂಜುಹೊಗೆಗೆ ಹೆಸರುವಾಸಿಯಾಗಿದೆ. ಕಡಿಮೆ ತಾಪಮಾನ, ನಿಧಾನಗತಿಯ ಗಾಳಿ ಮತ್ತು ಭೌಗೋಳಿಕ ಪರಿಸ್ಥಿತಿಗಳ ಪರಿಣಾಮವಾಗಿ ಮಾಲಿನ್ಯಕಾರಕಗಳು ನೆಲಮಟ್ಟದ ಸಮೀಪದಲ್ಲೇ ಸಿಲುಕಿಕೊಳ್ಳುತ್ತವೆ.
ಸಾಮಾನ್ಯವಾಗಿ ಬೇಸಗೆಯ ಬಲವಾದ ಗಾಳಿ ಮತ್ತು ಆಗಾಗ್ಗೆ ಸುರಿಯುವ ಗುಡುಗು ಸಹಿತ ಮಳೆ ಮಾಲಿನ್ಯಕಾರಕಗಳನ್ನು ಚದುರಿಸಿ ವಾತಾವರಣವನ್ನು ಶುದ್ಧಗೊಳಿಸುತ್ತವೆ. ಬೆಚ್ಚಗಿನ ತಾಪಮಾನವು ಮಾಲಿನ್ಯಕಾರಕಗಳು ವಾತಾವರಣದ ಮೇಲ್ಮಟ್ಟದಲ್ಲಿ ಬೆರೆಯಲು ಸಹ ನೆರವಾಗುತ್ತದೆ. ಇಂತಹ ಅನುಕೂಲಕರ ಹವಾಮಾನ ಪರಿಸ್ಥಿತಿಗಳಿದ್ದರೂ, 2026ರ ಎಪ್ರಿಲ್ 1ರಿಂದ ಮೇ 31ರವರೆಗೆ 54 ದಿನಗಳ ಕಾಲ ದಿಲ್ಲಿಯಲ್ಲಿ PM10 ಮಟ್ಟವು 24 ಗಂಟೆಗಳ ರಾಷ್ಟ್ರೀಯ ವಾಯುಗುಣಮಟ್ಟ ಮಾನದಂಡವಾದ 100 ಮೈಕ್ರೋಗ್ರಾಂ/ಘನ ಮೀಟರ್ ಗಿಂತ ಹೆಚ್ಚಾಗಿತ್ತು.
ಅದೇ ಅವಧಿಯಲ್ಲಿ 40 ದಿನಗಳಲ್ಲಿ ದಿಲ್ಲಿಯ ಕನಿಷ್ಠ ಒಂದು ನಿರಂತರ ವಾಯುಗುಣಮಟ್ಟ ಮೇಲ್ವಿಚಾರಣಾ ಕೇಂದ್ರವು ಗಂಟೆಯ ಓಝೋನ್ ಮಟ್ಟದ ಮಾನದಂಡವಾದ 180 ಮೈಕ್ರೋಗ್ರಾಂ/ಘನ ಮೀಟರ್ ಉಲ್ಲಂಘನೆಯನ್ನು ದಾಖಲಿಸಿತು.
ಇದು ದಿಲ್ಲಿಯ ಸಮಸ್ಯೆ ಮಾತ್ರವಲ್ಲ. ಈ ಬೇಸಗೆಯಲ್ಲಿ ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಕೋಲ್ಕತ್ತಾದಂತಹ ಮಹಾನಗರಗಳಲ್ಲೂ ಮಾಲಿನ್ಯದ ಪ್ರಮಾಣ ಏರಿಕೆಯಾಗಿದೆ.
PM10 ಮತ್ತು ಓಝೋನ್ ಮಟ್ಟಗಳು ಹಲವು ಕಡೆ ರಾಷ್ಟ್ರೀಯ ಮಾನದಂಡಗಳನ್ನು ಮೀರಿವೆ. ವಾಹನಗಳ ಹೊಗೆ, ರಸ್ತೆ ಧೂಳು, ನಿರ್ಮಾಣ ಚಟುವಟಿಕೆಗಳು, ಕೈಗಾರಿಕೆಗಳಿಂದ ಹೊರಸೂಸುವ ಹೊಗೆ ಹಾಗೂ ಸ್ಥಳೀಯ ಧೂಳಿನ ಬಿರುಗಾಳಿಗಳು ಈ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ಉದಾಹರಣೆಗೆ, ಮುಂಬೈ ನಗರದಲ್ಲಿ ನಿರ್ಮಾಣ ಕಾಮಗಾರಿ, ಧೂಳು ಮತ್ತು ಸಂಚಾರ ದಟ್ಟಣೆಯಿಂದಾಗಿ ಕಳೆದ ಕೆಲವು ವರ್ಷಗಳಿಂದ PM10 ಮತ್ತು ಓಝೋನ್ ಮಟ್ಟಗಳು ಹೆಚ್ಚಾಗಿವೆ. ಚೆನ್ನೈನಲ್ಲಿ PM10 ಉಲ್ಲಂಘನೆಗಳು ಕಡಿಮೆಯಿದ್ದರೂ, ವಾಹನಗಳ ಸಾಂದ್ರತೆ ಮತ್ತು ಬಿಸಿಯಾದ ಹವಾಮಾನದಿಂದಾಗಿ ಅದು ಓಝೋನ್ ‘ಹಾಟ್ಸ್ಪಾಟ್’ ಆಗಿ ರೂಪುಗೊಂಡಿದೆ.
►ಬೇಸಗೆಯ ಮತ್ತು ಚಳಿಗಾಲದ ವಾಯುಮಾಲಿನ್ಯದ ನಡುವಿನ ವ್ಯತ್ಯಾಸವೇನು?
ಚಳಿಗಾಲದ ಮಾಲಿನ್ಯದಲ್ಲಿ ಸೂಕ್ಷ್ಮ ಕಣಗಳಾದ PM2.5 ಪ್ರಮಾಣ ಹೆಚ್ಚಿರುತ್ತದೆ. ಆದರೆ ಬೇಸಗೆಯಲ್ಲಿ PM10 ಮತ್ತು ಓಝೋನ್ ಪ್ರಮುಖ ಮಾಲಿನ್ಯಕಾರಕಗಳಾಗಿರುತ್ತವೆ.
ವಾಹನಗಳು, ಕೈಗಾರಿಕೆಗಳು, ತ್ಯಾಜ್ಯ ದಹನ, ಕೃಷಿ ಅವಶೇಷಗಳ ದಹನ, ನಿರ್ಮಾಣ ಚಟುವಟಿಕೆಗಳು ಹಾಗೂ ಹಾಳಾದ ರಸ್ತೆಗಳು ವರ್ಷಪೂರ್ತಿ ಮಾಲಿನ್ಯದ ಮೂಲಗಳಾಗಿವೆ. ಬೇಸಗೆಯಲ್ಲಿ ಧೂಳಿನ ಬಿರುಗಾಳಿಗಳು PM10 ಮಟ್ಟವನ್ನು ಹೆಚ್ಚಿಸಿದರೆ, ತೀವ್ರ ಬಿಸಿಲು ಮತ್ತು ಉಷ್ಣತೆ ಓಝೋನ್ ರಚನೆಗೆ ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತವೆ.
►ಬಿಸಿ ಹವಾಮಾನದಲ್ಲಿ ಓಝೋನ್ ಏರಿಕೆಯಾಗುವುದೇಕೆ?
ಓಝೋನ್ ನೇರವಾಗಿ ಯಾವುದೇ ಚಿಮಣಿ ಅಥವಾ ವಾಹನದಿಂದ ಹೊರಬರುವುದಿಲ್ಲ. ವಾಹನಗಳಿಂದ ಹೊರಸೂಸುವ ನೈಟ್ರೋಜನ್ ಆಕ್ಸೈಡ್ಗಳು (NOx) ಹಾಗೂ ಕೈಗಾರಿಕೆಗಳು, ವಾಹನಗಳ ಹೊಗೆ, ಬಣ್ಣಗಳು ಮತ್ತು ಇತರ ಮೂಲಗಳಿಂದ ಹೊರಬರುವ ವಾಷ್ಪಶೀಲ ಸಾವಯವ ಸಂಯುಕ್ತಗಳು (VOCs) ತೀವ್ರ ಸೂರ್ಯನ ಬೆಳಕಿನೊಂದಿಗೆ ಪ್ರತಿಕ್ರಿಯಿಸಿದಾಗ ಓಝೋನ್ ರೂಪುಗೊಳ್ಳುತ್ತದೆ.
ಹೀಗಾಗಿ ಬಿಸಿಲು ಮತ್ತು ಉಷ್ಣತೆ ಹೆಚ್ಚಿರುವ ದಿನಗಳಲ್ಲಿ ಓಝೋನ್ ಉತ್ಪತ್ತಿ ಹೆಚ್ಚಾಗುತ್ತದೆ. ಇದು ಉಸಿರಾಟದ ತೊಂದರೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
►ಭಾರತದಲ್ಲಿ PM10 ಏರಲು ಕಾರಣವೇನು?
ಭಾರತೀಯ ಉಪಖಂಡದ ಮೇಲಿನ ತೀವ್ರ ಉಷ್ಣತೆಯಿಂದ ಇರಾನ್ ವರೆಗೆ ವಿಸ್ತರಿಸುವ ಕಡಿಮೆ ಒತ್ತಡದ ಪ್ರದೇಶಗಳು ನಿರ್ಮಾಣವಾಗುತ್ತವೆ. ಇವು ಸುತ್ತಮುತ್ತಲಿನ ಅಧಿಕ ಒತ್ತಡದ ಪ್ರದೇಶಗಳೊಂದಿಗೆ ಸಂವಹನ ನಡೆಸಿದಾಗ ಬಿಸಿ ಮತ್ತು ಬಲವಾದ ಗಾಳಿಯ ಪರಿಸ್ಥಿತಿಗಳು ಉಂಟಾಗುತ್ತವೆ.
ಇದರಿಂದ ಧೂಳಿನ ಬಿರುಗಾಳಿಗಳು ಮತ್ತು ‘ಲೂ’ ಎಂದು ಕರೆಯಲಾಗುವ ಬಿಸಿ ಗಾಳಿಗಳು ಬೀಸುತ್ತವೆ. ಇವು ಪಶ್ಚಿಮ ಏಷ್ಯಾ ಮತ್ತು ಥಾರ್ ಮರುಭೂಮಿಯಿಂದ ಧೂಳನ್ನು ಭಾರತದಾದ್ಯಂತ ಬಂಗಾಳ ಕೊಲ್ಲಿಯವರೆಗೆ ಹೊತ್ತೊಯ್ಯುತ್ತವೆ. 2018ರಲ್ಲಿ ಉತ್ತರ ಭಾರತದಲ್ಲಿ ಸಂಭವಿಸಿದ್ದ ಭಾರಿ ಧೂಳಿನ ಬಿರುಗಾಳಿಗೂ ಇದೇ ರೀತಿಯ ಹವಾಮಾನ ಪರಿಸ್ಥಿತಿ ಕಾರಣವಾಗಿತ್ತು.
ಇಂತಹ ಸಂದರ್ಭಗಳಲ್ಲಿ ಹಲವು ದಿನಗಳವರೆಗೆ PM10 ಮಟ್ಟ ಹೆಚ್ಚಾಗಿರಬಹುದು.
ಭಾರತದಲ್ಲಿ ‘ಆಂಧಿ’ ಎಂದು ಕರೆಯಲಾಗುವ ಸ್ಥಳೀಯ ಧೂಳಿನ ಬಿರುಗಾಳಿಗಳೂ ಸಾಮಾನ್ಯ. ಉತ್ತರ ಭಾರತದಲ್ಲಿ ‘ಲೂ’ ರೀತಿಯ ಧೂಳಿನ ಬಿರುಗಾಳಿಗಳು ಹೆಚ್ಚಾಗಿ ಕಂಡುಬಂದರೆ, ಮುಂಬೈ ಮತ್ತು ಹೈದರಾಬಾದ್ ನಂತಹ ನಗರಗಳಲ್ಲಿ ಸ್ಥಳೀಯ ಗುಡುಗು ಸಹಿತ ಮಳೆಯ ಪರಿಣಾಮ ಧೂಳಿನ ಘಟನೆಗಳು ಹೆಚ್ಚಾಗುತ್ತವೆ.
ಇದರ ಜೊತೆಗೆ ಮಾನವ ಚಟುವಟಿಕೆಗಳು ನೈಸರ್ಗಿಕ ಧೂಳಿನ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುತ್ತವೆ. GRAP ನಿರ್ಬಂಧಗಳನ್ನು ಹಿಂತೆಗೆದುಕೊಂಡ ಬಳಿಕ ಪುನರಾರಂಭವಾಗುವ ನಿರ್ಮಾಣ ಕಾಮಗಾರಿಗಳು ಸೇರಿದಂತೆ ಹಲವು ಚಟುವಟಿಕೆಗಳು PM10 ಮಟ್ಟ ಹೆಚ್ಚಾಗಲು ಕಾರಣವಾಗುತ್ತವೆ.
ಮಾಹಿತಿ ಕೃಪೆ: The Hindu






