ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆ ಕೈಬಿಟ್ಟಿದ್ದಕ್ಕೆ ಪೌಷ್ಟಿಕಾಂಶ ತಜ್ಞರ ವಿರೋಧವೇಕೆ?

Photo Credit : PTI , magnific.com
ಕೋಲ್ಕತ್ತಾದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಜವಾಬ್ದಾರಿಯನ್ನು ಇಸ್ಕಾನ್ (ISKCON) ಸಂಸ್ಥೆಗೆ ವಹಿಸಲಾಗುವುದು ಎಂದು ಪಶ್ಚಿಮ ಬಂಗಾಳ ಸರ್ಕಾರ ಪ್ರಕಟಿಸಿದ ಕೆಲವೇ ದಿನಗಳಲ್ಲಿ, ಆ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಹಾಗೂ ವಕ್ತಾರ ರಾಧಾರಮಣ್ ದಾಸ್ ಅವರು ನೂತನವಾಗಿ ಚುನಾಯಿತಗೊಂಡ ಬಿಜೆಪಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಇನ್ನು ಮುಂದೆ ಮಕ್ಕಳಿಗೆ ಮೊಟ್ಟೆಯ ಬದಲಿಗೆ ಪನೀರ್, ರಾಜ್ಮಾ, ಸೋಯಾ, ಬೇಳೆಕಾಳುಗಳು ಮತ್ತು ಇತರ ಸಸ್ಯಾಹಾರಿ ಆಹಾರಗಳನ್ನು ಉಣಬಡಿಸಲಾಗುವುದು ಎಂದು ಘೋಷಿಸಿದ್ದಾರೆ.
ಈ ಘೋಷಣೆಯು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಮಕ್ಕಳ ಪೌಷ್ಟಿಕಾಂಶ ಹಾಗೂ ಬೆಳವಣಿಗೆಯ ಕುರಿತು ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
ಸಂಪೂರ್ಣ ಸಸ್ಯಾಹಾರಿ ಮೆನುವಿನಿಂದ ಮಕ್ಕಳ ಪೌಷ್ಟಿಕಾಂಶದಲ್ಲಿ ಕೊರತೆಯಾಗಬಹುದು ಎಂಬ ಆತಂಕಗಳನ್ನು ದೂರ ಮಾಡಲು ಸುದ್ದಿ ಸಂಸ್ಥೆ 'ಎಎನ್ಐ' ಜೊತೆ ಮಾತನಾಡಿದ ದಾಸ್, "100 ಗ್ರಾಂ ಮೊಟ್ಟೆಯಲ್ಲಿ 13 ಗ್ರಾಂ ಪ್ರೊಟೀನ್ ಇರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, 100 ಗ್ರಾಂ ಸೋಯಾ ಚಂಕ್ಸ್ನಲ್ಲಿ 52 ರಿಂದ 54 ಗ್ರಾಂ ಪ್ರೊಟೀನ್ ಇರುತ್ತದೆ, ಇದು ಮೊಟ್ಟೆಗಿಂತ ಗಣನೀಯವಾಗಿ ಹೆಚ್ಚಾಗಿದೆ. ಇನ್ನು ಸಸ್ಯಾಹಾರಿ ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಬೇಳೆಕಾಳುಗಳು ಸರಾಸರಿ 25 ಗ್ರಾಂ ಪ್ರೊಟೀನ್ ಹೊಂದಿರುತ್ತವೆ. ಹೆಚ್ಚು ಸಸ್ಯಾಹಾರಿ ಜನಸಂಖ್ಯೆಯನ್ನು ಹೊಂದಿರುವ ರಾಜಸ್ಥಾನ (ಶೇ. 61 ರಷ್ಟು ಸಸ್ಯಾಹಾರಿಗಳು), ಮಧ್ಯಪ್ರದೇಶ, ಗುಜರಾತ್, ಹರಿಯಾಣ ಮತ್ತು ಉತ್ತರ ಪ್ರದೇಶದಂತಹ ಭಾರತದ ರಾಜ್ಯಗಳ ಪ್ರೊಟೀನ್ ಬಳಕೆಯ ಮಟ್ಟವನ್ನು ನಾನು ಹೋಲಿಕೆ ಮಾಡಿ ನೋಡಿದೆ. ಆಶ್ಚರ್ಯಕರವೆಂದರೆ, ಇದೇ ರಾಜ್ಯಗಳಲ್ಲಿ ಪ್ರೊಟೀನ್ ಬಳಕೆ ಅತ್ಯಂತ ಹೆಚ್ಚಾಗಿದೆ. ಇದಕ್ಕೆ ವಿರುದ್ಧವಾಗಿ, ಮಾಂಸಾಹಾರ ಸಾಮಾನ್ಯ ದೈನಂದಿನ ಭಾಗವಾಗಿರುವ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಪ್ರೊಟೀನ್ ಸೇವನೆ ಕಡಿಮೆ ಇದೆ. ಇಂತಹ ಪರಿಸ್ಥಿತಿಯಲ್ಲಿ ತಪ್ಪು ಮಾಹಿತಿ ಹರಡುತ್ತಿರುವುದು ನಿಜಕ್ಕೂ ದುರದೃಷ್ಟಕರ" ಎಂದು ಹೇಳಿದ್ದಾರೆ.
"ಮೊಟ್ಟೆಗಳು ಮಾತ್ರವೇ ಪ್ರೊಟೀನ್ನ ಏಕೈಕ ಸಮೃದ್ಧ ಮೂಲ ಮತ್ತು ಸಸ್ಯಾಹಾರದಲ್ಲಿ ಅದಕ್ಕೆ ಸಮಾನವಾದ ಪರ್ಯಾಯ ಆಹಾರವಿಲ್ಲ ಎಂಬುದು ತಪ್ಪು ಕಲ್ಪನೆ. ನಮ್ಮ ಮೆನು ಸಿದ್ಧಪಡಿಸಲು ನಾವು ಡಯಟೀಶಿಯನ್ಗಳನ್ನು ನೇಮಿಸಿಕೊಂಡಿದ್ದೇವೆ. ಮಗುವಿಗೆ ಮೊಟ್ಟೆಯಿಂದ ಸಿಗುವ ಎಲ್ಲಾ ಪೌಷ್ಟಿಕಾಂಶಗಳು, ನಮ್ಮ ಆಹಾರದಲ್ಲಿರುವ ಉತ್ತಮ ಗುಣಮಟ್ಟದ ಪ್ರೊಟೀನ್ ಮತ್ತು ವಿಟಮಿನ್ಗಳ ಮೂಲಕ ಸಮನಾಗಿ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಿಗುವಂತೆ ನಾವು ನೋಡಿಕೊಳ್ಳುತ್ತೇವೆ" ಎಂದು ದಾಸ್ ಹೇಳಿರುವುದಾಗಿ 'the times of India' ಉಲ್ಲೇಖಿಸಿತ್ತು. ಕೋಲ್ಕತ್ತಾದಲ್ಲಿ ನಿರ್ಮಾಣವಾಗುತ್ತಿರುವ "ವಿಶ್ವದರ್ಜೆಯ" ಕೇಂದ್ರೀಕೃತ ಅಡುಗೆಮನೆಯಲ್ಲಿ ಈ ಆಹಾರವನ್ನು ಸಿದ್ಧಪಡಿಸಲಾಗುವುದು ಎಂದು ದಾಸ್ ಹೇಳಿದ್ದಾರೆ.
ಈ ಮಾತುಕತೆಗಳು ನಡೆದ ಕೆಲವೇ ದಿನಗಳಲ್ಲಿ, ದಾಸ್ ಅವರನ್ನು "ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ" ಮತ್ತು ಯಾವುದೇ ಸಂದರ್ಭದಲ್ಲೂ ಇಸ್ಕಾನ್ ಸಂಸ್ಥೆಯನ್ನು ಪ್ರತಿನಿಧಿಸದಂತೆ ಸೂಚಿಸಲಾಗಿದೆ ಎಂದು ಇಸ್ಕಾನ್ ಪ್ರಕಟಿಸಿತು.
ತಪ್ಪು ಮಾಹಿತಿ
ರಾಜ್ಯವಾರು ಪ್ರೊಟೀನ್ ಸೇವನೆಯ ಕುರಿತು ದಾಸ್ ಮಾಡಿರುವ ಪ್ರತಿಪಾದನೆ ವಾಸ್ತವಿಕವಾಗಿ ತಪ್ಪಾಗಿದೆ. ಐಸಿಎಂಆರ್-ಇಂಡಿಯಾಬ್ (ICMR–INDIAB) ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದ ಇತರ ವಲಯಗಳಿಗೆ ಹೋಲಿಸಿದರೆ ಈಶಾನ್ಯ ರಾಜ್ಯಗಳಲ್ಲಿ ಒಟ್ಟಾರೆ ಪ್ರೊಟೀನ್ ಸೇವನೆ ಅತ್ಯಂತ ಹೆಚ್ಚಾಗಿದೆ (%13.6E). ದಾಸ್ ಹೇಳಿದಂತೆ ಅದು ಕಡಿಮೆ ಇಲ್ಲ. ಆ ಸಮೀಕ್ಷೆಯು ಹೀಗೆ ಹೇಳುತ್ತದೆ: "ಪ್ರಾಣಿಜನ್ಯ ಪ್ರೊಟೀನ್ ಸೇವನೆಯು ಉತ್ತರ ಮತ್ತು ಮಧ್ಯ ಭಾರತದ ವಲಯಗಳಲ್ಲಿ ಶೇ. 0.3E ನಷ್ಟು ಅತ್ಯಂತ ಕನಿಷ್ಠ ಮಟ್ಟದಲ್ಲಿದ್ದರೆ, ಈಶಾನ್ಯ ಭಾಗದಲ್ಲಿ ಶೇ. 2.9E ನಷ್ಟು ಗರಿಷ್ಠ ಮಟ್ಟದಲ್ಲಿದೆ. ಇದಕ್ಕೆ ಕೋಳಿ ಮಾಂಸ ಪ್ರಮುಖ ಕೊಡುಗೆ ನೀಡಿದೆ (ಶೇ. 0.3E). ಉತ್ತರ ಭಾರತದಲ್ಲಿ ಡೈರಿ ಉತ್ಪನ್ನಗಳಿಂದ ಸಿಗುವ ಪ್ರೊಟೀನ್ ಸೇವನೆ ಅತ್ಯಂತ ಹೆಚ್ಚಾಗಿದ್ದು (ಶೇ. 3.6E), ಪೂರ್ವ (ಶೇ. 1.2E) ಮತ್ತು ಈಶಾನ್ಯ (ಶೇ. 1.1E) ವಲಯಗಳಲ್ಲಿ ಅತ್ಯಂತ ಕಡಿಮೆ ಇದೆ."
"ಅತಿ ಹೆಚ್ಚು ಪ್ರಾಣಿಜನ್ಯ ಪ್ರೊಟೀನ್ ಸೇವನೆಯು ಈಶಾನ್ಯ ರಾಜ್ಯಗಳಾದ ಮೇಘಾಲಯ (ಶೇ. 4.9E), ಮಿಜೋರಾಂ (ಶೇ. 6.9E) ಮತ್ತು ನಾಗಾಲ್ಯಾಂಡ್ನಲ್ಲಿ (ಶೇ. 7.4E) ಕಂಡುಬಂದಿದೆ. ರೆಡ್ ಮೀಟ್ನಿಂದ ಸಿಗುವ ಪ್ರೊಟೀನ್ ಸೇವನೆಯೂ ಇವೇ ರಾಜ್ಯಗಳಲ್ಲಿ ಹೆಚ್ಚಾಗಿದೆ. ನಾಗಾಲ್ಯಾಂಡ್ (ಶೇ. 4.2E), ಮಿಜೋರಾಂ (ಶೇ. 2.3E) ಮತ್ತು ಮೇಘಾಲಯ (ಶೇ. 2.0E). ಮಿಜೋರಾಂನಲ್ಲಿ ಕೋಳಿ ಮಾಂಸದ ಪ್ರೊಟೀನ್ ಸೇವನೆಯೂ (ಶೇ. 2.3E) ಹೆಚ್ಚಿರುವುದು ವರದಿಯಾಗಿದೆ" ಎಂದು ಸಮೀಕ್ಷೆ ಹೇಳಿದೆ.
Photo Credit : altnews.in
ವಿಜ್ಞಾನ ಏನು ಹೇಳುತ್ತದೆ?
ಮಾಧ್ಯಮಗಳೊಂದಿಗಿನ ಸಂಭಾಷಣೆಯಲ್ಲಿ ದಾಸ್ ಅವರು ಪ್ರೊಟೀನ್ ಪ್ರಮಾಣಕ್ಕೆ ಸಂಬಂಧಿಸಿದಂತೆ ಮೊಟ್ಟೆ ಮತ್ತು ಸೋಯಾ ಚಂಕ್ಸ್ಗಳನ್ನು ಹೋಲಿಕೆ ಮಾಡಿದ್ದರು. ಸೋಯಾದಲ್ಲಿ "ಗಣನೀಯವಾಗಿ ಹೆಚ್ಚಿನ" ಪ್ರೊಟೀನ್ ಇದೆ ಎಂದು ಎತ್ತಿ ತೋರಿಸಿದ್ದರು. ಆದರೆ ಕೇವಲ ಪ್ರೊಟೀನ್ ಪ್ರಮಾಣವನ್ನು ಹೋಲಿಸುವುದು ಸರಿಯಲ್ಲ, ಏಕೆಂದರೆ ಪ್ರೊಟೀನ್ ಹೊಂದಾಣಿಕೆ ಮಾಡುವುದೊಂದೇ ಸಾಕಾಗುವುದಿಲ್ಲ ಎಂದು ಪೌಷ್ಟಿಕಾಂಶ ತಜ್ಞರು ಮತ್ತು ವಿಜ್ಞಾನಿಗಳು ಹೇಳುತ್ತಾರೆ.
ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ (NECC) ಆರೋಗ್ಯ ಅಭಿಯಾನದ ಭಾಗವಾಗಿ ಒಂದು ಕಾಲದಲ್ಲಿ 'ಸಂಡೇ ಹೋ ಯಾ ಮಂಡೇ, ರೋಝ್ ಖಾವೋ ಅಂಡೇ' (ರವಿವಾರವೇ ಇರಲಿ, ಸೋಮವಾರವೇ ಇರಲಿ, ಪ್ರತಿದಿನ ಮೊಟ್ಟೆ ತಿನ್ನಿ) ಎಂಬ ಸಾಲುಗಳನ್ನು ನೆನಪಿಟ್ಟುಕೊಂಡಿದ್ದ ರಾಜ್ಯ ಮತ್ತು ದೇಶಕ್ಕೆ, ಮಧ್ಯಾಹ್ನದ ಬಿಸಿಯೂಟದ ತಟ್ಟೆಯಿಂದ ಮೊಟ್ಟೆಗಳನ್ನು ತೆಗೆದುಹಾಕುವುದು ಒಂದು ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ವೈಜ್ಞಾನಿಕ ಪುರಾವೆಗಳು, ಪ್ರಾದೇಶಿಕ ಆಹಾರ ಪದ್ಧತಿಗಳು ಮತ್ತು ಸರ್ಕಾರ ಅಥವಾ ಸಂಘಟನೆಯ ಸೈದ್ಧಾಂತಿಕ ಆದ್ಯತೆಗಳ ನಡುವಿನ ಸಂಘರ್ಷದಲ್ಲಿ, ಸಾರ್ವಜನಿಕ ಪೌಷ್ಟಿಕಾಂಶ ಕಾರ್ಯಕ್ರಮಗಳ ಆದ್ಯತೆ ಏನಾಗಿರಬೇಕು?
ಮಗುವಿನ ಪೌಷ್ಟಿಕಾಂಶದ ಸೇವನೆಯು ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಪೌಷ್ಟಿಕಾಂಶ ತಜ್ಞರು, ವಿಜ್ಞಾನಿಗಳು ಮತ್ತು ಆಹಾರದ ಹಕ್ಕು ಕಾರ್ಯಕರ್ತರು 'ಆಲ್ಟ್ ನ್ಯೂಸ್'ಗೆ ತಿಳಿಸಿದ್ದಾರೆ. ಬಡಿಸುವ ಆಹಾರದ ನಿಖರ ಪ್ರಮಾಣ, ಒಟ್ಟಾರೆ ಮೆನು, ಆಹಾರದ ಜೈವಿಕ ಮೌಲ್ಯ ಅಥವಾ ಬಯೋಲಾಜಿಕಲ್ ವ್ಯಾಲ್ಯೂ (BV - ನಮ್ಮ ದೇಹವು ನಿರ್ದಿಷ್ಟ ಆಹಾರದ ಪ್ರೊಟೀನ್ ಅನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ ಎಂಬ ಮಾಪನ), ಮತ್ತು ವಿಟಮಿನ್ ಬಿ12, ವಿಟಮಿನ್ ಡಿ, ಕೋಲಿನ್, ಕಬ್ಬಿಣಾಂಶ ಹಾಗೂ ಸತು ನಂತಹ ಇತರ ಪೌಷ್ಟಿಕಾಂಶಗಳು ಇದರಲ್ಲಿ ಪ್ರಮುಖವಾಗಿವೆ. "ಅದೇ ಪ್ರಮಾಣದ ಪ್ರೊಟೀನ್" ಹೆಸರಿನಲ್ಲಿ ಕೇವಲ ರಾಜ್ಮಾ, ಸೋಯಾ ಅಥವಾ ಪನೀರ್ ಅನ್ನು ಸೇರಿಸುವುದರಿಂದ ಮಾತ್ರವೇ ಅದು ಪೌಷ್ಟಿಕಾಂಶದ ದೃಷ್ಟಿಯಿಂದ ಮೊಟ್ಟೆಗೆ ಸಮನಾದ ಪರ್ಯಾಯವಾಗಲು ಸಾಧ್ಯವಿಲ್ಲ.
ಅಧಿಕೃತವಾಗಿ 'ಪಿಎಂ ಪೋಷಣ್' (PM POSHAN) ಯೋಜನೆ ಎಂದು ಕರೆಯಲ್ಪಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯು 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತದೆ. ಪ್ರಾಥಮಿಕ ಶಿಕ್ಷಣಕ್ಕೆ ಪೌಷ್ಟಿಕಾಂಶದ ಬೆಂಬಲದ ರಾಷ್ಟ್ರೀಯ ಕಾರ್ಯಕ್ರಮ (NP-NSPE) ಎಂಬ ಹೆಸರಿನಲ್ಲಿ 1995ರಲ್ಲಿ ಅಧಿಕೃತವಾಗಿ ಪ್ರಾರಂಭವಾದ ಈ ಯೋಜನೆ, ಮಕ್ಕಳ ಹಸಿವನ್ನು ನೀಗಿಸಲು, ಪೌಷ್ಟಿಕಾಂಶವನ್ನು ಸುಧಾರಿಸಲು ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಶಾಲಾ ಹಾಜರಾತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 450 ಕಿಲೋಕ್ಯಾಲೊರಿ ಹಾಗೂ 12 ಗ್ರಾಂ ಪ್ರೊಟೀನ್ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 700 ಕಿಲೋಕ್ಯಾಲೊರಿ ಹಾಗೂ 20 ಗ್ರಾಂ ಪ್ರೊಟೀನ್ ಅನ್ನು ಕಡ್ಡಾಯಗೊಳಿಸುತ್ತದೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ನಡೆಸಿರುವ ಅಧ್ಯಯನವು, ಮೊಟ್ಟೆಗಳು "ಮಾನವನ ಪೌಷ್ಟಿಕಾಂಶದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವು ಅಮೈನೋ ಆಮ್ಲಗಳು, ಶಕ್ತಿ, ಅತ್ಯಗತ್ಯ ಸೂಕ್ಷ್ಮ ಪೋಷಕಾಂಶಗಳು ಮತ್ತು ಜೀವಸತ್ವಗಳ ಪ್ರಮುಖ ಮೂಲಗಳಾಗಿವೆ" ಎಂದು ತಿಳಿಸಿದೆ. "ದಿನನಿತ್ಯದ ಆಹಾರದಲ್ಲಿ, ವಿಶೇಷವಾಗಿ ಸಣ್ಣ ಮಕ್ಕಳ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸುವುದರಿಂದ ಪೌಷ್ಟಿಕಾಂಶ ಮತ್ತು ಆರೋಗ್ಯದ ದೃಷ್ಟಿಯಿಂದ ಗಣನೀಯ ಹಾಗೂ ಮಿತವ್ಯಯಕಾರಿ ಪ್ರಯೋಜನಗಳನ್ನು ಪಡೆಯಬಹುದು" ಎಂದು ಅದು ಹೇಳುತ್ತದೆ.
"ಸಣ್ಣ ವಯಸ್ಸಿನ ಮಕ್ಕಳಲ್ಲಿ ಮೊಟ್ಟೆಯನ್ನು ಬೇಗನೆ ಆಹಾರ ಕ್ರಮಕ್ಕೆ ಸೇರಿಸುವುದರಿಂದ ಅವರ ಬೆಳವಣಿಗೆಯು ಗಣನೀಯವಾಗಿ ಸುಧಾರಿಸುತ್ತದೆ. ಆರ್ಥಿಕವಾಗಿ ಹಿಂದುಳಿದ ಹಾಗೂ ದುರ್ಬಲ ವರ್ಗದವರಿಗೂ ಸುಲಭವಾಗಿ ಸಿಗುವ ಕಾರಣ, ಮಕ್ಕಳಲ್ಲಿ ಕುಂಠಿತ ಬೆಳವಣಿಗೆಯನ್ನು ಕಡಿಮೆ ಮಾಡುವ ಜಾಗತಿಕ ಗುರಿಗಳನ್ನು ತಲುಪಲು ಮೊಟ್ಟೆಗಳು ಪ್ರಮುಖ ಕೊಡುಗೆ ನೀಡಬಲ್ಲವು" ಎಂದು 'ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್'ನಲ್ಲಿ 2017ರಲ್ಲಿ ಪ್ರಕಟವಾದ ಅಧ್ಯಯನವೊಂದು ತಿಳಿಸಿದೆ.
ಮಕ್ಕಳ ಬೆಳವಣಿಗೆಯಲ್ಲಿ ಪ್ರೊಟೀನ್ ಗಳ ಜೈವಿಕ ಮೌಲ್ಯವನ್ನು ವಿಶ್ಲೇಷಿಸುವ 2025ರ ಮತ್ತೊಂದು ಅಧ್ಯಯನವು ಹೀಗೆ ಹೇಳುತ್ತದೆ: "ಸಂಪೂರ್ಣ ಅಮೈನೋ ಆಮ್ಲಗಳ ಸಂಯೋಜನೆಯನ್ನು ಹೊಂದಿರುವುದರಿಂದ ಪ್ರಾಣಿಜನ್ಯ ಪ್ರೊಟೀನ್ಗಳು ಸಾಮಾನ್ಯವಾಗಿ ಹೆಚ್ಚಿನ ಜೈವಿಕ ಮೌಲ್ಯವನ್ನು ಹೊಂದಿರುತ್ತವೆ. ಪ್ರಾಣಿಜನ್ಯ ಪ್ರೊಟೀನ್ಗಳಿಗೆ ಹೋಲಿಸಿದರೆ, ಸಸ್ಯಜನ್ಯ ಪ್ರೊಟೀನ್ಗಳು ಜೀರ್ಣವಾಗಲು ಕಷ್ಟ ಮತ್ತು ಅವುಗಳಲ್ಲಿ ಅಮೈನೋ ಆಮ್ಲಗಳ ಕೊರತೆ ಇರುತ್ತದೆ. ಹೀಗಾಗಿ, ಇವುಗಳನ್ನೇ ಅವಲಂಬಿಸುವ ದುರ್ಬಲ ಜನಸಂಖ್ಯೆಯಲ್ಲಿ ಪೌಷ್ಟಿಕಾಂಶದ ಕೊರತೆಯ ಅಪಾಯ ಹೆಚ್ಚಾಗಿರುತ್ತದೆ."
ದಶಕಗಳಿಂದ ಭಾರತ ಸರ್ಕಾರವೇ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ಪ್ರಮುಖ ಪರಿಹಾರವಾಗಿ ಮೊಟ್ಟೆಯ ಸೇವನೆಯನ್ನು ಸಕ್ರಿಯವಾಗಿ ಪ್ರೋತ್ಸಾಹಿಸುತ್ತಾ ಬಂದಿದೆ. ಇತ್ತೀಚೆಗೆ ಪಶುಸಂಗೋಪನಾ ಇಲಾಖೆಯು ನಡೆಸಿದ ಅಭಿಯಾನವೊಂದರಲ್ಲಿ, "142.77 ಶತಕೋಟಿ ಮೊಟ್ಟೆಗಳ ಉತ್ಪಾದನೆಯೊಂದಿಗೆ, ಭಾರತವು ಪ್ರತಿಯೊಬ್ಬರ ತಟ್ಟೆಯೂ ಅಗತ್ಯ ಪ್ರೊಟೀನ್ನಿಂದ ತುಂಬುವಂತೆ ಮತ್ತು ಪ್ರತಿಯೊಬ್ಬರ ಜೀವನವೂ ಪೌಷ್ಟಿಕಾಂಶದಿಂದ ಸದೃಢವಾಗುವಂತೆ ನೋಡಿಕೊಳ್ಳುತ್ತಿದೆ" ಎಂದು ಹೇಳಲಾಗಿದೆ.
ಇದು ಉತ್ತಮ ನಿರ್ಧಾರವಲ್ಲ: ಪೌಷ್ಟಿಕಾಂಶ ತಜ್ಞರು
ಮೊಟ್ಟೆಯನ್ನು ಪೌಷ್ಟಿಕಾಂಶದ 'ಸೂಪರ್ಫುಡ್' ಎಂದು ಕರೆದಿರುವ ಕೋಲ್ಕತ್ತಾದ ಪೌಷ್ಟಿಕಾಂಶ ತಜ್ಞೆ ಪಾಯಲ್ ಚಟರ್ಜಿ, ಮಗುವಿನ ಪೌಷ್ಟಿಕಾಂಶದ ಅಗತ್ಯಕ್ಕೆ ಮೊಟ್ಟೆ ನೀಡುವ ಕೊಡುಗೆಯನ್ನು ಯಾವುದೇ ಸಸ್ಯಾಹಾರಿ ಆಯ್ಕೆಗಳೊಂದಿಗೆ ಸಮಾಗಮಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ತೆಗೆದುಹಾಕುವುದು ಸರಿಯಾದ ನಿರ್ಧಾರವಲ್ಲ ಎಂದು ಹೇಳಿದ್ದಾರೆ.
ಮೊಟ್ಟೆಯು ಪ್ರೊಟೀನ್ನ ಉತ್ತಮ ಮೂಲವಾಗಿರುವುದು ಮಾತ್ರವಲ್ಲದೆ, ಸಸ್ಯಜನ್ಯ ಆಹಾರಗಳಲ್ಲಿ ಇಲ್ಲದಿರುವ ವಿಟಮಿನ್ ಬಿ12, ಡಿ ಮತ್ತು ಕೋಲಿನ್ನಂತಹ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿದೆ. ದೇಹಕ್ಕೆ ಸುಲಭವಾಗಿ ಹೀರಲ್ಪಡುವ ಸತು ಮತ್ತು ಕಬ್ಬಿಣಾಂಶವೂ ಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದಿದ್ದಾರೆ.
"ಇಲ್ಲಿ ವಿಷಯ ಕೇವಲ ಆಹಾರದಲ್ಲಿ ಎಷ್ಟು ಪ್ರೊಟೀನ್ ಇದೆ ಎಂಬುದರ ಬಗ್ಗೆ ಮಾತ್ರವಲ್ಲ, ಮಗುವಿನ ದೇಹ ಅದನ್ನು ಎಷ್ಟು ಚೆನ್ನಾಗಿ ಹೀರಿಕೊಳ್ಳುತ್ತದೆ ಎಂಬುದರ ಮೇಲೂ ಅವಲಂಬಿತವಾಗಿದೆ. ಮೊಟ್ಟೆಗಳು ಎಲ್ಲಾ ಒಂಭತ್ತು ಅತ್ಯಗತ್ಯ ಅಮೈನೋ ಆಮ್ಲಗಳನ್ನು ಆದರ್ಶ ಪ್ರಮಾಣದಲ್ಲಿ ಹೊಂದಿವೆ ಮತ್ತು ಇವು ಸುಲಭವಾಗಿ ಜೀರ್ಣವಾಗುತ್ತವೆ. ಮಕ್ಕಳಿಗೆ ಯಾವಾಗಲೂ ಪೌಷ್ಟಿಕಾಂಶ ಭರಿತ ಆಹಾರವನ್ನು ನೀಡಲು ಸಲಹೆ ನೀಡಲಾಗುತ್ತದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುವ, ಹೆಚ್ಚಿನ ಪ್ರೊಟೀನ್, ಹೆಚ್ಚಿನ ಕ್ಯಾಲೊರಿ ಹಾಗೂ ಸೂಕ್ಷ್ಮ ಪೋಷಕಾಂಶಗಳನ್ನು ಒಳಗೊಂಡಿರುವ ಮೊಟ್ಟೆಯೇ ಇದಕ್ಕೆ ಅತ್ಯುತ್ತಮ ಆಯ್ಕೆಯಾಗಿತ್ತು" ಎಂದು 'ಆಲ್ಟ್ ನ್ಯೂಸ್' ಜೊತೆ ಮಾತನಾಡಿದ ಪಾಯಲ್ ಚಟರ್ಜಿ ಹೇಳಿದ್ದಾರೆ.
ಕೆಲವು ಸಸ್ಯಜನ್ಯ ಪ್ರೊಟೀನ್ ಗಳಿಗಿಂತ ಭಿನ್ನವಾಗಿ, ಸೋಯಾ ಪ್ರೊಟೀನ್ ಕೂಡ ಒಂಬತ್ತು ಅತ್ಯಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುವುದರಿಂದ ಅದನ್ನು ಸಂಪೂರ್ಣ ಪ್ರೊಟೀನ್ ಎಂದು ಪರಿಗಣಿಸಲಾಗುತ್ತದೆ ಎಂದು 'ಹಾರ್ವರ್ಡ್ ಟಿ.ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್' ಪ್ರಕಟಿಸಿದ ಅಧ್ಯಯನವೊಂದು ತಿಳಿಸುತ್ತದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (FAO) ಮಾಹಿತಿಯ ಪ್ರಕಾರ, ಮೊಟ್ಟೆಗಳು ಮಾನವನ ದೇಹಕ್ಕೆ ಅಗತ್ಯವಿರುವ ಪ್ರಮಾಣಕ್ಕೆ ಅತ್ಯಂತ ಸೂಕ್ತವಾಗಿ ಹೊಂದಿಕೆಯಾಗುವಂತೆ ಈ ಒಂಬತ್ತು ಅತ್ಯಗತ್ಯ ಅಮೈನೋ ಆಮ್ಲಗಳನ್ನು ಒದಗಿಸುತ್ತವೆ ಮತ್ತು ಇವು ಶೀಘ್ರವಾಗಿ ಜೀರ್ಣವಾಗಿ ದೇಹಕ್ಕೆ ಹೀರಲ್ಪಡುತ್ತವೆ. ಇದೇ ಕಾರಣಕ್ಕೆ ಮೊಟ್ಟೆಯ ಪ್ರೊಟೀನ್ ಅನ್ನು ಅತ್ಯುನ್ನತ ಗುಣಮಟ್ಟದ ಆಹಾರ ಪ್ರೊಟೀನ್ ಎಂದು ಪರಿಗಣಿಸಲಾಗುತ್ತದೆ ಮತ್ತು ಇತರ ಪ್ರೊಟೀನ್ಗಳ ಗುಣಮಟ್ಟವನ್ನು ಅಳೆಯಲು ಇದನ್ನೇ ಮಾಪನವಾಗಿ ಬಳಸಲಾಗುತ್ತದೆ.
ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ಮಾಂಸಾಹಾರಿ ಆಹಾರ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡರೆ, ಮಕ್ಕಳ ಇಷ್ಟವನ್ನೂ ನಾವು ಪರಿಗಣಿಸಬೇಕಾಗುತ್ತದೆ. ಈ ವಿಷಯದಲ್ಲಿ "ಮೊಟ್ಟೆಯೇ ಬೆಸ್ಟ್" ಎನ್ನುತ್ತಾರೆ ಚಟರ್ಜಿ. "ಒಂದು ವೇಳೆ ಮೊಟ್ಟೆಗಳ ಜಾಗದಲ್ಲಿ ಸೋಯಾ ಚಂಕ್ಸ್, ಪನೀರ್, ಬೇಳೆಕಾಳುಗಳು ಮತ್ತು ಹೈನು ಉತ್ಪನ್ನಗಳನ್ನು ನೀಡಿದರೂ, ಆ ಆಹಾರ ಪಟ್ಟಿಯು ಪೌಷ್ಟಿಕಾಂಶದ ದೃಷ್ಟಿಯಿಂದ ಪರಿಪೂರ್ಣವಾಗಬೇಕಾದರೆ ಅದಕ್ಕೆ ಪ್ರತ್ಯೇಕವಾಗಿ ಎಲ್ಲಾ ಸೂಕ್ಷ್ಮ ಪೋಷಕಾಂಶಗಳು ಮತ್ತು ವಿಟಮಿನ್ಗಳನ್ನು ಪೂರಕವಾಗಿ ಸೇರಿಸಬೇಕಾಗುತ್ತದೆ" ಎಂದು ಅವರು ಹೇಳುತ್ತಾರೆ.
'ಆಲ್ಟ್ ನ್ಯೂಸ್' ಜೊತೆ ಮಾತನಾಡಿದ ಮಾಲಿಕ್ಯೂಲರ್ ವಿಜ್ಞಾನಿ ಹಾಗೂ ಕ್ಲೀವ್ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯ ಬಯಾಲಜಿ, ಜಿಯಾಲಜಿ ಮತ್ತು ಎನ್ವಿರಾನ್ಮೆಂಟಲ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಬಾರ್ಸಂಜಿತ್ ಮಜುಂದಾರ್, "ಸೂಕ್ತ ಪ್ರಮಾಣದ ಪ್ರೊಟೀನ್ ಸೇವನೆ, ವಿಶೇಷವಾಗಿ ಪ್ರಾಣಿಜನ್ಯ ಆಹಾರಗಳಿಂದ ಸಿಗುವ ಪ್ರೊಟೀನ್, ಅದರಲ್ಲೂ ಅತ್ಯಂತ ಅಗ್ಗದ ಮೂಲವಾಗಿರುವ ಮೊಟ್ಟೆಯ ಸೇವನೆಯು ಮಗುವಿನ ದೈಹಿಕ ಬೆಳವಣಿಗೆಯನ್ನು ಮಾತ್ರವಲ್ಲದೆ, ಬೌದ್ಧಿಕ ವಿಕಾಸವನ್ನೂ ಉತ್ತಮಪಡಿಸುತ್ತದೆ" ಎಂದು ತಿಳಿಸಿದ್ದಾರೆ.
"ನಮ್ಮ ದೇಹದ ಪ್ರತಿಯೊಂದು ಜೀವಕೋಶವೂ ಆರೋಗ್ಯಕರವಾಗಿರಲು ಪ್ರೊಟೀನ್ಗಳು ನಿರಂತರವಾಗಿ ಉತ್ಪತ್ತಿಯಾಗುತ್ತಿರಬೇಕು. ಮಾನವನ ದೇಹದಲ್ಲಿನ ಪ್ರತಿಯೊಂದು ಪ್ರೊಟೀನ್ನ ಉತ್ಪಾದನೆಯು 'ಮೆಥಿಯೋನೈನ್' ಎಂಬ ಅಮೈನೋ ಆಮ್ಲದೊಂದಿಗೇ ಪ್ರಾರಂಭವಾಗುತ್ತದೆ. ಈ ಸರಬರಾಜು ಮಾರ್ಗದಲ್ಲಿ ಏನಾದರೂ ವ್ಯತ್ಯಾಸವಾದರೆ, ಮಕ್ಕಳಲ್ಲಿ ನರಮಂಡಲದ ಬೆಳವಣಿಗೆ ಕುಂಠಿತಗೊಳ್ಳುವ ಅಪಾಯ ಗಣನೀಯವಾಗಿ ಹೆಚ್ಚುತ್ತದೆ. ಮೆಥಿಯೋನೈನ್, ಲೈಸೀನ್ ಮತ್ತು ಥ್ರಿಯೋನೈನ್ನಂತಹ ಅತ್ಯಗತ್ಯ ಅಮೈನೋ ಆಮ್ಲಗಳು ಸಸ್ಯಾಹಾರಿ ಆಹಾರಗಳಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿರುತ್ತವೆ. ಇನ್ನು ಟೌರಿನ್, ಕ್ರಿಯೇಟಿನ್, ಕಾರ್ನೋಸಿನ್ ಮತ್ತು ಹೈಡ್ರಾಕ್ಸಿಪ್ರೋಲಿನ್ನಂತಹ ಸಂಯುಕ್ತಗಳಂತೂ ಸಸ್ಯಜನ್ಯ ಆಹಾರದಲ್ಲಿ ಸಂಪೂರ್ಣವಾಗಿ ಇರುವುದೇ ಇಲ್ಲ" ಎಂದು ಅವರು ವಿವರಿಸಿದ್ದಾರೆ.
‘ಕೇವಲ ಪ್ರೊಟೀನ್ ಪ್ರಮಾಣವನ್ನು ಸರಿಗಟ್ಟುವುದೊಂದೇ ಸಾಕಾಗುವುದಿಲ್ಲ’
ತನ್ನ ಮೂಲ ಸಿದ್ಧಾಂತದ ಕಾರಣದಿಂದಾಗಿ ಇಸ್ಕಾನ್ ಸಂಸ್ಥೆಯು ಕೇವಲ ಸಸ್ಯಾಹಾರಿ ಆಹಾರವನ್ನು ಬಡಿಸಲು ಬದ್ಧವಾಗಿದೆ. ಆದರೆ, ಬಿಸಿಯೂಟದ ಜವಾಬ್ದಾರಿಯನ್ನು ಹಸ್ತಾಂತರಿಸುವಾಗ ಮಗುವಿನ ಅಗತ್ಯಕ್ಕೆ ಮೊದಲ ಆದ್ಯತೆ ನೀಡಬೇಕಿತ್ತು ಎಂದು ಪೌಷ್ಟಿಕಾಂಶ ತಜ್ಞರು ಅಭಿಪ್ರಾಯಪಡುತ್ತಾರೆ.
"ಮೊಟ್ಟೆಗಳು ಶೇಕಡಾ 100 ರಷ್ಟು ಬಯೋಲಾಜಿಕಲ್ ವ್ಯಾಲ್ಯೂ ಹೊಂದಿವೆ. ಅಂದರೆ, ಅವುಗಳು ಒದಗಿಸುವ ಪ್ರೊಟೀನ್ ಅನ್ನು ನಮ್ಮ ದೇಹವು ಸಂಪೂರ್ಣವಾಗಿ ಬಳಸಿಕೊಳ್ಳಬಲ್ಲದು. ಇವು ಮಕ್ಕಳ ಮೆದುಳಿನ ಬೆಳವಣಿಗೆಗೆ ಅಗತ್ಯವಿರುವ 'ಕೋಲಿನ್' ಮತ್ತು ಸಿರೊಟೋನಿನ್ ಹಾಗೂ ಡೋಪಮೈನ್ನಂತಹ ನ್ಯೂರೋಸಂವೇದಕಗಳ ಉತ್ತಮ ಮೂಲವಾಗಿವೆ. ಅಲ್ಲದೆ, ಮೊಟ್ಟೆಯ ಬಿಳಿ ಭಾಗವು ಉತ್ತಮ ಪ್ರಮಾಣದ ಅಲ್ಬುಮಿನ್ ಅನ್ನು ಹೊಂದಿರುತ್ತದೆ" ಎಂದು ಕ್ಲಿನಿಕಲ್ ಡಯಟೀಶಿಯನ್ ಮತ್ತು ಕ್ರಿಟಿಕಲ್ ಕೇರ್ ಪೌಷ್ಟಿಕಾಂಶ ತಜ್ಞ ಅರಿತ್ರಾ ಖಾನ್ ಹೇಳಿದ್ದಾರೆ.
"ಸರ್ಕಾರದ ಈ ಪ್ರಾಯೋಗಿಕ ಯೋಜನೆಯಡಿ ಸಿದ್ಧಪಡಿಸಲಾಗಿರುವ ಹೊಸ ಆಹಾರದ ಸೂತ್ರವು ಪೌಷ್ಟಿಕಾಂಶದ ದೃಷ್ಟಿಯಿಂದ ಪರಿಪೂರ್ಣವಾಗಿದೆಯೇ ಇಲ್ಲವೇ ಎಂಬುದು, ಒಟ್ಟಾರೆ ಮೆನುವನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇದನ್ನು ಯಾವುದೇ ಒಂದು ಸಂಸ್ಥೆಯು ಸ್ವತಂತ್ರವಾಗಿ ನಿರ್ಧರಿಸದೇ ವೈದ್ಯರು, ಆಹಾರ ಪದ್ಧತಿ ತಜ್ಞರು ಮತ್ತು ಮಕ್ಕಳ ತಜ್ಞರೊಂದಿಗೆ ಸಮಾಲೋಚಿಸಿ ಯೋಜಿಸಬೇಕಾಗುತ್ತದೆ" ಎಂದಿದ್ದಾರೆ.
ಪೌಷ್ಟಿಕಾಂಶ ತಜ್ಞೆ ಸುಚರಿತಾ ಸೇನ್ಗುಪ್ತ ಅವರು ಪ್ರೊಟೀನ್ನಲ್ಲಿ ಎರಡು ವರ್ಗಗಳಿವೆ ಎಂದು ವಿವರಿಸುತ್ತಾರೆ. ಮೊದಲ ವರ್ಗದಲ್ಲಿ ಪ್ರಾಣಿಜನ್ಯ ಪ್ರೊಟೀನ್ ಸೇರಿದ್ದರೆ, ಎರಡನೇ ವರ್ಗದಲ್ಲಿ ಸಸ್ಯಜನ್ಯ ಪ್ರೊಟೀನ್ ಇರುತ್ತದೆ.
"ಈ ಹೊಸ ಜವಾಬ್ದಾರಿ ಹಸ್ತಾಂತರದ ಪ್ರಕಾರ, ಮೊದಲ ವರ್ಗದ ಪ್ರೊಟೀನ್ ಮಕ್ಕಳ ಆಹಾರ ಕ್ರಮದಿಂದ ಸಂಪೂರ್ಣವಾಗಿ ಹೊರಗುಳಿಯುತ್ತದೆ. ಮೊಟ್ಟೆಯ ಜೈವಿಕ ಮೌಲ್ಯವನ್ನು ಪರಿಗಣಿಸಿದರೆ, ಉದ್ದೇಶಪೂರ್ವಕವಾಗಿ ಅದನ್ನು ಮಕ್ಕಳ ಆಹಾರದಿಂದ ತೆಗೆದುಹಾಕುವುದು ಜಾಣತನದ ನಿರ್ಧಾರವಲ್ಲ. ಕೇವಲ 2-3 ಸಸ್ಯಜನ್ಯ ಉತ್ಪನ್ನಗಳನ್ನು ಸೇರಿಸುವುದರಿಂದ ಪೌಷ್ಟಿಕಾಂಶದ ಒಟ್ಟಾರೆ ಕೊರತೆಯನ್ನು ನೀಗಿಸಲು ಸಾಧ್ಯವಿಲ್ಲ. ಆಹಾರವನ್ನು ಸಮತೋಲನಗೊಳಿಸಲು ಅವರು ರಾಜ್ಮಾ ಅಥವಾ ಸೋಯಾದೊಂದಿಗೆ ಹಲವಾರು ಪೂರಕ ಪೌಷ್ಟಿಕಾಂಶಗಳನ್ನು ಸೇರಿಸಬೇಕಾಗುತ್ತದೆ. ಕೇವಲ ಪ್ರೊಟೀನ್ ಪ್ರಮಾಣವನ್ನು ಸರಿಗಟ್ಟುವುದೊಂದೇ ಇಲ್ಲಿ ಸಾಕಾಗುವುದಿಲ್ಲ" ಎನ್ನುತ್ತಾರೆ ಅವರು.
ಇತರ ರಾಜ್ಯಗಳು ಏನು ಮಾಡುತ್ತಿವೆ?
2018ರಲ್ಲಿ, ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರ ಫೌಂಡೇಶನ್ ತಾನು ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದ ಕರ್ನಾಟಕದ ಶಾಲೆಗಳಲ್ಲಿ ಮೊಟ್ಟೆ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಡಿಸಬೇಕೆಂಬ ಸರ್ಕಾರದ ನಿರ್ದೇಶನವನ್ನು ನಿರಾಕರಿಸಿತ್ತು. ಇದು ಕಡಿಮೆ ಆದಾಯದ ಹಿನ್ನೆಲೆಯುಳ್ಳ ಮಕ್ಕಳಿಗಾಗಿ ಇರುವ ಸರ್ಕಾರಿ ಯೋಜನೆಗಳಲ್ಲಿ ಮೊಟ್ಟೆಯನ್ನು ಸೇರಿಸಬೇಕೆಂದು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದ 'ಆಹಾರದ ಹಕ್ಕು' ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯದ ಸಾಮಾನ್ಯ ಆಹಾರ ಪದ್ಧತಿಗೆ ವಿರುದ್ಧವಾಗಿ, 'ಮಡಿವಂತಿಕೆ'ಗೆ ಸಂಬಂಧಿಸಿದ ಧಾರ್ಮಿಕ ಮತ್ತು ಜಾತೀಯ ಆಹಾರದ ನಿರ್ಬಂಧಗಳನ್ನು ಸಂಸ್ಥೆಯು ಮಕ್ಕಳ ಮೇಲೆ ಹೇರುತ್ತಿದೆ ಎಂದು ಆರೋಪಿಸಲಾಗಿತ್ತು.
ಈ ಮಧ್ಯೆ, ಗದಗದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು 2022ರಲ್ಲಿ ನಡೆಸಿದ ಅಧ್ಯಯನವೊಂದು ಮಹತ್ವದ ಪುರಾವೆಯನ್ನು ಒದಗಿಸಿದೆ. ಮಕ್ಕಳ ಅಪೌಷ್ಟಿಕತೆ ಮತ್ತು ಶಾಲಾ ಹಾಜರಾತಿ ಕೊರತೆಯನ್ನು ನೀಗಿಸಲು 2021ರಲ್ಲಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ ಮೊಟ್ಟೆಯನ್ನು ಪರಿಚಯಿಸಿದ ನಂತರ, ಮಕ್ಕಳ ಬೆಳವಣಿಗೆಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿರುವುದನ್ನು ಈ ಅಧ್ಯಯನವು ಖಚಿತಪಡಿಸಿತು. ಮೊಟ್ಟೆ ಪಡೆಯದ ಮಕ್ಕಳಿಗೆ ಹೋಲಿಸಿದರೆ, ಮೊಟ್ಟೆ ಪಡೆದ ಮಕ್ಕಳ ತೂಕ ಮತ್ತು ಬಿಎಂಐನಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿತು. ಇದರ ಫಲವಾಗಿ ರಾಜ್ಯಾದ್ಯಂತ ಎಲ್ಲಾ ಮಧ್ಯಾಹ್ನದ ಬಿಸಿಯೂಟದಲ್ಲಿ ವಾರಕ್ಕೆ ಎರಡು ಬಾರಿ ಮೊಟ್ಟೆಯನ್ನು ಸೇರಿಸಲಾಯಿತು. 2024ರಲ್ಲಿ ಸರ್ಕಾರವು ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ, ವಾರದಲ್ಲಿ ಆರು ದಿನಗಳ ಕಾಲ ಬಿಸಿಯೂಟದಲ್ಲಿ ಮೊಟ್ಟೆಗಳನ್ನು ನೀಡಲು ಪ್ರಾರಂಭಿಸಿತು.
ಕರ್ನಾಟಕದಂತೆಯೇ, ಒಡಿಶಾ ರಾಜ್ಯದಲ್ಲೂ ಅಕ್ಷಯ ಪಾತ್ರ ಫೌಂಡೇಶನ್ ದಶಕಗಳಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದರೂ, ಅಲ್ಲಿನ ಸರ್ಕಾರವು ಮಕ್ಕಳ ಮೆನುವಿನಲ್ಲಿ ಮೊಟ್ಟೆಗಳು ಮುಂದುವರಿಯುವಂತೆ ನೋಡಿಕೊಳ್ಳಲು ಪರ್ಯಾಯ ಮಾರ್ಗವನ್ನು ಕಂಡುಕೊಂಡಿತು. ಶಾಲೆಗಳು, ಪೋಷಕರು ಮತ್ತು ಆಹಾರದ ಹಕ್ಕು ಹೋರಾಟಗಾರರಿಂದ ಹಲವಾರು ವಿನಂತಿಗಳು ಬಂದ ನಂತರ, ಮೊಟ್ಟೆಗಳ ಖರೀದಿ ಅಥವಾ ಅಡುಗೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಲು ಫೌಂಡೇಶನ್ ನಿರಾಕರಿಸಿದಾಗ, ಸರ್ಕಾರವು ಮೊಟ್ಟೆಗಳನ್ನು ಸ್ವತಂತ್ರವಾಗಿ ಖರೀದಿಸಿ, ಬೇಯಿಸಿ ಬಡಿಸುವ ಜವಾಬ್ದಾರಿಯನ್ನು ಆಯಾ ಶಾಲಾ ಆಡಳಿತ ಮಂಡಳಿಗಳಿಗೆ ವಹಿಸಿತು.
ಇತ್ತೀಚಿನ ಜಾಗತಿಕ ಹಸಿವು ಸೂಚ್ಯಂಕದಲ್ಲಿ (GHI 2025), ಭಾರತವು 123 ದೇಶಗಳ ಪೈಕಿ 102ನೇ ಸ್ಥಾನದಲ್ಲಿದ್ದು, 25.8 ಅಂಕಗಳೊಂದಿಗೆ "ಗಂಭೀರ" ಹಸಿವಿನ ವರ್ಗದಲ್ಲಿದೆ. ಈ ಜಾಗತಿಕ ಹಸಿವು ಸೂಚ್ಯಂಕದ ವರದಿಯು ಮಕ್ಕಳ ಹಸಿವು ಮತ್ತು ಅಪೌಷ್ಟಿಕತೆ ಹಲವು ಬಾರಿ ಮಕ್ಕಳ ಮರಣಕ್ಕೆ ಕಾರಣವಾಗುತ್ತದೆ ಎಂದಿದೆ.
ರೈಟ್ ಟು ಫುಡ್ ಅಭಿಯಾನದ ಪ್ರಮುಖ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ 'ಆಲ್ಟ್ ನ್ಯೂಸ್' ಜೊತೆ ಮಾತನಾಡಿ, "ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ನಿರಂತರವಾಗಿ ಕಳಪೆ ಪ್ರದರ್ಶನ ನೀಡುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಂತಹ ಸರ್ಕಾರದ ಸ್ವಂತ ಸಮೀಕ್ಷೆಗಳೂ ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆಯ ಆತಂಕಕಾರಿ ಮಟ್ಟವನ್ನು ಎತ್ತಿ ತೋರಿಸುತ್ತವೆ. ಎನ್ಎಫ್ಎಚ್ಎಸ್-6 (NFHS-6) ಫಲಿತಾಂಶಗಳ ಪ್ರಕಾರ, ದೇಶದ ಶೇಕಡಾ 30 ರಷ್ಟು ಮಕ್ಕಳು ಕುಂಠಿತ ಬೆಳವಣಿಗೆಯನ್ನು (ವಯಸ್ಸಿಗೆ ತಕ್ಕ ಎತ್ತರವಿಲ್ಲದಿರುವುದು) ಹೊಂದಿದ್ದಾರೆ ಮತ್ತು ಶೇಕಡಾ 19 ರಷ್ಟು ಮಕ್ಕಳು ಎತ್ತರಕ್ಕೆ ತಕ್ಕ ತೂಕವಿಲ್ಲದಿರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಕುಟುಂಬಗಳಲ್ಲಿನ ಆಹಾರದ ಅಭದ್ರತೆ, ವೈವಿಧ್ಯಮಯ ಆಹಾರದ ಕೊರತೆ, ತಾಯಿ ಮತ್ತು ಮಗುವಿನ ಆರೈಕೆ ಸೇವೆಗಳ ಕೊರತೆ, ಪೌಷ್ಟಿಕ ಆಹಾರ ಹಾಗೂ ಆರೋಗ್ಯ ಮತ್ತು ನೈರ್ಮಲ್ಯದ ಲಭ್ಯತೆ ಇಲ್ಲದಿರುವುದರ ಪ್ರತಿಬಿಂಬವಾಗಿದೆ" ಎಂದಿದ್ದಾರೆ.
"ಇಂತಹ ಪರಿಸ್ಥಿತಿಯಲ್ಲಿ, ಯಾವುದೇ ಸರ್ಕಾರದ ಏಕೈಕ ಆದ್ಯತೆಯು ಮಕ್ಕಳು ಪೌಷ್ಟಿಕ ಆಹಾರವನ್ನು ಸೇವಿಸುವುದನ್ನು ಉತ್ತಮಪಡಿಸುವುದಾಗಿರಬೇಕು. ಒದಗಿಸಬೇಕಾದ ಆಹಾರದ ಸ್ವರೂಪವು ಸ್ಥಳೀಯ ಆದ್ಯತೆಗಳು, ಅಭ್ಯಾಸಗಳು ಮತ್ತು ಪದ್ಧತಿಗಳ ಆಧಾರದ ಮೇಲೆ ನಿರ್ಧಾರವಾಗಬೇಕು. ಇದು ಕೇವಲ ಮಗುವಿನ ಮುಂದೆ ಆಹಾರವನ್ನು ಇಡುವುದರ ಬಗ್ಗೆ ಮಾತ್ರವಲ್ಲ; ಮಗುವಿನ ಕೌಟುಂಬಿಕ ಹಿನ್ನೆಲೆ ಮತ್ತು ಅಭ್ಯಾಸಗಳನ್ನು ಗಣನೆಗೆ ತೆಗೆದುಕೊಂಡು, ಮಗು ಸ್ವತಃ ಇಷ್ಟಪಟ್ಟು ತಿನ್ನುವಂತಹ ಆಹಾರವನ್ನು ನೀಡಬೇಕು. ಇದೇ ಕಾರಣಕ್ಕಾಗಿ, ತಮ್ಮದೇ ಆದ ನಿಯಮ ಮತ್ತು ಷರತ್ತುಗಳನ್ನು ಹೇರುವ ಗುತ್ತಿಗೆದಾರರು ಹಾಗೂ ಸೇವಾ ಪೂರೈಕೆದಾರರನ್ನು ಈ ಯೋಜನೆಯಿಂದ ಸಂಪೂರ್ಣವಾಗಿ ದೂರ ಇಡಬೇಕು. ಇದು ಪೂರೈಕೆದಾರರು ತಮ್ಮ ಧಾರ್ಮಿಕ ಪದ್ಧತಿಗಳ ಆಧಾರದ ಮೇಲೆ ಆಹಾರದ ಹಕ್ಕನ್ನು ನಿರ್ಧರಿಸಲು ನೀಡುತ್ತಿರುವ ಧರ್ಮದಾನ ಅಥವಾ ಭಿಕ್ಷೆಯಲ್ಲ" ಎಂದು ಮಾಹಿತಿ ಹಕ್ಕಿಗಾಗಿನ ರಾಷ್ಟ್ರೀಯ ಅಭಿಯಾನದ (NCPRI) ಸಹ-ಸಂಚಾಲಕಿಯೂ ಆದ ಭಾರದ್ವಾಜ್ ಹೇಳಿದ್ದಾರೆ.
ಯಾವ ಮಕ್ಕಳಿಗಾಗಿ ಈ ಯೋಜನೆಯನ್ನು ರೂಪಿಸಲಾಗಿದೆಯೋ, ಅಂತಹ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವೇ ಹಲವು ಬಾರಿ ನಂಬಲರ್ಹ ಪ್ರೊಟೀನ್ನ ಏಕೈಕ ಮೂಲವಾಗಿರುತ್ತದೆ. ಸರ್ಕಾರದ ಈ ನಿರ್ಧಾರವನ್ನು ಖಂಡಿಸಿರುವ ಮಜುಂದಾರ್, "ಶ್ರೀಮಂತ ಸಸ್ಯಾಹಾರಿ ಕುಟುಂಬಗಳು ತಮ್ಮ ಸಸ್ಯಾಹಾರದ ಚೌಕಟ್ಟಿಗೆ ಹೊಂದುವಂತಹ ಹಾಲು, ಮೊಸರು, ಗಿಣ್ಣು, ಪನೀರ್ನಂತಹ ಪ್ರಾಣಿಜನ್ಯ ಆಹಾರ ಪದಾರ್ಥಗಳು ಮತ್ತು ಹೇರಳವಾದ ಪೂರಕ ಪೌಷ್ಟಿಕಾಂಶಗಳ ಸಹಾಯದಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನು ಮುಂದುವರಿಸುತ್ತವೆ. ಆದರೆ, ಇಂತಹ ದುಬಾರಿ ಆಹಾರ ಪದಾರ್ಥಗಳು ಕಾರ್ಮಿಕ ವರ್ಗದ ಕುಟುಂಬಗಳ ಮಕ್ಕಳಿಗೆ ಕೈಗೆಟುಕುವುದಿಲ್ಲ ಎಂಬುದನ್ನು ಅವರು ಎಂದಾದರೂ ಯೋಚಿಸಿದ್ದಾರೆಯೇ? ಅಂತಹ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಮೂಲಕ ಸಿಗುವ ಮೊಟ್ಟೆ ಅತ್ಯಗತ್ಯ ಹಾಗೂ ಅನಿವಾರ್ಯವಾಗಿದೆ. ಮಕ್ಕಳ ಪೌಷ್ಟಿಕಾಂಶದ ಅಗತ್ಯಗಳನ್ನು ನಿರ್ಲಕ್ಷಿಸುವ, ಸೈದ್ಧಾಂತಿಕ ಪ್ರೇರಿತವಾದ ಈ ಕಾರ್ಯಸೂಚಿಯನ್ನು ನಾನು ತೀವ್ರವಾಗಿ ಪ್ರತಿಭಟಿಸುತ್ತೇನೆ" ಎಂದು ಹೇಳಿದ್ದಾರೆ.
ಸೌಜನ್ಯ: altnews.in






