ಅಕ್ಟೋಬರ್ ರಜಾಕಾಲದಲ್ಲಿಯೂ ಯುಎಇಯಲ್ಲೇ ಉಳಿಯಲು ಕುಟುಂಬಗಳು ಮುಂದಾಗುತ್ತಿರುವುದೇಕೆ?

Photo Credit : gulfnews.com
ಯುಎಇಯ ಹಲವು ಕುಟುಂಬಗಳು ಈ ಅಕ್ಟೋಬರ್ ಮಧ್ಯಾವಧಿ ರಜೆಗೆ ವಿಮಾನ ನಿಲ್ದಾಣಕ್ಕೆ ಓಡುವುದು ಅಥವಾ ವಿದೇಶಿ ಪ್ರವಾಸಗಳನ್ನು ಪ್ಲಾನ್ ಮಾಡುತ್ತಿಲ್ಲ. ಬದಲಿಗೆ, ಕಡಲತೀರಗಳು, ಉದ್ಯಾನವನಗಳು, ಕುಟುಂಬ ಮನರಂಜನಾ ತಾಣಗಳು ಮತ್ತು ಮನೆಯಲ್ಲೇ ಕಳೆಯುವ ವಿಶ್ರಾಂತಿ ದಿನಗಳಂತಹ, ಕೈಗೆಟುಕುವ ಸ್ಥಳಗಳತ್ತ ಪೋಷಕರು ಒಲವು ತೋರುತ್ತಿದ್ದಾರೆ.
ವಿವಿಧ ಕುಟುಂಬಗಳಲ್ಲಿ ಎಲ್ಲೂ ಒಂದೇ ರೀತಿಯ ಸಾಮಾನ್ಯ ವಿಷಯವೆಂದರೆ, ಎಲ್ಲರೂ ನಿರಾಳವಾಗಿರಲು, ಒಟ್ಟಿಗೆ ಅರ್ಥಪೂರ್ಣ ಸಮಯವನ್ನು ಕಳೆಯಲು ಮತ್ತು ಹೆಚ್ಚು ಹಣ ಖರ್ಚು ಮಾಡದೆ ಯುಎಇಯಲ್ಲೇ ಆನಂದಿಸಲು ಬಯಸುತ್ತಿದ್ದಾರೆ.
►ಮನೆ ಹತ್ತಿರದಲ್ಲೇ ಉಳಿಯಲು ಆಯ್ಕೆ
ನಜ್ವಾ ಇಬ್ರಾಹಿಂ ಮೊಹಮ್ಮದ್ ಅಲ್ ಜರೂನಿ ಅವರಿಗೆ, ಯುಎಇಯಲ್ಲೇ ಉಳಿಯುವುದು ಕೇವಲ ಅನುಕೂಲಕ್ಕಾಗಿ ಮಾತ್ರವಲ್ಲ. ಅವರ ಒಬ್ಬ ಮಗಳು ಶಾಲೆಯ ಅಂತಿಮ ವರ್ಷದಲ್ಲಿದ್ದರೆ, ಮತ್ತೊಬ್ಬಳು ವಿಶ್ವವಿದ್ಯಾಲಯದಲ್ಲಿದ್ದಾಳೆ. ಹೀಗಾಗಿ ಅವರು ನಿರಾಳವಾದ ಜೀವನಶೈಲಿ ಮತ್ತು ಕುಟುಂಬದೊಂದಿಗೆ ಒಂದಷ್ಟು ಗುಣಮಟ್ಟದ ಸಮಯ ಕಳೆಯಲು ಎದುರು ನೋಡುತ್ತಿದ್ದಾರೆ.
ಸಮುದ್ರ, ಮರುಭೂಮಿ, ಅತ್ಯಂತ ಸುಂದರ ನಗರಗಳು ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಸಮೃದ್ಧವಾಗಿರುವ ಸ್ಥಳಗಳನ್ನು ಮನೆಯ ಸಮೀಪದಲ್ಲೇ ಆನಂದಿಸಬಹುದಾದಂತಹ ದೇಶದಲ್ಲಿ ನಾವು ವಾಸಿಸುತ್ತಿರುವುದು ನಮ್ಮ ಅದೃಷ್ಟ ಅಂತಾರೆ ಅವರು.
►ಯುಎಇಯ ಅನುಕೂಲವನ್ನು ಸಂಪೂರ್ಣವಾಗಿ ಬಳಸುವುದು
ಅಲ್ ಜರೂನಿ ಅವರಿಗೆ, ಸ್ಥಳೀಯವಾಗಿ ರಜೆ ಕಳೆಯುವುದು ತಮ್ಮ ಮಕ್ಕಳಿಗೆ ತಾವು ವಾಸಿಸುವ ದೇಶದ ಬಗ್ಗೆ ಗೌರವ ಬೆಳೆಸಲು ಒಂದು ಉತ್ತಮ ಮಾರ್ಗವಾಗಿದೆ.
"ಕುಟುಂಬದೊಂದಿಗೆ ನಮ್ಮದೇ ದೇಶವನ್ನು ಅನ್ವೇಷಿಸುವುದರಲ್ಲಿ ಒಂದು ವಿಶೇಷವಾದ ಖುಷಿಯಿದೆ. ಯುಎಇ ಎನ್ನುವುದು ನಾವು ವಾಸಿಸುವ ಸ್ಥಳ ಮಾತ್ರವಲ್ಲ, ಅದು ನಮ್ಮ ವ್ಯಕ್ತಿತ್ವದ ಒಂದು ಭಾಗ ಎಂಬುದನ್ನು ಇದು ನನ್ನ ಮಕ್ಕಳಿಗೆ ನೆನಪಿಸುತ್ತದೆ" ಎಂದು ಅಲ್ ಜರೂನಿ ವಿವರಿಸಿದರು.
ಸಮುದ್ರ ತೀರದಲ್ಲಿ ಸೂರ್ಯಾಸ್ತದ ಸಮಯದಲ್ಲಿ ಪಿಕ್ನಿಕ್, ನೀರಿನ ದಂಡೆಯ ಮೇಲ್ಭಾಗದಲ್ಲಿ ನಡಿಗೆ, ಅಥವಾ ಯುಎಇಯ ಹಿಂದಿನ ಇತಿಹಾಸದ ಕಥೆಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಬಹುದಾದ ಸಾಂಸ್ಕೃತಿಕ ಪ್ರದೇಶಕ್ಕೆ ಭೇಟಿ ನೀಡುವುದು ಅವರ ಆದರ್ಶ ರಜೆಯ ಕನಸಾಗಿದೆ.
ಕುಟುಂಬದೊಂದಿಗೆ ಅಡುಗೆ ಮಾಡುವ ಸಂಜೆ ಅಥವಾ ರಾತ್ರಿ ಹೊತ್ತು ಸಿನಿಮಾ ವೀಕ್ಷಣೆಯಂಥಾ ಕೆಲವು ಚಟುವಟಿಕೆಗಳನ್ನು ಮನೆಯಲ್ಲೇ ಇಟ್ಟುಕೊಳ್ಳಲು ಅವರು ಇಷ್ಟಪಡುತ್ತಾರೆ.
"ನೆನಪಿನಲ್ಲಿ ಉಳಿಯುವ ರಜೆಯು ಹೆಚ್ಚು ಖರ್ಚಿನಿಂದ ಕೂಡಿದ್ದಾಗಿರಬೇಕು ಅಥವಾ ಅತಿಯಾದ ಬಿಡುವಿಲ್ಲದ ಹಾಗಿರಬೇಕು ಎಂದೇನಿಲ್ಲ. ಕೆಲವೊಮ್ಮೆ, ಅದರ ಅತ್ಯುತ್ತಮ ಕೊಡುಗೆಯೆಂದರೆ, ವಿಶ್ರಾಂತಿ ಪಡೆದು ಮೈಮರೆತು ಬರುವುದು, ಪರಸ್ಪರ ಹತ್ತಿರವಾಗುವುದು ಮತ್ತು ನಮ್ಮ ಮನೆ ಎಂದು ಕರೆಯುವ ಈ ದೇಶದ ಸೌಂದರ್ಯವನ್ನು ಮೆಚ್ಚಿಕೊಳ್ಳುವುದಾಗಿದೆ" ಎಂದು ಅವರು ಹೇಳಿದರು.
►ರಜೆಯ ದಿನಗಳಲ್ಲಿ ಸಕ್ರಿಯವಾಗಿರುವುದು
ಫಿಲಿಪೈನ್ಸ್ ಮೂಲದ ತಾಯಿ ನೆಲ್ಲಿ ಸಬಲ್ಬೊರೊ ಅವರಿಗೆ, ಈ ಅಕ್ಟೋಬರ್ ರಜೆಯು ಕುಟುಂಬದೊಂದಿಗೆ ಸಮಯ ಕಳೆಯುತ್ತಲೇ ದೈಹಿಕವಾಗಿ ಚುರುಕಾಗಿರಲು ಒಂದು ಉತ್ತಮ ಅವಕಾಶವಾಗಿದೆ.
ಅವರ ಕುಟುಂಬದಲ್ಲಿ ಇಬ್ಬರು ಹದಿಹರೆಯದ ಗಂಡು ಮಕ್ಕಳಿದ್ದು, ಇಬ್ಬರಿಗೂ ಸೈಕ್ಲಿಂಗ್ ಅಂದರೆ ತುಂಬಾ ಇಷ್ಟ. ಅಲ್ಲದೆ, ಇವರು ಹೊಸದಾಗಿ ನವೀಕರಿಸಲಾದ ಅಲ್ ಮಾಮ್ಜರ್ ಕಡಲತೀರದಿಂದ ಕೇವಲ 10 ನಿಮಿಷಗಳ ದೂರದಲ್ಲಿ ವಾಸಿಸುತ್ತಿದ್ದಾರೆ.
ಬೆಳಗ್ಗಿನ ನಡಿಗೆ, ಮಕ್ಕಳೊಂದಿಗೆ ಸೈಕ್ಲಿಂಗ್ ಮತ್ತು ಇತರ ಹೊರಾಂಗಣ ಚಟುವಟಿಕೆಗಳು ಇವರ ರಜೆಯ ಯೋಜನೆಗಳಲ್ಲಿ ಸೇರಿವೆ.
"ಅಕ್ಟೋಬರ್ ಮಧ್ಯಾವಧಿ ರಜೆಯನ್ನು ನಾವು ದೈಹಿಕವಾಗಿ ಚುರುಕಾಗಿರಲು ಬಳಸಿಕೊಳ್ಳಲು ಯೋಜಿಸಿದ್ದೇವೆ. ಶಾಲೆಯ ಬಿಡುವಿಲ್ಲದ ಅವಧಿಯ ನಂತರ, ಸರಳವಾದ ಹೊರಾಂಗಣ ಚಟುವಟಿಕೆಗಳ ಮೂಲಕ ಒಟ್ಟಿಗೆ ಗುಣಮಟ್ಟದ ಸಮಯ ಕಳೆಯುತ್ತಲೇ ಕೊಂಚ ವಿಶ್ರಾಂತಿ ಪಡೆಯಲು ನಾವು ಬಯಸುತ್ತೇವೆ" ಎಂದು ಸಬಲ್ಬೊರೊ ಹೇಳಿದ್ದಾರೆ.
ಕುಟುಂಬಗಳು ಸಾರ್ವಜನಿಕ ಕಡಲತೀರಗಳು, ಪಾರ್ಕ್ ಗಳು, ನಡಿಗೆಯ ಹಾದಿಗಳು ಮತ್ತು ಸೈಕ್ಲಿಂಗ್ ಟ್ರ್ಯಾಕ್ಗಳನ್ನು ಬಳಸಿಕೊಳ್ಳಬಹುದು, ವಿಶೇಷವಾಗಿ ವಾತಾವರಣವು ಆಹ್ಲಾದಕರವಾಗಿರುವ ಮುಂಜಾನೆಯ ಸಮಯದಲ್ಲಿ ಇದು ಹೆಚ್ಚು ಅನುಕೂಲಕರವಾಗಿರುತ್ತದೆ.
ದಿನಚರಿಯಲ್ಲಿ ಸ್ವಲ್ಪ ಬದಲಾವಣೆಗಾಗಿ, ಅವರ ಕುಟುಂಬವು ಬೌಲಿಂಗ್ನಂತಹ ಒಳಾಂಗಣ ಚಟುವಟಿಕೆಯನ್ನು ಸಹ ಆರಿಸಿಕೊಳ್ಳಬಹುದು.
►ಎಲ್ಲವನ್ನೂ ಸರಳವಾಗಿಡುವುದು
ಭಾರತೀಯ ಮೂಲದ ತಾಯಿ ಮೇಘನಾ ಶೆಟ್ಟೆ ರಾಜೇ ಅವರಿಗೆ, ಈ ರಜೆಯು ಹೆಚ್ಚಾಗಿ ತಮ್ಮ ಮಗಳೊಂದಿಗೆ ಮನೆಯಲ್ಲೇ ಕಾಲ ಕಳೆಯುವುದಾಗಿದೆ.
ಅವರು ಒಟ್ಟಿಗೆ ಪುಸ್ತಕಗಳನ್ನು ಓದಲು ಮತ್ತು ಕಲಾ ಚಟುವಟಿಕೆಗಳನ್ನು ಮಾಡಲು ಯೋಜಿಸಿದ್ದಾರೆ. ಜೊತೆಗೆ, ವಾತಾವರಣವು ಅನುಕೂಲಕರವಾಗಿದ್ದರೆ ಉದ್ಯಾನವನಕ್ಕೆ ಭೇಟಿ ನೀಡುವುದು ಕೂಡ ಅವರ ಯೋಜನೆಯಲ್ಲಿದೆ.
"ಹವಾಮಾನವು ಸುಧಾರಿಸಿದರೆ ಪಾರ್ಕ್ ಮತ್ತು ಕಡಲತೀರಗಳಿಗೆ ಭೇಟಿ ನೀಡುವುದು ಖುಷಿ ನೀಡುತ್ತದೆ. ನಾವು ಸಿನಿಮಾ ನೋಡಲು ಹೋಗಬಹುದು ಅಥವಾ ದುಬೈ ನಗರದ ಒಳಗೆಯೇ ಎಲ್ಲಾದರೂ ಉಳಿದುಕೊಂಡು (ಸ್ಟೇಕೇಷನ್) ವಿಶ್ರಾಂತಿ ಪಡೆಯಬಹುದು" ಎಂದು ರಾಜೇ ತಿಳಿಸಿದರು.
►ಹೆಚ್ಚು ಖರ್ಚು ಮಾಡದೆ ಸುತ್ತಾಡುವುದು
ಅದೇ ರೀತಿಯಾಗಿ, ಮರಿಯಾ ಮುಖ್ತಾರ್ ಮತ್ತು ಅವರ ಕುಟುಂಬದವರು ಯುಎಇಯಲ್ಲೇ ಉಳಿಯಲು ಯೋಜಿಸಿದ್ದು, ಮನೆಯಲ್ಲಿ ನಿರಾಳವಾದ ದಿನಗಳ ಜೊತೆಗೆ ದಿನದ ಪ್ರವಾಸಗಳು ಮತ್ತು ಹೊರಾಂಗಣ ಚಟುವಟಿಕೆಗಳನ್ನು ಆನಂದಿಸಲು ನಿರ್ಧರಿಸಿದ್ದಾರೆ.
"ಇಲ್ಲಿ ಸುತ್ತಾಡಲು ಕೈಗೆಟುಕುವ ದರದಲ್ಲಿ ಸಾಕಷ್ಟು ಸ್ಥಳಗಳಿವೆ, ವಿಶೇಷವಾಗಿ ಉದ್ಯಾನವನಗಳು, ಕಡಲತೀರಗಳು ಮತ್ತು ಕುಟುಂಬ ಮನರಂಜನಾ ತಾಣಗಳು ಸಾಕಷ್ಟಿವೆ" ಎಂದು ಮುಖ್ತಾರ್ ಹೇಳಿದರು.
ಹವಾಮಾನವು ಸುಧಾರಿಸುತ್ತಿರುವ ಕಾರಣ, ಕುಟುಂಬವು ಹೆಚ್ಚು ಹಣ ಖರ್ಚು ಮಾಡದೆ ಹೊರಾಂಗಣ ಚಟುವಟಿಕೆಗಳನ್ನು ಆನಂದಿಸಲು, ಉದ್ಯಾನವನಗಳು ಹಾಗೂ ಕಡಲತೀರಗಳಿಗೆ ಭೇಟಿ ನೀಡಲು ಮತ್ತು ಕುಟುಂಬದೊಂದಿಗೆ ಹೊರಗೆ ಹೋಗಲು ಬಯಸುತ್ತದೆ.
►ಕುಟುಂಬದ ಸಮಯಕ್ಕೆ ಒತ್ತು ನೀಡುವ ರಜೆ
ಕುಟುಂಬಗಳ ಯೋಜನೆಗಳು ಬೇರೆ ಬೇರೆಯಾಗಿದ್ದರೂ, ಯುಎಇಯಲ್ಲೇ ಉಳಿಯಲು ಕಾರಣಗಳು ಒಂದೇ ಆಗಿವೆ. ಅಂದರೆ, ಯಾವುದೇ ತೊಂದರೆ ಇಲ್ಲದೆ ರಜೆಯನ್ನು ಅತ್ಯಂತ ಆನಂದಮಯವಾಗಿ ಕಳೆಯಲು ಅವರೆಲ್ಲರೂ ಬಯಸುತ್ತಾರೆ.
ಈ ಅಕ್ಟೋಬರ್ ರಜೆಯಲ್ಲಿ, ಕುಟುಂಬಗಳ ಯೋಜನೆಗಳು ಎಲ್ಲಿೆಲ್ಲೋ ತಿರುಗಾಡುವುದಕ್ಕಿಂತ ಹೆಚ್ಚಾಗಿ ಒಟ್ಟಿಗೆ ಗುಣಮಟ್ಟದ ಸಮಯ ಕಳೆಯುವುದರ ಮೇಲೆ ಕೇಂದ್ರೀಕೃತವಾಗಿವೆ. ಯುಎಇಯಲ್ಲೇ ಇದ್ದುಕೊಂಡು ಆನಂದಿಸಲು ಸಾಕಷ್ಟು ಆಯ್ಕೆಗಳು ಲಭ್ಯವಿವೆ.
ಕೃಪೆ: gulfnews.com






