ಭಾರತೀಯರು ಸೇರಿದಂತೆ ಎಲ್ಲಾ ವಿದೇಶಿಗರಿಗೆ ಆಂಥ್ರೋಪಿಕ್ ನ ಕ್ಲಾಡ್ ಫೇಬಲ್ 5 ಮತ್ತು ಮಿಥೋಸ್ 5 ಬಳಕೆಯನ್ನು ಅಮೆರಿಕ ಸರ್ಕಾರ ನಿಷೇಧಿಸಿದ್ದು ಏಕೆ?

Photo Credit : NDTV
ಭಾರತೀಯರು ಸೇರಿದಂತೆ ಯಾವುದೇ ವಿದೇಶಿ ಪ್ರಜೆಗಳು ತಮ್ಮ ಅತ್ಯಂತ ಹೊಸ ಹಾಗೂ ಅತ್ಯಂತ ಶಕ್ತಿಶಾಲಿ ಕೃತಕ ಬುದ್ಧಿಮತ್ತೆ ಮಾದರಿಗಳಾದ 'ಕ್ಲಾಡ್ ಫೇಬಲ್ 5' (Claude Fable 5) ಮತ್ತು 'ಮಿಥೋಸ್ 5' (Mythos 5) ಅನ್ನು ಬಳಸದಂತೆ ನಿರ್ಬಂಧಿಸಬೇಕು ಎಂದು ಅಮೆರಿಕ ಸರ್ಕಾರವು 'ಆಂಥ್ರೋಪಿಕ್' ಸಂಸ್ಥೆಗೆ ಆದೇಶಿಸಿದೆ.
ಈ ದಿಢೀರ್ ಆದೇಶದಿಂದಾಗಿ ಆಂಥ್ರೋಪಿಕ್ ಸಂಸ್ಥೆಯು ಜಗತ್ತಿನಾದ್ಯಂತ ಈ ಮಾದರಿಗಳ ಸೇವೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕಾಗಿ ಬಂದಿದೆ. ಕಂಪೆನಿಯ ಪ್ರಕಾರ, ಅಮೆರಿಕದ ಅಧಿಕಾರಿಗಳು ವ್ಯಕ್ತಪಡಿಸಿರುವ ರಾಷ್ಟ್ರೀಯ ಭದ್ರತೆಯ ಕಳಕಳಿಯೇ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ.
ತಮಗೆ ತೋರಿಸಲಾಗಿರುವ ಸಾಕ್ಷ್ಯಗಳು ಇಷ್ಟೊಂದು ವ್ಯಾಪಕವಾದ ನಿಷೇಧವನ್ನು ಹೇರುವುದನ್ನು ಸಮರ್ಥಿಸುವುದಿಲ್ಲ ಎಂದು ಆಂಥ್ರೋಪಿಕ್ ಸಂಸ್ಥೆ ಹೇಳಿದೆ. ಆದರೂ, ಸರ್ಕಾರದ ನಿರ್ದೇಶನಕ್ಕೆ ತಲೆಬಾಗುವುದನ್ನು ಬಿಟ್ಟು ತಮಗೆ ಬೇರೆ ದಾರಿಯಿರಲಿಲ್ಲ ಎಂದು ತಿಳಿಸಿರುವ ಕಂಪೆನಿಯು, ಈ ಸೇವೆಗಳನ್ನು ಮರುಸ್ಥಾಪಿಸಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದೆ.
'ಮಿಥೋಸ್ 5' ಮತ್ತು 'ಫೇಬಲ್ 5' ಮೇಲಿನ ಈ ನಿಷೇಧವು ಜಗತ್ತಿನಾದ್ಯಂತ ತೀವ್ರ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಕೃತಕ ಬುದ್ಧಿಮತ್ತೆಯನ್ನು ಸರ್ಕಾರಗಳು ನಿಯಂತ್ರಿಸುವ ವಿಧಾನದಲ್ಲಿ ಈ ನಿರ್ಧಾರವು ಒಂದು ಭಾರೀ ಬದಲಾವಣೆಯನ್ನು ಸೂಚಿಸುತ್ತದೆ. ಇಲ್ಲಿಯವರೆಗೆ, ಇಂತಹ ನಿರ್ಬಂಧಗಳು ಕೇವಲ AI ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ಚಲಾಯಿಸಲು ಬಳಸುವ ಚಿಪ್ಗಳು ಹಾಗೂ ಹಾರ್ಡ್ವೇರ್ ಗಳ ಮೇಲಷ್ಟೇ ಸೀಮಿತವಾಗಿದ್ದವು. ಆದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರವೊಂದು ನೇರವಾಗಿ AI ಸಾಫ್ಟ್ವೇರ್ ಬಳಕೆಯನ್ನೇ ನಿರ್ಬಂಧಿಸಿದೆ.
ಹಾಗಾದರೆ ಅಸಲಿಗೆ ಅಲ್ಲಿ ನಡೆದಿದ್ದೇನು? ಅಮೆರಿಕ ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದು ಏಕೆ? ಜಾಗತಿಕ AI ಸ್ಪರ್ಧೆಯಲ್ಲಿ ಈ ನಿರ್ಧಾರವನ್ನು ಒಂದು ಮಹತ್ವದ ತಿರುವು ಎಂದು ಜನರು ಕರೆಯುತ್ತಿರುವುದು ಏಕೆ? ಈ ನಿಷೇಧಕ್ಕೆ ಕಾರಣವಾದ ಅಂಶಗಳು ಮತ್ತು ಜಗತ್ತಿನಾದ್ಯಂತ ಇರುವ ಬಳಕೆದಾರರು, ಕಂಪೆನಿಗಳು ಹಾಗೂ ದೇಶಗಳ ಮೇಲೆ ಇದು ಬೀರಬಹುದಾದ ಪರಿಣಾಮಗಳ ಕುರಿತಾದ ಮಾಹಿತಿ ಇಲ್ಲಿದೆ.
1. ಆಂಥ್ರೋಪಿಕ್ ಸಂಸ್ಥೆಗೆ ಅಮೆರಿಕ ಸರ್ಕಾರ ನೀಡಿರುವ ಆದೇಶಗಳೇನು?
ಆಂಥ್ರೋಪಿಕ್ ಸಂಸ್ಥೆಯು ಬಿಡುಗಡೆ ಮಾಡಿರುವ ಅಧಿಕೃತ ಸಾರ್ವಜನಿಕ ಪ್ರಕಟಣೆಯ ಪ್ರಕಾರ, ಜೂನ್ 12ರಂದು ತಮಗೆ ಅಮೆರಿಕ ಸರ್ಕಾರದಿಂದ ರಫ್ತು ನಿಯಂತ್ರಣದ ಕಟ್ಟುನಿಟ್ಟಿನ ನಿರ್ದೇಶನವೊಂದು ಬಂದಿದೆ. ಅದರಲ್ಲಿ, ವಿದೇಶಿ ಪ್ರಜೆಗಳಿಗೆ 'ಫೇಬಲ್ 5' ಮತ್ತು 'ಮಿಥೋಸ್ 5' ಮಾದರಿಗಳ ಲಭ್ಯತೆಯನ್ನು ತಕ್ಷಣವೇ ರದ್ದುಗೊಳಿಸುವಂತೆ ಆದೇಶಿಸಲಾಗಿದೆ. ಈ ನಿರ್ಬಂಧವು ಆಯಾ ವ್ಯಕ್ತಿಗಳು ಅಮೆರಿಕದ ಒಳಗಿದ್ದಾರೆಯೇ ಅಥವಾ ಹೊರಗಿದ್ದಾರೆಯೇ ಎಂಬುದನ್ನು ಪರಿಗಣಿಸದೆ ಎಲ್ಲರಿಗೂ ಅನ್ವಯಿಸುತ್ತದೆ. ಅಷ್ಟೇ ಅಲ್ಲದೆ, ಆಂಥ್ರೋಪಿಕ್ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿರುವ ವಿದೇಶಿ ಮೂಲದ ಉದ್ಯೋಗಿಗಳಿಗೂ ಈ ನಿಯಮ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.
ಇದರ ಪರಿಣಾಮವಾಗಿ, ಭಾರತೀಯರು ಮತ್ತು ಅಮೆರಿಕದವರಲ್ಲದ ಇತರ ವಿದೇಶಿ ನಾಗರಿಕರು ಇನ್ನು ಮುಂದೆ ಈ ಎರಡು ಮಾದರಿಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ಇತ್ಯರ್ಥಪಡಿಸಲು ತಾವು ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿರುವಾಗ, ಸರ್ಕಾರದ ನಿರ್ದೇಶನದ ವ್ಯಾಪ್ತಿಯು ತಮಗೆ ಈ ಮಾದರಿಗಳ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದನ್ನು ಬಿಟ್ಟು ಬೇರೆ ಯಾವುದೇ ಆಯ್ಕೆಯನ್ನು ಉಳಿಸಿಲ್ಲ ಎಂದು ಆಂಥ್ರೋಪಿಕ್ ಸಂಸ್ಥೆ ತಿಳಿಸಿದೆ.
"ಸರ್ಕಾರದ ಆದೇಶ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾದ ಕಾರಣ, ನಮ್ಮ ಎಲ್ಲಾ ಗ್ರಾಹಕರಿಗೂ ಫೇಬಲ್ 5 ಮತ್ತು ಮಿಥೋಸ್ 5 ಸೇವೆಗಳನ್ನು ನಾವು ತಕ್ಷಣವೇ ನಿಲ್ಲಿಸಬೇಕಾಗಿದೆ. ಆದರೆ, ಆಂಥ್ರೋಪಿಕ್ ಸಂಸ್ಥೆಯ ಇತರ ಎಲ್ಲಾ ಮಾದರಿಗಳ ಲಭ್ಯತೆಯ ಮೇಲೆ ಇದರಿಂದ ಯಾವುದೇ ಪರಿಣಾಮ ಬೀರಲ್ಲ" ಎಂದು ಕಂಪೆನಿ ಹೇಳಿದೆ.
2. ವಿದೇಶಿಗರು ಕ್ಲಾಡ್ ಫೇಬಲ್ 5 ಮತ್ತು ಮಿಥೋಸ್ 5 ಬಳಸದಂತೆ ಅಮೆರಿಕ ಸರ್ಕಾರ ನಿಷೇಧ ಹೇರಿದ್ದು ಏಕೆ?
ಆಂಥ್ರೋಪಿಕ್ ಸಂಸ್ಥೆಯ ಪ್ರಕಾರ, ಫೇಬಲ್ 5 ಮಾದರಿಯ ಸುರಕ್ಷತಾ ನಿರ್ಬಂಧಗಳನ್ನು ಮೀರಲು ಅಥವಾ ‘ಜೈಲ್ಬ್ರೇಕ್’ ಮಾಡಲು ದಾರಿಯಿದೆ ಎಂದು ಅಮೆರಿಕದ ಅಧಿಕಾರಿಗಳು ನಂಬಿದ್ದಾರೆ. ಇದರ ಮೂಲ ಮಾದರಿಯಾದ ಮಿಥೋಸ್ನಲ್ಲಿರುವ ಪ್ರಬಲ ಸೈಬರ್ ಭದ್ರತಾ ಸಾಮರ್ಥ್ಯಗಳನ್ನು ಬಳಕೆದಾರರು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು ಈ ಸುರಕ್ಷತಾ ನಿಯಮಗಳನ್ನು ರೂಪಿಸಲಾಗಿತ್ತು.
ಇಂತಹ ಅತ್ಯಾಧುನಿಕ AI ವ್ಯವಸ್ಥೆಗಳು ತಪ್ಪು ಜನರ ಕೈ ಸೇರಿದರೆ, ಅವುಗಳನ್ನು ತಂತ್ರಾಂಶದಲ್ಲಿನ ದೋಷಗಳನ್ನು ಹುಡುಕಲು ಅಥವಾ ಸೈಬರ್ ದಾಳಿಗಳನ್ನು ನಡೆಸಲು ಬಳಸಬಹುದು ಎಂಬುದು ಅಮೆರಿಕ ಸರ್ಕಾರದ ಆತಂಕವಾಗಿದೆ.
‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿಯ ಪ್ರಕಾರ, Amazon ಸಂಸ್ಥೆಯ ಸಂಶೋಧಕರು ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರಿಂದಲೂ ಈ ಆತಂಕಗಳು ಹುಟ್ಟಿಕೊಂಡಿವೆ. ಸಂಶೋಧಕರು ಕೆಲವು ನಿರ್ದಿಷ್ಟ ಪ್ರಾಂಪ್ಟ್ಗಳನ್ನು ಬಳಸುವ ಮೂಲಕ ಆಂಥ್ರೋಪಿಕ್ ಮಾದರಿಯು ಕೆಲವು ತಂತ್ರಾಂಶ ದೋಷಗಳ ಮಾಹಿತಿಯನ್ನು ಬಹಿರಂಗಪಡಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿದೆ. ಈ ಸಂಶೋಧನೆಯ ವಿವರಗಳನ್ನು ಅಮೆರಿಕದ ವಾಣಿಜ್ಯ ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಯಿತು. ಇದಾದ ನಂತರವೇ ಸಚಿವಾಲಯವು ಈ ಮಾದರಿಗಳ ಬಳಕೆಯನ್ನು ನಿರ್ಬಂಧಿಸುವಂತೆ ಆದೇಶ ಹೊರಡಿಸಿತು.
ಆದರೆ, ಈ ಸಮಸ್ಯೆಯು ಅತ್ಯಂತ ಸೀಮಿತವಾಗಿದ್ದು, ಕೇವಲ ಈಗಾಗಲೇ ತಿಳಿದಿರುವ ಕೆಲವೇ ಕೆಲವು ದೋಷಗಳಿಗೆ ಮಾತ್ರ ಸಂಬಂಧಿಸಿದೆ ಎಂದು ಆಂಥ್ರೋಪಿಕ್ ವಾದಿಸಿದೆ. ಸಾರ್ವಜನಿಕವಾಗಿ ಲಭ್ಯವಿರುವ ಇತರ AI ಮಾದರಿಗಳು ಕೂಡ ಇಂತಹ ದೋಷಗಳನ್ನು ಪತ್ತೆಹಚ್ಚಬಲ್ಲವು. ಹಾಗಾಗಿ ಈ ಸಣ್ಣ ಸಮಸ್ಯೆಗೆ ಇಡೀ ಜಗತ್ತಿನಾದ್ಯಂತ ಸಂಪೂರ್ಣ ನಿಷೇಧ ಹೇರುವುದು ಸರಿಯಲ್ಲ ಎಂಬುದು ಕಂಪೆನಿಯ ನಿಲುವು.
ಅಮೆರಿಕದ ಅಧಿಕಾರಿಗಳು ಈ ವಾದವನ್ನು ಒಪ್ಪುತ್ತಿಲ್ಲ. ಇಂತಹ ಶಕ್ತಿಶಾಲಿ AI ಮಾದರಿಗಳು ಬ್ಯಾಂಕುಗಳು, ಸರ್ಕಾರಿ ವ್ಯವಸ್ಥೆಗಳು ಮತ್ತು ಇತರ ಪ್ರಮುಖ ಮೂಲಸೌಕರ್ಯಗಳ ಮೇಲೆ ಸೈಬರ್ ದಾಳಿ ನಡೆಸಲು ದುರುಪಯೋಗವಾಗಬಹುದು ಎಂದು ಅವರು ಬಲವಾಗಿ ನಂಬಿದ್ದಾರೆ. ಇದರಿಂದಾಗಿಯೇ, ಅಮೆರಿಕದ ಅಧಿಕಾರಿಗಳು ಈಗ ಅತ್ಯಾಧುನಿಕ AI ಮಾದರಿಗಳನ್ನು ಕೇವಲ ಮತ್ತೊಂದು ತಂತ್ರಜ್ಞಾನದ ಉತ್ಪನ್ನವಾಗಿ ನೋಡುವ ಬದಲಿಗೆ, ದೇಶದ ರಾಷ್ಟ್ರೀಯ ಭದ್ರತೆಯ ವಿಷಯವಾಗಿ ಪರಿಗಣಿಸಲು ಆರಂಭಿಸಿದ್ದಾರೆ.
3. ಪ್ರವೇಶವನ್ನು ಮರುಸ್ಥಾಪಿಸಲು ಆಂಥ್ರೋಪಿಕ್ ಪ್ರಯತ್ನಿಸುತ್ತಿದೆ
ಯಾವುದೇ ವ್ಯಾಪಕವಾದ ಅಥವಾ ಅಪಾಯಕಾರಿ ಭದ್ರತಾ ವೈಫಲ್ಯ ನಡೆದಿರುವುದಕ್ಕೆ ಅಮೆರಿಕ ಸರ್ಕಾರವು ಸೂಕ್ತ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ಆಂಥ್ರೋಪಿಕ್ ಹೇಳಿದೆ.
ಕಂಪೆನಿಯ ಪ್ರಕಾರ, ಉಲ್ಲೇಖಿಸಲಾದ ‘ಜೈಲ್ಬ್ರೇಕ್’ ಅತ್ಯಂತ ಸೀಮಿತವಾಗಿದ್ದು, ಕೇವಲ ಈಗಾಗಲೇ ತಿಳಿದಿರುವ ಕೆಲವೇ ಕೆಲವು ತಂತ್ರಾಂಶ ದೋಷಗಳನ್ನು ಪತ್ತೆಹಚ್ಚಲು ಮಾತ್ರ ಶಕ್ತವಾಗಿತ್ತು. ಯಾವುದೇ ಸುರಕ್ಷತಾ ನಿಯಮಗಳನ್ನು ದಾಟದೆಯೇ, ಸಾರ್ವಜನಿಕವಾಗಿ ಲಭ್ಯವಿರುವ ಇತರ AI ಮಾದರಿಗಳು ಕೂಡ ಇಂತಹ ದೋಷಗಳನ್ನು ಪತ್ತೆಹಚ್ಚಬಲ್ಲವು ಎಂದು ಆಂಥ್ರೋಪಿಕ್ ವಾದಿಸಿದೆ.
ತಮ್ಮ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಅಮೆರಿಕ ಸರ್ಕಾರದ ಸಂಸ್ಥೆಗಳು, ಬ್ರಿಟನ್ನ ‘AI ಸೇಫ್ಟಿ ಇನ್ಸ್ಟಿಟ್ಯೂಟ್’ ಮತ್ತು ಸ್ವತಂತ್ರ ಸಂಶೋಧಕರೊಂದಿಗೆ ವಾರಗಳ ಕಾಲ ‘ಫೇಬಲ್ 5’ ಅನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಕಂಪೆನಿ ತಿಳಿಸಿದೆ. ಈ ವೇಳೆ ಮಾದರಿಯ ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ಮೀರಿಹೋಗಬಲ್ಲ ಯಾವುದೇ ಸಾರ್ವತ್ರಿಕ ‘ಜೈಲ್ಬ್ರೇಕ್’ ಅನ್ನು ಯಾರೂ ಪತ್ತೆಹಚ್ಚಿಲ್ಲ ಎಂದು ಕಂಪೆನಿ ಸ್ಪಷ್ಟಪಡಿಸಿದೆ.
ಈ ವಿಷಯದಲ್ಲಿ ಯಾವುದೋ ತಪ್ಪು ಅರ್ಥೈಸುವಿಕೆ ನಡೆದಿದೆ ಎಂದು ತಾವು ನಂಬಿರುವುದಾಗಿ ತಿಳಿಸಿರುವ ಆಂಥ್ರೋಪಿಕ್, ಈ ಸೇವೆಗಳನ್ನು ಆದಷ್ಟು ಬೇಗ ಮರುಸ್ಥಾಪಿಸಲು ಕೆಲಸ ಮಾಡುತ್ತಿರುವುದಾಗಿ ಹೇಳಿದೆ.
4. ಅಮೆರಿಕ ಸರ್ಕಾರ ಮತ್ತು ಆಂಥ್ರೋಪಿಕ್ ನಡುವಿನ ಸಂಘರ್ಷ
ಆಂಥ್ರೋಪಿಕ್ ಸಂಸ್ಥೆ ಮತ್ತು ಟ್ರಂಪ್ ಆಡಳಿತದ ಕೆಲವು ವಿಭಾಗಗಳ ನಡುವೆ ಕಳೆದ ಕೆಲವು ತಿಂಗಳುಗಳಿಂದ ಬೆಳೆಯುತ್ತಿದ್ದ ಭಿನ್ನಾಭಿಪ್ರಾಯಗಳ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.
ಈ ವರ್ಷದ ಆರಂಭದಲ್ಲಿ, ತಮ್ಮ AI ಮಾದರಿಗಳನ್ನು ದೇಶೀಯ ಮೇಲ್ವಿಚಾರಣೆ ಮತ್ತು ಸಂಪೂರ್ಣ ಸ್ವಾಯತ್ತ ಅಸ್ತ್ರ ವ್ಯವಸ್ಥೆಗಳಿಗೆ ಬಳಸಲು ಆಂಥ್ರೋಪಿಕ್ ನಿರಾಕರಿಸಿತ್ತು ಎನ್ನಲಾಗಿದೆ. ಈ ಭಿನ್ನಾಭಿಪ್ರಾಯವೇ ಹಲವಾರು ಸರ್ಕಾರಿ ಸಂಸ್ಥೆಗಳು ಮತ್ತು ರಕ್ಷಣಾ ಅಧಿಕಾರಿಗಳೊಂದಿಗೆ ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.
ಇದರೊಂದಿಗೆ, ಆಂಥ್ರೋಪಿಕ್ ಸಂಸ್ಥೆಯನ್ನು "ಸರಬರಾಜು ಸರಪಳಿ ಅಪಾಯ" ಎಂದು ಕರೆದ ಪೆಂಟಗನ್ ನಿರ್ಧಾರವನ್ನೂ ಕಂಪೆನಿಯು ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಆಂಥ್ರೋಪಿಕ್ ಸಂಸ್ಥೆಯು ಇತ್ತೀಚೆಗಷ್ಟೇ ಪ್ರಾಥಮಿಕ ಸಾರ್ವಜನಿಕ ಷೇರು ಮಾರಾಟಕ್ಕೆ (IPO) ರಹಸ್ಯವಾಗಿ ಅರ್ಜಿ ಸಲ್ಲಿಸಿದೆ. ಇದರಿಂದ ಕಂಪೆನಿಯ ಮೌಲ್ಯ ಸುಮಾರು 1 ಟ್ರಿಲಿಯನ್ ಡಾಲರ್ಗೆ ತಲುಪಬಹುದು ಎಂದು ಅಂದಾಜಿಸಲಾಗಿದ್ದು, ಜಗತ್ತಿನ ಅತ್ಯಂತ ಮೌಲ್ಯಯುತ AI ಸ್ಟಾರ್ಟ್ಅಪ್ಗಳಲ್ಲಿ ಒಂದಾಗಿ ಇದು ಗುರುತಿಸಿಕೊಳ್ಳಲಿದೆ.
5. ಭಾರತ ಮತ್ತು ಇತರ ದೇಶಗಳ ಮೇಲೆ ಪರಿಣಾಮ
ಇಲ್ಲಿಯವರೆಗೆ ಅಮೆರಿಕದ ನಿರ್ಬಂಧಗಳು ಕೇವಲ AI ಚಿಪ್ಗಳು ಮತ್ತು ಸೆಮಿಕಂಡಕ್ಟರ್ ತಂತ್ರಜ್ಞಾನಗಳ ಮೇಲಷ್ಟೇ ಸೀಮಿತವಾಗಿದ್ದವು. ಅದರಲ್ಲೂ ಪ್ರಮುಖವಾಗಿ ಚೀನಾ ದೇಶವು ಅತ್ಯಾಧುನಿಕ ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ಪಡೆದುಕೊಳ್ಳುವುದನ್ನು ತಡೆಯುವುದು ಅದರ ಉದ್ದೇಶವಾಗಿತ್ತು. ಆದರೆ, ಈಗ ಆಂಥ್ರೋಪಿಕ್ ಕಂಪೆನಿಯ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ವಾಷಿಂಗ್ಟನ್ ತನ್ನ ನೀತಿಯಲ್ಲಿ ಬದಲಾವಣೆ ತಂದಿರುವಂತೆ ಕಾಣುತ್ತಿದೆ. ಇದು ಸಾಫ್ಟ್ವೇರ್ ಬಳಕೆಯ ಪ್ರವೇಶಾವಕಾಶವನ್ನೂ ದೇಶದ ತಕ್ಷಣದ ರಾಷ್ಟ್ರೀಯ ಭದ್ರತೆಯ ವಿಷಯವಾಗಿ ಪರಿಗಣಿಸುತ್ತಿದೆ.
ಸರಳವಾಗಿ ಹೇಳುವುದಾದರೆ, ವಿಷಯ ಈಗ ಕೇವಲ AI ಅನ್ನು ಚಲಾಯಿಸುವ ಹಾರ್ಡ್ವೇರ್ ಅನ್ನು ನಿಯಂತ್ರಿಸುವುದಷ್ಟೇ ಆಗಿ ಉಳಿದಿಲ್ಲ. ಬದಲಿಗೆ ಜಗತ್ತಿನ ಅತ್ಯಂತ ಶಕ್ತಿಶಾಲಿ ಸಾಫ್ಟ್ವೇರ್ಗಳನ್ನು ಯಾರು ಬಳಸಬೇಕು ಮತ್ತು ಯಾರು ಬಳಸಬಾರದು ಎಂಬುದನ್ನು ಈಗ ಸರ್ಕಾರಗಳೇ ನೇರವಾಗಿ ನಿರ್ಧರಿಸುತ್ತಿವೆ.
ಈ ಬೆಳವಣಿಗೆಯು ಈಗ ಜಗತ್ತಿನಾದ್ಯಂತ ಆತಂಕವನ್ನು ಮೂಡಿಸಿದೆ. ವಾಸ್ತವವಾಗಿ, ಜೊಹೊ ಸಂಸ್ಥೆಯ ಸಂಸ್ಥಾಪಕ ಶ್ರೀಧರ್ ವೆಂಬು ಅವರು ಈ ನಿರ್ಬಂಧಗಳನ್ನು ಭಾರತಕ್ಕೆ ಎಚ್ಚರಿಕೆಯ ಗಂಟೆ ಎಂದು ಕರೆದಿದ್ದಾರೆ. ‘ಜಾಗತೀಕರಣ ಈಗ ಅಂತ್ಯಗೊಂಡಿದೆ’ ಎಂದು ಎಚ್ಚರಿಸಿರುವ ಅವರು, ಭಾರತವು ತನ್ನದೇ ಆದ ಸ್ವತಂತ್ರ AI ಸಾಮರ್ಥ್ಯಗಳನ್ನು ತಕ್ಷಣವೇ ವೃದ್ಧಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವೆಂಬು ಅವರ ಪ್ರಕಾರ, ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನಗಳು ನಮಗೆ ಯಾವಾಗಲೂ ಸಿಗುತ್ತಲೇ ಇರುತ್ತವೆ ಎಂದು ದೇಶಗಳು ಇನ್ನು ಮುಂದೆ ಕುಳಿತುಕೊಳ್ಳುವಂತಿಲ್ಲ. ಭಾರತವು ವಿದೇಶಿ AI ಕಂಪೆನಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗುವ ಬದಲು, ಸ್ವದೇಶಿ AI ಸಂಶೋಧನೆಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು ಮತ್ತು ಓಪನ್ ಸೋರ್ಸ್ ಮಾದರಿಗಳನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು ಎಂದು ಅವರು ವಾದಿಸಿದ್ದಾರೆ.
ಮುಂದೇನು?
ಸದ್ಯದ ಪರಿಸ್ಥಿತಿಯಲ್ಲಿ, ತಾವು ಅಮೆರಿಕ ಸರ್ಕಾರದ ನಿರ್ದೇಶನವನ್ನು ಪಾಲಿಸುತ್ತಿರುವುದಾಗಿ ತಿಳಿಸಿರುವ ಆಂಥ್ರೋಪಿಕ್ ಸಂಸ್ಥೆಯು, ಮಾತುಕತೆಗಳು ಮುಂದುವರಿದಿರುವ ಬೆನ್ನಲ್ಲೇ 'ಫೇಬಲ್ 5' ಮತ್ತು 'ಮಿಥೋಸ್ 5' ಮಾದರಿಗಳ ಪ್ರವೇಶಾವಕಾಶವನ್ನು ಸ್ಥಗಿತಗೊಳಿಸಿದೆ. ಸರ್ಕಾರದ ಆತಂಕಗಳು ಕೇವಲ ಒಂದು ಸಣ್ಣ ಸಮಸ್ಯೆಗೆ ಸಂಬಂಧಿಸಿದ್ದೇ ಹೊರತು ಯಾವುದೇ ದೊಡ್ಡ ಭದ್ರತಾ ಭೀತಿಯಲ್ಲ ಎಂದು ಕಂಪೆನಿ ವಾದಿಸುತ್ತಿದ್ದು, ಶೀಘ್ರದಲ್ಲೇ ಈ ಸೇವೆಗಳು ಮರುಸ್ಥಾಪನೆಯಾಗುವ ನಿರೀಕ್ಷೆಯಲ್ಲಿದೆ.
ಆದರೆ, ಇಲ್ಲಿನ ದೊಡ್ಡ ಪ್ರಶ್ನೆ ಕೇವಲ ಆಂಥ್ರೋಪಿಕ್ ಸಂಸ್ಥೆಗೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕ ಸರ್ಕಾರದ ಈ ಕ್ರಮವನ್ನು ಗಮನಿಸಿದರೆ, ಮುಂಬರುವ ದಿನಗಳಲ್ಲಿ ಅತ್ಯಾಧುನಿಕ AI ಮಾದರಿಗಳನ್ನು ಕೂಡ ಸೆಮಿಕಂಡಕ್ಟರ್ಗಳಂತೆಯೇ ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ. ಅಂದರೆ, ಇವುಗಳನ್ನು ಕೇವಲ ಮುಕ್ತ ಮಾರುಕಟ್ಟೆಗೆ ಬಿಡಲು ಸಾಧ್ಯವಿಲ್ಲದಷ್ಟು ದೇಶದ ಸುರಕ್ಷತೆ ಮತ್ತು ಪ್ರಗತಿಯ ದೃಷ್ಟಿಯಿಂದ ಪ್ರಮುಖವಾದ ತಂತ್ರಜ್ಞಾನಗಳು ಎಂದು ಸರ್ಕಾರಗಳು ಭಾವಿಸುತ್ತಿವೆ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರಿದರೆ, ಜಾಗತಿಕ ತಂತ್ರಜ್ಞಾನ ರಂಗದಲ್ಲಿ ಮುಂಚೂಣಿಯಲ್ಲಿ ಉಳಿಯಲು ಭಾರತದಂತಹ ದೇಶಗಳು ತಮ್ಮದೇ ಆದ ಸ್ವದೇಶಿ AI ಯೋಜನೆಗಳನ್ನು ತೀವ್ರಗೊಳಿಸುವುದನ್ನು ಬಿಟ್ಟು ಬೇರೆ ಯಾವುದೇ ಆಯ್ಕೆ ಉಳಿಯುವುದಿಲ್ಲ.






