ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೂವರು ಸಹೋದರಿಯರನ್ನು 30 ದಿನಗಳ ಕಾಲ ವಶಕ್ಕೆ ಪಡೆದಿರುವುದು ಯಾಕೆ?

Photo Credit: Facebook/@ImMuhammadSohailAfridi
ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್ (PTI) ಸಂಸ್ಥಾಪಕ ಮತ್ತು ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೂವರು ಸಹೋದರಿಯರನ್ನು ಲಾಹೋರ್ ನಲ್ಲಿ ಅಧಿಕಾರಿಗಳು ಕೇವಲ ಎರಡು ದಿನಗಳ ಅವಧಿಯಲ್ಲಿ ಬಂಧಿಸಿದ್ದಾರೆ.
ಖಾನ್ ಅವರು ಜೈಲಿನಲ್ಲಿರುವಾಗ ಅವರ ಕುಟುಂಬದ ಪ್ರಮುಖ ಮುಖವಾಗಿ ಗುರುತಿಸಿಕೊಂಡಿರುವ ಅಲೀಮಾ ಖಾನ್ ಅವರನ್ನು ಸೆಪ್ಟೆಂಬರ್ 20ರಂದು ಪಂಜಾಬ್ ಸಾರ್ವಜನಿಕ ಸುವ್ಯವಸ್ಥೆ ನಿರ್ವಹಣೆ (MPO) ಸುಗ್ರೀವಾಜ್ಞೆಯ ಅಡಿಯಲ್ಲಿ ವಶಕ್ಕೆ ಪಡೆಯಲಾಯಿತು. ಇದರ ಮರುದಿನ, ಡಾ. ಉಝ್ಮಾ ಖಾನ್ ಮತ್ತು ನೊರೀನ್ ನಿಯಾಜಿ ಅವರನ್ನು ಕೂಡ ಅದೇ ಕಾನೂನಿನ ಸೆಕ್ಷನ್ 3ರ ಅಡಿಯಲ್ಲಿ ಬಂಧಿಸಲಾಯಿತು.
ಈ ಮೂವರನ್ನು 30 ದಿನಗಳ ಕಾಲ ವಶದಲ್ಲಿರಿಸಲು ಆದೇಶಿಸಲಾಗಿದ್ದು, ಅವರನ್ನು ಲಾಹೋರ್ ನ ಕೋಟ್ ಲಖ್ ಪತ್ ಜೈಲಿಗೆ ಸ್ಥಳಾಂತರಿಸಲಾಗಿದೆ.
ಸೆಪ್ಟೆಂಬರ್ 27ರಂದು ಇಸ್ಲಾಮಾಬಾದ್ ಕಡೆಗೆ PTI ಪಕ್ಷವು ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ ಪ್ರತಿಭಟನೆ ಮತ್ತು ಸುದೀರ್ಘ ಪಾದಯಾತ್ರೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಈ ಬಂಧನಗಳು ನಡೆದಿವೆ.
ಇಮ್ರಾನ್ ಖಾನ್ ಅವರ ಬಿಡುಗಡೆ ಹಾಗೂ ‘ಸಂವಿಧಾನದ ಸರ್ವೋಚ್ಚ ಅಧಿಕಾರ’ಕ್ಕೆ ಒತ್ತಾಯಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪಕ್ಷವು ತಿಳಿಸಿದೆ.
►ಯಾವ ಆಧಾರದ ಮೇಲೆ ಇಮ್ರಾನ್ ಖಾನ್ ಅವರ ಸಹೋದರಿಯರನ್ನು ಬಂಧಿಸಲಾಗಿದೆ?
ಸಾರ್ವಜನಿಕ ಸುವ್ಯವಸ್ಥೆಯ ಕಾರಣಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಬಂಧಿಸಲು ಅವಕಾಶ ನೀಡುವ 1960ರ ಪಂಜಾಬ್ MPO ಸುಗ್ರೀವಾಜ್ಞೆಯ ಸೆಕ್ಷನ್ 3 ಅನ್ನು ಲಾಹೋರ್ ಆಡಳಿತವು ಅನ್ವಯಿಸಿದೆ.
ಉಝ್ಮಾ ಮತ್ತು ನೊರೀನ್ ಅವರ ವಿರುದ್ಧದ ಆದೇಶಗಳಲ್ಲಿ, ಈ ಇಬ್ಬರು ಮಹಿಳೆಯರು “ಸಾರ್ವಜನಿಕ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗೆ ಮಾರಕವಾಗಿದ್ದಾರೆ” ಎಂದು ಲಾಹೋರ್ ಉಪ ಆಯುಕ್ತರು ತಿಳಿಸಿದ್ದಾರೆ.
PTI ನಡೆಸಿದ ಮೇ 9ರ ಪ್ರತಿಭಟನೆಗಳಲ್ಲಿ ಇವರು ಭಾಗಿಯಾಗಿದ್ದರು ಮತ್ತು ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಪಾಸ್ತಿಗಳನ್ನು ಹಾನಿ ಮಾಡುವಂತೆ ಕಾರ್ಯಕರ್ತರನ್ನು “ಪ್ರಚೋದಿಸಿದ್ದರು” ಎಂದು ಆದೇಶದಲ್ಲಿ ಆರೋಪಿಸಲಾಗಿದೆ.
ಅಲ್ಲದೆ, ಇವರು ಸಾಮಾಜಿಕ ಜಾಲತಾಣಗಳು ಮತ್ತು ಸಾರ್ವಜನಿಕ ಸಭೆಗಳ ಮೂಲಕ ಮತ್ತೆ ಕಾರ್ಯಕರ್ತರನ್ನು ಸಂಘಟಿಸುತ್ತಿದ್ದಾರೆ, ಸರ್ಕಾರ ಹಾಗೂ ಸಂಸ್ಥೆಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ ಮತ್ತು ಜನರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮತ್ತಷ್ಟು ಆರೋಪಿಸಲಾಗಿದೆ. ಇವರನ್ನು ಸಾರ್ವಜನಿಕ ಶಾಂತಿಗೆ ಸಂಭಾವ್ಯ ಅಪಾಯ ಎಂದು ದೂಷಿಸಿರುವ ಆದೇಶದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಇವರ ಉಪಸ್ಥಿತಿಯು ಸಾರ್ವಜನಿಕ ಸುವ್ಯವಸ್ಥೆಯ ಭಂಗಕ್ಕೆ ಕಾರಣವಾಗಬಹುದು ಎಂದು ತಿಳಿಸಲಾಗಿದೆ.
ಅಲೀಮಾ ಮತ್ತು ಉಝ್ಮಾ ಅವರನ್ನು ಒಳಗೊಂಡ ಮತ್ತೊಂದು ಪ್ರತ್ಯೇಕ ಕಾನೂನು ಪ್ರಕರಣವೂ ಇದೆ. 2024ರ ಅಕ್ಟೋಬರ್ 4ರ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಪದೇ ಪದೇ ಹಾಜರಾಗಲು ವಿಫಲರಾದ ಕಾರಣ, ಜುಲೈ ತಿಂಗಳಲ್ಲಿ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು (ATC) ಈ ಇಬ್ಬರು ಮಹಿಳೆಯರನ್ನು ತಲೆಮರೆಸಿಕೊಂಡ ಅಪರಾಧಿಗಳು ಎಂದು ಘೋಷಿಸಿತು. ನ್ಯಾಯಾಲಯವು ಇವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ಗಳನ್ನು ಜಾರಿಗೊಳಿಸಿದೆ.
ಆದರೆ, ಇತ್ತೀಚಿನ ಬಂಧನಗಳನ್ನು ಆ ATC ತೀರ್ಪಿನ ಪರಿಣಾಮವಾಗಿ ಅಲ್ಲದೆ MPO ಅಡಿಯಲ್ಲಿ ಆದೇಶಿಸಲಾಗಿದೆ. ಅಲೀಮಾ ಅವರ ಸೆಪ್ಟೆಂಬರ್ 20ರ ಬಂಧನದ ಆದೇಶವೂ ಕೂಡ ಅವರನ್ನು ಇದೇ ರೀತಿಯಲ್ಲಿ 30 ದಿನಗಳ ಕಾಲ ಮುಂಜಾಗ್ರತಾ ಬಂಧನದಲ್ಲಿರಿಸಿದೆ. ಸೆಪ್ಟೆಂಬರ್ 27ರಂದು ಇಸ್ಲಾಮಾಬಾದ್ ಕಡೆಗೆ ಮೆರವಣಿಗೆ ಸೇರಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು PTI ಘೋಷಿಸಿರುವುದರಿಂದ ಈ ಸಮಯವು ಮಹತ್ವದ್ದಾಗಿದೆ. ಈ ಮೆರವಣಿಗೆಯ ವಿರುದ್ಧ ಸರ್ಕಾರ ಕಠಿಣ ನಿಲುವು ತಾಳಿದೆ.
ಸೆಪ್ಟೆಂಬರ್ 21ರಂದು ಮಾತನಾಡಿದ ಗೃಹ ಸಚಿವ ಮೊಹ್ಸಿನ್ ನಖ್ವಿ, ತನ್ನ ಕ್ರಮದಲ್ಲಿ ಸರ್ಕಾರವು “ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಹೇಳಿದರು. ಇಸ್ಲಾಮಾಬಾದ್ ನಲ್ಲಿ ಸಾರ್ವಜನಿಕ ರಸ್ತೆಗಳು, ಹೆದ್ದಾರಿಗಳು, ಇಂಟರ್ ಚೇಂಜ್ಗಳು, ಟೋಲ್ ಪ್ಲಾಝಾಗಳು ಅಥವಾ ಕಟ್ಟಡಗಳನ್ನು ಆಕ್ರಮಿಸಿಕೊಳ್ಳಲು ರಾಜಕೀಯ ಪಕ್ಷಗಳಿಗೆ ಮತ್ತು ಅವುಗಳ ನಾಯಕರಿಗೆ ಯಾವುದೇ ಕಾನೂನುಬದ್ಧ ಹಕ್ಕಿಲ್ಲ ಎಂದು ಸೆಪ್ಟೆಂಬರ್ 14ರಂದು ಇಸ್ಲಾಮಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಅವರು ಉಲ್ಲೇಖಿಸಿದರು. ಆ ಆದೇಶದ ಅನುಷ್ಠಾನವನ್ನು ಸರ್ಕಾರ ಖಚಿತಪಡಿಸಲಿದೆ ಎಂದು ನಖ್ವಿ ತಿಳಿಸಿದರು.
ಅಲ್ಲದೆ, ಹಿಂದಿನ PTI ಪ್ರದರ್ಶನಗಳು ರಾಜ್ಯದ ಆಸ್ತಿಗೆ ಹಾನಿಯನ್ನುಂಟುಮಾಡುವಲ್ಲಿ ಭಾಗಿಯಾಗಿದ್ದವು ಎಂದು ಆರೋಪಿಸಿದ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್, ಯಾವುದೇ “ಹಿಂಸಾತ್ಮಕ ಗುಂಪು” ಇಸ್ಲಾಮಾಬಾದ್ ಗೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದೂ ಹೇಳಿದರು.
ಮತ್ತೊಂದೆಡೆ, ತಾವು ಹಮ್ಮಿಕೊಂಡಿರುವ ಮೆರವಣಿಗೆಯು ಶಾಂತಿಯುತ ಮತ್ತು ರಾಜಕೀಯ ಸ್ವರೂಪದ್ದಾಗಿರುತ್ತದೆ ಎಂದು PTI ಸಮರ್ಥಿಸಿಕೊಂಡಿದೆ. ಈ ಸಹೋದರಿಯರ ಬಂಧನದ ಆದೇಶಗಳನ್ನು ಲಾಹೋರ್ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ.
►ಇಮ್ರಾನ್ ಖಾನ್ ಅವರ ಸಹೋದರಿಯರು ಯಾರು?
ಇಮ್ರಾನ್ ಖಾನ್ ಅವರಿಗೆ ನಾಲ್ವರು ಸಹೋದರಿಯರಿದ್ದಾರೆ: ರುಬೀನಾ ಖಾನುಮ್, ಅಲೀಮಾ ಖಾನುಮ್, ಉಝ್ಮಾ ಖಾನುಮ್ ಮತ್ತು ನೊರೀನ್ ನಿಯಾಝಿ.
ಇಮ್ರಾನ್ ಅವರ ತಂದೆ ಇಕ್ರಾಮುಲ್ಲಾ ಖಾನ್ ನಿಯಾಜಿ ಸಿವಿಲ್ ಇಂಜಿನಿಯರ್ ಆಗಿದ್ದರು, ಮತ್ತು ತಾಯಿ ಶೌಕತ್ ಖಾನುಮ್ ಗೃಹಿಣಿಯಾಗಿದ್ದರು. 1985ರಲ್ಲಿ ತಾಯಿ ಕ್ಯಾನ್ಸರ್ ನಿಂದ ನಿಧನರಾದದ್ದು, ಪಾಕಿಸ್ತಾನದ ಪ್ರಥಮ ವಿಶೇಷ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾದ ‘ಶೌಕತ್ ಖಾನುಮ್ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ವನ್ನು ಸ್ಥಾಪಿಸಲು ಇಮ್ರಾನ್ ಅವರಿಗೆ ಪ್ರೇರಣೆಯಾಯಿತು. 1994ರಲ್ಲಿ ಅಧಿಕೃತವಾಗಿ ಆರಂಭವಾದ ಈ ಆಸ್ಪತ್ರೆಯ ನಿರ್ಮಾಣ ಮತ್ತು ಅದಕ್ಕಾಗಿ ವರ್ಷಗಳ ಕಾಲ ನಡೆದ ನಿಧಿ ಸಂಗ್ರಹಣೆಯಲ್ಲಿ ಖಾನ್ ಅವರ ಸಹೋದರ-ಸಹೋದರಿಯರ ಪಾತ್ರವೂ ಇತ್ತು. ‘ಶೌಕತ್ ಖಾನುಮ್ ಮೆಮೋರಿಯಲ್ ಟ್ರಸ್ಟ್’ನ ವೆಬ್ಸೈಟ್ನಲ್ಲಿ ಆಡಳಿತ ಮಂಡಳಿಯಲ್ಲಿ ಅಲೀಮಾ ಮತ್ತು ಉಝ್ಮಾ ಅವರ ಹೆಸರುಗಳಿವೆ.
ಅಲೀಮಾ ಖಾನುಮ್ ಅವರು ಲಾಹೋರ್ ಮೂಲದ ‘ಕಾಟ್ಕಾಮ್ ಸೋರ್ಸಿಂಗ್’ (CotCom Sourcing (Pvt.) Ltd.) ಎಂಬ ಟೆಕ್ಸ್ಟೈಲ್ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. ಅವರು ಪಾಕಿಸ್ತಾನದ ಪ್ರಮುಖ ಕಾಲೇಜುಗಳಲ್ಲಿ ಒಂದಾದ ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್ಮೆಂಟ್ ಸೈನ್ಸಸ್ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಅವರು ಪಾಕಿಸ್ತಾನದಲ್ಲಿ ಆರ್ಥಿಕ ಮತ್ತು ಆಸ್ತಿ ವಿಚಾರದ ತನಿಖೆಗಳಿಗೂ ಒಳಗಾಗಿದ್ದಾರೆ. ನ್ಯೂಜೆರ್ಸಿಯಲ್ಲಿ ತಾನು ಘೋಷಿಸಿಕೊಳ್ಳದ ಫ್ಲ್ಯಾಟ್ಗಳನ್ನು ಹೊಂದಿದ್ದಾರೆ ಎಂದು 2019ರಲ್ಲಿ ‘ದಿ ನ್ಯೂಸ್’ ವರದಿ ಮಾಡಿತ್ತು.
73 ವರ್ಷ ವಯಸ್ಸಿನ ಇಮ್ರಾನ್ ಜೈಲಿನಲ್ಲಿರುವಾಗಿನಿಂದ, ಅಲೀಮಾ ಅವರು ತಮ್ಮ ಸಹೋದರನ ಕಷ್ಟಗಳು ಮತ್ತು ಆರೋಗ್ಯದ ಬಗ್ಗೆ ಮಾಧ್ಯಮಗಳೊಂದಿಗೆ ನಿಯಮಿತವಾಗಿ ಮಾತನಾಡುತ್ತಾ ಬಂದಿದ್ದಾರೆ.
ಉಝ್ಮಾ ಖಾನ್ ಅವರು ಲಾಹೋರ್ ಮೂಲದ ಸರ್ಜನ್ ಆಗಿದ್ದಾರೆ. 2023ರಲ್ಲಿ ತಮ್ಮ ಸಹೋದರ ಜೈಲಿಗೆ ಹೋದಾಗಿನಿಂದ ಅವರು ಕೂಡ ತಮ್ಮನ ಪರವಾಗಿ ಧ್ವನಿ ಎತ್ತುತ್ತಿದ್ದಾರೆ.
ನೊರೀನ್ ನಿಯಾಜಿ ಅವರ ಮಗ ಹಸನ್ ನಿಯಾಜಿ ಕೂಡ PTI ಪಕ್ಷದಲ್ಲಿದ್ದಾರೆ. ಇಮ್ರಾನ್ ಬಂಧನವನ್ನು ವಿರೋಧಿಸಿ 2023ರ ಮೇ 9ರಂದು ನಡೆದ ಪ್ರತಿಭಟನೆಗಳ ವೇಳೆ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ಮಿಲಿಟರಿ ನ್ಯಾಯಾಲಯವು ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಇದುವರೆಗೆ ಬಂಧನಕ್ಕೊಳಗಾಗದ ರುಬೀನಾ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನ ಹಳೆ ವಿದ್ಯಾರ್ಥಿನಿಯಾಗಿದ್ದು, ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ.
1995ರಲ್ಲಿ ಜೆಮಿಮಾ ಗೋಲ್ಡ್ಸ್ಮಿತ್ ಅವರು ಇಮ್ರಾನ್ ಖಾನ್ ಅವರನ್ನು ವಿವಾಹವಾಗಿದ್ದಾಗ, ಅವರ ಸಹೋದರಿಯರ ಕುರಿತು ಮಾತನಾಡಿ, “ಅವರು ಸುಶಿಕ್ಷಿತ, ಗಟ್ಟಿಯಾದ ಮತ್ತು ಸ್ವಂತ ಬದುಕನ್ನು ಹೊಂದಿರುವ ಮಹಿಳೆಯರಾಗಿದ್ದಾರೆ ಎಂಬುದನ್ನು ನೋಡುವುದು, ಪಾಕಿಸ್ತಾನಿ ಮಹಿಳೆಯರ ಜೀವನವು ಅಷ್ಟೇನು ಕತ್ತಲೆಯಲ್ಲಿಲ್ಲ ಎಂಬುದನ್ನು ಅರಿಯಲು ನನಗೆ ಸಹಾಯ ಮಾಡಿತು” ಎಂದು ಹೇಳಿದ್ದನ್ನು ಮ್ಯಾಗಝಿನ್ ಗಳಲ್ಲಿ ಉಲ್ಲೇಖಿಸಲಾಗಿತ್ತು.
ಸೌಜನ್ಯ: indianexpress.com






