ವಾಟ್ಸ್ಆ್ಯಪ್ ಯೂಸರ್ನೇಮ್ ವೈಶಿಷ್ಟ್ಯದ ಬಿಡುಗಡೆಯನ್ನು ಸ್ಥಗಿತಗೊಳಿಸುವಂತೆ ಭಾರತ ಸೂಚಿಸಿರುವುದು ಏಕೆ?

Photo Credit : WhatsApp
ನಕಲಿ ಗುರುತು ಬಳಸಿ ವಂಚನೆ ನಡೆಸುವುದು (impersonation) ಮತ್ತು ಇತರ ವಂಚನೆಗಳ ಆತಂಕದ ಹಿನ್ನೆಲೆಯಲ್ಲಿ, ಮೆಟಾ ಮಾಲೀಕತ್ವದ ವಾಟ್ಸ್ಆ್ಯಪ್ ಸಂಸ್ಥೆಗೆ ತನ್ನ ಮುಂಬರುವ 'ಯೂಸರ್ನೇಮ್' (ಬಳಕೆದಾರರ ಹೆಸರು) ವೈಶಿಷ್ಟ್ಯವನ್ನು ಬಿಡುಗಡೆ ಮಾಡದಂತೆ ಸರ್ಕಾರ ಸೂಚಿಸಿದೆ. ಬುಧವಾರ ಕಂಪೆನಿಗೆ ನೀಡಿರುವ ನೋಟಿಸ್ ನಲ್ಲಿ, ಮಾಹಿತಿ ತಂತ್ರಜ್ಞಾನ ಸಚಿವಾಲಯವು ಯೂಸರ್ನೇಮ್ ವೈಶಿಷ್ಟ್ಯದ ಕುರಿತು ವಿವರವಾದ ವಿವರಣೆಯನ್ನು ನೀಡಲು ವಾಟ್ಸ್ಆ್ಯಪ್ಗೆ ಮೂರು ದಿನಗಳ ಕಾಲಾವಕಾಶ ನೀಡಿದೆ.
ಈ ವಾರದ ಆರಂಭದಲ್ಲಿ, ಬಳಕೆದಾರರು ಯೂಸರ್ನೇಮ್ ಆಯ್ಕೆ ಮಾಡಿಕೊಳ್ಳಲು ಮತ್ತು ಮತ್ತೊಬ್ಬ ಬಳಕೆದಾರರನ್ನು ಮೊದಲ ಬಾರಿಗೆ ಸಂಪರ್ಕಿಸುವಾಗ ತಮ್ಮ ಫೋನ್ ಸಂಖ್ಯೆಯನ್ನು ಮರೆಮಾಚಲು ಹಂತಹಂತವಾಗಿ ಅವಕಾಶ ನೀಡುವುದಾಗಿ ವಾಟ್ಸ್ಆ್ಯಪ್ ಘೋಷಿಸಿತ್ತು. ಇದು ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಖಾತೆಗಾಗಿ ಆಯ್ಕೆ ಮಾಡಿಕೊಳ್ಳಬಹುದಾದ ಐಚ್ಛಿಕ ಹಾಗೂ ವಿಶಿಷ್ಟ ಗುರುತಾಗಿದೆ. ಫೋನ್ ಸಂಖ್ಯೆಯನ್ನು ರಹಸ್ಯವಾಗಿಟ್ಟುಕೊಂಡು, ವಾಟ್ಸ್ಆ್ಯಪ್ನಲ್ಲಿ ಇತರರಿಗೆ ಸಂದೇಶ ಕಳುಹಿಸಲು ಅಥವಾ ಕರೆ ಮಾಡಲು ಸಹ ಇದನ್ನು ಬಳಸಬಹುದು.
ಬಳಕೆದಾರರ ಫೋನ್ ಸಂಖ್ಯೆ ಇಲ್ಲದಿದ್ದಾಗ ಅವರನ್ನು ಸಂಪರ್ಕಿಸಲು ಅವರ ನಿಖರವಾದ ಯೂಸರ್ನೇಮ್ ತಿಳಿದಿರುವುದು ಕಡ್ಡಾಯವಾಗಿರುವುದರಿಂದ, ಈ ವೈಶಿಷ್ಟ್ಯವು ವಾಟ್ಸ್ಆ್ಯಪ್ ಸಂಭಾಷಣೆಗಳನ್ನು ಮತ್ತಷ್ಟು ಸುರಕ್ಷಿತ ಹಾಗೂ ಖಾಸಗಿಯಾಗಿಸಲಿದೆ ಎಂದು ಕಂಪೆನಿ ಹೇಳಿಕೊಳ್ಳುತ್ತಿದೆ. ಆದರೆ, ವಂಚಕರು ತಾವು ಅಲ್ಲದ ಬೇರೊಬ್ಬರಂತೆ ನಟಿಸಿ ಜನರ ದಾರಿ ತಪ್ಪಿಸಬಹುದು ಎಂಬ ಆತಂಕವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಟೆಲಿಗ್ರಾಮ್ ಮತ್ತು ಸಿಗ್ನಲ್ನಂತಹ ಮೆಸೇಜಿಂಗ್ ಆ್ಯಪ್ಗಳಲ್ಲಿ ಈಗಾಗಲೇ ಇಂತಹದ್ದೇ ವೈಶಿಷ್ಟ್ಯಗಳು ಜಾರಿಯಲ್ಲಿವೆ.
ಮುಂಬರುವ ತಿಂಗಳುಗಳಲ್ಲಿ ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡುವುದಾಗಿ ವಾಟ್ಸ್ಆ್ಯಪ್ ಈ ಹಿಂದೆ ತಿಳಿಸಿತ್ತು. ಸರ್ಕಾರದ ನೋಟಿಸ್ಗೆ ಪ್ರತಿಕ್ರಿಯಿಸಿರುವ ಕಂಪೆನಿಯು, ಈ ಯೂಸರ್ನೇಮ್ ವೈಶಿಷ್ಟ್ಯದ ಸುತ್ತ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದೆ.
►ವಾಟ್ಸ್ಆ್ಯಪ್ ಯೂಸರ್ನೇಮ್ ವೈಶಿಷ್ಟ್ಯದ ಬಗ್ಗೆ ಸರ್ಕಾರ ಆತಂಕಗೊಂಡಿರುವುದು ಏಕೆ?
ಈ ವೈಶಿಷ್ಟ್ಯವು ವಂಚಕರಿಗೆ ಮುಗ್ಧ ಬಳಕೆದಾರರನ್ನು ಸಂಪರ್ಕಿಸಲು ಮತ್ತು ಅವರಿಗೆ ಸಂದೇಶ ಕಳುಹಿಸಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಆನ್ಲೈನ್ ವಂಚನೆ, ಫಿಶಿಂಗ್, ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ ಗಳು ಹಾಗೂ ಬೇರೊಬ್ಬರಂತೆ ನಟಿಸಿ ವಂಚಿಸುವ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಬಹುದು ಎಂದು ಸರ್ಕಾರ ತನ್ನ ನೋಟಿಸ್ನಲ್ಲಿ ವಾಟ್ಸ್ಆ್ಯಪ್ ಗೆ ತಿಳಿಸಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಅಸಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಹೆಸರುಗಳನ್ನು ಹೋಲುವಂತಹ ಯೂಸರ್ನೇಮ್ಗಳನ್ನು ಬಳಸಲು ಅವಕಾಶ ನೀಡುವುದರಿಂದ ವ್ಯಕ್ತಿಗಳು, ಸಾರ್ವಜನಿಕ ಅಧಿಕಾರಿಗಳು, ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರಿ ಏಜೆನ್ಸಿಗಳ ಹೆಸರಿನಲ್ಲಿ ನಕಲಿ ಗುರುತು ಸೃಷ್ಟಿಸಿ ವಂಚಿಸಲು ಇದು ದಾರಿ ಮಾಡಿಕೊಡಬಹುದು ಎಂದು ಸರ್ಕಾರ ಎಚ್ಚರಿಸಿದೆ.
ಕೇಂದ್ರ ಗೃಹ ಸಚಿವಾಲಯವು ಈ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಮುಂದೆ ಕಳವಳ ವ್ಯಕ್ತಪಡಿಸಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರವು ಈ ಹೊಸ ವೈಶಿಷ್ಟ್ಯದ ಅಪಾಯಗಳ ಮೌಲ್ಯಮಾಪನ ಮಾಡಲಿದ್ದು, ಇದು ಪ್ರಸ್ತುತ ಇರುವ ಕಾನೂನು ಚೌಕಟ್ಟನ್ನು ಉಲ್ಲಂಘಿಸುತ್ತದೆಯೇ ಎಂಬುದನ್ನು ಪರಿಶೀಲಿಸಲಿದೆ.
"ಪ್ರಸ್ತುತ ನಮಗೆ ತಿಳಿದುಬಂದಿರುವ ಪ್ರಕಾರ, ವಂಚಕರು ಪ್ರಮುಖ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಘಟನೆಗಳ ಹೆಸರುಗಳನ್ನು ಅಥವಾ ಅವುಗಳನ್ನು ಹೋಲುವ ಯೂಸರ್ನೇಮ್ಗಳನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಬಳಿಕ ಅವರು ತಾವು ಅಲ್ಲದ ಬೇರೊಬ್ಬರಂತೆ ನಟಿಸಿ ಇತರ ಬಳಕೆದಾರರಿಗೆ ಸಂದೇಶ ಕಳುಹಿಸಬಹುದು. ತಾಂತ್ರಿಕ ಜ್ಞಾನ ಕಡಿಮೆ ಇರುವ ಜನರಿಗೆ ಈ ವ್ಯತ್ಯಾಸವನ್ನು ಗುರುತಿಸುವುದು ದೊಡ್ಡ ಸವಾಲಾಗಬಹುದು. ಈಗಾಗಲೇ ವಾಟ್ಸ್ಆ್ಯಪ್ ಮೂಲಕ ಡಿಜಿಟಲ್ ಅರೆಸ್ಟ್ನಂತಹ ನಕಲಿ ಗುರುತಿನ ವಂಚನೆಗಳನ್ನು ನಾವು ನೋಡುತ್ತಿದ್ದೇವೆ. ಈ ಹೊಸ ವೈಶಿಷ್ಟ್ಯವು ವಂಚಕರಿಗೆ ಇನ್ನಷ್ಟು ಸಹಾಯ ಮಾಡಬಹುದು" ಎಂದು ಹೆಸರು ಹೇಳಲು ಇಚ್ಛಿಸದ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಉಲ್ಲೇಖಿಸಿದೆ.
"ನಮ್ಮ ಆಂತರಿಕ ಮೌಲ್ಯಮಾಪನ ಮತ್ತು ವಾಟ್ಸ್ಆ್ಯಪ್ ಮುಂದಿನ ವಿಚಾರಣೆಯ ಸಮಯದಲ್ಲಿ, ಇಂತಹ ವಂಚನೆಗಳನ್ನು ತಡೆಯಲು ಅಗತ್ಯ ಸುರಕ್ಷತಾ ಕ್ರಮಗಳಿಲ್ಲ ಎಂದು ನಮಗೆ ಅನಿಸಿದರೆ, ಈ ವೈಶಿಷ್ಟ್ಯದ ಬಿಡುಗಡೆಯನ್ನು ಸಂಪೂರ್ಣವಾಗಿ ತಡೆಯಬೇಕೇ ಎಂಬುದರ ಬಗ್ಗೆಯೂ ಸರ್ಕಾರ ಆಲೋಚಿಸಬಹುದು" ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಭಾರತೀಯ ತಂತ್ರಜ್ಞಾನ ವಲಯದ ಕೆಲವು ತಜ್ಞರು ಸಹ ಈ ಯೂಸರ್ನೇಮ್ ವೈಶಿಷ್ಟ್ಯದಿಂದ ಎದುರಾಗಬಹುದಾದ ನಕಲಿ ಗುರುತಿನ ವಂಚನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರು, ಸೂಕ್ತ ಸುರಕ್ಷತಾ ಕ್ರಮಗಳಿಲ್ಲದಿದ್ದರೆ ಇಂತಹ ಒಂದೇ ತರಹದ ಯೂಸರ್ನೇಮ್ಗಳು ನಕಲಿ ಗುರುತು ಸೃಷ್ಟಿಸಿ ವಂಚಿಸಲು ದೊಡ್ಡ ಮಾರ್ಗಗಳಾಗಬಹುದು ಎಂದು ಎಚ್ಚರಿಸಿದ್ದಾರೆ. ಶೀಘ್ರದಲ್ಲೇ ನೀವು ವಾಟ್ಸ್ಆ್ಯಪ್ನಲ್ಲಿ ವೆರಿಫೈಡ್ ಯೂಸರ್ನೇಮ್ಗಳನ್ನು ನೋಡುತ್ತೀರಿ, ಜೊತೆಗೆ ಅದೇ ರೀತಿ ಕೇಳಿಸುವ ಅನ್ವೆರಿಫೈಡ್ ಯೂಸರ್ನೇಮ್ಗಳನ್ನೂ ಕಾಣುತ್ತೀರಿ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಮೊಬಿಕ್ವಿಕ್ ಸಿಇಒ ಬಿಪಿನ್ ಪ್ರೀತ್ ಸಿಂಗ್ ಅವರು ಎಕ್ಸ್ನಲ್ಲಿ ಪ್ರತಿಕ್ರಿಯಿಸಿ, "ಇದು ಖಂಡಿತಾ ಒಳ್ಳೆಯ ಆಲೋಚನೆಯಲ್ಲ. ಇದು ವಂಚನೆ ಮತ್ತು ನಕಲಿ ಗುರುತುಗಳ ಹಾವಳಿಗೆ ಕಾರಣವಾಗುತ್ತದೆ. ಉದಾಹರಣೆಗೆ, ನಾನು ಪರಿಶೀಲಿಸಿದಾಗ, ನನ್ನ ಹೆಸರಿನ ಬಹುತೇಕ ಎಲ್ಲಾ ರೂಪಾಂತರಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಇದನ್ನು ಯಾವುದಕ್ಕಾಗಿ ಬಳಸಬಹುದು ಎಂದು ಆಶ್ಚರ್ಯವಾಗುತ್ತಿದೆ" ಎಂದಿದ್ದಾರೆ.
►ವಾಟ್ಸ್ಆ್ಯಪ್ ನ ಸಮರ್ಥನೆ
ನಕಲಿ ಗುರುತಿನ ವಂಚನೆಗಳನ್ನು ತಡೆಗಟ್ಟಲು, ಸಾರ್ವಜನಿಕ ಪ್ರಮುಖ ವ್ಯಕ್ತಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಸೆಲೆಬ್ರಿಟಿಗಳ ಪ್ರಮುಖ ಹೆಸರುಗಳನ್ನು ಕಾಯ್ದಿರಿಸಲಾಗಿದೆ ಎಂದು ವಾಟ್ಸ್ಆ್ಯಪ್ ವಕ್ತಾರರು ತಿಳಿಸಿದ್ದಾರೆ.
"ಜನರು ತಮ್ಮಿಷ್ಟದ ಯೂಸರ್ನೇಮ್ ಅನ್ನು ವಾಟ್ಸ್ಆ್ಯಪ್ ನಲ್ಲಿ ಕಾಯ್ದಿರಿಸಿಕೊಳ್ಳುವ (ರಿಸರ್ವ್) ಆಯ್ಕೆಯನ್ನು ನಾವು ಪ್ರಕಟಿಸಿದ್ದೇವೆ. ಯೂಸರ್ನೇಮ್ ಬಳಸುವ ಈ ವೈಶಿಷ್ಟ್ಯವು ಇನ್ನೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ ಮತ್ತು ಈ ವರ್ಷದ ಕೊನೆಯಲ್ಲಿ ಹಂತಹಂತವಾಗಿ ಬಿಡುಗಡೆಯಾಗಲಿದೆ. ನಕಲಿ ಗುರುತಿನ ವಂಚನೆಯಿಂದ ರಕ್ಷಿಸಲು, ನಾವು ಸಾರ್ವಜನಿಕ ವ್ಯಕ್ತಿಗಳು, ಸರ್ಕಾರಿ ಸಂಸ್ಥೆಗಳು, ಸೆಲೆಬ್ರಿಟಿಗಳು ಮತ್ತು ವೆರಿಫೈಡ್ ಮೆಟಾ ಖಾತೆಗಳಂತಹ ಅತ್ಯುನ್ನತ ಪ್ರೊಫೈಲ್ ಹೆಸರುಗಳನ್ನು ಕಾಯ್ದಿರಿಸಿದ್ದೇವೆ. ಇದರಿಂದ ಅವುಗಳನ್ನು ಕೇವಲ ನಿಜವಾದ ಮಾಲೀಕರು ಮಾತ್ರ ಪಡೆಯಬಹುದು. ಜೊತೆಗೆ, ಪ್ರಸಿದ್ಧ ಹೆಸರುಗಳನ್ನು ಹೋಲುವ ಇತರ ಹೆಸರುಗಳನ್ನೂ ಸಹ ತಡೆಹಿಡಿಯಲಾಗಿದೆ" ಎಂದು ವಕ್ತಾರರು ಹೇಳಿದ್ದಾರೆ.
"ವಾಟ್ಸ್ಆ್ಯಪ್ ಬಳಸಲು ಬಳಕೆದಾರರಿಗೆ ಇನ್ನೂ ಫೋನ್ ಸಂಖ್ಯೆಯ ಅಗತ್ಯವಿರುತ್ತದೆ ಮತ್ತು ಯೂಸರ್ನೇಮ್ಗಳ ಮೂಲಕ ನಡೆಯುವ ವಂಚನೆಗಳ ವಿರುದ್ಧ ನಾವು ಹಲವು ಹಂತಗಳ ಸುರಕ್ಷತಾ ವ್ಯವಸ್ಥೆಯನ್ನು ರೂಪಿಸಿದ್ದೇವೆ. ಬೇರೆಯವರು ನಿಮಗೆ ಸಂದೇಶ ಕಳುಹಿಸಲು ನಿಮ್ಮ ನಿಖರವಾದ ಯೂಸರ್ನೇಮ್ ತಿಳಿದಿರಬೇಕಾಗುತ್ತದೆ. ಒಂದು ಖಾತೆಯು ಎಷ್ಟು ಹೊಸ ಜನರನ್ನು ಸಂಪರ್ಕಿಸಬಹುದು ಎಂಬುದನ್ನು ನಾವು ನಿಯಮಿತಗೊಳಿಸುತ್ತೇವೆ. ಯಾರದ್ದಾದರೂ ಯೂಸರ್ನೇಮ್ ಕೀ (Key)ಯನ್ನು ಪದೇ ಪದೇ ಊಹಿಸುವ ಪ್ರಯತ್ನಗಳನ್ನು ನಿರ್ಬಂಧಿಸುತ್ತೇವೆ ಮತ್ತು ನಕಲಿ ಗುರುತು ಹಾಗೂ ದುರುಪಯೋಗದ ಮಾದರಿಗಳನ್ನು ಪತ್ತೆಹಚ್ಚುವ ವ್ಯವಸ್ಥೆಯನ್ನು ಹೊಂದಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಈ ವೈಶಿಷ್ಟ್ಯವನ್ನು ಪ್ರಕಟಿಸುವ ಸಂದರ್ಭದಲ್ಲಿ ಬರೆದಿದ್ದ ಬ್ಲಾಗ್ ಪೋಸ್ಟ್ ನಲ್ಲಿ ವಾಟ್ಸ್ಆ್ಯಪ್, "ಯೂಸರ್ನೇಮ್ಗಳು ವಾಟ್ಸ್ಆ್ಯಪ್ ಅನ್ನು ಇನ್ನಷ್ಟು ಖಾಸಗಿಯಾಗಿಸಲು ನಾವು ಇಟ್ಟಿರುವ ಇತ್ತೀಚಿನ ಹೆಜ್ಜೆಯಾಗಿದೆ. ಇಲ್ಲಿ ಹುಡುಕಲು ಯಾವುದೇ ಡೈರೆಕ್ಟರಿ ಅಥವಾ ಸಲಹೆಗಳು ಇರುವುದಿಲ್ಲ. ಜನರು ನಿಮ್ಮನ್ನು ಮೊದಲ ಬಾರಿಗೆ ಸಂಪರ್ಕಿಸಲು ನಿಮ್ಮ ನಿಖರವಾದ ಯೂಸರ್ನೇಮ್ ಅನ್ನೇ ತಿಳಿದುಕೊಂಡಿರಬೇಕು" ಎಂದು ಹೇಳಿತ್ತು.
ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯವಾಗಿ ಮತ್ತು ತಮ್ಮ ಯೂಸರ್ನೇಮ್ ಬಳಸಿ ವಾಟ್ಸ್ಆ್ಯಪ್ನಲ್ಲಿ ಯಾರು ತಮ್ಮನ್ನು ಸಂಪರ್ಕಿಸಬಹುದು ಎಂಬುದನ್ನು ಬಳಕೆದಾರರೇ ನಿಯಂತ್ರಿಸಲು ಅನುಕೂಲವಾಗುವಂತೆ, ಪ್ಲಾಟ್ಫಾರ್ಮ್ ಒಂದು ಐಚ್ಛಿಕ 'ಯೂಸರ್ನೇಮ್ ಕೀ'ಯನ್ನು ಸಹ ಸಿದ್ಧಪಡಿಸಿದೆ. ಬಳಕೆದಾರರಿಗೆ ಸಂದೇಶ ಕಳುಹಿಸಲು ಇತರರು ಇದನ್ನು ತಿಳಿದುಕೊಳ್ಳಬೇಕಾಗುತ್ತದೆ.
"ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಇಲ್ಲದ ಯಾರಿಗಾದರೂ ನೀವು ಮೊದಲ ಬಾರಿಗೆ ಸಂದೇಶ ಕಳುಹಿಸಿದಾಗ, ಅವರು ಯಾರೊಂದಿಗೆ ಸಂಪರ್ಕ ಹೊಂದುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಮತ್ತು ಅನಗತ್ಯ ಸಂಪರ್ಕಗಳನ್ನು ತಪ್ಪಿಸಿ ಸುರಕ್ಷಿತವಾಗಿರಲು, ನಿಮ್ಮ ಫೋನ್ ಸಂಖ್ಯೆಯು ಅವರ ದೇಶಕ್ಕಿಂತ ಭಿನ್ನವಾದ ದೇಶದಲ್ಲಿ ನೋಂದಾಯಿಸಲ್ಪಟ್ಟಿದೆಯೇ ಎಂಬುದನ್ನು ನಾವು ಹಂಚಿಕೊಳ್ಳಬಹುದು" ಎಂದು ವಾಟ್ಸ್ಆ್ಯಪ್ ಹೇಳಿದೆ.
ಈ ವೈಶಿಷ್ಟ್ಯವು ಇನ್ನೂ ಸಂಪೂರ್ಣವಾಗಿ ಬಿಡುಗಡೆಯಾಗಿಲ್ಲ ಮತ್ತು ಇತರ ಬಳಕೆದಾರರೊಂದಿಗೆ ಹೆಸರುಗಳು ಓವರ್ಲ್ಯಾಪ್ ಆಗುವುದನ್ನು ತಪ್ಪಿಸಲು ವಾಟ್ಸ್ಆ್ಯಪ್ ಸದ್ಯಕ್ಕೆ ಬಳಕೆದಾರರಿಗೆ ಯೂಸರ್ನೇಮ್ ಅನ್ನು "ರಿಸರ್ವ್" ಮಾಡಲು ಮಾತ್ರ ಅವಕಾಶ ನೀಡುತ್ತಿದೆ. ಇಂಟರ್ನೆಟ್ನಲ್ಲಿ ತಮ್ಮದೇ ಆದ ಸ್ಥಿರ ಗುರುತನ್ನು ಕಾಯ್ದುಕೊಳ್ಳಲು ಬಯಸುವ ಕಂಟೆಂಟ್ ಕ್ರಿಯೇಟರ್ಗಳು, ಸಣ್ಣ ಉದ್ಯಮಗಳು ಮತ್ತು ಸಂಸ್ಥೆಗಳಿಗೆ, ವಾಟ್ಸ್ಆ್ಯಪ್ನಲ್ಲಿ ತಮ್ಮ ಅಸ್ತಿತ್ವದಲ್ಲಿರುವ ಇನ್ಸ್ಟಾಗ್ರಾಮ್ ಅಥವಾ ಫೇಸ್ಬುಕ್ ಯೂಸರ್ನೇಮ್ ಅನ್ನೇ ಹೊಂದುವ ಆಯ್ಕೆಯನ್ನು ವಾಟ್ಸ್ಆ್ಯಪ್ ನೀಡಲಿದೆ.
ನಕಲಿ ಗುರುತು ಬಳಸಿ ನಡೆಸುವ ದುರುಪಯೋಗವನ್ನು ತಾವು "ಗಂಭೀರವಾಗಿ" ಪರಿಗಣಿಸುವುದಾಗಿ ಮತ್ತು ಬೇರೊಬ್ಬರಂತೆ ನಟಿಸುವ ಬಳಕೆದಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕಂಪೆನಿ ಹೇಳಿದೆ.
"ವಾಟ್ಸ್ಆ್ಯಪ್ ನಕಲಿ ಗುರುತು ಮತ್ತು ದುರುಪಯೋಗವನ್ನು ಗಂಭೀರವಾಗಿ ಪರಿಗಣಿಸುತ್ತದೆ. ಇತರ ವಾಟ್ಸ್ಆ್ಯಪ್ ಬಳಕೆದಾರರನ್ನು ವಂಚಿಸುವ ಉದ್ದೇಶದಿಂದ ಯಾರಾದರೂ ವಾಟ್ಸ್ಆ್ಯಪ್ನಲ್ಲಿ ನಿಮ್ಮಂತೆ ಅಥವಾ ಬೇರೆಯವರಂತೆ ನಟಿಸುತ್ತಿದ್ದಾರೆ ಎಂದು ನಿಮಗೆ ಅನಿಸಿದರೆ, ಅಥವಾ ವಾಟ್ಸ್ಆ್ಯಪ್ ಯೂಸರ್ನೇಮ್ಗಳನ್ನು ಖರೀದಿಸಲು, ಮಾರಾಟ ಮಾಡಲು ಅಥವಾ ವ್ಯಾಪಾರ ಮಾಡಲು ಪ್ರಯತ್ನಿಸುತ್ತಿದ್ದರೆ, ನಮ್ಮ ಬಳಕೆದಾರರನ್ನು ರಕ್ಷಿಸಲು ನಾವು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಅನುವಾಗುವಂತೆ ನೀವು ಆ ಬಳಕೆದಾರರ ಮತ್ತು ಯಾವುದೇ ಅನುಮಾನಾಸ್ಪದ ಸಂದೇಶಗಳ ಬಗ್ಗೆ ರಿಪೋರ್ಟ್ ಮಾಡಬೇಕು" ಎಂದು ವಾಟ್ಸ್ಆ್ಯಪ್ ತನ್ನ ಹೆಲ್ಪ್ ಸೆಂಟರ್ನ ನವೀಕರಣದಲ್ಲಿ ತಿಳಿಸಿದೆ.
ಜೊತೆಗೆ, ತನ್ನ ಸೇವಾ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಭಾವಿಸುವ ಯೂಸರ್ನೇಮ್ಗಳನ್ನು ತೆಗೆದುಹಾಕುವುದಾಗಿ ಅಥವಾ ಅಂತಹ ಖಾತೆಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಹೇಳಿದೆ.
ಪರಿಶೀಲನೆಯ ನಂತರ, ಕಂಪೆನಿಯು ತನ್ನ ಸೇವಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಭಾವಿಸುವ ಯೂಸರ್ನೇಮ್ ಗಳನ್ನು ತೆಗೆದುಹಾಕಬಹುದು ಅಥವಾ ಖಾತೆಗಳನ್ನು ನಿಷೇಧಿಸಬಹುದು.






