ಸಕ್ಕರೆ ದರ ಏರಿಕೆಗೆ ಎಥನಾಲ್ ತಯಾರಿಕೆಯೇ ಕಾರಣವಲ್ಲ; ಯಾಕೆ?

ಸಾಂದರ್ಭಿಕ ಚಿತ್ರ (AI)
ದಸರಾ ಮತ್ತು ದೀಪಾವಳಿ ಹಬ್ಬಗಳು ಹತ್ತಿರವಾಗುತ್ತಿವೆ. ಆದರೆ, ಹಬ್ಬದ ಸಂಭ್ರಮಕ್ಕೂ ಮುನ್ನವೇ ಸಕ್ಕರೆ ಬೆಲೆ ಏರಿಕೆಯಾಗಿದ್ದು, ಜನರ ಜೇಬಿಗೆ ಹೊರೆಯಾಗುತ್ತಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಕಾರ, ಪ್ರಸ್ತುತ ದೇಶಾದ್ಯಂತ ಸಕ್ಕರೆಯ ಸರಾಸರಿ ಚಿಲ್ಲರೆ ದರ ಕೆ.ಜಿ.ಗೆ 65 ರೂಪಾಯಿಯಾಗಿದೆ. ಜುಲೈ 21ರಂದು ಈ ದರ 45 ರೂಪಾಯಿ ಇತ್ತು ಹಾಗೂ ಜುಲೈ 31ರ ವೇಳೆಗೆ 50 ರೂಪಾಯಿಗೆ ಏರಿಕೆಯಾಗಿತ್ತು.
ಸರಳವಾಗಿ ಹೇಳುವುದಾದರೆ, ದೀಪಾವಳಿಯ ಪ್ರತಿಯೊಂದು ಸಿಹಿತಿಂಡಿ ಹಾಗೂ ಕ್ಯಾಡ್ಬರಿ ಸೆಲೆಬ್ರೇಷನ್ಸ್, ನೆಸ್ಲೆ ಕಿಟ್ ಕ್ಯಾಟ್ ಅಥವಾ ಫೆರೆರೊ ರೊಚೆರ್ ಚಾಕೊಲೇಟ್ ಗಳಿಗೆ ಅತ್ಯಂತ ಪ್ರಮುಖ ಪದಾರ್ಥವಾಗಿರುವ ಸಕ್ಕರೆಯ ಚಿಲ್ಲರೆ ಬೆಲೆ ಕೇವಲ ಒಂದೇ ತಿಂಗಳಲ್ಲಿ ಕೆ.ಜಿ.ಗೆ 20 ರೂಪಾಯಿಯಷ್ಟು ಏರಿಕೆಯಾಗಿದೆ.
ಎಕ್ಸ್-ಫ್ಯಾಕ್ಟರಿ ಸಕ್ಕರೆ ದರವು ಗಣನೀಯವಾಗಿ ಏರಿಕೆಯಾಗಿದೆ. ಆಗಸ್ಟ್ 20ರ ವೇಳೆಗೆ ಉತ್ತರ ಪ್ರದೇಶದಲ್ಲಿ ಈ ದರ ಕೆ.ಜಿ.ಗೆ 57–60 ರೂಪಾಯಿ, ಮಹಾರಾಷ್ಟ್ರದಲ್ಲಿ 62.5–64 ರೂಪಾಯಿ ಮತ್ತು ಕರ್ನಾಟಕದಲ್ಲಿ 63–64 ರೂಪಾಯಿ ತಲುಪಿದೆ. ಆದರೆ, ಆಗಸ್ಟ್ 1ರಂದು ಈ ರಾಜ್ಯಗಳಲ್ಲಿ ದರವು ಕ್ರಮವಾಗಿ 44.95–46.7 ರೂಪಾಯಿ, 46.2–46.9 ರೂಪಾಯಿ ಮತ್ತು 46.25–47 ರೂಪಾಯಿಯಷ್ಟಿತ್ತು.
►ಈ ದಿಢೀರ್ ಬೆಲೆ ಏರಿಕೆಗೆ ಕಾರಣವೇನು?
ದೇಶದಲ್ಲಿ ಸಕ್ಕರೆ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದು ಮತ್ತು ದಾಸ್ತಾನು ಪ್ರಮಾಣ ಕಳೆದ ಒಂಭತ್ತು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿರುವುದೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಇಂಡಿಯನ್ ಶುಗರ್ & ಬಯೋ-ಎನರ್ಜಿ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ISMA) ಅಂದಾಜಿನ ಪ್ರಕಾರ, 2025–26ರ ಋತುವಿನಲ್ಲಿ ಒಟ್ಟು 343.5 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗುವ ನಿರೀಕ್ಷೆಯಿತ್ತು. ಇದರಲ್ಲಿ 34 ಲಕ್ಷ ಟನ್ಗಳಷ್ಟು ಸಕ್ಕರೆಯನ್ನು ಎಥನಾಲ್ ತಯಾರಿಕೆಗೆ ಬಳಸಿದ ನಂತರ, ನಿವ್ವಳ ಸಕ್ಕರೆ ಉತ್ಪಾದನೆಯು 309.5 ಲಕ್ಷ ಟನ್ಗಳು ಎಂದು ಅಂದಾಜಿಸಲಾಗಿತ್ತು.
►ಸಕ್ಕರೆ ಲಭ್ಯತೆ ಮತ್ತು ದಾಸ್ತಾನಿನ ಲೆಕ್ಕಾಚಾರ
ಖಾಸಗಿ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ಹೊಸ ಅಂದಾಜಿನ ಪ್ರಕಾರ, ಒಟ್ಟು ಸಕ್ಕರೆ ಉತ್ಪಾದನೆ 309 ಲಕ್ಷ ಟನ್ ಗೆ ಕುಸಿಯುವ ನಿರೀಕ್ಷೆಯಿದೆ. ಇದರಲ್ಲಿ 30 ಲಕ್ಷ ಟನ್ ಸಕ್ಕರೆಯನ್ನು ಎಥನಾಲ್ ತಯಾರಿಕೆಗೆ ಬಳಸಲಾಗುತ್ತಿದ್ದು, ಅಂತಿಮವಾಗಿ 279 ಲಕ್ಷ ಟನ್ ನಿವ್ವಳ ಸಕ್ಕರೆ ಲಭ್ಯವಾಗಲಿದೆ. ಇದು ಒಕ್ಕೂಟವು ಆರಂಭದಲ್ಲಿ ಅಂದಾಜಿಸಿದ್ದಕ್ಕಿಂತ 30.5 ಲಕ್ಷ ಟನ್ ಕಡಿಮೆಯಾಗಿದೆ.
ಪ್ರಸಕ್ತ ಋತುವಿನ ಆರಂಭದಲ್ಲಿ 50 ಲಕ್ಷ ಟನ್ಗೂ ಕೊಂಚ ಹೆಚ್ಚಿನ ಆರಂಭಿಕ ದಾಸ್ತಾನಿತ್ತು. ಇದಕ್ಕೆ ಹೊಸ ಉತ್ಪಾದನೆಯನ್ನು ಸೇರಿಸಿದರೆ ಒಟ್ಟು 329 ಲಕ್ಷ ಟನ್ ಸಕ್ಕರೆ ಲಭ್ಯವಾಗುತ್ತದೆ. ಇದರಲ್ಲಿ ದೇಶೀಯ ಬಳಕೆಯ 280 ಲಕ್ಷ ಟನ್ ಹಾಗೂ 8 ಲಕ್ಷ ಟನ್ ರಫ್ತನ್ನು ಕಳೆದರೆ, ಋತುವಿನ ಕೊನೆಯಲ್ಲಿ ಸುಮಾರು 41 ಲಕ್ಷ ಟನ್ ಸಕ್ಕರೆ ಮಾತ್ರ ಉಳಿಯುತ್ತದೆ. ಇದು 2016–17ರ ನಂತರ (39.4 ಲಕ್ಷ ಟನ್) ಅತ್ಯಂತ ಕನಿಷ್ಠ ಮಟ್ಟದ ದಾಸ್ತಾನಾಗಿದೆ.
ಉದ್ಯಮ ವಲಯದ ಕೆಲವರ ಪ್ರಕಾರ, ಆರಂಭಿಕ ದಾಸ್ತಾನು 50 ಲಕ್ಷ ಟನ್ ಇರಲಿಲ್ಲ, ಬದಲಿಗೆ 48 ಲಕ್ಷ ಟನ್ ಇತ್ತು. ಇದೇ ನಿಜವಾದರೆ, ಈ ಋತುವಿನ ಅಂತ್ಯದ ವೇಳೆಗೆ ಉಳಿಯುವ ದಾಸ್ತಾನು 39 ಲಕ್ಷ ಟನ್ ಗೆ ಕುಸಿಯಲಿದ್ದು, ಇದು 2008–09ರ ನಂತರದ ಅತ್ಯಂತ ಕಡಿಮೆ ಪ್ರಮಾಣವಾಗಲಿದೆ.
►ಅಂದಾಜು ಲೆಕ್ಕಾಚಾರ ತಪ್ಪಿದ್ದೇಕೆ?
ಕಳೆದ ವರ್ಷದ ಸೆಪ್ಟೆಂಬರ್–ಅಕ್ಟೋಬರ್ ಅವಧಿಯಲ್ಲಿ ನೈಋತ್ಯ ಮುಂಗಾರು ಮಳೆಯು ತಡವಾಗಿ ನಿರ್ಗಮಿಸಿದ ಪರಿಣಾಮ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ಗಳಲ್ಲಿ ವಿಪರೀತ ಮಳೆಯಾಯಿತು.
ಗದ್ದೆಗಳಲ್ಲಿ ನೀರು ನಿಂತು, ಸರಿಯಾಗಿ ಬಿಸಿಲು ಸಿಗದಿದ್ದರಿಂದ ಬೆಳೆಗೆ ಅಗತ್ಯ ಗಾಳಿ ಮತ್ತು ಬೆಳಕಿನ ಕೊರತೆಯಾಯಿತು. ಇದು ಕಬ್ಬಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಿ, ಕಬ್ಬಿನಲ್ಲಿ ಸಿಹಿಯಂಶ (ಸುಕ್ರೋಸ್) ಕಡಿಮೆಯಾಯಿತು. ಪರಿಣಾಮವಾಗಿ ಇಳುವರಿ ಹಾಗೂ ಸಕ್ಕರೆ ಉತ್ಪಾದನೆ ಕುಸಿಯಿತು.
ನವೆಂಬರ್ ನಲ್ಲಿ ಮಹಾರಾಷ್ಟ್ರದಲ್ಲಿ 130 ಲಕ್ಷ ಟನ್ ಹಾಗೂ ಕರ್ನಾಟಕದಲ್ಲಿ 63.5 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಮಹಾರಾಷ್ಟ್ರದಲ್ಲಿ 99.2 ಲಕ್ಷ ಟನ್ ಮತ್ತು ಕರ್ನಾಟಕದಲ್ಲಿ 47.2 ಲಕ್ಷ ಟನ್ ಸಕ್ಕರೆ ಮಾತ್ರ ಉತ್ಪಾದನೆಯಾಗಿದೆ. ಇತ್ತ ಉತ್ತರ ಪ್ರದೇಶದಲ್ಲೂ 103.2 ಲಕ್ಷ ಟನ್ ಅಂದಾಜಿನ ಎದುರು 89.7 ಲಕ್ಷ ಟನ್ ಉತ್ಪಾದನೆಯಾಗಿದೆ. ಇಲ್ಲಿ 'ಕೆಂಪು ಕೊಳೆ ರೋಗ' ಮತ್ತು 'ಹುಳು' ಬಾಧೆ ಈ ಕುಸಿತಕ್ಕೆ ಪ್ರಮುಖ ಕಾರಣ. ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯುವ 'Co-0238' ತಳಿಯ ಕಬ್ಬು ಈ ರೋಗಗಳಿಗೆ ಬೇಗ ತುತ್ತಾಗುತ್ತಿರುವುದು ಇಳುವರಿಯನ್ನು ಕುಗ್ಗಿಸುತ್ತಿದೆ.
ಮಹಾರಾಷ್ಟ್ರದಲ್ಲಿ ಎಕ್ಸ್-ಫ್ಯಾಕ್ಟರಿ ಸಕ್ಕರೆ ದರವು 2025ರ ಸೆಪ್ಟೆಂಬರ್ ನಿಂದ 2026ರ ಎಪ್ರಿಲ್ ನಡುವೆ ಕೆ.ಜಿ.ಗೆ 38.31 ರೂಪಾಯಿಯಿಂದ 36.98 ರೂಪಾಯಿಗೆ ಕುಸಿದಿತ್ತು. ಜೂನ್ ವೇಳೆಗೆ 38.23 ರೂಪಾಯಿಗೆ ಚೇತರಿಸಿಕೊಂಡು, ಜುಲೈನಿಂದ ದರ ಗಣನೀಯವಾಗಿ ಏರಿಕೆಯಾಗಿ ಸರಾಸರಿ 41.85 ರೂಪಾಯಿ ತಲುಪಿತು.
►ದಿಢೀರ್ ಬೆಲೆ ಏರಿಕೆಗೆ ಎರಡು ಪ್ರಮುಖ ಕಾರಣಗಳು
ಉದ್ಯಮದ ಮೂಲಗಳ ಪ್ರಕಾರ, ಬೆಲೆ ಏರಿಕೆಗೆ ಎರಡು ಪ್ರಮುಖ ಸಂಗತಿಗಳು ಕಾರಣ. ಮೊದಲನೆಯದಾಗಿ, ನಿರೀಕ್ಷಿತ ಮಟ್ಟದಲ್ಲಿ ಸಕ್ಕರೆ ಉತ್ಪಾದನೆಯಾಗದಿರುವುದು ಮತ್ತು ಕಾರ್ಖಾನೆಗಳಲ್ಲಿರುವ ನೈಜ ದಾಸ್ತಾನಿನ ಕುರಿತು ಮೂಡಿದ ಅನುಮಾನ. ಹಣಕಾಸಿನ ಅಭಾವದಲ್ಲಿದ್ದ ಕೆಲವು ಕಾರ್ಖಾನೆಗಳು ಸರ್ಕಾರ ನಿಗದಿಪಡಿಸಿದ ಮಾಸಿಕ ಕೋಟಾಗಿಂತ ಹೆಚ್ಚಿನ ಸಕ್ಕರೆಯನ್ನು ಮುಂಚಿತವಾಗಿಯೇ ಮಾರುಕಟ್ಟೆಗೆ ಮಾರಾಟ ಮಾಡಿದ್ದವು. ಹೀಗಾಗಿ ಅವುಗಳ ಬಳಿ ಸಕ್ಕರೆ ಖಾಲಿಯಾಗಿತ್ತು ಮತ್ತು ಅವರು ಘೋಷಿಸಿದ ದಾಸ್ತಾನು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿತ್ತು.
ಎರಡನೇ ಕಾರಣ ಈ ವರ್ಷದ ಮುಂಗಾರು ಮಳೆ. ಜೂನ್ ತಿಂಗಳಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮಳೆ ಕೊರತೆಯಾಗಿದ್ದರಿಂದ, ಮುಂಬರುವ 2026–27ರ ಋತುವಿನಲ್ಲೂ ಕಬ್ಬಿನ ಇಳುವರಿ ಮತ್ತು ಸಕ್ಕರೆ ಉತ್ಪಾದನೆ ಕಡಿಮೆಯಾಗಲಿದೆ ಎಂದು ಮಾರುಕಟ್ಟೆ ವಲಯ ಅಂದಾಜಿಸಿತು.
ದೊಡ್ಡ ಪ್ರಮಾಣದ ವ್ಯಾಪಾರಿಗಳು, ದಾಸ್ತಾನುದಾರರು ಹಾಗೂ ಕೈಗಾರಿಕಾ ಬಳಕೆದಾರರು ಜುಲೈಗೂ ಮುನ್ನವೇ ಸಕ್ಕರೆಯನ್ನು ಖರೀದಿಸಿಟ್ಟುಕೊಳ್ಳಲು ಆರಂಭಿಸಿದರು. ಆಗಸ್ಟ್ ನಿಂದ ಸ್ವತಃ ಸಕ್ಕರೆ ಕಾರ್ಖಾನೆಗಳೇ ಹಬ್ಬದ ಋತುವಿನಲ್ಲಿ ಹೆಚ್ಚಿನ ಬೆಲೆ ಸಿಗಲಿ ಎಂಬ ನಿರೀಕ್ಷೆಯಿಂದ ಮಾರಾಟವನ್ನು ಕಡಿತಗೊಳಿಸಿ ಸಕ್ಕರೆಯನ್ನು ಕಾಯ್ದಿರಿಸಲು ಪ್ರಾರಂಭಿಸಿದವು.
►ಸಕ್ಕರೆ ದರ ಏರಿಕೆಗೆ ಎಥನಾಲ್ ತಯಾರಿಕೆಯೇ ಕಾರಣವೇ?
ಪ್ರಸ್ತುತ ಋತುವಿನಲ್ಲಿ ಎಥನಾಲ್ ತಯಾರಿಕೆಗೆ 30 ಲಕ್ಷ ಟನ್ ಸಕ್ಕರೆಯನ್ನು ಬಳಸಿರುವುದು ಮೇಲ್ನೋಟಕ್ಕೆ ದೊಡ್ಡ ಪ್ರಮಾಣದಂತೆ ಕಾಣಿಸುತ್ತದೆ.
ಆದರೆ, ಎಥನಾಲ್ ತಯಾರಿಕೆಗೆ ಬಳಸುವ ಮುನ್ನವೇ ದೇಶದ ಒಟ್ಟು ಸಕ್ಕರೆ ಉತ್ಪಾದನೆಯು ಆರಂಭಿಕ ಅಂದಾಜಿಗಿಂತ 34.5 ಲಕ್ಷ ಟನ್ ಕಡಿಮೆಯಾಗಿದೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಋತುವಿನ ಆರಂಭದಲ್ಲೇ ಈ ಮಟ್ಟದ ಉತ್ಪಾದನಾ ಕುಸಿತ ಉಂಟಾಗಬಹುದು ಅಥವಾ ಜುಲೈನಿಂದ ಬೆಲೆ ದಿಢೀರ್ ಏರಿಕೆಯಾಗಬಹುದು ಎಂದು ಯಾರೂ ಊಹಿಸಿರಲಿಲ್ಲ.
ಪ್ರಸ್ತುತ ಸಕ್ಕರೆ ಬೆಲೆ ಏರಿಕೆಗೆ ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಹೇಳುವುದಕ್ಕೆ ಮತ್ತೊಂದು ಪ್ರಮುಖ ಕಾರಣವೂ ಇದೆ.
2025ರ ನವೆಂಬರ್ನಿಂದ 2026ರ ಜುಲೈ ಅವಧಿಯಲ್ಲಿ ತೈಲ ಕಂಪೆನಿಗಳಿಗೆ ಪೂರೈಕೆಯಾದ ಒಟ್ಟು 810.67 ಕೋಟಿ ಲೀಟರ್ ಎಥನಾಲ್ ನಲ್ಲಿ, ಕೇವಲ 259.24 ಕೋಟಿ ಲೀಟರ್ (ಶೇ. 32) ಮಾತ್ರ ಕಬ್ಬಿನ ಆಧಾರಿತ ಉತ್ಪನ್ನಗಳಿಂದ ಬಂದಿದೆ. ಇದರಲ್ಲಿ ನೇರ ಕಬ್ಬಿನ ರಸದಿಂದ 147.6 ಕೋಟಿ ಲೀಟರ್, 'ಬಿ-ಹೆವಿ' ಮೊಲಾಸಸ್ನಿಂದ 98.19 ಕೋಟಿ ಲೀಟರ್ ಮತ್ತು 'ಸಿ-ಹೆವಿ' ಮೊಲಾಸಸ್ ನಿಂದ 13.45 ಕೋಟಿ ಲೀಟರ್ ಎಥನಾಲ್ ಉತ್ಪಾದಿಸಲಾಗಿದೆ.
ಉಳಿದ 551.43 ಕೋಟಿ ಲೀಟರ್ ಅಂದರೆ ಶೇ. 68ರಷ್ಟು ಎಥನಾಲ್ ಧಾನ್ಯ ಆಧಾರಿತ ಮೂಲಗಳಿಂದ ಬಂದಿದೆ. ಇದರಲ್ಲಿ ಮೆಕ್ಕೆಜೋಳದಿಂದ 288 ಕೋಟಿ ಲೀಟರ್, ಭಾರತೀಯ ಆಹಾರ ನಿಗಮದ (FCI) ಅಕ್ಕಿಯಿಂದ 207.1 ಕೋಟಿ ಲೀಟರ್ ಹಾಗೂ ತುಂಡಾದ/ಹಾನಿಗೊಳಗಾದ ಧಾನ್ಯಗಳಿಂದ 56.33 ಕೋಟಿ ಲೀಟರ್ ಉತ್ಪಾದಿಸಲಾಗಿದೆ. ಹೀಗಾಗಿ ಸಕ್ಕರೆ ದರ ಏರಿಕೆಗೆ ಎಥನಾಲ್ ತಯಾರಿಕೆಯೇ ಕಾರಣ ಎನ್ನುವುದು ಸರಿಯಾದ ವಾದವಲ್ಲ.
►ಸಕ್ಕರೆ ಬೆಲೆ ಏರಿಕೆ ತಡೆಯಲು ಸರ್ಕಾರ ಕೈಗೊಂಡ ಕ್ರಮಗಳೇನು?
ಮೇ 13ರಂದು ಮೋದಿ ಸರಕಾರವು 2026ರ ಸೆಪ್ಟೆಂಬರ್ 30ರವರೆಗೆ ದೇಶದಿಂದ ಎಲ್ಲ ಮಾದರಿಯ ಸಕ್ಕರೆ ರಫ್ತನ್ನು ನಿಷೇಧಿಸಿತು. ಇದು ಪೂರೈಕೆ ಕೊರತೆಯ ಮುನ್ನೆಚ್ಚರಿಕೆಯಾಗಿ ಕೈಗೊಂಡ ಕ್ರಮವಾಗಿತ್ತು.
ಸಾಮಾನ್ಯವಾಗಿ ಸಕ್ಕರೆ ಆಮದಿನ ಮೇಲೆ ಶೇ. 100ರಷ್ಟು ಸುಂಕ ಇರುತ್ತದೆ. ಆದರೆ, ಪರಿಸ್ಥಿತಿ ನಿಭಾಯಿಸಲು ಗುರುವಾರದಂದು ಅಕ್ಟೋಬರ್ 31ರವರೆಗೆ 10 ಲಕ್ಷ ಟನ್ ವರೆಗೆ ಕಚ್ಚಾ ಸಕ್ಕರೆಯನ್ನು ಶೂನ್ಯ ಸುಂಕದಲ್ಲಿ ಆಮದು ಮಾಡಿಕೊಳ್ಳಲು ಸರಕಾರ ಅನುಮತಿ ನೀಡಿದೆ. ಗುಜರಾತ್ನ ಕಂಡ್ಲಾ ಬಂದರಿನಲ್ಲಿ ಸಂಸ್ಕರಣಾಗಾರಗಳನ್ನು ಹೊಂದಿರುವ ಶ್ರೀ ರೇಣುಕಾ ಶುಗರ್ಸ್ ಮತ್ತು ಶ್ರೀ ದತ್ತಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ನಂತಹ ಕಂಪೆನಿಗಳು ಈ ಕಚ್ಚಾ ಸಕ್ಕರೆಯನ್ನು ಸಂಸ್ಕರಿಸಬಹುದು.
ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್ ಆರಂಭದಲ್ಲಿ ದೇಶೀಯ ಕಾರ್ಖಾನೆಗಳು ಕಬ್ಬು ಸಂಸ್ಕರಣೆ ಪ್ರಾರಂಭಿಸುವವರೆಗೆ, ಆಮದು ಮಾಡಿಕೊಂಡ ಕಚ್ಚಾ ಸಕ್ಕರೆಯನ್ನು ಶುದ್ಧೀಕರಿಸಿ ದೇಶೀಯ ಮಾರುಕಟ್ಟೆಗೆ ಪೂರೈಸಬಹುದು.
ರಫ್ತು ನಿಷೇಧ ಮತ್ತು ಸುಂಕ ರಹಿತ ಆಮದಿಗೆ ಅನುಮತಿ ನೀಡಿದ್ದಲ್ಲದೆ, ಜುಲೈ 28ರಂದು ಮೋದಿ ಸರಕಾರವು ಎಲ್ಲ ಸಕ್ಕರೆ ವ್ಯಾಪಾರಿಗಳಿಗೆ ಗರಿಷ್ಠ 400 ಟನ್ ದಾಸ್ತಾನು ಮಿತಿಯನ್ನು ಹೇರಿದೆ. ಜತೆಗೆ, ದಾಸ್ತಾನು ಸ್ವೀಕರಿಸಿದ 30 ದಿನಗಳಿಗಿಂತ ಹೆಚ್ಚು ಕಾಲ ಅದನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಸೂಚಿಸಿದೆ.
ಆಗಸ್ಟ್ 13ರಂದು ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಪತ್ರ ಬರೆದಿರುವ ಸರಕಾರ, 2025–26ರ ಆರ್ಥಿಕ ವರ್ಷದಲ್ಲಿ ನೇರವಾಗಿ ಅಥವಾ ಏಜೆಂಟರ ಮೂಲಕ ವರ್ಷಕ್ಕೆ 500 ಟನ್ ಅಥವಾ ಅದಕ್ಕಿಂತ ಹೆಚ್ಚಿನ ಸಕ್ಕರೆ ಖರೀದಿಸಿದ ಬೃಹತ್ ಗ್ರಾಹಕರ (ತಂಪು ಪಾನೀಯ, ಸಿಹಿತಿಂಡಿ ತಯಾರಕರು ಇತ್ಯಾದಿ) ವಿವರಗಳನ್ನು ನೀಡುವಂತೆ ನಿರ್ದೇಶಿಸಿದೆ.
ಮುಂಬರುವ 2026–27ರ ಋತುವಿನಲ್ಲಿ ನೇರ ಕಬ್ಬಿನ ರಸ ಮತ್ತು 'ಬಿ-ಮೊಲಾಸಸ್'ನಿಂದ ಎಥನಾಲ್ ತಯಾರಿಸದಂತೆ ಕಾರ್ಖಾನೆಗಳಿಗೆ ಸರಕಾರ ಸೂಚಿಸುವ ಸಾಧ್ಯತೆಯಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಪೂರೈಕೆಯನ್ನು ಹೆಚ್ಚಿಸುವುದು ಮತ್ತು ವ್ಯಾಪಾರಿಗಳು ಹಾಗೂ ಕಾರ್ಖಾನೆಗಳು ಸಕ್ಕರೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಮಾಡುವುದೇ ಸರಕಾರದ ಮುಖ್ಯ ಉದ್ದೇಶವಾಗಿದೆ.
ಸೌಜನ್ಯ: indianexpress.com






