ಮಹಾರಾಷ್ಟ್ರದ ಬರಪೀಡಿತ ಬೀಡ್ ಜಿಲ್ಲೆಯಲ್ಲಿ ಮೋದಿ ಸರ್ಕಾರದ ಗ್ರಾಮೀಣ ಉದ್ಯೋಗ ಯೋಜನೆ ವಿಫಲವಾಗಿದ್ದು ಏಕೆ?
ತಬಸ್ಸುಮ್ ಬರ್ನಗರ್ವಾಲಾ - scroll. in ವರದಿ

Photo credit : scroll. in
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅಕ್ಟೋಬರ್ ಎಂದರೆ ಸಾಮಾನ್ಯವಾಗಿ ಭರವಸೆಯ ಸಮಯ. ಜಲಾಶಯಗಳು ಮತ್ತು ಬಾವಿಗಳು ತುಂಬಿ ತುಳುಕುತ್ತಿರುತ್ತವೆ. ಸೋಯಾಬೀನ್ ಮತ್ತು ಹತ್ತಿ ಬೆಳೆಗಳ ಕೊಯ್ಲು ಆರಂಭವಾಗುವ ಹಂತದಲ್ಲಿರುತ್ತದೆ.
ಆದರೆ ಈ ವರ್ಷ, ಮರಾಠವಾಡ ಪ್ರದೇಶದಲ್ಲಿ ನೀರೂ ಇಲ್ಲ, ಕೆಲಸವೂ ಇಲ್ಲ.
ಈ ಬಿಕ್ಕಟ್ಟು ವ್ಯಾಪಕವಾಗಿದೆ. ಮುಂಗಾರು ಮಳೆಯಲ್ಲಿ ಶೇಕಡಾ 18ರಷ್ಟು ಕೊರತೆ ದಾಖಲಾದ ನಂತರ, ಮಹಾರಾಷ್ಟ್ರದ ಮೂರನೇ ಎರಡರಷ್ಟು ಭಾಗದಷ್ಟು ಪ್ರದೇಶದಲ್ಲಿರುವ 358 ತಾಲೂಕುಗಳ ಪೈಕಿ 304 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಬೀಡ್ ಜಿಲ್ಲೆಯಲ್ಲಿ ಮಳೆಯ ಕೊರತೆ ಶೇಕಡಾ 37ಕ್ಕೆ ಏರಿಕೆಯಾಗಿದ್ದು, ಇದು ದಶಕದಲ್ಲೇ ಅತ್ಯಂತ ಭೀಕರವಾಗಿದೆ ಎಂದು ಜಿಲ್ಲಾಧಿಕಾರಿ ವಿವೇಕ್ ಜಾನ್ಸನ್ ತಿಳಿಸಿದ್ದಾರೆ.
ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಳೆಯಿಲ್ಲದ ಕಾರಣ, ಚುಂಬಳಿ ಗ್ರಾಮದ ಸತೀಶ್ ಶಿರ್ಸತ್ ಅವರ ಒಂದು ಎಕರೆ ಜಮೀನಿನಲ್ಲಿದ್ದ ಸೋಯಾಬೀನ್ ಬೆಳೆ ಒಣಗಿಹೋಯಿತು. ಅವರು ಕೊಯ್ಲು ಮಾಡಿದ ಕಾಳುಗಳು ಎಷ್ಟು ಚಿಕ್ಕದಾಗಿದ್ದವೆಂದರೆ, ಮಾರುಕಟ್ಟೆಯಲ್ಲಿ ಕೇವಲ 10,000 ರೂಪಾಯಿ ಮಾತ್ರ ಸಿಕ್ಕಿತು. ಇದು ಅವರು ಮಾಡಿದ 20,000 ರೂಪಾಯಿ ಹೂಡಿಕೆಯನ್ನು ಸರಿದೂಗಿಸಲು ಸಾಕಾಗಲಿಲ್ಲ.
ಬೆಳೆ ವಿಫಲವಾದಾಗ, ಶಿರ್ಸತ್ ಬೇರೆ ಕೆಲಸ ಹುಡುಕಲು ಪ್ರಾರಂಭಿಸಿದರು.
ಆಗಸ್ಟ್ನಲ್ಲಿ, ಭಾರತದ ಹೊಸದಾಗಿ ನವೀಕರಿಸಲಾದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಅವರ ನೆರವಿಗೆ ಬಂದಿತು. 'ವಿಕಸಿತ್ ಭಾರತ್–ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)' ಅಥವಾ 'ವಿಬಿ-ಜಿ ರಾಮ್ ಜಿ' ಯೋಜನೆಯಡಿ ಆರು ದಿನಗಳ ಕಾಲ ಕಾಲುವೆ ತೋಡಿದ ನಂತರ ಅವರು 3,000 ರೂಪಾಯಿ ಗಳಿಸಿದರು.
ಆದರೆ ಅಂದಿನಿಂದ ಶಿರ್ಸತ್ಗೆ ಯಾವುದೇ ಕೆಲಸ ಸಿಕ್ಕಿಲ್ಲ.
ಅಕ್ಟೋಬರ್ ಮಧ್ಯಭಾಗದಲ್ಲಿ, ಅವರು ಮತ್ತು ಅವರ ಪತ್ನಿ ತಮ್ಮ ಮೂವರು ಮಕ್ಕಳನ್ನು ಅಜ್ಜ-ಅಜ್ಜಿಯಂದಿರ ಬಳಿ ಬಿಟ್ಟು, ಮುಂದಿನ ಮೂರು ತಿಂಗಳ ಅವಧಿಗೆ 350 ಕಿ.ಮೀ. ದೂರದಲ್ಲಿರುವ ಸಾಂಗ್ಲಿಗೆ ತೆರಳಿದರು. ಕಬ್ಬು ಕಟಾವು ಮಾಡಿ ದಿನಕ್ಕೆ 800 ರೂಪಾಯಿ ಗಳಿಸುವ ಭರವಸೆ ಈ ದಂಪತಿಯದ್ದು. "ಇಲ್ಲಿ ಸಂಪಾದಿಸಲು ಬೇರೆ ದಾರಿಯೇ ಇಲ್ಲ" ಎಂದು scroll ಜತೆ ಮಾತನಾಡಿದ ಶಿರ್ಸತ್ ಹೇಳಿದ್ದಾರೆ.
ಸಾವಿರಾರು ಜನರು ಕೆಲಸ ಮಾಡುತ್ತಾರೆ ಎಂಬುದು ದಾಖಲೆಗಳಲ್ಲಿ ಮಾತ್ರ! :
ಬೀಡ್ ಜಿಲ್ಲೆಯ ಸಾಲುಸಾಲು ಗ್ರಾಮಗಳಲ್ಲಿ ನಿವಾಸಿಗಳು ಉದ್ಯೋಗದ ಕೊರತೆಯ ಬಗ್ಗೆ ದೂರಿದ್ದು, ವಲಸೆ ಹೋಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಆದರೆ ಸರ್ಕಾರದ ಅಂಕಿಅಂಶಗಳು ಇದಕ್ಕೆ ತದ್ವಿರುದ್ಧವಾದ ಚಿತ್ರಣವನ್ನು ನೀಡುತ್ತವೆ.
ದಾಖಲೆಗಳನ್ನು ಪರಿಶೀಲಿಸಿದರೆ, ಬೀಡ್ನಲ್ಲಿ ಸಾವಿರಾರು ಜನರು 'ವಿಬಿ-ಜಿ ರಾಮ್ ಜಿ' ಯೋಜನೆಯಡಿ ದಿನಗೂಲಿ ಕೆಲಸ ಪಡೆಯುತ್ತಿದ್ದಾರೆ.
ಅಕ್ಟೋಬರ್ 4ರಂದು ಮಹಾರಾಷ್ಟ್ರದ 36 ಜಿಲ್ಲೆಗಳ ಕಾಮಗಾರಿ ಸ್ಥಳಗಳಲ್ಲಿ 76,822 ಕಾರ್ಮಿಕರು ಹಾಜರಾಗಿದ್ದಾರೆ ಎಂದು ದಾಖಲಿಸಲಾಗಿದೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ, 40,267 ಕಾರ್ಮಿಕರು ಕೇವಲ ಬೀಡ್ ಜಿಲ್ಲೆಯೊಂದರವರೇ ಆಗಿದ್ದಾರೆ. ಒಂದೇ ಜಿಲ್ಲೆಗೆ ಈ ಸಂಖ್ಯೆ ಅತ್ಯಂತ ಅಸಾಮಾನ್ಯವಾಗಿದೆ.
ಈ ಬಗ್ಗೆ ತನಿಖೆ ನಡೆಸಲು, scroll ಆ ದಿನ 47 ಕಾರ್ಮಿಕರಿಗೆ ಕೆಲಸದ ಆದೇಶ ಹೊರಡಿಸಲಾಗಿದ್ದ ಬೀಡ್ನ ಐದು ಸ್ಥಳಗಳಿಗೆ ಭೇಟಿ ನೀಡಿತು. ನೇರ ಹಾಜರಾತಿಯನ್ನು ದಾಖಲಿಸಲು ಯೋಜನೆಯ ಪೋರ್ಟಲ್ನಲ್ಲಿ ಹೆಸರುಗಳು ಮತ್ತು ಫೋಟೊಗಳನ್ನು ಅಪ್ಲೋಡ್ ಮಾಡಲಾಗಿದ್ದರೂ, ಅಲ್ಲಿ ಯಾವುದೇ ಕಾರ್ಮಿಕರು ಉಪಸ್ಥಿತರಿರಲಿಲ್ಲ.
ಹೆಚ್ಚಿನ ಪ್ರಕರಣಗಳಲ್ಲಿ, ಮಸ್ಟರ್ ರೋಲ್ನಲ್ಲಿ (ಕಾಮಗಾರಿ ಸ್ಥಳದಲ್ಲಿರುವ ಕಾರ್ಮಿಕರ ಪಟ್ಟಿ) ಹೆಸರು ಹೊಂದಿರುವ ಜನರಿಗೆ ತಮ್ಮ ಹೆಸರಿನಲ್ಲಿ ಕೆಲಸದ ಆದೇಶಗಳನ್ನು ಹೊರಡಿಸಿರುವುದೇ ತಿಳಿದಿರಲಿಲ್ಲ. ಜೊತೆಗೆ, ತಮ್ಮ ಕೂಲಿ ಎಲ್ಲಿಗೆ ಜಮೆಯಾಗುತ್ತಿದೆ ಎಂಬ ಮಾಹಿತಿಯೂ ಅವರಿಗಿರಲಿಲ್ಲ. ಅಕ್ಟೋಬರ್ 4ರಂದು ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪಟ್ಟಿ ಮಾಡಲಾದ 40,267 ಕಾರ್ಮಿಕರ ವೇತನವು ಒಟ್ಟು 1.2 ಕೋಟಿ ರೂಪಾಯಿಗಳಷ್ಟಾಗುತ್ತದೆ.
ಯೋಜನೆಯಡಿ ಮಸ್ಟರ್ ರೋಲ್ ನಿರ್ವಹಿಸುವ ಮತ್ತು ಹಾಜರಾತಿ ಗುರುತಿಸುವ ಮೂವರು ಉದ್ಯೋಗ ಸೇವಕರು scroll ಜತೆ ಮಾತನಾಡಿದ್ದು, ಬೀಡ್ನ ಹಲವು ಗ್ರಾಮ ಪಂಚಾಯಿತಿ ಸದಸ್ಯರು ಈ ವ್ಯವಸ್ಥೆಯಲ್ಲಿ ಅಕ್ರಮ ಎಸಗಲು ಮತ್ತು ಕೂಲಿ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಶಾಮೀಲಾಗಿದ್ದಾರೆ ಎಂದು ಹೇಳಿದ್ದಾರೆ.
ಬೀಡ್ ಜಿಲ್ಲಾ ಪಂಚಾಯಿತಿಯ ಹಿರಿಯ ಅಧಿಕಾರಿ ಜಿತಿನ್ ರೆಹಮಾನ್ scroll ಜತೆ ಮಾತನಾಡಿ, ಅಕ್ರಮಗಳ ಕುರಿತು ಆಡಳಿತವು ಒಂದು ತಿಂಗಳ ಹಿಂದೆ ಎಫ್ಐಆರ್ ದಾಖಲಿಸಿದೆ ಎಂದು ತಿಳಿಸಿದರು. "ಈ ಸಮಸ್ಯೆಯನ್ನು ಎತ್ತಿ, ನಾನು ಮುಖ್ಯ ಕಾರ್ಯದರ್ಶಿಯವರಿಗೂ ಪತ್ರ ಬರೆದಿದ್ದೇನೆ" ಎಂದು ಅವರು ಹೇಳಿದರು. ವ್ಯತ್ಯಾಸಗಳು ಕಂಡುಬಂದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಇಂತಹ 23,000 ದಾಖಲಾತಿಗಳನ್ನು ತಿರಸ್ಕರಿಸಲಾಗಿದೆ ಎಂದು ರೆಹಮಾನ್ ತಿಳಿಸಿದ್ದಾರೆ.
ನಿರ್ಜನ ಸ್ಥಳಗಳು, ಗೈರುಹಾಜರಾದ ಕಾರ್ಮಿಕರು :
ಜುಲೈನಲ್ಲಿ ನರೇಂದ್ರ ಮೋದಿ ಸರ್ಕಾರವು ಎರಡು ದಶಕಗಳಷ್ಟು ಹಳೆಯದಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಬದಲಿಗೆ 'ವಿಬಿ-ಜಿ ರಾಮ್ ಜಿ ಕಾಯ್ದೆ, 2025' ಅನ್ನು ಜಾರಿಗೆ ತಂದಿತು.
ಕೇಂದ್ರ ಸರ್ಕಾರವು ತನ್ನ ಪ್ರಕಟಣೆಯಲ್ಲಿ, ಹೊಸ ಯೋಜನೆಯು "ಆಧುನಿಕ, ಹೊಣೆಗಾರಿಕೆಯ ಮತ್ತು ಮೂಲಸೌಕರ್ಯ ಆಧಾರಿತ ಚೌಕಟ್ಟಿನ ಮೂಲಕ ಈಗಿರುವ ಕೊರತೆಗಳನ್ನು ಸರಿಪಡಿಸಲಿದೆ" ಎಂದು ತಿಳಿಸಿತ್ತು. ಇದರ ಅಡಿಯಲ್ಲಿ, ಗ್ರಾಮ ಪಂಚಾಯಿತಿಗಳು ಜಿಪಿಎಸ್ ಮತ್ತು ಮೊಬೈಲ್ ಆ್ಯಪ್ ಆಧಾರಿತ ಮೇಲ್ವಿಚಾರಣೆಯ ಮೂಲಕ ಕೆಲಸದ ಆದೇಶಗಳನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ಪತ್ತೆಹಚ್ಚಬಹುದು. ಪ್ರತಿ ಆರು ತಿಂಗಳಿಗೊಮ್ಮೆ ಸಾಮಾಜಿಕ ಪರಿಶೋಧನೆಯನ್ನು ಕಡ್ಡಾಯಗೊಳಿಸಲಾಗಿತ್ತು.
ಅಕ್ಟೋಬರ್ 4ರಂದು ಬೀಡ್ನಲ್ಲಿ ಒಟ್ಟು 2,561 ಕೆಲಸದ ಆದೇಶಗಳು ದಾಖಲಾಗಿದ್ದವು.
ಕೆಲಸದ ಆದೇಶ ಎಂಬುದು ಗ್ರಾಮ ಮಟ್ಟದ ಮೂಲಸೌಕರ್ಯ ಕಾಮಗಾರಿಗೆ ಅನುಮೋದಿಸಲಾದ ಯೋಜನೆಯಾಗಿದೆ. ಇದು ಕಾಲುವೆ, ಕೊಳ, ರಸ್ತೆ ನಿರ್ಮಾಣ, ಮಳೆನೀರು ಕೊಯ್ಲು, ಸಮುದಾಯ ಭವನ ಅಥವಾ ಕೃಷಿ ಸಂಬಂಧಿತ ಕೆಲಸಗಳನ್ನು ಒಳಗೊಂಡಿರಬಹುದು.
ಕೆಲಸದ ಬೇಡಿಕೆಯು ಗ್ರಾಮದಿಂದಲೇ ಆರಂಭವಾಗುತ್ತದೆ. ಗ್ರಾಮಸಭೆಯು ಇದಕ್ಕೆ ಅನುಮೋದನೆ ನೀಡಿದ ನಂತರ, ಎಲೆಕ್ಟ್ರಾನಿಕ್ ಮಸ್ಟರ್ ರೋಲ್ ಸಿದ್ಧಪಡಿಸಲಾಗುತ್ತದೆ. ಕಳೆದ 15 ದಿನಗಳಲ್ಲಿ ಕೆಲಸ ಕೋರಿದ ಕಾರ್ಮಿಕರಿಗೆ ಗ್ರಾಮ ಪಂಚಾಯಿತಿಯು ಕೆಲಸವನ್ನು ಹಂಚಿಕೆ ಮಾಡುತ್ತದೆ. ನಂತರ ಆ ಸ್ಥಳವನ್ನು ಜಿಯೊಟ್ಯಾಗ್ ಮಾಡಲಾಗುತ್ತದೆ.
ಹಾಜರಾತಿ ಮತ್ತು ಕೆಲಸವನ್ನು ಡಿಜಿಟಲ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಕಾರ್ಮಿಕರ ನೈಜ ಸಮಯದ, ಜಿಯೊಟ್ಯಾಗ್ ಮಾಡಿದ ಮತ್ತು ಸಮಯ ದಾಖಲಿತ ಹಾಜರಾತಿಯನ್ನು ಸಂಗ್ರಹಿಸಲು ಬಳಸುವ 'ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸರ್ವಿಸ್' ಆ್ಯಪ್ ಮೂಲಕ ಉದ್ಯೋಗ ಸೇವಕರು ಪ್ರತಿದಿನದ ಹಾಜರಾತಿಯನ್ನು ಗುರುತಿಸಬೇಕಾಗುತ್ತದೆ.
ಆದರೆ ಬೀಡ್ನಲ್ಲಿ, ಈ ತಪಾಸಣೆ ಮತ್ತು ಸಮತೋಲನದ ವ್ಯವಸ್ಥೆಯು ಕಷ್ಟಕ್ಕೆ ಸಿಲುಕಿದಂತೆ ಕಾಣುತ್ತಿದೆ.
ಬೀಡ್ ಜಿಲ್ಲಾಧಿಕಾರಿಗೆ ದೂರುದಾರರೊಬ್ಬರು ಕಳುಹಿಸಿದ ಇಮೇಲ್ನಲ್ಲಿ, "ಬಾಹ್ಯ ನಕಲಿ ಜಿಪಿಎಸ್ ಅಪ್ಲಿಕೇಶನ್ಗಳನ್ನು ಬಳಸಿ ದೊಡ್ಡ ಮಟ್ಟದಲ್ಲಿ ವಂಚನೆಯಿಂದ ಹಾಜರಾತಿ ಹಾಕಲಾಗುತ್ತಿದೆ" ಎಂದು ಆರೋಪಿಸಲಾಗಿದೆ. ಈ ಇಮೇಲ್ ಅನ್ನು scroll ಪರಿಶೀಲಿಸಿದೆ.
ಇ-ಕೆವೈಸಿ ಅಥವಾ ಡಿಜಿಟಲ್ ಪರಿಶೀಲನೆಯ ಸಮಯದಲ್ಲಿ ಡೇಟಾಬೇಸ್ನಲ್ಲಿ ಸಂಗ್ರಹಿಸಲಾದ ಕಾರ್ಮಿಕರ ಫೋಟೊಗಳನ್ನು ಮರುಬಳಕೆ ಮಾಡಿ, ಅವುಗಳನ್ನು "ಕಾಮಗಾರಿ ಸ್ಥಳದಲ್ಲಿ ತೆಗೆದ ನೈಜ, ಜಿಯೊಟ್ಯಾಗ್ ಮಾಡಿದ ಫೋಟೊಗಳು" ಎಂದು ಬಿಂಬಿಸಲಾಗುತ್ತಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಅಕ್ಟೋಬರ್ 4ರಂದು ಐದು ಕೆಲಸದ ಆದೇಶಗಳನ್ನು ಪರಿಶೀಲಿಸಿದಾಗ ನಮಗೂ ಇದೇ ವಿಷಯ ಕಂಡುಬಂತು. ಸಮಯದ ದಾಖಲೆಯ ಪ್ರಕಾರ, 47 ಕಾರ್ಮಿಕರಿಗೆ ಬೆಳಿಗ್ಗೆ 8.55ರಿಂದ 9.30ರ ನಡುವೆ ನೇರ ಹಾಜರಾತಿ ನಮೂದಿಸಲಾಗಿತ್ತು.
ನಿಗದಿತ ಕೆಲಸದ ವೇಳೆಯಲ್ಲಿ ನಾವು ಆ ಐದೂ ಸ್ಥಳಗಳಿಗೆ ಭೇಟಿ ನೀಡಿದಾಗ, ಆ 47 ಕಾರ್ಮಿಕರಲ್ಲಿ ಒಬ್ಬರೂ ಸ್ಥಳದಲ್ಲಿ ಇರಲಿಲ್ಲ ಎಂದು scroll ವರದಿ ಉಲ್ಲೇಖಿಸಿದೆ.
ನಾವು ಆ ಕಾರ್ಮಿಕರನ್ನು ಹುಡುಕಿಕೊಂಡು ಅವರ ಗ್ರಾಮಗಳಿಗೆ ಹೋದೆವು. 14 ಜನರು ಮನೆಯಲ್ಲಿದ್ದರು. ಇನ್ನು 30 ಜನರು ಹತ್ತಿರದ ನಗರದಲ್ಲಿ ಕೆಲಸ ಮಾಡಲು ಹೋಗಿದ್ದರು ಅಥವಾ ತಮ್ಮ ಬೆಳೆಗಳ ನಿರ್ವಹಣೆಯಲ್ಲಿ ತೊಡಗಿದ್ದರು. ಮೂವರು ಕಾರ್ಮಿಕರನ್ನು ಪತ್ತೆಹಚ್ಚಲು ನಮಗೆ ಸಾಧ್ಯವಾಗಲಿಲ್ಲ. ಕನಿಷ್ಠ 16 ಕಾರ್ಮಿಕರು ಅಥವಾ ಅವರ ಕುಟುಂಬಸ್ಥರು ತಮ್ಮ ಹೆಸರುಗಳನ್ನು 'ವಿಬಿ-ಜಿ ರಾಮ್ ಜಿ' ಮಸ್ಟರ್ ರೋಲ್ನಲ್ಲಿ ಸೇರಿಸಿರುವುದೇ ತಮಗೆ ತಿಳಿದಿಲ್ಲ ಎಂದು ಹೇಳಿದರು.
ಕಾರ್ಮಿಕರು ದಿನಕ್ಕೆ ಎರಡು ಬಾರಿ ಸ್ಥಳದಲ್ಲೇ ಹಾಜರಾತಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯು ಭೌಗೋಳಿಕ ಪರಿಶೀಲನೆ ಹೊಂದಿರುವ ಲೈವ್ ಫೋಟೊ ವ್ಯವಸ್ಥೆಯನ್ನು ಅವಲಂಬಿಸಿದೆ. ಆದರೆ, ಎಲ್ಲಾ 47 ಪ್ರಕರಣಗಳಲ್ಲಿಯೂ ಕೆವೈಸಿ ಸಮಯದಲ್ಲಿ ನೀಡಲಾಗಿದ್ದ ಫೋಟೊವನ್ನೇ ಹಾಜರಾತಿ ದಾಖಲಿಸಲು ಅಪ್ಲೋಡ್ ಮಾಡಲಾಗಿದೆ ಎಂಬುದು scroll ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನಾವು ಬಯಲಿಗೆಳೆದ ಈ ವಿಷಯವು ಹಲವು ಪ್ರಶ್ನೆಗಳನ್ನು ಎತ್ತುತ್ತದೆ: ಕೆಲಸದ ಆದೇಶಗಳು ಹೇಗೆ ಸೃಷ್ಟಿಯಾಗುತ್ತಿವೆ? ಮಸ್ಟರ್ ರೋಲ್ ಸಿದ್ಧಪಡಿಸುತ್ತಿರುವವರು ಯಾರು? ಹಾಜರಾತಿ ದಾಖಲಿಸುತ್ತಿರುವವರು ಯಾರು? ಕಾರ್ಮಿಕರ ಬದಲಿಗೆ ಯಾರಿಗೆ ಹಣ ಪಾವತಿಯಾಗುತ್ತಿದೆ?
ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಸರ್ವಿಸ್ ಆ್ಯಪ್ ಅನ್ನು ನಿರ್ವಹಿಸುವ ಗ್ರಾಮೀಣ ಅಭಿವೃದ್ಧಿ ಸಚಿವಾಲಯಕ್ಕೆ scroll ಇಮೇಲ್ ಕಳುಹಿಸಿ, ವಂಚನೆಯ ಆರೋಪಗಳ ಕುರಿತು ಪ್ರಶ್ನಿಸಿತು.
ತನ್ನ ಪ್ರತಿಕ್ರಿಯೆಯಲ್ಲಿ ಸಚಿವಾಲಯವು, ನಕಲಿ ದಾಖಲಾತಿಗಳನ್ನು ಪತ್ತೆಹಚ್ಚಲು ಎಐ ಬಳಕೆ, ಕ್ಷೇತ್ರ ತಪಾಸಣೆ, ಸಾಮಾಜಿಕ ಪರಿಶೋಧನೆ ಹಾಗೂ ಕೆಲಸದ ಆದೇಶಗಳ ತಾಂತ್ರಿಕ ಮೌಲ್ಯಮಾಪನ ಸೇರಿದಂತೆ ತಾನು ಕೈಗೊಂಡ ಕ್ರಮಗಳನ್ನು ಪಟ್ಟಿ ಮಾಡಿದೆ. ಹಾಗಿದ್ದರೂ, ಬೀಡ್ನಲ್ಲಿ ಅಕ್ರಮಗಳಿಗೆ ಕಾರಣವಾದ ಎನ್ಎಂಎಂಎಸ್ ಆ್ಯಪ್ನ ಲೋಪದೋಷಗಳ ಕುರಿತು ಸಚಿವಾಲಯವು ನಿರ್ದಿಷ್ಟವಾಗಿ ಉತ್ತರಿಸಲಿಲ್ಲ.
ಒಂದು ತಿಂಗಳ ಹಿಂದೆಯೇ ನಿಂತುಹೋದ ಕೆಲಸ :
ಅಕ್ಟೋಬರ್ 4ರಂದು ಅಹೇರ್ವಾಡ್ಗಾಂವ್ನಲ್ಲಿ ರಸ್ತೆ ನಿರ್ಮಾಣದ ಕೆಲಸದ ಆದೇಶದಲ್ಲಿ 10 ಕಾರ್ಮಿಕರು ಹಾಜರಾಗಿದ್ದಾರೆ ಎಂದು ದಾಖಲಿಸಲಾಗಿತ್ತು.
ಆದರೆ, scroll ಪರಿಶೀಲಿಸಿದಾಗ ಕಾಮಗಾರಿ ಸ್ಥಳದಲ್ಲಿ ಯಾವುದೇ ಕಾರ್ಮಿಕರಾಗಲಿ ಅಥವಾ ರಸ್ತೆ ನಿರ್ಮಾಣ ಕಾರ್ಯವಾಗಲಿ ಕಂಡುಬರಲಿಲ್ಲ.
ಸ್ಥಳೀಯ ಅರ್ಚಕರಾದ ವಿವೇಕ್ ಶಾಸ್ತ್ರಿ ಮಾತನಾಡಿ, ಸ್ಥಳೀಯರ ದೂರುಗಳ ಹಿನ್ನೆಲೆಯಲ್ಲಿ ಈ ರಸ್ತೆಯ ಕೆಲಸವು ಒಂದು ತಿಂಗಳ ಹಿಂದೆಯೇ ನಿಂತುಹೋಗಿದೆ ಎಂದು ತಿಳಿಸಿದರು.
ಕಾರ್ಮಿಕರೆಂದು ಪಟ್ಟಿ ಮಾಡಲಾದವರಲ್ಲಿ ಉಪಸರ್ಪಂಚ್ ಅಭಿಮಾನ್ ಮುಕ್ತಾರಾಮ್ ರಂಜವಾನ್, ಅವರ ತಾಯಿ ವೈಜಯವಂತ, ತಂದೆ ಮುಕ್ತಾರಾಮ್ ಮತ್ತು ಸಹೋದರ ಬಿಭೀಷಣ್ ಸೇರಿದ್ದಾರೆ.
scroll ಅವರ ಮನೆಗೆ ಭೇಟಿ ನೀಡಿದಾಗ, ವೈಜಯವಂತ ಅವರು "ತಮ್ಮನ್ನು ಯಾವ ಕೆಲಸಕ್ಕೆ ಪಟ್ಟಿ ಮಾಡಲಾಗಿದೆ ಎಂಬುದು ತಮಗೆ ತಿಳಿದಿಲ್ಲ" ಎಂದು ಹೇಳಿದರು. ಅಲ್ಲದೆ, ತಂದೆ ಮುಕ್ತಾರಾಮ್ ಮತ್ತು ಬಿಭೀಷಣ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದು, ಅಭಿಮಾನ್ 10 ಕಿ.ಮೀ. ದೂರದ ಬೀಡ್ ನಗರದಲ್ಲಿದ್ದಾರೆ ಎಂದು ತಿಳಿಸಿದರು.
ಮಸ್ಟರ್ ರೋಲ್ನಲ್ಲಿ ಅವರ ನೆರೆಹೊರೆಯ ಕುಟುಂಬದ ದತ್ತು ಗಾಡೆ, ಅವರ ಮಗ ಬಾಬು ಗಾಡೆ ಮತ್ತು ಪತ್ನಿ ಸಖೂಬಾಯಿ ಗಾಡೆ ಅವರ ಹೆಸರುಗಳೂ ಕಾರ್ಮಿಕರೆಂದು ನಮೂದಾಗಿದ್ದವು.
scroll ಜತೆ ಮಾತನಾಡಿದ ಸಖೂಬಾಯಿ, ತಮ್ಮ ಪತಿ ಮತ್ತು ಮಗ ಕೆಲಸಕ್ಕಾಗಿ ಬೀಡ್ ನಗರಕ್ಕೆ ಹೋಗಿದ್ದಾರೆ ಎಂದು ಹೇಳಿದರು. "ನಾನು ಕಳೆದ ಹಲವಾರು ತಿಂಗಳುಗಳಿಂದ ಈ ಯೋಜನೆಯಡಿ ಕೆಲಸ ಮಾಡಿಲ್ಲ. ನಮ್ಮ ಹೆಸರುಗಳನ್ನು ಯಾರು ಸೇರಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ನನಗೆ ಯಾರೂ ತಿಳಿಸಿಲ್ಲ" ಎಂದರು.
ಕಾರ್ಮಿಕರೆಂದು ಪಟ್ಟಿಯಲ್ಲಿದ್ದ ನೆರೆಹೊರೆಯ ಮತ್ತೊಂದು ಕುಟುಂಬವೂ ತಾವು ಯೋಜನೆಯಲ್ಲಿ ನೋಂದಾಯಿಸಿಕೊಂಡಿರುವುದನ್ನು ನಿರಾಕರಿಸಿತು. "ನನಗೆ ಈ ಯೋಜನೆಯಡಿ ಯಾವುದೇ ಹಣ ಸಿಗುತ್ತಿಲ್ಲ. ನೀವು ಯಾವ ಕೆಲಸದ ಬಗ್ಗೆ ಮಾತನಾಡುತ್ತಿದ್ದೀರಿ ಎಂಬುದು ನನಗೆ ಗೊತ್ತಿಲ್ಲ" ಎಂದು ಬಾಲಿರಾಮ್ ರಂಜವಾನ್ ಹೇಳಿದರು.
ಅಹೇರ್ವಾಡ್ಗಾಂವ್ ಪಂಚಾಯಿತಿ ಅನುಮೋದಿಸಿದ ಮತ್ತೊಂದು ಕೆಲಸದ ಆದೇಶದಲ್ಲೂ 10 ಕಾರ್ಮಿಕರನ್ನು ಪಟ್ಟಿ ಮಾಡಲಾಗಿತ್ತು.
ಆದರೆ ಪರಿಶೀಲಿಸಿದಾಗ, ಅವರಲ್ಲಿ ನಾಲ್ವರು ಕೆಲಸಕ್ಕಾಗಿ ಹತ್ತಿರದ ನಗರಗಳಿಗೆ ತೆರಳಿರುವುದು, ಇನ್ನು ಕೆಲವರು ಮನೆಯಲ್ಲಿ ಅಥವಾ ಜಮೀನಿನಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂತು.
ಛಾಯಾ ಮತ್ತು ಅವರ ಪತಿ ಅಶೋಕ್ ತಾವ್ಡೆ ಅವರ ಹೆಸರೂ ಕಾರ್ಮಿಕರ ಪಟ್ಟಿಯಲ್ಲಿದ್ದವು. ಛಾಯಾ ಮನೆಯಲ್ಲಿದ್ದರೆ, ಅವರ ಪತಿ ಹತ್ತಿರದ ಗ್ರಾಮದಲ್ಲಿದ್ದರು. "ನಾನು ಕೊನೆಯದಾಗಿ ಎರಡು ತಿಂಗಳ ಹಿಂದೆ ಈ ಯೋಜನೆಯಡಿ ಕೆಲಸ ಮಾಡಿದ್ದೆ. ಇಂದು ನನ್ನನ್ನು ಕಾರ್ಮಿಕಳೆಂದು ಪಟ್ಟಿ ಮಾಡಿರುವ ವಿಷಯ ನನಗೆ ತಿಳಿದಿಲ್ಲ" ಎಂದರು ಛಾಯಾ.
ನಿರ್ಮಾಣವಾಗದ ಮತ್ತೊಂದು ರಸ್ತೆ :
ಕಾಕೇಧಿರಾ ಪಂಚಾಯಿತಿ ಹೊರಡಿಸಿದ ಕೆಲಸದ ಆದೇಶದಲ್ಲಿ ರಸ್ತೆ ನಿರ್ಮಾಣಕ್ಕೆ 10 ಕಾರ್ಮಿಕರನ್ನು ನಿಯೋಜಿಸಲಾಗಿದೆ ಎಂದು ನಮೂದಿಸಲಾಗಿತ್ತು.
ಗ್ರಾಮದ ರೈತ ಉದ್ಧವ್ ರಾವ್ ಮಾತನಾಡಿ, ಪಟ್ಟಿಯಲ್ಲಿರುವ ನಾಲ್ವರು ಕಾರ್ಮಿಕರು 10 ಕಿ.ಮೀ. ದೂರದ ಬೀಡ್ ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇನ್ನೊಬ್ಬ ಮಹಿಳೆ ತಮ್ಮ ಮಗಳೊಂದಿಗೆ ಹತ್ತಿರದ ಗ್ರಾಮದಲ್ಲಿದ್ದರು.
ಕಾರ್ಮಿಕ ನವನಾಥ್ ವೈಜನಾಥ್ ಅವರ ಮನೆಗೆ ತೆರಳಿದಾಗ, ಅವರ ಪತ್ನಿ ರುಕ್ಮಿಣಿ ಮಾತನಾಡಿ, ತಮ್ಮ ಪತಿ ಈ ಯೋಜನೆಯಡಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು. ಮಸ್ಟರ್ ರೋಲ್ನಲ್ಲಿ ಇಬ್ಬರ ಹೆಸರೂ ಇತ್ತು. "ನನಗೆ ಕೊನೆಯದಾಗಿ ಜೂನ್ನಲ್ಲಿ ಈ ಯೋಜನೆಯಡಿ ಕೆಲಸ ಸಿಕ್ಕಿತ್ತು" ಎಂದು ರುಕ್ಮಿಣಿ ತಿಳಿಸಿದರು.
"ನಾನು ಹತ್ತಿ ಬೆಳೆಯುತ್ತೇನೆ. ಹಲವು ವರ್ಷಗಳಿಂದ ನನಗೆ ಈ ಯೋಜನೆಯಡಿ ಯಾವುದೇ ಕೆಲಸ ಸಿಕ್ಕಿಲ್ಲ" ಎಂದು ಅವರ ಮನೆಯಲ್ಲಿ ಸಿಕ್ಕ ವಿದ್ಯಾವತಿ ಬಿಭೀಷಣ್ ಹೇಳಿದರು.
ಹತ್ತನೇ ಕಾರ್ಮಿಕ ಎಲ್ಲಿದ್ದಾರೆ ಎಂಬುದು ಗ್ರಾಮದಲ್ಲಿ ಯಾರಿಗೂ ತಿಳಿದಿರಲಿಲ್ಲ.
ಈ ಕೆಲಸದ ಆದೇಶದ ಉದ್ಯೋಗ ಸೇವಕ ಬಾಬಾಸಾಹೇಬ್ ಮುರಳಿಧರ್ ಆರಂಭದಲ್ಲಿ ಗ್ರಾಮದಲ್ಲಿ 'ವಿಬಿ-ಜಿ ರಾಮ್ ಜಿ' ಯೋಜನೆಯಡಿ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಹೇಳಿದರು. ಅಕ್ಟೋಬರ್ 4ಕ್ಕೆ ಹೊರಡಿಸಲಾದ ಕೆಲಸದ ಆದೇಶದ ವಿವರಗಳನ್ನು scroll ನೀಡಿ, ಹಾಜರಾತಿಯನ್ನು ಹೇಗೆ ದಾಖಲಿಸಲಾಯಿತು ಎಂದು ಪ್ರಶ್ನಿಸಿದಾಗ, "ಕಾರ್ಮಿಕರು ಕೆಲಸಕ್ಕೆ ಬಂದಿದ್ದರು" ಎಂದು ಅವರು ವಾದಿಸಿದರು.
ನಾನು ಮನೆಯಿಂದ ಹೊರಗೆ ಹೆಜ್ಜೆ ಇಡಲೇ ಇಲ್ಲ. ಕಾಮಗಾರಿ ಸ್ಥಳದಲ್ಲಿ ನಾನು ಹೇಗೆ ಇರಲು ಸಾಧ್ಯ? :
ಕಾಮ್ಖೇಡ ಪಂಚಾಯಿತಿ ಹೊರಡಿಸಿದ ಮಸ್ಟರ್ ರೋಲ್ನಲ್ಲಿ, ರೇಷ್ಮೆ ಹುಳು ಸಾಕಣೆ ಕೆಲಸಕ್ಕಾಗಿ ಎಂಟು ಕಾರ್ಮಿಕರಿಗೆ ಕೆಲಸ ಹಂಚಿಕೆ ಮಾಡಿ, ಅವರು ಹಾಜರಾಗಿದ್ದಾರೆ ಎಂದು ದಾಖಲಿಸಲಾಗಿತ್ತು. ಇವರಲ್ಲಿ ಐವರು ಸರಪಂಚ್ ಬಿಲಾಲ್ ಶೇಖ್ ಅವರ ನಿಕಟ ಸಂಬಂಧಿಗಳಾದ ಶೇಖ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ. scroll ಅವರ ಮನೆಗೆ ಭೇಟಿ ನೀಡಿದಾಗ, ಮಸ್ಟರ್ ರೋಲ್ನಲ್ಲಿ ತಮ್ಮ ಹೆಸರುಗಳಿರುವುದು ತಮಗೆ ತಿಳಿದೇ ಇಲ್ಲ ಎಂದು ಆ ಕುಟುಂಬದವರು ಹೇಳಿದರು.
ಪಟ್ಟಿಯಲ್ಲಿದ್ದ ಮೂವರು ಕಾರ್ಮಿಕರು ಮನೆಯಲ್ಲಿದ್ದರೆ, ಇಬ್ಬರು ಗ್ರಾಮದ ಹೊರಗೆ ಕೆಲಸ ಮಾಡುತ್ತಿದ್ದರು. ಪಟ್ಟಿಯಲ್ಲಿದ್ದ ಮತ್ತೊಬ್ಬ ಮಹಿಳೆ ಸಲೇಹಾ ಶೇಖ್ ಮನೆಯಲ್ಲಿದ್ದು, ತಾವು "ಈ ಯೋಜನೆಯಡಿ ಎಂದಿಗೂ ಹಣ ಪಡೆದಿಲ್ಲ" ಎಂದು ತಿಳಿಸಿದರು. ಅವರ ಮಾವ ಖುರ್ಷಿದ್ ಶೇಖ್ ಮಾತನಾಡಿ, ತಾವು ಅಂದು ಮನೆಯಿಂದ ಹೊರಗೇ ಬಂದಿರಲಿಲ್ಲ ಎಂದರು. "ಹಾಗಿದ್ದಾಗ ಕಾಮಗಾರಿ ಸ್ಥಳದಲ್ಲಿ ನನ್ನ ಫೋಟೊ ತೆಗೆಯಲು ಹೇಗೆ ಸಾಧ್ಯ?" ಎಂದು ಅವರು ಪ್ರಶ್ನಿಸಿದರು.
ನಾವು ಇನ್ನೂ ಮೂವರು ಕಾರ್ಮಿಕರ ಮನೆಗಳಿಗೆ ತಲುಪಿದಾಗ, ಅವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು.
ಕೆಲಸದ ಆದೇಶದ ಪ್ರಸ್ತಾಪವು ಸರಪಂಚ್ ಕಚೇರಿಯಿಂದಲೇ ಆರಂಭವಾಗುತ್ತದೆ ಮತ್ತು ಕಾರ್ಮಿಕರನ್ನು ಅಲ್ಲಿಂದಲೇ ನಿಯೋಜಿಸಲಾಗುತ್ತದೆ. ಆದರೆ ಸರಪಂಚ್ ಬಿಲಾಲ್ ಪಟೇಲ್ scroll ಜತೆ ಮಾತನಾಡಿ, ತಮಗೆ "ಈ ಕೆಲಸದ ಆದೇಶಗಳ ಕುರಿತು ಮಾಹಿತಿಯಿಲ್ಲ" ಎಂದು ಹೇಳಿದರು.
ಸ್ಥಳೀಯ ನಾಯಕರಿಂದ ಹಣ ವಿತ್ಡ್ರಾ :
ಖಾಪರ್ಪಾಂಗರಿ ಪಂಚಾಯಿತಿಯಲ್ಲಿ ಒಂಬತ್ತು ಕಾರ್ಮಿಕರಿಗೆ ಬಾವಿ ತೋಡುವ ಕೆಲಸವನ್ನು ಹಂಚಿಕೆ ಮಾಡಿ, ಅವರು ಕಾಮಗಾರಿ ಸ್ಥಳದಲ್ಲಿ ಹಾಜರಿದ್ದಾರೆ ಎಂದು ಗುರುತಿಸಲಾಗಿತ್ತು.
ಅವರಲ್ಲಿ ಒಬ್ಬರಾದ ರಾಮನಾಥ್ ತುಕಾರಾಮ್ ಮಾತನಾಡಿ, ತಾವು ಕೊನೆಯದಾಗಿ ಒಂದು ವರ್ಷದ ಹಿಂದೆ ಈ ಯೋಜನೆಯಡಿ ಕೆಲಸ ಮಾಡಿದ್ದಾಗಿ ಹೇಳಿದರು. "ನನ್ನ ಹೆಸರನ್ನು ಯಾರು ಸೇರಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನನಗೆ ಈ ಯೋಜನೆಯಡಿ ಯಾವುದೇ ಹಣ ಸಿಗುವುದಿಲ್ಲ" ಎಂದು ಅವರು ತಿಳಿಸಿದರು. ತುಕಾರಾಮ್ ಮೂರ್ತಿಗಳನ್ನು ಮಾಡಿ ಜೀವನ ಸಾಗಿಸುತ್ತಾರೆ.
ಅಜಾಬಿ ಮತ್ತು ಸೀಮಾ ಲಿಂಬಾಜಿ ಮನೆಯಲ್ಲಿದ್ದು, ಉದ್ಯೋಗ ಯೋಜನೆಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಿರುವ ವಿಷಯ ತಮಗೆ ತಿಳಿದಿರಲಿಲ್ಲ.
ಹಾಜರಾತಿ ಪಟ್ಟಿಯಲ್ಲಿದ್ದ ಶಿವಾರಾಜ್ ಶಿಂದ್ಕೆ ಮತ್ತು ಸುಲಭ ರಾಜಾಭಾವು ಅಂದು ತಮ್ಮ ಜಮೀನಿನಲ್ಲಿದ್ದರು. ಮೇಘರಾಜ್ ಶಿಂದ್ಕೆ ಎಂಬ ಕಾರ್ಮಿಕನನ್ನು ಪತ್ತೆಹಚ್ಚಲು scrollಗೆ ಸಾಧ್ಯವಾಗಲಿಲ್ಲ. ಅವರು ಬೀಡ್ನ ಕಾಲೇಜೊಂದರಲ್ಲಿ ಓದುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.
ಅದೇ ಗಲ್ಲಿಯಲ್ಲಿ ವಿಕಾಸ್ ಪಾಲಟೆ, ಅವರ ಪತ್ನಿ ಸಂಗೀತಾ ಪಾಲಟೆ ಮತ್ತು ಸೋದರಸಂಬಂಧಿ ಗಣೇಶ್ ಪಾಲಟೆ ಅವರನ್ನು ಕಾರ್ಮಿಕರೆಂದು ಪಟ್ಟಿ ಮಾಡಲಾಗಿತ್ತು. "ನಾನು ಈ ಯೋಜನೆಯಡಿ ಕೆಲಸ ಮಾಡುವುದಿಲ್ಲ. ಪ್ರತಿ ತಿಂಗಳು ನನ್ನ ಖಾತೆಗೆ ಒಂದಷ್ಟು ಹಣ ಜಮೆಯಾಗುತ್ತದೆ. ಅದನ್ನು ಸ್ಥಳೀಯ ನಾಯಕರು ವಿತ್ಡ್ರಾ ಮಾಡಿಕೊಳ್ಳುತ್ತಾರೆ" ಎಂದು ಪಾಲಟೆ ಹೇಳಿದರು.
ಬೆಳೆ ವಿಫಲ, ಉದ್ಯೋಗ ಯೋಜನೆಯೂ ವಿಫಲ :
ಬೀಡ್ನ ಹೆಚ್ಚಿನ ನಿವಾಸಿಗಳಿಗೆ ಬರಗಾಲ ಮತ್ತು ಉದ್ಯೋಗ ಖಾತ್ರಿ ಯೋಜನೆಯ ವೈಫಲ್ಯದಿಂದಾಗಿ ವಲಸೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಪ್ರತಿ ವರ್ಷ ಈ ಸಮಯದಲ್ಲಿ ಸುಮಾರು 1.25 ಲಕ್ಷ ಜನರು ಕೆಲಸ ಅರಸಿ ಬೀಡ್ನಿಂದ ಹೊರಗೆ ಪ್ರಯಾಣಿಸುತ್ತಾರೆ.
ಆದರೆ ಮಳೆಯ ಕೊರತೆ, ಬೆಳೆ ಹಾನಿ, ನೀರಿನ ಅಭಾವ ಮತ್ತು ಉದ್ಯೋಗದ ಕೊರತೆಯು ಈ ವರ್ಷ ವಲಸೆ ಹೋಗುವವರ ಸಂಖ್ಯೆಯನ್ನು ಹೆಚ್ಚಿಸಬಹುದು. ಸಾಮಾನ್ಯವಾಗಿ ಜನರು ವರ್ಷಕ್ಕೆ ನಾಲ್ಕರಿಂದ ಐದು ತಿಂಗಳು ವಲಸೆ ಹೋಗಬೇಕಿದ್ದರೆ, ಈ ವರ್ಷ ಅದು ಏಳು ತಿಂಗಳಿಗಿಂತ ಹೆಚ್ಚು ಕಾಲ ವಿಸ್ತರಿಸಬಹುದು ಎಂದು ನಿವಾಸಿಗಳು scrollಗೆ ತಿಳಿಸಿದ್ದಾರೆ.
ಮೋರ್ಫಳಿ ಗ್ರಾಮದ ರಮೇಶ್ ನರುಟೆ ಅವರು ಹತ್ತಿ ಮತ್ತು ಕಬ್ಬು ಕಟಾವು ಮಾಡಿ ಪ್ರತಿ ವರ್ಷ 7 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದರು. ಈ ವರ್ಷ ಅವರ ಆದಾಯ ಕೇವಲ 1 ಲಕ್ಷ ರೂಪಾಯಿಗೆ ಕುಸಿದಿದೆ. "ನನಗೆ 4.5 ಲಕ್ಷ ರೂಪಾಯಿ ಸಾಲವಿದೆ. ಕೆಲಸಕ್ಕಾಗಿ ನನ್ನ ಪತ್ನಿಯೊಂದಿಗೆ ಸಾಂಗ್ಲಿಗೆ ವಲಸೆ ಹೋಗುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ. ಮುಂದಿನ ಮಳೆಯಾಗುವವರೆಗೆ ನಾವು ರಸ್ತೆಬದಿಯಲ್ಲೇ ವಾಸಿಸುತ್ತಾ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತೇವೆ" ಎಂದು ಅವರು ಹೇಳಿದರು.
ಸತೀಶ್ ಶಿರ್ಸತ್ ಅವರು ಮತ್ತೆ ಯಾವಾಗ ಹಿಂತಿರುಗುತ್ತಾರೆ ಎಂಬುದು ಅವರಿಗೆ ಖಚಿತವಿಲ್ಲ. "ಗ್ರಾಮದಲ್ಲಿ ನೀರಿಲ್ಲದಿದ್ದರೆ, ಮುಂದಿನ ಮಳೆಯಾಗುವವರೆಗೂ ನಾನು ಹಿಂತಿರುಗುವುದಿಲ್ಲ" ಎಂದು ಅವರು ಹೇಳಿದರು.
ಸೌಜನ್ಯ: scroll.in






