ಪೂರ್ಣ ಬರ್ತ್ ಸಿಗದಿದ್ದರೂ ಪೂರ್ಣ ದರವೇಕೆ? RAC ಟಿಕೆಟ್ ನಿಯಮ ಬದಲಿಸಲು ಭಾರತೀಯ ರೈಲ್ವೆ ಚಿಂತನೆ

ಸಾಂದರ್ಭಿಕ ಚಿತ್ರ
ವೇಟ್ ಲಿಸ್ಟ್ ಟಿಕೆಟ್ ಗಿಂತ ಭಿನ್ನವಾಗಿ, RAC ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ರೈಲು ಹತ್ತಲು ಅನುಮತಿ ಇರುವುದರಿಂದ ಪ್ರಯಾಣ ಖಚಿತವಾಗಿದೆ ಎಂಬ ಸಮಾಧಾನ ಸಿಗುತ್ತದೆ. ಆದರೆ ನಂತರ ಪ್ರತ್ಯೇಕ ಬರ್ತ್ ಸಿಗುತ್ತದೆಯೇ ಅಥವಾ ಒಬ್ಬರಿಗಾಗಿ ಮೀಸಲಾದ ಜಾಗವನ್ನು ಇಬ್ಬರು ಪ್ರಯಾಣಿಕರು ಹಂಚಿಕೊಳ್ಳಬೇಕಾಗುತ್ತದೆಯೇ ಎಂಬ ಅನಿಶ್ಚಿತತೆ ಎದುರಾಗುತ್ತದೆ.
ಭಾರತದ ಲಕ್ಷಾಂತರ ರೈಲು ಪ್ರಯಾಣಿಕರಿಗೆ ಟಿಕೆಟ್ ನಲ್ಲಿ 'RAC' (ರದ್ದತಿಯ ವಿರುದ್ಧ ಕಾಯ್ದಿರಿಸುವಿಕೆ) ಎಂದು ಕಂಡಾಗ ಸಮಾಧಾನದ ಜೊತೆಗೆ ಅನಿಶ್ಚಿತತೆಯೂ ಕಾಡುತ್ತಿರುತ್ತದೆ. ವೇಟ್ ಲಿಸ್ಟ್ ಟಿಕೆಟ್ ಗಿಂತ ಭಿನ್ನವಾಗಿ, RAC ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ರೈಲು ಹತ್ತಲು ಅನುಮತಿ ಇರುವುದರಿಂದ ಪ್ರಯಾಣ ಖಚಿತವಾಗಿದೆ ಎಂಬ ಸಮಾಧಾನ ಸಿಗುತ್ತದೆ. ಆದರೆ ನಂತರ ಒಂದು ಅನಿಶ್ಚಿತತೆ ಎದುರಾಗುತ್ತದೆ. ತಮಗೆ ಪ್ರತ್ಯೇಕ ಬರ್ತ್ ಸಿಗುತ್ತದೆಯೇ ಅಥವಾ ಒಬ್ಬರಿಗಾಗಿ ಮೀಸಲಾದ ಜಾಗವನ್ನು ಇಬ್ಬರು ಪ್ರಯಾಣಿಕರು ಹಂಚಿಕೊಳ್ಳಬೇಕಾಗುತ್ತದೆಯೇ?
ದೀರ್ಘಾವಧಿಯ ರಾತ್ರಿ ಪ್ರಯಾಣಗಳಲ್ಲಿ ಇದು ದೊಡ್ಡ ವ್ಯತ್ಯಾಸವನ್ನೇ ಉಂಟುಮಾಡಬಹುದು. ಪ್ರಯಾಣಿಕರು ಪೂರ್ಣ ದರ ಪಾವತಿಸುತ್ತಾರೆ. ಆದರೆ RAC ಟಿಕೆಟ್ ಇದ್ದರೆ ಪೂರ್ಣ ಬರ್ತ್ ಸಿಗುವ ಖಾತರಿ ಇರುವುದಿಲ್ಲ. ಒಂದು ವೇಳೆ ಬೇರೆ ಬರ್ತ್ ಲಭ್ಯವಾಗದೆ ಇದ್ದರೆ, ಮತ್ತೊಬ್ಬ RAC ಪ್ರಯಾಣಿಕರೊಂದಿಗೆ ಒಂದೇ ಬರ್ತ್ ಅನ್ನು ಹಂಚಿಕೊಳ್ಳಬೇಕಾಗಬಹುದು.
ರೈಲು ಪ್ರಯಾಣದಲ್ಲಿ ಇದೊಂದು ಸಾಮಾನ್ಯ ವ್ಯವಸ್ಥೆಯಾಗಿದೆ. ಆದರೆ ಈಗ ದೀರ್ಘಕಾಲದಿಂದ ಜಾರಿಯಲ್ಲಿರುವ ಈ ವ್ಯವಸ್ಥೆಯ ಬಗ್ಗೆ ಮರುಪರಿಶೀಲನೆ ನಡೆಸುವ ಸಾಧ್ಯತೆ ಕಂಡುಬರುತ್ತಿದೆ.
ವರದಿಗಳ ಪ್ರಕಾರ, ಭಾರತೀಯ ರೈಲ್ವೆಯು RAC ವ್ಯವಸ್ಥೆಯನ್ನು ರದ್ದುಗೊಳಿಸಬೇಕೆ ಅಥವಾ ಅದನ್ನು ಮರುವಿನ್ಯಾಸಗೊಳಿಸಬೇಕೆ ಎಂದು ಪರಿಶೀಲಿಸುತ್ತಿದೆ. RAC ಪ್ರಯಾಣಿಕರು ಪೂರ್ಣ ದರವನ್ನು ಪಾವತಿಸಿದರೂ ಅವರಿಗೆ ಪ್ರತ್ಯೇಕ ಮಲಗುವ ಜಾಗ ಸಿಗದೆ ಇರಬಹುದು ಎಂಬ ಕಾರಣಕ್ಕೆ ಈ ವಿಷಯವು ಚರ್ಚೆಗೆ ಬಂದಿದೆ.
ಪ್ರಯಾಣಿಕರಿಗೆ ಪೂರ್ಣ ಮಲಗುವ ಜಾಗ ಸಿಗದೆ ಇದ್ದಾಗ ಅವರಿಂದ ಪೂರ್ಣ ದರವನ್ನು ವಸೂಲಿ ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿರುವುದಾಗಿ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೆ, ಪರಸ್ಪರ ಪರಿಚಯವಿಲ್ಲದ ಇಬ್ಬರು ಪ್ರಯಾಣಿಕರು ಒಂದೇ ಮಲಗುವ ಜಾಗವನ್ನು ಹಂಚಿಕೊಳ್ಳಬೇಕಾದಾಗ ಮತ್ತು ಅವರಿಗೆ ನೀಡಲು ಬೇರೆ ಖಾಲಿ ಬರ್ತ್ ಲಭ್ಯವಿಲ್ಲದಿದ್ದಾಗ, ಇದು ಪ್ರಯಾಣಿಕರಿಗೆ ಹಾಗೂ ಟಿಕೆಟ್ ಪರಿಶೀಲಕರಿಗೆ ತೊಂದರೆ ಉಂಟುಮಾಡಬಹುದು.
ಸಂಸತ್ತಿನಲ್ಲೂ RAC ಪೂರ್ಣ ದರದ ಕುರಿತು ಚರ್ಚೆಗಳಾಗಿವೆ. 2026ರ ಫೆಬ್ರವರಿಯಲ್ಲಿ ಸಂಸತ್ತಿನ ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ’ಯು ಭಾರತೀಯ ರೈಲ್ವೆಯ ರೈಲು ಕಾರ್ಯಾಚರಣೆಗಳಲ್ಲಿನ ಸಮಯಪಾಲನೆ ಮತ್ತು ಪ್ರಯಾಣದ ಸಮಯದ ಕುರಿತಾದ ತನ್ನ ವರದಿಯಲ್ಲಿ RAC ದರಗಳ ವಿಷಯವನ್ನು ಪ್ರಸ್ತಾಪಿಸಿತ್ತು.
RAC ಅಡಿಯಲ್ಲಿ ಟಿಕೆಟ್ ಪಡೆದ ಪ್ರಯಾಣಿಕರಿಗೆ, ಚಾರ್ಟ್ ತಯಾರಿಕೆಯ ನಂತರವೂ ಬರ್ತ್ ಸೌಲಭ್ಯ ಸಿಗದೆ ಅವರು RAC ವಿಭಾಗದಲ್ಲೇ ಉಳಿದುಕೊಂಡರೆ, ಅಂತಹ ಸಂದರ್ಭದಲ್ಲಿ ಪೂರ್ಣ ದರವನ್ನು ವಿಧಿಸುವುದು ಸಮರ್ಥನೀಯವಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಪೂರ್ಣ ಬರ್ತ್ ಸಿಗದೆ ಇದ್ದರೂ ರೈಲು ಏರುವ ಸಮಯದಲ್ಲಿ ಪೂರ್ಣ ದರವನ್ನು ಪಾವತಿಸಿದ ಪ್ರಯಾಣಿಕರಿಗೆ ದರದ ಒಂದು ಭಾಗವನ್ನು ಹಿಂತಿರುಗಿಸುವ ವ್ಯವಸ್ಥೆಯನ್ನು ರೈಲ್ವೆ ಸಚಿವಾಲಯ ರೂಪಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.






