ಜಾಗತಿಕ ವ್ಯಾಪಾರಕ್ಕೆ ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರ ಏಕೆ ಮುಖ್ಯ?

Photo Credit : firstpost.com
ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರ ವಿಷಯದಲ್ಲಿ ಅಮೆರಿಕಕ್ಕೆ ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ಇದೆಯೇ ಎಂಬ ಸಂವಾದದ ಪ್ರಶ್ನೆಗೆ ಅಮೆರಿಕದ ಸಂಸದೆ ಡಾರ್ಲಿನ್ ಗ್ರಹಾಂ, ‘ರಾಷ್ಟ್ರೀಯ ಭದ್ರತೆ ನನ್ನ ವಿಷಯವಲ್ಲ’ ಎಂದು ಉತ್ತರಿಸಿದ್ದು ತೀವ್ರ ಟೀಕೆಗೆ ಗುರಿಯಾಗಿತ್ತು.
ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರ ವಿಷಯಗಳು ಹಲವು ಕಾಲದಿಂದ ಅಮೆರಿಕದ ವಿದೇಶಾಂಗ ನೀತಿಯ ಪ್ರಮುಖ ಭಾಗವಾಗಿವೆ. ಚೀನಾದ ಜತೆಗಿನ ಸಂಘರ್ಷಗಳಿಂದಾಗಿ ಈ ಎರಡೂ ಪ್ರದೇಶಗಳು ಇತ್ತೀಚಿನ ತಿಂಗಳುಗಳಲ್ಲಿ ನಿರಂತರವಾಗಿ ಸುದ್ದಿಯಲ್ಲಿದ್ದವು. ಚೀನಾ ತೈವಾನ್ ಅನ್ನು ತನ್ನದೇ ಭೂಭಾಗ ಎಂದು ಪ್ರತಿಪಾದಿಸುತ್ತದೆ. ಜೊತೆಗೆ ದಕ್ಷಿಣ ಚೀನಾ ಸಮುದ್ರದ ಬಹುತೇಕ ಭಾಗದ ಮೇಲೆ ತನ್ನ ಸಾರ್ವಭೌಮತ್ವವನ್ನು ಸಾಧಿಸಲು ಯತ್ನಿಸುತ್ತಿದೆ. ಇದು ಈ ಪ್ರದೇಶದಲ್ಲಿರುವ ಅಮೆರಿಕದ ಮಿತ್ರ ರಾಷ್ಟ್ರಗಳ ಜತೆ ಚೀನಾದ ನೇರ ಸಂಘರ್ಷಕ್ಕೆ ಕಾರಣವಾಗಿದೆ.
ಜಾಗತಿಕ ವ್ಯಾಪಾರಕ್ಕೆ ಈ ಪ್ರದೇಶಗಳು ಎಷ್ಟು ಮುಖ್ಯವೆಂದರೆ, ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಯೂ ಕೇವಲ ಈ ಭಾಗದ ಮೇಲಷ್ಟೇ ಅಲ್ಲದೆ, ಇಡೀ ವಿಶ್ವದ ಮೇಲೆಯೇ ಪರಿಣಾಮ ಬೀರಬಲ್ಲದು.
ಚೀನಾ, ಫಿಲಿಪೈನ್ಸ್ ಮತ್ತು ವಿಯೆಟ್ನಾಂ ಸೇರಿದಂತೆ ಹಲವು ದೇಶಗಳ ಗಡಿಯನ್ನು ಹಂಚಿಕೊಂಡಿರುವ ದಕ್ಷಿಣ ಚೀನಾ ಸಮುದ್ರವು ವಿಶ್ವದ ಅತ್ಯಂತ ಪ್ರಮುಖ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿದೆ. ಇತ್ತ ತೈವಾನ್ ಜಗತ್ತಿನ ಅತ್ಯಾಧುನಿಕ ಸೆಮಿಕಂಡಕ್ಟರ್ ಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದಿಸುತ್ತದೆ.
“ಈ ಎರಡೂ ಪ್ರದೇಶಗಳು ಪರಸ್ಪರ ನಿಕಟ ಸಂಪರ್ಕ ಹೊಂದಿವೆ. ಒಂದು ವೇಳೆ ಚೀನಾ ತೈವಾನ್ ಅನ್ನು ಮುತ್ತಿಗೆ ಹಾಕಲು ಅಥವಾ ಬಲವಂತವಾಗಿ ತನ್ನ ವಶಕ್ಕೆ ಪಡೆಯಲು ಯತ್ನಿಸಿದರೆ, ಅದರ ಪ್ರತ್ಯಕ್ಷ ಪರಿಣಾಮಗಳು ತಕ್ಷಣವೇ ದಕ್ಷಿಣ ಚೀನಾ ಸಮುದ್ರದ ಮೇಲೆಯೂ ಕಂಡುಬರಲಿವೆ” ಎಂದು ಆಸ್ಟ್ರೇಲಿಯಾದ ಲೋವಿ ಇನ್ಸ್ಟಿಟ್ಯೂಟ್ ನ ಆಗ್ನೇಯ ಏಷ್ಯಾ ಕಾರ್ಯಕ್ರಮದ ನಿರ್ದೇಶಕ ಹಂಟರ್ ಎಸ್. ಮಾರ್ಸ್ಟನ್ ಹೇಳಿದ್ದಾರೆ.
►ಅಮೆರಿಕ–ಚೀನಾ ಸಂಬಂಧದಲ್ಲಿ ತೈವಾನ್
ವಿದೇಶಾಂಗ ನೀತಿಯಲ್ಲಿ ಸಕ್ರಿಯರಾಗಿದ್ದ ಹಾಗೂ ತೈವಾನ್ ಸೇರಿದಂತೆ ಹಲವು ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದ ತಮ್ಮ ದಿವಂಗತ ಸಹೋದರ ಲಿಂಡ್ಸೆ ಗ್ರಹಾಂ ಅವರ ಸ್ಥಾನಕ್ಕೆ ನೇಮಕಗೊಂಡಿದ್ದ ಡಾರ್ಲಿನ್ ಗ್ರಹಾಂ, ಈಗ ಪೂರ್ಣ ಪ್ರಮಾಣದ ಸೆನೆಟ್ ಸದಸ್ಯತ್ವಕ್ಕಾಗಿ ಸ್ಪರ್ಧಿಸುತ್ತಿದ್ದಾರೆ.
ತೈವಾನ್ ಸ್ವಾಯತ್ತ ಆಡಳಿತ ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆದರೆ ಚೀನಾ ಇದನ್ನು ತನ್ನದೇ ಭೂಭಾಗ ಎಂದು ಪ್ರತಿಪಾದಿಸುತ್ತಿದ್ದು, ಅದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಶಸ್ತ್ರ ಬಲಪ್ರಯೋಗವನ್ನೂ ತಳ್ಳಿಹಾಕಿಲ್ಲ. 1949ರ ಅಂತರ್ಯುದ್ಧದ ಸಮಯದಲ್ಲಿ ಚೀನಾ ಮತ್ತು ತೈವಾನ್ ಬೇರ್ಪಟ್ಟ ನಂತರ, ಇದು ಅಂತಾರಾಷ್ಟ್ರೀಯ ಮಟ್ಟದ ಜಟಿಲ ಸಮಸ್ಯೆಯಾಗಿ ಹೊರಹೊಮ್ಮಿದೆ.
ಚೀನಾ ಪ್ರತಿದಿನವೂ ತನ್ನ ಮಿಲಿಟರಿ ವಿಮಾನಗಳು, ಕೋಸ್ಟ್ ಗಾರ್ಡ್ ನೌಕೆಗಳು ಮತ್ತು ಇತರ ಹಡಗುಗಳನ್ನು ತೈವಾನ್ ಸುತ್ತಮುತ್ತ ಕಳುಹಿಸುತ್ತದೆ ಹಾಗೂ ನಿಯಮಿತವಾಗಿ ಬೃಹತ್ ಪ್ರಮಾಣದ ಮಿಲಿಟರಿ ಅಭ್ಯಾಸಗಳನ್ನು ನಡೆಸುತ್ತದೆ. ಇದಕ್ಕೆ ಪ್ರತಿಯಾಗಿ ತೈವಾನ್ ಕೂಡ ತನ್ನ ವಾರ್ಷಿಕ ‘ಹಾನ್ ಕುವಾಂಗ್’ ಸಮರಾಭ್ಯಾಸ ಸೇರಿದಂತೆ ನಿರಂತರ ಮಿಲಿಟರಿ ತರಬೇತಿಗಳನ್ನು ನಡೆಸುತ್ತದೆ.
ಅಮೆರಿಕವು ತೈವಾನ್ ಜತೆ ಯಾವುದೇ ಅಧಿಕೃತ ರಾಜತಾಂತ್ರಿಕ ಬಾಂಧವ್ಯ ಹೊಂದಿಲ್ಲ. ಆದರೆ ವ್ಯಾಪಕವಾದ ಅನಧಿಕೃತ ಬಾಂಧವ್ಯವನ್ನು ಕಾಯ್ದುಕೊಂಡಿದ್ದು, ಅಮೆರಿಕದ ಕಾನೂನಿನ ಪ್ರಕಾರ ತೈವಾನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಗತ್ಯವಿರುವ ಬೆಂಬಲವನ್ನು ನೀಡುವುದು ಕಡ್ಡಾಯವಾಗಿದೆ.
ಈ ವ್ಯವಸ್ಥೆಯಡಿ, ಅಮೆರಿಕವು ತೈವಾನ್ ಗೆ ಪ್ರಮುಖ ಅನಧಿಕೃತ ಬೆಂಬಲಿಗ ಮತ್ತು ಶಸ್ತ್ರಾಸ್ತ್ರ ಪೂರೈಕೆದಾರ ದೇಶವಾಗಿದೆ. ಈ ಸಂಬಂಧವೇ ಚೀನಾದ ಜತೆಗಿನ ನಿರಂತರ ಉದ್ವಿಗ್ನತೆಗೆ ಪ್ರಮುಖ ಕಾರಣವಾಗಿದೆ.
ಮೇ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೀಜಿಂಗ್ ಗೆ ಭೇಟಿ ನೀಡಿದ್ದಾಗ, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ದ್ವಿಪಕ್ಷೀಯ ಸಂಬಂಧದಲ್ಲಿ ತೈವಾನ್ ವಿಷಯವೇ ಅತ್ಯಂತ ಪ್ರಮುಖವಾದುದು ಎಂದು ಸ್ಪಷ್ಟಪಡಿಸಿದ್ದರು. ತೈವಾನ್ ಜತೆಗಿನ ಬಾಂಧವ್ಯವನ್ನು ಅಮೆರಿಕ ತಪ್ಪಾಗಿ ನಿರ್ವಹಿಸಿದರೆ, ಅದು ಎರಡೂ ದೇಶಗಳ ನಡುವಿನ ನೇರ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಷಿ ಎಚ್ಚರಿಸಿದ್ದರು.
ತಮ್ಮ ಪ್ರವಾಸದ ಸಮಯದಲ್ಲಿ ಟ್ರಂಪ್ ತೈವಾನ್ ಬಗ್ಗೆ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಲಿಲ್ಲ. ಆದರೆ ಅಮೆರಿಕಕ್ಕೆ ಹಿಂತಿರುಗುವಾಗ, ತೈವಾನ್ ಗೆ ಶಸ್ತ್ರಾಸ್ತ್ರ ಮಾರಾಟ ಮಾಡುವುದು ಚೀನಾದ ಜತೆಗಿನ ಮಾತುಕತೆಯಲ್ಲಿ “ಉತ್ತಮ ದಾಳ” ಎಂದು ಕಾಮೆಂಟ್ ಮಾಡಿದ್ದು, ಇದು ತೈವಾನ್ನಲ್ಲಿ ಆತಂಕವನ್ನು ಮೂಡಿಸಿತ್ತು.
“ಒಂದು ವೇಳೆ ಚೀನಾ ತೈವಾನ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯಶಸ್ವಿಯಾದರೆ ಅಥವಾ ಸಂಘರ್ಷದ ಸಮಯದಲ್ಲಿ ಅಮೆರಿಕ ತೈವಾನ್ ರಕ್ಷಣೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರೆ, ಚೀನಾ ತನ್ನ ಮಿಲಿಟರಿ ಶಕ್ತಿಯನ್ನು (ವಿಶೇಷವಾಗಿ ಜಲಾಂತರ್ಗಾಮಿ ಸಾಮರ್ಥ್ಯವನ್ನು) ದಕ್ಷಿಣ ಚೀನಾ ಸಮುದ್ರ ಮತ್ತು ಪೆಸಿಫಿಕ್ ಮಹಾಸಾಗರದ ಕಡೆಗೆ ವಿಸ್ತರಿಸಲು ಸಾಧ್ಯವಾಗುತ್ತದೆ” ಎಂದು ಲೋವಿ ಇನ್ಸ್ಟಿಟ್ಯೂಟ್ನ ಮಾರ್ಸ್ಟನ್ ಹೇಳಿದ್ದಾರೆ.
ತೈವಾನ್ ಮೇಲಿನ ಯುದ್ಧವು ಆಗ್ನೇಯ ಏಷ್ಯಾದ ಮೇಲೆಯೂ ನೇರ ಪರಿಣಾಮ ಬೀರಲಿದೆ. ಆಸಿಯಾನ್ ಒಕ್ಕೂಟದ ದೇಶಗಳ ಸುಮಾರು 10 ಲಕ್ಷ ನಾಗರಿಕರನ್ನು ತೈವಾನ್ ನಿಂದ ತಕ್ಷಣವೇ ಸ್ಥಳಾಂತರಿಸಬೇಕಾಗುತ್ತದೆ. ಜತೆಗೆ ಈ ಸಂಘರ್ಷವು ಅಮೆರಿಕ ಮತ್ತು ಚೀನಾದ ಮಿಲಿಟರಿ ಪಡೆಗಳನ್ನು ದಕ್ಷಿಣ ಚೀನಾ ಸಮುದ್ರದ ಕಡೆಗೆ ತರಲಿದ್ದು, ಈ ಪ್ರಾದೇಶಿಕ ಸರ್ಕಾರಗಳಿಗೆ ಎರಡೂ ಬಲಶಾಲಿ ರಾಷ್ಟ್ರಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಲಿದೆ.
►ದಕ್ಷಿಣ ಚೀನಾ ಸಮುದ್ರದಲ್ಲಿ ಮುಂದುವರಿದ ಉದ್ವಿಗ್ನತೆ
ದಕ್ಷಿಣ ಚೀನಾ ಸಮುದ್ರದ ಮೇಲಿನ ಚೀನಾದ ವಿಸ್ತಾರವಾದ ಹಕ್ಕುಗಳಿಗೆ ಯಾವುದೇ ಕಾನೂನು ಆಧಾರವಿಲ್ಲ ಎಂದು 2016ರಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿತ್ತು. ಹೀಗಿದ್ದೂ ಚೀನಾ ಈ ಸಮುದ್ರದ ಬಹುತೇಕ ಭಾಗದ ಮೇಲೆ ತನ್ನ ಸಾರ್ವಭೌಮತ್ವವನ್ನು ಸಾಧಿಸಲು ಯತ್ನಿಸುತ್ತಿದೆ.
ಜುಲೈನಲ್ಲಿ ಈ ತೀರ್ಪಿಗೆ 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಮೆರಿಕ, ಬ್ರಿಟನ್ ಸೇರಿದಂತೆ 12 ದೇಶಗಳು ಚೀನಾದ ಹಕ್ಕು ಪ್ರತಿಪಾದನೆ ಅಸಿಂಧು ಎಂದು ಪುನರುಚ್ಚರಿಸಿದವು. ಇದಕ್ಕೆ ಪ್ರತಿಯಾಗಿ ಚೀನಾ, ತನ್ನ ವಿರುದ್ಧದ ಆ ತೀರ್ಪನ್ನು ಸ್ವೀಕರಿಸುವುದಿಲ್ಲ ಅಥವಾ ಗುರುತಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಇತ್ತೀಚಿನ ವರ್ಷಗಳಲ್ಲಿ ಈ ವಿವಾದಿತ ಜಲಪ್ರದೇಶದಲ್ಲಿ ಚೀನಾ, ಫಿಲಿಪೈನ್ಸ್ ಹಾಗೂ ವಿಯೆಟ್ನಾಂ ಪಡೆಗಳು ಮತ್ತು ಮೀನುಗಾರರ ನಡುವೆ ಸಂಘರ್ಷಗಳು ಹೆಚ್ಚಾಗಿವೆ.
ಚೀನಾದ ಕೋಸ್ಟ್ ಗಾರ್ಡ್ ಹಡಗುಗಳು ಫಿಲಿಪೈನ್ಸ್ ಪಡೆಗಳು ಮತ್ತು ಇತರ ದೇಶಗಳ ಮೀನುಗಾರರ ವಿರುದ್ಧ ಅತ್ಯಂತ ಶಕ್ತಿಯುತ ವಾಟರ್ ಕ್ಯಾನನ್ಗಳು, ಮಿಲಿಟರಿ ದರ್ಜೆಯ ಲೇಸರ್ ಹಾಗೂ ಅಪಾಯಕಾರಿ ರೀತಿಯಲ್ಲಿ ದಾರಿ ತಡೆಯುವ ತಂತ್ರಗಳನ್ನು ಬಳಸುತ್ತಿವೆ. ಇಂತಹ ಘಟನೆಗಳು ಸಮುದ್ರದಲ್ಲಿ ಹಡಗುಗಳ ಡಿಕ್ಕಿಗೆ ಮತ್ತು ಆಕಾಶದಲ್ಲಿ ಅಪಾಯಕಾರಿ ಮುಖಾಮುಖಿಗಳಿಗೆ ಕಾರಣವಾಗಿವೆ.
ಚೀನಾ ಮತ್ತು ಫಿಲಿಪೈನ್ಸ್ ಎರಡೂ ಹಕ್ಕು ಸಾಧಿಸುತ್ತಿರುವ ಸ್ಕಾರ್ಬರೊ ಶೋಲ್ ಎಂಬ ವಿವಾದಿತ ಪ್ರದೇಶದ ಬಳಿ ಚೀನಾ ಈ ತಿಂಗಳು ಮಿಲಿಟರಿ ತರಬೇತಿ ನಡೆಸಿದೆ.
ಎಪ್ರಿಲ್ ನಲ್ಲಿ ಅಮೆರಿಕ ಮತ್ತು ಫಿಲಿಪೈನ್ಸ್ ಜಂಟಿಯಾಗಿ ‘ಬಾಲಿಕಾಟನ್’ ವಾರ್ಷಿಕ ಮಿಲಿಟರಿ ಅಭ್ಯಾಸವನ್ನು ಪ್ರಾರಂಭಿಸಿದವು. ವಿವಾದಿತ ದಕ್ಷಿಣ ಚೀನಾ ಸಮುದ್ರ ಮತ್ತು ತೈವಾನ್ ಜಲಸಂಧಿಗೆ ಮುಖ ಮಾಡಿರುವ ಫಿಲಿಪೈನ್ಸ್ ಪ್ರಾಂತ್ಯಗಳಲ್ಲಿ ಕೃತಕ ಯುದ್ಧ ಸನ್ನಿವೇಶಗಳು ಹಾಗೂ ನೇರ ಗುಂಡಿನ ದಾಳಿಯ ತರಬೇತಿಗಳನ್ನು ನಡೆಸಲಾಯಿತು.
ದಕ್ಷಿಣ ಚೀನಾ ಸಮುದ್ರವು ವಿಶ್ವದ ಅತ್ಯಂತ ಪ್ರಮುಖ ಸಮುದ್ರದ ವಾಣಿಜ್ಯ ಮಾರ್ಗಗಳಲ್ಲಿ ಒಂದಾಗಿದೆ. ಇಲ್ಲಿ ಸಂಭವಿಸುವ ಯುದ್ಧವು ಜಾಗತಿಕ ವ್ಯಾಪಾರ ವಹಿವಾಟಿಗೆ ಭಾರೀ ಅಡಚಣೆ ಉಂಟುಮಾಡಬಹುದು ಎಂದು ‘ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್’ ಹೇಳಿದೆ. ಈ ಸಮುದ್ರವು ಹಿಂದೂ ಮಹಾಸಾಗರವನ್ನು ಸಂಪರ್ಕಿಸುವ ಮಲಕ್ಕಾ ಜಲಸಂಧಿ ಮತ್ತು ಪೂರ್ವ ಚೀನಾ ಸಮುದ್ರವನ್ನು ಸಂಪರ್ಕಿಸುವ ತೈವಾನ್ ಜಲಸಂಧಿಯಂತಹ ಪ್ರಮುಖ ಮಾರ್ಗಗಳ ಮೂಲಕ ಸುತ್ತಮುತ್ತಲಿನ ಜಲರಾಶಿಗೆ ಸಂಪರ್ಕ ಹೊಂದಿದೆ.
►ಈ ಪ್ರದೇಶದಲ್ಲಿ ಅಮೆರಿಕದ ಪ್ರಮುಖ ಹಿತಾಸಕ್ತಿಗಳೇನು?
ಲೋವಿ ಇನ್ಸ್ಟಿಟ್ಯೂಟ್ನ ಮಾರ್ಸ್ಟನ್ ಪ್ರಕಾರ, “ಚೀನಾ ಈ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಮತ್ತು ಪೆಸಿಫಿಕ್ ಮಹಾಸಾಗರವನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವುದನ್ನು ತಡೆಯುವುದೇ ಅಮೆರಿಕದ ಮುಖ್ಯ ಉದ್ದೇಶವಾಗಿದೆ.”
“ತೈವಾನ್ ಮತ್ತು ಫಿಲಿಪೈನ್ಸ್ನಂತಹ ತನ್ನ ಮಿತ್ರ ರಾಷ್ಟ್ರಗಳ ಸುರಕ್ಷತೆ ಹಾಗೂ ಈ ದ್ವೀಪಗಳ ಸರಣಿಯ ರಕ್ಷಣೆ ಅಮೆರಿಕದ ಈ ಪ್ರಮುಖ ಗುರಿಗೆ ಅತ್ಯಗತ್ಯವಾಗಿದೆ” ಎಂದು ಅವರು ಹೇಳಿದ್ದಾರೆ.
ಆದರೆ ಪಶ್ಚಿಮ ಪೆಸಿಫಿಕ್ ಪ್ರದೇಶದಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಕಾಯ್ದುಕೊಳ್ಳುವ ಅಮೆರಿಕದ ಸಾಮರ್ಥ್ಯಕ್ಕೆ ಇತರ ಪ್ರದೇಶಗಳಲ್ಲಿನ ಬಿಕ್ಕಟ್ಟುಗಳು ಸವಾಲಾಗಿ ಪರಿಣಮಿಸಿವೆ.
ಇರಾನ್ ವಿರುದ್ಧದ ಕಾರ್ಯಾಚರಣೆಗೆ ಬೆಂಬಲ ನೀಡಲು ಪಶ್ಚಿಮ ಏಷ್ಯಾದಲ್ಲಿದ್ದ ‘USS ಅಬ್ರಹಾಂ ಲಿಂಕನ್’ ಯುದ್ಧನೌಕೆಯ ಅವಧಿಯನ್ನು ವಿಸ್ತರಿಸಲಾಗಿದೆ. ಹೀಗಾಗಿ ಅದರ ಜಾಗಕ್ಕೆ ‘USS ಜಾರ್ಜ್ ವಾಷಿಂಗ್ಟನ್’ ವಿಮಾನವಾಹಕ ನೌಕೆಯು ಪೆಸಿಫಿಕ್ ಪ್ರದೇಶದಿಂದ ಪಶ್ಚಿಮ ಏಷ್ಯಾಕ್ಕೆ ತೆರಳಿದೆ. ಚೀನಾದ ಜತೆ ಉದ್ವಿಗ್ನತೆ ಹೆಚ್ಚುತ್ತಿರುವ ಹಾಗೂ ಟ್ರಂಪ್ ಆಡಳಿತವು ಏಷ್ಯಾ-ಪೆಸಿಫಿಕ್ ಪ್ರದೇಶದಿಂದ ಗಮನ ಹಿಂತೆಗೆದುಕೊಳ್ಳುತ್ತಿರುವ ಈ ಸಮಯದಲ್ಲಿ, ಈ ನಡೆ ಪಶ್ಚಿಮ ಪೆಸಿಫಿಕ್ ಪ್ರದೇಶವನ್ನು ತಾತ್ಕಾಲಿಕವಾಗಿ ಅಮೆರಿಕದ ಯುದ್ಧನೌಕೆಯ ಬೆಂಬಲವಿಲ್ಲದಂತೆ ಮಾಡಿದೆ.
ಸೌಜನ್ಯ: firstpost.com






