ಯುಎಸ್-ಇರಾನ್ ಉದ್ವಿಗ್ನತೆಯ ನಡುವೆ ಅಮೆರಿಕದ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ಏಕೆ ಮಹತ್ವದ್ದಾಗಿದೆ?

ಸಾಂದರ್ಭಿಕ ಚಿತ್ರ | Photo Credit : magnific.com
ಕಳೆದ ತಿಂಗಳು, ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಭುಗಿಲೆದ್ದಿರುವ ಉದ್ವಿಗ್ನತೆಯು ಜಾಗತಿಕ ತೈಲ ಪೂರೈಕೆ ಮತ್ತು ಬೆಲೆಗಳ ಸ್ಥಿರತೆಯ ಬಗ್ಗೆ ಕಳವಳವನ್ನು ಉಂಟುಮಾಡಿತು. ಇದರ ಬೆನ್ನಲ್ಲೇ, ಅಮೆರಿಕದ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು (SPR) 1983 ರ ನಂತರದ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಅಮೆರಿಕವು ಇರಾನ್ ಮೇಲೆ ದಾಳಿ ಮಾಡಿದಾಗಲೆಲ್ಲಾ ತೈಲ ಬೆಲೆಗಳು ಗಗನಕ್ಕೇರುತ್ತವೆ ಎಂಬುದನ್ನು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಪತ್ರಕರ್ತರ ಎದುರು ಒಪ್ಪಿಕೊಂಡಿದ್ದಾರೆ.
ಅವರ ಮಾತು ನಿಜವೂ ಆಯಿತು. ಬುಧವಾರದ ವಹಿವಾಟಿನಲ್ಲಿ ಬ್ರೆಂಟ್ ಫ್ಯೂಚರ್ಸ್ ಬೆಲೆಯು ಜೂನ್ 19 ರ ನಂತರದ ಅತ್ಯುನ್ನತ ಮಟ್ಟವನ್ನು ತಲುಪಿತು. ಬ್ರೆಂಟ್ ಫ್ಯೂಚರ್ಸ್ ಬೆಲೆಯು ಹಿಂದಿನ ದಿನಕ್ಕಿಂತ ಶೇಕಡಾ 5.2 ರಷ್ಟು ಹೆಚ್ಚಳ ಕಂಡು, ಪ್ರತಿ ಬ್ಯಾರೆಲ್ಗೆ 78.02 ಡಾಲರ್ಗೆ ತಲುಪಿತು.
aljazeera.comಇಂಧನ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಜುಲೈ 3ಕ್ಕೆ ಕೊನೆಗೊಂಡ ವಾರದಲ್ಲಿ ಎಸ್ಪಿಆರ್ 6.2 ಮಿಲಿಯನ್ ಬ್ಯಾರೆಲ್ಗಳಷ್ಟು ಕುಸಿತ ಕಂಡು 319.5 ಮಿಲಿಯನ್ ಬ್ಯಾರೆಲ್ಗಳಿಗೆ ತಲುಪಿದೆ. ಇದು ರೇಗನ್ ಆಡಳಿತದ ಅವಧಿಯ ನಂತರದ ಅತ್ಯಂತ ಕನಿಷ್ಠ ಮಟ್ಟವಾಗಿದೆ. ಈ ಮೀಸಲು ಒಟ್ಟು 713.5 ಮಿಲಿಯನ್ ಬ್ಯಾರೆಲ್ಗಳಷ್ಟು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದ್ದು, 2010 ರ ಸುಮಾರಿಗೆ ಈ ಗರಿಷ್ಠ ಮಟ್ಟದ ಹತ್ತಿರದಲ್ಲಿತ್ತು.
ಇಂದು, ಅಮೆರಿಕವು ವಿಶ್ವದಲ್ಲೇ ಅತಿ ಹೆಚ್ಚು ತೈಲವನ್ನು ಉತ್ಪಾದಿಸುವ ದೇಶವಾಗಿದ್ದು, ಪೆಟ್ರೋಲಿಯಂ ಉತ್ಪನ್ನಗಳ ನಿವ್ವಳ ರಫ್ತುದಾರ ಆಗಿದೆ. ಅಮೆರಿಕದಲ್ಲಿ ಶುದ್ಧೀಕರಿಸಲಾಗುವ ಕಚ್ಚಾ ತೈಲದ ಸುಮಾರು ಶೇಕಡಾ 60 ರಷ್ಟು ಭಾಗ ದೇಶೀಯ ಉತ್ಪಾದನೆಯಿಂದಲೇ ಬರುತ್ತದೆ. ಇನ್ನುಳಿದ ಶೇಕಡಾ 40 ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಅದರಲ್ಲಿ ಸರಿಸುಮಾರು ಶೇಕಡಾ 60 ರಷ್ಟು ಕೆನಡಾದಿಂದ ಮತ್ತು ಇನ್ನೊಂದು ಶೇಕಡಾ 7 ರಷ್ಟು ಮೆಕ್ಸಿಕೋದಿಂದ ಬರುತ್ತದೆ. ದೇಶದಲ್ಲಿ ಬಳಕೆಯಾಗುವ ಕಚ್ಚಾ ತೈಲದ ಕೇವಲ ಶೇಕಡಾ 7 ರಷ್ಟು ಭಾಗ ಮಾತ್ರ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ.
ಹೀಗಿದ್ದೂ, ಇರಾನ್ ಜೊತೆಗಿನ ಉದ್ವಿಗ್ನತೆಯು ಅಮೆರಿಕದ ಪೆಟ್ರೋಲ್ ಪಂಪ್ಗಳಲ್ಲಿನ ಬೆಲೆಗಳ ಮೇಲೆ ಏಕೆ ಪ್ರಭಾವ ಬೀರುತ್ತದೆ?
ಕಚ್ಚಾ ತೈಲದ ಬೆಲೆಯನ್ನು ಅದು ಎಲ್ಲಿ ಉತ್ಪಾದನೆಯಾಗಿದೆ ಎಂಬುದರ ಆಧಾರದ ಮೇಲೆ ನಿರ್ಧರಿಸಲಾಗುವುದಿಲ್ಲ. ಬದಲಿಗೆ ಜಾಗತಿಕ ಪೂರೈಕೆ ಮತ್ತು ಬೇಡಿಕೆಯನ್ನು ಪ್ರತಿಬಿಂಬಿಸುವ ಜಾಗತಿಕ ಮಾನದಂಡದ ಬೆಲೆಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ತೈಲವು ಜಾಗತಿಕವಾಗಿ ವ್ಯಾಪಾರವಾಗುವ ಒಂದು ಸರಕಾಗಿದೆ ಮತ್ತು ಎಲ್ಲಾ ಮಾರುಕಟ್ಟೆಗಳು ಪರಸ್ಪರ ಸಂಬಂಧ ಹೊಂದಿವೆ. ಈ ಕಾರಣದಿಂದಾಗಿ, ಸ್ವಾವಲಂಬನೆಯು ಬೆಲೆಯ ಭದ್ರತೆ ಅಥವಾ ಬೆಲೆಯ ಸ್ವಾತಂತ್ರ್ಯವನ್ನು ನೀಡಲು ಸಾಧ್ಯವಿಲ್ಲ ಎಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ 'ಸೆಂಟರ್ ಫಾರ್ ಫ್ಯುಯೆಲ್ಸ್ ಆಫ್ ದಿ ಫ್ಯೂಚರ್' ಜೊತೆ ಕಾರ್ಯನಿರ್ವಹಿಸುತ್ತಿರುವ ಇಂಧನ ಕ್ಷೇತ್ರದ ತಜ್ಞ ಮಕ್ಸಿಮ್ ಸೋನಿನ್ ʼಅಲ್ ಜಝೀರಾʼಗೆ ತಿಳಿಸಿದ್ದಾರೆ.
ಹಾರ್ಮುಝ್ ಜಲಸಂಧಿಯ ಮೂಲಕ ನಡೆಯುವ ರಫ್ತು ಪ್ರಕ್ರಿಯೆಗೆ ಅಡಚಣೆಯಾಗಿ, ಇದ್ದಕ್ಕಿದ್ದಂತೆ ಲಕ್ಷಾಂತರ ಬ್ಯಾರೆಲ್ ತೈಲ ಪೂರೈಕೆ ಅಪಾಯಕ್ಕೆ ಸಿಲುಕಿದರೆ, ಜಾಗತಿಕ ಮಾರುಕಟ್ಟೆಯಲ್ಲಿನ ಖರೀದಿದಾರರು ಇತರ ದೇಶಗಳಿಂದ ಪರ್ಯಾಯ ಪೂರೈಕೆಯನ್ನು ಪಡೆಯಲು ಪೈಪೋಟಿ ನಡೆಸಲು ಪ್ರಾರಂಭಿಸುತ್ತಾರೆ. ಈ ಹೆಚ್ಚಿದ ಪೈಪೋಟಿಯು ಜಾಗತಿಕ ಕಚ್ಚಾ ತೈಲ ಬೆಲೆಗಳನ್ನು ಮತ್ತಷ್ಟು ಮೇಲಕ್ಕೆತ್ತುತ್ತದೆ. ಇದು ಅಮೆರಿಕದ ತೈಲ ಶುದ್ಧೀಕರಣ ಸಂಸ್ಥೆಗಳ ವೆಚ್ಚವನ್ನು ಹೆಚ್ಚಿಸಿ, ಅಂತಿಮವಾಗಿ ಗ್ರಾಹಕರಿಗೆ ಹೊರೆಯಾಗುತ್ತದೆ.
"ಐತಿಹಾಸಿಕವಾಗಿ ನೋಡುವುದಾದರೆ, ಕಾರ್ಯತಂತ್ರದ ಮೀಸಲುಗಳು ಬಿಕ್ಕಟ್ಟಿಗೆ ಶಾಶ್ವತ ಅಥವಾ ಸಂಪೂರ್ಣ ಪರಿಹಾರವಾಗುವ ಬದಲು, ಸರ್ಕಾರಗಳಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಸಮಯಾವಕಾಶವನ್ನು ಒದಗಿಸುವ ಒಂದು ಅಲ್ಪಾವಧಿಯ ಮಾರ್ಗವಾಗಿವೆ. ಬಿಕ್ಕಟ್ಟು ಎಷ್ಟು ದೀರ್ಘಕಾಲ ಮುಂದುವರಿಯುತ್ತದೆಯೋ, ಅಷ್ಟು ಪ್ರಮಾಣದಲ್ಲಿ ಸರ್ಕಾರಗಳು ತಮ್ಮ ಕಾರ್ಯತಂತ್ರದ ಮೀಸಲನ್ನು ಬಳಸಿಕೊಳ್ಳುವ ಫ್ಲೆಕ್ಸಿಬಿಲಿಟಿಯನ್ನು ಕಳೆದುಕೊಳ್ಳುತ್ತವೆ ಎಂದು ಸೋನಿನ್ ಹೇಳಿದ್ದಾರೆ.
ಕಚ್ಚಾ ತೈಲದ ಹೆಚ್ಚಿನ ಬೆಲೆಗಳು ಕೇವಲ ಪೆಟ್ರೋಲ್ ಪಂಪ್ಗಳ ಬೆಲೆ ಏರಿಕೆಗೆ ಮಾತ್ರ ಸೀಮಿತವಾಗದೆ, ಇತರ ಕ್ಷೇತ್ರಗಳ ಮೇಲೂ ವ್ಯಾಪಕ ಪರಿಣಾಮ ಬೀರುತ್ತವೆ. ವಿಮಾನಯಾನ ಸಂಸ್ಥೆಗಳು ಜೆಟ್ ಇಂಧನಕ್ಕಾಗಿ ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ, ಸರಕು ಸಾಗಣೆ ಸಂಸ್ಥೆಗಳು ಡೀಸೆಲ್ಗಾಗಿ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಇದು ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸುತ್ತದೆ. ಈ ಸಾಗಣೆ ವೆಚ್ಚಗಳ ಹೆಚ್ಚಳದ ಭಾರವು ದುಬಾರಿ ದಿನಸಿ, ಸರಕುಗಳು ಮತ್ತು ಪ್ರಯಾಣದ ರೂಪದಲ್ಲಿ ಗ್ರಾಹಕರ ಹೆಗಲಿಗೆ ಬೀಳುತ್ತದೆ.
ಮಾರ್ಚ್ ಆರಂಭದಲ್ಲಿ, ಇರಾನ್ ಮೇಲಿನ ಮೊದಲ ದಾಳಿಗಳ ನಂತರ ಅಮೆರಿಕವು ಮೊದಲ ಬಾರಿಗೆ ಎಸ್ಪಿಆರ್ ಬಳಕೆಗೆ ಮುಂದಾಯಿತು. ಈ ಕ್ರಮದ ಹೊರತಾಗಿಯೂ ತೈಲ ಬೆಲೆಗಳು ಗಗನಕ್ಕೇರಿದವು.
ಅಮೆರಿಕದಲ್ಲಿನ ದೈನಂದಿನ ಪೆಟ್ರೋಲ್ ಬೆಲೆಗಳನ್ನು ಪತ್ತೆಹಚ್ಚುವ ಅಮೆರಿಕನ್ ಆಟೋಮೊಬೈಲ್ ಅಸೋಸಿಯೇಷನ್ (AAA) ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ಮೊದಲ ಬಾರಿಗೆ ಇರಾನ್ ಮೇಲೆ ದಾಳಿ ನಡೆಸಿದ ಫೆಬ್ರವರಿ 28 ರಂದು ಪ್ರತಿ ಗ್ಯಾಲನ್ ಪೆಟ್ರೋಲ್ ಬೆಲೆ 2.98 ಡಾಲರ್ (ಪ್ರತಿ ಲೀಟರ್ಗೆ 0.79 ಡಾಲರ್) ಇತ್ತು. ಮೇ ಮಧ್ಯದ ವೇಳೆಗೆ ಇದು 4.48 ಡಾಲರ್ಗೆ (ಪ್ರತಿ ಲೀಟರ್ಗೆ 1.18 ಡಾಲರ್) ಜಿಗಿದಿತ್ತು.
►ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ಎಂದರೇನು?
ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ಎಂಬುದು ವಿಶ್ವದ ಅತಿ ದೊಡ್ಡ ತುರ್ತು ಕಚ್ಚಾ ತೈಲ ಸಂಗ್ರಹಣಾ ವ್ಯವಸ್ಥೆಯಾಗಿದೆ. ಎಸ್ಪಿಆರ್ ವಿದೇಶಿ ಮತ್ತು ದೇಶೀಯ ಕಚ್ಚಾ ತೈಲಗಳ ಮಿಶ್ರಣವಾಗಿದ್ದು, ಇದು 'ಸ್ವೀಟ್' ಮತ್ತು 'ಸೋರ್' ತೈಲಗಳ ಸಂಯೋಜನೆಯನ್ನು ಹೊಂದಿದೆ.
ಅರಬ್ ತೈಲ ದಿಗ್ಬಂಧನದ ನಂತರ ಅಮೆರಿಕವು 1975 ರಲ್ಲಿ ಈ ಮೀಸಲು ವ್ಯವಸ್ಥೆಯನ್ನು ಸ್ಥಾಪಿಸಿತು. ಆ ಸಮಯದಲ್ಲಿ ಹಲವಾರು ಮಧ್ಯಪ್ರಾಚ್ಯ ಉತ್ಪಾದಕರು ಅಮೆರಿಕಕ್ಕೆ ರಫ್ತು ಮಾಡುವುದನ್ನು ನಿರ್ಬಂಧಿಸಿದ್ದರು. ಇದು ತೀವ್ರ ಇಂಧನ ಕೊರತೆಯನ್ನು ಉಂಟುಮಾಡಿತಲ್ಲದೆ, ಆಮದು ಇಂಧನದ ಮೇಲಿನ ದೇಶದ ಅವಲಂಬನೆಯನ್ನು ಎತ್ತಿ ತೋರಿಸಿತು. ಈ ಮೀಸಲು ರಚಿಸುವ ಪ್ರಯತ್ನಗಳು ಹಲವಾರು ದಶಕಗಳ ಹಿಂದೆಯೇ, ಅಂದರೆ 1944 ರಲ್ಲಿಯೇ ಪ್ರಾರಂಭವಾಗಿದ್ದವು.
ಪ್ರಸ್ತುತ, ಯುಎಸ್ ಗಲ್ಫ್ ಕರಾವಳಿಯ ನಾಲ್ಕು ಸ್ಥಳಗಳಲ್ಲಿರುವ ಭೂಗತ ಉಪ್ಪಿನ ಗುಹೆಗಳಲ್ಲಿ ಲಕ್ಷಾಂತರ ಬ್ಯಾರೆಲ್ ಕಚ್ಚಾ ತೈಲವನ್ನು ಸಂಗ್ರಹಿಸಿಡಲಾಗಿದೆ. ಪ್ರಮುಖ ಪೂರೈಕೆ ವ್ಯತ್ಯಯಗಳ ಸಂದರ್ಭದಲ್ಲಿ ಇದನ್ನು ಬಿಡುಗಡೆ ಮಾಡಬಹುದು. ಅಂತರರಾಜ್ಯ ಪೈಪ್ಲೈನ್ಗಳು ಅಥವಾ ಬಾರ್ಜ್ಗಳನ್ನು ಬಳಸಿ ಇವುಗಳನ್ನು ಅಮೆರಿಕದ ಒಟ್ಟು ತೈಲ ಶುದ್ಧೀಕರಣ ಕೇಂದ್ರಗಳ ಪೈಕಿ ಸುಮಾರು ಅರ್ಧದಷ್ಟು ಕೇಂದ್ರಗಳಿಗೆ ವಿತರಿಸಬಹುದು. ಒಮ್ಮೆ ತೈಲ ಬಿಡುಗಡೆಯಾದ ನಂತರ, ಅದನ್ನು ಶುದ್ಧೀಕರಿಸಿ, ಪೂರೈಕೆ ಕೊರತೆಯಿಂದ ಉಂಟಾದ ಶೂನ್ಯತೆಯನ್ನು ಸರಿದೂಗಿಸಲು ಜಾಗತಿಕವಾಗಿ ಮಾರಾಟ ಮಾಡಲಾಗುತ್ತದೆ.
ಖಾಸಗಿ ಕಂಪನಿಗಳು ಹೊಂದುವ ವಾಣಿಜ್ಯ ದಾಸ್ತಾನುಗಳಿಗಿಂತ ಭಿನ್ನವಾಗಿ, ಎಸ್ಪಿಆರ್ ಯುದ್ಧ ಮತ್ತು ನೈಸರ್ಗಿಕ ವಿಕೋಪಗಳಂತಹ ಅಸಾಧಾರಣ ಸಂದರ್ಭಗಳಿಗಾಗಿ ಮಾತ್ರ ಅಸ್ತಿತ್ವದಲ್ಲಿದೆ. 2005 ರಲ್ಲಿ ಗಲ್ಫ್ ಕರಾವಳಿಯನ್ನು ಧ್ವಂಸಗೊಳಿಸಿದ 'ಕತ್ರಿನಾ' ಚಂಡಮಾರುತದ ನಂತರ ಇದನ್ನು ಬಳಸಲಾಗಿತ್ತು. ಆ ಸಮಯದಲ್ಲಿ ಈ ಪ್ರದೇಶವು ದೇಶದ ಒಟ್ಟು ತೈಲ ಉತ್ಪಾದನೆಯ ಶೇಕಡಾ 50 ರಷ್ಟನ್ನು ಹೊಂದಿತ್ತು. ರಷ್ಯಾ-ಉಕ್ರೇನ್ ಯುದ್ಧದ ನಂತರವೂ ಅಮೆರಿಕ ಸರ್ಕಾರವು ಆರು ತಿಂಗಳ ಕಾಲ ಇದನ್ನು ಬಳಸಿಕೊಂಡಿತ್ತು. ಪ್ರಸ್ತುತ ಮಾರ್ಚ್ನಲ್ಲಿ ಪ್ರಾರಂಭವಾದ ತೈಲ ಬಿಡುಗಡೆಯು, ಇಂಧನ ನೀತಿ ಸಹಕಾರದ ಮೂಲಕ ಇಂಧನ ಪೂರೈಕೆ ಭದ್ರತೆಯನ್ನು ಬೆಂಬಲಿಸುವ 28 ದೇಶಗಳ ಒಕ್ಕೂಟವಾದ 'ಅಂತರಾಷ್ಟ್ರೀಯ ಇಂಧನ ಸಂಸ್ಥೆ'ಯ (IEA) ಸಮನ್ವಯದೊಂದಿಗೆ ನಡೆಯುತ್ತಿದೆ.
ಇಂತಹ ಆಘಾತಗಳು, ಸಂಘರ್ಷಗಳು, ಪ್ರಮುಖ ಸಾಗರೋತ್ತರ ಅಡಚಣೆಗಳು ಹಾಗೂ ಪೂರೈಕೆ ಸ್ಥಗಿತದಂತಹ ಸಂದರ್ಭಗಳಿಗಾಗಿಯೇ ಇದು ಇರುವುದು. ಬೆಲೆ ಏರಿಕೆಯನ್ನು ನಿಯಂತ್ರಿಸಲು ಮತ್ತು ಪೂರೈಕೆಗೆ ಅಡ್ಡಿಯಾಗದಂತೆ ತಡೆಯಲು ಒಂದು ಬಫರ್ ಅಥವಾ ತುರ್ತು ನಿಧಿಯನ್ನು ಹೊಂದುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಟೆಕ್ಸಾಸ್ನ ಹೂಸ್ಟನ್ನಲ್ಲಿರುವ ರೈಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಎನರ್ಜಿ ಸ್ಟಡೀಸ್ನ ನಾನ್ ರೆಸಿಡೆಂಟ್ ಫೆಲೋ ಅಭಿ ರಾಜೇಂದ್ರನ್ ಅಲ್ ಜಜೀರಾಗೆ ತಿಳಿಸಿದ್ದಾರೆ.
►ಬಹುಪಾಲು ಅಮೆರಿಕದ ತೈಲವು ಹಾರ್ಮುಝ್ ಜಲಸಂಧಿಯ ಮೂಲಕ ಬರದಿದ್ದರೂ ಇದು ಏಕೆ ಮುಖ್ಯವಾಗುತ್ತದೆ?
ಹಾರ್ಮುಝ್ ಜಲಸಂಧಿಯು ಇಂದಿಗೂ ವಿಶ್ವದ ಅತ್ಯಂತ ಪ್ರಮುಖ ಇಂಧನ ಸಾಗುವ ಕಿರಿದಾದ ಜಲಮಾರ್ಗ ಆಗಿದೆ. ಗಲ್ಫ್ ಅನ್ನು ಒಮಾನ್ ಗಲ್ಫ್ಗೆ ಸಂಪರ್ಕಿಸುವ ಈ ಕಿರಿದಾದ ಮತ್ತು ಆಯಕಟ್ಟಿನ ಜಲಮಾರ್ಗದ ಮೂಲಕ ಜಾಗತಿಕ ತೈಲ ಪೂರೈಕೆಯ ಸುಮಾರು ಐದನೇ ಒಂದು ಭಾಗವು ಹಾದುಹೋಗುತ್ತದೆ.
ಅಮೆರಿಕವು ಈ ಜಲಸಂಧಿಯ ಮೂಲಕ ಅತ್ಯಂತ ಕಡಿಮೆ ತೈಲವನ್ನು ಆಮದು ಮಾಡಿಕೊಳ್ಳುತ್ತದೆಯಾದರೂ, ದಕ್ಷಿಣ ಕೊರಿಯಾ ಮತ್ತು ಭಾರತ ಸೇರಿದಂತೆ ಅದರ ಹಲವು ಮಿತ್ರರಾಷ್ಟ್ರಗಳು ಮತ್ತು ವ್ಯಾಪಾರ ಪಾಲುದಾರರು ಈ ಸರಕು ಸಾಗಣೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.
ಹಾರ್ಮುಝ್ ಜಲಮಾರ್ಗದಲ್ಲಿ ಸಾಗಣೆಗೆ ಅಡಚಣೆಯಾದಾಗ, ಆ ದೇಶಗಳು ಬೇರೆಡೆಯಿಂದ ಪರ್ಯಾಯ ತೈಲವನ್ನು ಪಡೆಯಬೇಕಾಗುತ್ತದೆ. ಹೀಗಾಗಿ ಅಮೆರಿಕ ಸೇರಿದಂತೆ ಇತರ ಉತ್ಪಾದಕರಿಂದ ತೈಲ ಖರೀದಿಸಲು ಜಾಗತಿಕ ಮಟ್ಟದಲ್ಲಿ ಖರೀದಿದಾರರ ನಡುವೆ ಪೈಪೋಟಿ ಏರ್ಪಡುತ್ತದೆ. ಇದು ಸಹಜವಾಗಿಯೇ ಬೆಲೆಗಳ ಮೇಲೆ ಒತ್ತಡ ಹೇರುತ್ತದೆ.
ಈ ಪೈಪೋಟಿಯು ಜಾಗತಿಕ ಮಾರುಕಟ್ಟೆಯನ್ನು ಬಿಗಿಗೊಳಿಸುತ್ತದೆ ಮತ್ತು ಮಧ್ಯಪ್ರಾಚ್ಯದ ತೈಲವನ್ನು ನೇರಾವಾಗಿ ಆಮದು ಮಾಡಿಕೊಳ್ಳದ ದೇಶಗಳಲ್ಲೂ ಕಚ್ಚಾ ತೈಲದ ಮಾನದಂಡದ ಬೆಲೆಗಳನ್ನು ಹೆಚ್ಚಿಸುತ್ತದೆ.
"ನಾವು ಎಸ್ಪಿಆರ್ ಸೇರಿದಂತೆ ನಮ್ಮ ಸಂಗ್ರಹಣೆಯಿಂದ ತೈಲವನ್ನು ಹೊರತೆಗೆಯುತ್ತಿದ್ದೇವೆ ಮತ್ತು ಜಾಗತಿಕ ಮಾರುಕಟ್ಟೆಯನ್ನು ಸರಿದೂಗಿಸಲು ಅದನ್ನು ರಫ್ತು ಮಾಡುತ್ತಿದ್ದೇವೆ. ಅತ್ಯಂತ ದೀರ್ಘಾವಧಿಯವರೆಗೆ ಇದನ್ನು ಮುಂದುವರಿಸಲು ಸಾಧ್ಯವಾಗದೇ ಇರಬಹುದು" ಎಂದು ರಾಜೇಂದ್ರನ್ ಹೇಳಿದ್ದಾರೆ.
►ಮೀಸಲು ದಾಸ್ತಾನು ಇಷ್ಟೊಂದು ಕುಸಿಯಲು ಕಾರಣವೇನು?
ಪ್ರಸ್ತುತ ತೈಲ ಬಿಡುಗಡೆಗೂ ಮುನ್ನ, ಕೆಲವು ವರ್ಷಗಳ ಹಿಂದಷ್ಟೇ ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದ ಬಳಿಕ ಎಸ್ಪಿಆರ್ ದಶಕಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ವಿಶ್ವದ ಅತಿ ದೊಡ್ಡ ತೈಲ ರಫ್ತುದಾರ ರಾಷ್ಟ್ರಗಳಲ್ಲಿ ಒಂದಾದ ರಷ್ಯಾದಿಂದ ಪೂರೈಕೆಗೆ ಧಕ್ಕೆಯಾಗಬಹುದು ಎಂಬ ಆತಂಕ ಎದುರಾದಾಗ, ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಮೀಸಲು ತೈಲವನ್ನು ಬಿಡುಗಡೆ ಮಾಡಲಾಗಿತ್ತು.
ರಷ್ಯಾದ ಆಕ್ರಮಣ ಮತ್ತು ಅದರ ಬೆನ್ನಲ್ಲೇ ರಷ್ಯಾದ ಇಂಧನ ಮಾರಾಟದ ಮೇಲೆ ಹೇರಲಾದ ನಿರ್ಬಂಧಗಳು ಜಾಗತಿಕ ಮಾರುಕಟ್ಟೆಯಿಂದ ದೊಡ್ಡ ಪ್ರಮಾಣದ ತೈಲ ಪೂರೈಕೆ ಸ್ಥಗಿತಗೊಳ್ಳಬಹುದು ಎಂಬ ಭೀತಿಯನ್ನು ಹುಟ್ಟುಹಾಕಿದ್ದವು. ಪರಿಣಾಮವಾಗಿ, ಮಾರ್ಚ್ 2022 ರಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 130 ಡಾಲರ್ಗಿಂತಲೂ ಅಧಿಕವಾಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕದಲ್ಲಿ ಸರಾಸರಿ ಪೆಟ್ರೋಲ್ ಬೆಲೆ ಪ್ರತಿ ಗ್ಯಾಲನ್ಗೆ 5 ಡಾಲರ್ (ಪ್ರತಿ ಲೀಟರ್ಗೆ 1.32 ಡಾಲರ್) ಗಡಿಯನ್ನು ದಾಟಿತ್ತು.
ಆ ಸಮಯದಲ್ಲಿ, ಜಾಗತಿಕ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ಮತ್ತು ಗಗನಕ್ಕೇರುತ್ತಿದ್ದ ಇಂಧನ ಬೆಲೆಗಳನ್ನು ತಗ್ಗಿಸಲು ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತವು ಎಸ್ಪಿಆರ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಅಂದರೆ 180 ಮಿಲಿಯನ್ ಬ್ಯಾರೆಲ್ ತೈಲವನ್ನು ಬಿಡುಗಡೆ ಮಾಡಲು ಅನುಮತಿ ನೀಡಿತ್ತು. ಇದರ ಜೊತೆಗೆ, ಅಮೆರಿಕ ಕಾಂಗ್ರೆಸ್ ಕೂಡ 2023 ರಲ್ಲಿ ಮೀಸಲು ದಾಸ್ತಾನಿನಿಂದ ಹೆಚ್ಚುವರಿ ತೈಲ ಮಾರಾಟಕ್ಕೆ ಆದೇಶಿಸಿತ್ತು.
ಈ ಕ್ರಮಗಳು ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದವಾದರೂ, ಸರ್ಕಾರದ ತುರ್ತು ದಾಸ್ತಾನನ್ನು ಗಣನೀಯವಾಗಿ ಕುಗ್ಗಿಸಿದವು. ಅಂದಿನಿಂದ, ಇಂಧನ ಇಲಾಖೆಯು ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಮೀಸಲು ದಾಸ್ತಾನನ್ನು ಮರುಪೂರಣ ಮಾಡಲು ಹಂತ-ಹಂತವಾಗಿ ತೈಲವನ್ನು ಮರುಖರೀದಿ ಮಾಡುತ್ತಿದೆ.
►ಅಮೆರಿಕ ತೈಲ ಬಿಡುಗಡೆ ಮಾಡುವುದನ್ನು ನಿಲ್ಲಿಸಿದರೆ ಏನಾಗುತ್ತದೆ?
ಎಸ್ಪಿಆರ್ ಎರಡು ಪ್ರಮುಖ ಉದ್ದೇಶಗಳನ್ನು ಪೂರೈಸುತ್ತದೆ. ಇದು ಭೌತಿಕವಾಗಿ ತೈಲ ಕೊರತೆ ಎದುರಾದಾಗ ತುರ್ತು ಪೂರೈಕೆಯನ್ನು ಒದಗಿಸುವುದರ ಜೊತೆಗೆ, ದೊಡ್ಡ ಮಟ್ಟದ ಬಿಕ್ಕಟ್ಟುಗಳನ್ನು ಎದುರಿಸಲು ಸರ್ಕಾರದ ಬಳಿ ಸೂಕ್ತ ವ್ಯವಸ್ಥೆ ಇದೆ ಎಂಬ ಭರವಸೆಯನ್ನು ಹಣಕಾಸು ಮಾರುಕಟ್ಟೆಗಳಿಗೆ ನೀಡುತ್ತದೆ.
ಒಂದು ವೇಳೆ ಅಮೆರಿಕ ತನ್ನ ಮೀಸಲು ದಾಸ್ತಾನಿನಿಂದ ತೈಲವನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿದರೆ, ಅದು ಪೂರೈಕೆ ಮತ್ತು ಬೇಡಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಏಕೆಂದರೆ ಮಾರುಕಟ್ಟೆಯಲ್ಲಿ ತೈಲದ ಲಭ್ಯತೆ ಕಡಿಮೆಯಾಗುತ್ತದೆ. ಇದರೊಂದಿಗೆ, ಅಮೆರಿಕ ತನ್ನ ಮೀಸಲು ನಿಧಿಯನ್ನು ಬಳಸಿಕೊಳ್ಳುತ್ತದೆ ಎಂದು ನಿರೀಕ್ಷಿಸುವ ಮಾರುಕಟ್ಟೆಯ ಮನಸ್ಥಿತಿಯ ಮೇಲೂ ಇದು ಪ್ರಭಾವ ಬೀರುತ್ತದೆ. ಒಂದು ವೇಳೆ ಹಾಗೆ ಆಗದಿದ್ದರೆ, ಪರಿಸ್ಥಿತಿ ನಿರೀಕ್ಷೆಗಿಂತ ಹೆಚ್ಚು ಗಂಭೀರವಾಗಿದೆ ಎಂಬ ಸಂದೇಶ ರವಾನೆಯಾಗುತ್ತದೆ. ಇದು ಜಾಗತಿಕ ತೈಲ ಬೆಲೆಗಳ ಮೇಲೆ ಮತ್ತಷ್ಟು ನಕಾರಾತ್ಮಕ ಪರಿಣಾಮ ಬೀರಬಹುದು ಅಂತಾರೆ ಸೋನಿನ್.
ಬಿಕ್ಕಟ್ಟಿನ ಸಮಯದಲ್ಲಿ ಲಕ್ಷಾಂತರ ಬ್ಯಾರೆಲ್ ತೈಲವನ್ನು ಬಿಡುಗಡೆ ಮಾಡಬಹುದು ಎಂಬ ವಿಷಯ ತಿಳಿದಿರುವುದು ಮಾರುಕಟ್ಟೆಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಬೆಲೆ ಏರಿಕೆಯನ್ನು ಮತ್ತಷ್ಟು ಹೆಚ್ಚಿಸುವ ಅತಿಯಾದ ಮುಂಗಡ ಖರೀದಿಯನ್ನು ತಡೆಯುತ್ತದೆ. ಬಿಕ್ಕಟ್ಟು ದೀರ್ಘಕಾಲ ಮುಂದುವರಿದರೆ, ಕನಿಷ್ಠ ಮಟ್ಟದ ಮೀಸಲು ದಾಸ್ತಾನು ಇರುವುದು ನೀತಿ ನಿರೂಪಕರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಕಡಿಮೆ ಮಾಡುತ್ತದೆ.
ದಾಸ್ತಾನು ಕುಸಿದಿರುವುದರಿಂದ ಈ ಭರವಸೆಯೂ ಈಗ ಸೀಮಿತವಾಗಿದೆ.
ಮೀಸಲು ದಾಸ್ತಾನು ತನ್ನ ಕನಿಷ್ಠ ಕಾರ್ಯಾಚರಣೆಯ ಮಟ್ಟವನ್ನು ತಲುಪುತ್ತಿದೆ ಎಂದು ನೈನ್ಪಾಯಿಂಟ್ ಪಾರ್ಟ್ನರ್ಸ್ನ ಹಿರಿಯ ಪೋರ್ಟ್ಫೋಲಿಯೊ ಮ್ಯಾನೇಜರ್ ಎರಿಕ್ ನಟ್ಟಲ್ ಎಕ್ಸ್ ಪೋಸ್ಟ್ನಲ್ಲಿ ಎಚ್ಚರಿಸಿದ್ದಾರೆ.
ರಾಜೇಂದ್ರನ್ ಅವರು ಕೂಡ ಮೀಸಲಿನಲ್ಲಿರುವ 319.5 ಮಿಲಿಯನ್ ಬ್ಯಾರೆಲ್ಗಳಲ್ಲಿ ಅರ್ಧದಷ್ಟು ತೈಲ ಬಳಕೆಗೆ ಯೋಗ್ಯವಾಗಿಲ್ಲದಿರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
"ಅಲ್ಲಿರುವ ಕೆಲವು ಕಚ್ಚಾ ತೈಲಗಳು ದೀರ್ಘಕಾಲದಿಂದ ಸಂಗ್ರಹವಾಗಿವೆ. ಅವು ಹಳೆಯ ದಾಸ್ತಾನು ಗುಹೆಗಳಲ್ಲಿ ಇರುವುದರಿಂದ, ಪ್ರಸ್ತುತ ಉಳಿದಿರುವ ತೈಲದ ಪೈಕಿ ಬಹುಶಃ 100 ರಿಂದ 150 ಮಿಲಿಯನ್ ಬ್ಯಾರೆಲ್ಗಳಷ್ಟು ತೈಲವು ಈಗಿನ ತೈಲ ಶುದ್ಧೀಕರಣ ಕೇಂದ್ರಗಳಿಗೆ ಅಥವಾ ರಫ್ತು ಗುಣಮಟ್ಟಕ್ಕೆ ಪೂರಕವಾಗಿ ಬಳಕೆಯಾಗುವ ಸಾಧ್ಯತೆ ಕಡಿಮೆ ಎಂದು ವಾದಿಸಬಹುದು" ಎಂದು ರಾಜೇಂದ್ರನ್ ತಿಳಿಸಿದ್ದಾರೆ.
ಕೃಪೆ: aljazeera.com






