ಹಳೆಯ ಪ್ರಕರಣಗಳ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್ನಿಂದ 4 ಹೊಸ ಪೀಠಗಳ ರಚನೆ; ಕಾರ್ಯವಿಧಾನ ಹೇಗೆ?

ಸುಪ್ರೀಂ ಕೋರ್ಟ್ | Photo Credit ; sci.gov.in
ಸುಪ್ರೀಂ ಕೋರ್ಟ್ ನಲ್ಲಿ ದಶಕಗಳಿಂದ ಬಾಕಿ ಉಳಿದಿರುವ ಲಕ್ಷಾಂತರ ಪ್ರಕರಣಗಳನ್ನು ಬೇಗನೆ ಇತ್ಯರ್ಥಗೊಳಿಸಲು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅತ್ಯಂತ ಹಳೆಯ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಾಗಿಯೇ ವಿಶೇಷವಾಗಿ ನಾಲ್ಕು ಪ್ರತ್ಯೇಕ ನ್ಯಾಯಪೀಠಗಳನ್ನು ಅವರು ರಚಿಸಿದ್ದಾರೆ.
ಹೊಸ ಪೀಠಗಳ ಹಂಚಿಕೆ ಪಟ್ಟಿಯ ಪ್ರಕಾರ, ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಎಸ್.ವಿ.ಎನ್. ಭಟ್ಟಿ ಅವರ ನೇತೃತ್ವದ ತಲಾ ಇಬ್ಬರು ನ್ಯಾಯಾಧೀಶರ ಎರಡು ಪೀಠಗಳು ಅತ್ಯಂತ ಹಳೆಯ ಸಿವಿಲ್ ಪ್ರಕರಣಗಳ ವಿಚಾರಣೆ ನಡೆಸಲಿವೆ.
ಅದೇ ರೀತಿ, ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಉಜ್ಜಲ್ ಭುಯಾನ್ ಅವರ ನೇತೃತ್ವದ ಇನ್ನೆರಡು ಪೀಠಗಳು ಹಳೆಯ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಮಾತ್ರ ಸೀಮಿತವಾಗಿರಲಿವೆ.
►ಕಾರ್ಯವಿಧಾನ ಹೇಗೆ?
ಈ ವಿಶೇಷ ಪೀಠಗಳು ಮಂಗಳವಾರ, ಬುಧವಾರ ಮತ್ತು ಗುರುವಾರಗಳಂದು ಮಾತ್ರ ಕಾರ್ಯನಿರ್ವಹಿಸಲಿವೆ. ಸುಪ್ರೀಂ ಕೋರ್ಟ್ ನ ನಿಯಮಾವಳಿಗಳ ಪ್ರಕಾರ, ಸೋಮವಾರ ಮತ್ತು ಶುಕ್ರವಾರಗಳನ್ನು ಹೊಸ ಅರ್ಜಿಗಳ ಸಲ್ಲಿಕೆ ಹಾಗೂ ಪ್ರಾಥಮಿಕ ವಿಚಾರಣೆಗೆ ಮೀಸಲಿಡಲಾಗುತ್ತದೆ. ವಾರದ ಮಧ್ಯದ ಮೂರು ದಿನಗಳಲ್ಲಿ ಸುದೀರ್ಘ ವಾದ-ಪ್ರತಿವಾದಗಳು ನಡೆಯಲಿವೆ.
ಈ ನಾಲ್ಕು ಪೀಠಗಳಿಗೆ ಹೊಸ ಅರ್ಜಿಗಳ ವಿಚಾರಣೆಯ ಹೊರೆ ಇರುವುದಿಲ್ಲ. ಇದರಿಂದ ನ್ಯಾಯಾಧೀಶರು ಹಳೆಯ ಪ್ರಕರಣಗಳ ಕಡೆಗೆ ಸಂಪೂರ್ಣ ಗಮನಹರಿಸಲು ಸಾಧ್ಯವಾಗುತ್ತದೆ.
►ಬಾಕಿ ಉಳಿದಿರುವ ಪ್ರಕರಣಗಳ ವಿವರ
ರಾಷ್ಟ್ರೀಯ ನ್ಯಾಯಾಂಗ ದತ್ತಾಂಶದ ಪ್ರಕಾರ, ಸುಪ್ರೀಂ ಕೋರ್ಟ್ ನಲ್ಲಿ ಸದ್ಯ ಬೃಹತ್ ಪ್ರಮಾಣದ ಪ್ರಕರಣಗಳು ಬಾಕಿ ಇವೆ:
ಒಟ್ಟು ಬಾಕಿ ಪ್ರಕರಣಗಳು: 96,045
ಸಿವಿಲ್ ಪ್ರಕರಣಗಳು: 74,244
ಕ್ರಿಮಿನಲ್ ಪ್ರಕರಣಗಳು: 21,801
►ಅತಿ ಹಳೆಯ ಪ್ರಕರಣಗಳು:
30 ವರ್ಷಗಳಿಗಿಂತ ಹಳೆಯವು: 24 ಸಿವಿಲ್ ಮತ್ತು 2 ಕ್ರಿಮಿನಲ್ ಪ್ರಕರಣಗಳು. ಇವುಗಳಲ್ಲಿ ಅತ್ಯಂತ ಹಳೆಯ ಸಿವಿಲ್ ಪ್ರಕರಣ 1986ರಿಂದ ಹಾಗೂ ಅತ್ಯಂತ ಹಳೆಯ ಕ್ರಿಮಿನಲ್ ಪ್ರಕರಣ 1991ರಿಂದ ಬಾಕಿ ಉಳಿದಿದೆ.
1996ರಿಂದ 2005ರ ಅವಧಿಯವು: 525 ಸಿವಿಲ್ ಮತ್ತು 7 ಕ್ರಿಮಿನಲ್ ಪ್ರಕರಣಗಳು.
10ರಿಂದ 20 ವರ್ಷ ಹಳೆಯವು: 7,993 ಸಿವಿಲ್ ಮತ್ತು 1,585 ಕ್ರಿಮಿನಲ್ ಪ್ರಕರಣಗಳು.
►ಹೆಚ್ಚುತ್ತಿರುವ ಬಾಕಿ ಪ್ರಕರಣಗಳ ವಿಚಿತ್ರ ಸವಾಲು
ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣಗಳ ವಿಲೇವಾರಿ ವೇಗ ಪಡೆದುಕೊಂಡಿದ್ದರೂ, ಬಾಕಿ ಉಳಿಯುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಒಂದು ವಿಚಿತ್ರ ಸವಾಲಾಗಿ ಪರಿಣಮಿಸಿದೆ. ಕಳೆದ ಐದು ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ತನ್ನ ಪ್ರಕರಣಗಳ ಇತ್ಯರ್ಥದ ವೇಗವನ್ನು ಗಣನೀಯವಾಗಿ ಹೆಚ್ಚಿಸಿದೆ. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ನ್ಯಾಯಾಲಯಗಳು ಸೀಮಿತವಾಗಿ ಕಾರ್ಯನಿರ್ವಹಿಸಿದ್ದವು. ಆದರೆ, ಆ ನಂತರದ ವರ್ಷಗಳಲ್ಲಿ ಚೇತರಿಸಿಕೊಂಡಿರುವ ಕೋರ್ಟ್ ತನ್ನ ಇತಿಹಾಸದಲ್ಲೇ ಅತ್ಯಧಿಕ ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥಪಡಿಸಿ ದಾಖಲೆ ಬರೆದಿದೆ. ಹೀಗಿದ್ದರೂ, ಒಟ್ಟಾರೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಮಾತ್ರ ಏರುತ್ತಲೇ ಸಾಗಿದೆ.
ಪ್ರಕರಣಗಳು ಇತ್ಯರ್ಥವಾಗುವ ವೇಗಕ್ಕಿಂತಲೂ ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದೇ ಇದಕ್ಕೆ ಪ್ರಮುಖ ಕಾರಣ. ಇ-ಫೈಲಿಂಗ್ ಮತ್ತು ಆನ್ಲೈನ್ ವಿಚಾರಣೆಗಳ ಕಾರಣದಿಂದ ದೇಶದ ಮೂಲೆಮೂಲೆಗಳ ಜನರಿಗೂ ಸುಪ್ರೀಂ ಕೋರ್ಟ್ ಸುಲಭವಾಗಿ ಲಭ್ಯವಾಗುತ್ತಿದೆ. ಇದರಿಂದ ಹೊಸ ಪ್ರಕರಣಗಳ ದಾಖಲಾತಿ ತೀವ್ರವಾಗಿ ಹೆಚ್ಚಾಗಿದೆ. 2025ರಲ್ಲೊಂದೇ, ಹಿಂದೆಂದೂ ಕಾಣದ ರೀತಿಯಲ್ಲಿ ಬರೋಬ್ಬರಿ 75,402 ಹೊಸ ಪ್ರಕರಣಗಳು ದಾಖಲಾಗಿವೆ.
►ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಹಿಂದಿನ ಮುಖ್ಯ ನ್ಯಾಯಮೂರ್ತಿಗಳ ಪ್ರಯತ್ನಗಳು
ಕಳೆದ ಕೆಲವು ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ಮೇಲಿರುವ ಪ್ರಕರಣಗಳ ಹೊರೆಯನ್ನು ಕಡಿಮೆ ಮಾಡಲು ವಿವಿಧ ಮುಖ್ಯ ನ್ಯಾಯಮೂರ್ತಿಗಳು ವಿಭಿನ್ನ ತಂತ್ರಗಳನ್ನು ಅನುಸರಿಸಿದ್ದಾರೆ.
►ಮಾಜಿ ಸಿಜೆಐ ಯು.ಯು. ಲಲಿತ್: 2022ರಲ್ಲಿ ಅಲ್ಪಾವಧಿಗೆ ಮುಖ್ಯ ನ್ಯಾಯಮೂರ್ತಿಯಾಗಿದ್ದ ಇವರು, ಕಟ್ಟುನಿಟ್ಟಾದ 'ಲಿಸ್ಟಿಂಗ್' (ಪ್ರಕರಣಗಳ ಪಟ್ಟಿ ತಯಾರಿ) ವ್ಯವಸ್ಥೆಯನ್ನು ಜಾರಿಗೆ ತಂದರು. ಹೊಸ ಅರ್ಜಿಗಳು ಮತ್ತು ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ಸಮಯವನ್ನು ನಿಗದಿಪಡಿಸಿದರು. ಇದರಿಂದ ಹೊಸ ಪ್ರಕರಣಗಳ ಗದ್ದಲದಲ್ಲಿ ಹಳೆಯ ಪ್ರಕರಣಗಳು ಮೂಲೆಗುಂಪಾಗುವುದು ತಪ್ಪಿತು.
►ಮಾಜಿ ಸಿಜೆಐ ಡಿ.ವೈ. ಚಂದ್ರಚೂಡ್: ಇವರು ನ್ಯಾಯಾಲಯದ ಪ್ರಕ್ರಿಯೆಗಳನ್ನು ಸುಲಭಗೊಳಿಸಲು ತಂತ್ರಜ್ಞಾನದ ಮೊರೆ ಹೋದರು. ಇವರ ಅವಧಿಯಲ್ಲಿ 'ಎಸ್ಸಿ-ಜುಡಿಕೇರ್' (SC-JUDICARE) ಯೋಜನೆಯನ್ನು ಜಾರಿಗೆ ತರಲಾಯಿತು. ಇದು ಬಾಕಿ ಇರುವ ಪ್ರಕರಣಗಳನ್ನು ಸ್ವಯಂಚಾಲಿತವಾಗಿ ವರ್ಗೀಕರಿಸಲು ಮತ್ತು ಒಂದೇ ರೀತಿಯ ಕಾನೂನು ಸಮಸ್ಯೆಯುಳ್ಳ ಪ್ರಕರಣಗಳನ್ನು ಒಟ್ಟಿಗೆ ಸೇರಿಸಿ ವಿಚಾರಣೆ ನಡೆಸಲು ಸಹಾಯ ಮಾಡಿತು. ಜೊತೆಗೆ, ಗಲ್ಲು ಶಿಕ್ಷೆಯ ಮೇಲ್ಮನವಿಗಳಂತಹ ನಿರ್ದಿಷ್ಟ ಪ್ರಕರಣಗಳಿಗಾಗಿ ವಿಶೇಷ ಪೀಠಗಳನ್ನು ರಚಿಸಿದರು ಮತ್ತು ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ 'ಲೋಕ ಅದಾಲತ್' ಸಪ್ತಾಹವನ್ನು ಆಯೋಜಿಸಿದರು.
►ಮಾಜಿ ಸಿಜೆಐ ಸಂಜೀವ್ ಖನ್ನಾ: ಇವರ ನಂತರ ಮುಖ್ಯ ನ್ಯಾಯಮೂರ್ತಿಯಾದ ಸಂಜೀವ್ ಖನ್ನಾ ಅವರು ಪ್ರಾಥಮಿಕ ಹಂತದ ಪ್ರಕರಣಗಳ ಇತ್ಯರ್ಥದ ಕಡೆಗೆ ಹೆಚ್ಚು ಗಮನ ಹರಿಸಿದರು. ಇವು ಪೂರ್ಣ ಪ್ರಮಾಣದ ವಿಚಾರಣೆಗೆ ಒಳಪಡುವ ಮೊದಲೇ ನ್ಯಾಯಾಂಗದ ಸಮಯವನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದವು. ಈ ಹೊರೆಯನ್ನು ಕಡಿಮೆ ಮಾಡಲು, ಅವರು ಬುಧವಾರ ಮತ್ತು ಗುರುವಾರಗಳಂದು ಹಳೆಯ ಪ್ರಕರಣಗಳ ವಿಚಾರಣಾ ಪಟ್ಟಿ ತಯಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.
ನ್ಯಾಯಾಲಯದಲ್ಲಿ ಬಾಕಿ ಇರುವ ಸಣ್ಣಪುಟ್ಟ, ನಿಷ್ಪ್ರಯೋಜಕ ಮತ್ತು ಹಳೆಯ ಪ್ರಕರಣಗಳನ್ನು ಗುರುತಿಸುವ ಜವಾಬ್ದಾರಿಯನ್ನು ಅವರು ಕೋರ್ಟ್ ನ ಸಂಶೋಧನೆ ಮತ್ತು ಯೋಜನೆ ಕೇಂದ್ರಕ್ಕೆ ವಹಿಸಿದ್ದರು. ಇದರ ನೆರವಿನಿಂದ ಸಾವಿರಾರು ಅನಗತ್ಯ ಪ್ರಕರಣಗಳನ್ನು ಯಶಸ್ವಿಯಾಗಿ ಪಟ್ಟಿಯಿಂದ ತೆಗೆದುಹಾಕಲಾಯಿತು. ಆದರೆ, ತದನಂತರ ಮುಖ್ಯ ನ್ಯಾಯಮೂರ್ತಿಯಾಗಿದ್ದ ಬಿ.ಆರ್. ಗವಾಯಿ ಅವರ ಅಧಿಕಾರಾವಧಿಯಲ್ಲಿ ಹೊಸ ಪ್ರಕರಣಗಳ ದಾಖಲಾತಿ ಭಾರೀ ಪ್ರಮಾಣದಲ್ಲಿ ಹೆಚ್ಚಾಯಿತು. ನ್ಯಾಯಪೀಠಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದ ಹೊರತಾಗಿಯೂ, ಒಟ್ಟು ಬಾಕಿ ಪ್ರಕರಣಗಳ ಸಂಖ್ಯೆ 90,000ರ ಗಡಿ ದಾಟಿತು.
2025ರ ನವೆಂಬರ್ ಕೊನೆಯಲ್ಲಿ ಅಧಿಕಾರ ವಹಿಸಿಕೊಂಡ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ಬಾಕಿ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ಅವುಗಳ ವಿಲೇವಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಏಕರೂಪದ ನೀತಿಯನ್ನು ರೂಪಿಸುವುದು ತಮ್ಮ ಪ್ರಮುಖ ಆದ್ಯತೆಗಳಾಗಿವೆ ಎಂದು ತಿಳಿಸಿದ್ದರು. ಇದೀಗ ವಾರದಲ್ಲಿ ಮೂರು ದಿನಗಳ ಕಾಲ ಅತ್ಯಂತ ಹಳೆಯ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಾಗಿಯೇ ನಾಲ್ಕು ವಿಶೇಷ ಪೀಠಗಳನ್ನು ಮೀಸಲಿಡುವ ಮೂಲಕ, ಪ್ರಸ್ತುತ ಮುಖ್ಯ ನ್ಯಾಯಮೂರ್ತಿಗಳು ದಶಕಗಳಷ್ಟು ಹಳೆಯ ಕಾನೂನು ಹೋರಾಟಗಳನ್ನು ಕೊನೆಗಾಣಿಸಲು ದೃಢ ಹೆಜ್ಜೆ ಇಟ್ಟಿದ್ದಾರೆ.






