ಭಾರತದಲ್ಲಿ ಪ್ರತಿದಿನ ಸರಾಸರಿ 16 ಮಹಿಳೆಯರು ವರದಕ್ಷಿಣೆಗಾಗಿ ಕೊಲೆಯಾಗುತ್ತಿದ್ದಾರೆ!

ಸಾಂದರ್ಭಿಕ ಚಿತ್ರ | Photo Credit : magnific
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ ಭಾರತದಲ್ಲಿ 2024ರಲ್ಲಿ 5,737 ವರದಕ್ಷಿಣೆ ಸಾವುಗಳು ದಾಖಲಾಗಿವೆ.
ಕಳೆದ ಕೆಲವು ದಿನಗಳಲ್ಲಿ ನಾಲ್ವರು ಯುವತಿಯರು ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪಿರುವುದು ವರದಿಯಾಗಿದೆ. ಗ್ರೇಟರ್ ನೋಯ್ಡಾದಲ್ಲಿ ದೀಪಿಕಾ ನಗರ್ ಅನುಮಾನಾಸ್ಪದ ಸಂದರ್ಭಗಳಲ್ಲಿ ಸಾವನ್ನಪ್ಪಿದ್ದಾರೆ. ದೀಪಿಕಾ ಕುಟುಂಬವು ಅತ್ತೆ-ಮಾವಂದಿರ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ತ್ವಿಶಾ ಶರ್ಮಾ ಕುಟುಂಬವು ಆಕೆಯ ಮರಣಕ್ಕೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಹೇಳಿದೆ. ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ 21 ವರ್ಷದ ಪಾಲಕ್ ರಜಕ್ ಮದುವೆಯಾದ ಒಂದು ವರ್ಷದೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬವು ಅತ್ತೆ-ಮಾವಂದಿರ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದೆ. ಪೋಷಕರ ಪ್ರಕಾರ, ಮದುವೆಯಲ್ಲಿ ಕಾರು ಮತ್ತು 10 ತೊಲ ಚಿನ್ನ ನೀಡಿದ್ದರೂ ಪಾಲಕ್ ನಿರಂತರ ಕಿರುಕುಳಕ್ಕೆ ಒಳಗಾಗಿದ್ದರು.
ಇವು ಪ್ರತ್ಯೇಕ ಘಟನೆಗಳಲ್ಲ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ ಭಾರತದಲ್ಲಿ 2024ರಲ್ಲಿ 5,737 ವರದಕ್ಷಿಣೆ ಸಾವುಗಳು ದಾಖಲಾಗಿವೆ. 2017ರಲ್ಲಿ ವರದಿಯಾದ 7,466 ವರದಕ್ಷಿಣೆ ಸಾವುಗಳಿಗೆ ಹೋಲಿಸಿದರೆ ಇದು ಕಡಿಮೆಯಾಗಿದ್ದರೂ, ಸಂಖ್ಯೆಗಳು ಇನ್ನೂ ಆತಂಕಕಾರಿಯಾಗಿವೆ. ಪ್ರತಿದಿನ ಸರಾಸರಿ 16 ಮಹಿಳೆಯರು ವರದಕ್ಷಿಣೆಗಾಗಿ ಕೊಲೆಯಾಗುತ್ತಿದ್ದಾರೆ!
ಉತ್ತರ ಪ್ರದೇಶದಲ್ಲೇ ಹೆಚ್ಚು ವರದಕ್ಷಿಣೆ ಸಾವು
2024ರಲ್ಲಿ ಭಾರತದಲ್ಲಿ ವರದಿಯಾದ ವರದಕ್ಷಿಣೆ ಸಾವುಗಳಲ್ಲಿ 2,038 ಪ್ರಕರಣಗಳು, ಅಂದರೆ ಮೂರನೇ ಒಂದು ಭಾಗಕ್ಕಿಂತ ಹೆಚ್ಚು, ಉತ್ತರ ಪ್ರದೇಶದಲ್ಲೇ ದಾಖಲಾಗಿವೆ. ಬಿಹಾರ ನಂತರದ ಸ್ಥಾನದಲ್ಲಿದ್ದು, ಅಲ್ಲಿ 1,078 ಸಾವುಗಳು ಸಂಭವಿಸಿವೆ. ಒಟ್ಟಾರೆ ಈ ಎರಡೂ ರಾಜ್ಯಗಳಲ್ಲಿ ಭಾರತದ ಒಟ್ಟು ವರದಕ್ಷಿಣೆ ಸಾವುಗಳ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಹೆಚ್ಚಿನ ವರದಕ್ಷಿಣೆ ಸಾವುಗಳು ದಾಖಲಾಗಿರುವ ಇತರ ರಾಜ್ಯಗಳಲ್ಲಿ ಮಧ್ಯಪ್ರದೇಶ (450), ರಾಜಸ್ಥಾನ (386) ಮತ್ತು ಪಶ್ಚಿಮ ಬಂಗಾಳ (337) ಸೇರಿವೆ. 2024ರಲ್ಲಿ ಪ್ರತಿ ಲಕ್ಷ ಮಹಿಳೆಯರಿಗೆ 9.8 ಪ್ರಕರಣಗಳೊಂದಿಗೆ ಉತ್ತರಾಖಂಡ ಅತಿ ಹೆಚ್ಚು ವರದಕ್ಷಿಣೆ ಅಪರಾಧ ಪ್ರಮಾಣವನ್ನು ದಾಖಲಿಸಿದೆ. ನಂತರದ ಸ್ಥಾನಗಳಲ್ಲಿ ಬಿಹಾರ (6.1), ಕರ್ನಾಟಕ (5.9) ಮತ್ತು ಜಾರ್ಖಂಡ್ (5.6) ಇದೆ.
ಪ್ರತಿ ಅರ್ಧಗಂಟೆಗೆ ಒಂದು ಪ್ರಕರಣ
ವರದಕ್ಷಿಣೆ ನಿಷೇಧ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚೇ ಇದೆ. 2023ರಲ್ಲಿ ಭಾರತದಲ್ಲಿ 15,489 ಪ್ರಕರಣಗಳು ದಾಖಲಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ವರದಕ್ಷಿಣೆ ಪ್ರಕರಣಗಳು ದಾಖಲಾಗಿದ ವರ್ಷವಾಗಿದೆ. 2024ರಲ್ಲಿ ಈ ಸಂಖ್ಯೆ 12,343ಕ್ಕೆ ಇಳಿದಿದೆ. ಅಂದರೆ ದೇಶದಲ್ಲಿ ಸರಿಸುಮಾರು ಪ್ರತಿ ಅರ್ಧಗಂಟೆಗೆ ಒಂದು ವರದಕ್ಷಿಣೆ ಸಂಬಂಧಿತ ಪ್ರಕರಣ ದಾಖಲಾಗುತ್ತಿದೆ.






