ವರದಕ್ಷಿಣೆ ಕಿರುಕುಳದಿಂದ ನೋಯ್ಡಾದ ಇಬ್ಬರು ಮಹಿಳೆಯರು ಮೃತ್ಯು: ಭಾರತದಲ್ಲಿ ಇಂದಿಗೂ ಪ್ರತಿ ವರ್ಷ 7,000 ವರದಕ್ಷಿಣೆ ಸಾವು ವರದಿಯಾಗುತ್ತಿರುವುದು ಏಕೆ?

ಸಾಂದರ್ಭಿಕ ಚಿತ್ರ | Photo Credit : magnific
ವರದಕ್ಷಿಣೆ ಪಿಡುಗು ಭಾರತವನ್ನು ಇಂದಿಗೂ ಕಾಡುತ್ತಲೇ ಇದೆ. ವರದಕ್ಷಿಣೆ ಕಿರುಕುಳದಿಂದ ನೋಯ್ಡಾದಲ್ಲಿ ಇಬ್ಬರು ಮಹಿಳೆಯರು ಸಾವಿಗೀಡಾಗಿರುವ ಘಟನೆಗಳು ಈ ಸಾಮಾಜಿಕ ಪಿಡುಗಿನತ್ತ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುವಂತೆ ಮಾಡಿವೆ. 33 ವರ್ಷದ ತ್ವಿಷಾ ಶರ್ಮಾ ಕಳೆದ ವಾರ ಭೋಪಾಲ್ನಲ್ಲಿರುವ ತಮ್ಮ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದಾಗಿ ಕೆಲವೇ ದಿನಗಳಲ್ಲಿ, ಗ್ರೇಟರ್ ನೋಯ್ಡದ ಇಕೋಟಿಕ್-III ಪ್ರದೇಶದಲ್ಲಿ 20 ವರ್ಷದ ದೀಪಿಕಾ ನಾಗರ್ ಎಂಬ ಮಹಿಳೆ ತನ್ನ ಮನೆಯ ಮೇಲ್ಛಾವಣಿಯಿಂದ ಬಿದ್ದು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.
ಈ ಇಬ್ಬರೂ ಮಹಿಳೆಯರ ಕುಟುಂಬಸ್ಥರು ಅವರ ಅತ್ತೆ-ಮಾವಂದಿರ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಇಷ್ಟೊಂದು ಕಠಿಣ ಕಾನೂನುಗಳಿದ್ದರೂ ವರದಕ್ಷಿಣೆಯ ಪಿಡುಗು ಇಂದಿಗೂ ಭಾರತದಲ್ಲಿ ಮಹಿಳೆಯರ ಸಾವಿಗೆ ಕಾರಣವಾಗುತ್ತಿರುವುದೇಕೆ?
ಭಾರತದಲ್ಲಿ ಇತ್ತೀಚಿನ ವರದಕ್ಷಿಣೆ ಪ್ರಕರಣಗಳು
ತ್ವಿಷಾ ಶರ್ಮಾ ಅವರು ಮೇ 12 ರಂದು ಭೋಪಾಲ್ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ವಕೀಲ ವೃತ್ತಿಯಲ್ಲಿರುವ ಪತಿ ಸಮರ್ಥ್ ಸಿಂಗ್ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ದಂಪತಿಗಳು 2024 ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾಗಿದ್ದು, 2024 ಡಿಸೆಂಬರ್ನಲ್ಲಿ ವಿವಾಹವಾಗಿದ್ದರು.
ತ್ವಿಷಾ ಅವರ ಸಹೋದರ ಮೇಜರ್ ಹರ್ಷಿತ್ ಶರ್ಮಾ ಅವರು, ತ್ವಿಷಾ ಅವರ ಅತ್ತೆ-ಮಾವಂದಿರು ಆಕೆಗೆ ನಿರಂತರ ಕಿರುಕುಳ ಮತ್ತು ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿ ವಾಸವಾಗಿರುವ ಆಕೆಯ ಕುಟುಂಬಸ್ಥರು, ವರದಕ್ಷಿಣೆ ಬೇಡಿಕೆಗಳಿಗೆ ಸಂಬಂಧಿಸಿದಂತೆ ಪತಿ ಮತ್ತು ಅತ್ತೆ-ಮಾವಂದಿರಿಂದ ಆಕೆ ಕಿರುಕುಳ ಹಾಗೂ ಒತ್ತಡಕ್ಕೆ ಒಳಗಾಗಿದ್ದರು ಎಂದಿದ್ದಾರೆ.
ತ್ವಿಷಾ ತನ್ನ ತಾಯಿಯೊಂದಿಗೆ ನಡೆಸಿದ್ದ ವೈಯಕ್ತಿಕ ವಾಟ್ಸಾಪ್ ಚಾಟ್ಗಳು ಅಂತರ್ಜಾಲದಲ್ಲಿ ವೈರಲ್ ಆದ ನಂತರ ಈ ಪ್ರಕರಣವು ಆನ್ಲೈನ್ನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಒಂದು ಸಂದೇಶದಲ್ಲಿ ಆಕೆ, “ಮುಝೆ ಬಹುತ್ ಜ್ಯಾದಾ ಘುಟನ್ ಹೋ ರಹೀ ಹೈ ಮಾ (ನನಗೆ ತುಂಬಾ ಉಸಿರುಗಟ್ಟಿದಂತಾಗುತ್ತಿದೆ ಅಮ್ಮಾ)” ಎಂದು ಬರೆದಿದ್ದರು.
ವರದಕ್ಷಿಣೆ ಸಾವಿಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 80(2) ಅಡಿಯಲ್ಲಿ ಮೃತೆಯ ಪತಿ ಮತ್ತು ಆತನ ತಾಯಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇದರ ಬೆನ್ನಲ್ಲೇ ಮತ್ತೊಂದು ವರದಕ್ಷಿಣೆ ಸಾವು ಬೆಳಕಿಗೆ ಬಂದಿದೆ.
20 ವರ್ಷದ ದೀಪಿಕಾ ನಾಗರ್ ಎಂಬ ಮಹಿಳೆ ರವಿವಾರ (ಮೇ 17) ಗ್ರೇಟರ್ ನೋಯ್ಡಾದ ಇಕೋಟಿಕ್-III ಪ್ರದೇಶದಲ್ಲಿರುವ ತನ್ನ ಮನೆಯ ಮೇಲ್ಛಾವಣಿಯಿಂದ ಬಿದ್ದು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.
ದೀಪಿಕಾ ಅವರ ಪತಿ ಮತ್ತು ಅತ್ತೆ-ಮಾವಂದಿರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ರವಿವಾರ ದೀಪಿಕಾ ತನ್ನ ಕುಟುಂಬಕ್ಕೆ ಕರೆ ಮಾಡಿ, ತನ್ನ ಪತಿ ಮತ್ತು ಅತ್ತೆ-ಮಾವ ತನಗೆ ಕಿರುಕುಳ ನೀಡುತ್ತಿದ್ದಾರೆ, ಹಲ್ಲೆ ನಡೆಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದರು ಎನ್ನಲಾಗಿದೆ. ಆಕೆಯ ತಂದೆ, ದೀಪಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಾದವನ್ನು ತಳ್ಳಿಹಾಕಿದ್ದು, ಅತ್ತೆ-ಮಾವಂದಿರೇ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೃತೆಯ ಕುಟುಂಬದ ಪ್ರಕಾರ, ಆಕೆಯ ದೇಹದ ಮೇಲೆ ಗಾಯದ ಗುರುತುಗಳೂ ಇದ್ದವು.
ಜನವರಿಯಲ್ಲಿ, ದಿಲ್ಲಿ ಪೊಲೀಸ್ನ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಗಾರಿಕೆ (SWAT) ವಿಭಾಗದ ಕಮಾಂಡೋ ಆಗಿದ್ದ 27 ವರ್ಷದ ಮಹಿಳೆಯನ್ನು ಆಕೆಯ ಪತಿಯೇ ವರದಕ್ಷಿಣೆಗಾಗಿ ಅತ್ಯಂತ ಕ್ರೂರವಾಗಿ ಕೊಂದಿದ್ದನು. ಅಂಕುರ್ ಎಂಬ ಆರೋಪಿಯು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ತನ್ನ ಪತ್ನಿ ಕಾಜಲ್ ಚೌಧರಿ ಅವರ ತಲೆಗೆ ಡಂಬೆಲ್ ನಿಂದ ಪದೇ ಪದೇ ಹೊಡೆದು ಕೊಲೆ ಮಾಡಿದ್ದನು.
ಆರೋಪಿಯು ಕಾಜಲ್ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಆಕೆಯ ಸಹೋದರ ನಿಖಿಲ್ಗೆ ಕರೆ ಮಾಡಿ, “ನಾನು ಆಕೆಯನ್ನು ಕೊಲ್ಲುತ್ತಿದ್ದೇನೆ” ಎಂದು ಹೇಳಿದ್ದನು.
ಭಾರತದಲ್ಲಿ ವರದಕ್ಷಿಣೆ ಪಿಡುಗು ಎಷ್ಟರ ಮಟ್ಟಿಗೆ ಇದೆ?
ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ವರದಕ್ಷಿಣೆ ಪ್ರಕರಣಗಳು ದಾಖಲಾಗುತ್ತವೆ. ಇತ್ತೀಚಿನ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ-ಅಂಶಗಳ ಪ್ರಕಾರ, 2024 ರಲ್ಲಿ ದೇಶದ ಮಹಾನಗರಗಳ ಪೈಕಿ ಬೆಂಗಳೂರಿನಲ್ಲೇ ಅತಿ ಹೆಚ್ಚು ವರದಕ್ಷಿಣೆ ಪ್ರಕರಣಗಳು ವರದಿಯಾಗಿವೆ.
ಎನ್ಸಿಆರ್ಬಿಯ ‘ಕ್ರೈಮ್ ಇನ್ ಇಂಡಿಯಾ 2024’ ವರದಿಯ ಪ್ರಕಾರ, 2024 ರಲ್ಲಿ ಭಾರತದ ಮಹಾನಗರಗಳಲ್ಲಿ ಒಟ್ಟು 1,008 ವರದಕ್ಷಿಣೆ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 878 ಪ್ರಕರಣಗಳು ದಾಖಲಾಗಿವೆ. ಅಂದರೆ ಶೇಕಡಾ 87 ರಷ್ಟು ಪ್ರಕರಣಗಳು ಇಲ್ಲಿಯೇ ನಡೆದಿವೆ.
ಇದರ ನಂತರದ ಸ್ಥಾನದಲ್ಲಿ ಲಕ್ನೋ ಇದ್ದು, ಅಲ್ಲಿ 48 ಪ್ರಕರಣಗಳು ದಾಖಲಾಗಿವೆ.
ಎನ್ಸಿಆರ್ಬಿಯ 2024 ರ ವರದಿಯು “ಪತಿ ಅಥವಾ ಆತನ ಸಂಬಂಧಿಕರಿಂದ ಕ್ರೌರ್ಯ” ಎಂಬುದನ್ನು ದೇಶಾದ್ಯಂತ ಮಹಿಳೆಯರ ಮೇಲಿನ ಅಪರಾಧಗಳ ಪೈಕಿ ಅತ್ಯಂತ ದೊಡ್ಡ ವಿಭಾಗ ಎಂದು ಗುರುತಿಸಿದೆ. 2024 ರಲ್ಲಿ ಇಂತಹ 1.2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಗಂಡ ಅಥವಾ ಅತ್ತೆ-ಮಾವಂದಿರಿಂದ ಮಹಿಳೆಯ ಮೇಲಿನ ಕ್ರೌರ್ಯದ ಪ್ರಕರಣಗಳಲ್ಲಿ ಉತ್ತರ ಪ್ರದೇಶವು 21,266 ಪ್ರಕರಣಗಳೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ 10,578 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ 10,538 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಇಂತಹ 2,947 ಘಟನೆಗಳು ನಡೆದಿವೆ.
2017 ರಿಂದ 2022 ರ ನಡುವೆ, ವರದಕ್ಷಿಣೆ ಸಂಬಂಧಿತ ಸಮಸ್ಯೆಗಳಿಂದಾಗಿ ಭಾರತದಲ್ಲಿ ಪ್ರತಿ ವರ್ಷ ಸರಾಸರಿ ಸುಮಾರು 7,000 ಮಹಿಳೆಯರು ಸಾವಿಗೀಡಾಗಿದ್ದಾರೆ. 2024 ರಲ್ಲಿ 19 ಮಹಾನಗರಗಳ ಪೈಕಿ ಹೊಸದಿಲ್ಲಿಯಲ್ಲಿ ಅತಿ ಹೆಚ್ಚು ವರದಕ್ಷಿಣೆ ಸಾವುಗಳು ಸಂಭವಿಸಿವೆ. ಕಳೆದ ಐದು ವರ್ಷಗಳಿಂದ ಹೊಸದಿಲ್ಲಿಯೇ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಎನ್ಸಿಆರ್ಬಿ ಅಂಕಿ-ಅಂಶಗಳ ಪ್ರಕಾರ, ಹೊಸದಿಲ್ಲಿಯಲ್ಲಿ 111 ಸಂತ್ರಸ್ತರನ್ನು ಒಳಗೊಂಡ 109 ವರದಕ್ಷಿಣೆ ಸಾವುಗಳು ವರದಿಯಾಗಿದ್ದು, ಪ್ರತಿ ಲಕ್ಷ ಜನರಿಗೆ ಅಪರಾಧ ಪ್ರಮಾಣ 1.4 ರಷ್ಟಿದೆ.
ಕಾನ್ಪುರವು 2024 ರಲ್ಲಿ 54 ಘಟನೆಗಳೊಂದಿಗೆ ಎರಡನೇ ಅತಿ ಹೆಚ್ಚು ವರದಕ್ಷಿಣೆ ಸಾವುಗಳನ್ನು ದಾಖಲಿಸಿದೆ. ಆದರೆ ಅಲ್ಲಿ ಪ್ರತಿ ಲಕ್ಷ ಜನರಿಗೆ ಅಪರಾಧ ಪ್ರಮಾಣ 4 ರಷ್ಟಿದ್ದು, ಹೊಸದಿಲ್ಲಿಗಿಂತ ಹೆಚ್ಚಾಗಿದೆ. ಪಾಟ್ನಾ 30 ಘಟನೆಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಅಪರಾಧ ಪ್ರಮಾಣ 3.1 ರಷ್ಟಿದೆ.
ಬೆಂಗಳೂರಿನಲ್ಲಿ 2024 ರಲ್ಲಿ 25 ವರದಕ್ಷಿಣೆ ಸಾವುಗಳು ದಾಖಲಾಗಿವೆ. ಹೈದರಾಬಾದ್ನಲ್ಲಿ ಇಂತಹ 14 ಸಾವುಗಳು ವರದಿಯಾಗಿವೆ.
ಚೆನ್ನೈ, ಕೋಝಿಕ್ಕೋಡ್, ಕೊಚ್ಚಿ ಮತ್ತು ಕೊಯಮತ್ತೂರು ಸೇರಿದಂತೆ ದಕ್ಷಿಣ ಭಾರತದ ಹಲವು ನಗರಗಳಲ್ಲಿ ಆ ವರ್ಷ ಯಾವುದೇ ವರದಕ್ಷಿಣೆ ಸಾವುಗಳು ವರದಿಯಾಗಿಲ್ಲ.
ಭಾರತದಲ್ಲಿ ವರದಕ್ಷಿಣೆ ಪದ್ಧತಿ ಇಂದಿಗೂ ಅಸ್ತಿತ್ವದಲ್ಲಿರಲು ಕಾರಣಗಳೇನು?
ಭಾರತದಲ್ಲಿ 1961 ರಿಂದಲೇ ವರದಕ್ಷಿಣೆ ನಿಷೇಧಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 80 ರ ಅಡಿಯಲ್ಲಿ ಮದುವೆಯಾದ ಏಳು ವರ್ಷಗಳ ಒಳಗೆ ಮಹಿಳೆಯು ಅಸ್ವಾಭಾವಿಕವಾಗಿ ಸಾವಿಗೀಡಾಗಿದರೆ ಮತ್ತು ಸಾವಿಗೆ ಮುನ್ನ ಆಕೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗಿತ್ತು ಎಂಬುದು ತನಿಖೆಯಲ್ಲಿ ದೃಢಪಟ್ಟರೆ, ಅದನ್ನು ವರದಕ್ಷಿಣೆ ಸಾವು ಎಂದು ಪ್ರಕರಣ ದಾಖಲಿಸಲಾಗುತ್ತದೆ.
ಕಾನೂನು ಇದ್ದರೂ, ಅರುಣಾಚಲ ಪ್ರದೇಶ, ಸಿಕ್ಕಿಂ, ಮಿಜೋರಾಂ ಮತ್ತು ನಾಗಾಲ್ಯಾಂಡ್ನಂತಹ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ಭಾರತದಾದ್ಯಂತ ವರದಕ್ಷಿಣೆ ಪದ್ಧತಿಯು ಇಂದಿಗೂ ವ್ಯಾಪಕವಾಗಿ ಮುಂದುವರಿದಿದೆ.
ಈ ಬಗ್ಗೆ ದೆವ್ವ yಪತ್ರಿಕೆಯೊಂದಿಗೆ ಮಾತನಾಡಿದ ಖ್ಯಾತ ಲೇಖಕಿ ಮತ್ತು ಕಾರ್ಯಕರ್ತೆ ಮೀನಾಕ್ಷಿ ಬಾಲಿ ಅವರು, ಈ ಸಮಸ್ಯೆಯನ್ನು ಪರಿಹರಿಸುವುದು ಸುಲಭ. ಆದರೆ ಸಾಮಾಜಿಕ-ಆರ್ಥಿಕ ಅಂಶಗಳು ಇದನ್ನು ಅಗತ್ಯಕ್ಕಿಂತ ಹೆಚ್ಚು ಸಂಕೀರ್ಣಗೊಳಿಸಿವೆ. ಪಿತೃಪ್ರಧಾನ ವ್ಯವಸ್ಥೆಯು ನಾವು ಇದರ ಬಗ್ಗೆ ಮಾತನಾಡುವ ವಿಧಾನವನ್ನೇ ಬದಲಾಯಿಸಿದೆ ಎಂದಿದ್ದಾರೆ.
ವರದಕ್ಷಿಣೆ ಬೇಡಿಕೆಗಳಿಗಾಗಿ ಅನೇಕ ಮಹಿಳೆಯರು ಇಂದಿಗೂ ಕೌಟುಂಬಿಕ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಕೆಲವೊಮ್ಮೆ ಮಹಿಳೆಯರು ಪತಿ ಹಾಗೂ ಅತ್ತೆ-ಮಾವಂದಿರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮದುವೆಯಾದ ಮಹಿಳೆಯು ತವರು ಮನೆಯಲ್ಲಿ ವಾಸಿಸುವುದನ್ನು ಸಮಾಜ ನೋಡುವ ರೀತಿ, ಮಹಿಳೆಯರು ಕಷ್ಟ ಅನುಭವಿಸುತ್ತಿದ್ದರೂ ಗಂಡನ ಮನೆ ತೊರೆಯದಂತೆ ಅಥವಾ ವಿಚ್ಛೇದನ ಪಡೆಯುವುದನ್ನು ತಡೆಯುತ್ತದೆ. ಕೌಟುಂಬಿಕ ದೌರ್ಜನ್ಯ ಎದುರಾದಾಗ, ಪೋಷಕರೇ ಹಲವು ಬಾರಿ ಮಹಿಳೆಯರಿಗೆ “ಹೊಂದಾಣಿಕೆ” ಮಾಡಿಕೊಳ್ಳಲು ಮತ್ತು “ರಾಜಿ” ಮಾಡಿಕೊಳ್ಳಲು ಸಲಹೆ ನೀಡುತ್ತಾರೆ.
ಇದಲ್ಲದೆ, ವಧು-ವರರ ಕುಟುಂಬಗಳ ನಡುವೆ “ಉಡುಗೊರೆಗಳನ್ನು ಕೊಡುವ” ಪದ್ಧತಿಯನ್ನು ಸಾಮಾನ್ಯೀಕರಿಸಿರುವುದು ವರದಕ್ಷಿಣೆ ಪದ್ಧತಿಯನ್ನು ಮತ್ತಷ್ಟು ಬಲಪಡಿಸಿದೆ.
2023 ರಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ, ದಶಕಗಳಿಂದ ಪುರುಷರ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಸುಧಾರಿಸಿದಂತೆ ಭಾರತದಲ್ಲಿ ವರದಕ್ಷಿಣೆ ಪ್ರಮಾಣವೂ ಹೆಚ್ಚಾಗಿದೆ.
ಉತ್ತಮ ಶಿಕ್ಷಣ ಮತ್ತು ಉತ್ತಮ ಉದ್ಯೋಗ ಹೊಂದಿರುವ ‘ಉನ್ನತ ಗುಣಮಟ್ಟದ’ ವರರು ಹೆಚ್ಚಿನ ವರದಕ್ಷಿಣೆಯ ಬೇಡಿಕೆ ಮಾಡುತ್ತಾರೆ.
“ಬಲವಾದ ಆರ್ಥಿಕ ಅಂಶಗಳು ವರದಕ್ಷಿಣೆ ಪದ್ಧತಿಯನ್ನು ಶಾಶ್ವತಗೊಳಿಸುತ್ತಿವೆ. ವಧುವಿನ ಕಡೆಯವರು ತಮ್ಮ ಹೆಣ್ಣುಮಕ್ಕಳಿಗೆ ವರದಕ್ಷಿಣೆ ನೀಡಲು ನಿರಾಕರಿಸಿದರೆ, ಅವರಿಗೆ ‘ಕಡಿಮೆ ಗುಣಮಟ್ಟದ’ ವರ ಸಿಗುತ್ತಾರೆ. ವರನ ಕಡೆಯವರಿಗೆ ವರದಕ್ಷಿಣೆ ಪಡೆಯಲು ಬಲವಾದ ಆರ್ಥಿಕ ಪ್ರೇರಣೆ ಇರುತ್ತದೆ. ವಿಶೇಷವಾಗಿ ಅವರ ಸ್ವಂತ ಕುಟುಂಬದಲ್ಲಿ ಹೆಣ್ಣುಮಕ್ಕಳಿದ್ದರೆ ಅವರಿಗೆ ವರದಕ್ಷಿಣೆ ನೀಡಲು ಅಥವಾ ವರನ ಶಿಕ್ಷಣಕ್ಕಾಗಿ ಮಾಡಿದ ಹೂಡಿಕೆಯನ್ನು ವಾಪಸ್ ಪಡೆಯಲು ಅವರು ವರದಕ್ಷಿಣೆಯನ್ನು ಅವಲಂಬಿಸುತ್ತಾರೆ” ಎಂದು ಬಿಬಿಸಿ ಈ ಅಧ್ಯಯನವನ್ನು ಉಲ್ಲೇಖಿಸಿ ವರದಿ ಮಾಡಿದೆ.
ಕೆಲವರ ವಾದದ ಪ್ರಕಾರ, ವರದಕ್ಷಿಣೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ಅಪರಾಧ ಹೆಚ್ಚಾಗಿರುವುದನ್ನು ತೋರಿಸುವುದಿಲ್ಲ. ಬದಲಿಗೆ ಹೆಚ್ಚು ಸಂತ್ರಸ್ತರು ದೂರು ದಾಖಲಿಸುತ್ತಿರುವುದನ್ನು ತೋರಿಸುತ್ತದೆ. ಭಾರತದಲ್ಲಿ ಇಂದಿಗೂ ವರದಕ್ಷಿಣೆ ಪ್ರಕರಣಗಳು ಪೂರ್ಣ ಪ್ರಮಾಣದಲ್ಲಿ ದಾಖಲಾಗುತ್ತಿಲ್ಲ. ನಿಜವಾದ ಸಂಖ್ಯೆಗಳು ಇದಕ್ಕಿಂತಲೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.
ಆದರೆ, ಈ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ತೀರಾ ಕಡಿಮೆಯಿದೆ. NCRB ಅಂಕಿ-ಅಂಶಗಳನ್ನು ಉಲ್ಲೇಖಿಸಿ ದಿ ಹಿಂದೂ ವರದಿ ಮಾಡಿರುವಂತೆ, 2017 ರಿಂದ 2022 ರ ನಡುವೆ ಭಾರತದಲ್ಲಿ ಪ್ರತಿ ವರ್ಷ ಸರಾಸರಿ 7,000 ವರದಕ್ಷಿಣೆ ಸಾವುಗಳು ವರದಿಯಾಗಿವೆ. ಈ ಪ್ರಕರಣಗಳ ತನಿಖೆಯು ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದ್ದು, ಶಿಕ್ಷೆಯಾಗುತ್ತಿರುವುದು ತೀರಾ ಕೆಲವು ಪ್ರಕರಣಗಳಲ್ಲಿ ಮಾತ್ರ. ಪ್ರತಿ ವರ್ಷ ದಾಖಲಾಗುವ ಸರಾಸರಿ 7,000 ವರದಕ್ಷಿಣೆ ಸಾವುಗಳ ಪೈಕಿ ಕೇವಲ 4,500 ಪ್ರಕರಣಗಳಲ್ಲಿ ಮಾತ್ರ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡುತ್ತಿದ್ದಾರೆ. ಕೆಲವು ಪ್ರಕರಣಗಳು ಆರು ತಿಂಗಳಿಗಿಂತ ಹೆಚ್ಚು ಕಾಲ ತನಿಖಾ ಹಂತದಲ್ಲೇ ಉಳಿಯುತ್ತವೆ.
ಕೆಲವೇ ಕೆಲವು ಪ್ರಕರಣಗಳಲ್ಲಿ ಮಾತ್ರ ಅಪರಾಧ ಸಾಬೀತಾಗಿ ಶಿಕ್ಷೆಯಾಗುತ್ತಿದ್ದು, ಉಳಿದ ಪ್ರಕರಣಗಳು ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಸಿಲುಕಿಕೊಳ್ಳುತ್ತಿವೆ ಅಥವಾ ವಿವಿಧ ಕಾರಣಗಳಿಂದ ನ್ಯಾಯಾಲಯಗಳಿಂದ ವಿಲೇವಾರಿಯಾಗುತ್ತಿವೆ. ಕೆಲವು ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಿಗಳು ಖುಲಾಸೆಯಾಗುತ್ತಿದ್ದಾರೆ.






