GPS ಮೂಲಕ ಸ್ಥಳ ಪತ್ತೆ ಅಳವಡಿಸಿ ವರ್ಕ್ ಫ್ರಂ ಹೋಮ್! ಗೊಂದಲಕ್ಕೆ ಬಿದ್ದ ಉದ್ಯೋಗಿ

ಸಾಂದರ್ಭಿಕ ಚಿತ್ರ | Photo Credit : magnific
ವರ್ಕ್ ಫ್ರಂ ಹೋಮ್ ಆದೇಶದಲ್ಲಿ ಅವರು ತಮ್ಮ ಊರುಗಳಿಗೆ ಹೋಗುವಂತಿಲ್ಲ. ದಿಲ್ಲಿ-NCR ಪ್ರದೇಶದಲ್ಲಿಯೇ ಇರುವ ಬಗ್ಗೆ GPS ಮೂಲಕ ಹಾಜರಾತಿಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ!
ವೃತ್ತಿಪರರೊಬ್ಬರು ತಮ್ಮ ವರ್ಕ್ ಫ್ರಂ ಹೋಮ್ ನೀತಿಯ ಬಗ್ಗೆ ರೆಡಿಟ್ನಲ್ಲಿ ಬರೆದುಕೊಂಡು ಸಾಮಾಜಿಕ ಜಾಲತಾಣಗಳ ಗಮನ ಸೆಳೆದಿದ್ದಾರೆ. ಕಳೆದ ತಿಂಗಳು ಅವರ ಕಂಪೆನಿ ಬಹಳಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಕೆಲವು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಆದೇಶಿಸಲಾಗಿದೆ. ಆದರೆ ಈ ವರ್ಕ್ ಫ್ರಂ ಹೋಮ್ ಆದೇಶದಲ್ಲಿ ಅವರು ತಮ್ಮ ಊರುಗಳಿಗೆ ಹೋಗುವಂತಿಲ್ಲ. ದಿಲ್ಲಿ -ಎನ್ಸಿಆರ್ ಪ್ರದೇಶದಲ್ಲಿಯೇ ಇರಬೇಕು ಎಂಬ ಷರತ್ತಿನೊಂದಿಗೆ, GPS ಮೂಲಕ ಹಾಜರಾತಿ ದಾಖಲಿಸಿ ಅವರ ಮೇಲ್ವಿಚಾರಣೆ ನಡೆಸಲಾಗುತ್ತಿದೆ!
ಉದ್ಯೋಗಿಗಳನ್ನು ವಜಾಗೊಳಿಸಿದ ನಂತರ ಸಿಬ್ಬಂದಿ ಸಂಖ್ಯೆ 40ರಿಂದ 15ಕ್ಕೆ ಇಳಿದಿದೆ. ಕಂಪೆನಿಯು ಆರನೇ ಮಹಡಿಯಲ್ಲಿದ್ದ ತನ್ನ ಪ್ರಸ್ತುತ ಗುತ್ತಿಗೆಯ ಸ್ಥಳವನ್ನು ಖಾಲಿ ಮಾಡಬೇಕಾಗಿ ಬಂದಿದ್ದು, ಕೆಳಗಿನ ಮಹಡಿಯಲ್ಲಿರುವ ಸಣ್ಣ ಕೆಲಸದ ಸ್ಥಳಕ್ಕೆ ಸ್ಥಳಾಂತರಗೊಂಡಿದೆ. ಐದನೇ ಮಹಡಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಾಕಷ್ಟು ಸ್ಥಳವಿಲ್ಲದ ಕಾರಣ, ಕಂಪೆನಿ ಅವರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಐದನೇ ಮಹಡಿಯವರಿಗೆ ನಾಲ್ಕು ಸ್ಥಾನಗಳನ್ನು ಮಾತ್ರ ನೀಡಲಾಗಿದೆ. ಉಳಿದವರು ರೊಟೇಶನ್ ಆಧಾರದಲ್ಲಿ ಮನೆಯಿಂದ ಕೆಲಸ ಮಾಡಬೇಕು.
ಕೆಲವು ವಾರಗಳ ನಂತರ ಪ್ರಸ್ತುತ ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಕಚೇರಿಗೆ ಹೋಗಬೇಕಾಗುತ್ತದೆ. ಕಚೇರಿಯಲ್ಲಿರುವವರನ್ನು ಮನೆಯಿಂದ ಕೆಲಸಕ್ಕೆ ಸ್ಥಳಾಂತರಿಸಲಾಗುತ್ತದೆ. ಈ ನೀತಿ ಬದಲಾವಣೆ ಬಗ್ಗೆ ಆರಂಭದಲ್ಲಿ ಉದ್ಯೋಗಿಗಳು ಖುಷಿಪಟ್ಟರೂ, ನಿಧಾನವಾಗಿ ತಮ್ಮನ್ನು GPS ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂಬುದು ಅವರಿಗೆ ಅರಿವಾಯಿತು.
“ಆರಂಭದಲ್ಲಿ ನನಗೆ ಖುಷಿಯಾಗಿತ್ತು. ನಾನು ಊರಿಗೆ ಹೋಗಿ ಅಲ್ಲಿಂದಲೇ ಕೆಲಸ ಮಾಡೋಣ ಎಂದುಕೊಂಡಿದ್ದೆ. ಆದರೆ ನನ್ನ ಬಾಸ್ ತಕ್ಷಣ ಸ್ಪಷ್ಟೀಕರಣ ನೀಡಿ, ದಿಲ್ಲಿ-ಎನ್ಸಿಆರ್ ಪ್ರದೇಶದಿಂದ ಮಾತ್ರ ವರ್ಕ್ ಫ್ರಂ ಹೋಮ್ ಮಾಡಬೇಕು ಎಂದು ಹೇಳಿದ್ದಾರೆ. ಇದನ್ನು ಖಚಿತಪಡಿಸಲು ಹಾಜರಾತಿಯನ್ನು GPS ಮೂಲಕ ಗುರುತಿಸಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಉದ್ಯೋಗಿ ದಿಲ್ಲಿ-ಎನ್ಸಿಆರ್ನಲ್ಲಿದ್ದರೆ ಮಾತ್ರ ಅವರ ಹಾಜರಾತಿ ಗುರುತಿಸಲಾಗುತ್ತದೆ” ಎಂದು ಸಿಬ್ಬಂದಿ ಬರೆದುಕೊಂಡಿದ್ದಾರೆ.
“ಇಂತಹ ನೀತಿ ತಂದಿರುವುದಕ್ಕೆ ಬಾಸ್ ಯಾವುದೇ ಕಾರಣ ನೀಡಿಲ್ಲ. ಆದರೆ ಉದ್ಯೋಗಿಯ ಅಗತ್ಯ ಕಚೇರಿಯಲ್ಲಿ ತುರ್ತಾಗಿ ಉಂಟಾದರೆ, ಅವರು ಬೇಗನೆ ತಲುಪಲು ಸಾಧ್ಯವಾಗಲಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಇದನ್ನು ಕೇಳಿ ನನಗೆ ನಿಜವಾಗಿಯೂ ನಿರಾಶೆಯಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಪೋಸ್ಟ್ ಜನಪ್ರಿಯವಾಗುತ್ತಿದ್ದಂತೆ, ಬಳಕೆದಾರರು ಅವರಿಗೆ ಸಹಾನುಭೂತಿ ತೋರಿಸಲಾರಂಭಿಸಿದರು. ಇತರರು, ವರ್ಕ್ ಫ್ರಂ ಹೋಮ್ ವಿಷಯಕ್ಕೆ ಬಂದಾಗ ಅನೇಕ ಕಂಪೆನಿಗಳು ಇಂತಹ ಪ್ರಕ್ರಿಯೆಗಳನ್ನು ಅನುಸರಿಸುತ್ತವೆ ಎಂದು ಗಮನ ಸೆಳೆದರು.
“ವರ್ಕ್ ಫ್ರಂ ಹೋಮ್ ಅಂದರೆ ಇದೇನಾ? ಇದನ್ನು ಗುಲಾಮಗಿರಿ ಎಂದು ಕರೆಯಬಹುದು. ದುಃಖದ ವಿಷಯವೆಂದರೆ, ಇದನ್ನು ದೊಡ್ಡ ಸಮಸ್ಯೆಯೇ ಅಲ್ಲ ಎಂದು ಭಾವಿಸಲಾಗುತ್ತಿದೆ. ಕಂಪೆನಿಗಳು ಉದ್ಯೋಗಿಗಳನ್ನು ಹೀಗೆ ನಡೆಸಿಕೊಳ್ಳುತ್ತವೆ ಎಂದು ನಾನು ಅಂದುಕೊಂಡಿರಲಿಲ್ಲ” ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯಿಸಿ, “ವರ್ಕ್ ಫ್ರಂ ಹೋಮ್ ತಾತ್ಕಾಲಿಕವಾಗಿರುವುದರಿಂದ ಇಂತಹ ವ್ಯವಸ್ಥೆ ಮಾಡಿರಬಹುದು. ಕಂಪೆನಿ ಹೊಸ ಬಾಡಿಗೆ ಸ್ಥಳ ಪಡೆದು ಹೈಬ್ರಿಡ್ ಮಾದರಿಗೆ ಬದಲಾಗಲು ಯೋಜಿಸುತ್ತಿರಬಹುದು. ಸ್ಥಳಾಂತರಗೊಳ್ಳಲು ಅವಕಾಶ ನೀಡಿದರೆ, ಅನೇಕರು ತಮ್ಮ ಬಾಡಿಗೆ ಮನೆಗಳನ್ನು ಖಾಲಿ ಮಾಡಬಹುದು. ಮಕ್ಕಳಿರುವವರು ತಮ್ಮ ಊರುಗಳಲ್ಲಿ ಶಾಲೆಗೆ ಪ್ರವೇಶ ಪಡೆಯಬಹುದು” ಎಂದು ಹೇಳಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯಿಸಿ, “ದೊಡ್ಡ ಎಂಎನ್ಸಿಗಳಲ್ಲೂ ಪರಿಸ್ಥಿತಿ ಇದೇ ರೀತಿ ಇದೆ. ಕೆಲವರು ವಿದ್ಯುತ್ ವೈಫಲ್ಯ ಮತ್ತು ಇಂಟರ್ನೆಟ್ ಸಮಸ್ಯೆಗಳಂತಹ ಕಾರಣಗಳನ್ನು ನೀಡಿ ಆಫ್ಲೈನ್ನಲ್ಲಿ ಇರುತ್ತಾರೆ. ಅದನ್ನು ತಪ್ಪಿಸಲು ಬಹುಶಃ ಹೀಗೆ ಮಾಡಿರಬಹುದು” ಎಂದು ಸಮಾಧಾನಪಡಿಸಿದ್ದಾರೆ.






