ಯುಟ್ಯೂಬ್ ನಲ್ಲಿ ಕಾಣುವ ಐದು ವೀಡಿಯೋಗಳಲ್ಲಿ ಒಂದು AI ಸ್ಲಾಪ್ ಎನ್ನುವುದು ನಿಮಗೆ ಗೊತ್ತೆ?

ಸಾಂದರ್ಭಿಕ ಚಿತ್ರ | Photo Credit : freepik.com
ದೈತ್ಯ ತಂತ್ರಜ್ಞಾನ ಸಂಸ್ಥೆಗಳು AI ಸ್ಲಾಪ್ ವೀಡಿಯೋಗಳ ಸಮಸ್ಯೆಯನ್ನು ಎದುರಿಸುತ್ತಿವೆ. ಏನಿದು AI ಸ್ಲಾಪ್ ಮತ್ತು ನಿಮಗೇಕೆ ಮುಖ್ಯವಾಗುತ್ತದೆ?
ಯುಟ್ಯೂಬ್ನಲ್ಲಿ ಸಾಮೂಹಿಕವಾಗಿ ಉತ್ಪಾದಿಸಲಾಗುತ್ತಿರುವ ಕಳಪೆ ಗುಣಮಟ್ಟದ ಎಐ-ನಿರ್ಮಿತ ವಿಷಯಗಳನ್ನು ತೆಗೆದು ಹಾಕುವ ಪ್ರಯತ್ನ ವಿಫಲವಾಗುತ್ತಿದೆ. ಹೊಸ ಅಧ್ಯಯನವೊಂದರ ಪ್ರಕಾರ ಯುಟ್ಯೂಬ್ನ ಸ್ವಯಂ ಆಲ್ಗಾರಿದಮ್ ಮೂಲಕ ಹೊಸ ಬಳಕೆದಾರರಿಗೆ ‘AI ಸ್ಲಾಪ್’ ಅನ್ನು ಶಿಫಾರಸು ನೀಡುವುದು ಮುಂದುವರಿದಿದೆ.
ಏನಿದು AI ಸ್ಲಾಪ್?
AI ಸ್ಲಾಪ್ ಎಂದರೆ ಕೃತಕ ಬುದ್ಧಿಮತ್ತೆಯಿಂದ ತ್ವರಿತವಾಗಿ ರಚಿಸಲಾದ ಕಳಪೆ-ಗುಣಮಟ್ಟದ, ಸಾಮಾನ್ಯ ಅಥವಾ ಪುನರಾವರ್ತಿತ ಡಿಜಿಟಲ್ ವಿಷಯಗಳು. ಅವುಗಳಲ್ಲಿ ಪಠ್ಯ, ಚಿತ್ರಗಳು, ವೀಡಿಯೊಗಳು ಇರಬಹುದು. ಇವುಗಳ ರಚನೆಯಲ್ಲಿ ಮಾನವ ಹಸ್ತಕ್ಷೇಪವಿರುವುದಿಲ್ಲ. ಸಾಮಾನ್ಯವಾಗಿ ತ್ವರಿತ ಹಣಗಳಿಕೆಗಾಗಿ ಇಂತಹ ವಿಷಯಗಳನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಇಂಟರ್ನೆಟ್ ಪರಿಶುದ್ಧತೆ ಕಡಿಮೆಯಾಗಲಿದೆ ಮತ್ತು ತಪ್ಪು ಮಾಹಿತಿ ಹರಡಲಿದೆ. ಮುಖ್ಯವಾಗಿ ಮಾನವ-ರಚಿಸಿದ ಕೆಲಸಗಳಿಗೆ ಮೌಲ್ಯ ಕಡಿಮೆಯಾಗುವ ಕಳವಳ ಹರಡಿದೆ.
ಜನಪ್ರಿಯತೆ ಗಳಿಸಿರುವ AI ಸ್ಲಾಪ್
ಯುಟ್ಯೂಬ್ನ ಆಲ್ಗಾರಿದಂನಲ್ಲಿ ಹೊಸ ಬಳಕೆದಾರರಿಗೆ ಸಲಹೆ ನೀಡಲಾಗುವ ಶೇ 20ರಷ್ಟು ವೀಡಿಯೊಗಳು AI ಸ್ಲಾಪ್ಗಳಾಗಿವೆ. ವೀಡಿಯೊ ಎಡಿಟಿಂಗ್ ಕಂಪನಿಯಾದ ಕ್ಯಾಪ್ವಿಂಗ್ ವಿಶ್ವಾದ್ಯಂತ ಜನಪ್ರಿಯವಾಗಿರುವ ಸುಮಾರು 15,000 ವೀಡಿಯೋ ವಾಹಿನಿಗಳನ್ನು ವಿಶ್ಲೇಷಿಸಿದೆ. ಅಧ್ಯಯನಕ್ಕಾಗಿ ವಿಶ್ವದ ಅತಿ ಜನಪ್ರಿಯ 15,000 ಯುಟ್ಯೂಬ್ ಚಾನಲ್ಗಳನ್ನು ಪರಿಶೀಲಿಸಲಾಗಿತ್ತು. ಇವು ಎಷ್ಟು AI ಸ್ಲಾಪ್ ವೀಡಿಯೊ ಹಾಕುತ್ತಿವೆ ಮತ್ತು ಹಣ ಸಂಪಾದಿಸುತ್ತಿವೆ ಎಂದು ಅಧ್ಯಯನದಲ್ಲಿ ಪರಿಶೀಲಿಸಲಾಗಿತ್ತು.
ಅವುಗಳಲ್ಲಿ 278 ಕೇವಲ AI ಸ್ಲಾಪ್ ವೀಡಿಯೋಗಳನ್ನು ಮಾತ್ರ ಅಪ್ಲೋಡ್ ಮಾಡುತ್ತಿವೆ. ಅವುಗಳಿಗೆ 63 ಶತಕೋಟಿ ವೀಕ್ಷಣೆಗಳಿವೆ ಮತ್ತು 221 ದಶಲಕ್ಷ ಚಂದಾದಾರರಿರುವುದು ಕಂಡುಬಂತು. ಅತಿ ಹೆಚ್ಚು ವೀಕ್ಷಣೆ (2.4 ದಶಲಕ್ಷ ವೀಕ್ಷಣೆಗಳು) ಕಂಡ AI ಸ್ಲಾಪ್ ಯುಟ್ಯೂಬ್ ಚಾನೆಲ್ ಆಗಿರುವ ‘ಬಂದರ್ ಅಪ್ನಾ ದೋಸ್ತ್’ ಭಾರತದ ಮೂಲದ್ದಾಗಿದೆ. ಇವರು ಮಾನವರೂಪಿ ಚಿಕ್ಕಬಾಲದ ಕೋತಿ ಮತ್ತು ರಾಕ್ಷಸರ ವಿರುದ್ಧ ಹೋರಾಡುವ ಹಲ್ಕ್ ರೀತಿಯ ಪಾತ್ರವನ್ನು ಸೃಷ್ಟಿಸಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದಾರೆ.
AI ಸ್ಲಾಪ್ ಆದಾಯ ಗಳಿಸುವುದಿಲ್ಲ
AI ಸ್ಲಾಪ್ ವೀಡಿಯೊಗಳಿಗೆ ಯುಟ್ಯೂಬ್ನಲ್ಲಿ ಈಗಿನ ನೀತಿಯಲ್ಲಿ ಆದಾಯ ನೀಡಲಾಗುವುದಿಲ್ಲ. ಅಧ್ಯಯನದಲ್ಲಿ ಕಂಡುಕೊಂಡಿರುವ ಪ್ರಕಾರ ಅಂತಹ ವೀಡಿಯೋಗಳು ವಾರ್ಷಿಕ 117 ದಶಲಕ್ಷ ಡಾಲರ್ ಆದಾಯ ಗಳಿಸುವ ಸಾಧ್ಯತೆಯಿದೆ. ‘ಬಂದರ್ ಅಪ್ನಾ ದೋಸ್ತ್’ ಏಕ ಮಾತ್ರ ಚಾನೆಲ್ ವಾರ್ಷಿಕವಾಗಿ 4.25 ದಶಲಕ್ಷ ಡಾಲರ್ ಆದಾಯ ಗಳಿಸಬಹುದಾಗಿದೆ. ಯುಟ್ಯೂಬ್ನಲ್ಲಿ ಹೊಸ ಖಾತೆಯನ್ನು ರಚಿಸಿ ಪರಿಶೀಲಿಸಿದಾಗ ಮೊದಲು ಕಾಣಿಸಿಕೊಂಡ 500 ವೀಡಿಯೋಗಳಲ್ಲಿ 104 AI ಸ್ಲಾಪ್ಗಳಾಗಿದ್ದವು. ಉಳಿದ ಮೂರನೇ ಒಂದು ಭಾಗದಷ್ಟು ಅನ್ನು ‘ಬ್ರೈನ್ ರಾಟ್’ (ಕಳಪೆ) ಎಂದು ವರ್ಗೀಕರಿಸಬಹುದು.
ಅಧ್ಯಯನದಲ್ಲಿ ಕ್ಯಾಪ್ವಿಂಗ್ಸ್ ಕಂಡುಕೊಂಡಿರುವ ಪ್ರಕಾರ ವೇಗವಾಗಿ ಬೆಳೆಯುತ್ತಿರುವ, ಅರೆ-ರಚನಾತ್ಮಕ AI ಸ್ಲಾಪ್ ಉದ್ಯಮವು ಜನರೇಟಿವ್ AI ಟೂಲ್ಗಳನ್ನು ಬಳಸಿಕೊಂಡು ಜನರನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತಿದೆ. ಇವರು ಮಾತ್ರವಲ್ಲದೆ, ಸ್ಕ್ಯಾಮರ್ಗಳು, ವೈರಲ್, AI ರಚಿತ ವಿಷಯವನ್ನು ಹೇಗೆ ತಯಾರಿಸುವುದು ಎಂಬ ಕುರಿತು ಸಲಹೆಗಳು ಮತ್ತು ಕೋರ್ಸ್ಗಳನ್ನು ನೀಡುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ AI ಸ್ಲಾಪ್
ಈ ಟ್ರೆಂಡ್ ಯುಟ್ಯೂಬ್ಗೆ ಮಾತ್ರ ಸೀಮಿತವಾಗಿಲ್ಲ. ಇನ್ಸ್ಟಾಗ್ರಾಂ, ಎಕ್ಸ್ ಮತ್ತು ಯುಟ್ಯೂಬ್ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ AI ಸ್ಲಾಪ್ ವೀಡಿಯೋಗಳು ಹೆಚ್ಚಾಗಿರುವುದು ಕಂಡುಬಂದಿದೆ. ಅಂತಹ ಕಳಪೆ ಗುಣಮಟ್ಟದ ವೀಡಿಯೋಗಳು ಹರಡುವುದನ್ನು ತೆಗೆದು ಹಾಕಲು ವೇದಿಕೆಗಳು ಪ್ರಯತ್ನಿಸುತ್ತಿವೆ. ಇದೇ ತಿಂಗಳಲ್ಲಿ ಯುಟ್ಯೂಬ್ ಅಂತಹ ಎರಡು ದೊಡ್ಡ ಚಾನೆಲ್ಗಳನ್ನು ಬ್ಲಾಕ್ ಮಾಡಿತ್ತು. ಅವು ನಕಲಿ ಮತ್ತು ಎಐ ರಚಿತ ಸಿನಿಮಾ ಟ್ರೈಲರ್ಗಳನ್ನು ಪ್ರಸಾರ ಮಾಡುತ್ತಿದ್ದವು.
ಆದರೆ ದೊಡ್ಡ ತಂತ್ರಜ್ಞಾನ ಕಂಪನಿಗಳ ಪ್ರಕಾರ ಎಐ-ರಚಿತ ವಿಷಯಗಳು ಸಾಮಾಜಿಕ ಜಾಲತಾಣಗಳ ಭವಿಷ್ಯವಾಗಿದೆ. ಅಕ್ಟೋಬರ್ನಲ್ಲಿ ಮೆಟಾದ ಸಿಇಒ ಮಾರ್ಕ್ ಝುಕರ್ಬರ್ಗ್ AI ರಚಿಸಲು ಮತ್ತು ರಿಮಿಕ್ಸ್ ಮಾಡಲು ಸುಲಭಗೊಳಿಸುವ ಕಾರಣದಿಂದಾಗಿ ತನ್ನ ಶಿಫಾರಸು ವ್ಯವಸ್ಥೆಗೆ ದೊಡ್ಡ ಪ್ರಮಾಣದ ಅನುದಾನವನ್ನು ನೀಡಿ ಸೂಕ್ತ ಶಿಫಾರಸುಗಳನ್ನು ಮಾಡುವ ವ್ಯವಸ್ಥೆ ರೂಪಿಸುವುದಾಗಿ ಹೇಳಿದ್ದಾರೆ.
ಯುಟ್ಯೂಬ್ ಕೂಡ ವಿಯೊ3 ಅನ್ನು ಪರಿಚಯಿಸಿದೆ. ಅದು ಗೂಗಲ್ನ ಇತ್ತೀಚೆಗಿನ ಎಐ ವೀಡಿಯೊ ಜನರೇಟರ್ ಆಗಿದ್ದು, ನೇರವಾಗಿ ಶಾರ್ಟ್ಸ್ಗಳನ್ನು ರಚಿಸಬಹುದಾಗಿದೆ. ವೇದಿಕೆಯೊಳಗೆ AI ರಚಿತ ವೀಡಿಯೋಗಳನ್ನು ಸೃಷ್ಟಿಸಲು ಅದು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಅಧ್ಯಯನ ವರದಿಯ ಬಗ್ಗೆ ಯುಟ್ಯೂಬ್ ಪ್ರತಿಕ್ರಿಯಿಸಿದ್ದು, “ಜನರೇಟಿವ್ AI ಒಂದು ಸಾಧನ. ಅದರಲ್ಲಿ ಕಳಪೆ ಅಥವಾ ಉತ್ತಮ ಗುಣಮಟ್ಟದ ವೀಡಿಯೊ ಕೂಡ ರಚಿಸಬಹುದು. ನಾವು ನಮ್ಮ ಬಳಕೆದಾರರಿಗೆ ಉನ್ನತ ಗುಣಮಟ್ಟದ ಕಂಟೆಂಟೆ ನೀಡಲು ಬದ್ಧರಾಗಿದ್ದೇವೆ. AI ವೀಡಿಯೋಗಳು ನಮ್ಮ ವೇದಿಕೆಗೆ ಬಂದಾಗ ನಮ್ಮ ನಿಯಮಗಳನ್ನು ಅನುಸರಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ನಾವು ತೆಗೆದು ಹಾಕುತ್ತೇವೆ” ಎಂದು ಹೇಳಿದೆ.
AI ಸ್ಲಾಪ್ ಹೆಸರು ಹೇಗೆ ಬಂತು?
AI ರಚಿತ ಕಳಪೆ ಗುಣಮಟ್ಟದ ವೀಡಿಯೋಗಳು ವರ್ಷವಿಡೀ ಪ್ರಸಾರವಾದ ಕಾರಣ ಅಮೆರಿಕದ ಶಬ್ದಕೋಶ ನಿರ್ಮಾಪಕ ಸಂಸ್ಥೆ ಮೆರಿಯಂ-ವೆಬ್ಸ್ಟರ್ ಈ ವರ್ಷದ ಶಬ್ದ ‘ಸ್ಲಾಪ್’ ಎಂದು ಹೇಳಿದೆ. AI ಸ್ಲಾಪ್ ಎಂದರೆ “ಕೃತಕಬುದ್ಧಿಮತ್ತೆ ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿ ರಚಿಸಲಾದ ಕಳಪೆ ಗುಣಮಟ್ಟದ ಡಿಜಿಟಲ್ ಕಂಟೆಂಟ್” ಎಂದು ವ್ಯಾಖ್ಯಾನಿಸಲಾಗಿದೆ.
ಕೃಪೆ: indianexpress.com







