ವಿಷಕಂಠ ಮತದಾರ!

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುವಾಹಟಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರುವುದು. Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪಂಚರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ, ರಾಷ್ಟ್ರ ರಾಜಕಾರಣದ ದಿಕ್ಕಿಗೆ ಕೈಮರದಂತಿದೆ. ಪಶ್ಚಿಮ ಬಂಗಾಳದಲ್ಲಿ ಕೊನೆಗೂ ಬಿಜೆಪಿ ತನ್ನ ಮೂರನೇ ದೈತ್ಯ ಪಾದವನ್ನು ಊರಿ ಬಿಟ್ಟಿದೆ. ಇತ್ತ ದಕ್ಷಿಣದಲ್ಲಿ ಹೊಸ ‘ದ್ರಾವಿಡ ದಳಪತಿ’ಗೆ ಈ ಚುನಾವಣೆ ಜನ್ಮ ನೀಡಿದೆ. ಕೇರಳದಲ್ಲಿ ಎಡಪಕ್ಷಕ್ಕೆ ತೀವ್ರ ಹಿನ್ನಡೆಯಾಗುವ ಮೂಲಕ, ದೇಶದಲ್ಲಿ ಕಳೆದ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಡಪಂಥೀಯ ಸರಕಾರವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಪಶ್ಚಿಮ ಬಂಗಾಳ, ತ್ರಿಪುರಾದಲ್ಲಿ ನೆಲೆ ಕಳೆದುಕೊಂಡಿರುವ ಎಡಪಕ್ಷ ಇದೀಗ ಕೇರಳದಲ್ಲೂ ಅಧಿಕಾರ ಕಳೆದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು ಮತ್ತೆ ಅಧಿಕಾರಕ್ಕೇರುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ದೊಡ್ಡ ಮಟ್ಟದಲ್ಲಿ ಅದರ ಕಾರ್ಯಕರ್ತರು ಇತರ ಪಕ್ಷಗಳಿಗೆ ಗುಳೆ ಹೋಗುತ್ತಿದ್ದಾರೆ. ಆರೆಸ್ಸೆಸ್ ಸಿದ್ಧಾಂತಗಳು ರಾಜಕೀಯ ಶಕ್ತಿಯಾಗಿ ದಕ್ಷಿಣ ಭಾರತಕ್ಕೆ ಕಾಲಿಡದಂತೆ ತಡೆದು ನಿಲ್ಲಿಸುವಲ್ಲಿ ಕೇರಳದಲ್ಲಿ ಎಡ ಪಂಥೀಯ ಚಿಂತನೆ ಕೋಟೆಯಂತೆ ಕೆಲಸ ಮಾಡಿತ್ತು. ಇದೀಗ ಆ ಕೋಟೆಗೆ ಬಿರುಕು ಬಿದ್ದಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ದಕ್ಷಿಣ ಭಾರತದ ದಿಡ್ಡಿ ಬಾಗಿಲು ಬಿಜೆಪಿ ಮತ್ತು ಆರೆಸ್ಸೆಸ್ಗೆ ಇನ್ನಷ್ಟು ವಿಶಾಲವಾಗಿದೆ. ಕೇರಳದಲ್ಲಿ ಎಡ ಪಕ್ಷಗಳಿಗೆ ಆಗಿರುವ ಹಿನ್ನಡೆಯಲ್ಲಿ ಆ ಪಕ್ಷದ ನಾಯಕರ ಸ್ವಯಂಕೃತಾಪರಾಧವೇ ಹೆಚ್ಚು ಕೆಲಸ ಮಾಡಿದೆ.
ಅಸ್ಸಾಮಿನ ಮತದಾರರು ಬಿಜೆಪಿಯ ವಿಷ ರಾಜಕಾರಣವನ್ನು ಕಣ್ಣು ಮುಚ್ಚಿ ಕುಡಿದು ವಿಷ ಕಂಠರಾಗಿದ್ದಾರೆ. ಆಡಳಿತ ವಿರೋಧಿ ನೀತಿಗಳು ಚುನಾವಣೆಯಲ್ಲಿ ಪರಿಣಾಮ ಬೀರುವುದೇ ಆಗಿದ್ದರೆ ಅಸ್ಸಾಮಿನಲ್ಲಿ ಅದು ಪರಿಣಾಮ ಬೀರಬೇಕಾಗಿತ್ತು. ಅಲ್ಲಿನ ಮುಖ್ಯಮಂತ್ರಿಯೇ ಭಾರೀ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದ್ದರು. ತನ್ನ ದ್ವೇಷ ಭಾಷಣದ ಮೂಲಕವೇ ಅವರು ಅಸ್ಸಾಮನ್ನು ಮತ್ತೊಮ್ಮೆ ಗೆದ್ದಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿಯ ಎಲ್ಲ ಸಂಚುಗಳ ವಿರುದ್ಧ ಕಟ್ಟ ಕಡೆಯವರೆಗೂ ಏಕಾಂಗಿಯಾಗಿ ಹೋರಾಡುತ್ತಾ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಸೋತು ಗೆದ್ದಿದೆ. ಒಂದು ಪ್ರಾದೇಶಿಕ ಪಕ್ಷವನ್ನು ಸೋಲಿಸಲು ಪ್ರಧಾನಿ ಮೋದಿಯವರು ತನ್ನ ಬಳಿಯಿರುವ ಅಧಿಕಾರವನ್ನು ಪೂರ್ಣ ಪ್ರಮಾಣದಲ್ಲಿ ದುರುಪಯೋಗಪಡಿಸಿಕೊಂಡರು. ಸರಕಾರ ಆತುರಾತುರದಲ್ಲಿ ಎಸ್ಐಆರ್ನ್ನು ಜಾರಿಗೆ ತಂದದ್ದೇ ಪಶ್ಚಿಮ ಬಂಗಾಳವನ್ನು ಗುರಿಯಾಗಿಸುವುದಕ್ಕೆ. ಬಿಹಾರದಲ್ಲಿ ಅದರ ಮೊದಲ ಪ್ರಯೋಗವನ್ನು ನಡೆಸಲಾಯಿತು. ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಪ್ರಬಲ ಪ್ರತಿರೋಧದ ನಡುವೆಯೇ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕಿತ್ತು ಹಾಕಿ ತನ್ನ ಉದ್ದೇಶವನ್ನು ಪೂರ್ಣ ಪ್ರಮಾಣದಲ್ಲಿ ಸಾಧಿಸಿಕೊಂಡಿತು. ಅಲ್ಲಿಗೆ, ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ಮುನ್ನವೇ ಮೊದಲ ಹಂತದ ಗೆಲುವನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು. ಚುನಾವಣೆಯ ಹೊತ್ತಿಗೆ ಭದ್ರತಾ ಪಡೆಗಳ ಮೂಲಕ ಪಶ್ಚಿಮ ಬಂಗಾಳವನ್ನು ಅಕ್ಷರಶಃ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಚುನಾವಣಾ ಆಯೋಗದ ಜೊತೆಗೆ ತನಿಖಾ ಸಂಸ್ಥೆಗಳೂ ಮಮತಾ ಬ್ಯಾನರ್ಜಿಯನ್ನು ಬಗ್ಗು ಬಡಿಯಲು ಸಾಕಷ್ಟು ದುಡಿದಿದೆ. ಎಸ್ಐಆರ್ ಮತ್ತು ಈ.ಡಿ. ಎರಡರ ವಿರುದ್ಧ ಮಮತಾ ಬ್ಯಾನರ್ಜಿ ನ್ಯಾಯಾಲಯದ ಒಳಗೂ, ಹೊರಗೂ ಹೋರಾಡಿದರು. ತನ್ನ ವಾದವನ್ನು ತಾನೇ ಮಂಡಿಸಿ ಮಾಧ್ಯಮಗಳಲ್ಲಿ ಸುದ್ದಿಯಾದರು. ಎಸ್ಐಆರ್ ವಿರುದ್ಧ ಸತ್ಯಾಗ್ರಹವನ್ನು ನಡೆಸಿದರು. ಬಂಗಾಳದ ಅಸ್ಮಿತೆಯನ್ನು ಮುಂದಿಟ್ಟುಕೊಂಡು ಬಿಜೆಪಿಯ ದ್ವೇಷ ರಾಜಕಾರಣವನ್ನು ಅವರು ಪರಿಣಾಮಕಾರಿಯಾಗಿ ಎದುರಿಸಿದರು. ಮಮತಾ ಬ್ಯಾನರ್ಜಿಯನ್ನು ನೇರವಾಗಿ ಎದುರಿಸುವುದಕ್ಕೆ ಸಾಧ್ಯವಾಗದೇ ಇರುವ ಕಾರಣಕ್ಕೆ, ಮೋದಿ ನೇತೃತ್ವದ ಬಿಜೆಪಿ ಮೋಸದಿಂದ ಕೆಡವಿ ಹಾಕಿತು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಗೆಲುವು ಭವಿಷ್ಯದಲ್ಲಿ ಒಕ್ಕೂಟ ವ್ಯವಸ್ಥೆಗೆ ಇನ್ನಷ್ಟು ಅಪಾಯವನ್ನು ತಂದೊಡ್ಡಲಿದೆ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕೇಂದ್ರ ಸರಕಾರದ ಹುನ್ನಾರದ ವಿರುದ್ಧ ಪ್ರಬಲ ಪ್ರತಿರೋಧವನ್ನು ವ್ಯಕ್ತಪಡಿಸಿದವರಲ್ಲಿ ಮಮತಾ ಬ್ಯಾನರ್ಜಿ ಒಬ್ಬರು. ಕೇಂದ್ರದಿಂದ ರಾಜ್ಯಗಳಿಗೆ ಆಗುವ ಅನ್ಯಾಯವನ್ನು ದಿಟ್ಟವಾಗಿ ಎದುರಿಸುತ್ತಿದ್ದ ಸರಕಾರವೊಂದು ಇಲ್ಲವಾಗಿರುವುದು ದೊಡ್ಡ ನಷ್ಟವೇ ಸರಿ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರಕಾರ ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯಲಿದೆ. ಕೇಂದ್ರ ಸರಕಾರದ ಪಾಲಿಗೆ ಮಗ್ಗುಲ ಮುಳ್ಳೊಂದು ಸರಿದಿದೆ.
ತಮಿಳುನಾಡು ಹೊಸ ದಳಪತಿಯನ್ನು ಆರಿಸಿಕೊಂಡಿದೆ. ರಜನಿಕಾಂತ್, ಕಮಲ್ ಹಾಸನ್ಗೆ ಸಾಧ್ಯವಾಗದ್ದನ್ನು ನಟ ವಿಜಯ್ ಸಾಧಿಸಿದ್ದಾರೆ. ತನ್ನ ಅಭಿನಯದ ಮೂಲಕ ತಳಸ್ತರದ ಅಭಿಮಾನಿಗಳನ್ನು ದೊಡ್ಡ ಮಟ್ಟದಲ್ಲಿ ಹೊಂದಿದ್ದ ವಿಜಯ್, ರಾಜಕೀಯ ಏಣಿಯಾಗಿ ಅವರನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಎಂಜಿಆರ್, ಜಯಲಲಿತಾ ಬಳಿಕ ತಮಿಳು ರಾಜಕೀಯದಲ್ಲಿ ಮತ್ತೊಬ್ಬ ನಟ-ರಾಜಕಾರಣಿಯ ಉದಯವಾಗಿದೆ. ಅವರು ತಮಿಳರ ಪಾಲಿಗೆ ಇನ್ನೊಬ್ಬ ಎಂಜಿಆರ್ ಆಗಿ ಬೆಳೆಯಬಲ್ಲರೇ ಎನ್ನುವುದನ್ನು ಕಾದು ನೋಡಬೇಕಾಗಿದೆ. ಯಾಕೆಂದರೆ, ಎಂಜಿಆರ್ ಕಾಲದ ರಾಜಕೀಯ ವಾತಾವರಣ ಈಗ ಇಲ್ಲ. ಅವರನ್ನು ನುಂಗಿ ಹಾಕಬಲ್ಲ ಹೆಬ್ಬಾವುಗಳು ಕೇಂದ್ರದಲ್ಲಿ ಬೇರೆ ಬೇರೆ ರೂಪಗಳಲ್ಲಿ ಹೊಂಚು ಹಾಕಿ ಕಾಯುತ್ತಿವೆ. ತಮಿಳಗ ವೆಟ್ರಿ ಕಳಗಂ ಮೂಲಕ ವಿಜಯ್ ಅವರು ತಮಿಳು ಹಿತಾಸಕ್ತಿಯನ್ನು ಎಷ್ಟರಮಟ್ಟಿಗೆ ಕಾಯಬಲ್ಲರು? ಎನ್ನುವ ಪ್ರಶ್ನೆಗೂ ಉತ್ತರ ಇನ್ನಷ್ಟೇ ದೊರಕಬೇಕಾಗಿದೆ. ವಿಜಯ್ ಅವರನ್ನು ಏಕಾಏಕಿ ತಮ್ಮ ದಳಪತಿಯಾಗಿ ತಮಿಳರು ಆಯ್ಕೆ ಮಾಡಿರುವುದರ ಹಿಂದೆ ಕೆಲವು ಲೆಕ್ಕಾಚಾರಗಳಿವೆ. ತಮಿಳು ಮತದಾರರು ಹೆಚ್ಚು ಪ್ರಬುದ್ಧರು. ಡಿಎಂಕೆ ಮತ್ತು ಎಡಿಎಂಕೆ ನಡುವೆ ಸ್ಪರ್ಧೆಯಿದ್ದಾಗ ತಮಿಳರು ಒಮ್ಮೆ ಡಿಎಂಕೆಗೆ ಅವಕಾಶ ನೀಡಿದರೆ ಇನ್ನೊಮ್ಮೆ ಎಡಿಎಂಕೆಗೆ ಅವಕಾಶ ಕೊಡುತ್ತಿದ್ದರು. ಜಯಲಲಿತಾ ನಿಧನದ ಬಳಿಕ ಎಡಿಎಂಕೆ ಸಮರ್ಥ ನಾಯಕರ ಕೊರತೆಯಿಂದ ಅನಾಥವಾಯಿತು. ಈ ಸಂದರ್ಭವನ್ನು ಬಳಸಿಕೊಂಡು ಬಿಜೆಪಿ ಅದರ ಜೊತೆಗೆ ಮೈತ್ರಿ ಸಾಧಿಸಿತು. ಎಡಿಎಂಕೆ ಮೂಲಕ ತಮಿಳುನಾಡಿನಲ್ಲಿ ಬಾಲ ಬಿಚ್ಚುವ ಪ್ರಯತ್ನವನ್ನು ಬಿಜೆಪಿ ಕೆಲವು ವರ್ಷಗಳಿಂದ ಮಾಡುತ್ತಾ ಬಂದಿದೆ. ಇದನ್ನು ಮನಗಂಡ ತಮಿಳರು ಡಿಎಂಕೆಗೆ ಪರ್ಯಾಯವಾಗಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಗುರುತಿಸಿದ್ದಾರೆ. ಪಕ್ಷ ಕಟ್ಟಿದ ಎರಡೇ ವರ್ಷಗಳಲ್ಲಿ ತಮಿಳು ಅಸ್ಮಿತೆಗಳನ್ನು ಮುಂದಿಟ್ಟುಕೊಂಡು ತನ್ನ ಚುನಾವಣಾ ಪ್ರಚಾರಗಳನ್ನು ನಡೆಸಿದರು. ಅಂದರೆ ಅವರು ಡಿಎಂಕೆ ಮತಗಳ ಮೇಲೆ ನೇರವಾಗಿ ಕಣ್ಣಿಟ್ಟಿದ್ದರು. ಇದರ ಜೊತೆಜೊತೆಗೇ ಜನಪ್ರಿಯ ಭರವಸೆಗಳನ್ನು, ಕೊಡುಗೆಗಳನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಸಿನೆಮಾದ ಮೆಲೋಡ್ರಾಮಗಳನ್ನು ರಾಜಕೀಯ ವೇದಿಕೆಗಳಲ್ಲಿ ಮರು ಸೃಷ್ಟಿಸಿದರು. ಯುವ ಜನರನ್ನು ಸೆಳೆಯುವ ಗರಿಷ್ಠ ಪ್ರಯತ್ನವನ್ನು ಮಾಡಿದರು. ಈ ಬಾರಿ ಅವರು ಕಿಂಗ್ಮೇಕರ್ ಆಗುತ್ತಾರೆ ಎಂದು ರಾಜಕೀಯ ಪಂಡಿತರು ನಿರೀಕ್ಷಿಸಿದ್ದರು. ಆದರೆ ಅವರೇ ಕಿಂಗ್ ಆಗಿ ಹೊರಹೊಮ್ಮಿದ್ದಾರೆ.
ಇಷ್ಟಾದರೂ ಅವರ ಪಕ್ಷಕ್ಕೆ ಬಹುಮತವಿಲ್ಲ. ಈ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಬೆಂಬಲವನ್ನು ಅವರಿಗೆ ಪ್ರಕಟ ಪಡಿಸುವುದು ಅನಿವಾರ್ಯವಾಗಿದೆ. ಇಲ್ಲದೇ ಇದ್ದರೆ ಟಿವಿಕೆಯನ್ನು ಬಿಜೆಪಿ ತೆಕ್ಕೆಗೆ ತಳ್ಳಿದಂತಾಗಬಹುದು. ಚುನಾವಣೆಯ ಉದ್ದಕ್ಕೂ ಟಿವಿಕೆ ಕುರಿತಂತೆ ಕಾಂಗ್ರೆಸ್ನ ರಾಷ್ಟ್ರಮಟ್ಟದ ನಾಯಕರು ಮೃದು ನಿಲುವು ತಳೆಯುತ್ತಾ ಬಂದಿದ್ದರು. ಕಾಂಗ್ರೆಸ್ ಜೊತೆಗೆ ಇತರ ಸಣ್ಣ ಪುಟ್ಟ ಪಕ್ಷಗಳು ಟಿವಿಕೆಗೆ ಬೆಂಬಲ ನೀಡಿದರೆ ವಿಜಯ್ ಮುಖ್ಯಮಂತ್ರಿಯಾಗುವುದು ಕಷ್ಟವೇನಿಲ್ಲ. ಆದರೆ ಇದೇ ಸಂದರ್ಭದಲ್ಲಿ, ಕೇಂದ್ರದಲ್ಲಿ ಕುಳಿತು ಬಿಜೆಪಿ ವರಿಷ್ಠರು ತಮಿಳುನಾಡಿನ ಬೆಳವಣಿಗೆಗಳ ಬಗ್ಗೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಸರಿಯಾದ ಸಂದರ್ಭದಲ್ಲಿ ಟಿವಿಕೆಯನ್ನು ಬಳಸಿಕೊಂಡು ತಮಿಳುನಾಡನ್ನು ಆಪೋಶನ ತೆಗೆದುಕೊಳ್ಳಲು ಬಿಜೆಪಿ ಕಾಯುತ್ತಿದೆ. ನಾಳೆ ತನ್ನ ಈ.ಡಿ., ಸಿಬಿಐಗಳನ್ನು ಛೂಬಿಟ್ಟು ಒತ್ತಡಗಳನ್ನು ಹೇರತೊಡಗಿದರೆ ವಿಜಯ್ ತಮಿಳರ ಹಿತಾಸಕ್ತಿಯ ಜೊತೆಗೆ ಕೊನೆಯವರೆಗೂ ನಿಲ್ಲಬಲ್ಲರೆ? ಎನ್ನುವ ಪ್ರಶ್ನೆಗೂ ಉತ್ತರ ಸಿಗಬೇಕಾಗಿದೆ. ಸೈದ್ಧಾಂತಿಕವಾಗಿ ವಿಜಯ್ ಎಷ್ಟು ಗಟ್ಟಿಯಾಗಿದ್ದಾರೆ ಎನ್ನುವುದರ ಆಧಾರದಲ್ಲಿ ಟಿವಿಕೆ ಮಾತ್ರವಲ್ಲ ತಮಿಳು ನಾಡಿನ ಭವಿಷ್ಯ ನಿಂತಿದೆ. ಜೊತೆಗೆ ದಕ್ಷಿಣ ಭಾರತದ ಭವಿಷ್ಯವೂ ಕೂಡ.






