ಹಿಂದೂ ಧಾರ್ಮಿಕ ದತ್ತಿ ಮಂಡಳಿಗಳ ಜೊತೆ ವಕ್ಫ್ ಬೋರ್ಡ್ ಹೋಲಿಕೆ ಸಲ್ಲದು: ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರದ ವಾದ

ಸುಪ್ರೀಂ ಕೋರ್ಟ್ PC: PTI
ಹೊಸದಿಲ್ಲಿ: ವಕ್ಫ್ ಮಂಡಳಿಯ ಸಂಯೋಜನೆಯನ್ನು ಹಿಂದೂ, ಸಿಕ್ಖ್ ಹಾಗೂ ಕ್ರಿಶ್ಚಿಯನ್ ಧಾರ್ಮಿಕ ದತ್ತಿ ಮಂಡಳಿಗಳ ಸಂಯೋಜನೆ ಜೊತೆ ಹೋಲಿಕೆ ಮಾಡುವ ಮೂಲಕ ಮುಸ್ಲಿಮರ ವಿರುದ್ಧ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದೆ.
ಸೈದ್ಧಾಂತಿಕವಾಗಿ ಮುಸ್ಲಿಮೇತರರು ಕೇಂದ್ರೀಯ ವಕ್ಫ್ ಬೋರ್ಡ್ ಮತ್ತು ಔಕಾಫ್ ಬೋರ್ಡ್ ಗಳಲ್ಲಿ ಬಹುಮತ ಸಾಧಿಸುತ್ತಾರೆ ಎಂಬ ಮುಸ್ಲಿಂ ಸಂಘಟನೆಗಳ ವಾದವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅಲ್ಲಗಳೆದರು. ಈ ಸಂಬಂಧ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಜಂಟಿ ಸಂಸದೀಯ ಸಮಿತಿಗೆ ಭರವಸೆ ನೀಡಿದ ಪತ್ರದ ಪ್ರತಿ ಹಾಗೂ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರತಿಯನ್ನೂ ಮೆಹ್ತಾ ಪ್ರಸ್ತುತಪಡಿಸಿದರು.
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ.ಮಸಿಹ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ಅವರು, ಮಂಡಳಿ ಹಾಗೂ ಬೋರ್ಡ್ ಗಳು ಎಂದಿಗೂ ತಮ್ಮ ಅಲ್ಪಸಂಖ್ಯಾತ ಸ್ವರೂಪವನ್ನು ಕಳೆದುಕೊಳ್ಳುವುದಿಲ್ಲ; ಮುಸ್ಲಿಮರ ಬಹುಮತ ಸದಾ ಇರುತ್ತದೆ ಎಂದು ಭರವಸೆ ನೀಡಿದರು.
ವಕ್ಫ್ ತಿದ್ದುಪಡಿ ಕಾಯ್ದೆ-2025ರ ಜಾರಿಯಿಂದ ಮಂಡಳಿ ಹಾಗೂ ನಿಗಮಗಳು ತಮ್ಮ ಅಲ್ಪಸಂಖ್ಯಾತ ಸ್ವರೂಪವನ್ನು ಕಳೆದುಕೊಳ್ಳಲಿವೆ ಎಂಬ ಅನುಮಾನ ಮುಸ್ಲಿಂ ಸಮುದಾಯದಲ್ಲಿ ಬಲವಾಗಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಮಂಗಳವಾರ ವಾದ ಮಂಡಿಸಿದ್ದರು. ಈ ಎರಡು ಸಂಸ್ಥೆಗಳಲ್ಲಿ ಮುಸ್ಲಿಮೇತರರ ಬಹುಮತ ಇರಲಿದೆ ಎಂದು ಹೇಳಿದ್ದರು. ಜತೆಗೆ ಹಿಂದುತ್ವ, ಸಿಕ್ಖ್ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ನಂಬಿಕೆ ಇಲ್ಲದವರನ್ನು ಧಾರ್ಮಿಕ ದತ್ತಿ ಮಂಡಳಿಗಳಿಗೆ ನೇಮಕ ಮಾಡುವ ಪ್ರಯತ್ನ ಮಾಡದ ಸರ್ಕಾರ ಮುಸ್ಲಿಮರ ವಕ್ಫ್ ಮಂಡಳಿಯನ್ನು ಏಕೆ ಪ್ರತ್ಯೇಕವಾಗಿ ನೋಡುತ್ತದೆ ಎಂಧು ಪ್ರಶ್ನಿಸಿದ್ದರು. ಇದು ಸಂವಿಧಾನದ 15ನೇ ವಿಧಿಯ ಅನ್ವಯ ನೀಡಲಾದ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ವಾದಿಸಿದ್ದರು.
ಹಿಂದೂ ಧಾರ್ಮಿಕ ದತ್ತಿ ಮಂಡಳಿ ಸದಸ್ಯರು ದೇವಸ್ಥಾನಗಳಿಗೆ ಹೋಗುತ್ತಾರೆ ಮತ್ತು ಪೂಜಾಕ್ರಮಗಳ ಮೇಲ್ವಿಚಾರಣೆ ನಡೆಸುತ್ತಾರೆ ಎಂದು ಮೆಹ್ತಾ ಸ್ಪಷ್ಟಪಡಿಸಿದರು.







