ಸುಂಕದವರ ಬಳಿ ಸುಖ-ದುಃಖ ಹೇಳಿಕೊಂಡು ಪ್ರಯೋಜನ ಏನು?

ಸಾಂದರ್ಭಿಕ ಚಿತ್ರ
ಉದಾರೀಕರಣ ನೀತಿಯ ಭಾಗವಾಗಿ, 1995ರಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956ನ್ನು ತಿದ್ದುಪಡಿ ಮಾಡಿ, ಹೆದ್ದಾರಿಗಳ ಖಾಸಗೀಕರಣಕ್ಕೆ ಹಾದಿ ತೆರೆದ ಬಳಿಕ, ಈಗ ದೇಶದಾದ್ಯಂತ ಬಹುತೇಕ ಹೆದ್ದಾರಿಗಳು ಸುಂಕ ತೆತ್ತು ತೆರಳಬೇಕಾದ ‘ಟೋಲ್ ದಾರಿ’ಗಳಾಗಿ ಮಾರ್ಪಟ್ಟಿವೆ. 2016ರಲ್ಲಿ ಫಾಸ್ಟ್ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದು, ಅದನ್ನು ಕೋವಿಡ್ ಗದ್ದಲದ ನಡುವೆ 2021ರಲ್ಲಿ ಕಡ್ಡಾಯಗೊಳಿಸಿದ ಬಳಿಕ, ಇಲ್ಲಿಯ ತನಕ ಸಾರ್ವಜನಿಕರು ಈ ‘ಸುಂಕ ಹೇರಿಕೆ’ಯನ್ನು ವಿರೋಧಿಸಲಿಲ್ಲ ಎಂಬ ವಾಸ್ತವ ಹಾಲಿ ಸರಕಾರಕ್ಕೆ ಚೆನ್ನಾಗಿ ಅರ್ಥವಾಗಿದೆ. ಹಾಗಾಗಿ, ಹೆದ್ದಾರಿಗಳ ಬಳಕೆಗೆ ಸಾರ್ವಜನಿಕರು ಸುಂಕ ತೆರುವುದು ಮತ್ತು ಈ ಸುಂಕದ ಲಾಭ ಹೆಚ್ಚಳಕ್ಕೆ ಹೊಸಹೊಸ ಹಾದಿಗಳನ್ನು ಹುಡುಕಿಕೊಳ್ಳುವುದು ಅನೂಚಾನವಾಗಿ ನಡೆಯುತ್ತಿದೆ. ಸಾರ್ವಜನಿಕರನ್ನು ಸಮಾಧಾನಿಸುವ ಮಾರ್ಕೆಟಿಂಗ್ ಕೌಶಲವೊಂದಿದ್ದರೆ ಯಾವುದಕ್ಕೆ ಎಷ್ಟು ಬೇಕಿದ್ದರೂ ಸುಂಕ ವಿಧಿಸಬಹುದೆಂಬುದು ಸರಕಾರಗಳಿಗೆ ಮನದಟ್ಟಾಗಿದೆ.
ಈ ಮನಸ್ಥಿತಿಗೆ ಹೊಸ ಪುರಾವೆಯೊಂದು ಈಗ ನಮ್ಮ ಮುಂದಿದೆ. ಮುಂಬೈಯಲ್ಲಿ ಇತ್ತೀಚೆಗೆ ಗ್ಲೋಬಲ್ ಫಿನ್ಟೆಕ್ ಫೆಸ್ಟ್ನಲ್ಲಿ ಮಾತನಾಡುತ್ತಿದ್ದ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು, 2027ರ ಫೆಬ್ರವರಿ-ಮಾರ್ಚ್ ಅಂತ್ಯಕ್ಕೆ, ದೇಶದಾದ್ಯಂತ ‘ಡಿಜಿಟಲ್ ಸುಂಕ ಸಂಗ್ರಹಕ್ಕೆ’ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಿಸಿದ್ದಾರೆ. ಬಹುಲೇನ್ಗಳ ಮುಕ್ತ ಸಂಚಾರ (MMLF) ಸೂತ್ರ ಅಳವಡಿಸಿ, ವಾಹನಗಳು ಟೋಲ್ ಬೂತ್ ಮೂಲಕ ಸಾಗುವಾಗ, ಅವುಗಳಿಗೆ ತಡೆ ಒಡ್ಡದೆ, ವಿಳಂಬ ಇಲ್ಲದೆ ಟೋಲ್ ಕಡಿತ ಮಾಡಿಕೊಳ್ಳಲಾಗುತ್ತದೆ. ಇದರಿಂದಾಗಿ ಪ್ರತೀ ವರ್ಷ 5,260 ಕೋಟಿ ರೂ. ಇಂಧನ ಉಳಿತಾಯ ಆಗಲಿದೆ, ಉಳಿತಾಯವಾಗಲಿರುವ ಜನರ ಕಾಯುವ ಸಮಯಕ್ಕೆ ಬೆಲೆ ಕಟ್ಟಿದರೆ 68,500 ಕೋಟಿ ರೂ. (71 ಕೋಟಿ ಗಂಟೆ ಕಾಯುವ ಸಮಯ) ಉಳಿತಾಯ ಆಗಲಿದೆ; ಮಾತ್ರವಲ್ಲದೆ ಒಟ್ಟು ಟೋಲ್ ಆದಾಯದಲ್ಲಿ 10,000 ಕೋಟಿ ರೂ.ಗಳ ಹೆಚ್ಚಳ ಆಗಲಿದೆ ಎಂದು ಲಾಭ-ನಷ್ಟಗಳ ತಖ್ತೆ ಬಿಡಿಸಿಟ್ಟಿದ್ದಾರೆ.
ಟೋಲ್ ಬೂತ್ಗಳ ಶೈಶವದಲ್ಲಿ, ಪ್ರತೀ ವಾಹನಕ್ಕೆ ಸುಂಕ ಕಟ್ಟಿ ಮುಂದುವರಿಯಲು ಕಾಯುವ ಅವಧಿ 12-30 ನಿಮಿಷಗಳಷ್ಟಿದ್ದವು. ಅದೀಗ ಸುಮಾರು ಶೇ. 80-90 ಸುಧಾರಣೆ ಕಂಡಿದ್ದು, ಹೊಸ ಯೋಜನೆಯಲ್ಲಿ ವಾಹನಗಳು ತಮ್ಮ ಸಹಜ ವೇಗದಲ್ಲಿ ಸಾಗುತ್ತಿರುವಂತೆಯೇ, ಮೇಲುಭಾಗದಲ್ಲಿರುವ ಗ್ಯಾಂಟ್ರಿ ಕ್ಯಾಮರಾಗಳು ಸದ್ರಿ ವಾಹನವನ್ನು ಗುರುತಿಸಿ, ಅದರ ಫಾಸ್ಟ್ಟ್ಯಾಗ್ ಖಾತೆಯಿಂದ ಹಣ ವರ್ಗಾಯಿಸಿಕೊಳ್ಳುವ ಕೆಲಸ ಮಾಡಲಿವೆ. ಇದ ರಿಂದಾಗಿ ವಾಹನಗಳಿಗೆ ಕಾಯುವಿಕೆ ಅವಧಿ ಇಲ್ಲವೇ ಇಲ್ಲ ಎಂಬಷ್ಟು ತಗ್ಗಲಿದೆ. ಸರಕಾರ ಈಗಾಗಲೇ ಜಾರಿಗೆ ತಂದಿರುವ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ಗಳು (HSRP) ಹಾಗೂ ಅವುಗಳನ್ನು ಓದಿ ವಾಹನವನ್ನು ಗುರುತಿಸುವ ಆಟೊಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ತಂತ್ರಜ್ಞಾನಗಳ ಸಹಕಾರದಿಂದ ಇದು ಸಾಧ್ಯವಾಗಲಿದೆ. ಯುಪಿಐ ಹಣ ಪಾವತಿ ವ್ಯವಸ್ಥೆ, ಫಾಸ್ಟ್ಟ್ಯಾಗ್ ವ್ಯವಸ್ಥೆ ಮತ್ತು ಆಧಾರ್ ನಂಬರಿಗೆ ಲಿಂಕ್ ಮಾಡಲಾದ ಮೊಬಿಲಿಟಿ ಡೇಟಾಗಳನ್ನು ಒಟ್ಟು ಸೇರಿಸಿ ಈ ತಂತ್ರಜ್ಞಾನ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಈಗ ಟೋಲ್ ಬೂತ್ಗಳ ನಿರ್ವಹಣೆಗೆ ಶೇ. 12-15 ವೆಚ್ಚ ಬರುತ್ತಿದ್ದು, ಈ ಹೊಸ ವ್ಯವಸ್ಥೆಯಿಂದ ಅದು ಶೇ. 2-4ಕ್ಕೆ ಇಳಿಯಲಿದೆ ಎಂಬುದು ಸರಕಾರದ ಊಹೆ. ತಮಾಷೆ ಎಂದರೆ, ಸರಕಾರಕ್ಕೆ ತನಗೆ ಬರಬೇಕಾದ ಆದಾಯ ಎಲ್ಲಿ ಸೋರಿಹೋಗುತ್ತಿದೆ, ಅದಕ್ಕೆ ಹೇಗೆ ಬಿರಡೆ ಹಾಕಿಕೊಳ್ಳಬೇಕೆಂಬುದು ಚೆನ್ನಾಗಿ ಗೊತ್ತಿದೆ. ಆದರೆ ಪ್ರತೀ ವಾಹನಕ್ಕೂ ವಾಹನ ತೆರಿಗೆ, ರಸ್ತೆ ತೆರಿಗೆ, ಅವುಗಳ ಸೆಸ್ ಇತ್ಯಾದಿಗಳನ್ನೆಲ್ಲ ತೆರುವ ಜನಸಾಮಾನ್ಯರಿಗೆ ಈಗ ಟೋಲ್ ಎಂಬುದು ‘ಮೇಲುಸುಂಕದ ಹೊರೆ’ ಎಂಬ ಸರಳ ಸತ್ಯ ಅರ್ಥ ಆಗುತ್ತಿಲ್ಲ. ವ್ಯವಸ್ಥೆಯ ಕಾರ್ಯಕ್ಷಮತೆ ಹೆಚ್ಚಿಸುವುದರಿಂದ ಸಿಗಬಹುದಾದ ಲಾಭವನ್ನು ಸಾರ್ವಜನಿಕರಿಗೆ ವರ್ಗಾಯಿಸುವ ಯಾವ ಇರಾದೆಯೂ ಸರಕಾರಕ್ಕೆ ಇದ್ದಂತಿಲ್ಲ. ಲಾಭಬಡುಕತನದ ಬೆನ್ನುಬಿದ್ದಿರುವ ಸರಕಾರ ಈಗಂತೂ ಬಿಲ್ಡ್-ಆಪರೇಟ್-ಟ್ರಾನ್ಸ್ಫರ್ (BOT) ತತ್ವದಡಿ ಆರಂಭಗೊಂಡಿದ್ದ ಟೋಲ್ ದರದಲ್ಲಿ ಕಿಂಚಿತ್ತೂ ಇಳಿಕೆ ಮಾಡದೆ, ಆಪರೇಟ್-ಮೇಂಟೇನ್-ಟ್ರಾನ್ಸ್ಫರ್ (OMT) ತತ್ವದಡಿ ಕೂಡ ಅದೇ ಮೊತ್ತವನ್ನು ಸಂಗ್ರಹಿಸುತ್ತಿದೆ. ರಸ್ತೆ ನಿರ್ಮಾಣಕ್ಕೂ ರಸ್ತೆ ನಿರ್ವಹಣೆಗೂ ಬೀಳುವ ವೆಚ್ಚ ಒಂದೇ ರೀತಿಯದೆ? ಎಂಬ ಮೂಲಭೂತ ಪ್ರಶ್ನೆಯನ್ನೂ ಕೇಳುವ ಅವಕಾಶ ನಾಗರಿಕರಿಗೆ ಇಲ್ಲ. ‘ವ್ಯಾಪಾರ ತನ್ನ ಕೆಲಸ ಅಲ್ಲ’ ಎಂದು ಹೇಳುತ್ತಲೇ, ರಸ್ತೆಯನ್ನೂ ಸೇವಾ ಸರಕು ಮಾಡಿ, ಆ ಸೇವೆಗೆ ಸುಂಕ ವಸೂಲಿ ವ್ಯಾಪಾರ ಮಾಡುತ್ತಿರುವ ಸರಕಾರಕ್ಕೆ ನಾಗರಿಕ ಬದುಕು ದಿನೇದಿನೇ ದುಸ್ತರಗೊಳ್ಳುತ್ತಿರುವ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ.
ಈಗ ಈ ಹೊಸ ತಂತ್ರಜ್ಞಾನ ಇನ್ನು ಕೆಲವೇ ವರ್ಷಗಳಲ್ಲಿ ಬರಲಿರುವ ಸ್ಯಾಟಲೈಟ್ ಆಧರಿತ ಸುಂಕ ವಸೂಲಿ ತಂತ್ರಜ್ಞಾನಕ್ಕೆ ಪೀಠಿಕೆಯಂತಿದೆ. ಸ್ಯಾಟಲೈಟ್ ಆಧರಿತ ಹೆದ್ದಾರಿ ಸುಂಕ ಎಂದರೆ, ಒಂದು ವಾಹನ ರಸ್ತೆಗೆ ಇಳಿದ ತಕ್ಷಣ ಆಕಾಶದಿಂದಲೇ ಅದನ್ನು ಗುರುತಿಸಿ, ಚಲಿಸಿದಷ್ಟು ದೂರಕ್ಕೆ ಸಮನಾದ ಸುಂಕ ವಸೂಲಿ ಮಾಡುವ ತಂತ್ರಜ್ಞಾನ.
ಹೆದ್ದಾರಿ ನಿರ್ಮಾಣಕ್ಕೆ ಮುನ್ನ ಸ್ಥಳೀಯ ಚಲನವಲನಗಳಿಗೆ ಅಗತ್ಯವಿರುವ ಸರ್ವೀಸ್ ರೋಡುಗಳ ನಿರ್ಮಾಣವನ್ನು ಉದ್ದೇಶಪೂರ್ವಕವಾಗಿಯೇ ಮಾಡದಿರುವ/ವಿಳಂಬಿಸುವ ಕಟುಕತನ ತೋರುವ ಆಡಳಿತದಿಂದ ಇನ್ನೇನು ನಿರೀಕ್ಷೆ ಸಾಧ್ಯ?






