ಬಿಜೆಪಿ ಪೋಸ್ಟ್ ನಲ್ಲಿ ಹತ್ಯಾಕಾಂಡದ 'ಹೂಕೋಸು' ಯಾಕೆ?
'LOL ಸಲಾಂ, ಕಾಮ್ರೇಡ್' ಎಂದ ಕರ್ನಾಟಕ ಬಿಜೆಪಿ

The post by X/@BJP4Karnataka showing Amit Shah holding a cauliflower.
ಹೊಸದಿಲ್ಲಿ: ಕರ್ನಾಟಕ ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟವಾದ ಒಂದು ಚಿತ್ರ ತೀವ್ರ ವಿವಾದಕ್ಕೆ ಮತ್ತು ಆತಂಕಕ್ಕೆ ಕಾರಣವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 'RIP ನಕ್ಸಲಿಸಂ' ಎಂದು ಬರೆದಿರುವ ಸಮಾಧಿಯ ಮೇಲೆ ಹೂಕೋಸನ್ನು ಹಿಡಿದಿರುವಂತೆ ಆ ಜಿಬಿಲಿ ಚಿತ್ರದಲ್ಲಿ ತೋರಿಸಲಾಗಿದೆ. 'LOL ಸಲಾಂ, ಕಾಮ್ರೇಡ್' ಎಂಬ ವ್ಯಂಗ್ಯ ಶೀರ್ಷಿಕೆಯೊಂದಿಗೆ ಪ್ರಕಟವಾದ ಈ ಪೋಸ್ಟ್, ತೆಲಂಗಾಣ ಮತ್ತು ಛತ್ತೀಸ್ ಗಢದಲ್ಲಿ ನಡೆದ 'ಆಪರೇಷನ್ ಕಗಾರ್' ಕಾರ್ಯಾಚರಣೆಯನ್ನು ಖಂಡಿಸಿದ್ದ ಸಿಪಿಐ(ಎಂಎಲ್) ಪಕ್ಷದ ಹೇಳಿಕೆಗೆ ಪ್ರತಿಕ್ರಿಯೆಯಾಗಿತ್ತು. ಈ ಕಾರ್ಯಾಚರಣೆಯಲ್ಲಿ 27 'ಮಾವೋವಾದಿಗಳು' ಹತರಾಗಿದ್ದರು.
ಸರ್ಕಾರದ ಕಾರ್ಯಾಚರಣೆಯ ಸಂಭ್ರಮಾಚರಣೆ ಒಂದು ವಿಷಯವಾದರೆ, ಆ ಚಿತ್ರದಲ್ಲಿ ಹೂಕೋಸಿನ ಬಳಕೆಯು ಆನ್ ಲೈನ್ ನಲ್ಲಿ ವ್ಯಾಪಕ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಯಿತು. ಏಕೆಂದರೆ, ದೇಶದ ಖಟ್ಟರ್ ಬಲಪಂಥೀಯರ ಸೋಷಿಯಲ್ ಮೀಡಿಯಾ ವರ್ತುಲದಲ್ಲಿ ಹೂಕೋಸು ಕೇವಲ ಒಂದು ತರಕಾರಿಯಾಗಿ ಮಾತ್ರ ಉಲ್ಲೆಖಿಸಲ್ಪಡುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ, ಇದು ಮುಸ್ಲಿಂ ಸಮುದಾಯದ ವಿರುದ್ಧದ ದ್ವೇಷ ಮತ್ತು ಹಿಂಸಾಚಾರದ, ನಿರ್ದಿಷ್ಟವಾಗಿ ಹೇಳಬೇಕೆಂದರೆ, ಒಂದು ಭೀಕರ ಹತ್ಯಾಕಾಂಡದ ಸಂಕೇತವಾಗಿ ಬಳಕೆಯಾಗುತ್ತಿದೆ.
ಹೂಕೋಸನ್ನು ಸಂಕೇತವಾಗಿ ಬಳಕೆಯ ಮೂಲ 1989ರ ಭಯಾನಕ ಭಾಗಲ್ಪುರ ಮುಸ್ಲಿಂ ವಿರೋಧಿ ಹತ್ಯಾಕಾಂಡದಲ್ಲಿವೆ. ಭಾರತದ ಇತಿಹಾಸದಲ್ಲಿ ನಡೆದ ಅತ್ಯಂತ ಭೀಕರ ಕೋಮುಗಲಭೆಗಳಲ್ಲಿ ಒಂದಾದ ಬಿಹಾರದ ಭಾಗಲ್ಪುರ ಹತ್ಯಾಕಾಂಡದಲ್ಲಿ, ಅಧಿಕೃತ ಅಂಕಿಅಂಶಗಳ ಪ್ರಕಾರವೇ 900ಕ್ಕೂ ಹೆಚ್ಚು ಮುಸ್ಲಿಮರು ಕೊಲ್ಲಲ್ಪಟ್ಟರು. ಈ ದಂಗೆಯ ಅತ್ಯಂತ ಕ್ರೂರ ಘಟನೆಗಳಲ್ಲಿ ಲೊಗೈನ್ ಗ್ರಾಮದಲ್ಲಿ ನಡೆದ ಹತ್ಯಾಕಾಂಡವೂ ಒಂದು. ಇಲ್ಲಿ, ಸುಮಾರು 110 ಮುಸ್ಲಿಮರನ್ನು ಬರ್ಬರವಾಗಿ ಕೊಂದು, ಸಾಮೂಹಿಕವಾಗಿ ಹೂಳಲಾಯಿತು. ಈ ಅಪರಾಧವನ್ನು ಮುಚ್ಚಿಹಾಕಲು, ಆ ಸಮಾಧಿಗಳ ಮೇಲೆ ಹೂಕೋಸು ಸಸಿಗಳನ್ನು ನೆಡಲಾಯಿತು. ಈ ಘಟನೆಯು ಮಾನವೀಯತೆಯನ್ನೇ ನಾಚಿಸುವ ಘೋರ ಕ್ರೌರ್ಯದ ಪ್ರತೀಕವಾಗಿ ಗುರುತಿಸಲ್ಪಟ್ಟಿತು.
ಭಾಗಲ್ಪುರದ ಲೊಗೈನ್ ನಲ್ಲಿ ನಡೆದ ಆ ಹತ್ಯಾಕಾಂಡದ ಹಿನ್ನೆಲೆಯಲ್ಲಿ, ಹೂಕೋಸು ಭಾರತದ ಖಟ್ಟರ್ ಬಲಪಂಥೀಯ ವಲಯಗಳಲ್ಲಿ, ಒಂದು ಸಮುದಾಯದ ವಿರುದ್ಧ ದ್ವೇಷ, ಹಿಂಸೆಯನ್ನು ಪ್ರೇರೇಪಿಸುವ ಮತ್ತು ಅವರ ಹತ್ಯೆಯನ್ನು ಮರೆಮಾಚುವ, ಅಷ್ಟೇ ಅಲ್ಲ, ಅದನ್ನು ಸಂಭ್ರಮಿಸುವ ಒಂದು ಅಮಾನವೀಯ ಸಂಕೇತವಾಗಿ ಮಾರ್ಪಟ್ಟಿದೆ.
ಇತ್ತೀಚಿನ ವರ್ಷಗಳಲ್ಲಿ, ಅಂತರ್ಜಾಲದಲ್ಲಿ ಅತ್ಯಂತ ಸಕ್ರಿಯವಾಗಿರುವ ಈ ತೀವ್ರ ಬಲಪಂಥೀಯ ಗುಂಪುಗಳು ಈ ಹೂಕೋಸಿನ ಸಂಕೇತವನ್ನು ಮತ್ತೆ ಬಳಕೆಗೆ ತಂದಿವೆ.
ಈ ಗುಂಪುಗಳು ಹಿಂದುತ್ವದ ಅತ್ಯಂತ ತೀವ್ರವಾದಿ ಮುಖವನ್ನು ಪ್ರತಿನಿಧಿಸುತ್ತವೆ. ಈ ಗುಂಪುಗಳು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮುಖ್ಯವಾಹಿನಿಯ ಬಲಪಂಥೀಯರನ್ನು ಕೂಡ 'ದುರ್ಬಲರು' ಎಂದು ಪರಿಗಣಿಸುತ್ತವೆ. ಮುಸ್ಲಿಮರ ಮತ್ತು ದಲಿತರ ವಿಷಯದಲ್ಲಿ ಹೆಚ್ಚು ಕಠಿಣವಾಗಿ ವರ್ತಿಸಬೇಕು ಎಂಬುದು ಈ ತೀವ್ರವಾದಿ ಗುಂಪಿನ ಬಲವಾದ ವಾದ.
ಈ ಗುಂಪುಗಳು ಅಂತರ್ಜಾಲದಲ್ಲಿ ದ್ವೇಷವನ್ನು ಹರಡಲು ಮತ್ತು ಅಲ್ಪಸಂಖ್ಯಾತರನ್ನು ಬೆದರಿಸಲು ಇಂತಹ ಸಂಕೇತಗಳನ್ನು ಆಗಾಗ ಬಳಸುತ್ತವೆ. ಹೂಕೋಸಿನ ಚಿತ್ರಗಳನ್ನು ಬಳಸುವುದು, ತಮ್ಮ ಸಾಮಾಜಿಕ ಮಾಧ್ಯಮ ಬಯೋಗಳಲ್ಲಿ 'ಹೂಕೋಸು ಕೃಷಿಕರು' ಎಂದು ಬರೆದುಕೊಳ್ಳುವುದು, ಹಿಜಾಬ್ ಧರಿಸಿದ ಮಹಿಳೆಯರನ್ನು ಹೂಕೋಸುಗಳಂತೆ ಚಿತ್ರಿಸುವುದು - ಇವೆಲ್ಲವೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಇತ್ತೀಚಿಗೆ ಮಾಡುತ್ತಾ ಬಂದಿರುವ ದ್ವೇಷ ಪ್ರಚಾರದ ಭಾಗವಾಗಿದೆ.
pc : thewire.in
ಇದು ಆನ್ಲೈನ್ನಲ್ಲಿ ದ್ವೇಷ ಭಾಷಣ ಕಾನೂನುಗಳಿಂದ ತಪ್ಪಿಸಿಕೊಳ್ಳುವ ಒಂದು ಕುತಂತ್ರವೂ ಹೌದು. ಈ ಸಂಕೇತಗಳ ಮೂಲಕ, ಅವರು ಹಿಂಸೆಗೆ ಪರೋಕ್ಷವಾಗಿ ಪ್ರಚೋದನೆ ನೀಡುತ್ತಾರೆ ಮತ್ತು ಈ ಹಿಂದಿನ ಹತ್ಯಾಕಾಂಡಗಳನ್ನು 'ಹಾಸ್ಯ'ದ ಹೆಸರಿನಲ್ಲಿ ವೈಭವೀಕರಿಸುತ್ತಾರೆ.
ಇತ್ತೀಚಿಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಕೋಮು ಗಲಭೆಯಾದಾಗಲೂ ಬಿಜೆಪಿ ಬೆಂಬಲಿಗ ರಾಜಕೀಯ ವಿಶ್ಲೇಷಕರೂ ಈ ಹೂಕೋಸನ್ನು ತಮ್ಮ ಪೋಸ್ಟ್ ಗಳಲ್ಲಿ ವ್ಯಾಪಕವಾಗಿ ಬಳಸಿದ್ದರು.
ಇಲ್ಲಿಯವರೆಗೆ, ಇಂತಹ ತೀವ್ರಗಾಮಿ ಸಂಕೇತಗಳಿಂದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ದೂರವಿದ್ದವು. ಬಿಜೆಪಿಯೂ ನೇರವಾಗಿ ಎಲ್ಲೂ ಈ ರೀತಿಯ ಸಂದೇಶವನ್ನು ಪೋಸ್ಟ್ ಮಾಡುತ್ತಿರಲಿಲ್ಲ. ಆದರೆ, ಕರ್ನಾಟಕ ಬಿಜೆಪಿಯ ಅಧಿಕೃತ ಖಾತೆಯಿಂದಲೇ ಇಂತಹ ಸಂಕೇತವಿರುವ ಚಿತ್ರವನ್ನು ಬಳಸಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಇದು ತೀವ್ರಗಾಮಿ ಗುಂಪುಗಳ ಭಾಷೆ ಮತ್ತು ಸಂಕೇತಗಳು ಮುಖ್ಯವಾಹಿನಿಯ ರಾಜಕೀಯದಲ್ಲಿ ಸ್ವೀಕಾರಾರ್ಹವಾಗುತ್ತಿರುವ ಹಾಗು ಸೋಷಿಯಲ್ ಮೀಡಿಯಾದಲ್ಲಿ ಸಾಮಾನ್ಯವಾಗುತ್ತಿರುವ ಸ್ಪಷ್ಟ ಸೂಚನೆಯಾಗಿದೆ.
2022 ರಲ್ಲಿ ಗುಜರಾತ್ ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಿಂದ ತಲೆಗೆ ಟೋಪಿ ಹಾಕಿದ ಒಂದು ಡಝನ್ ಬಿಳಿ ಕುರ್ತಾಧಾರಿಗಳನ್ನು ಗಲ್ಲಿಗೇರಿಸಿದಂತೆ ತೋರಿಸಿದ ಕ್ಯಾರಿಕೇಚರ್ ಒಂದನ್ನು ಪೋಸ್ಟ್ ಮಾಡಿತ್ತು. ಅದನ್ನು ಎಕ್ಸ್ ತೆಗೆದು ಹಾಕಿತು. ಅದಕ್ಕೆ ಪ್ರತಿಕ್ರಿಯಿಸಿದ ಗುಜರಾತ್ ಬಿಜೆಪಿ ನಾವು ಯಾವುದೇ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿಲ್ಲ, 2006 ರ ಅಹ್ಮದಾಬಾದ್ ಸ್ಪೋಟದ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ನೀಡಿದ್ದನ್ನು ಮಾತ್ರ ಆ ಕಾರ್ಟೂನ್ ತೋರಿಸಿತ್ತು ಎಂದು ಸಮರ್ಥಿಸಿಕೊಂಡಿತ್ತು.
ಒಂದು ಜವಾಬ್ದಾರಿಯುತ ರಾಜಕೀಯ ಪಕ್ಷ, ಅದರಲ್ಲೂ ಆಡಳಿತದಲ್ಲಿರುವ ಪಕ್ಷವು, ಇಂತಹ ದ್ವೇಷ ಮತ್ತು ಹಿಂಸೆಯನ್ನು ಸೂಚಿಸುವ ಸಂಕೇತಗಳನ್ನು ಬಳಸುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಇದು ಕೇವಲ ಒಂದು ಸಮುದಾಯದ ವಿರುದ್ಧದ ದ್ವೇಷವಲ್ಲ, ಬದಲಿಗೆ ಇಡೀ ಸಮಾಜದಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣವನ್ನು ಸೃಷ್ಟಿಸುತ್ತದೆ.
ಭಾಗಲ್ಪುರ್ ನಂತಹ ಘೋರ ದುರಂತವನ್ನು ನೆನಪಿಸುವ ಮತ್ತು ಅದನ್ನು ಒಂದು ರೀತಿಯಲ್ಲಿ ವೈಭವೀಕರಿಸುವ ಸಂಕೇತವನ್ನು ಬಳಸುವುದು, ಆ ದುರಂತದಲ್ಲಿ ಬಲಿಯಾದವರ ಕುಟುಂಬಗಳಿಗೆ ಮತ್ತು ಇಡೀ ಸಮುದಾಯಕ್ಕೆ ಮಾಡುವ ಘೋರ ಅಪಮಾನವಾಗಿದೆ.
ಇದು ದೇಶದಲ್ಲಿ ರಾಜಕೀಯ ಭಾಷೆಯ ಅವನತಿಯನ್ನು ಮತ್ತು ದ್ವೇಷದ ರಾಜಕಾರಣದ ಸಾಮಾನ್ಯೀಕರಣವನ್ನು ತೋರಿಸುತ್ತದೆ. ರಾಜಕೀಯ ವಿರೋಧಿಗಳನ್ನು ಟೀಕಿಸಲು ಅಥವಾ ತನ್ನ ಸಾಧನೆಗಳನ್ನು ಹೇಳಿಕೊಳ್ಳಲು ಒಂದು ಪಕ್ಷವು ಇಂತಹ ಹೀನ ಸಂಕೇತಗಳನ್ನು ಬಳಸಬೇಕಾದ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ.
'ಆಪರೇಷನ್ ಕಗಾರ್' ಕುರಿತು ಸಂಭ್ರಮಿಸುವುದಕ್ಕೂ, ಭಾಗಲ್ಪುರ್ ಹತ್ಯಾಕಾಂಡವನ್ನು ನೆನಪಿಸುವ ಸಂಕೇತವನ್ನು ಬಳಸುವುದಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ, ಈ ಹೂಕೋಸಿನ ಬಳಕೆಯು ಕೇವಲ ಅಪ್ರಸ್ತುತವಲ್ಲ, ಅಥವಾ ಆಕಸ್ಮಿಕವೂ ಅಲ್ಲ. ಅದು ಉದ್ದೇಶಪೂರ್ವಕವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿ, ಅವರಿಗೆ ಬೆದರಿಕೆ ಹಾಕುವ ಮತ್ತು ಹಿಂದಿನ ಹಿಂಸೆಯನ್ನು ಸಂಭ್ರಮಿಸುವ ಪ್ರಯತ್ನವಾಗಿದೆ.
ರಾಜಕೀಯ ಪಕ್ಷಗಳು ತಮ್ಮ ಮಾತು ಮತ್ತು ಕೃತಿಗಳಲ್ಲಿ ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು. ದ್ವೇಷವನ್ನು ಪ್ರಚೋದಿಸುವ, ಹಿಂಸೆಯನ್ನು ವೈಭವೀಕರಿಸುವ ಅಥವಾ ಯಾವುದೇ ಸಮುದಾಯವನ್ನು ಅವಮಾನಿಸುವ ಸಂಕೇತಗಳನ್ನು ಬಳಸುವುದು ಅತ್ಯಂತ ಖಂಡನೀಯ. ಬಿಜೆಪಿ ಕರ್ನಾಟಕವು ಈ ಪೋಸ್ಟ್ ಅನ್ನು ತಕ್ಷಣವೇ ತೆಗೆದುಹಾಕಿ, ಬೇಷರತ್ತಾಗಿ ಕ್ಷಮೆಯಾಚಿಸಬೇಕು. ಅಷ್ಟೇ ಅಲ್ಲ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಆ ಪಕ್ಷದ ಮೇಲಿದೆ.
ಸೌಜನ್ಯ: thewire.in







