Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಈ ‘ಕಪ್ಪು’ ಯಾರದ್ದು?

ಈ ‘ಕಪ್ಪು’ ಯಾರದ್ದು?

ವಾರ್ತಾಭಾರತಿವಾರ್ತಾಭಾರತಿ6 Jun 2025 7:18 AM IST
share
ಈ ‘ಕಪ್ಪು’ ಯಾರದ್ದು?

ಆರ್‌ಸಿಬಿ ಚಾಂಪಿಯನ್ ಶಿಪ್‌ನ ವಿಜಯೋತ್ಸವ ಸಮಾರಂಭದಲ್ಲಿ ಸಂಭವಿಸಿದ ದುರಂತದ ‘ಕಪ್ಪು’ ಸ್ವೀಕರಿಸುವುದಕ್ಕೆ ಯಾರೂ ಸಿದ್ಧರಿದ್ದಂತಿಲ್ಲ. ವಿರೋಧ ಪಕ್ಷಗಳು ಈ ‘ಕಪ್ಪು’ ರಾಜ್ಯ ಸರಕಾರದ್ದು ಎಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘‘ಕಪ್ಪು ನಮ್ಮದಲ್ಲ, ಕಾರ್ಯಕ್ರಮ ಸಂಘಟಕರದ್ದು’’ ಎಂದು ಹೆಗಲು ಜಾರಿಸಿಕೊಳ್ಳುತ್ತಿದ್ದಾರೆ. ಇತ್ತ ಚಾಂಪಿಯನ್ ಶಿಪ್ ಕಪ್‌ನ ಜೊತೆಗೆ ಕೋಟಿ ಕೋಟಿ ಹಣವನ್ನು ಬಾಚಿಕೊಂಡ ಸಂಘಟಕರು, ಆರ್‌ಸಿಬಿ ಮಾಲಕರು ಸಣ್ಣದೊಂದು ವಿಷಾದ ಮತ್ತು ಮೃತರಿಗೆ ಸಣ್ಣ ನಗದನ್ನು ಘೋಷಿಸಿ ತಮ್ಮ ಮುಖದ ಕಪ್ಪನ್ನು ಒರೆಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಐಪಿಎಲ್ ಸಮೂಹ ಸನ್ನಿಯ ಭಾಗವಾಗಲು ರಾಜ್ಯ ಸರಕಾರವೂ ಪ್ರಯತ್ನಿಸಿದ ಕಾರಣಕ್ಕಾಗಿ ಅದನ್ನೂ ಕಟಕಟೆಯಲ್ಲಿ ನಿಲ್ಲಿಸುವುದು ಅತ್ಯಗತ್ಯವಾಗಿದೆ. ಕಾಲ್ತುಳಿತ ದುರಂತಕ್ಕೆ ಕಾರಣ ಏನೇ ಇರಲಿ, ಕಾನೂನು ಸುವ್ಯವಸ್ಥೆ ಸರಕಾರದ ಹೊಣೆಗಾರಿಕೆಯಾಗಿರುವುದರಿಂದ ಗೃಹ ಇಲಾಖೆ ನುಣುಚಿಕೊಳ್ಳುವಂತೆಯೇ ಇಲ್ಲ. ಸರಕಾರ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡು ವಿಷಾದ ಸೂಚಿಸಿದೆ. ಮಾತ್ರವಲ್ಲ ಸಂಬಂಧ ಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳನ್ನು ತಕ್ಷಣಕ್ಕೆ ಅಮಾನತುಗೊಳಿಸಿದೆ. ಸಂತ್ರಸ್ತರಿಗೆ ಪರಿಹಾರ ಘೋಷಿಸಿ, ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ. ಈಗಾಗಲೇ ಆರ್‌ಸಿಬಿಯ ಮೇಲೆ ಎಫ್‌ಐಆರ್ ದಾಖಲಾಗಿದೆ. ಸಂಘಟಕರು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂದರ್ಭದಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಸರಕಾರ ಮುಂದಾಗಿದೆ. ಇದೇ ಸಂದರ್ಭದಲ್ಲಿ, ವಿರೋಧ ಪಕ್ಷಗಳು ಈ ಕಾಲ್ತುಳಿತ ವಿಷಯದಲ್ಲಿ ಅನುಸರಿಸಿದ ದ್ವಂದ್ವ ನಿಲುವಿನ ಕಾರಣಕ್ಕಾಗಿ ನಾಡಿನ ಟೀಕೆಗೆ ಗುರಿಯಾಗಿವೆ.

ಸರಕಾರ ತಡವಾಗಿಯಾದರೂ ಜನರ ಸಮೂಹ ಸನ್ನಿಯಿಂದಾಗಬಹುದಾದ ಅನಾಹುತವನ್ನು ಗುರುತಿಸಿತ್ತು. ಆ ಕಾರಣಕ್ಕಾಗಿಯೇ ತೆರೆದ ವಾಹನದಲ್ಲಿ ಆರ್‌ಸಿಬಿ ತಂಡದ ಮೆರವಣಿಗೆಗೆ ನಿಷೇಧವನ್ನು ಹೇರಿತ್ತು. ಒಂದು ವೇಳೆ, ಈ ಮೆರವಣಿಗೆಗೆ ಅನುಮತಿಯನ್ನು ನೀಡಿದ್ದರೆ, ಅನಾಹುತಗಳು ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿದ್ದವು. ಆದರೆ ಹೀಗೆ ಅನುಮತಿಯನ್ನು ನೀಡದೇ ಇದ್ದಾಗ, ಬಿಜೆಪಿಯ ಕೆಲವು ಮುಖಂಡರು ಸರಕಾರ ಮತ್ತು ಗೃಹ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಕಾಲ್ತುಳಿತ ದುರಂತ ಸಂಭವಿಸಿದ ಬಳಿಕ, ಬಿಜೆಪಿಯು ತನ್ನ ನಿಲುವಿನಿಂದ ಹಿಂದೆ ಸರಿಯಿತು. ‘‘ಕಾಲ್ತುಳಿತದ ಹೊಣೆಯನ್ನು ಸಂಪೂರ್ಣವಾಗಿ ರಾಜ್ಯ ಸರಕಾರವೇ ಹೊರಬೇಕು’’ ಎಂದೂ ಅದು ಈಗ ಒತ್ತಾಯಿಸುತ್ತಿದೆ. ಅಷ್ಟೇ ಅಲ್ಲ, ಬೃಹತ್ ಜನಸ್ತೋಮವನ್ನು ಹೇಗೆ ನಿಯಂತ್ರಿಸಬೇಕಾಗಿತ್ತು ಎನ್ನುವುದನ್ನು ಉತ್ತರ ಪ್ರದೇಶ ಸರಕಾರದಿಂದ ಕಲಿಯಬೇಕು ಎನ್ನುವ ಉಚಿತ ಉಪದೇಶವನ್ನೂ ಬಿಜೆಪಿ ನಾಯಕರು ನೀಡಿದ್ದಾರೆ. ಉತ್ತರ ಪ್ರದೇಶ ಸರಕಾರ ಕುಂಭಮೇಳದಲ್ಲಿ ಕಾಲ್ತುಳಿತವನ್ನು ನಿಭಾಯಿಸಿದ ರೀತಿಗೆ ಹೋಲಿಸಿದರೆ, ರಾಜ್ಯದ ಕಾಲ್ತುಳಿತ ದುರಂತವನ್ನು ಕಾಂಗ್ರೆಸ್ ಸರಕಾರ ತೃಪ್ತಿಕರವಾಗಿಯೇ ನಿಭಾಯಿಸಿದೆ. ಊಹೆಗೂ ಮೀರಿದ ಜನ ಚಿನ್ನ ಸ್ವಾಮಿ ಸ್ಟೇಡಿಯಮ್‌ನಲ್ಲಿ ಸೇರಿರುವುದು ದುರಂತಕ್ಕೆ ಕಾರಣವಾಯಿತು. ಆದರೆ ಸರಕಾರ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದ ಪರಿಣಾಮವಾಗಿ ಸಂಭವಿಸಬಹುದಾದ ಇನ್ನಷ್ಟು ದುರಂತಗಳು ತಪ್ಪಿದವು ಎನ್ನುವುದನ್ನು ಬಿಜೆಪಿ ಮರೆಯಬಾರದು.

ಉತ್ತರ ಪ್ರದೇಶದ ಕುಂಭಮೇಳದಲ್ಲಿ ನಡೆದ ಭೀಕರ ಕಾಲ್ತುಳಿತವನ್ನು ಅಲ್ಲಿನ ಬಿಜೆಪಿ ಸರಕಾರ ಹೇಗೆ ನಿಭಾಯಿಸಿತು ಎನ್ನುವುದನ್ನು ಇಡೀ ದೇಶ ನೋಡಿದೆ. ಇಂದಿಗೂ ಕಾಲ್ತುಳಿತದಲ್ಲಿ ಸತ್ತವರ ಸಂಖ್ಯೆ ಎಷ್ಟು ಎನ್ನುವ ವಿವರವನ್ನು ಅಲ್ಲಿನ ಸರಕಾರ ಬಹಿರಂಗ ಪಡಿಸಿಲ್ಲ. ವಿವರ ಕೇಳಿದವರನ್ನೆಲ್ಲ ‘ಹಿಂದೂ ವಿರೋಧಿಗಳು’ ಎಂದು ಕರೆದು ಅಲ್ಲಿನ ಸರಕಾರ ಬಾಯಿ ಮುಚ್ಚಿಸಿದೆ. ಕಾಲ್ತುಳಿತ ಸಂಭವಿಸಿ ಹಲವು ಗಂಟೆಗಳವರೆಗೆ ಹೊರ ಜಗತ್ತಿಗೆ ದುರಂತದ ಅರಿವೇ ಇರಲಿಲ್ಲ. ಅಲ್ಲಿ ನಡೆದ ಮೃತದೇಹಗಳನ್ನು ಸರಕಾರದ ನೇತೃತ್ವದಲ್ಲಿ ಗಂಗಾನದಿಗೆ ಎಸೆಯಲಾಗಿದೆ ಎಂಬ ಗಂಭೀರ ಆರೋಪವನ್ನು ಸಂಸದರೊಬ್ಬರು ಮಾಡಿದ್ದರು. ಅದಕ್ಕೂ ಸರಕಾರ ಈವರೆಗೆ ಸ್ಪಷ್ಟೀಕರಣ ನೀಡಿಲ್ಲ. ಕುಂಭಮೇಳದಲ್ಲಿ ನೂರಾರು ಜನರು ನಾಪತ್ತೆಯಾಗಿದ್ದಾರೆ ಎನ್ನುವ ವರದಿ ಹೊರ ಬಿದ್ದಿದೆ. ಅವರೆಲ್ಲ ಏನಾದರು ಎನ್ನುವ ಪ್ರಶ್ನೆಗೂ ಉತ್ತರಿಸುವ ಪ್ರಯತ್ನವನ್ನು ಸರಕಾರ ಈವರೆಗೆ ಮಾಡಿಲ್ಲ. ಕುಂಭ ಮೇಳದಲ್ಲಿ ಅಲ್ಲಿನ ಸರಕಾರದ ಪ್ರಕಾರ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಷ್ಟಾದರೂ ಇದರ ಬಗ್ಗೆ ಸ್ಪಷ್ಟೀಕರಣ ನೀಡಲು ಒಂದು ಪತ್ರಿಕಾಗೋಷ್ಠಿಯನ್ನು ಕರೆದಿಲ್ಲ. ಒಬ್ಬನೇ ಒಬ್ಬ ಅಧಿಕಾರಿಯ ಮೇಲೆ ಕ್ರಮ ತೆಗೆದುಕೊಂಡ ಮಾಹಿತಿಯಿಲ್ಲ. ಯಾವುದೇ ಗಂಭೀರ ತನಿಖೆಯನ್ನೂ ಮಾಡಿಲ್ಲ. ಕರ್ನಾಟಕದಲ್ಲಿ ಕಾಲ್ತುಳಿತ ಘಟನೆ ನಡೆದ ಬೆನ್ನಿಗೇ ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯನ್ನು ಕರೆದರು. ಘಟನೆ ನಡೆದ ಬೆನ್ನಿಗೇ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕ್ಷಮೆಯಾಚಿಸಿದ್ದಾರೆೆ. ಗಾಯಾಳುಗಳನ್ನು ಮುಖ್ಯಮಂತ್ರಿ ಭೇಟಿಯಾಗಿದ್ದಾರೆ. ಘಟನೆಯ ಬಗ್ಗೆ ವಿಸ್ತಾರವಾಗಿ ವರದಿ ಮಾಡಲು ಮಾಧ್ಯಮಗಳಿಗೆ ಮುಕ್ತ ಅವಕಾಶ ನೀಡಿದ್ದಾರೆ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಕಾಲ್ತುಳಿತವನ್ನು ಸಮರ್ಥಿಸಿಕೊಂಡಿದ್ದಾರೆ. ಗಾಯಾಳುಗಳನ್ನು, ಸಂತ್ರಸ್ತರನ್ನು ಅಲ್ಲಿನ ಮುಖ್ಯಮಂತ್ರಿ ಭೇಟಿಯಾಗೇ ಇಲ್ಲ. ಹಾಗೆಯೇ ವರದಿ ಮಾಡಲು ಹೋದ ವರದಿಗಾರರನ್ನು ತಡೆಯಲಾಯಿತು ಮಾತ್ರವಲ್ಲ, ಅವರ ಮೇಲೆ ಮೊಕದ್ದಮೆ ದಾಖಲಿಸಲಾಯಿತು. ಇಷ್ಟಾದರೂ ಕರ್ನಾಟಕದ ಬಿಜೆಪಿ ನಾಯಕರು, ಉತ್ತರ ಪ್ರದೇಶ ಸರಕಾರವನ್ನು ಮಾದರಿಯಾಗಿಸಿಕೊಳ್ಳಲು ರಾಜ್ಯ ಸರಕಾರಕ್ಕೆ ಸಲಹೆ ನೀಡುತ್ತಿದ್ದಾರೆ. ಅಂದರೆ, ಅಲ್ಲಿನ ಬಿಜೆಪಿ ಸರಕಾರ ಮಾಡಿದಂತೆ ಇಡೀ ಘಟನೆಯನ್ನು ಮುಚ್ಚಿ ಹಾಕುವ ಉಪಾಯವನ್ನು ಅವರು ರಾಜ್ಯ ಸರಕಾರಕ್ಕೆ ನೀಡುತ್ತಿದ್ದಾರೆಯೆ? ಎಂದು ರಾಜ್ಯದ ಜನರು ಕೇಳುತ್ತಿದ್ದಾರೆ. ಈ ಕಾರಣಕ್ಕಾಗಿಯೇ ವಿರೋಧ ಪಕ್ಷಗಳು ಸರಕಾರದ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.

ಇವೆಲ್ಲದರ ನಡುವೆಯೂ ಸರಕಾರ ಒಟ್ಟು ಪ್ರಕರಣವನ್ನು ಗಂಭೀರ ತನಿಖೆಗೆ ಒಳ ಪಡಿಸಬೇಕು ಮಾತ್ರವಲ್ಲ, ಅದರ ಹಿಂದೆ ಯಾರೇ ಇರಲಿ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಜನರ ಉನ್ಮಾದವನ್ನು, ಸಮೂಹ ಸನ್ನಿಯನ್ನು ಬಳಸಿಕೊಂಡು ದಂಧೆ ನಡೆಸುವ ಐಪಿಎಲ್‌ಗೆ ಇನ್ನಾದರೂ ಕಡಿವಾಣ ಹಾಕಬೇಕಾಗಿದೆ. ದೇಶದ ಮೇಲೆ ಯುದ್ಧದ ಕಾರ್ಮೋಡ ಕವಿದ ಹೊತ್ತಿಗೂ, ಹಿಮಾಚಲ ಪ್ರದೇಶದಲ್ಲಿ ಐಪಿಎಲ್ ಯಾವ ಎಗ್ಗಿಲ್ಲದೆ ನಡೆಯುತ್ತಿತ್ತು. ಎಲ್ಲೆಡೆ ಬ್ಲಾಕ್‌ಔಟ್ ಇರುವಾಗಲೂ, ಐಪಿಎಲ್ ಪಂದ್ಯವನ್ನು ಮುಂದುವರಿಸುವ ಪ್ರಯತ್ನ ನಡೆಯಿತು. ದೇಶದ ಹಿತಾಸಕ್ತಿಯನ್ನು ಮೀರಿ ಐಪಿಎಲ್ ಮಹತ್ವ ಪಡೆದದ್ದು ಹೇಗೆ? ಕೊನೆಯ ಕ್ಷಣದಲ್ಲಿ ತೀರಾ ಅನಿವಾರ್ಯ ಎನ್ನುವಾಗಷ್ಟೇ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಐಪಿಎಲ್ ದಂಧೆಯನ್ನು ಆರಂಭಿಸಿರುವ ಲಲಿತ್ ಮೋದಿ, ಮಲ್ಯ ಮೊದಲಾದವರು ದೇಶಕ್ಕೆ ವಂಚಿಸಿ ಪರದೇಶದಲ್ಲಿ ಅಡಗಿಕೊಂಡಿದ್ದಾರೆ. ಆದರೆ ಅವರು ಬಿತ್ತಿದ ಈ ಅಮಲಿನ ಹುಲುಸಾದ ಬೆಳೆಯ ಕೊಯ್ಲಿನ ಅಂತಿಮ ಪರಿಣಾಮ ಏನಾಗಬಹುದು ಎನ್ನುವುದಕ್ಕೆ ಬೆಂಗಳೂರಿನಲ್ಲಿ ನಡೆದಿರುವುದು ಸಣ್ಣ ಉದಾಹರಣೆಯಾಗಿದೆ. ಈ ಸಾವುನೋವುಗಳಿಗಿಂತಲೂ ಭೀಕರವಾದುದು, ಐಪಿಎಲ್ ಫೈನಲ್‌ನಲ್ಲಿ ಬೆಟ್ಟಿಂಗ್‌ಗೆ, ಜೂಜಿಗೆ ಬಲಿಯಾಗಿ ಹಣ ಕಳೆದುಕೊಂಡವರ ಸ್ಥಿತಿ. ಭವಿಷ್ಯದಲ್ಲಿ ಇದು ಹಲವರ ಆತ್ಮಹತ್ಯೆಯಲ್ಲಿ ಕೊನೆಯಾಗುವ ಸಾಧ್ಯತೆಗಳಿವೆ. ರಾಜ್ಯ ಸರಕಾರ ಕಾಲ್ತುಳಿತ ದುರಂತದ ತನಿಖೆಯ ಜೊತೆ ಜೊತೆಗೇ ಈ ಬೆಟ್ಟಿಂಗ್ ಜೂಜಿನ ಹಿಂದಿರುವ ಶಕ್ತಿಯ ವಿರುದ್ಧ ವೂ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ತನಿಖೆಯ ವ್ಯಾಪ್ತಿ ವಿಸ್ತಾರಗೊಳ್ಳಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X