ಪರಿಸರ ಉಳಿದರೆ ಆರೋಗ್ಯಕರ ಬದುಕು ಸಾಧ್ಯ : ಶಾಸಕ ಚೆನ್ನಾರೆಡ್ಡಿ ಪಾಟೀಲ್

ಯಾದಗಿರಿ: ನಗರವನ್ನು ಹಸಿರೀಕರಣಗೊಳಿಸುವ ಉದ್ದೇಶದಿಂದ ನಗರಸಭೆ ವಿನೂತನ ಕಾರ್ಯಕ್ರಮವೊಂದನ್ನು ಆರಂಭಿಸಿದ್ದು, “ನನ್ನ ಕುಟುಂಬ, ನಮ್ಮ ಮನೆಗಿಡ” ಅಭಿಯಾನದಡಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಉದ್ಯಾನವನಗಳಲ್ಲಿ ಸಸಿ ನೆಡುವ ಮತ್ತು ಅವುಗಳನ್ನು ಪೋಷಿಸುವ ಕಾರ್ಯಕ್ಕೆ ಮುಂದಾಗಿದೆ.
ನಗರದ ಲಕ್ಷ್ಮೀನಗರ ಸಾರ್ವಜನಿಕ ಉದ್ಯಾನವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮಕ್ಕೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಸಾಂಕೇತಿಕವಾಗಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಸರ ಉಳಿದರೆ ಮಾತ್ರ ಆರೋಗ್ಯಕರ ಜೀವನ ಸಾಧ್ಯ ಎಂದು ಹೇಳಿದರು. ತಮ್ಮ ಪ್ರದೇಶಗಳ ಉದ್ಯಾನವನಗಳಲ್ಲಿ ಸಸಿ ನೆಟ್ಟು ಅವುಗಳನ್ನು ಕುಟುಂಬದ ಸದಸ್ಯರಂತೆ ಪೋಷಿಸುವ ಸಂಕಲ್ಪ ಮಾಡಬೇಕು. ಮಕ್ಕಳಲ್ಲಿಯೂ ಪರಿಸರದ ಬಗ್ಗೆ ಅರಿವು ಮೂಡಿಸುವ ಮೂಲಕ ಹಸಿರುಮಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ಮಾತನಾಡಿ, ನಗರದ 10 ಉದ್ಯಾನವನಗಳಲ್ಲಿ ಹಂತ ಹಂತವಾಗಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ಪ್ರತಿ ಉದ್ಯಾನದಲ್ಲಿ ಕನಿಷ್ಠ 50 ಸಸಿಗಳನ್ನು ಸ್ಥಳೀಯ ನಿವಾಸಿಗಳಿಂದಲೇ ನೆಡಿಸಲಾಗುವುದು. ಪ್ರತಿಯೊಂದು ಸಸಿಗೂ ಅದನ್ನು ನೆಟ್ಟ ಕುಟುಂಬದ ಹೆಸರನ್ನು ನೀಡಿ, ಅದರ ನಿರ್ವಹಣೆಯ ಜವಾಬ್ದಾರಿಯನ್ನು ಸಂಬಂಧಿತ ಕುಟುಂಬಗಳಿಗೆ ವಹಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸಿಬ್ಬಂದಿ ಶಿವಪುತ್ರ ಸೇರಿದಂತೆ ಲಕ್ಷ್ಮೀನಗರದ ನೂರಾರು ನಿವಾಸಿಗಳು ಭಾಗವಹಿಸಿ ಸಸಿ ನೆಡುವ ಮೂಲಕ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.






