Yadgiri | ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಸ್ಪರ್ಧೆ: ಅಪ್ನಿ ಜನತಾ ಪಾರ್ಟಿ ಘೋಷಣೆ

ಯಾದಗಿರಿ: ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸಾಮಾನ್ಯ ಜನರಿಗೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲು ವಿಫಲವಾಗಿವೆ ಎಂದು ಆರೋಪಿಸಿರುವ ಅಪ್ನಿ ಜನತಾ ಪಾರ್ಟಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಹೊಸ ಪರ್ಯಾಯ ಸರ್ಕಾರ ರಚಿಸುವ ಗುರಿ ಹೊಂದಿದೆ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸಾದಾಬ್ ಖಾನ್ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ, ಉದ್ಯೋಗ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸಮಸ್ಯೆಗಳ ಪರಿಹಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ. ಕೋಮುವಾದಿ ರಾಜಕಾರಣ ಮತ್ತು ದ್ವೇಷ ಭಾಷಣ ತಡೆಯುವಲ್ಲಿಯೂ ಸರ್ಕಾರಗಳು ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಯಾದಗಿರಿ ಕ್ಷೇತ್ರದ ವಿವಿಧ ರಸ್ತೆ ಕಾಮಗಾರಿಗಳ ವಿಳಂಬವನ್ನು ಉಲ್ಲೇಖಿಸಿದ ಅವರು, ಮೈಲಾಪೂರ ಅಗಸಿಯಿಂದ ಹತ್ತಿಕುಣಿ ದರ್ಗಾವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಟೆಂಡರ್ ಆಗಿದ್ದರೂ ಕಾಮಗಾರಿ ಆರಂಭವಾಗಿಲ್ಲ ಎಂದು ಆರೋಪಿಸಿದರು.
ಹತ್ತಿಕುಣಿ ರಸ್ತೆ ಹಾಗೂ ಟಿಪ್ಪು ಸುಲ್ತಾನ್ ಚೌಕ್‌ನಿಂದ ಗಂಗಾನಗರವರೆಗೆ ರಸ್ತೆ ದುಸ್ಥಿತಿಯಲ್ಲಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಟೀಕಿಸಿದರು.
ಜಿಲ್ಲಾ ಕೇಂದ್ರದಲ್ಲೇ ಭೀಮಾ ನದಿ ಹರಿದರೂ ಜನರಿಗೆ ಶುದ್ಧ ಕುಡಿಯುವ ನೀರು ಸಿಗದಿರುವುದು ವಿಪರ್ಯಾಸವಾಗಿದೆ. ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿಯೂ ರಸ್ತೆಗಳು ಹದಗೆಟ್ಟಿದ್ದು, ಶೌಚಾಲಯಗಳ ಕೊರತೆಯಿಂದ ಮಹಿಳೆಯರು ರಸ್ತೆ ಬದಿಗೆ ತೆರಳುವ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಅವರು, ಈ ಎಲ್ಲಾ ಸಮಸ್ಯೆಗಳ ವಿರುದ್ಧ ಪಕ್ಷವು ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಹೋರಾಟ ನಡೆಸಲು ಸಿದ್ಧವಾಗಿದೆ ಎಂದರು.
ಬಡವರು ಮತ್ತು ಶೋಷಿತರ ಧ್ವನಿಯಾಗಿ ರಾಜ್ಯದಲ್ಲಿ ತಮ್ಮದೇ ಸರ್ಕಾರ ಅಧಿಕಾರಕ್ಕೆ ತರಲು ಪಕ್ಷ ಬದ್ಧವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಜಫರುಲ್ಲಾ, ಡಿಎಸ್‌ಎಸ್ ರಾಜ್ಯ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ, ಡಾ. ಜಾಫರ್ ಹುಸೇನ್ ರಾಜ್ಯ ಉಪಾಧ್ಯಕ್ಷ, ಪಠಾಣ್ ಸೂಫಿಯಾನ್ ಖಾನ್, ಎಂ.ಡಿ. ಖಾಲಿದ್ ಅಬ್ರಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






