ಸಂಗೀತ ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿ ಶಾಸಕ ಶರಣಗೌಡ ಕಂದಕೂರ ಅವರಿಗೆ ಮನವಿ

ಹುಣಸಗಿ: ರಾಜ್ಯದ ಸರ್ಕಾರಿ, ಅನುದಾನಿತ ಶಾಲಾ-ಕಾಲೇಜುಗಳು ಹಾಗೂ ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಗೀತ ಶಿಕ್ಷಕರನ್ನು ನೇಮಕಾತಿ ಮಾಡಿ ನಿರುದ್ಯೋಗ ಸಮಸ್ಯೆ ನಿವಾರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ನವಕರ್ನಾಟಕ ಸಂಗೀತ ಪದವಿಧರರ ಸಂಘಟನೆಯ ಪದಾಧಿಕಾರಿಗಳು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬಸವಲಿಂಗ ವಿರಕ್ತಮಹಾಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ನಿರಂಜನ ಪಟ್ಟಾಧಿಕಾರ ಮಹೋತ್ಸವದಲ್ಲಿ ಭಾಗವಹಿಸಿದ್ದ ಶಾಸಕ ಶರಣಗೌಡ ಕಂದಕೂರ ಅವರಿಗೆ ವೇದಿಕೆಯಲ್ಲೇ ಸಂಗೀತ ಬಳಗದ ಸದಸ್ಯರಾದ ನಾಗರಾಜ ಹೂಗಾರ ಹಾಗೂ ಸುರೇಶ ಹೂಗಾರ ಸಂಘಟನೆಯ ಪರವಾಗಿ ಮನವಿ ಪತ್ರ ಸಲ್ಲಿಸಿದರು.
ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಜೊತೆಗೆ ಕೇಂದ್ರೀಯ ವಿದ್ಯಾಲಯಗಳಲ್ಲೂ ಸಂಗೀತ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಬೇಕು. ವಯೋಮಿತಿ ಮೀರಲಿರುವ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗದ ಅವಕಾಶ ಕಲ್ಪಿಸಿ, ರಾಜ್ಯದಲ್ಲಿ ಸಂಗೀತ ಶಿಕ್ಷಣದ ಬೆಳವಣಿಗೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
2010ರ ನಂತರ ಸಂಗೀತ ಶಿಕ್ಷಕರ ನೇಮಕಾತಿ ನಡೆದಿಲ್ಲ. 2011ರಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದರೂ ಅದು ಪೂರ್ಣಗೊಂಡಿಲ್ಲ. ಕಳೆದ 15 ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದಿರುವುದು ಸಂಗೀತ ಪದವೀಧರರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರವೀಣ ಪತ್ತಾರ, ಈಶ್ವರ ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.






