ಎಸ್ ಐಆರ್ ಬಗ್ಗೆ ಮನೆ, ಮನೆಗೂ ಅರಿವೂ ಮೂಡಿಸಬೇಕು; ಎಂಎಲ್ ಸಿ ಕಮಕನೂರ ಸಲಹೆ

ಯಾದಗಿರಿ: ಮತದಾರರ ಪಟ್ಟಿಯನ್ನು ಶುದ್ದೀಕರಿಸುವುದು ಮತ್ತು ದೋಷಗಳನ್ನು ಸರಿಪಡಿಸುವುದು ಅಗತ್ಯವೇ ಸರಿ. ಆದರೆ, ಅದರ ಅನುಷ್ಟಾನವು ಜನರಿಗೆ ತೊಂದರೆ ಉಂಟು ಮಾಡುವಂತಿದ್ದರೆ, ಅದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ವಿರುದ್ಧವಾಗುತ್ತದೆ, ಕಾರಣ ಈ ಬಗ್ಗೆ ಜಿಲ್ಲೆಯ ಪ್ರತಿ ಮನೆ, ಮನೆಗೂ ಮುಂಖಡರು, ಕಾರ್ಯಕರ್ತರು ತೆರಳಿ ಜಾಗೃತಿ ಮೂಡಿಸುವ ಕೆಲಸ ತುರ್ತು ಆಗಬೇಕೆಂದು ಎಂಎಲ್ಸಿ ಹಾಗೂ ಎಸ್‌ಐಆರ್‌ನ ಜಿಲ್ಲಾ ಉಸ್ತುವಾರಿಯಾಗಿರುವ ತಿಪ್ಪಣಪ್ಪ ಕಮಕನೂರ ಹೇಳಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶೇಷ ತೀವ್ರ ಪರಿಷ್ಕರಣೆಯ ಸಂದರ್ಭದಲ್ಲಿ ನಾಗರಿಕರಿಂದ ಹಲವಾರು ದಾಖಲೆಗಳನ್ನು ಕೇಳಲಾಗುತ್ತದೆ. ಆದರೆ ಗ್ರಾಮೀಣ ಪ್ರದೇಶಗಳ ಹಿರಿಯ ನಾಗರಿಕರು, ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು, ಅಲೆಮಾರಿ ಸಮುದಾಯಗಳು ಹಾಗೂ ಶಿಕ್ಷಣದಿಂದ ವಂಚಿತರಾದ ಅನೇಕ ಜನರಿಗೆ ಈ ದಾಖಲೆಗಳನ್ನು ಸಂಗ್ರಹಿಸಿ ಸಲ್ಲಿಸುವುದು ಸುಲಭದ ಕೆಲಸವಲ್ಲ. ಪರಿಣಾಮವಾಗಿ, ಅವರು ಅರ್ಹ ಮತದಾರರಾಗಿದ್ದರೂ ಅವರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡುವ ಅಪಾಯವಿದೆ ಎಂದು ವಿಷಾದಿಸಿದರು.
ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ಸರಿಪಡಿಸುವ ಹೆಸರಿನಲ್ಲಿ ಒಬ್ಬ ಅರ್ಹ ನಾಗರಿಕನ ಮತದಾನದ ಹಕ್ಕು ಕಳೆದುಹೋದರೆ, ಅದು ಕೇವಲ ವೈಯಕ್ತಿಕ ನಷ್ಟವಲ್ಲ, ಅದು ಪ್ರಜಾಪ್ರಭುತ್ವದ ನಷ್ಟವಾಗಿದೆ. ಆದ್ದರಿಂದ ಯಾವುದೇ ಪರಿಷ್ಕರಣೆ ಪ್ರಕ್ರಿಯೆಯು ಯಾರೊಬ್ಬ ಅರ್ಹ ಮತದಾರನೂ ಹೊರಗುಳಿಯಬಾರದು ಎಂಬ ತತ್ವದ ಮೇಲೆ ನಡೆಯಬೇಕೆಂದ ಅವರು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿರುವ ಈ ಪ್ರಕ್ತಿಯೇ ಬಗ್ಗೆ ಜಾಗೃತಿ ಅತಿಮುಖ್ಯವಾಗಿದೆ ಎಂದರು.
ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮಾತನಾಡಿ, ಈಗಾಗಲೇ ಯಾದಗಿರಿ ಮತಕ್ಷೇತ್ರ ಸೇರಿದಂತೆಯೇ ಜಿಲ್ಲೆಯ ಎಲ್ಲಡೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ ಎಂದರು.
ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ್ ಅನಪುರ ಮಾತನಾಡಿ, ವಿಶೇಷ ತೀವ್ರ ಪರಿಷ್ಕರಣೆಯ ಹೆಸರಲ್ಲಿ ಮುಗ್ಧ ಮತ್ತು ಅರ್ಹ ಜನರ ಮತದಾನ ಹಕ್ಕು ಕಸಿಯುವ ಸಾಧ್ಯತೆಗಳು ಹೆಚ್ಚಾಗಿದೆ. ಕಾಂಗ್ರೆಸ್‌ನ ಪ್ರತಿಯೊಬ್ಬರು ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಶರಣಪ್ಪ ಮಾನೇಗಾರ, ಡಾ.ಶರಣಬಸಪ್ಪ ಕಾಮರೆಡ್ಡಿ, ಯುಡಾ ಅಧ್ಯಕ್ಷ ಬಾಬುರಾವ ಕಾದ್ದೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಈಟೆ, ಕಾಂಗ್ರೆಸ್ ವಕ್ತಾರ ಶ್ಯಾಮಸನ್ ಮಾಳಿಕೇರಿ, ಅಶಪ್ಪ ಮಾಸ್ಟರ್ ಗಾಜರಕೋಟ್, ಜಿಲ್ಲೆಯ ವಿವಿಧ ಘಟಕಗಳ ಅಧ್ಯಕ್ಷರು, ಮಹಿಳಾ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.






