ಎಸ್‌ಐಆರ್ ವೇಳೆ ಬೂತ್ ಮಟ್ಟದಲ್ಲಿ ನಿಗಾವಹಿಸುವುದು ಅಗತ್ಯ: ಕಾಂಗ್ರೆಸ್ ಕಾರ್ಯಕರ್ತರಿಗೆ ಭೀಮಣ್ಣ ಮೇಟಿ ಸೂಚನೆ

ಯಾದಗಿರಿ: ಚುನಾವಣೆ ಆಯೋಗುವು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಲಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಿಂದಲೇ ಎಚ್ಚರಿಕೆ ವಹಿಸುವುದು ತುಂಬ ಅಗತ್ಯವಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೇಟಿ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಡಾ. ಭೀಮಣ್ಣ ಮೇಟಿ, ವಿಶೇಷವಾಗಿ ಹಿಂದುಳಿದ ವರ್ಗದವರು, ದಲಿತರು ಮತ್ತು ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಕೆಲಸ ಕೆಲವೊಂದು ರಾಜ್ಯಗಳಲ್ಲಿ ನಡೆದಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸುವುದು ಅಗತ್ಯವಿದೆ. ನಿರ್ಲಕ್ಷ್ಯ ವಹಿಸಿದರೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿ ಇರುವ ಮತದಾರರು ಆಯಾ ವಿಳಾಸದಲ್ಲಿ ಇದ್ದಾರೆಯೇ, ಮೃತಪಟ್ಟಿದ್ದಾರೆಯೇ, ಅವರ ವೈವಾಹಿಕ ಮತ್ತು ಕೌಟುಂಬಿಕ ವಿವರಗಳು ಬದಲಾಗಿವೆಯೇ ಎಂಬುದನ್ನು ಪರಿಶೀಲಿಸುವ ಹಾಗೂ ಸರಿಪಡಿಸುವ ಬೃಹತ್ ಕಾರ್ಯಾಚರಣೆ ಇದಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿವೆ. ಹೀಗಾಗಿಯೇ ಪಕ್ಷದ ಕಾರ್ಯಕರ್ತರು ಮತದಾರರ ಪಟ್ಟಿಯಿಂದ ಯಾವುದೇ ಹೆಸರುಗಳು ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಭೀಮಣ್ಣ ಮೇಟಿ ಹೇಳಿದರು.







