ಯಾದಗಿರಿ | ವಿಧಾನಪರಿಷತ್ ಪ್ರತಿಪಕ್ಷ ನಾಯಕನಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಘೇರಾವ್: ಬಿಜೆಪಿ ಆಕ್ರೋಶ

ಯಾದಗಿರಿ: ರಾಜ್ಯ ವಿಧಾನಪರಿಷತ್ ಪ್ರತಿಪಕ್ಷ ನಾಯಕನಿಗೆ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿದ್ದಾರೆ ಎಂದು ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜಪ್ಪಗೌಡ, ಗಾದೆ ಮಾತು ಹೇಳಿದರೆ ಗಲಾಟೆ ಮಾಡಲು ಕಾಂಗ್ರೆಸ್ ಮುಂದಾಗಿದೆ. ಟೀಕೆಗಳನ್ನು ರಚನಾತ್ಮಕವಾಗಿ ಸ್ವೀಕರಿಸುವ ಮನಸ್ಥಿತಿ ಬಿಟ್ಟು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರೌಡಿಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಚಿತ್ತಾಪೂರಕ್ಕೆ ಆಗಮಿಸಿದ್ದ ರಾಜ್ಯ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಘೇರಾವ್ ಹಾಕಿ ರೌಡಿಗಳಂತೆ ಚಿತ್ತಾಪೂರ ಕಾಂಗ್ರೆಸ್ ಕಾರ್ಯಕರ್ತರು ವರ್ತಿಸಿದ್ದಾರೆ. ಇದು ರಾಜ್ಯ ಸರಕಾರದ ಗೂಂಡಾರಾಜ್ ಗೆ ಜ್ವಲಂತ ಉದಾಹರಣೆಯಾಗಿದೆ. ಪ್ರತಿಪಕ್ಷ ನಾಯಕನಿಗೆ ಹೀಗಾದರೆ ರಾಜ್ಯದಲ್ಲಿ ಜನಸಾಮಾನ್ಯರ ಜೊತೆ ಕಾಂಗ್ರೆಸ್ ಹಾಗೂ ಸರಕಾರ ಯಾವ ರೀತಿ ವರ್ತಿಸುತ್ತಿದೆ ಎಂಬುದನ್ನು ಬೇರೆ ಹೇಳಬೇಕಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನವರು ಚಿತ್ತಾಪೂರದಲ್ಲಿ ಪ್ರತಿಪಕ್ಷದ ನಾಯಕನಿಗೆ ಘೇರಾವ್ ಹಾಕಿ ಭಯದ ವಾತಾವರಣ ಸೃಷ್ಟಿಸಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಪ್ರತಿಪಕ್ಷದ ನಾಯಕರ ಹೇಳಿಕೆಗೆ ಪ್ರತಿ ಹೇಳಿಕೆ ನೀಡಿದರೆ ಅದು ಪ್ರಜಾಪ್ರಭುತ್ವ ರೀತಿಯ ನಡವಳಿಕೆಯಾಗುತ್ತದೆ. ಆದರೆ, ಆಡಳಿತ ಪಕ್ಷದ ಮಂತ್ರಿಯ ಕುಮ್ಮಕ್ಕಿನಿಂದ ಕಾರ್ಯಕರ್ತರು ದೌರ್ಜನ್ಯ ನಡೆಸುತ್ತಿರುವುದು ಅಕ್ಷಮ್ಯವಾಗಿದೆ ಎಂದು ಹೇಳಿದರು.
ಚಿತ್ತಪೂರದಲ್ಲಿ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ. ಈ ಬಗ್ಗೆ ಮುಖ್ಯಮಂತ್ರಿಗಳು ತಕ್ಷಣ ಕಠಿಣ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಬಿಜೆಪಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪೂರ, ಮಾಜಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ನಾಗರತ್ನಾ ಕುಪ್ಪಿ, ಅಲೆಮಾರಿ ನಿಗಮದ ಮಾಜಿ ಅದ್ಯಕ್ಷ ದೇವೇಂದ್ರನಾಥ ನಾದ, ಮಾಜಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರಡ್ಡಿ ನಾಯ್ಕಲ್,ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಗುರುಕಾಮಾ, ನಗರ ಮಂಡಲ ಲಿಂಗಪ್ಪ ಹತ್ತಿಮನಿ, ಜಿಲ್ಲಾ ಮಾದ್ಯಮ ಸಂಚಾಲಕ ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







