ಸ್ಟಿಂಗ್ ಆಪರೇಷನ್‌ಗಳ ಸತ್ಯಾಸತ್ಯತೆ ಬಹಿರಂಗಕ್ಕೆ ಸಿಬಿಐ ತನಿಖೆಯಾಗಲಿ : ಛಲವಾದಿ ನಾರಾಯಣಸ್ವಾಮಿ
"ರಾಜ್ಯ ಸರಕಾರ ರೈತರಿಗೆ ಬರ ಪರಿಹಾರ ನೀಡುವಲ್ಲಿ ವಿಫಲ"

ಯಾದಗಿರಿ : ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್‌ಗಳ ಹಿಂದಿನ ಸತ್ಯಾಸತ್ಯತೆ ಬಹಿರಂಗಪಡಿಸಲು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಘೋಷಿಸಿರುವ ಪರಿಹಾರ ಮೊತ್ತವನ್ನು ತಕ್ಷಣ ರೈತರ ಖಾತೆಗಳಿಗೆ ಜಮೆ ಮಾಡಬೇಕು. ಬರ ನಿರ್ವಹಣೆಗೆ ಬಿಡುಗಡೆಯಾದ ಅನುದಾನದ ಬಳಕೆ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರಾಜಕೀಯಗೊಳಿಸಬಾರದು. ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಸರಿಪಡಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹಾಗೂ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದ ಬಳಕೆ ವಿಚಾರದಲ್ಲೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದಲಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಾದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಬಾರದು ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಪರಿಹಾರ ಕಲ್ಪಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಮೋಶಿ ಅವರ ಗೆಲುವಿಗಾಗಿ ಶಿಕ್ಷಕರನ್ನು ಭೇಟಿ ಮಾಡಿ ಮತಯಾಚಿಸಲಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಒಗ್ಗಟ್ಟಿನಿಂದ ಪ್ರಚಾರ ನಡೆಸುತ್ತಿದ್ದು, ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ರಾಜ್ಯ ಕಾರ್ಯದರ್ಶಿ ಕು. ಲಲಿತಾ ಅನಪುರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ, ವಿಭಾಗ ಸಹಪ್ರಭಾರಿ ಶರಣಪ್ಪ ತಳವಾರ, ಹಿರಿಯ ಮುಖಂಡ ರಾಚನಗೌಡ ಮುದ್ನಾಳ, ನಾಗರತ್ನ ಕುಪ್ಪಿ, ದೇವಿಂದ್ರನಾಥ ನಾದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಸಿದ್ದಣ್ಣಗೌಡ ಕಾಡಂನೊರ, ಸಿದ್ರಾಮರಡ್ಡಿ ಬಲಕಲ್ಕ್, ಜಿಲ್ಲಾ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಲಕ್ಷ್ಮೀಪುತ್ರ ಮಾಲಿಪಾಟೀಲ್, ಶರಣುಗೌಡ ಅಲಿಪುರ, ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಹಾಗೂ ಸಹಸಂಚಾಲಕ ಚಂದ್ರಶೇಖರ್ ಕಡೆಚೂರ ಉಪಸ್ಥಿತರಿದ್ದರು.






