ಯಾದಗಿರಿಯಲ್ಲಿ ಜೂ.14 ರಂದು ಮುಖ್ಯಮಂತ್ರಿಗಳಿಂದ 400 ಕೋ ರೂ. ವೆಚ್ಚದ ಆರೋಗ್ಯ ಅವಿಷ್ಕಾರ ಕ್ಕೆ ಚಾಲನೆ

ಯಾದಗಿರಿ : ಜೂ.14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾದಗಿರಿಯಲ್ಲಿ 400 ಕೋಟಿ ರೂ. ವೆಚ್ಚದ ‘ಆರೋಗ್ಯ ಆವಿಷ್ಕಾರ’ಕ್ಕೆ ಚಾಲನೆ ನೀಡುವರು ಎಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯ್ ಧರ್ಮಸಿಂಗ್ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ ನಮ್ಮ ಸರಕಾರ 5,000 ಕೋಟಿ ರೂ.ಗಳನ್ನು ನೀಡುವ ಮೂಲಕ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆಗಳ ನಡುವೆಯೂ ಕಲ್ಯಾಣ ಕ. ಭಾಗಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಬದ್ಧತೆಯನ್ನು ತೋರಿಸಿದೆ ಎಂದು ಹೇಳಿದರು.
ಕೆಕೆಆರ್‌ಡಿಬಿಯಿಂದ ಅನುಮೋದನೆಗೊಂಡ ಆರೋಗ್ಯ ಕೇಂದ್ರಗಳ ವಿವರ :
ಪ್ರಾಥಮಿಕ ಆರೋಗ್ಯ ಕೇಂದ್ರಗಳು: 24
ನಗರ ಆರೋಗ್ಯ ಕೇಂದ್ರಗಳು: 7
ಸಮುದಾಯ ಆರೋಗ್ಯ ಕೇಂದ್ರಗಳು: 10
ನಗರ ಸಮುದಾಯ ಆರೋಗ್ಯ ಕೇಂದ್ರಗಳು: 4
ಸಮುದಾಯ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳಿಂದ 50 ಹಾಸಿಗೆಗೆ ಮೇಲ್ದರ್ಜೆಗೆ ಏರಿಸುವುದು: 25
ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸುವುದು:1
ಸಮುದಾಯ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳಿಂದ 100 ಹಾಸಿಗೆಗೆ ಮೇಲ್ದರ್ಜೆಗೆ ಏರಿಸುವುದು: 6
ತಾಲೂಕು ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳಿಂದ 150 ಹಾಸಿಗೆಗೆ ಮೇಲ್ದರ್ಜೆಗೆ ಏರಿಸುವುದು:9
ಉಪ ವಿಭಾಗೀಯ ಆಸ್ಪತ್ರೆಯನ್ನು ಜಿಲ್ಲಾಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದು: 2 ಹೊಂದಿವೆ ಎಂದು ಹೇಳಿದರು.
ಮುಖ್ಯಮಂತ್ರಿಗಳು 137 ಕೋಟಿ ರೂ. ವೆಚ್ಚದಲ್ಲಿ ಹೊಸ ತಾಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಚಾಲನೆ ನೀಡಲಿದ್ದು, ರಾಯಚೂರಲ್ಲಿ ಶಂಕುಸ್ಥಾಪನೆ ನೆರವೇರಿಸುವರು.
ಕಲ್ಯಾಣ ಕರ್ನಾಟಕ ಭಾಗದ 41 ವಿಧಾನಸಭಾ ಕ್ಷೇತ್ರಗಳಲ್ಲಿಒಟ್ಟು 88 ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಆ ಮೂಲಕ ಕಲ್ಯಾಣ ಕ.ಭಾಗದ ಆರೋಗ್ಯಕ್ಕೆ ಹೊಸ ಚೇತನ ಸಿಗಲಿದೆ. ಕಲ್ಯಾಣ ಕರ್ನಾಟಕ ಹೆಲ್ತ್ ಹಬ್ ಆಗಲಿದೆ ಎಂದರು.
ಮಾಜಿ ಕೇಂದ್ರ ಸಚಿವ ಡಾ.ಮಲ್ಲಿಕಾರ್ಜುನ್ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ್, ಯಾದಗಿರಿ ಜಿಲ್ಲಾಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಕಲ್ಯಾಣ ಕ. ಭಾಗದ ಸಚಿವರು,ಶಾಸಕರು,ಮುಖಂಡರು ಪಾಲ್ಗೊಳ್ಳುವರು.
ನಂಜುಂಡಪ್ಪ ವರದಿ ಅನ್ವಯ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಶಿಫಾರಸು ಮಾಡಿದ್ದು, ಅದರನ್ವಯ ಸರಕಾರ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಪಿಎಚ್‌ಸಿ, ಸಮುದಾಯ ಆರೋಗ್ಯ ಕೇಂದ್ರಗಳ ಸೇವೆ ಬಲಗೊಂಡರೆ ಹಳ್ಳಿ ಜನರ ಆರೋಗ್ಯ ಸುಧಾರಣೆಯಾಗಲಿದೆ. ಈ ಹಿನ್ನಲೆಯಲ್ಲಿ ದೊಡ್ಡ ಮಟ್ಟದ ಆರೋಗ್ಯ ಯೋಜನೆ ರೂಪಿಸಲಾಗಿದೆ ಎಂದರು.
ಕೆಕೆಆರ್‌ಡಿಬಿಗೆ ನೀಡಿದ ಅನುದಾನ ಪೂರ್ಣ ಪ್ರಮಾಣದಲ್ಲಿ ಮತ್ತು ಕಾಲಮಿತಿಯೊಳಗೆ ಖರ್ಚಾಗಬೇಕು. ಅದಕ್ಕಾಗಿ ಕಲ್ಯಾಣ ಭಾಗದ ಎಲ್ಲಶಾಸಕರು ಜೂ.30ರ ಒಳಗಾಗಿ ಮೈಕ್ರೋ ಮತ್ತು ಮ್ಯಾಕ್ರೊ ಯೋಜನೆಯ ಕ್ರಿಯಾಯೋಜನೆ ಕೊಡಬೇಕು. ಈಚೆಗೆ ನಡೆದ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಶರಣಗೌಡ ಕಂದಕೂರ್,ರಾಜಾ ವೇಣುಗೋಪಾಲ್ ನಾಯಕ, ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶ ಬಾಬು, ಡಿಸಿ ಸುಶೀಲಾ ಬಿ., ಜಿ ಪಂ ಸಿಇಓ ಲವೀಶ್ ಒರಡಿಯಾ ಇದ್ದರು.
ಜೂ.9ರಂದು ರಾಯಚೂರಿನಲ್ಲಿ ‘ಪ್ರಜಾಸೌಧ’ ಚಾಲನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಜಾಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಕಂದಾಯ ಸಚಿವರು , ಸೇರಿದಂತೆ ಇತರೆ ಸಚಿವರು, ಶಾಸಕರು ಪಾಲ್ಗೊಳ್ಳುವರು.
ಕಲ್ಯಾಣ ಕ.ಭಾಗದ ಹೊಸದಾಗಿ ರಚನೆಯಾಗಿರುವ 18 ಹೊಸ ತಾಲೂಕುಗಳ ಪೈಕಿ 16 ಕಡೆ 137 ಕೋಟಿ ರೂ. ಗಳ ವೆಚ್ಚದಲ್ಲಿ ಪ್ರಜಾಸೌಧಗಳು ನಿರ್ಮಾಣವಾಗಲಿವೆ. ಉಳಿದ ಎರಡು ಕಡೆ ಈಗಾಗಲೇ ನಿರ್ಮಾಣವಾಗಿವೆ. ಆ ಮೂಲಕ ತಾಲೂಕುಗಳ ಕಚೇರಿಗಳು ಒಂದೇ ಸೂರಿನಡಿ ಬರಲಿವೆ. ಜನರಿಗೆ ಉತ್ತಮ ಸೇವೆ ಸಿಗಲಿವೆ ಎಂದರು.
ಕೆಕೆಆರ್‌ಡಿಬಿ ಮತ್ತು ಕಂದಾಯ ಇಲಾಖೆ ತಲಾ 4.30 ಕೋಟಿ ರೂ. ಗಳನ್ನು ನೀಡುತ್ತಿದೆ. ಕಲಬುರಗಿಯಲ್ಲಿ ಕಲ್ಯಾಣ ಪಥ ಉದ್ಘಾಟಿಸಲಾಗಿದ್ದು, ಯಾದಗಿರಿಯಲ್ಲಿ ಆರೋಗ್ಯ ಆವಿಷ್ಕಾರ ಮತ್ತು ರಾಯಚೂರಿನಲ್ಲಿ ಪ್ರಜಾಸೌಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಲ್ಯಾಣದ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಯೋಜನೆಯ ಉದ್ಘಾಟನೆ ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.







