ಯಾದಗಿರಿ: ಅನುದಾನ ತರದ ಚಿಂಚನಸೂರ ರಾಜೀನಾಮೆ ನೀಡಲಿ; ಉಮೇಶ ಮುದ್ನಾಳ ಆಗ್ರಹ

ಯಾದಗಿರಿ: ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಅವರು ಕೋಲಿ ಸಮಾಜದ ಅಭಿವೃದ್ಧಿಗೆ ಅನುದಾನ ತಂದಿಲ್ಲ. ಇವರು ರಾಜೀನಾಮೆ ನೀಡಲಿ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ ಆಗ್ರಹಿಸಿದರು.
ಈ ಬಾರಿ ಮಂಡಿಸಿದ ಬಜೆಟ್‌ನಲ್ಲಿ ರೂ. 6.25 ಕೋಟಿ ಮಾತ್ರ ಸಮುದಾಯದ ಅಭಿವೃದ್ಧಿಗೆ ನೀಡಲಾಗಿದೆ. ಇದರಿಂದ ಯಾರಿಗೂ ಸಾಲ ಸೌಲಭ್ಯ ಸಿಗುತ್ತಿಲ್ಲ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮುದಾಯಕ್ಕೆ ರೂ .100 ಕೋಟಿ ಅನುದಾನ ಬೇಕಿತ್ತು. ಆದರೆ, ಯಾವುದಕ್ಕೂ ಸಾಲದ ಹಣ ನೀಡಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಖಿಲ ಭಾರತೀಯ ಕೋಲಿ ಸಮಾಜ ರಾಜ್ಯ ಘಟಕದ ಅಧ್ಯಕ್ಷ ದತ್ತಾತ್ರೇಯ ರೆಡ್ಡಿ ನೇತೃತ್ವದಲ್ಲಿ ವಿಭಾಗೀಯ ಮಟ್ಟದ ಸಭೆ ಕರೆದು ನಿಗಮದ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಒಂದು ವೇಳೆ ಸರ್ಕಾರ ಅನುದಾನ ನೀಡದಿದ್ದರೆ ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಅತಿ ಹೆಚ್ಚು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಲಿ ಸಮಾಜದ ಜನರು ಇದ್ದಾರೆ. ಕೋಲಿ ಸಮಾಜದ ಮತ ಪಡೆದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದಿದ್ದಾರೆ. ಅವರೇ ಸಮಾಜಕ್ಕೆ ಅನುದಾನ ಕೊಡಿಸಬೇಕಿತ್ತು. ಅವರಂತೆ ಹಲವಾರು ನಾಯಕರು ಕೋಲಿ ಸಮಾಜದ ಮತ ಪಡೆದು ರಾಜಕೀಯವಾಗಿ ಬೆಳೆದಿದ್ದಾರೆ. ಆದರೆ, ಕೋಲಿ ಸಮಾಜದಿಂದ ಬೆಳೆದ ನಾಯಕರು ಸಮಾಜಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ದೂರಿದರು.
ವೇದವ್ಯಾಸ ಮಠದ ರಾಜುಗುರ ಸ್ವಾಮೀಜಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ನಾಲ್ವರು ಎಂಎಲ್‌ಸಿಗಳಿದ್ದರು. ಈಗ ಒಬ್ಬರೇ ಇದ್ದಾರೆ. ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಕೋಲಿ ಸಮಾಜವನ್ನು ರಾಜಕೀಯ ಮತ ಬ್ಯಾಂಕ್‌ಗಾಗಿ ಮಾತ್ರ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಭೀಮರಾಯ ಕೊಡ್ಲಿ, ಮಲ್ಲೇಶ ಉಪಸ್ಥಿತರಿದ್ದರು.







