ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: ಯಾದಗಿರಿಯ ಬಾಲಕ ಮೃತ್ಯು
ಟಿಸಿ ತರಲು ಕಾಲೇಜಿಗೆಂದು ಹೋದ ಶಿವಲಿಂಗ ವಿಜಯೋತ್ಸವಕ್ಕೆ ತೆರಳಿದ್ದ

ಯಾದಗಿರಿ: ಆ ಬಾಲಕ ಪ್ರಥಮ ಪಿಯುಸಿ ಮುಗಿಸಿದ್ದ. ದ್ವಿತೀಯ ಪಿಯುಸಿಗೆ ಕಾಲೇಜು ಬದಲಾಯಿಸಲು ಬಯಸಿದ್ದ ಆತ ಟಿಸಿ ತರಲೆಂದು ತೆರಳಿದ್ದ. ಆರ್.ಸಿ.ಬಿ. ತಂಡದ ಅಭಿಯಾನಿಯಾಗಿದ್ದ ಆತ ಬಳಿಕ ತೆರಳಿದ್ದು ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ. ತನ್ನ ನೆಚ್ಚಿನ ತಂಡದ ವಿಜಯೋತ್ಸವದ ಸಂಭ್ರಮದಲ್ಲಿ ಭಾಗಿಯಾಗುವ ಖುಷಿಯಲ್ಲಿದ್ದ ಆತ ಕಾಲ್ತುಳಿತಕ್ಕೆ ಬಲಿಯಾಗಿದ್ದು ದುರಂತ.
ಇದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ವಿದ್ಯಾರ್ಥಿ ಶಿವಲಿಂಗ(17) ಎಂಬವರ ಕರುಣಾಜನಕ ಕತೆ.
ಮೂಲತಃ ಯಾದಗಿರಿಯವರಾಗಿರುವ ಶಿವಲಿಂಗ ಅವರ ಕುಟುಂಬ ಯಲಹಂಕದ ಕಣ್ಣೂರಿನಲ್ಲಿ ವಾಸವಿತ್ತು. ಯಲಹಂಕ ಸರಕಾರಿ ಶಾಲೆಯಲ್ಲಿ ಓದುತ್ತಿದ್ದ ಶಿವಲಿಂಗ ಪ್ರಥಮ ಪಿಯುಸಿ ಬಳಿಕ ಬೇರೆ ಕಾಲೇಜು ಸೇರಲು ಬಯಸಿದ್ದ. ಇದಕ್ಕಾಗಿ ಟಿ.ಸಿ. ಪಡೆಯಲೆಂದು ಹೋಗಿದ್ದ ಶಿವಲಿಂಗ ನೇರ ತೆರಳಿದ್ದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ. ಅಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ 11 ಮಂದಿಯಲ್ಲಿ ಶಿವಲಿಂಗ ಕೂಡಾ ಒಬ್ಬರಾಗಿದ್ದಾರೆ.
ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಶಿವಲಿಂಗ ಅವರ ಮರಣೋತ್ತರ ಪರೀಕ್ಷೆ ನೆರವೇರಿದ್ದು, ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಯಾದಗಿರಿಯ ವನಗೇರಾದವರಾಗಿರುವ ಶಿವಲಿಂಗ ಅವರದ್ದು ಆರ್ಥಿಕವಾಗಿ ಬಡ ಕುಟುಂಬ. ಇವರು ತಂದೆತಾಯಿ ಜತೆ ಬೆಂಗಳೂರಿನ ಯಲಹಂಕದ ಕಣ್ಣೂರಿನಲ್ಲಿ ವಾಸ್ತವ್ಯವಿದ್ದರು. ಹೆತ್ತವರು ಗಾರೆ ಕೆಲಸ ಮಾಡುತ್ತಿದ್ದಾರೆ.
ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ನಿಗದಿಯಾಗಿತ್ತು. ವಿಜೇತ ತಂಡಕ್ಕೆ ಶುಭಾಶಯ ಕೋರಲು, ಸಂಭ್ರಮ ಆಚರಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಜನರು ಬಂದಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 47 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.







