ಯಾದಗಿರಿಯಲ್ಲಿ ಶಾಂತಿಯುತವಾಗಿ ನಡೆದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ

ಯಾದಗಿರಿ: 2026-27ನೇ ಸಾಲಿನ ನೇರ ನೇಮಕಾತಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆ ಭಾನುವಾರ ಜಿಲ್ಲೆಯ 19 ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಸುಸೂತ್ರವಾಗಿ ಹಾಗೂ ಶಾಂತಿಯುತವಾಗಿ ನಡೆಯಿತು.
ಜಿಲ್ಲೆಯಲ್ಲಿ ಒಟ್ಟು 3,395 ಹುದ್ದೆಗಳ ನೇಮಕಾತಿಗಾಗಿ 14,567 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಬೆಳಗಿನ ಅವಧಿಯ ಪರೀಕ್ಷೆಗೆ ನೋಂದಾಯಿಸಿದ್ದ 7,979 ಅಭ್ಯರ್ಥಿಗಳ ಪೈಕಿ 7,672 ಮಂದಿ ಹಾಜರಾಗಿದ್ದು, 307 ಮಂದಿ ಗೈರಾಗಿದ್ದರು. ಮಧ್ಯಾಹ್ನದ ಪರೀಕ್ಷೆಗೆ ನೋಂದಾಯಿಸಿದ್ದ 6,592 ಅಭ್ಯರ್ಥಿಗಳಲ್ಲಿ 6,371 ಮಂದಿ ಪರೀಕ್ಷೆ ಬರೆದರೆ, 221 ಮಂದಿ ಗೈರಾಗಿದ್ದರು ಎಂದು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮ, ಗೌಪ್ಯತಾ ನಿಯಮಗಳು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಪರೀಕ್ಷೆ ನಡೆಸಲಾಯಿತು. ಅಭ್ಯರ್ಥಿಗಳಿಗೆ ಕುಡಿಯುವ ನೀರು, ವೈದ್ಯಕೀಯ ನೆರವು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿತ್ತು.
ಜಿಲ್ಲಾಡಳಿತದ ಸಮನ್ವಯದಲ್ಲಿ ಪೊಲೀಸ್, ಶಿಕ್ಷಣ, ಆರೋಗ್ಯ, ಜೆಸ್ಕಾಂ, ಸಾರಿಗೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಹಕಾರದಿಂದ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿತು.
ಪರೀಕ್ಷೆಯ ಯಶಸ್ವಿ ನಿರ್ವಹಣೆಗೆ ಸಹಕರಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಉಪ ಮುಖ್ಯ ಅಧೀಕ್ಷಕರು, ವೀಕ್ಷಕರು ಹಾಗೂ ಪರೀಕ್ಷಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗೆ ಜಿಲ್ಲಾಧಿಕಾರಿ ಅಭಿನಂದನೆ ಸಲ್ಲಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರ ನೇತೃತ್ವದಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬೆಳಗ್ಗೆಯಿಂದ ಸಂಜೆವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.






