ನಮ್ಮ ಸರಕಾರ ಮೂರು ವರ್ಷದಲ್ಲಿ ಕೆಕೆಆರ್‌ಡಿಬಿಗೆ 13 ಸಾವಿರ ಕೋಟಿ ರೂ.ನೀಡಿ ದಾಖಲೆ ನಿರ್ಮಿಸಿದೆ : ಸಿಎಂ ಸಿದ್ದರಾಮಯ್ಯ
ʼಆರೋಗ್ಯ ಆವಿಷ್ಕಾರʼ ಯೋಜನೆಯ ಅಡಿಯಲ್ಲಿ 440.63 ಕೋಟಿ ಮೊತ್ತದ ಕಾಮಗಾರಿ ಉದ್ಘಾಟನೆ

ಯಾದಗಿರಿ : ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿಗೆ ಮೂರು ವರ್ಷದಲ್ಲಿ 13000 ಕೋಟಿ ರೂಪಾಯಿ ಅನುದಾನ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಆಯೋಜಿಸಿರುವ "ಆರೋಗ್ಯ ಆವಿಷ್ಕಾರ" ಯೋಜನೆಯ ಅಡಿಯಲ್ಲಿ 440.63 ಕೋಟಿ ಮೊತ್ತದ ಕಾಮಗಾರಿಗಳನ್ನು ಉದ್ಘಾಟಿಸಿ, ಬಂಜಾರ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ವರ್ಷಕ್ಕೆ 5000 ಕೋಟಿ ಕೆಕೆಆರ್‌ಡಿಬಿಗೆ ಕೊಡುವುದಾಗಿ ನಾವು ಚುನಾವಣೆ ವೇಳೆ ಭರವಸೆ ನೀಡಿದ್ದೆವು. ಕಾಂಗ್ರೆಸ್ ಕೊಟ್ಟ ನಮ್ಮ ಭರವಸೆಯಂತೆ ಇಲ್ಲಿಯವರೆಗೂ 13000 ಕೋಟಿ ರೂಪಾಯಿ ಹಣ ನೀಡಿದ್ದೇವೆ. ಇಲ್ಲಿಯವರೆಗೂ 5300 ಕೋಟಿ ಮೊತ್ತ ಖರ್ಚಾಗಿದ್ದು ಕಾಮಗಾರಿ ಜನರಿಗೆ ತಲುಪಿದೆ ಎಂದರು.
ನಂಜುಂಡಪ್ಪ ಅವರ ವರದಿಯ ಆಶಯಗಳನ್ನು ನಮ್ಮ ಸರಕಾರ ಈಡೇರಿಸುತ್ತಿದೆ. ಆರೋಗ್ಯ, ಶಿಕ್ಷಣ, ಉದ್ಯೋಗದಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಸಾಧಿಸುವ ಜೊತೆಗೆ ಮೂಲಭೂತ ಸೌಕರ್ಯಗಳ ಈಡೇರಿಕೆಗೆ ಹಣ ವಿನಿಯೋಗ ಮಾಡಲು ಸೂಚನೆ ನೀಡಿದ್ದೇನೆ. ಇದರ ಪ್ರಕಾರ ಅಕ್ಷರ ಆವಿಷ್ಕಾರ ನಡೆದು ಇಂದು 440.63 ಕೋಟಿ ವೆಚ್ಚದ ಆರೋಗ್ಯ ಆವಿಷ್ಕಾರ ಕಾರ್ಯಕ್ರಮ ಇಂದು ಉದ್ಘಾಟನೆ ಮಾಡಿದ್ದೇವೆ ಎಂದರು.
ಕೊಲ್ಲೂರು ಮಲ್ಲಪ್ಪ ಅವರ ಸ್ಮಾರಕಕ್ಕೆ ಜಾಗ ಕೊಟ್ಟಿದ್ದೇವೆ. ಮಲ್ಲಪ್ಪ ಅವರು ಕಲ್ಯಾಣ ಕರ್ನಾಟಕದ ಗಾಂಧಿ ಎಂದು ಕರೆಸಿಕೊಂಡಿದ್ದವರು. ಸ್ವಾತಂತ್ರ್ಯ ಹೋರಾಟಗಾರರಾದ ಇವರ ಸ್ಮಾರಕ ಕೂಡಲೇ ಆಗಬೇಕು ಎಂದು ಸಿಎಂ ಸೂಚನೆ ನೀಡಿದರು.
ಬೆಲೆ ಏರಿಕೆಯ ಸೃಷ್ಟಿಕರ್ತ ಪ್ರಧಾನಿ ಮೋದಿ:
ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಬಿಜೆಪಿ ಪರಿವಾರದ ಎಲ್ಲಾ ಸುಳ್ಳುಗಳಿಗೆ ಜನರೇ ಉತ್ತರ ನೀಡುತ್ತಿದ್ದಾರೆ. ಏಕೆಂದರೆ ನಾವು ಅಭಿವೃದ್ಧಿಗೆ ಕೊಟ್ಟಿರುವ ಹಣ ರಾಜ್ಯದ ಜನರ ಮನೆ ಬಾಗಿಲಿಗೆ ತಲುಪಿದೆ ಎಂದರು.
ಬೆಲೆ ಏರಿಕೆಗೆ ಕಾರಣವಾಗಿರುವುದು ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರ. ಮೋದಿ ಬರುವ ಮೊದಲು ಚಿನ್ನ, ಪೆಟ್ರೋಲ್, ಡೀಸೆಲ್, ಔಷಧ, ರಸಗೊಬ್ಬರ, ಅಡುಗೆ ಎಣ್ಣೆ, ಅಡುಗೆ ಅನಿಲದ ಬೆಲೆ ಎಷ್ಟಿತ್ತು ? ಮೋದಿ ಬಂದ ಬಳಿಕ ಎಷ್ಟು ಏರಿಕೆಯಾಗಿದೆ ನೋಡಿ. ಬೆಲೆ ಏರಿಕೆಯ ಸೃಷ್ಟಿಕರ್ತ ಪ್ರಧಾನಿ ಮೋದಿ ಎಂದರು.
ಸುಳ್ಳೇ ಬಿಜೆಪಿಯ ಮನೆ ದೇವರು. ಬಿಜೆಪಿಗೆ ಅಧಿಕಾರ ಇದ್ದಾಗಲೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡಲಿಲ್ಲ. ಬಿಜೆಪಿ 371ಜೆ ಗೆ ವಿರುದ್ಧವಿತ್ತು. ಉಪ ಪ್ರಧಾನಿ ಆಗಿದ್ದ ಎಲ್.ಕೆ.ಅಡ್ವಾಣಿ ಅವರು 371ಜೆ ಜಾರಿ ಮಾಡುವುದಿಲ್ಲ ಎಂದು ಪತ್ರ ಬರೆದಿದ್ದರು. ಕೊನೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಖರ್ಗೆ, ಧರಂಸಿಂಗ್ ಅವರ ಹೋರಾಟಕ್ಕೆ ಮಾನ್ಯತೆ ನೀಡಿ 371ಜೆ ಜಾರಿ ಮಾಡಿದರು ಎಂದು ವಿವರಿಸಿದರು.
ಮಲ್ಲಿಕಾರ್ಜುನ ಖರ್ಗೆ, ದಿವಂಗತ ಧರಮ್ ಸಿಂಗ್ ಅವರ ಶ್ರಮ ಮತ್ತು ಹೋರಾಟ 371ಜೆ ಜಾರಿ ಹಿಂದೆ ಕೆಲಸ ಮಾಡಿದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಶ್ಲಾಘಿಸಿದರು.







